Sunday, September 8, 2024
Homeಬೆಂಗಳೂರುಪೊಲೀಸರಿಗೆ ಸಿಕ್ಕಿಬಿದ್ದ ನಟೋರಿಯಸ್‌‍ ಕೊಲೆಗಾರ ಗಿರಿ

ಪೊಲೀಸರಿಗೆ ಸಿಕ್ಕಿಬಿದ್ದ ನಟೋರಿಯಸ್‌‍ ಕೊಲೆಗಾರ ಗಿರಿ

ಬೆಂಗಳೂರು, ಮೇ 26- ಕುಡಿದು ಬಂದು ರಸ್ತೆ ಬದಿ ಮಲಗುತ್ತಿದ್ದ ವ್ಯಕ್ತಿಗಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ನಟೋರಿಯಸ್‌‍ ಕೊಲೆಗಾರನನ್ನು ಬಂಧಿಸುವಲ್ಲಿ ಬನಶಂಕರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಕೊಲೆಗಾರನನ್ನು ಸುಬ್ರಮಣ್ಯಪುರದ ವಸಂತಪುರ ಗುಡ್ಡೆ ನಿವಾಸಿ ಗಿರೀಶ ಅಲಿಯಾಸ್‌‍ ಗಿರಿ(26) ಎಂದು ಗುರುತಿಸಲಾಗಿದೆ.

ಕುಡಿದು ಬಂದು ರಸ್ತೆ ಬದಿ ಮಲಗಿದ್ದ ಇಬ್ಬರು ವ್ಯಕ್ತಿಗಳನ್ನು ಕಳೆದ ಒಂದು ವಾರದಲ್ಲಿ ಕೊಲೆ ಮಾಡಿ ಗಿರಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಮೇ 12ರಂದು ಬನಶಂಕರಿ ಪೊಲೀಸ್‌‍ಠಾಣೆ ವ್ಯಾಪ್ತಿಯ ಜಯನಗರ 7 ನೇ ಬಡಾವಣೆಯಲ್ಲಿ ಕುಡಿದ ಮತ್ತಿನಲ್ಲಿ ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಅದೇ ರೀತಿ ಮೇ 18ರಂದು ಸಿಟಿ ಮಾರ್ಕೆಟ್‌ ಹಿಂಭಾಗದ ಕಾಂಪ್ಲೆಕ್ಸ್ ಒಂದರಲ್ಲಿ ಮಲಗಿದ್ದ ಮತ್ತೊಬ್ಬ ವ್ಯಕ್ತಿಯ ತಲೆ ಮೇಲೂ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

ಈ ಎರಡು ಪ್ರಕರಣಗಳಲ್ಲಿ ಒಬ್ಬನೆ ಕೊಲೆಗಾರ ಇರಬಹುದು ಎಂಬ ಶಂಕೆ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಬನಶಂಕರಿ ಪೊಲೀಸರು ಆರೋಪಿ ಗಿರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಿನ್ನೆಲೆ:
ಗಿರಿ ತಂದೆ ಮುರುಳಿಧರ ಎಂಬುವರು ಹತ್ತು ವರ್ಷದ ಹಿಂದೆ ಪತ್ನಿ ಮತ್ತು ಮಕ್ಕಳನ್ನು ತೊರೆದು ಬೇರೊಂದು ವಿವಾಹವಾಗಿ ಬೇರೆ ಕಡೆ ನೆಲೆಸಿದ್ದ ಪತಿಯ ಈ ಧೋರಣೆಯಿಂದ ನೊಂದಿದ್ದ ಪತ್ನಿ ಆಶಾ ವಸಂತಪುರದಲ್ಲಿದ್ದ ತಮ ಮನೆ ಮಾರಾಟ ಮಾಡಿ ಮಗಳೊಂದಿಗೆ ಕೇರಳಕ್ಕೆ ಹೋಗಿ ನೆಲೆಸಿದ್ದರು.ಆದರೆ, ಗಿರಿ ಮಾತ್ರ ತಾಯಿಯೊಂದಿಗೆ ಕೇರಳಕ್ಕೆ ಹೋಗದೆ ಕಳೆದ 2015ರಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸುಬ್ರಮಣ್ಯಪುರ ಹಾಗೂ ಬನಶಂಕರಿ ಪೊಲೀಸ್‌‍ ಠಾಣೆಗಳಲ್ಲಿ ಗಿರಿ ವಿರುದ್ಧ ಹಲ್ಲೆ, ಲೈಂಗಿಕ ದೌರ್ಜನ್ಯ, ದರೋಡೆಗೆ ಸಂಚು ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಒಂದು ಹಲ್ಲೆ ಪ್ರಕರಣದಲ್ಲಿ 10 ತಿಂಗಳ ಸಜೆ ಅನುಭವಿಸಿ 2020ರಲ್ಲಿ ಜೈಲಿನಿಂದ ಹೊರ ಬಂದು ಗಾರೆ ಕೆಲಸ, ಹೋಟೆಲ್‌ನಲ್ಲಿ ಹೆಲ್ಪರ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ನಂತರ ಮಾರ್ಕೆಟ್‌, ಮೆಜೆಸ್ಟಿಕ್‌ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಮಲಗಿಕೊಳ್ಳುವ ಹಾಗೂ ಮದ್ಯಪಾನ ಮಾಡಿ ರಸ್ತೆ ಬದಿ ಮಲಗುವ ವ್ಯಕ್ತಿಗಳ ಬ್ಯಾಗ್‌, ಮೊಬೈಲ್‌ ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಇದರ ಜತೆಗೆ ಏರಿಯಾದಲ್ಲಿ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಹಣ, ಮೊಬೈಲ್‌ ಸುಲಿಗೆ ಮಾಡುತ್ತ ತನ್ನ ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇವೆಲ್ಲದರ ನಡುವೆ ಬನಶಂಕರಿ ಮತ್ತು ಸಿಟಿ ಮಾರ್ಕೆಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಉಭಯ ಠಾಣೆಗಳ ಪೊಲೀಸರು ಕೊಲೆಗಾರನಿಗಾಗಿ ಶೋಧ ನಡೆಸುತ್ತಿದ್ದರು.

ಗಿರಿ ಅಪರಾಧ ಹಿನ್ನೆಲೆಯ ಅರಿವಿದ್ದ ಬನಶಂಕರಿ ಠಾಣಾ ಪೊಲೀಸರು ಆತನ ಹೆಡೆಮುರಿ ಕಟ್ಟಿ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಎರಡೂ ಕೊಲೆಗಳನ್ನು ತಾನೇ ಮಾಡಿರುವುದಾಗಿ ತಿಳಿಸಿದ್ದಾನೆ. ನಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News