ಹರಿಯಾಣ, ಜ.19- ಸ್ಕೂಟರ್ ಹಾಗೂ ಕಾರಿನ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಮನುಭಾಕರ್ ಅವರ ಅಜ್ಜಿ ಹಾಗೂ ಮಾವ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಹರಿಯಾಣದ ಮಹೇಂದ್ರಘಾರ್ ಬೈಪಾಸ್ ನಲ್ಲಿ ಮನುಭಾಕರ್ ಅವರ ಅಜ್ಜಿ ಸಾವಿತ್ರಿ ದೇವಿ ಹಾಗೂ ಮಾವ ಯದುವೀರ್ ಸಿಂಗ್ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಬ್ರೇಜಾ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಮನುಭಾಕರ್ ಅವರ ಅಜ್ಜಿ ಹಾಗೂ ಮಾವನ ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಯ ನಂತರ ದೇಹಗಳನ್ನು ಅವರ ಕುಟುಂಬದವರಿಗೆ ಒಪ್ಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್ಐ, `ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಉಂಟಾಗಿದೆ ಎಂಬ ವಿಷಯ ತಿಳಿದು ನಾವು ಸ್ಥಳಕ್ಕೆ ಭೇಟಿ ನೀಡಿದ್ದಾಗ, ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದರು. ಅಪಘಾತ ನಂತರ ಕಾರಿನ ಚಾಲಕ ಪರಾರಿಯಾಗಿದ್ದು ಆತನ ಪತ್ತೆಗೆ ಕ್ರಮಕೈಗೊಂಡಿದ್ದೇವೆ’ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದ ಮನುಭಾಕರ್ ಅವರು ಕಳೆದೆರಡು ದಿನಗಳ ಹಿಂದೆಷ್ಟೇ ರಾಷ್ಟ್ರಪತಿ ಭವನದಲ್ಲಿ ನಡೆದಿದ್ದ ಸಮಾರಂಭದಲ್ಲಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರಿಂದ ಕುಟುಂಬದಲ್ಲಿ ಸಂತಸ ಉಂಟಾಗಿತ್ತಾದರೂ, ಈಗ ಅಜ್ಜಿ ಹಾಗೂ ಮಾವನ ಸಾವಿನಿಂದಾಗಿ ಆಕೆಯ ಕುಟುಂಬ ವರ್ಗದವರು ದುಃಖದ ಮಡುವಿನಲ್ಲಿದ್ದಾರೆ.