Saturday, July 27, 2024
Homeರಾಜಕೀಯಕರ್ನಾಟಕದ ಗ್ಯಾರಂಟಿ ಸರ್ಕಾರ ಪತನಕ್ಕೆ ಮಹಾರಾಷ್ಟ್ರದಂತೆ`ನಾಥ್‌ ಆಪರೇಷನ್‌'..?!

ಕರ್ನಾಟಕದ ಗ್ಯಾರಂಟಿ ಸರ್ಕಾರ ಪತನಕ್ಕೆ ಮಹಾರಾಷ್ಟ್ರದಂತೆ`ನಾಥ್‌ ಆಪರೇಷನ್‌’..?!

ಬೆಂಗಳೂರು,ಮೇ 13- ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಥ್‌ ಆಪರೇಷನ್‌ ಮಾಡಿ ಕಾಂಗ್ರೆಸ್‌‍ ಸರ್ಕಾರವನ್ನು ಪತನಗೊಳಿಸಲು ಚರ್ಚೆಗಳು ನಡೆದಿವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ಸತಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿರುವ ಏಕನಾಥ ಶಿಂಧೆ ಕರ್ನಾಟಕ ಸರ್ಕಾರದ ಭವಿಷ್ಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಇತ್ತೀಚೆಗೆ ತಾವು ಕರ್ನಾಟಕದ ಸಭೆಯಲ್ಲಿ ಭಾಗವಹಿಸಲು ತೆರಳಿದ್ದೆ. ಅಲ್ಲಿ ಪಕ್ಷದ ನಾಯಕರು ನಾಥ್‌ ಆಪರೇಷನ್‌ ಮಾಡೋದಿದೆ ಎಂದು ಹೇಳಿದರು. ನಾಥ್‌ ಆಪರೇಷನ್‌ ಎಂದರೆ ಏನು ಎಂದು ನಾನು ಅವರಲ್ಲಿ ಕೇಳಿದೆ.

ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ಮಾದರಿಯಲ್ಲೇ ನಾಥ್‌ ಆಪರೇಷನ್‌ ಮಾಡಬೇಕಿದೆ. ನಿಮ ಅನುಭವ ಮತ್ತು ಸಹಕಾರ ನಮಗೆ ಅಗತ್ಯ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ನಾನು ಅಗತ್ಯ ಸಂದರ್ಭದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ್ದೇನೆ ಎಂದು ಶಿಂಧೆ ತಿಳಿಸಿದ್ದಾರೆ.ಇದು ಬಿಜೆಪಿಯವರು ಕರ್ನಾಟಕದಲ್ಲಿ ತೆರೆಮರೆಯಲ್ಲಿ ಆಪರೇಷನ್‌ ಕಮಲಕ್ಕೆ ವೇದಿಕೆ ಸಜ್ಜುಗೊಳಿಸಿರುವುದನ್ನು ಮತ್ತೊಮೆ ಸಾಬೀತುಪಡಿಸಿದೆ.

ಇತ್ತೀಚೆಗೆ ಸರ್ಕಾರದ ಹಲವು ಸಚಿವರು ಬಿಜೆಪಿಯ ಹುನ್ನಾರಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ನಿನ್ನೆಯಷ್ಟೇ ಹೇಳಿಕೆ ನೀಡಿ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಮೂರನೇ ಎರಡರಷ್ಟು ಶಾಸಕರನ್ನು ಬಿಜೆಪಿಯವರು ಸೆಳೆದುಕೊಂಡಿದ್ದರು. ಹೀಗಾಗಿ ಅಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಕರ್ನಾಟಕದಲ್ಲಿ ಆ ಪರಿಸ್ಥಿತಿ ಇಲ್ಲ. ಇಲ್ಲಿ ನಮ್ಮ ನಾಲ್ಕು ಮಂದಿ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದರೆ ಬಿಜೆಪಿ ಮತ್ತು ಜೆಡಿಎಸ್‌‍ನಿಂದ ಹಲವು ಮಂದಿ ಕಾಂಗ್ರೆಸ್‌‍ನತ್ತ ಬರಲು ತಯಾರಾಗಿದ್ದಾರೆ. ಹೀಗಾಗಿ ಆಪರೇಷನ್‌ ಕಮಲ ಯಶಸ್ವಿಯಾಗುವುದಿಲ್ಲ, ಸರ್ಕಾರ ಪತನಗೊಳ್ಳಲು ಸಾಧ್ಯವಿಲ್ಲ ಎಂದಿದ್ದರು.

ಅದರ ಹೊರತಾಗಿಯೂ ಬಿಜೆಪಿ ನಾಯಕರು ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಪತನಗೊಳ್ಳುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಹೇಳಿಕೆಗಳಿಗೆ ಅಧಿಕೃತ ಮುದ್ರೆ ಎಂಬಂತೆ ಏಕನಾಥ ಶಿಂಧೆ ಹೇಳಿಕೆ ಸ್ಫೋಟಕ ತಿರುವು ನೀಡಿದೆ.

RELATED ARTICLES

Latest News