ಹಾಸನ, ಅ.17- ಇಲ್ಲಿನ ಹಾಸನಾಂಬೆ ದೇವಾ ಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಜನ, ದೇವಿಯ ದರ್ಶನ ಪಡೆಯುತ್ತಿದ್ದಾರೆ. ನಿನ್ನೆ ಒಂದೇ ದಿನ ಎರಡೂವರೆ ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇಂದು ಮೂರು ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಬಾಕಿ ಉಳಿದಿರುವ ದಿನಗಳಲ್ಲೂ ಇದೇ ರೀತಿಯ ಜನಸಾಗರ ಹರಿದು ಬರುವ ಸಾಧ್ಯತೆಯಿದ್ದು, ಅದಕ್ಕೆ ಮಾನಸಿಕವಾಗಿ ಸಿದ್ಧರಾಗಿ ದೇವಸ್ಥಾನಕ್ಕೆ ಬರುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ.
ಗುರುವಾರ 2.58 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದು, ಇದುವರೆಗೆ ಒಟ್ಟು 13.89 ಲಕ್ಷ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನಿನ್ನೆಯಿಂದ ಎಲ್ಲಾ ಸಾಲುಗಳು ತುಂಬಿವೆ. ಧರ್ಮ ದರ್ಶನ ಮಾತ್ರವಲ್ಲದೇ, 300 ರೂ. ಮತ್ತು 1000 ರೂ. ಸಾಲುಗಳೂ ಸಹ ಸಂಪೂರ್ಣ ಭರ್ತಿಯಾಗಿ ಜನರ ಸಾಲು ರಸ್ತೆಯನ್ನೂ ದಾಟಿ ಮುಂದೆ ಹೋಗಿವೆ. ಹೀಗಾಗಿ ಎಲ್ಲಾ ವಿಧದ ದರ್ಶನಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ವಿವರಿಸಿದ್ದಾರೆ.
ಉಳಿದಿರುವ ಎಲ್ಲಾ ದಿನಗಳಲ್ಲೂ ಇದೇ ಟ್ರೆಂಡ್ ಮುಂದುವರಿಯಲಿದ್ದು, ಇಂದು 3 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಜನರನ್ನು ನಿರೀಕ್ಷಿಸಲಾಗಿದೆ. ಧರ್ಮ ದರ್ಶನಕ್ಕೆ 3 ರಿಂದ 5 ಗಂಟೆ ತೆಗೆದುಕೊಳ್ಳುತ್ತದೆ, 300 ರೂ. ದರ್ಶನಕ್ಕೆ ಒಂದರಿಂದ ಎರಡೂವರೆ ಗಂಟೆ ತೆಗೆದುಕೊಳ್ಳುತ್ತದೆ ಮತ್ತು ಒಂದು ಸಾವಿರ ರೂ. ದರ್ಶನಕ್ಕೆ ಕನಿಷ್ಠ 1 ಗಂಟೆ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಸಮಯ ಮತ್ತು ದಿನವನ್ನು ಅವಲಂಬಿಸಿ, ದರ್ಶನದ ಸಮಯಗಳು ಬದಲಾಗುತ್ತವೆ. ಒಂದೇ ದಿನದಲ್ಲಿ 3 ಲಕ್ಷ ಜನರಿಗೆ ದರ್ಶನ ಸವಾಲಿನ ಕೆಲಸ. ಜನರ ತಾಳೆ ಮತ್ತು ಸಹಕಾರ ಅತೀ ಅವಶ್ಯಕ ಎಂದು ಮನವಿ ಮಾಡಿಕೊಂಡಿದ್ದಾರೆ.
ಶನಿವಾರದ ಮಾಹಿತಿ: ಶಾಸ್ತ್ರದ ಪ್ರಕಾರ ಶನಿವಾರ ರಾತ್ರಿ ವಿಶೇಷ ಪೂಜೆಯನ್ನು ಸಲ್ಲಿಸಬೇಕು. ಹೀಗಾಗಿ ಶನಿವಾರ ರಾತ್ರಿ 10 ಗಂಟೆಗೆ ದ್ವಾರ ಮುಚ್ಚಲಿದ್ದು, ಮಧ್ಯರಾತ್ರಿ 12 ಗಂಟೆಗೆ ದರ್ಶನ ಸ್ಥಗಿತಗೊಳ್ಳಲಿದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಮತ್ತೆ ಆರಂಭವಾಗಲಿದೆ.
ದಯವಿಟ್ಟು ಶನಿವಾರ ರಾತ್ರಿ ಬರುವುದನ್ನು ತಪ್ಪಿಸಿ. ಇಂದಿನಿಂದ ಎಲ್ಲಾ ದಿನಗಳಲ್ಲೂ ದರ್ಶನಕ್ಕೆ ಹೆಚ್ಚಿನ ಸಮಯ ಅಗತ್ಯವಿದ್ದು, ಅದಕ್ಕೆ ತಕ್ಕಂತೆ ಯೋಜಿಸಿ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಾಸನಾಂಬೆಯ ದರ್ಶನದಿಂದಾಗಿ ಹಾಸನ ಸಂಪೂರ್ಣ ಜನಜಂಗುಳಿಯಿಂದ ತುಂಬಿ ಹೋಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಜಿಲ್ಲಾಡಳಿತ ವ್ಯವಸ್ಥಿತವಾದ ಕ್ರಮಗಳನ್ನು ಕೈಗೊಂಡಿದೆ. ವಿವಿಐಪಿ ದರ್ಶನಕ್ಕೆ ಸರ್ಕಾರಿ ವಾಹನದ ವ್ಯವಸ್ಥೆ ಸೇರಿದಂತೆ ಹಲವಾರು ಕ್ರಮಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದು, ಯಾವುದೇ ಗೊಂದಲಗಳಿಲ್ಲದೆ ದರ್ಶನ ಮುಂದುವರೆದಿದೆ.
ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದರೂ ಕೂಡ ಯಾರಿಗೂ ತೊಂದರೆಯಾಗದಂತೆ ಸರ್ವ ರೀತಿಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಕೃಷ್ಣ ಭೈರೇಗೌಡ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದು, ಪ್ರತಿಯೊಂದು ವ್ಯವಸ್ಥೆಯ ಮೇಲೆ ನಿಗಾ ವಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ದೇವಸ್ಥಾನಕ್ಕೆ ಅಗಮಿಸಿದ್ದರೂ ಕೂಡ ಯಾವುದೇ ಗೊಂದಲ ಆಗದಂತೆ ವ್ಯವಸ್ಥೆ ಮಾಡಲಾಗಿತ್ತು.ಹಲವಾರು ರಾಜ್ಯಗಳಲ್ಲಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಹೆಜ್ಜೆಹೆಜ್ಜೆಗೂ ಪೊಲೀಸರನ್ನು ನಿಯೋಜಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಭಕ್ತರಿಗೆ ತೊಂದರೆಯಾಗದಂತೆ ನಿಗಾವಹಿಸಲಾಗಿದೆ.
ಜಿಲ್ಲೆಯ ರಾಜಕಾರಣಿಗಳು ಕೂಡ ಜಿಲ್ಲಾಡಳಿತ ಆಯೋಜಿಸಿರುವ ಮಾರ್ಗದಲ್ಲೇ ದರ್ಶನ ಪಡೆಯುತ್ತಿದ್ದಾರೆ.ಹಿಂದಿನ ವರ್ಷ ದರ್ಶನಕ್ಕೆ ಸುಮಾರು 10 ಗಂಟೆಗಳವರೆಗೂ ಸಮಯ ಹಿಡಿಯುತ್ತಿತ್ತ್ತು ಈ ಬಾರಿ ಗರಿಷ್ಠ 5 ಗಂಟೆಗಳಿಗೆ ತಗ್ಗಿದೆ.