ಬೆಂಗಳೂರು, ಮಾ.21 – ನಗರದ ಹೋಟೆಲ್‌ವೊಂದರ ಕೆಲಸಗಾರರು ಉಳಿದುಕೊಂಡಿರುವ ರೂಂನಲ್ಲಿ ಬಾಂಬ್ ಮಾದರಿಯ ಸ್ಪೋಟಕ ವಸ್ತುಗಳಿದ್ದ ಒಂದು ಬಾಕ್ಸ್ ಪತ್ತೆಯಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಳ್ಳಿಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಹೋಟೆಲ್‌ನಲ್ಲಿ ರೂಂ ನೀಡಲಾಗಿದ್ದು, ಆ ರೂಂನಲ್ಲಿ ಸ್ಫೋಟಕ ವಸ್ತುಗಳು ಇವೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸುದ್ದಿ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರೂಂ ಪರಿಶೀಲಿಸಿದಾಗ ಬಾಂಬ್ ಮಾದರಿಯ ಸ್ಫೋಟಕ ವಸ್ತುಗಳಿದ್ದ ಒಂದು ಬಾಕ್ಸ್ ಪತ್ತೆಯಾಗಿದೆ. ಆ ಬಾಕ್ಸ್‌ನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೆಲಸಗಾರನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಚಿಂದಿ ಆಯುತ್ತಿದ್ದ ವೇಳೆ ಈ ಬಾಕ್ಸ್ ಸಿಕ್ಕಿತ್ತು ಎಂದು ಹೇಳಿದ್ದಾನೆ.
ಪೊಲೀಸರು ವಶಕ್ಕೆ ಪಡೆದಿರುವ ಈ ಬಾಕ್ಸ್‌ನಲ್ಲಿರುವ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ತನಿಖೆ ಮುಂದುವರೆಸಿದ್ದಾರೆ. ಎಫ್‌ಎಸ್‌ಎಲ್ ವರದಿ ಹಾಗೂ ತನಿಖೆ ನಂತರ ಇನ್ನಷ್ಟು ವಿವರಗಳು ಲಭ್ಯವಾಗಲಿವೆ.