Thursday, March 6, 2025
Homeರಾಜ್ಯಭವಿಷ್ಯದ ಬೆಂಗಳೂರಿಗೆ ಹಳೇ ವಾಹನಗಳೇ ಕಂಟಕ

ಭವಿಷ್ಯದ ಬೆಂಗಳೂರಿಗೆ ಹಳೇ ವಾಹನಗಳೇ ಕಂಟಕ

ಬೆಂಗಳೂರು, ಮಾ.4- ದೇಶದಲ್ಲಿ ಜನ ವಾಸಕ್ಕೆ ಯೋಗ್ಯವಲ್ಲದ ನಗರದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದೆ ಹೀಗಾಗಿ ಅಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಸಿಲಿಕಾನ್‌ ಸಿಟಿ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ದಹಲಿ ರಾಜಧಾನಿ ನಂತರದ ಕಳಪೆ ಮಾಲಿನ್ಯದ ನಗರವಾಗಿ ಬೆಂಗಳೂರು ರೂಪುಗೊಳ್ಳುವುದೆ ಎಂಬ ಆತಂಕ ಎದುರಾಗಿದೆ.

ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿರುವ ದೆಹಲಿ ಈ ಕಳಂಕವನ್ನು ತೊಳೆಯುವ ಉದ್ದೇಶದಿಂದ ಇದೇ ಏಪ್ರಿಲ್‌ ಒಂದರಿಂದ 10 ವರ್ಷ ಮೀರಿದ ಡೀಸಲ್‌ ವಾಹನಗಳಿಗೆ ಹಾಗೂ 15 ವರ್ಷ ದಾಟಿದ ಪೆಟ್ರೋಲ್‌ ವಾಹನಗಳಿಗೆ ದೆಹಲಿಯ ಬಂಕ್‌ಗಳಲ್ಲಿ ಇಂಧನ ತುಂಬಿಸುವುದನ್ನು ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿ ಸ್ಟ್ಯಾಟಿಸ್ಟಿಕಲ್‌ ಹ್ಯಾಂಡ್‌ ಬುಕ್‌ ಪ್ರಕಾರ ಸಿಲಿಕಾನ್‌ ಸಿಟಿ ಇತ್ತಿಚೆಗೆ ನವದೆಹಲಿಯನ್ನು ಹಿಂದಿಕ್ಕಿ ದೇಶದಲ್ಲಿ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿರುವ ನಗರವಾಗಿ ಹೊರ ಹೊಮಿದೆ. 2024 ರ ಅಂತ್ಯದ ವೇಳೆಗೆ ಬೆಂಗಳೂರು ನಗರ 25 ಲಕ್ಷಕ್ಕೂ ಹೆಚ್ಚು ಖಾಸಗಿ ಕಾರುಗಳನ್ನು ಹೊಂದುವ ಮೂಲಕ ಕಾರು ಖರೀದಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇದೇ ಅವಧಿಯಲ್ಲಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟು 79.50 ಲಕ್ಷ ವಾಹನಗಳಿವೆ. ಈ ಪೈಕಿ 20.70 ಲಕ್ಷ ವಾಹನಗಳು ಖಾಸಗಿ ಕಾರುಗಳಾಗಿವೆ ಎಂದು ವರದಿ ತಿಳಿಸಿದೆ. ಇವುಗಳಲ್ಲಿ ಸಾವಿರಾರು ವಾಹನಗಳು 15 ವರ್ಷಗಳ ಅವಧಿ ಮೀರಿರುವುದರಿಂದ ಅಂತಹ ವಾಹನಗಳ ಓಡಾಟ ದೆಹಲಿಯಲ್ಲಿ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ನಿರ್ಧಾರದಿಂದಾಗಿ ದೇಶದಲ್ಲೇ ಅತಿ ಹೆಚ್ಚು ಕಾರು ಖರೀದಿ ಮಾಡುವುದರಲ್ಲೂ ಮುಂಚೂಣಿಯಲ್ಲಿರುವ ದೆಹಲಿ ಕಾರು ಮಾಲೀಕರು ಕಂಗಲಾಗಿದ್ದಾರೆ. ಹೀಗಾಗಿ ತಮ ಹಳೆಯ ವಾಹನಗಳನ್ನು ಬೇರೆ ರಾಜ್ಯದವರಿಗೆ ಮಾರಾಟ ಮಾಡಲು ಮುಗಿ ಬೀಳುತ್ತಿದ್ದಾರೆ.
ಹೊರ ರಾಜ್ಯದ ಕಾರು ಪ್ರಿಯರು ದೆಹಲಿಗೆ ತೆರಳಿ ಅತ್ಯಂತ ಕಡಿಮೆ ಬೆಲೆಗೆ ದುಬಾರಿ ಕಾರು ಖರೀದಿ ಮಾಡಿ ತಮ ಕಾರ್‌ ಕ್ರೇಜ್‌ ತೀರಿಸಿಕೊಳ್ಳಲು ಹಪಹಪಿಸುತ್ತಿದ್ದಾರೆ.

ಇದೀಗ ದುಬಾರಿ ಕಾರುಗಳು ಕಡಿಮೆ ಬೆಲೆಗೆ ಸಿಗುವುದು ತಿಳಿದರೆ ಸಿಲಿಕಾನ್‌ ಸಿಟಿಯ ಕಾರು ಪ್ರಿಯರು ಸುಮನಿರುತ್ತಾರೆಯೇ? ದೆಹಲಿಗೆ ದೌಡಾಯಿಸಿ ಕೈಗೆಟುಕುವ ಬೆಲೆಗೆ ಅಲ್ಲಿನ ಕಾರುಗಳನ್ನು ಖರೀದಿಸಿ ನಗರಕ್ಕೆ ತರುವ ಸಾಧ್ಯತೆ ಇರುವುದರಿಂದ ಇಲ್ಲಿಗೆ ಮತ್ತೆ ಸಾವಿರಾರು ಕಾರುಗಳು ಬರುವ ಸಾಧ್ಯತೆಗಳಿವೆ. ಇತ್ತೀಚಿನ ವರ್ಷಗಳಲ್ಲಿ, ದೆಹಲಿ ಸಾರಿಗೆ ಇಲಾಖೆ ಹಳೆಯ ಮತ್ತು ಅನರ್ಹ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ಮತ್ತು ಗುಜರಿಗೆ ಹಾಕಲು ಆದೇಶಿಸಿದೆ. ಅದರಂತೆ, 2021 ರಿಂದಿ ಇಲ್ಲಿಯವರೆಗೆ ದೆಹಲಿಯಲ್ಲಿ ಒಟ್ಟು 55 ಲಕ್ಷ ಕಾರುಗಳ ನೋಂದಣಿಯನ್ನು ರದ್ದುಪಡಿಸಲಾಗಿದೆ. ಇದಲ್ಲದೆ, 1.4 ಲಕ್ಷ ಕಾರುಗಳನ್ನು ಗುಜರಿಯಲ್ಲಿ ಇಡಲಾಗಿದೆ. ಅಲ್ಲದೆ, ಇತರ ರಾಜ್ಯಗಳಲ್ಲಿ ತಮ್ಮ ಕಾರುಗಳ ಮರು ನೋಂದಣಿಗಾಗಿ 6.2 ಲಕ್ಷಕ್ಕೂ ಹೆಚ್ಚು ಜನರು ಆಕ್ಷೇಪಣಾ ಪತ್ರಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿದಿನ ಸುಮಾರು 2,000 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ ಮತ್ತು ನಗರದಲ್ಲಿ ವಾಹನಗಳ ಸಂಖ್ಯೆ 1.25 ಕೋಟಿ ದಾಟಿದೆ.

ವಿಶ್ವದ ನಿಧಾನಗತಿಯ ಸಂಚಾರ ದಟ್ಟಣೆ ಹೊಂದಿರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ನಗರವಾಸಿಗಳು ತಮ್ಮ ಪ್ರಯಾಣದ ಸಮಯದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಟ್ರಾಫಿಕ್‌ ಸಿಗ್ನಲ್‌ ಗಳು ಮತ್ತು ವಾಹನ ದಟ್ಟಣೆಯಲ್ಲಿ ಕಳೆಯುತ್ತಿದ್ದಾರೆ. ಇದರ ಜೊತೆಗೆ ನಗರವಾಸಿಗಳು ವರ್ಷಕ್ಕೆ 260 ಗಂಟೆಗಳನ್ನು ರಸ್ತೆಯಲ್ಲೇ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಕಡಿಮೆ ಬೆಲೆಗೆ ಸಿಗುವ ದೆಹಲಿಯ ಸಾವಿರಾರು ವಾಹನಗಳು ಬೆಂಗಳೂರಿನ ರಸ್ತೆಗಿಳಿದರೆ ಇಲ್ಲಿನ ಪರಿಸ್ಥಿತಿಯನ್ನು ಊಹಿಸಿಕೊಂಡರೆ ಗಾಬರಿ ಬೀಳಿಸುತ್ತಿದೆ.

ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ಉಲ್ಬಣ: ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರನ್ನಾಗಿ ಮಾರ್ಪಡಿಸುವ ಪ್ರಯತ್ನಗಳು ನಡೆಯುತ್ತಿರುವುದರಿಂದ ಬೆಂಗಳೂರು ಮತ್ತಷ್ಟು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಳದ ಜೊತೆಗೆ ವಾಹನಗಳ ಸಂಖ್ಯೆಯೂ ಹೆಚ್ಚಾದರೆ ಬೆಂಗಳೂರು ಕೂಡ ದೆಹಲಿ ಮಾದರಿಯಲ್ಲೇ ಜನ ವಾಸಕ್ಕೆ ಯೋಗ್ಯವಲ್ಲದ ನಗರವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ದೆಹಲಿಯಿಂದ ಖರೀದಿಸಿ ನಗರಕ್ಕೆ ತರುವ ವಾಹನಗಳ ನೋಂದಣಿಗೆ ಅವಕಾಶ ನೀಡದೆ ವಾಹನ ದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.

ಕಡಿವಾಣ ಅಗತ್ಯ: ದೇಶದ ಇತರ ಕೆಲ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವಾಹನ ನೋಂದಣಿ ಶುಲ್ಕ ಹೆಚ್ಚಾಗಿರುವುದರಿಂದ ಇಲ್ಲಿನ ವಾಹನ ಪ್ರಿಯರು ಕಡಿಮೆ ಶುಲ್ಕವಿರುವ ದೆಹಲಿ, ಪುದುಚೇರಿಯಂತಹ ಇನ್ನಿತರ ಕೆಲ ರಾಜ್ಯಗಳಿಗೆ ತೆರಳಿ ವಾಹನ ಖರೀದಿಸುತ್ತಿರುವುದು ಹೆಚ್ಚಾಗುತ್ತಿದೆ. ಈಗಾಗಲೇ ಆಡಿ, ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರುಗಳನ್ನು ಹೊರ ರಾಜ್ಯಗಳಿಂದ ಖರೀದಿ ಮಾಡಿ ನಗರಕ್ಕೆ ತರಲಾಗಿದೆ. ಇತ್ತಿಚೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಹೊರ ರಾಜ್ಯದಿಂದ ಖರೀದಿ ಮಾಡಿ ತಂದ ಐಷಾರಾಮಿ ಕಾರುಗಳ ಮಾಲೀಕರ ಮೇಲೆ ದಾಳಿ ನಡೆಸಿ ಹಲವು ವಾಹನಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದರೂ ಈಗಲೂ ದೆಹಲಿಯಿಂದ ಖರೀದಿ ಮಾಡಿ ತರುವ ವಾಹನಗಳ ಮೇಲೆ ಆರ್‌ಟಿಒ ಅಧಿಕಾರಿಗಳು ದಿಗ್ಬಂಧನ ಹಾಕದಿದ್ದರೆ ಭವಿಷ್ಯದಲ್ಲಿ ಬೆಂಗಳೂರು ಕೂಡ ದೆಹಲಿಯಂತೆ ಹಾಳೂರಾಗುವ ಅಪಾಯ ತಪ್ಪಿದ್ದಲ್ಲ.

ನಿಷೇಧ ಅಗತ್ಯ: ಸದ್ಯದ ಪರಿಸ್ಥಿತಿಯಲ್ಲೇ ಬೆಂಗಳೂರಿನ ವಾಯು ಮಾಲಿನ್ಯ ವಿಪರೀತ ಹೇರಿಕೆಯಾಗುತ್ತಿದೆ. ಇಲ್ಲಿನವರ ಕಾರು ಕ್ರೇಜ್‌ ಇದೇ ರೀತಿ ಮುಂದುವರೆದರೆ ವಾಹನಗಳ ಸಂಖ್ಯೆ ವರ್ಷದಲ್ಲೇ ಡಬಲ್‌ ಆಗಲಿದೆಯಂತೆ. ಭವಿಷ್ಯದಲ್ಲಿ ಆಗಬಹುದಾದ ಸಮಸ್ಯೆ ನಿವಾರಣೆಯಾಗಬೇಕಾದರೆ ದೆಹಲಿ ಮಾದರಿಯಂತೆ ಬೆಂಗಳೂರಲ್ಲೂ ಹಳೆ ವಾಹನಗಳಿಗೆ ನಿಷೇಧ ಹೇರುವ ಅವಶ್ಯಕತೆ ಇದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

RELATED ARTICLES

Latest News