Wednesday, March 12, 2025
Homeರಾಜ್ಯಗ್ಯಾರಂಟಿ ಸಮಿತಿ ವಿರುದ್ಧ ರಾಜ್ಯಪಾಲರಿಗೆ ವಿಪಕ್ಷಗಳಿಂದ ದೂರು

ಗ್ಯಾರಂಟಿ ಸಮಿತಿ ವಿರುದ್ಧ ರಾಜ್ಯಪಾಲರಿಗೆ ವಿಪಕ್ಷಗಳಿಂದ ದೂರು

Opposition parties file complaint with Governor against Guarantee Committee

ಬೆಂಗಳೂರು,ಮಾ.12- ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಗ್ಯಾರಂಟಿಗಳ ಅನುಷ್ಠಾನ ಸಮಿತಿಗೆ ಕಾಂಗ್ರೆಸ್‌‍ ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ತಕ್ಷಣವೇ ರದ್ದುಪಡಿಸಬೇಕೆಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್‌‍ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎರಡೂ ಪಕ್ಷಗಳ ಶಾಸಕರು, ವಿಧಾನಪರಿಷತ್‌ ಸದಸ್ಯರು ರಾಜಭವನಕ್ಕೆ ತೆರಳಿ ದೂರು ನೀಡಿದ್ದಾರೆ.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿದ ಉಭಯ ಪಕ್ಷಗಳ ಮುಖಂಡರು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಬೊಕ್ಕಸದಿಂದ ಹಣ ನೀಡಿ ಕಾಂಗ್ರೆಸ್‌‍ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿದ್ದಾರೆ. ಇದು ಸಂಪೂರ್ಣವಾಗಿ ನಿಯಮಗಳ ಉಲ್ಲಂಘನೆಯಾಗಿದ್ದು, ತಕ್ಷಣವೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಕೋರಲಾಗಿದೆ.

ರಾಜ್ಯಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ಹಾಗೂ ಇತರ ಸವಲತ್ತುಗಳು, ಉಪಾಧ್ಯಕ್ಷರಿಗೆ ರಾಜ್ಯ ಸ್ಥಾನಮಾನ, ಜಿಲ್ಲಾ ಸಮಿತಿ ಅಧ್ಯಕ್ಷರಿಗೆ ಪ್ರತಿ ತಿಂಗಳು 40 ಸಾವಿರ ರೂ, ಉಪಾಧ್ಯಕ್ಷರಿಗೆ 10 ಸಾವಿರ ರೂ, ಸದ್ಯರಿಗೆ 1100 ರೂ.ನೀಡಲಾಗುತ್ತದೆ.
ಇದೇ ರೀತಿ ತಾಲ್ಲೂಕು ಮಟ್ಟದ ಸಮಿತಿ ಅಧ್ಯಕ್ಷರಿಗೆ ಪ್ರತಿ ತಿಂಗಳು 25 ಸಾವಿರ ರೂ, ಸದಸ್ಯರಿಗೆ 1 ಸಾವಿರ ರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧ್ಯಕ್ಷರಿಗೆ 40 ಸಾವಿರ ರೂ. ಹಾಗೂ ಸದಸ್ಯರಿಗೆ 1200 ರೂ. ಕೊಡಲಾಗುತ್ತದೆ.

ಇದರಿಂದ 31 ಜಿಲ್ಲಾ ಅಧ್ಯಕ್ಷರಿಗೆ 12.40 ಲಕ್ಷ, ಉಪಾಧ್ಯಕ್ಷರಿಗೆ 1.86 ಕೋಟಿ, ಸದಸ್ಯರಿಗೆ 5,11,000, ತಾಲ್ಲೂಕು ಅಧ್ಯಕ್ಷರಿಗೆ 59.75 ಲಕ್ಷ, ತಾಲ್ಲೂಕು ಸದಸ್ಯರಿಗೆ 33.46 ಲಕ್ಷ ಹಣವನ್ನು ಸರ್ಕಾರದ ಬೊಕ್ಕಸದಿಂದ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಇದು ಸಂಪೂರ್ಣವಾಗಿ ನಿಯಮಗಳ ಉಲ್ಲಂಘನೆಯಾಗಿದೆ. ಸಂವಿಧಾನದ ಪರಿಚ್ಛೇದ 191ರ ಪ್ರಕಾರ ಶಾಸಕರೇ ಎಲ್ಲಾ ಸಮಿತಿಗೂ ಸದಸ್ಯರಾಗಬೇಕು. ಅದೇ ರೀತಿ ಗ್ಯಾರಂಟಿ ಅನುಷ್ಠಾನ ಸಮಿತಿಗೂ ಶಾಸಕರನ್ನೇ ನೇಮಕ ಮಾಡಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿದೆ .

ಸರ್ಕಾರದ ಬೊಕ್ಕಸದಿಂದ ವೇತನ ನೀಡಿ ಒಂದು ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿರುವುದರಿಂದ ಶಾಸಕರ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಕೂಡಲೇ ಮಧ್ಯಪ್ರವೇಶ ಮಾಡಿ ಸರ್ಕಾರ ನೇಮಕ ಮಾಡಿರುವ ಸಮಿತಿ ರದ್ದುಪಡಿಸಲು ನಿರ್ದೇಶನ ನೀಡುವಂತೆ ದೂರು ಕೊಡಲಾಗಿದೆ.

ನಾವು ಗ್ಯಾರಂಟಿಗಳನ್ನು ವಿರೋಧ ಮಾಡುತ್ತಿಲ್ಲ. ಅನುಷ್ಠಾನ ಸಮಿತಿಗೆ ಶಾಸಕರನ್ನು ನೇಮಕ ಮಾಡಬೇಕೆಂಬುದು ನಮ ಕೋರಿಕೆಯಾಗಿದೆ. ಸರ್ಕಾರ ತಮಗೆ ಬಹುಮತವಿದೆ ಎಂದು ತಮದೇ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿಕೊಂಡಿದೆ ಎಂದು ಆಕ್ಷೇಪಿಸಿದೆ.

ಮಧ್ಯಪ್ರದೇಶ ವಿಶೇಷ ಪೊಲೀಸ್‌‍ ಸ್ಥಾಪನೆ 2004ರ ವಿಷಯದಲ್ಲಿ ಸುಪ್ರೀಂಕೋರ್ಟ್‌ ಸ್ಪಷ್ಟವಾದ ಆದೇಶ ನೀಡಿದೆ. ಪ್ರಜಾಸತಾತಕ ಹೊಣೆಗಾರಿಕೆ ಮತ್ತು ಅಧಿಕಾರಿಗಳ ಪ್ರತ್ಯೇಕತೆಯನ್ನು ವಿಫಲಗೊಳಿಸುವುದು ಸರಿಯಾದ ಕ್ರಮವಲ್ಲ. ಖಾತರಿ ಅನುಷ್ಠಾನ ಸಮಿತಿಗೆ ಜನಪ್ರತಿನಿಧಿಗಳನ್ನೇ ನೇಮಕ ಮಾಡಬೇಕೆಂದು ಆದೇಶ ನೀಡಲಾಗಿದೆ.

ಆದರೆ ಸರ್ಕಾರ ತನ್ನ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಕೂಡಲೇ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.

RELATED ARTICLES

Latest News