Monday, April 29, 2024
Homeಇದೀಗ ಬಂದ ಸುದ್ದಿಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಬೆಂಗಳೂರು,ನ.17- ಯಾವುದೋ ಒಂದು ಕುಟುಂಬದ ಒತ್ತಡಕ್ಕೆ ಮಣಿಯದೆ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ವಿಪಕ್ಷ ನಾಯಕನ ಆಯ್ಕೆ ನಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಬ್ಲಾಕ್‍ಮೇಲ್ ಮಾಡಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ. ಅಂಥವರ ಬಗ್ಗೆ ಹೈಕಮಾಂಡ್ ಎಚ್ಚರಿಕೆ ಇಡಬೇಕು. ಬಿಜೆಪಿ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ. ಕಾರ್ಯಕರ್ತರೇ ಈ ಪಕ್ಷದ ಆಸ್ತಿ. ಹೀಗಾಗಿ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಉತ್ತರಕರ್ನಾಟಕ ಭಾಗಕ್ಕೆ ಪ್ರತಿ ಹಂತದಲ್ಲೂ ಅನ್ಯಾಯವಾಗಿದೆ. ಹೀಗಾಗಿ ನಮ್ಮ ಭಾಗಕ್ಕೆ ಕೊಟ್ಟರೆ ಪಕ್ಷದ ಬಲವರ್ಧನೆಗೆ ಸಹಾಯವಾಗಲಿದೆ. ಎಲ್ಲ ಭಾಗಕ್ಕೂ ಅವಕಾಶ ಕಲ್ಪಿಸಿರುವಾಗ ನಮ್ಮ ಭಾಗವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ನಾನು ಏನೇ ಮಾತನಾಡಿದರೂ ಅದು ವಿರೋಧವಾಗಬಹುದು. ಏನು ಹೇಳಬೇಕೋ ಅದನ್ನು ವೀಕ್ಷಕರಿಗೆ ಹೇಳಿದ್ದೇನೆ.

ಸ್ಥಳೀಯ ವಿಷಯಗಳು ದೆಹಲಿ ನಾಯಕರಿಗೆ ಗೊತ್ತಿರುವುದಿಲ್ಲ. ಇದೆಲ್ಲವನ್ನೂ ಗಮನಕ್ಕೆ ತಂದಿದ್ದೇನೆ. ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಮ್ಮ ಭಾಗಕ್ಕೆ ಅನ್ಯಾಯ ಮಾಡಿದರೆ ಅಲ್ಲಿನ ಜನ ಸುಮ್ಮನಿರುವುದಿಲ್ಲ. ಪಕ್ಷ ಬಲವರ್ಧನೆಯಾಗಬೇಕಾದರೆ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಲೇಬೇಕು. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.

ನನ್ನನ್ನು ನಿನ್ನೆ ಒಬ್ಬ ಏಜೆಂಟ್ ಖರೀದಿಸಲು ಬಂದಿದ್ದ.ನಾನು ಅಷ್ಟು ಸುಲಭವಾಗಿ ಖರೀದಿಯಾಗುವುದಿಲ್ಲ ಎಂದು ಅವನಿಗೆ ಗೊತ್ತಾಗಿ ಜಾಗ ಖಾಲಿ ಮಾಡಿದ ಎಂದು ಯತ್ನಾಳ್ ಹೇಳಿದರಾದರೂ ಆತನ ಹೆಸರನ್ನು ಬಹಿರಂಗಪಡಿಸಲಿಲ್ಲ.

ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬ್ಲಾಕ್‍ಮೇಲ್‍ಗೆಲ್ಲ ಹೆದರುವುದಿಲ್ಲ: ಡಿಸಿಎಂ

ಈ ಯತ್ನಾಳ್ ಯಾರಿಗೂ ಹೆದರುವವನೂ ಅಲ್ಲ, ಜಗ್ಗುವವನೂ ಅಲ್ಲ. ಇದನ್ನು ನಾನು ವೀಕ್ಷಕರ ಗಮನಕ್ಕೂ ತಂದಿದ್ದೇನೆ. ಅವರು ಕೂಡ ನೀವು ಯಾರಿಗೂ ಹೆದರುವುದಿಲ್ಲ ಎಂಬುದು ಗೊತ್ತಿದೆ ಎಂದರು. ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಿದರೆ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ವಿಧಾನಸಭೆ ಚುನಾವಣೆಯ ಫಲಿತಾಂಶವೇಶ ಸಾಕ್ಷಿ. ಎಲ್ಲದಕ್ಕೂ ನಾವು ಇನ್ನೊಬ್ಬರ ಮನೆ ಬಾಗಿಲಿಗೆ ಸಾರ್ ಸಾರ್ ಎಂದು ಹಿಂದೆ ಹೋಗಲು ಸಾಧ್ಯವೇ. ಪ್ರತಿಯೊಂದು ದಕ್ಷಿಣ ಕರ್ನಾಟಕಕ್ಕೆ ಕೊಟ್ಟರೆ ಉತ್ತರ ಕರ್ನಾಟಕದವರು ಏನು ಮಾಡಬೇಕೆಂದು ಪ್ರಶ್ನಿಸಿದರು.

ನಾನು ಹೆಚ್ಚು ಮಾತನಾಡುವುದಿಲ್ಲ. ವಿಪಕ್ಷ ನಾಯಕನ ಆಯ್ಕೆಯಾದ ಬಳಿಕ ಮಾತನಾಡುತ್ತೇನೆ ಎನ್ನುವ ಮೂಲಕ ಯತ್ನಾಳ್ ಕುತೂಹಲ ಕೆರಳಿಸಿದರು.

RELATED ARTICLES

Latest News