Thursday, September 19, 2024
Homeರಾಜ್ಯಸಿಎಂ ವಿರುದ್ಧ ಮತ್ತೊಂದು ಖಾಸಗಿ ದೂರು ದಾಖಲಿಸಿದ ಎನ್‌.ಆರ್‌.ರಮೇಶ್‌

ಸಿಎಂ ವಿರುದ್ಧ ಮತ್ತೊಂದು ಖಾಸಗಿ ದೂರು ದಾಖಲಿಸಿದ ಎನ್‌.ಆರ್‌.ರಮೇಶ್‌

NR Ramesh filed another private complaint against the CM

ಬೆಂಗಳೂರು, ಸೆ.13- ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಎನ್‌.ಆರ್‌.ರಮೇಶ್‌ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮತ್ತೊಂದು ಖಾಸಗಿ ದೂರು ದಾಖಲಿಸಿ ದ್ದಾರೆ.ಬಿಬಿಎಂಪಿ ಗೆ ಉದ್ದೇಶಪೂರ್ವಕವಾಗಿ 68 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ವಂಚಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ರಮೇಶ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

2015-2017 ರ ಎರಡು ವರ್ಷಗಳ ಅವಧಿಯಲ್ಲಿ ಬಿಬಿಎಂಪಿ ಯ 493 ಬಸ್‌‍ ಷೆಲ್ಟರ್‌ ಗಳನ್ನು ತಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆಂದು ಬಳಸಿಕೊಂಡು, 68 ಕೋಟಿ ರೂ.ಗಳಲ್ಲಿ ನಯಾಪೈಸೆಯಷ್ಟೂ ಜಾಹಿರಾತು ಶುಲ್ಕ ಪಾವತಿಸದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದಾಖಲೆಗಳ ಸಹಿತ ದೂರುಗಳನ್ನು ದಾಖಲಿಸಲಾಗಿತ್ತು.

ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರುಗಳು ದಾಖಲಾದ ನಂತರ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿ ಯ ಅಂದಿನ ವಿಶೇಷ ಆಯುಕ್ತರು 12 ಕೋಟಿ ರೂ.ಮೊತ್ತವನ್ನು ಪಾಲಿಕೆಗೆ ಪಾವತಿಸುವಂತೆ ಅಂದಿನ ಸಿದ್ದರಾಮಯ್ಯ ನೇತತ್ವದ ರಾಜ್ಯ ಸರ್ಕಾರಕ್ಕೆ ಡಿಮ್ಯಾಂಡ್‌ ನೋಟೀಸ್‌‍ ಅನ್ನು ನೀಡಿದ್ದರು.

ಆದರೂ ಸಹ ಸಿದ್ದರಾಮಯ್ಯ ಸರ್ಕಾರ ಈ ನೋಟೀಸ್‌‍ಗೆ ಕವಡೆ ಕಾಸಿನ ಕಿಮತ್ತನ್ನೂ ನೀಡಿರಲಿಲ್ಲ. ಸಿದ್ದರಾಮಯ್ಯ ನವರು ಎರಡನೇ ಬಾರಿ ಮುಖ್ಯಮಂತ್ರಿಗಳಾದ ನಂತರ, ಅವರ ಪ್ರಭಾವ ಮತ್ತು ಒತ್ತಡಗಳಿಗೆ ಒಳಗಾಗಿದ್ದ ಲೋಕಾಯುಕ್ತ ಪೋಲೀಸರು, ಸಿದ್ದರಾಮಯ್ಯ ಸರ್ಕಾರವು ಬಿಬಿಎಂಪಿಗೆ 68,14,90,236ಗಳಷ್ಟು ಜಾಹಿರಾತು ಶುಲ್ಕವನ್ನು ವಂಚಿಸಿದ್ದ ಹಗರಣ ಕ್ಕೆ ಸಂಬಂಧಿಸಿದಂತೆ ನಾನು ನೀಡಿದ್ದ ದೂರನ್ನು ಯಾವುದೇ ಸೂಚನೆ ಇಲ್ಲದೆಯೇ ಮುಕ್ತಾಯಗೊಳಿಸಿತ್ತು.

ಈ ಮಹಾ ವಂಚನೆಯ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳ ಸಹಿತವಾಗಿ ದೂರನ್ನು ನೀಡಿದ್ದರೂ ಕೂಡ ಪಕ್ಷಪಾತ ಧೋರಣೆಯಿಂದ ಮತ್ತು ಸಿದ್ದರಾಮಯ್ಯ ನವರ ಒತ್ತಡಕ್ಕೆ ಒಳಗಾಗಿ ಸದರಿ ಪ್ರಕರಣವನ್ನು ಮುಕ್ತಾಯ ಗೊಳಿಸಿರುವ ಲೋಕಾಯುಕ್ತ ಪೋಲೀಸರ ನಡೆಯನ್ನು ವಿರೋಧಿಸಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದಲ್ಲಿ ಇಂದು ಖಾಸಗಿ ದೂರನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

Latest News