ಬೆಂಗಳೂರು, ಆ.19– ಅಮೃತ ಮಹೋತ್ಸವ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಖಾತೆಗೆ 27.50 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ವರ್ಗಾವಣೆ ಮಾಡಿರುವ ಪಾಲಿಕೆಯ ಕಲ್ಯಾಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಅಮೃತ ಮಹೋತ್ಸವ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಮಂಜೂರು ಮಾಡಲು ಕೆಲವೊಂದು ಅರ್ಹತೆ ಮತ್ತು ಷರತ್ತುಗಳು ಹಾಗೂ ಆಯ್ಕೆಯ ವಿಧಾನ ಮತ್ತು ಅನುಷ್ಠಾನದ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಗಳಿರುತ್ತವೆ.
ನಿವೇಶನ ರಹಿತ ಅರ್ಜಿದಾರರುಗಳಿಗೆ ಫ್ಲಾಟ್ ಹಂಚಿಕೆಯಾಗಿದ್ದಲ್ಲಿ ಸರ್ಕಾರದ ವತಿಯಿಂದ ನೀಡಲಾಗುವ ಸಬ್ಸಿಡಿಯೊಂದಿಗೆ ಫಲಾನುಭವಿಗಳು ಭರಿಸಬೇಕಾದ ವಂತಿಕೆ ಅಥವಾ ಗರಿಷ್ಠ 5.00 ಲಕ್ಷಗಳನ್ನು ನೇರವಾಗಿ ಸಂಬಂಧಪಟ್ಟ ಸಂಬಂಧಪಟ್ಟ ಸಂಸ್ಥೆಗಳಿಗೆ ಸಹಾಯಧನದ ರೂಪದಲ್ಲಿ ಪಾಲಿಕೆಯ ಕಲ್ಯಾಣ ಕಾರ್ಯಕ್ರಗಳ ಅಡಿಯಲ್ಲಿ ನೀಡಲಾಗುವುದು.ಅನುದಾನದ ಲಭ್ಯತೆಯನ್ನು ಪರಿಶೀಲಿಸಿಕೊಂಡು ಅರ್ಜಿದಾರರನ್ನು ಆಯ್ಕೆ ಮಾಡಲಾಗುವುದು.
ಆನ್ ಲೈನ್ ಅಥವಾ ಭೌತಿಕವಾಗಿ ಅರ್ಜಿಯನ್ನು ಸಲ್ಲಿಸಲಾಗಿರುವ ಅರ್ಜಿಗಳ ದಾಖಲೆಗಳನ್ನು ಸಂಬಂಧಪಟ್ಟ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ಮಹಜರು ನಡೆಸಿ ಶಿಫಾರಸು ಮಾಡಬೇಕು.
ಅರ್ಹ ಫಲಾನುಭವಿಗಳ ಪಟ್ಟಿಯನ್ನು ವಲಯಗಳಿಂದ ಪಡೆದು ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಸ್ವೀಕೃತವಾಗಿರುವ ಫಲಾನುಭವಿಗಳಿಗೆ ಮಾತ್ರ ಸಹಾಯಧನವನ್ನು ಬಿಡುಗಡೆಗೊಳಿಸಬೇಕು. ಆದರೆ, ಬಿಬಿಎಂಪಿ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ಆಯುಕ್ತ ನಾಗಭೂಷಣ್ ಎಂಬ ಭ್ರಷ್ಟ ಅಧಿಕಾರಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಪಡೆದಿರುವ ಒಟ್ಟು 550 ಅಭ್ಯರ್ಥಿಗಳ ಖಾತೆಗೆ 5.00 ಲಕ್ಷಗಳಂತೆ ಒಟ್ಟು 27.50 ಕೋಟಿ ಮೊತ್ತವನ್ನು ಅಕ್ರಮವಾಗಿ ಬಿಡುಗಡೆ ಮಾಡಿರುತ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಸ್ತುತ ಮಹದೇವಪುರ ವಲಯದ ಕಲ್ಯಾಣ ಇಲಾಖೆಯ ಸಹಾಯಕ ಕಂದಾಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನಾಗಭೂಷಣ್ ಎಂಬ ಭ್ರಷ್ಟ ಅಧಿಕಾರಿಯ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು 27.50 ಕೋಟಿ ಮೊತ್ತದ ಪೂರ್ತಿ ಹಣವನ್ನು ನಾಗಭೂಷಣ್ ಅವರಿಂದ ವಸೂಲಿ ಮಾಡುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದಾಖಲೆಗಳ ಸಹಿತ ಬಿಬಿಎಂಪಿ ಆಡಳಿತಗಾರ ತುಷಾರ್ ಗಿರಿನಾಥ್ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ದೂರು ನೀಡಿದ್ದಾರೆ.