Sunday, September 8, 2024
Homeರಾಜ್ಯಕೇಂದ್ರ ಬಜೆಟ್‌ನಲ್ಲಿ SC/STಗೆ ಕೇವಲ 65 ಸಾವಿರ ಕೋಟಿ ರೂ. ಮೀಸಲು : ಸಿದ್ದರಾಮಯ್ಯ ಅಸಮಾಧಾನ

ಕೇಂದ್ರ ಬಜೆಟ್‌ನಲ್ಲಿ SC/STಗೆ ಕೇವಲ 65 ಸಾವಿರ ಕೋಟಿ ರೂ. ಮೀಸಲು : ಸಿದ್ದರಾಮಯ್ಯ ಅಸಮಾಧಾನ

ಬೆಂಗಳೂರು,ಜು.27- ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಕೇವಲ 65 ಸಾವಿರ ಕೋಟಿ ರೂ.ಗಳನ್ನು ಮಾತ್ರ ಮೀಸಲಿಡಲಾಗಿದೆ. ಈ ಬಗ್ಗೆ ಯಾವ ಸಂಘಟನೆಗಳೂ ಪ್ರಶ್ನೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರು ಪ್ರವಾಸದಲ್ಲಿರುವ ಸಿಎಂ ಅವರ ನಿವಾಸದ ಬಳಿ ನೂರಾರು ಜನ ಆಗಮಿಸಿ ಅಹವಾಲು ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿ, ವಿವಿಧ ಯೋಜನೆಗಳ ಕುರಿತು ಗಮನ ಸೆಳೆದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಕೇಂದ್ರಸರ್ಕಾರ 48 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ನೀಡಿರುವುದು ಕೇವಲ 65 ಸಾವಿರ ಕೋಟಿ ರೂ. ಮಾತ್ರ. ಅದೇ ಕರ್ನಾಟಕದಲ್ಲಿ 3.70 ಲಕ್ಷ ಕೋಟಿ ರೂ. ಬಜೆಟ್‌ ಗಾತ್ರದಲ್ಲಿ ನಮ ಸರ್ಕಾರ ಈ ಸಮುದಾಯದ ಅಭಿವೃದ್ಧಿಗೆ 39 ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಪೂರಕವಾಗಿ ಮಸೂದೆ ರಚಿಸಲಾಗಿದೆ. ಅದಕ್ಕೂ ಮೊದಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಕ್ಕಿಂತಲೂ ಕಡಿಮೆ ಹಣ ದೊರೆಯುತ್ತಿತ್ತು. ಕಾಯಿದೆ ರಚನೆ ಬಳಿಕ 39 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ದೊರೆಯುತ್ತಿದೆ ಎಂದು ವಿವರಿಸಿದರು.

ಪ್ರತಿಯೊಂದು ರಾಜ್ಯದಲ್ಲೂ ರಾಜ್ಯಸರ್ಕಾರವನ್ನು ಪ್ರಶ್ನೆ ಮಾಡಲಾಗುತ್ತದೆ. ಕೇಂದ್ರಸರ್ಕಾರವನ್ನು ಏಕೆ ಕೇಳುತ್ತಿಲ್ಲ? 48 ಲಕ್ಷ ಕೋಟಿ ರೂ.ಗಳ ಗಾತ್ರದ ಬಜೆಟ್‌ಗೆ ಪೂರಕವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿಲ್ಲ. ಈ ಕುರಿತು ಯಾರಾದರೂ ಗಮನ ಹರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ನೂರಾರು ಮಂದಿ ಮುಖ್ಯಮಂತ್ರಿಯವರ ನಿವಾಸದ ಬಳಿ ಬಂದು ಅಹವಾಲು ಸಲ್ಲಿಸಿದರು. ಅದರಲ್ಲಿ ಬಹಳಷ್ಟು ಮಂದಿ ನಿವೇಶನ, ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ತೊಂದರೆಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಂಡರು.ಎಲ್ಲರ ಬಳಿಯೂ ಸಾವಧಾನದಿಂದ ಅರ್ಜಿಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಅದಕ್ಕೆ ಪರಿಹಾರ ದೊರಕಿಸುವ ಭರವಸೆ ನೀಡಿದರು.

RELATED ARTICLES

Latest News