ಬೆಳಗಾವಿ,ಡಿ.5- ಮುಸ್ಲಿಮರಿಗೆ ದೇಶದ ಸಂಪತ್ತು ಹಂಚುತ್ತೇನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಪಕ್ಷದ ಸಂಪತ್ತು ಇದ್ದರೆ ಹಂಚಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಅಂದರೆ ಸಿದ್ದರಾಮಯ್ಯನವರಿಗೆ ಬಹಳ ಪ್ರೀತಿ. ಅವರ ಹೇಳಿಕೆ ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಹಿಂದೆ ಏನಾಯ್ತು? ಎಂಬುದನ್ನು ಅವರು ಮನಗಾಣಬೇಕು ಎಂದು ಟೀಕಿಸಿದರು.
ಹಿಂದೂಗಳನ್ನ ಎರಡನೇ ದರ್ಜೆಯ ಪ್ರಜೆಗಳ ರೀತಿ ನೋಡುತ್ತಿದ್ದಾರೆ. ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾದಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ಮುಸ್ಲಿಂಮರನ್ನ ವೋಟಿನ ಗಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಸರ್ಕಾರಿ ಹುದ್ದೆಗಳ ನೇಮಕಾತಿ ಅಕ್ರಮ ತಡೆಗೆ ಕಠಿಣ ಕಾನೂನು
ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ ಪ್ರಕರಣ ಕುರಿತು ಮಾತನಾಡಿದ ಅಶೋಕ್, ನಾನು ಸಂಜೆ ಪೃಥ್ವಿರಾಜ್ ಅವರನ್ನು ಭೇಟಿಯಾಗುತ್ತೇನೆ. ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಪಕ್ಕಾ ಇದೆ ಎಂದು ಆರೋಪಿಸಿದರು.
ಕಾಂಗ್ರೆಸ್‍ಗೆ ಗೂಂಡಾ ಸಂಸ್ಕೃತಿ ಮೊದಲಿಂದಲೂ ಇದೆ. ಇದೊಂದು ಗೂಂಡಾ ಸರ್ಕಾರ. ಕಳೆದ ಆರು ತಿಂಗಳಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಮಂಗಳೂರು ಉಡುಪಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಗಡಿಪಾರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭೀಕರವಾದ ಬರ ತಾಂಡವಾಡುತ್ತಿದೆ. ಸರ್ಕಾರಕ್ಕೆ ಅನ್ನದಾತನ ಬಗ್ಗೆ ತಾಯಿ ಹೃದಯ ಇರಬೇಕಿತ್ತು. ಆದರೆ ಸರ್ಕಾರಕ್ಕೆ ಕಟುಕುನ ಹೃದಯ ಇದೆ. ಇಷ್ಟೊತ್ತಿಗೆ ಬರ ನಿರ್ವಹಣೆಗೆ ಹಲವಾರು ಕಾರ್ಯಕ್ರಮ ಕೊಡಬೇಕಿತ್ತು. ಸಬೂಬು ಹೇಳಿಕೊಂಡು ಸುಮ್ಮನೇ ಕೇಂದ್ರದ ಮೇಲೆ ಗೂಬೆ ಕೂರಿಸುವುದಲ್ಲ ಎಂದರು. ಸಚಿವರು, ಶಾಸಕರು ತೆಲಂಗಾಣದಲ್ಲಿದ್ದಾರೆ. ಕಾಂಗ್ರೆಸ್ ತೆಲಂಗಾಣದಲ್ಲಿ ಗ್ಯಾರೆಂಟಿಗಳ ಭರವಸೆ ನೀಡಿ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ಮಾಡಿದೆ ಎಂದು ದೂರಿದರು.