ಬೆಂಗಳೂರು, ಡಿ.2- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎನ್ನಲಾದ ಮುಡಾ ಹಗರಣಕ್ಕೆ ಸಂಬಂಧಿಸಿ ದಂತೆ ಲೋಕಾಯುಕ್ತರು ನೀಡಿದ್ದ ನೋಟೀಸ್ಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಉತ್ತರಿಸಿದ್ದಾರೆ.
ಸಿದ್ಧರಾಮಯ್ಯನವರು ಭಾಗಿ ಯಾಗಿರುವ ಹಗರಣಕ್ಕೆ ಸಂಬಂಧಿಸಿ ದಂತೆ, ಮತ್ತೊಂದು ಹೇಳಿಕೆ ನೀಡುವಂತೆ ಲೋಕಾಯುಕ್ತದ ವಿಚಾರಣಾಧಿಕಾರಿಗಳು ನನಗೆ ನೀಡಿದ್ದ ನೋಟೀಸ್ ಗೆ ಉತ್ತರ ನೀಡಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೈಸೂರಿನ ಮುಡಾ ಹಗರಣದ 14 ಬದಲಿ ನಿವೇಶನಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ, ಅವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಬಸವೇಗೌಡ, ಹೆಚ್.ವಿ. ರಾಜೀವ್, ಡಿ.ಬಿ. ನಟೇಶ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದಾಖಲೆಗಳ ಸಹಿತ ಈ ಹಿಂದೆ ದೂರನ್ನು ನೀಡಿರುತ್ತೇನೆ.
ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ ವಿಚಾರಣಾಧಿಕಾರಿಗಳು ನ.14 ರಂದು ನನಗೆ ನೋಟೀಸ್ ಒಂದನ್ನು ಜಾರಿ ಮಾಡಿ ತಾವು ಖುದ್ದು ಹಾಜರಾಗಿ ಮತ್ತೊಂದು ಹೇಳಿಕೆಯನ್ನು ನೀಡಬೇಕೆಂದು ಪತ್ರ ಮುಖೇನ ತಿಳಿಸಿರುತ್ತಾರೆ.
ಆದ ಕಾರಣ ಲೋಕಾಯುಕ್ತ ವಿಚಾರಣಾಧಿಕಾರಿಗಳ ಮುಂದೆ ಖುದ್ದು ಹಾಜರಾಗಿ ನನ್ನ ಮತ್ತೊಂದು ಸ್ಪಷ್ಟವಾದ ಹೇಳಿಕೆಯನ್ನು ಸಂಪೂರ್ಣ ದಾಖಲೆಗಳೊಂದಿಗೆ ದಾಖಲಿಸಿರುತ್ತೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಈ ಹಿಂದೆ 1997-98, 2004-2006, 2013-2018 ಮತ್ತು 2021-22 ರ ಹಲವು ಅವಧಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಅತ್ಯಂತ ಪ್ರಭಾವಯುತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭಗಳಲ್ಲಿ ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೆ ನಂಬರ್ 464 ರ 3.16 ಎಕರೆ ವಿಸ್ತೀರ್ಣದ ಜಾಗಕ್ಕೆ ಸಂಬಂಧಿಸಿದಂತೆ ಆಯಾ ಸಂದರ್ಭಗಳಲ್ಲಿನ ತಮ ಅತ್ಯಂತ ಪ್ರಭಾವಯುತವಾದ ಅಧಿಕಾರ ವನ್ನು ದುರುಪಯೋಗಪಡಿಸಿ ಕೊಂಡು ಮತ್ತು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಕ್ಕೆ ದೊಡ್ಡಮಟ್ಟದಲ್ಲಿ ವಂಚನೆ ಮಾಡುವ ಕಾರ್ಯವನ್ನು ಎಸಗಿರುತ್ತಾರೆ.
ಮೈಸೂರು ನಗರಾಭಿಮೃದ್ಧಿ ಪ್ರಾಧಿಕಾರ (ಮುಡಾ) ವು ದೇವನೂರು 03ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು ಕಾನೂನು ರೀತ್ಯಾ ಭೂಸ್ವಾಧೀನಪಡಿಸಿ ಕೊಂಡಿದ್ದ ಜಮೀನುಗಳ ಪೈಕಿ ಕೆಸರೆ ಗ್ರಾಮದ ಸರ್ವೆ ನಂಬರ್ 464 ರ 3.16 ಎಕರೆ ವಿಸ್ತೀರ್ಣದ ಸ್ವತ್ತನ್ನು – ಅದಾಗಲೇ ಸದರಿ ಸ್ವತ್ತೂ ಸೇರಿದಂತೆ ಭೂಸ್ವಾಧೀನ ಪಡಿಸಿಕೊಂಡಿದ್ದ ಎಲ್ಲ ಜಮೀನುಗಳಲ್ಲಿ ಬಡಾವಣೆ ನಿರ್ಮಾಣದ ಪ್ರಕ್ರಿಯೆ ಯನ್ನು ಸಂಪೂರ್ಣ ಗೊಳಿಸಿ ನಿಯಮಾನು ಸಾರ ಹಂಚಿಕೆದಾರರಿಗೆ ನಿವೇಶನ ಗಳನ್ನು ಹಂಚಿಕೆ ಮಾಡಿರುವ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸಹ ಸಿದ್ಧರಾಮಯ್ಯನವರ ಬಾವ ಮೈದುನ ಕಾನೂನು ಬಾಹಿರವಾಗಿ ನಿಂಗ ಬಿನ್ ಜವರ ಅವರಿಂದ ಕ್ರಯಕ್ಕೆ ಪಡೆದಿದ್ದ ಸ್ವತ್ತನ್ನು ಸಿದ್ಧರಾಮಯ್ಯನವರ ಧರ್ಮಪತ್ನಿ ಪಾರ್ವತಿಯವರ ಹೆಸರಿಗೆ ದಾನ ಪತ್ರದ ಮೂಲಕ ನೀಡಿರುವ ಕಾರ್ಯವು ಸಂಪೂರ್ಣವಾಗಿ ಕಾನೂನು ಬಾಹಿರ ಕಾರ್ಯವೆಂಬುದು ಸ್ವತಃ ಕಾನೂನು ಪದವೀಧರರಾಗಿರುವ ಸಿದ್ಧರಾಮಯ್ಯನವರಿಗೆ ಅತ್ಯಂತ ಸ್ಪಷ್ಟವಾಗಿ ತಿಳಿದಿದ್ದರೂ ಸಹ ಸದರಿ ಸ್ವತ್ತನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಭೂಸ್ವಾಧೀನ ಪ್ರಕ್ರಿಯೆ ಯಿಂದ ಕೈಬಿಟ್ಟಿರುವಂತೆ ಆದೇಶವನ್ನು ಹೊರಡಿಸಲು ಕಾರಣೀಭೂತರಾಗಿರುತ್ತಾರೆ.
ಇದಲ್ಲದೇ, ನಗರಾಭಿವದ್ಧಿ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ದೇವನೂರು 03ನೇ ಹಂತದ ಬಡಾವಣೆಗಿಂತಲೂ ಹತ್ತಾರು ವರ್ಷಗಳ ಮುಂಚಿತವಾಗಿ ಮುಡಾದಿಂದ ರಚನೆಯಾಗಿದ್ದ ಹಾಗೂ ಮೈಸೂರಿನ ಅತ್ಯಂತ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾ ಗಿರುವ ವಿಜಯನಗರ 02, 03 ಮತ್ತು 04ನೇ ಹಂತದ ಬಡಾವಣೆಗಳಲ್ಲಿ 14 ಬದಲಿ ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿಯೂ ಸಹ ತಮ ಪ್ರಭಾವಯುತ ಸ್ಥಾನದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ.
ಈ ಕುರಿತಂತೆ ನಾನು ಲೋಕಾಯುಕ್ತ ಪೊಲೀಸರಿಗೆ ಸಂಪೂರ್ಣ ಮಾಹಿತಿ ಒದಗಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ರಮೇಶ್ ತಿಳಿಸಿದ್ದಾರೆ.