ವಯನಾಡ್,ಆ. 5 (ಪಿಟಿಐ) ಮಾರಣಾಂತಿಕ ಭೂಕುಸಿತ ಪ್ರಕರಣದಿಂದಾಗಿ 599 ಮಕ್ಕಳು ಮತ್ತು ಆರು ಗರ್ಭಿಣಿಯರು ಸೇರಿದಂತೆ 2,500 ಕ್ಕೂ ಹೆಚ್ಚು ಜನರು ಕೇರಳದ ವಯನಾಡಿನ ವಿವಿಧ ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬಿಡುಗಡೆ ಮಾಡಿದ ಇತ್ತೀಚಿನ ಅಧಿಕತ ಅಂಕಿಅಂಶಗಳ ಪ್ರಕಾರ, ಭೂಕುಸಿತದಿಂದ ಪೀಡಿತ ಜನರು ತಂಗಿರುವ ಬೆಟ್ಟದ ಜಿಲ್ಲೆಯ ಮೆಪ್ಪಾಡಿ ಮತ್ತು ಇತರ ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 16 ರಕ್ಷಣಾ ಶಿಬಿರಗಳಿವೆ.
723 ಕುಟುಂಬಗಳಿಗೆ ಸೇರಿದ 2,514 ಜನರು ಶಿಬಿರಗಳಲ್ಲಿದ್ದಾರೆ. ಅವರಲ್ಲಿ 943 ಪುರುಷರು, 972 ಮಹಿಳೆಯರು ಮತ್ತು 599 ಮಕ್ಕಳು ಎಂದು ಸಿಎಂಒ ತಿಳಿಸಿದೆ.
ಪರಿಹಾರ ಶಿಬಿರದಲ್ಲಿರುವ ಒಟ್ಟು ಮಹಿಳೆಯರಲ್ಲಿ ಆರು ಮಂದಿ ಗರ್ಭಿಣಿಯಾಗಿದ್ದಾರೆ ಎಂದು ಅದು ಹೇಳಿದೆ. ನಿನ್ನೆ ಸಂಜೆಯವರೆಗಿನ ಸರ್ಕಾರದ ಅಂಕಿಅಂಶಗಳ ಪ್ರಕಾರ, ಭೂಕುಸಿತಕ್ಕೆ ಬಲಿಯಾದವರ ಒಟ್ಟು 221 ದೇಹಗಳು ಮತ್ತು 166 ದೇಹದ ಭಾಗಗಳು ಪತ್ತೆಯಾಗಿವೆ.
ಅಧಿಕಾರಿಗಳು ಅವರಲ್ಲಿ ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾದ ನಂತರ ಕಾಣೆಯಾದವರ ಸಂಖ್ಯೆ ಹಿಂದಿನ 206 ರಿಂದ 180 ಕ್ಕೆ ಇಳಿದಿದೆ ಎಂದು ಅವರು ಭಾನುವಾರ ತಿಳಿಸಿದ್ದಾರೆ.