ನವದೆಹಲಿ, ಮೇ 11-ಪುಲ್ವಾಮಾ, ಪಹಲ್ಗಾಮ್ ನರಮೇಧದ ನಂತರ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿದ್ದ ಭಾರತವು ಕನದ ವಿರಾಮಕ್ಕೆ ಸಮತಿಸಿದ್ದರೂ ದೇಶದ ಸಾರ್ವಭೌಮತೆ ಮತ್ತು ನಾಗರಿಕರ ಹಿತರಕ್ಷಣೆಗಾಗಿ ಆರಂಭಿಸಿರುವ ಆಪರೇಷನ್ ಸಿಂಧೂರ ಮುಂದುವರೆಯಲಿದೆ ಎಂದು ಹೇಳುವ ಮೂಲಕ ಭಾರತೀಯ ಸೇನೆ ವದಂತಿಗಳಿಗೆ ತೆರೆ ಎಳೆದಿದೆ.
ಈ ಮೂಲಕ ಪಾಕಿಸ್ತಾನದ ವಿರುದ್ಧ ಕದನ ವಿರಾಮ ಚಾಲ್ತಿಯಲ್ಲಿದ್ದರೂ ಆಪರೇಷನ್ ಸಿಂಧೂರ ಸ್ಥಗಿತ ಮಾಡುವುದಿಲ್ಲ ಎಂಬ ಸಂದೇಶವನ್ನು ನೆರೆ ರಾಷ್ಟ್ರಕ್ಕೆ ರವಾನಿಸಿದೆ. ಈ ಕುರಿತು ಭಾರತೀಯ ವಾಯುಸೇನೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಚಾಲ್ತಿಯಲ್ಲಿರುವ ಆಪರೇಷನ್ ಸಿಂಧೂರ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಮೇಯವಿಲ್ಲ. ದೇಶದ ಸಾರ್ವಭೌಮತೆ ಮತ್ತು ನಾಗರಿಕರ ಹಿತರಕ್ಷಣೆಗೆ ಆರಂಭಿಸಿರುವ ಆಪರೇಷನ್ ಸಿಂಧೂರ ಪ್ರಗತಿಯಲ್ಲಿದೆ ಎಂದು ವಾಯುಪಡೆ ಹೇಳಿದೆ.
ಕುತಂತ್ರಿ ಪಾಕ್ ಕದನ ವಿರಾಮ ಉಲ್ಲಂಘಿಸುತ್ತಿದ್ದಂತೆ ಭಾರತೀಯ ಸೇನೆ ಆಪರೇಷನ್ ಸಿಂಧೂರ ಮುಂದುವರಿಯುತ್ತದೆ ಎಂದು ಅಧಿಕೃತವಾಗಿ ಘೋಷಿಸಿದೆ. ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿರುವುದರಿಂದ ಸರಿಯಾದ ಸಮಯದಲ್ಲಿ ವಿವರವಾದ ಮಾಹಿತಿ ನೀಡಲಾಗುವುದು ಎಂದು ವಾಯಸೇನೆ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಪರಿಶೀಲಿಸದ ಮಾಹಿತಿ, ವದಂತಿ ಸುದ್ದಿಗಳಿಗೆ ಯಾರು ಕಿವಿಗೊಡಬಾರದು.ಭಾರತೀಯ ವಾಯುಪಡೆ ಆಪರೇಷನ್ ಸಿಂಧೂರ್‌ನಲ್ಲಿ ತನಗೆ ನಿಯೋಜಿಸಲಾದ ಕಾರ್ಯಗಳನ್ನು ನಿಖರತೆ ಮತ್ತು ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಾರ್ಯಾಚರಣೆಗಳನ್ನು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ನಡೆಸಲಾಗಿದೆ ಎಂದು ಸೇನೆ ಹೇಳಿದೆ.
ಇನ್ನೊಂದೆಡೆ ಕದನ ವಿರಾಮ ಉಲ್ಲಂಘನೆಯಾದ ಬಳಿಕ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಸಹ ಹಾಜರಿದ್ದರು.
ಸೈನ್ಯಕ್ಕೆ ಮತ್ತಷ್ಟು ಬಲ : ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ನಡುವೆಯೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಕ್ನೋದ ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಿದ್ದರು.
300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಉತ್ಪಾದನಾ ಘಟಕವು ಬ್ರಹೋಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತದೆ. ಬ್ರಹೋಸ್ ಕ್ಷಿಪಣಿಯು 290 ರಿಂದ 400 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಮ್ಯಾಕ್ 2.8 ರ ಗರಿಷ್ಠ ವೇಗವನ್ನು ಹೊಂದಿದೆ. ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮವಾದ ಬ್ರಹೋಸ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು ಭೂಮಿ, ಸಮುದ್ರದ ಆಳ ಅಥವಾ ಗಾಳಿಯಿಂದಲೂ ಉಡಾಯಿಸಬಹುದು ಮತ್ತು ಇದು ಫೈರ್ ಆಂಡ್ ಫಾರ್ಗೆಟ್ ಮಾರ್ಗದರ್ಶನ ವ್ಯವಸ್ಥೆಯನ್ನು ಅನುಸರಿಸುತ್ತದೆ.
ಲಕ್ನೋದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಟೆಸ್ಟಿಂಗ್ ಫೆಸಿಲಿಟಿಯಿಂದ ವಾರ್ಷಿಕವಾಗಿ 80 ರಿಂದ 100 ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದಿಸಲಾಗುತ್ತದೆ. ಪ್ರತಿ ವರ್ಷ 100 ರಿಂದ 150 ಮುಂದಿನ ಪೀಳಿಗೆಯ ಬ್ರಹೋಸ್ ಕ್ಷಿಪಣಿಗಳನ್ನು ಸಹ ತಯಾರಿಸಲಾಗುತ್ತದೆ. ಇವು ಒಂದು ವರ್ಷದೊಳಗೆ ಸಿದ್ಧವಾಗುತ್ತವೆ. ಮುಂದಿನ ಪೀಳಿಗೆಯ ಬ್ರಹೋಸ್ ಕ್ಷಿಪಣಿಯು 300 ಕಿಲೋಮೀಟರ್‌ಗಳಿಗಿಂತ ಹೆಚ್ಚು ದಾಳಿ ವ್ಯಾಪ್ತಿಯನ್ನು ಹೊಂದಿದ್ದು, 1,290 ಕಿಲೋಗ್ರಾಂಗಳಷ್ಟು ತೂಗುತ್ತದೆ.
ಬ್ರಹೋಸ್ ಕ್ಷಿಪಣಿಗಳು ಭಾರತದ ಡಿಆರ್‌ಡಿಒ ಮತ್ತು ರಷ್ಯಾದ ಎನ್‌ಪಿಒ ಮಶಿನೋಸ್ಟ್ರೋಯೆನಿಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಇವು ಭಾರತದ ರಕ್ಷಣಾ ವ್ಯವಸ್ಥೆಯ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಟೈಟಾನಿಯಂ ಮತ್ತು ಸೂಪರ್ ಅಲಾಯ್ಸ್ ಮೆಟೀರಿಯಲ್ಸ್ ಪ್ಲಾಂಟ್ ಉದ್ಘಾಟನೆಗೊಂಡಿದೆ.
ಇದು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಬಳಸುವ ವಸ್ತುಗಳನ್ನು ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ, ರಕ್ಷಣಾ ಪರೀಕ್ಷಾ ಮೂಲಸೌಕರ್ಯ ವ್ಯವಸ್ಥೆ ಗೆ ಅಡಿಪಾಯ ಹಾಕಲಾಗುವುದು. ರಕ್ಷಣಾ ಉತ್ಪನ್ನಗಳನ್ನು ಪರೀಕ್ಷಿಸಲು ಮತ್ತು ಪ್ರಮಾಣೀಕರಿಸಲು ಡಿಟಿಐಎಸ್ ಅನ್ನು ಬಳಸಲಾಗುತ್ತದೆ. ಉತ್ತರ ಪ್ರದೇಶ ಸರ್ಕಾರವು ಉಚಿತವಾಗಿ ನೀಡಿದ 80 ಹೆಕ್ಟೇರ್‌ಗಳಿಗೂ ಹೆಚ್ಚು ಭೂಮಿಯಲ್ಲಿ ನಿರ್ಮಿಸಲಾದ ಬ್ರಹೋಸ್ ಉತ್ಪಾದನಾ ಘಟಕವು ಮೂರುವರೆ ವರ್ಷಗಳಲ್ಲಿ ಪೂರ್ಣಗೊಂಡಿದೆ.