Wednesday, December 18, 2024
Homeರಾಷ್ಟ್ರೀಯ | Nationalಬಹುನಿರೀಕ್ಷಿತ ಒಂದು ದೇಶ ಒಂದು ಚುನಾವಣೆ ಮಸೂದೆ ಜಂಟಿ ಸದನ ಸಮಿತಿಗೆ

ಬಹುನಿರೀಕ್ಷಿತ ಒಂದು ದೇಶ ಒಂದು ಚುನಾವಣೆ ಮಸೂದೆ ಜಂಟಿ ಸದನ ಸಮಿತಿಗೆ

One Nation, One Election Bill introduced in Lok Sabha

ನವದೆಹಲಿ,ಡಿ.17– ಬಹುನಿರೀಕ್ಷಿತ ಹಾಗೂ ಬಹುಚರ್ಚಿತ ಒಂದು ದೇಶ, ಒಂದು ಚುನಾವಣೆ ವಿವಾದಿತ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿಂದು ಮಂಡಿಸಲಾಗಿದ್ದು, ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.ಬಳಿಕ ಲೋಕಸಭೆಯಲ್ಲಿ ಮತದಾನದ ಮೂಲಕ ಮಸೂದೆ ಮಂಡನೆಗೆ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಜಂಟಿ ಸಂಸದೀಯ ಸಮಿತಿ ಅಧ್ಯಯನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ.

ಪ್ರಶ್ನೋತ್ತರ ಕಾಗದಪತ್ರಗಳ ಮಂಡನೆ ಹಾಗೂ ಇತರ ಕಲಾಪಗಳ ಬಳಿಕ ಲೋಕಸಭಾಧ್ಯಕ್ಷ ಓಂಬಿರ್ಲಾ ಸಂವಿಧಾನದ 129 ನೇ ತಿದ್ದುಪಡಿ ಅನುಸಾರ ಒಂದು ದೇಶ, ಒಂದು ಚುನಾವಣೆ ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ ಮಸೂದೆ-2024 ಅನ್ನು ಏಕಕಾಲಕ್ಕೆ ಮಂಡಿಸಲು ಕೇಂದ್ರ ಕಾನೂನು ಮತ್ತು ಸಾಮಾಜಿಕ ನ್ಯಾಯ ಸಚಿವ ಅರ್ಜುನ್ರಾಂ ಮೇಘ್ವಾಲ್ ಅವರಿಗೆ ಅವಕಾಶ ಮಾಡಿಕೊಟ್ಟರು.

ಈ ಮಸೂದೆ ಮಂಡನೆ ಕ್ರಮವನ್ನು ಕೇರಳದ ಆರ್ಎಸ್ಪಿ ಪಕ್ಷದ ಎನ್.ಕೆ.ಪ್ರೇಮಚಂದ್ರನ್ ವಿರೋಧಿಸಿದರು. ಚುನಾವಣಾ ವ್ಯವಸ್ಥೆ ಬದಲಾವಣೆಗಾಗಿ ಮಂಡನೆ ಮಾಡಿರುವ ಮಸೂದೆಯ ಚರ್ಚೆಗೆ ಪ್ರತ್ಯೇಕ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಓಂಬಿರ್ಲಾ, ಸಚಿವರು 2 ಮಸೂದೆಗಳನ್ನು ಪ್ರತ್ಯೇಕವಾಗಿ ಮಂಡಿಸುತ್ತಾರೆ. ಅದನ್ನು ಅಂಗೀಕರಿಸುವ ಪ್ರಕ್ರಿಯೆಗಳನ್ನು ತಾವು ಪ್ರತ್ಯೇಕವಾಗಿಯೇ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಚರ್ಚೆಯನ್ನು 2 ಮಸೂದೆಗಳನ್ನು ಒಳಗೊಂಡಂತೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಂತರ ಕಾಯಿದೆ ಕುರಿತು ಚರ್ಚೆ ಆರಂಭಿಸಿದ ಚಂಡೀಗಢ ಕ್ಷೇತ್ರದ ಕಾಂಗ್ರೆಸ್ ಸಂಸದ ಮಾನೀಷ್ ದಿವಾರಿ, ಸಂವಿಧಾನದ 7ನೇ ಪರಿಚ್ಛೇದದ ಅನುಸಾರ ಮೂಲ ಆಶಯಗಳ ಬದಲಾವಣೆ ಮಾಡಲು ಅವಕಾಶವಿಲ್ಲ. ಅಗತ್ಯ ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಮೂಲಕ ಸಂವಿಧಾನದ ಮೂಲ ಆಶಯಗಳಿಗೂ ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಮ ದೇಶದಲ್ಲಿ ಒಂದು ರಾಜ್ಯ, ಒಂದು ಚುನಾವಣೆ ಅಸಾಧ್ಯವಾಗಿದೆ. ಪ್ರತ್ಯೇಕ ಹಾಗೂ ಭಿನ್ನ ರಾಜಕೀಯ ವ್ಯವಸ್ಥೆಗಳ ಜೊತೆಗೆ ಆಡಳಿತ ವ್ಯವಸ್ಥೆಗಳು ಬೇರೆಬೇರೆಯಾಗಿರುತ್ತವೆ. ರಾಜ್ಯಗಳ ವಿಧಾನಸಭೆಯ ಆಡಳಿತ ಅವಧಿಯಲ್ಲೂ ಬದಲಾವಣೆಗಳಿರುತ್ತವೆ. ಇಂದು ಮಂಡನೆಯಾಗಿರುವ ಮಸೂದೆ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಈ ಕಾರಣಕ್ಕೆ ನಾವು ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಸಮಾಜವಾದಿ ಪಕ್ಷದ ಧನ್ವಂತ್ರಿ ಯಾದವ್ ಮಾತನಾಡಿ, ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.ಡಿಎಂಕೆಯ ಬಾಲು ಅವರು ತಮ ಪಕ್ಷದ ನಾಯಕ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಇದು ಒಕ್ಕೂಟದ ವ್ಯವಸ್ಥೆಗೆ ವಿರುದ್ಧವಾದ ಕಾನೂನು. ಮತದಾರರ ಹಕ್ಕುಗಳನ್ನು ಕಡಿತ ಮಾಡುವುದು ಹಾಗೂ ಚುನಾವಣೆಯ ಪಾವಿತ್ರ್ಯತೆಯನ್ನು ಹಾಳು ಮಾಡುವ ಉದ್ದೇಶ ಕಾಯಿದೆಯಲ್ಲಿದೆ ಎಂದು ಆರೋಪಿಸಿದರು.
ಐಯುಎಂಎಲ್ನ ಸಂಸದ ಇ.ಟಿ.ಮಹಮದ್ ಬಷೀರ್, ಮಸೂದೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ದಾಳಿ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸಿತು.

ಮಸೂದೆಯ ಬಗ್ಗೆ ಸಂಕ್ಷಿಪ್ತ ಚರ್ಚೆಯಾದ ಬಳಿಕ ಪ್ರತಿಪಕ್ಷಗಳ ಬೇಡಿಕೆಯಂತೆ ವಿಭಜನೆಯ ಮತಕ್ಕೆ ಹಾಕಲಾಯಿತು. ಕಾಯಿದೆ ಮಂಡನೆ ಪರವಾಗಿ 269 ಸದಸ್ಯರು ಮತ ಹಾಕಿದರೆ, 198 ಸದಸ್ಯರು ವಿರೋಧಿಸಿದ್ದಾರೆ. ಅಂತಿಮವಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಅಧ್ಯಯನಕ್ಕೆ ಒಳಪಡಿಸಲು ಲೋಕಸಭೆಯಲ್ಲಿ ನಿರ್ಧರಿಸಲಾಯಿತು.ಅತ್ತ ರಾಜ್ಯಸಭೆಯಲ್ಲೂ ಮಸೂದೆ ಮಂಡನೆಯಾಗಿದ್ದು, ಸುದೀರ್ಘ ಚರ್ಚೆ ನಡೆದಿದೆ.

RELATED ARTICLES

Latest News