ಬೆಂಗಳೂರು,ಮಾ.20- ಬೆಂಗಳೂರಿನಲ್ಲಿ ಏಳೆಂಟು ಸಾವಿರ ರೂಪಾಯಿಗಳ ತೆರಿಗೆ ಬಾಕಿಗಾಗಿಯೂ ಮನೆಗಳಿಗೆ ಬೀಗ ಹಾಕಿ ಹರಾಜು ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿ ಸಿದ್ದ ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ, ಈ ಹಿಂದೆ ಬಿಬಿಎಂಪಿಯಲ್ಲಿ ಮೂರು ಸಾವಿರ ಕೋಟಿ ರೂ.ಗಳ ತೆರಿಗೆ ವಸೂಲಿಯಾಗಿತ್ತು. ನಮ ಸರ್ಕಾರ ಇ-ಖಾತೆ ಮೂಲಕ 2024-25ನೇ ಸಾಲಿಗೆ 4,500 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ. ಮುಂದಿನ ವರ್ಷ 6 ಸಾವಿರ ಕೋಟಿ ರೂ. ವಸೂಲಿ ಮಾಡುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ. 10 ಸಾವಿರ ಮನೆಗಳಿಗೆ ಈಗಾಗಲೇ ಬೀಗ ಹಾಕಲಾಗಿದೆ.
7 ಸಾವಿರ ರೂ. ತೆರಿಗೆ 1900 ಸೆಸ್ ಸೇರಿ ಸರಿಸುಮಾರು 12566 ರೂ. ತೆರಿಗೆಗೆ ಮನೆ ಬೀಗ ಹಾಕಿ ಹರಾಜು ಮಾಡುವ ಪ್ರಯತ್ನಗಳಾಗಿವೆ. ಏಳೆಂಟು ಸಾವಿರ ರೂ.ಗಳ ತೆರಿಗೆಗಾಗಿ ತೆರಿಗೆ ಸುಸ್ತೀದಾರ(ಪ್ರೊಕ್ಲಮೇಷನ್) ಘೋಷಣೆ ಮಾಡಿ ಆಸ್ತಿಗಳನ್ನು ಹರಾಜು ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ 125 ರೂ.ಗಳ ತೆರಿಗೆ ಕಟ್ಟಿಸಿಕೊಂಡು 5 ಲಕ್ಷ ಇ-ಖಾತಾಗಳನ್ನು ಮಾಡಿಕೊಡಲಾಗಿತ್ತು. ಈಗ ಅಷ್ಟೂ ಕ್ರಾಶ್ ಆಗಿವೆ. ಹೊಸದಾಗಿ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದಾರೆ. ಇ-ಖಾತಾ ಇಲ್ಲದೆ ಆಸ್ತಿ ನೋಂದಣಿಯಾಗುತ್ತಿಲ್ಲ. ಸಕ್ಷಮ ಪ್ರಾಧಿಕಾರಗಳು ಯಾವುದಕ್ಕೂ ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬೆಂಗಳೂರಿನಲ್ಲಿ ಮೈಕ್ರೋ ಫೈನಾನ್‌್ಸ ವಸೂಲಿ ದಂಧೆಯಂತೆ ತೆರಿಗೆ ವಸೂಲಿ ದಂಧೆ ನಡೆಯುತ್ತಿದೆ. 12 ತಿಂಗಳ ಮೇಲೆ ಒಂದು ದಿನ ತಡವಾದರೂ ಒಂದಕ್ಕೆ ಎರಡು ಪಟ್ಟು ದಂಡ ಹಾಕಿ ಅದರ 15% ಬಡ್ಡಿ ವಿಧಿಸಲಾಗುತ್ತಿದೆ. ಮೈಕ್ರೋ ಫೈನಾನ್ಸ್ ಗಳಿಗಿಂತಲೂ ಹೆಚ್ಚಿನ ಹಗರಣ ನಡೆಯುತ್ತಿದೆ ಎಂದರು.
ದೇಶದ ಯಾವ ಭಾಗದಲ್ಲೂ ಈ ರೀತಿಯ ಕಾನೂನುಗಳಿಲ್ಲ. ಅಧಿಕಾರಿಗಳು ಹೊರಡಿಸಿರುವ ಆದೇಶವನ್ನು ನಾನು ನೋಡಿದ್ದೇನೆ. ಇವರಿಗೆಲ್ಲ ಯಾರು ಕಾನೂನು ಹೇಳಿಕೊಡುತ್ತಾರೆ? ಈ ರೀತಿಯ ಕಾನೂನುಗಳಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಪಾಲಿಕೆಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಸಚಿವ ಕೃಷ್ಣಭೈರೇಗೌಡ ಅವರು ಮಧ್ಯಪ್ರವೇಶಿಸಿ ಜನರ ನೆರವಿಗೆ ಬರಬೇಕು ಎಂದರು.
ಈ ಹಂತದಲ್ಲಿ ಕೃಷ್ಣಭೈರೇಗೌಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಈ ಹಿಂದೆ ನಾನು ಎಷ್ಟು ಹೇಳಿದರೂ ಪಾಲಿಕೆ ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದು ಕೃಷ್ಣಭೈರೇಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದರು. ಈಗ ತಲೆ ಮೇಲೆ ಕೈ ಹೊತ್ತುಕೊಂಡಿರುವುದು ನೋಡಿದರೆ ಪಾಲಿಕೆಯನ್ನು ಮೀಟರ್ ಬಡ್ಡಿ ದಂಧೆಗೆ ಬಿಟ್ಟಿರುವಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತಿತರರು ದನಿಗೂಡಿಸಿದರು. ಶಾಸಕ ಸಿ.ಕೆ.ರಾಮಮೂರ್ತಿ, ಬೆಂಗಳೂರಿನಲ್ಲಿ ಜನ ಬದುಕುವುದು ಹೇಗೆ ಬಲವಂತದ ತೆರಿಗೆ ವಸೂಲಿ ಮಾಡಿ 6 ಸಾವಿರ ಕೋಟಿ ವಸೂಲಿ ಮಾಡುವುದಾಗಿ ಹೇಳುತ್ತಿದ್ದಾರೆ. ಜನ ಇದನ್ನು ಕ್ಷಮಿಸುವುದಿಲ್ಲ. ನಾಲ್ಕೈದು ಕಾರಿನಲ್ಲಿ ಮನೆ ಮಾಲೀಕರ ಮನೆ ಮುಂದೆ ಹೋಗಿ ತಮಟೆ ಹೊಡೆದು ನೋಟಿಸ್ ಅಂಟಿಸುತ್ತಿದ್ದಾರೆ. ಇದರಿಂದ ಅವಮಾನ ತಾಳಲಾರದೆ ಆತಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ವಿವರಿಸಿದರು.