Tuesday, September 17, 2024
Homeರಾಜ್ಯಸಿಎಂ ರಾಜಿನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆ

ಸಿಎಂ ರಾಜಿನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆ

ಬೆಂಗಳೂರು,ಜು.18- ಮುಡಾ ಮತ್ತು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸೇರಿದಂತೆ ಶಾಸಕರು, ವಿಧಾನಪರಿಷತ್‌ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.ಫ್ರೀಡಂ ಪಾರ್ಕ್‌ನಿಂದ ಮೆರವಣಿಗೆ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಹೊರಡುತ್ತಿದ್ದಂತೆ ಮಾರ್ಗಮಧ್ಯೆಯೇ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿ ವಶಕ್ಕೆ ಪಡೆದರು.

ಈ ವೇಳೆ ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕುನುಗ್ಗಲು ಉಂಟಾಗಿ ಗೊಂದಲದ ಪರಿಸ್ಥಿತಿ ಉಂಟಾಯಿತು.ಪ್ರತಿಭಟನಾ ನಿರತರನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಬಿಜೆಪಿಯ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಯಾವುದಕ್ಕೂ ಜಗ್ಗದ ಪೊಲೀಸರು ಪ್ರಮುಖರನ್ನು ಬಂಧಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವಿಷಯಾಂತರ ಮಾಡಿದೆ. ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.100 ರಷ್ಟು ಉದ್ಯೋಗ ನೀಡುವ ಮಸೂದೆ ಮಂಡನೆ ಮಾಡುವುದಾಗಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಏಕಾಏಕಿ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವುದು ಏಕೆ ಎಂದು ಪ್ರಶ್ನಿಸಿದರು.

ಅಕ್ರಮದಲ್ಲಿ ಸಿಲುಕಿಕೊಂಡಿರುವ ಸರ್ಕಾರ ವಿಷಯಾಂತರ ಮಾಡಲು ಮಸೂದೆ ಮಂಡನೆ ಮಾಡುವ ಮುಂದಾಗಿದೆ. ವಾಲೀಕಿ, ಮುಡಾ ಸೇರಿದಂತೆ ಸರ್ಕಾರದ ಮೇಲೆ ಹಲವು ಹಗರಣಗಳು ಕೇಳಿಬಂದಿವೆ. ನಿಜವಾಗಿಯೂ ನಿಮಗೆ ಕಳಕಳಿಯಿದ್ದರೆ ಮಸೂದೆ ಮಂಡನೆ ನಿರ್ಧಾರದಿಂದ ಏಕೆ ಹಿಂದೆ ಸರಿದಿದೆ ಎಂದು ಪ್ರಶ್ನೆ ಮಾಡಿದರು.

ಸರ್ಕಾರದ ಈ ಕರ್ಮಕಾಂಡ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿದೆ. ಸ್ವತಃ ಮುಖ್ಯಮಂತ್ರಿಗಳ ಕುಟುಂಬದವರೇ ಮುಡಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನು ಮುಚ್ಚಿ ಹಾಕಲು ಏನೂ ನಡೆದಿಲ್ಲ ಎಂದು ಸಿದ್ದರಾಮಯ್ಯ ತಿಪ್ಪೆ ಸಾರುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾವು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ಬಿಡುವುದಿಲ್ಲ. ಸರ್ಕಾರ ಎಷ್ಟೇ ಮುಚ್ಚಿ ಹಾಕುತ್ತೇನೆಂದರೂ ಜನತೆ ಮುಂದಿಡುತ್ತೇವೆ. ಒಂದೊಂದೇ ಹಗರಣವನ್ನು ಬಯಲಿಗೆಳೆಯುತ್ತೇವೆ ಎಂದು ಹೇಳಿದರು.

RELATED ARTICLES

Latest News