ನವದೆಹಲಿ,ಮಾ.3- ವನ್ಯಜೀವಿ ಟ್ರೋಫಿಯನ್ನು ದೇಶದಿಂದ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ಅನಿವಾಸಿ ಭಾರತೀಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 60 ವರ್ಷದ ಪಾಲ್ಜಿತ್ಸಿಂಗ್ ಪಾಲ್ ಲಾಲ್ವಾನಿ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಪಾಲ್ಜಿತ್ ಸಿಂಗ್ ಪಾಲ್ ಲಾಲ್ವಾನಿ ಬಳಿ ಇದ್ದ ಟ್ರೋಫಿಯನ್ನು ಬೇಟೆಯಾಡಿದ ಪ್ರಾಣಿಯ ತಲೆ ಅಥವಾ ಚರ್ಮದಿಂದ ತಯಾರಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಒಳಗೊಂಡಿರುವ ಹುಲ್ಲೇ ಎಂಬ ಪ್ರಾಣಿಯ ಅಂಗಗಳಿಂದ ಟ್ರೋಫಿ ತಯಾರಿಸಲಾಗಿರುವುದ ಅನುಮಾನ ವ್ಯಕ್ತವಾಗಿದೆ.
ಅರಣ್ಯ ಮತ್ತು ವನ್ಯಜೀವಿ ಇಲಾಖೆ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಮಾರ್ಚ್ 26 ರಂದು ಅಮೆರಿಕದ ನ್ಯೂಯಾರ್ಕ್ ನಿವಾಸಿ ಲಾಲ್ವಾನಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಲಾಲ್ವಾನಿ ಅವರ ಸಾಮಾನು ಸರಂಜಾಮುಗಳನ್ನು ಸ್ಕ್ಯಾನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ ಮತ್ತು ಅವರ ಸೂಟ್ಕೇಸ್ ಒಂದರಲ್ಲಿ ಅನುಮಾನಾಸ್ಪದ ವಸ್ತುವನ್ನು ಗಮನಿಸಲಾಯಿತು ಎಂದು ಎಫ್ ಐಆರ್ನಲ್ಲಿ ತಿಳಿಸಲಾಗಿದೆ. ಲಾಲ್ವಾನಿ ಅವರನ್ನು ಆರಂಭದಲ್ಲಿ ಕಸ್ಟಮ್ಸ ಆಕ್ಟ್ 1962 ರ ಅಡಿಯಲ್ಲಿ ದಾಖಲಿಸಲಾಯಿತು, ಆದರೆ ನಂತರ ಪ್ರಕರಣವನ್ನು ವನ್ಯಜೀವಿ ಇಲಾಖೆಗೆ ವರ್ಗಾಯಿಸಲಾಗಿದೆ.
ಲಾಲ್ವಾನಿ ಅವರನ್ನು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಮ್ಸ್ ಕಾಯಿದೆಗಳ ಅಡಿಯಲ್ಲಿ ಜಾಮೀನು ನೀಡಲಾಗಿದೆ. ಈ ಕಾಯಿದೆಯು ವನ್ಯಜೀವಿ (ರಕ್ಷಣೆ) ಕಾಯಿದೆಯ ಹಲವಾರು ವಿಭಾಗಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿದುಬಂದಿದೆ.