ಬೆಂಗಳೂರು, ಮೇ 28– ಭ್ರಷ್ಟಾಚಾರದ ಪಿತಾಮಹ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಜೀವನವೆಲ್ಲಾ ಹೋರಾಟ ಮಾಡಿ, ನಂತರ ಅಧಿಕಾರಕ್ಕಾಗಿ ಅದೇ ಹುತ್ತದಲ್ಲಿ ಸೇರಿಕೊಂಡಿರುವ ಮಹಾನುಭಾವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಈ ಶತಮಾನದ ಅತ್ಯಂತ ದೊಡ್ಡ ವಿಪರ್ಯಾಸ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಆಶೋಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ತಮ ಸಾಮಾಜಿಕ ಜಾಲ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೂಡಾದಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ 14 ಸೈಟು ಕಬಳಿಸಿ ಸಿಕ್ಕಿಬಿದ್ದಾಗ ವಾಪಸ್ಸುಕೊಟ್ಟ ಮಹಾನುಭಾವರು, ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂ.ಅವ್ಯವಹಾರ ಆಗಿದೆ ಎಂದು ವಿಧಾನಸಭೆಯ ಅಧಿವೇಶನದಲ್ಲಿ ಸ್ವತಃ ಒಪ್ಪಿಕೊಂಡ ಮೇಲೂ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಮಹಾನುಭಾವರು ಎಂದು ಕುಹಕವಾಡಿ ದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ತಮ ಆಡಳಿತದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ ಎಂದು ನಾವಲ್ಲ, ಸ್ವತಃ ತಮ ಕಾಂಗ್ರೆ ಪಕ್ಷದ ಹಿರಿಯ ಶಾಸಕರು, ತಮ ಆರ್ಥಿಕ ಸಲಹೆಗಾರರೂ ಆದ ಬಸವರಾಜ ರಾಯರೆಡ್ಡಿ ಅವರು ತಮಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಅದೆಲ್ಲ ಹೋಗಲಿ ಬಿಡಿ. 2013ರಲ್ಲಿ ತಾವು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಆಗಾಗಲೇ 6 ಬಾರಿ ಶಾಸಕರಾಗಿದ್ದ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಮ ಸಂಪುಟಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ? ಡಿ.ಕೆ.ಶಿವಕುಮಾರ್ ಅವರು ಭ್ರಷ್ಟರು ಎಂಬ ಕಾರಣಕ್ಕೋ? ಎಂದು ಪ್ರಶ್ನಿಸಿರುವ ಅವರು,
ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಒತ್ತಾಯಿಸಿದ್ದಾರೆ.