ಬೆಂಗಳೂರು,ಜು.17-ರಾಜ್ಯ ಸರ್ಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದ ಪ್ರತಿಪಕ್ಷ ಬಿಜೆಪಿ ಸದನದೊಳಗೆ ಮುಜುಗರಕ್ಕೀಡಾಗುತ್ತಿದೆ. ಅದರಲ್ಲೂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಸದನದಲ್ಲಿ ಪರೋಕ್ಷವಾಗಿ ನಡೆಸಿದ ವಾಗ್ದಾಳಿ, ಮಾಡಿರುವ ಟೀಕೆ ಬಿಜೆಪಿಯೊಳಗೆ ಮತ್ತೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಬೇಕೆಂದು ಬಿಜೆಪಿ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ವಾಲೀಕಿಯಲ್ಲಿ ನಡೆದ ಭ್ರಷ್ಟಾಚಾರ, ಮೂಡಾ ನಿವೇಶನ ಹಂಚಿಕೆ ಅಕ್ರಮ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವೈಫಲ್ಯಗಳನ್ನು ಸದನದ ಮುಂದಿಟ್ಟು ಹೋರಾಟ ನಡೆಸಬೇಕೆಂಬುದು ಕೇಂದ್ರ ಬಿಜೆಪಿ ವರಿಷ್ಠರ ಸೂಚನೆಯಾಗಿತ್ತು.
ಆದರೆ ಸರ್ಕಾರವನ್ನು ಬೆತಲು ಮಾಡುತ್ತೇವೆ ಎಂದು ಅಧಿವೇಶನಕ್ಕೂ ಮೊದಲೇ ಗುಡುಗಿದ್ದ ಬಿಜೆಪಿ ಇದೀಗ ಸದನದಲ್ಲಿ ತಾನೇ ಮುಜುಗರಕ್ಕೆ ಸಿಲುಕಿ ತಲೆ ತಗ್ಗಿಸುವಂತಾಗಿದೆ. ಏಕೆಂದರೆ ಬಿಜೆಪಿಯ ಖಾಯಂ ವಿರೋಧ ಪಕ್ಷದ ನಾಯಕನೆಂದೇ ಗುರುತಿಸಿಕೊಂಡಿರುವ ಯತ್ನಾಳ್ ಸದನದೊಳಗೆ ಆಡಿರುವ ಮಾತುಗಳು ವಿರೋಧ ಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ಸಿಕ್ಕುವಂತೆ ಮಾಡಿದೆ.
ಸದನದಲ್ಲಿ ಯತ್ನಾಳ್ ಎದ್ದು ನಿಂತರೆಂದರೆ, ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಜೊತೆಗೆ ಸ್ವಪಕ್ಷದ ನಾಯಕರನ್ನೇ ಪದೇ ಪದೇ ಚುಚ್ಚುತ್ತಾರೆ. ಸದನದಲ್ಲೇ ತಮ ಪಕ್ಷದ ನಾಯಕರ ವಿರುದ್ಧ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಆರೋಪ ಮಾಡುತ್ತಿದ್ದಾರೆ.
ವಾಲೀಕಿ ನಿಗಮದ ಹಗರಣದ ಬಗ್ಗೆ ಸದನದಲ್ಲಿ ಮಾತನಾಡುತ್ತಾ ಯತ್ನಾಳ್, ಬಿಜೆಪಿ ಹೋರಾಟ ಕೇವಲ ನಾಟಕ ಎಂದು ಜರಿದಿದ್ದರು. ಹಗರಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ, ಉಗ್ರವಾಗಿ ಖಂಡಿಸುತ್ತೇವೆ, ಸಭಾತ್ಯಾಗ ಮಾಡುತ್ತೇವೆ. ಹಗಲೂ ರಾತ್ರಿ ಧರಣಿ ಕೂರುತ್ತೇವೆ. ರಾತ್ರಿ, ನೀವು, ಹೋಂ ಮಿನಿಸ್ಟರ್ ಬರ್ತಾರೆ ಊಟ ತಿಂಡಿ ಕೊಡ್ತೀರಿ, ನಾಟಕ ಮಾಡ್ತೀರಿ ಎಂದು ಕಾಲೆಳೆದಿದ್ದರು.
ಅಶೋಕ್ ಕಾಲೆಳೆದ ಯತ್ನಾಳ್:
ಅಶೋಕ್ ನೇತೃತ್ವದಲ್ಲಿ ದಲಿತ ಸಮುದಾಯದ ಹಿತ ಕಾಪಾಡುತ್ತೇವೆ ಎನ್ನುವುದು ಪರಿಹಾರ ಅಲ್ಲ. ಅಶೋಕ್ ಸ್ವಾಭಿಮಾನದ ರಾಜಕೀಯ ಮಾಡಲು ನಿರ್ಧಾರ ಮಾಡಿದ್ದರಿಂದ ಚೆನ್ನಾಗಿ ಮಾಡಿದ್ದಾರೆ. ಯಾರ ಅಪ್ಪ ಮಕ್ಕಳಿಗೆ ಯಾರೂ ಅಂಜಬಾರದು. ಯಾರಿಗೂ ಅಪ್ಪಾಜಿ ಅನ್ನಬಾರದು. ಅಪ್ಪಾಜಿ ಸಂಸ್ಕೃತಿ ಬೇಡ ಎಂದು ಪರೋಕ್ಷವಾಗಿ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರಿಗೂ ಟಾಂಗ್ ನೀಡಿದರು.
ಭಾರೀ ಹೋರಾಟ , ಗಡ ಗಡ ನಡುಗಿದ ಸರ್ಕಾರ ಎಂದು ಒಂದು ಕಡೆಯಲ್ಲಿ ಹೇಳುತ್ತಾರೆ. ಬಳಿಕ ಆಡಳಿತ ಪಕ್ಷದ ನಾಯಕರಿಗೆ ಫೋನ್ ಕರೆ ಮಾಡಿ, ಏನೂ ತಪ್ಪು ತಿಳಿದುಕೊಳ್ಳಬೇಡಿ, ಮೇಲಿ ಒತ್ತಡ ಹೈಕಮಾಂಡ್ ಒತ್ತಡ ಎನ್ನುತ್ತಾರೆ. ಅಲ್ಲದೆ, ವಾಲೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರ ರಾಜೀನಾಮೆ ಪಡೆದುಕೊಂಡಿದ್ದಕ್ಕೆ ನಿಮನ್ನು ಅಭಿನಂದಿಸುತ್ತೇನೆ ಎಂದು ಆರ್.ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ನೀಡಿದ್ದ ಹೇಳಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಿದ್ದ ಯತ್ನಾಳ್, ಪರೋಕ್ಷವಾಗಿ ಹೊಂದಾಣಿಕೆ ರಾಜಕೀಯ ಬಿಜೆಪಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಯತ್ನಾಳ್ ನಡೆ ವಿರುದ್ಧ ಹೈಕಮಾಂಡ್ ಕೂಡಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರು ಯತ್ನಾಳ್ ಮಾತಿಗೆ ನಿಂತರೆ ಮತ್ತಷ್ಟು ಮಾತನಾಡಿ ಎಂದು ಹುರಿದುಂಬಿಸುತ್ತಾರೆ. ಯತ್ನಾಳ್ ಅವರು ವಿರೋಧ ಪಕ್ಷದೊಳಗಿನ ವಿರೋಧ ಪಕ್ಷದ ನಾಯಕ ಎಂಬ ಮಾತೂ ವಾಸ್ತವ.
ಪರಿಷತ್‌ನಲ್ಲೂ ಅದೇ ಸ್ಥಿತಿ:
ವಿಧಾನಸಭೆಯಲ್ಲಿ ಒಂದು ಕತೆಯಾದರೆ ಪರಿಷತ್‌ನಲ್ಲೂ ಅದೇ ಕಥೆ ಇದೆ. ವಿರೋಧ ಪಕ್ಷದ ನಾಯಕನ ಸ್ಥಾನವಿಲ್ಲದೆ ಏಕಾಂಗಿಯಾಗಿರುವ ಬಿಜೆಪಿಯಲ್ಲಿ ಯಾವ ಸದಸ್ಯರು ಯಾವ ವಿಷಯವನ್ನು ಕೈಗೆತ್ತಿಕೊಳ್ಳಬೇಕು, ಸರ್ಕಾರದ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ತಲೆಬುಡ ಒಂದೂ ಇಲ್ಲ.
ಸೋಮವಾರದಿಂದ ಆರಂಭವಾದ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಒಂದಿಷ್ಟು ಸರ್ಕಾರದ ವಿರುದ್ಧ ಅಬ್ಬರಿಸುತ್ತಿದ್ದಾರೆ. ಆದರೆ ಅವರಿಗೆ ಸ್ವಪಕ್ಷೀಯರೇ ಬೆಂಬಲ ನೀಡುತ್ತಿಲ್ಲ. ಮಂಗಳವಾರ ಮಾಜಿ ಸಚಿವ ನಾಗೇಂದ್ರ ಫೋಟೋ ಹಿಡಿದು ಸದನದಲ್ಲಿ ಸಿ.ಟಿ.ರವಿ ಮಾತನಾಡಿದ್ದರು. ಈ ವೇಳೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ರವಿ ವಿರುದ್ಧ ಪ್ರತಿದಾಳಿ ನಡೆಸಿದರು. ಆಗ ಬಿಜೆಪಿಯ ಯಾವ ಸದಸ್ಯರೂ ಕೂಡ ತಮ ಸದಸ್ಯನ ಪರವಾಗಿ ನಿಲ್ಲನಿಲ್ಲ. ಇದು ಪಕ್ಷದೊಳಗೆ ತಾಳಮೇಳ ಎಲ್ಲವೂ ತಪ್ಪಿದೆ ಎಂದು ರುಜುವಾತು ಪಡಿಸಿದೆ.