ನವದೆಹಲಿ,ಫೆ.1- ಕೇಂದ್ರ ಸರ್ಕಾರವು ಜನ ವಿರೋಧಿ ಬಜೆಟ್ ಮಂಡನೆ ಮಾಡುತ್ತಿವೆ ಎಂದು ವಿರೋಧ ಪಕ್ಷಗಳು ಕಲಾಪದಿಂದ ಹೊರ ನಡೆದ ಘಟನೆ ಲೋಕಸಭೆಯಲ್ಲಿ ನಡೆಯಿತು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸೂಚನೆ ನೀಡಿದರು.
ಈ ವೇಳೆ ತಮ ಆಸನದಿಂದ ಎದ್ದು ನಿಂತು ಬಜೆಟ್ ಪುಸ್ತಕ ಓದಲು ನಿರ್ಮಲಾ ಸೀತರಾಮನ್ ಮುಂದಾಗುತ್ತಿದ್ದಂತೆ ಪ್ರತಿ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಸದನದಿಂದ ಹೊರನಡೆದರು.
ಇದು ಸಂಪೂರ್ಣವಾಗಿ ಜನ ವಿರೋಧಿ ಬಜೆಟ್. ಈ ಬಜೆಟ್‌ನಿಂದ ಯಾವುದೇ ಜನರಿಗೂ ಅನುಕೂಲವಾಗಿಲ್ಲ. ಕೇವಲ ಕಾರ್ಪೋರೇಟರ್‌ಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗುತ್ತಿದೆ ಎಂದು ಗದ್ದಲ ಎಬ್ಬಿಸಿದರು.
ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು, ಇದು ನಿಮಗೆ ಶೋಭೆ ತರುವುದಿಲ್ಲ. ಹಣಕಾಸು ಸಚಿವರು ಬಜೆಟ್ ಮಂಡನೆ ಮಾಡುವುದನ್ನು ದೇಶದ ಜನತೆ ಎದುರು ನೋಡುತ್ತಿದ್ದಾರೆ. ನೀವು ನಿಮ ಘನತೆಗೆ ತಕ್ಕಂತೆ ನಡೆದುಕೊಳ್ಳಿ ಎಂದು ಸಿಟ್ಟಿನಿಂದಲೇ ಹೇಳಿದರು. ಗದ್ದಲದ ನಡುವೆಯೇ ಸೀತಾರಾಮನ್ ಬಜೆಟ್ ಮಂಡಿಸಲು ಮುಂದಾಗುತ್ತಿದ್ದಂತೆ ಪ್ರತಿಪಕ್ಷಗಳು ಸದನದಿಂದ ಹೊರನಡೆದರು.