ಮುಂಬೈ,ಜ.8- ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮತ್ತೊಂದು ಆರು ತಿಂಗಳ ಹೆಣ್ಣು ಮಗುವಿಗೆ ಹೆಚ್ಎಂಪಿವಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ತೀವ್ರ ಕೆಮು, ಎದೆ ಬಿಗಿತ ಮತ್ತು ಆಮ್ಲಜನಕದ ಮಟ್ಟವು 84 ಕ್ಕೆ ಇಳಿದಿದ್ದರಿಂದ ಶಿಶುವನ್ನು ಜ.1 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳ ನಂತರ ಆಕೆಯನ್ನು ಬಿಡುಗಡೆ ಮಾಡಲಾಯಿತು.
ಇದಕ್ಕೂ ಮೊದಲು, ಮಹಾರಾಷ್ಟ್ರದ ನಾಗ್ಪುರದಲ್ಲಿ ಏಳು ವರ್ಷ ಮತ್ತು 13 ವರ್ಷ ವಯಸ್ಸಿನ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಇತರ ಪ್ರಕರಣಗಳು ಕರ್ನಾಟಕ (2), ಗುಜರಾತ್ (1), ತಮಿಳುನಾಡು (2) ಪ್ರಕರಣಗಳು ದಾಖಲಾಗಿವೆ.
ಉತ್ತರಾಖಂಡ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳ ಸರ್ಕಾರಗಳು ಜನರು ಭಯಭೀತರಾಗದಂತೆ ಮನವಿ ಮಾಡಿಕೊಂಡಿವೆ.
ಮಿಜೋರಾಂ ಹೆಚ್ಎಂಪಿ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ರಚಿಸಿದೆ. ಗುಜರಾತ್ನ ಮೂರು ನಗರಗಳಾದ ಗಾಂಧಿನಗರ, ಅಹಮದಾಬಾದ್ ಮತ್ತು ರಾಜ್ಕೋಟ್ಗಳಲ್ಲಿನ ಸಿವಿಲ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳನ್ನು ರಚಿಸಲಾಗಿದೆ.
ಚೀನಾದಲ್ಲಿ ಎಚ್ಎಂಪಿವಿ ಪ್ರಕರಣಗಳ ಹೆಚ್ಚಳದ ವರದಿಗಳ ಮಧ್ಯೆ ನಡೆದ ಸಭೆಯಲ್ಲಿ, ಐಎಲ್ಐ ಮತ್ತು ಎಸ್ಆರ್ಐ ಸೇರಿದಂತೆ ಉಸಿರಾಟದ ಕಾಯಿಲೆಗಳ ಬಗ್ಗೆ ಕಣ್ಗಾ ವಲು ಹೆಚ್ಚಿಸಲು ಮತ್ತು ಎಚ್ಎಂಪಿವಿ ಪ್ರಸರಣವನ್ನು ತಡೆಗಟ್ಟುವ ಬಗ್ಗೆ ಜಾಗತಿ ಮೂಡಿಸಲು ಕೇಂದ್ರವು ರಾಜ್ಯಗಳಿಗೆ ಸಲಹೆ ನೀಡಿದೆ.
ಹೆಚ್ಎಂಪಿವಿ ಜಾಗತಿಕವಾಗಿ ಗುರುತಿಸಲ್ಪಟ್ಟ ಉಸಿರಾಟದ ವೈರಸ್ ಆಗಿದೆ. ಎಲ್ಲಾ ವಯಸ್ಸಿನ ಜನರಲ್ಲಿ, ವಿಶೇಷವಾಗಿ ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಸೋಂಕನ್ನು ಉಂಟುಮಾಡುವ ಅನೇಕ ಉಸಿರಾಟದ ವೈರಸ್ಗಳಲ್ಲಿ ಇದು ಒಂದಾಗಿದೆ. ವೈರಸ್ ಸೋಂಕು ಸಾಮಾನ್ಯವಾಗಿ ಸೌಮ್ಯವಾದ ಮತ್ತು ಸ್ವಯಂ-ಸೀಮಿತಗೊಳಿಸುವ ಸ್ಥಿತಿಯಾಗಿದೆ ಮತ್ತು ಹೆಚ್ಚಿನ ರೋಗಿಗಳು ತಮದೇ ಆದ ಮೇಲೆ ಚೇತರಿಸಿಕೊಳ್ಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಸೌವ್ಯಾ ಸ್ವಾಮಿನಾಥನ್ ಅವರು ಹೆಚ್ಎಂಪಿವಿ ಮತ್ತು ಕೋವಿಡ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.