ಸೂರತ್, ಏ.26- ಅಕ್ರಮ ಪಾಕ್ ವಲಸಿಗರ ಜೊತೆಗೆ ಬಾಂಗ್ಲಾದೇಶ ಅಕ್ರಮ ವಲಸೆಗಾರರನ್ನು ಬಂಧಿಸುವ ಕಾರ್ಯವನ್ನು ಗುಜರಾತ್ ಕೈಗೆತ್ತಿಕೊಂಡಿದೆ.ಇದುವರೆಗೂ ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಅಹಮದಾಬಾದ್ ಮತ್ತು ಸೂರತ್‌ನಲ್ಲಿ ಬಂಧಿಸಲಾಗಿದೆ.ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಎಲ್ಲ ಪ್ರಕ್ರಿಯೆಗಳು ನಡೆದ ನಂತರ ಅವನ್ನು ಗಡಿಪಾರು ಮಾಡುವುದಾಗಿ ಗುಜರಾತ್ ಪೊಲೀಸರು ಹೇಳಿದ್ದಾರೆ.
ವಿಶೇಷ ಕಾರ್ಯಾಚರಣೆ ಗುಂಪು, ಅಪರಾಧ ಶಾಖೆ, ಮಾನವ ಕಳ್ಳಸಾಗಣೆ ವಿರೋಧಿ ಘಟಕ, ಅಪರಾಧ ಶಾಖೆ ತಡೆ ಮತ್ತು ಸ್ಥಳೀಯ ಪೊಲೀಸ್ ತಂಡಗಳು ಸೇರಿದಂತೆ ಅನೇಕ ಘಟಕಗಳು ಹಾಗೂ ಇಲಾಖೆಗಳು ಈ ಕಾರ್ಯಾಚರಣೆಗಳನ್ನು ನಡೆಸಿವೆ.
ಬಂಧನವಾಗಿರುವ ಎಲ್ಲ ಪ್ರಜೆಗಳು ಯಾವುದೇ ಪ್ರಮುಖ ದಾಖಲೆಗಳು ಇಲ್ಲದೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದರ ಜತೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಭಾರತದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.ಸೂರತ್‌ನಲ್ಲಿ ಸ್ಥಳೀಯ ಪೊಲೀಸರು ಜಂಟಿಯಾಗಿ ರಾತ್ರಿ ಹೊತ್ತಿನಲ್ಲಿ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಅವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ನಕಲಿ ದಾಖಲೆಗಳೊಂದಿಗೆ ಸೂರತ್‌ನಲ್ಲಿ ವಾಸಿಸುತ್ತಿದ್ದರು. ತನಿಖೆಯ ನಂತರ ಅವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ ರಾಜ್‌ದೀಪ್ ಸಿಂಗ್ ನಕುಮ್ ಹೇಳಿದರು.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಹಮದಾಬಾದ್‌ನಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಯಿತು., ಆರ್ಥಿಕ ಅಪರಾಧಗಳ ವಿಭಾಗ , ವಲಯ 6 ಮತ್ತು ಪ್ರಧಾನ ಕಚೇರಿಯ ತಂಡಗಳು ಅಕ್ರಮ ವಲಸಿಗರೆಂದು ಶಂಕಿಸಲಾಗಿರುವ 450 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಬಂಧಿಸಿವೆ.
ಮುಂಜಾನೆ ನಡೆದ ಶೋಧ ಕಾರ್ಯಾಚರಣೆಯ ಸಮಯದಲ್ಲಿ 400 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಅಜಿತ್ ರಾಜಿಯನ್ ಹೇಳಿದ್ದಾರೆ. ಗೃಹ ಸಚಿವರು, ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರ ಆದೇಶಗಳನ್ನು ಅನುಸರಿಸಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಹಮದಾಬಾದ್‌ನ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್ ಹೇಳಿದ್ದಾರೆ.
ಅಕ್ರಮ ವಲಸಿಗರನ್ನು ಬಂಧಿಸಬೇಕು ಎಂದು ಗೃಹ ಸಚಿವ, ಸಿಪಿ ಮತ್ತು ಡಿಜಿಪಿ ನಮಗೆ ನಿರ್ದೇಶನ ನೀಡಿದ್ದರು. ಏಪ್ರಿಲ್ 2024 ರಿಂದ ಇಲ್ಲಿಯವರೆಗೆ ಅಪರಾಧ ವಿಭಾಗವು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ. 127 ಅಕ್ರಮ ಬಾಂಗ್ಲಾದೇಶಿಗಳನ್ನು ಬಂಧಿಸಲಾಗಿದೆ ಮತ್ತು 77 ಜನರನ್ನು ಗಡೀಪಾರು ಮಾಡಲಾಗಿದೆ ಎಂದು ಹೇಳಿದ್ದಾರೆ.