Wednesday, March 12, 2025
Homeರಾಜ್ಯಗ್ಯಾರಂಟಿ ಗದ್ದಲಕ್ಕೆ ಕಲಾಪ ಬಲಿ, ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ

ಗ್ಯಾರಂಟಿ ಗದ್ದಲಕ್ಕೆ ಕಲಾಪ ಬಲಿ, ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ

opposition parties protest in Assembly

ಬೆಂಗಳೂರು,ಮಾ.12- ರಾಜ್ಯಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದುಪಡಿಸುವಂತೆ ಪ್ರತಿಪಕ್ಷಗಳು ಆರಂಭಿಸಿದ ಧರಣಿ ಇಂದು ವಿಧಾನಸಭೆಯಲ್ಲಿ ಮುಂದುವರೆದಿತ್ತು. ಹೀಗಾಗಿ ಎರಡನೇ ದಿನದ ಕಲಾಪವೂ ಗ್ಯಾರಂಟಿ ಗದ್ದಲಕ್ಕೆ ಬಲಿಯಾದಂತಾಯಿತು.

ಬಿಜೆಪಿ, ಜೆಡಿಎಸ್‌‍ ಶಾಸಕರು ಪಟ್ಟು ಹಿಡಿದು ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದು ಮಾಡಬೇಕೆಂಬ ನಿಲುವಿಗೆ ಅಂಟಿಕೊಂಡು ಪ್ರತಿರೋಧವನ್ನು ಮುಂದುವರೆಸಿದರೆ ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಸರ್ಕಾರವೂ ಕೂಡ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಲು ಒಪ್ಪಲಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳು

ಹಠಕ್ಕೆ ಬಿದ್ದವರಂತೆ ತಮತಮ ನಿಲುವಿಗೆ ಅಂಟಿಕೊಂಡಿದ್ದರಿಂದ ಇಂದು ಕೂಡ ಮಧ್ಯಾಹ್ನ ದವರೆಗೂ ಕಾರ್ಯಕಲಾಪಗಳ ಪಟ್ಟಿಯಲ್ಲಿದ್ದ ಯಾವುದೇ ಕಲಾಪವೂ ನಡೆಯಲಿಲ್ಲ.
ನಿನ್ನೆಯಿಂದ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ತೆರೆಮರೆಯ ಮಾತುಕತೆಗಳೂ ಕೂಡ ಫಲಪ್ರದವಾಗಲಿಲ್ಲ. ಇಂದು ಕೂಡ ಸದನ ಸಮಾವೇಶಗೊಳ್ಳುವ ಮುನ್ನ ಸರ್ಕಾರ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ಸಂಧಾನದ ಸಭೆ ನಡೆಸಲಾಗಿತ್ತು.

ನಿನ್ನೆ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌‍ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸಂಬಂಧಿಸಿ ಕೇಳಿದ ಪ್ರಶ್ನೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೆ ನಿನ್ನೆಯೂ ಕೂಡ ಸುಗಮ ಕಾರ್ಯಕಲಾಪಗಳು ನಡೆಯಲಿಲ್ಲ. ಆರೋಪ, ಪ್ರತ್ಯಾರೋಪ, ಧರಣಿಯಿಂದಾಗಿ ಕಲಾಪಕ್ಕೆ ಅಡ್ಡಿಯುಂಟಾಗಿತ್ತು.

ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಬಿಜೆಪಿ, ಜೆಡಿಎಸ್‌‍ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದರು.ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸದನಕ್ಕೆ ಸಕಾಲಕ್ಕೆ ಆಗಮಿಸಿದ್ದ ಶಾಸಕರ ಹೆಸರುಗಳನ್ನು ವಾಚಿಸಿದರು. ಧರಣಿನಿರತ ಪ್ರತಿಪಕ್ಷಗಳ ಶಾಸಕರು ಸರ್ಕಾರವನ್ನು ಆಗ್ರಹಿಸುತ್ತಾ ಅನುಷ್ಠಾನ ಸಮಿತಿ ರದ್ದುಪಡಿಸಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷರು, ನಿನ್ನೆಯಿಂದಲೂ ಈ ವಿಚಾರ ಪದೇಪದೇ ಪ್ರಸ್ತಾಪವಾಗುತ್ತಿದೆ. ಇದರಿಂದ ಕಾರ್ಯಕಲಾಪಗಳಿಗೂ ಅಡ್ಡಿಯಾಗುತ್ತಿದೆ. ಸುಗಮವಾಗಿ ಕಾರ್ಯಕಲಾಪ ನಡೆಸಲು ಅನುಕೂಲವಾಗುವಂತೆ ಆಡಳಿತ ಮತ್ತು ಪ್ರತಿಪಕ್ಷದವರು ಸೇರಿ ಏನಾದರೂ ಪರಿಹಾರ ಕಂಡುಕೊಳ್ಳಿ. ಕಲಾಪ ನಡೆಯಲಿ ಎಂಬ ಸಲಹೆ ಮಾಡಿದರು.

ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಸದನ ನಡೆಯಬೇಕೆಂಬುದು ನಮ ಉದ್ದೇಶ. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಸರ್ಕಾರದ ಖಜಾನೆ ಹಣ ನೀಡುವುದಕ್ಕೆ ವಿರೋಧವಿದೆ. ರಾಜ್ಯಸರ್ಕಾರ ಕಷ್ಟದಲ್ಲಿದೆ. ಹಣ ಹೊಂದಿಸಲಾಗದೆ ಪರದಾಡುತ್ತಿದೆ. ಅಂಗನವಾಡಿ ಕಾರ್ಯಕರ್ತರಿಗೆ, ಅತಿಥಿ ಉಪನ್ಯಾಸಕರಿಗೆ ಗೌರವಧನ ಸಕಾಲಕ್ಕೆ ನೀಡಲಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್‌ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರು, ಸದಸ್ಯರಿಗೆ ಜನರ ತೆರಿಗೆ ಹಣವನ್ನು ಏಕೆ ಕೊಡುತ್ತೀರಿ?, ತಾಲ್ಲೂಕು ಪಂಚಾಯಿತಿ ನಿರ್ವಹಣಾಧಿಕಾರಿಗಳ ವೇತನ ಕಡಿತ ಮಾಡಿಕೊಡಿ, ನಾವು ಬೇಡ ಎನ್ನುವುದಿಲ್ಲ ಎಂದರು.
ಪರಿಸ್ಥಿತಿ ತಹಬಂದಿಗೆ ಬಾರದಿದ್ದನ್ನು ಗಮನಿಸಿದ ಸಭಾಧ್ಯಕ್ಷರು ಸುಗಮ ಕಲಾಪ ನಡೆಸಲು ಆಗುವುದಿಲ್ಲ ಎಂಬುದನ್ನು ಮನಗಂಡು ಸದನದ ಕಾರ್ಯಕಲಾಪವನ್ನು ಮಧ್ಯಾಹ್ನ 1.45 ಗಂಟೆಗೆ ಮುಂದೂಡಿದರು.

RELATED ARTICLES

Latest News