Wednesday, September 24, 2025
Homeರಾಜ್ಯBREAKING : ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಇನ್ನಿಲ್ಲ

BREAKING : ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಇನ್ನಿಲ್ಲ

Novelist SL Bhyrappa Passes Away

ಬೆಂಗಳೂರು,ಸೆ.24- ಕನ್ನಡ ಸಾರಸತ್ವ ಲೋಕದ ಸರಸ್ವತಿ ಪುತ್ರನೆಂದೇ ಓದುಗರ ವಲಯದಲ್ಲಿ ಗುರುತಿಸಿಕೊಂಡಿದ್ದ, ಪ್ರತಿಷ್ಠಿತ ಪದ ಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಸ್‌‍.ಎಲ್‌.ಭೈರಪ್ಪ ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಗರದ ರಾಜರಾಜೇಶ್ವರಿನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಮೂರು ತಿಂಗಳ ಹಿಂದೆ ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ ಅವರು ಸಂಪಾದಕರೊಬ್ಬರ ನಿವಾಸದಲ್ಲಿ ವಾಸವ್ಯವಿದ್ದರು. ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಮೈಸೂರಿನಲ್ಲಿ ಗುರುವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

- Advertisement -

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಸಂತೇಶಿವರದಲ್ಲಿ 1934ರ ಜುಲೈ 26ರಂದು ಜನಿಸಿದ್ದ ಅವರು, ರಾಷ್ಟ್ರಕವಿ ಕುವೆಂಪು ಅವರ ನಂತರ ಸಾಹಿತ್ಯ ವಲಯದಲ್ಲಿ ಬಹುದೊಡ್ಡ ಓದುಗರನ್ನು ಹೊಂದಿದ್ದ ಅಪರೂಪದ ಸಾಹಿತಿಯಾಗಿದ್ದರು.

ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಎನಿಸಿದ ಪದಭೂಷಣ ಪ್ರಶಸ್ತಿಗೂ ಭಾಜನರಾಗಿದ್ದ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಒಂದಿಲ್ಲೊಂದು ದಿನ ಸಿಕ್ಕೇ ಸಿಗುತ್ತದೆ ಎಂಬ ಓದುಗರ ನಿರೀಕ್ಷೆ ಕೊನೆಗೂ ಈಡೇರಲಿಲ್ಲ. ಅವರು ರಚಿಸಿದ್ದ ಅನೇಕ ಕೃತಿಗಳು ಇಂಗ್ಲಿಷ್‌ಗೆ ತರ್ಜುಮೆಗೊಂಡು ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಯೂ ಅವರಿಗೆ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದು ಕೂಡ ಅವರ ಜೀವಿತಾವಧಿಯಲ್ಲಿ ಸಾಧ್ಯವಾಗಲೇ ಇಲ್ಲ.

ಸರಸ್ವತಿ ಸಮಾನ್‌ ಪ್ರಶಸ್ತಿಗೆ ಭಾಜರಾಗಿದ್ದ ಭೈರಪ್ಪ ಅವರು, ಭೀಮಕಾಯ, ಬೆಳಕು ಮೂಡಿತು, ಧರ್ಮಶ್ರೀ, ದೂರ ಸರಿದರು, ಮತದಾನ, ಜಲಪಾತ, ನೆಲೆ, ಸಾಕ್ಷಿ, ಅಂಚು, ತಂತು, ಆವರಣ, ಯಾನ, ನಾಯಿ ನೆರಳು, ಗ್ರಹಣ, ದಾಟು, ಸಂಸ್ಕಾರ, ಪರ್ವ, ಗೃಹಭಂಗ, ಕವಲು, ವಂಶವೃಕ್ಷ, ನಿರಾಕರಣ, ಸಾರ್ಥ, ಅನ್ವೇಷಣ, ಉತ್ತರಕಾಂಡ ಮೊದಲಾದ ಕೃತಿಗಳ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದರು.

ಕಾದಂಬರಿಗಳ ಮೂಲಕ ಚಿರಪರಿಚಿತರಾಗಿದ್ದ ಅವರು ತಮ ಬರವಣಿಗೆಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದರು. ಕನಕಪುರದಲ್ಲಿ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದರು. ಗಾಂಧೀಜಿಯವರ ಮೌಲ್ಯಗಳಿಂದ ಪ್ರೇರಿತರಾಗಿದ್ದ ಅವರು, ತಮ ಬರವಣಿಗೆಗಳ ಮೂಲಕ ಬಹು ದೊಡ್ಡ ಕೊಡುಗೆ ನೀಡಿದ್ದರು.

ಕನ್ನಡ ಭಾಷೆಯಲ್ಲಿರುವ ಬರೆದಿರುವ ಬೈರಪ್ಪ ಅವರ ಕೃತಿಗಳು ಇಂಗ್ಲಿಷ್‌ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತೀಯ ಸಾಹಿತ್ಯದಲ್ಲೂ ಜನಪ್ರಿಯರಾಗಿದ್ದರು.
ಭಾರತ ಸರ್ಕಾರ 2023ರಲ್ಲಿ ಪದಭೂಷಣ ಪ್ರಶಸ್ತಿ ನೀಡಿ ಸನಾನಿಸಿತ್ತು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶ್ರೀಯುತರು ಮೈಸೂರಿನಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆದಿದ್ದರು. ಸುವರ್ಣ ಪದಕದೊಂದಿಗೆ ಎಂ.ಎ ಪದವಿ ತೇರ್ಗಡೆಯಾಗಿದ್ದ ಭೈರಪ್ಪ ಅವರು ಬರೋಡಾದ ಸಯ್ಯಾಜಿರಾವ್‌ ವಿಶ್ವವಿದ್ಯಾಲಯದಿಂದ ಸತ್ಯ ಮತ್ತು ಸೌಂದರ್ಯ ಎಂಬ ಇಂಗ್ಲಿಷ್‌ನಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್‌ ಪದವಿ ಪಡೆದಿದ್ದರು.ಬೈರಪ್ಪನವರ ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿ ನೀನಾದೆ ಮಗನೇ, ದಾಟು,ಧರ್ಮಶ್ರೀ, ಪರ್ವ, ಭಿತ್ತಿ ಮೊದಲಾದ ಕಾದಂಬರಿಗಳು ಹಿಂದಿ ಮತ್ತು ಮರಾಠಿ ಭಾಷೆಯಲ್ಲೂ ಜನಪ್ರಿಯವಾಗಿವೆ.

ಸಂತಾಪ:
ಭೈರಪ್ಪ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌, ಪ್ರಧಾನಿ ನರೇಂದ್ರಮೋದಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೇಂದ್ರ ಸಚಿವರಾದ ಅಮಿತ್‌ ಷಾ, ರಾಜನಾಥ್‌ ಸಿಂಗ್‌, ಜೆ.ಪಿ.ನಡ್ಡಾ, ಎಚ್‌.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ್‌ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News