ಬೆಂಗಳೂರು, ಮೇ 28- ಹಿಂದೂ ಕಾರ್ಯಕರ್ತ ಸುಹಾಸ್‌ಶೆಟ್ಟಿ ಹತ್ಯೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಕರೆಕೊಟ್ಟಿದ್ದರ ಆರೋಪದ ಹಿನ್ನಲೆಯಲ್ಲಿ ಬಂಧಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರನ್ನು ತಕ್ಷಣವೇ ಬಿಡುಗಡೆ ಮಾಡದಿದ್ದರೆ, ಮುಂದಾಗುವ ಆನಾಹುತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಕುರಿತು ತಮ ಸಾಮಾಜಿಕ ಜಾಲ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರನ್ನು ಬಿಡುಗಡೆ ಮಾಡಬೇಕು. ಈ ರೀತಿಯ ಬಂಧನಗಳು ಮತ್ತೆ ಮರುಕಳಿಸಿದ್ದೇ ಆದಲ್ಲಿ ಮುಂದಾಗುವ ಪರಿಣಾಮವನ್ನು ರಾಜ್ಯ ಸರ್ಕಾರವೇ ಎದುರಿಸಬೇಕಾದೀತು ಎಂದು ಗುಡುಗಿದ್ದಾರೆ.
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್‌ಶೆಟ್ಟಿ ಅವರ ಹತ್ಯೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆ ನೀಡಿರುವುದನ್ನೇ ಕಾರಣವಾಗಿರಿಸಿ ಕೊಂಡು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿರುವ ಕ್ರಮ ಅತ್ಯಂತ ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲ, ಅಲ್ಲದೇ ಪೊಲೀಸರ ಮೂಲಕ ಹಿಂದೂ ಕಾರ್ಯಕರ್ತರನ್ನು ಬೆದರಿಸಿ ದಬ್ಬಾಳಿಕೆ ನಡೆಸುವ ಈ ಸರ್ಕಾರವು ಕ್ಷುಲ್ಲಕ ಕಾರಣಕ್ಕಾಗಿ ಬಂಧಿಸುತ್ತಿರುವುದು, ಸುಳ್ಳು ಮೊಕದ್ದಮೆ ದಾಖಲಿಸಿ ಬೆದರಿಸಲು ಮುಂದಾದಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಓಲೈಕೆ ರಾಜಕಾರಣಕ್ಕಾಗಿ ರಾಷ್ಟ್ರ ವಿರೋಧಿ ಹಾಗೂ ಜಿಹಾದಿ ಶಕ್ತಿಗಳನ್ನು ಪೋಷಿಸಿಕೊಂಡು ಬರುವ ರಾಜ್ಯ ಸರ್ಕಾರ ಪದೇ ಪದೇ ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರನ್ನು ಕುಗ್ಗಿಸುವ ಕೆಲಸಕ್ಕೆ ಮುಂದಾಗಿರುವುದನ್ನು ಬಿಜೆಪಿ ಕರ್ನಾಟಕ ಸಹಿಸದು ಎಂದು ವಿಜಯೇಂದ್ರ ಹೇಳಿದ್ದಾರೆ.