ಬೆಳಗಾವಿ,ಡಿ.19- ದೇವದುರ್ಗ ತಾಲ್ಲೂಕಿನಲ್ಲಿ ಇರುವ ದೊಡ್ಡಿಗಳು ಹಾಗೂ ತಾಂಡಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿದ್ದು, ಈ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಆದೇಶ ನೀಡಲಾಗಿದೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕಿ ಕರೆಮ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವದುರ್ಗ ತಾಲ್ಲೂಕಿನಲ್ಲಿ 132 ದೊಡ್ಡಿಗಳ 792 ಮನೆಗಳು ಹಾಗೂ 26 ತಾಂಡಗಳ 373 ಮನೆಗಳಿಗೆ ನಿರಂತರ ಜ್ಯೋತಿ ಮಾರ್ಗಗಳ ಮೂಲಕ 24 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಸುಮಾರು 799 ಒಂಟಿ ಮನೆಗಳು ಹೊಲ ಮತ್ತು ಗದ್ದೆಗಳಲ್ಲಿ ನಿರ್ಮಿಸಿದ್ದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಹಗಲಿನ ವೇಳೆಯಲ್ಲಿ ಈ ಮನೆಗಳಿಗೆ ಐಪಿ ಪೀಡರ್ ಮೂಲಕ ಅನಧಿಕೃತ ವಿದ್ಯುತ್ ಪಡೆಯಲಾಗಿದ್ದು, ಸಂಜೆ 6 ಗಂಟೆಯಿಂದ ಬೆಳಗಿನವರೆಗೆ ಸಿಂಗಲ್ ಫ್ಯೂಜ್ ವಿದ್ಯುತ್‌ಸರಬರಾಜು ಮಾಡಲಾಗುತ್ತಿದೆ.
ಈ ಮನೆಗಳಿಗೆ ಎಸ್‌ಸಿ/ಎಸ್‌ಟಿ/ಟಿಎಸ್‌ಪಿ ಯೋಜನೆಯಡಿ ಅನುದಾನದ ಲಭ್ಯತೆ ಮೇರೆಗೆ ಹಂತಹಂತವಾಗಿ ಮೂಲಭೂತ ಸೌಕರ್ಯ ಕಲ್ಪಿಸಿ ವಿದ್ಯುತ್ ಸಂಪರ್ಕ ಅಧಿಕೃತಗೊಳಿಸಲಾಗುವುದು ಎಂದು ಹೇಳಿದರು.