Friday, November 22, 2024
Homeರಾಜ್ಯಗ್ರಾಮಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡರೆ ಅಧಿಕಾರಿಗಳೇ ಹೊಣೆ : ಪ್ರಿಯಾಂಕ್‌ ಖರ್ಗೆ

ಗ್ರಾಮಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡರೆ ಅಧಿಕಾರಿಗಳೇ ಹೊಣೆ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಮೇ 29- ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣಗಳು ಪುನಾರಾವರ್ತನೆಯಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಲ್ಲಾ ಕಾರ್ಯಪಾಲಕ ಅಭಿಯಂತರರಿಗೆ ಸಚಿವರು ಪತ್ರ ಬರೆದು ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮತ್ತು ಆಯಾ ಗ್ರಾಮ ಪಂಚಾಯತಿಯ ಆದ್ಯ ಜವಾಬ್ದಾರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಲ್ಲದೇ ಪ್ರಾಣಹಾನಿಗಳು ಕೂಡಾ ಸಂಭವಿಸಿರುತ್ತವೆ.

ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಇಲಾಖೆಯಿಂದ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡಲಾಗಿದ್ದರೂ ಸಹಾ ಕೆಲವು ಗ್ರಾಮ/ಜನವಸತಿ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಪುನರಾವರ್ತನೆಯಾಗುತ್ತಿರುವುದು ಹೆಚ್ಚಾಗಿ ಕಂಡು ಬಂದಿದೆ ಎಂದೂ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರಿನ ಸರಬರಾಜಿಗಾಗಿ ಅಳವಡಿಸಿರುವ ಕೊಳವೆಗಳಲ್ಲಿ ಮಳೆ ನೀರು, ಚರಂಡಿ ನೀರು ಮತ್ತು ಇತರ ಕಲುಷಿತ ನೀರು ಸೇರುತ್ತಿರುವುದರಿಂದ ಮತ್ತು ನೀರಿನ ಶೇಖರಣೆ ಮಾಡುವ ಕಿರು ನೀರು ಸರಬರಾಜು ಮಾಡುವ ನೀರಿನ ತೊಟ್ಟಿಗಳು ಹಾಗೂ ಜಲಾಗಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ಸ್ವಚ್ಛಗೊಳಿಸುವುದು ಹಾಗೂ ಕ್ಲೋರಿನೇಷನ್‌ ಕೈಗೊಳ್ಳುವುದು ಮತ್ತು ನೀರಿನ ಮೂಲಗಳಾದ ಕೊಳವೆ ಬಾವಿಗಳ ಸುತ್ತಮುತ್ತಲೂ ನಿಲ್ಲುವ ಕೊಳಚೆ ನೀರನ್ನು ಸ್ವಚ್ಛಗೊಳಿಸುವುದು ಮುಂತಾದ ಮುಂಜಾಗ್ರತಾ ಕ್ರಮಗಳ ಮೂಲಕ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಮ ಪತ್ರದಲ್ಲಿ ತಿಳಿಸಿದ್ದಾರೆ.

ನೀರು ಸರಬರಾಜು ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಕಾಲ ಕಾಲಕ್ಕೆ ಮೇಲ್ವಿಚಾರಣೆ ನಡೆಸಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಸೂಚಚನೆ ನೀಡಿರುವ ಸಚಿವ ಪ್ರಿಯಾಂಕ ಖರ್ಗೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಪ್ರಕರಣಗಳು ಪುನಾರಾವರ್ತನೆ ಆದಲ್ಲಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News