ವಿಜಯಪುರ,ಅ.18-ದರೋಡೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ರೌಡಿಯನ್ನು ಬಂಧಿಸಲು ತೆರಳಿದ್ದ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್ ಹಾರಿಸಿದ ಗುಂಡು ತಗುಲಿ ರೌಡಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಬಳಿ ನಡೆದಿದೆ.
ಯುನೀಶ್ ಅಕ್ಲಾಸ್ ಪಟೇಲ್ (35) ಪೊಲೀಸರ ಗುಂಡಿಗೆ ಬಲಿ ಯಾದ ಕುಖ್ಯಾತ ರೌಡಿ.ಈತ ಗಾಂಧಿ ಚೌಕ್ ಪೊಲೀಸ್ ಠಾಣೆಯ ರೌಡಿ ಶೀಟರ್. ವಿಜಯಪುರದಲ್ಲಿ ವಾಸವಾಗಿದ್ದ ಈತ ಇತ್ತೀಚೆಗೆ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮಕ್ಕೆ ಬಂದು ವಾಸವಾಗಿದ್ದನು. ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಚಾಕು ತೋರಿಸಿ ವ್ಯಕ್ತಿಯೊಬ್ಬರಿಂದ 25 ಸಾವಿರ ಹಣ ದರೋಡೆ ಮಾಡಿ ನಂತರ ಅವರ ಸ್ಕೂಟಿಯನ್ನು ಕಿತ್ತುಕೊಂಡು ರೌಡಿ ಯುನೀಶ್ ಪರಾರಿಯಾಗಿದ್ದನು.
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಆರೋಪಿ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ದರೋಡೆ ಮಾಡಿದ್ದ ಸ್ಕೂಟಿಯಲ್ಲಿ ತೆರಳುತ್ತಿರುವ ಬಗ್ಗೆ ಪೊಲೀಸರ ತಂಡಕ್ಕೆ ಮಾಹಿತಿ ಸಿಕ್ಕಿದೆ.
ತಕ್ಷಣ ಪೊಲೀಸರು ಬಂಧನಕ್ಕೆ ತೆರಳಿದಾಗ ಸಿಂದಗಿ ತಾಲೂಕಿನ ರಾಂಪುರ್ ಬಳಿ ಆರೋಪಿ ಯುನೀಶ್ ಪೊಲೀಸರನ್ನು ನೋಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.ತಕ್ಷಣ ಆತನನ್ನು ಹಿಡಿಯಲು ಬೆನ್ನಟ್ಟಿದ ಇಬ್ಬರು ಕಾನ್ಸ್ ಟೇಬಲ್‌ಗಳು ಹಾಗೂ ಇನ್ಸ್ ಪೆಕ್ಟರ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.
ಆ ಸಂದರ್ಭದಲ್ಲಿ ಆಯತಪ್ಪಿ ಇನ್‌್ಸಪೆಕ್ಟರ್ ಪ್ರದೀಪ್ ತಳಕೇರಿ ಅವರು ಕೆಳಗೆ ಬಿದ್ದಿದ್ದಾರೆ. ಆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದಾಗ ಇನ್ಸ್ ಪೆಕ್ಟರ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಮುಂದಾದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್ ಪ್ರದೀಪ್ ಅವರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ತಕ್ಷಣ ಆರೋಪಿಯನ್ನು ಕರೆದೊಯ್ದು ಸಿಂದಗಿ ತಾಲೂಕು ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆೆ ಆರೋಪಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಡಿ ಯುನೀಶ್ ಮೇಲೆ 2 ಕೊಲೆ ಪ್ರಕರಣ, 3 ಕೊಲೆ ಯತ್ನ, ಕಳ್ಳತನ,ದರೋಡೆ ಸೇರಿದಂತೆ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಘಟನೆ ಕುರಿತು ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದರು.