ಬೆಂಗಳೂರು,ಏ.19- ಪ್ರತಿಷ್ಠೆಯ ಚುನಾವಣಾ ಕಣವಾಗಿ ಪರಿಣಮಿಸಿರುವ ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಂಘವು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲು ತೆಗೆದುಕೊಂಡಿರುವ ತೀರ್ಮಾನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೈಸೂರಿನ ಒಕ್ಕಲಿಗ ಸಂಘದ ಕೆಲವು ಬೆರಳೆಣಿಕೆಯ ಪ್ರಮುಖರು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರವಾಗಿ ಮತ ಚಲಾಯಿಸುತ್ತೇವೆ ಎಂದು ಹೇಳಿರುವುದು ಸಂಘದಲ್ಲೇ ಬಿರುಕು ಮೂಡಿಸಿದೆ.
ಯಾರನ್ನೂ ಕೇಳದೆ ಸಂಘದ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇವಲ ಏಕಪಕ್ಷೀಯವಾಗಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಒಕ್ಕಲಿಗ ಸಮುದಾಯ ಮತ ಹಾಕಲಿದೆ ಎಂದು ಹೇಳಿರುವುದು ಸರಿಯಲ್ಲ. ಅಷ್ಟಕ್ಕೂ ಒಕ್ಕಲಿಗ ಸಮುದಾಯವನ್ನು ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಗ್ರಾಂಟೆಡ್ ಫಾರ್ ಟೇಕನ್ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಸಮುದಾಯದವರು ಯಾರಿಗೆ ಬೇಕಾದರೂ ಮತ ಹಾಕಿಕೊಳ್ಳಲಿ. ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯಕರ್ತವ್ಯ. ನಮ್ಮ ಮತವನ್ನು ನಾವು ಯಾರಿಗೆ ಬೇಕಾದರೂ ಹಾಕುತ್ತೇವೆ. ಒಕ್ಕಲಿಗ ಸಂಘವು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಬೆರಳೆಣಿಕೆಯ ಮುಖಂಡರು ಸೇರಿ ಇಡೀ ಸಮುದಾಯದವರೇ ಕಾಂಗ್ರೆಸ್ ಪರವಾಗಿ ಮತ ಹಾಕುತ್ತೇವೆ ಎಂದು ಹೇಳಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯು ರಾಷ್ಟ್ರೀಯ ವಿಷಯಗಳ ಮೇಲೆ ನಡೆಯುತ್ತದೆ. ರಾಷ್ಟ್ರೀಯ ಭದ್ರತೆ, ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ದಕ್ಷ ಸರ್ಕಾರ, ಸುಭದ್ರ ನಾಯಕತ್ವ, ಭ್ರಷ್ಟಾಚಾರ ರಹಿತ ಆಡಳಿತ ಹೀಗೆ ಹಲವು ವಿಷಯಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ನಾವ್ಯಾರು ಗ್ಯಾರಂಟಿಗಳನ್ನು ನೋಡಿಕೊಂಡು ಕಾಂಗ್ರೆಸ್ ಪರವಾಗಿ ಇಲ್ಲವೇ ಬಿಜೆಪಿ, ಜೆಡಿಎಸ್‍ಗೆ ಮತ ಹಾಕುವುದಿಲ್ಲ. ನಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ.
ಒಕ್ಕಲಿಗರೆಲ್ಲರೂ ಸಾರಾಸಗಾಟಾಗಿ ಕಾಂಗ್ರೆಸ್‍ಗೆ ಮತ ಹಾಕುತ್ತಾರೆ ಎಂದು ಹೇಳಿಕೆ ಕೊಡಲು ಆ ಸಂಘಕ್ಕೆ ಅಕಾರ ಕೊಟ್ಟವರು ಯಾರು? ಹೀಗೆ ಹೇಳುವ ಅಧಿಕಾರವೂ ಅಧ್ಯಕ್ಷರಿಗಾಗಲೀ ಅಥವಾ ಬೇರೆ ಯಾರಿಗೂ ಕೂಡ ಇಲ್ಲ. ಸಂಘ ನೀಡಿರುವ ಹೇಳಿಕೆಗೂ ಸಮುದಾಯಕ್ಕೂ ಸಂಬಂಧವಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅಥವಾ ಸರ್ಕಾರದಲ್ಲಿ ಸಿಗಬಹುದಾದ ಸ್ಥಾನಮಾನಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪ್ರಬುದ್ಧ ಮತದಾರರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮಗೆ ಯಾರು ಉತ್ತಮರೋ ಅವರನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು ಎಂದು ಕೆಲವರು ಪತ್ರಿಕೆ ಬಳಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಯಾವುದೇ ಒಂದು ಸಮುದಾಯ ರ್ನಿಷ್ಟ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಸರಿಯಲ್ಲ. ನಮಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲವೂ ಒಂದೇ. ಎಲ್ಲಾ ಪಕ್ಷಗಳಲ್ಲೂ ನಮ್ಮ ಸಮುದಾಯದ ಮುಖಂಡರು ಗುರುತಿಸಿಕೊಂಡಿದ್ದಾರೆ. ಹೀಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವುದು ಬೇಡ ಎಂದು ಅನೇಕರು ಮನವಿ ಮಾಡಿಕೊಂಡಿದ್ದಾರೆ.