ಬೆಂಗಳೂರು,ಜ.23- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಅಶ್ಲೀಲ ಪದ ಪ್ರಯೋಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಸಿಐಡಿ ಪೊಲೀಸರು ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಹೈಕೋರ್ಟ್ ಸಿಐಡಿಗೆ ಸೂಚನೆ ನೀಡಿದೆ.
ತಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಹೈಕೋರ್ಟ್ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಸಿ.ಟಿ.ರವಿ ವಿರುದ್ಧ ಬಲವಂತದ ತೀರ್ಮಾನ ತೆಗೆದುಕೊಳ್ಳದಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿಯವರಿಗೆ ಆದೇಶ ಮಾಡಿತು.
ಇದಕ್ಕೂ ಮುನ್ನ ರವಿ ಪರ ವಾದ ಮಾಡಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ತಮ ಕಕ್ಷಿದಾರರು ಸಚಿವೆ ವಿರುದ್ಧ ಯಾವುದೇ ರೀತಿಯ ಅಶ್ಲೀಲ ಪದ ಪ್ರಯೋಗಿಸಿಲ್ಲ. ವಿಧಾನಪರಿಷತ್ ಕಲಾಪದಲ್ಲಿ ದಾಖಲಾಗಿರುವ ಮಾಹಿತಿಯಲ್ಲೇ ಇದು ಸ್ಪಷ್ಟವಾಗಿದೆ. ಈಗಾಗಲೇ ವಿಧಾನಪರಿಷತ್ ಸಭಾಪತಿಗಳು ಇದರ ಬಗ್ಗೆ ರೂಲಿಂಗ್ ಕೊಟ್ಟು ಮುಗಿದ ಅಧ್ಯಾಯ ಎಂದು ಹೇಳಿದ್ದರೂ ಸರ್ಕಾರ ದುರದ್ದೇಶ ಪೂರ್ವಕವಾಗಿಯೇ ತನಿಖೆ ನಡೆಸಲು ಮುಂದಾಗಿದೆ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಒಂದು ಬಾರಿ ಸಭಾಪತಿ ಇಲ್ಲವೇ ಸಭಾಧ್ಯಕ್ಷರು ಪ್ರಕರಣವನ್ನು ಇತ್ಯರ್ಥಗೊಳಿಸಿದರೆ ಪುನಃ ಅದನ್ನು ತನಿಖೆ ನಡೆಸಲು ಅವಕಾಶವಿಲ್ಲ. ಈಗಾಗಲೇ ಸಭಾಪತಿಯವರೇ ಸದಸ್ಯರು, ಸಚಿವರಿಗೆ ಅಶ್ಲೀಲ ಪದ ಬಳಸಿಲ್ಲ ಎಂದು ರೂಲಿಂಗ್ ಕೊಟ್ಟಿದ್ದಾರೆ. ಸರ್ಕಾರ ಸಿಐಡಿ ತನಿಖೆಗೆ ನೀಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವನಿ ಪರೀಕ್ಷೆಗೆ ಹಾಜರಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ರವಿ ಇದನ್ನು ನಿರಾಕರಿಸಿದ್ದರು. ಹೀಗಾಗಿ ಸಿಐಡಿ ತನಿಖಾ ತಂಡ ಹೈಕೋರ್ಟ್ ಮೆಟ್ಟಿಲೇರಿತ್ತು. ಇದರ ಜೊತೆಗೆ ಸಿ.ಟಿ.ರವಿ ಕೂಡ ತಮ ಮೇಲೆ ಸಿಐಡಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ನಲ್ಲಿ ಮೇಲನವಿ ಅರ್ಜಿ ಸಲ್ಲಿಸಿದ್ದರು.
ಕಳೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಸುವರ್ಣ ಸೌಧದ ಕಲಾಪದ ವೇಳೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಹೆಬ್ಬಾಳ್ಕರ್ ಅವರು ರವಿ ಅವರನ್ನು ಕೊಲೆಗಡುಕ ಎಂದು ಸಂಬೋಧಿಸಿದ್ದರಿಂದ ಸಿ.ಟಿ.ರವಿ ಸಚಿವೆಗೆ ಅಶ್ಲೀಲ ಪದ ಬಳಸಿದ್ದರು ಎಂಬ ಆರೋಪವಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಬೆಳಗಾವಿಯ ಖಾನಾಪುರ ಠಾಣೆ ಪೊಲೀಸರು ಬಂಧಿಸಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.