ಬೆಂಗಳೂರು, ಡಿ.4- ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎಲ್ಲಾ ಸಚಿವರು ಹಾಗೂ ಸಲಹೆಗಾರರಿಗೆ ಕಚೇರಿಗಳನ್ನು ಹಂಚಿಕೆ ಮಾಡಿ ಸರ್ಕಾರ ಆದೇಶಿಸಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ಡಿ.19ರ ವರೆಗೆ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದೆ. ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ ಮತ್ತು ಹಿರಿಯ ಅಧಿಕಾರಿಗಳ ಕಚೇರಿಗಳು ಸುವರ್ಣ ವಿಧಾನಸೌಧದಲ್ಲೇ ಕಾರ್ಯನಿರ್ವಹಿಸಲಿವೆ.
ಬೆಂಗಳೂರಿನ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಚಿವರ ಹಾಗೂ ಹಿರಿಯ ಅಧಿಕಾರಿಗಳ ಕಚೇರಿಗಳು ಸುವರ್ಣ ವಿಧಾನಸೌಧದಲ್ಲಿ ತಾತ್ಕಾಲಿಕವಾಗಿ ಅಧಿವೇಶನ ನಡೆಯುವ ಅವಧಿಗೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತವೆ.
ಅಲ್ಲದೆ, ಸಂಪುಟದರ್ಜೆಯ ಸಚಿವರ, ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವವರಿಗೆ ಹಾಗೂ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳಿಗೂ ಸುವರ್ಣ ಸೌಧದಲ್ಲಿ ಕಚೇರಿಗಳನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.