Monday, July 8, 2024
Homeರಾಷ್ಟ್ರೀಯಪ್ರಮಾಣ ವಚನ ಕುರಿತು ಕೆಲವು ಮಹತ್ವದ ತಿದ್ದುಪಡಿ ಮಾಡಿದ ಲೋಕಸಭಾ ಸ್ಪೀಕರ್

ಪ್ರಮಾಣ ವಚನ ಕುರಿತು ಕೆಲವು ಮಹತ್ವದ ತಿದ್ದುಪಡಿ ಮಾಡಿದ ಲೋಕಸಭಾ ಸ್ಪೀಕರ್

ನವದೆಹಲಿ,ಜು.5- ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಿಯಮದಲ್ಲಿ ಕೆಲವು ತಿದ್ದುಪಡಿಗಳನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಪ್ರಮಾಣ ವಚನ ಸ್ವೀಕರಿಸುವಾಗ ಸದಸ್ಯರು ಯಾವುದೇ ಘೋಷಣೆ ಕೂಗುವಂತಿಲ್ಲ ಎಂದು ಸೂಚಿಸಿದ್ದಾರೆ.

ಈ ಬಾರಿ ಸಂಸದರು ಪ್ರಮಾಣ ವಚನ ಸ್ವೀಕರಿಸುವಾಗ ಘೋಷಣೆ ಕೂಗಿದ್ದು ವಿವಾದದ ಕಿಡಿ ಹೊತ್ತಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ವಾರ ನಡೆದ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೆಲವರು ಜೈ ಸಂವಿಧಾನ ಎಂದು ಕೂಗಿದ್ದರೆ, ಹೈದರಾಬಾದ್ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಮೊಳಗಿಸಿದ್ದರು.

ಉತ್ತರಪ್ರದೇಶದ ಬರೇಲಿಯ ಬಿಜೆಪಿ ಸಂಸದ ಛತ್ರ ಪಾಲ್ ಸಿಂಗ್ ಗಂಗ್ವಾರ್ ಪ್ರಮಾಣ ವಚನದ ಕೊನೆಗೆ ಜೈ ಹಿಂದೂ ರಾಷ್ಟ್ರ ಎಂದು ಹೇಳಿದ್ದರು. ಬಳಿಕ ಈ ವಿಚಾರ ವಿವಾದ ಎಬ್ಬಿಸಿತ್ತು. ದೇಶಾದ್ಯಂತ ಪರ-ವಿರೋಧ ಚರ್ಚೆ ನಡೆದಿದ್ದವು. ಇದರ ನಂತರ ಬಿರ್ಲಾ ಅವರು ಸದಸ್ಯರ ಪ್ರಮಾಣ ವಚನ ಸ್ವೀಕಾರ ಮತ್ತು ದೃಢೀಕರಣಕ್ಕಾಗಿ ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಿದ್ದರು. ಸಮಿತಿಯ ಶಿಾರಸ್ಸಿನಂತೆ ಇದೀಗ ಲೋಕಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಗಳ 389ನೇ ನಿಯಮಕ್ಕೆ ತಿದ್ದುಪಡಿ ತರಲಾಗಿದೆ.

ಹೊಸ ನಿಯಮದಲ್ಲಿ ಏನಿದೆ?:ಹೊಸ ನಿಯಮದ ಪ್ರಕಾರ ಸಂಸದರು ಪ್ರಮಾಣ ವಚನ ಸ್ವೀಕರಿಸುವ ಮೊದಲು ಅಥವಾ ಬಳಿಕ ಯಾವುದೇ ಪದಗಳು ಅಥವಾ ಅಭಿವ್ಯಕ್ತಿಯನ್ನು ಬಳಸುವಂತಿಲ್ಲ. ಒಂದುವೇಳೆ ನಿಯಮ ಉಲ್ಲಂಸಿದರೆ ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು 18ನೇ ಲೋಕಸಭೆಯ ಮೊದಲ ಅಽವೇಶನದ ಕೊನೆಯಲ್ಲಿ ಮಾಹಿತಿ ನೀಡಿದರು.

ಏನಿದು ವಿವಾದ?:18ನೇ ಲೋಕಸಭೆಯ ಸದಸ್ಯರಾಗಿ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಸಾದುದ್ದೀನ್ ಓವೈಸಿ ಕೊನೆಗೆ, ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ್ದರು. ಜೈ ಪ್ಯಾಲೆಸ್ತೀನ್ ಘೋಷಣೆಗೆ ಬಿಜೆಪಿ ತೀವ್ರ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಓವೈಸಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಸದನದ ಹೊರಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಅವರು, ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದರು. ಇತರ ಸದಸ್ಯರು ಸಹ ವಿವಿಧ ರೀತಿಯ ಘೋಷಣೆ ಕೂಗುತ್ತಾರೆ. ಅದು ಹೇಗೆ ತಪ್ಪಾಗುತ್ತದೆ? ನಾನು ಏನು ಹೇಳಬೇಕೋ ಅದನ್ನು ಹೇಳಿದೆ. ಪ್ಯಾಲೆಸ್ತೀನ್ ಬಗ್ಗೆ ಮಹಾತ್ಮ ಗಾಂಧಿ ಹೇಳಿದ್ದನ್ನು ಓದಿ ಎಂದು ಓವೈಸಿ ಹೇಳಿದ್ದರು. ಬಳಿಕ ಇದು ವ್ಯಾಪಕ ವಿವಾದ ಹುಟ್ಟು ಹಾಕಿತ್ತು.

RELATED ARTICLES

Latest News