Thursday, November 6, 2025
Home Blog Page 102

ಬೆಳೆಸಾಲ ಮನ್ನಾ ಬೇಡಿಕೆ ಕುರಿತು ಪರಿಶೀಲನೆ : ಸಿಎಂ ಸಿದ್ದರಾಮಯ್ಯ

ಕಲಬುರಗಿ, ಸೆ.17- ಭಾರೀ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿಸಿದ್ದು ರೈತರ ಅನುಕೂಲಕ್ಕಾಗಿ ಬೆಳೆ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಸಂಭವಿಸಿರುವ ಬೆಳೆಹಾನಿಯನ್ನು ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ
ನಡೆಸಲು ಆದೇಶಿಸಲಾಗಿದೆ. ವಾರದಲ್ಲಿ ಈ ಸಮೀಕ್ಷೆ ಪೂರ್ಣಗೊಂಡು ವರದಿ ಸಲ್ಲಿಕೆಯಾಗಲಿದೆ. ಆ ಬಳಿಕ ಬೆಳೆನಷ್ಟ ಪರಿಹಾರ ಪಾವತಿಸುವುದಾಗಿ ಹೇಳಿದರು.

ಈ ಬಾರಿ ಅದೃಷ್ಟವಶಾತ್‌ ರಾಜ್ಯದ ಹಲವು ಕಡೆ ವಾಡಿಕೆಗಿಂತ ಶೇ. 4ರಷ್ಟು ಹೆಚ್ಚು ಮಳೆಯಾಗಿದೆ. ಬೀದರ್‌, ಕಲಬುರಗಿ, ಯಾದಗಿರಿ ಸೇರಿ ಹಲವಾರು ಜಿಲ್ಲೆಗಳಲ್ಲಿ ಬೆಳೆನಷ್ಟ ಹೆಚ್ಚಾಗಿದೆ. ಕೂಡಲೇ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳೆ ನಷ್ಟದ ಬಗ್ಗೆ ಮಧ್ಯಂತರ ವರದಿ ಪಡೆದಿಲ್ಲ. ಜಂಟಿ ಸಮೀಕ್ಷೆಯ ಅಂತಿಮ ವರದಿ ಪಡೆದು, ಬಳಿಕ ಕ್ರಮ ಕೈಗೊಳ್ಳಲಾಗುವುದು. 2024-25ನೇ ಸಾಲಿಗೆ ಬೆಳೆವಿಮೆ ಯೋಜನೆಯಡಿ 656 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಇದು ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಮೊತ್ತವಾಗಿದೆ. ಬೆಳೆ ವಿಮೆ ಯೋಜನೆಯನ್ನು ಹೊಂದಿಲ್ಲದವರಿಗೂ ಪರಿಹಾರ ಪಾವತಿಯ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಈ ಹಿಂದೆ ಕೇಂದ್ರ ಸರ್ಕಾರ ನಮಗೆ ಬರ ಪರಿಹಾರದ ಹಣ ನೀಡಲಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗಿ ಹೋರಾಟದ ಮೂಲಕ ನಾವು ಪರಿಹಾರ ಪಡೆದುಕೊಂಡಿದ್ದೆವು ಎಂದರು.
ಎನ್‌ಡಿಆರ್‌ಎಫ್‌ ನಿಯಮಾವಳಿಗಳನ್ನು ಬದಲಾವಣೆ ಮಾಡಿ ಪ್ರಕೃತಿ ವಿಕೋಪ ನಷ್ಟ ಪರಿಹಾರವನ್ನು ಹೆಚ್ಚಿಸಬೇಕೆಂದು ಹಲವಾರು ಬಾರಿ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾಸೀತಾರಾಮನ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೆ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದರೋಡೆಕಾರರ ಕಾರು ಪತ್ತೆ:
ವಿಜಯಪುರದಲ್ಲಿ ಎಸ್‌‍ಬಿಐ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಗಳು ಬಳಸಿದ್ದ ಕಾರು ಪತ್ತೆಯಾಗಿದೆ. ಕೂಡಲೇ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ವಿಜಯಪುರ ಎಸ್‌‍ಪಿ ಅವರಿಗೆ ಕರೆ ಮಾಡಿ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಆದೇಶಿಸಿರುವುದಾಗಿಯೂ ಹೇಳಿದರು.

ಬ್ಯಾಂಕ್‌ಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವುದು ಹಾಗೂ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸುವುದು ಬ್ಯಾಂಕ್‌ಗಳ ಜವಾಬ್ದಾರಿ. ಸರ್ಕಾರ ಪೊಲೀಸರಿಂದ ಅಗತ್ಯ ಭದ್ರತೆಯನ್ನು ಒದಗಿಸುತ್ತದೆ ಎಂದರು.

ಅರ್ಹರನ್ನು ತೆಗೆಯುವುದಿಲ್ಲ:
ಬಿಪಿಎಲ್‌ ಪಟ್ಟಿಯಲ್ಲಿರುವ ಅನರ್ಹರನ್ನು ಪರಿಶೀಲಿಸಿ ತೆಗೆದು ಹಾಕಬೇಕು. ಅರ್ಹರಿದ್ದರೆ ಅವರಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಹೊಸದಾಗಿ ನೀಡಬೇಕೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬಿಜೆಪಿಯವರು ಹೇಳಿದಂತೆ ಕೇಳುವುದಿಲ್ಲ:
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಷಯದಲ್ಲಿ ಬಿಜೆಪಿ ನಾಯಕರು ಹಾಗೂ ವಿರೋಧಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದಂತೆಲ್ಲಾ ಕೇಳಲು ಸಾಧ್ಯವಿಲ್ಲ. ಅವರು ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.ರಾಜ್ಯದ ಪ್ರತಿಯೊಬ್ಬರನ್ನು ಸಮೀಕ್ಷೆ ನಡೆಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಈ ದತ್ತಾಂಶಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಸಮೀಕ್ಷೆಯಲ್ಲಿ ಕ್ರಿಶ್ಚಿಯನ್‌ ಧರ್ಮದ ಜೊತೆಗೆ ಜಾತಿಯ ಉಪ ಕಾಲಂಗಳನ್ನು ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಅನಗತ್ಯ. ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದವರು ಈ ದೇಶದ ಪ್ರಜೆಗಳಲ್ಲವೇ? ಎಂದು ಪ್ರಶ್ನಿಸಿದರು.

ಸಮೀಕ್ಷೆಯಲ್ಲಿ ಜನ ನೀಡುವ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದಕ್ಕಾಗಿ 1.75 ಲಕ್ಷ ಶಿಕ್ಷಕರನ್ನು ಸಮೀಕ್ಷೆಗಾಗಿ ನಿಯೋಜಿಸಲಾಗಿದೆ. ಪ್ರತಿಯೊಬ್ಬರಿಗೂ 150 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ವಿರೋಧ ಅನಗತ್ಯ:
ಕುರುಬ ಸಮುದಾಯವನ್ನು ಎಸ್‌‍ಟಿ ಮೀಸಲು ಪಟ್ಟಿಗೆ ಸೇರಿಸಲು ಈ ಹಿಂದಿನ ಬಿಜೆಪಿ ಸರ್ಕಾರವೇ ಪ್ರಕ್ರಿಯೆ ಆರಂಭಿಸಿತ್ತು. ನಾವು ಅದನ್ನು ಮುಂದುವರೆಸಿದ್ದೇವೆ. ರಾಜ್ಯ ಸರ್ಕಾರಕ್ಕೆ ಮೀಸಲು ಪಟ್ಟಿಗೆ ಸೇರಿಸುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಷ್ಟೇ. ಅಂತಿಮ ತೀರ್ಮಾನವನ್ನು ಕೇಂದ್ರ ಸರ್ಕಾರ ಮಾತ್ರ ತೆಗೆದುಕೊಳ್ಳಲು ಸಾಧ್ಯ ಎಂದರು.

ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಪರಿಶೀಲಿಸಿದ ಬಳಿಕ ಕುರುಬ ಸಮುದಾಯ ಎಸ್‌‍ಟಿಗೆ ಸೇರಲು ಅವಕಾಶಗಳಿದ್ದರೆ, ಕ್ರಮ ಕೈಗೊಳ್ಳುತ್ತದೆ. ಇಲ್ಲವಾದರೆ ತಿರಸ್ಕರಿಸುತ್ತದೆ. ಈ ವಿಚಾರಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದರು.ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲಾಗಿದೆ. ಅದು ಈ ಭಾಗದಲ್ಲೇ ಇರಲಿದ್ದು, ಅಭಿವೃದ್ಧಿಗೆ ಹೆಚ್ಚಿನ ವೇಗ ದೊರಕಿಸುತ್ತದೆ ಎಂದು ಹೇಳಿದರು.

ಚಡಚಣ ಎಸ್‌‍ಬಿಐ ಬ್ಯಾಂಕ್‌ ದರೋಡೆ : ದರೋಡೆಕೋರರ ಪತ್ತೆಗೆ 7 ತಂಡ ರಚನೆ

ವಿಜಯಪುರ,ಸೆ.17-ಏಕಾಏಕಿ ಬ್ಯಾಂಕಿಗೆ ನುಗ್ಗಿ ಪಿಸ್ತೂಲ್‌ ತೋರಿಸಿ, ಸಿಬ್ಬಂದಿಗಳ ಕೈಕಾಲು ಕಟ್ಟಿ ಸಿನಿಮಾ ಶೈಲಿಯಲ್ಲಿ 23 ಕೋಟಿ ರೂ.ಮೌಲ್ಯದ ಚಿನ್ನಾಭರಣ ಹಾಗೂ 1.4 ಕೋಟಿ ರೂ.ನಗದು ದೋಚಿ ಪರಾರಿಯಾಗಿರುವ ಮುಸುಕುಧಾರಿ ದರೋಡೆಕೋರರ ಬಂಧನಕ್ಕೆ ಏಳು ವಿಶೇಷ ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ.

ಪೊಲೀಸ್‌‍ ಮೂಲಗಳ ಪ್ರಕಾರ ನಿನ್ನೆ ಸಂಜೆ 6 ಗಂಟೆ ಸುಮಾರಿನಲ್ಲಿ ಬ್ಯಾಂಕ್‌ ಮುಚ್ಚುವ ವೇಳೆಗೆ ಠೇವಣಿ ಫಾರಂ ಕೇಳುವ ನೆಪ ಮಾಡಿಕೊಂಡು ಬ್ಯಾಂಕಿಗೆ ಒಬ್ಬ ದರೋಡೆಕೋರ ಕರಿಬಣ್ಣದ ಕೋವಿಡ್‌ ಮಾಸ್ಕ್‌, ಬಿಳಿ ಬಣ್ಣದ ಟೋಪಿ ಹಾಗೂ ಕನ್ನಡಕ ಹಾಕಿಕೊಂಡು ಒಳನುಗ್ಗಿದ ನಂತರ ಒಬ್ಬೊಬ್ಬರಾಗಿ ಒಳನುಸುಳಿದ ಮೂವರು ಮುಸುಕುಧಾರಿ ದರೋಡೆಕೋರರ ತಂಡ
ಏಕಾಏಕಿ ಪಿಸ್ತೂಲ್‌ ಹೊರ ತೆಗೆದು ಬ್ಯಾಂಕ್‌ ಸಿಬ್ಬಂದಿಗಳನ್ನು ಬೆದರಿಸಿದರು.

ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಸಿಬ್ಬಂದಿ ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ದರೋಡೆಕೋರರು ಅವರ ಪ್ಲಾಸ್ಟಿಕ್‌ ಟ್ಯಾಗ್‌ನಿಂದ ಕೈಕಾಲು ಕಟ್ಟಿಹಾಕಿ ತಿಜೋರಿಯಲ್ಲಿದ್ದ ಸುಮಾರು 23,61,78,460 ರೂ.ಮೌಲ್ಯದ 20 ಕೆಜಿ ಚಿನ್ನಾಭರಣ ಹಾಗೂ 1.4 ಕೋಟಿ ಹಣವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಬ್ಯಾಂಕ್‌ ದರೋಡೆ ಮಾಡಿ ಪರಾರಿಯಾಗಿರುವ ದರೋಡೆಕೋರರ ಹೆಡೆಮುರಿ ಕಟ್ಟಲು ವಿಶೇಷ ಪೊಲೀಸ್‌‍ ತಂಡಗಳನ್ನು ರಚನೆ ಮಾಡಲಾಗಿದೆ.
ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದಿರುವ ಈ ಏಳು ವಿಶೇಷ ಪೊಲೀಸರ ತಂಡಗಳು ಈಗಾಗಲೇ ಮಹಾರಾಷ್ಟ್ರ ಹಾಗೂ ಮತ್ತಿತರ ರಾಜ್ಯಗಳಿಗೆ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿವೆೆ.

ದರೋಡೆಕೋರರು ಬ್ಯಾಂಕ್‌ ದರೋಡೆಗೆ ಬಳಸಿದ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಪತ್ತೆಯಾಗಿದ್ದು, ಅವರು ಕಾರಿನಲ್ಲಿ ಪರಾರಿಯಾಗುತ್ತಿದ್ದ ವೇಳೆ ಮಂಗಳವೆಡೆ ತಾಲ್ಲೂಕಿನ ಹುಲಜಂತಿ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದರಿಂದ ತಮ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದು ಗೊತ್ತಾಗಿದೆ.

ಈ ಜಾಡು ಹಿಡಿದಿರುವ ವಿಶೇಷ ಪೊಲೀಸ್‌‍ ತಂಡಗಳು ನಾಲ್ಕು ದಿಕ್ಕುಗಳಿಗೂ ಸಂಚರಿಸಿ ದರೋಡೆಕೋರರ ಬಂಧನಕ್ಕೆ ಜಾಲ ಬೀಸಿದ್ದಾರೆ. ದರೋಡೆಕೋರರ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದೆಂದು ಉತ್ತರ ವಲಯ ಐಜಿಪಿ ಚೇತನ್‌ಸಿಂಗ್‌ ರಾಥೋಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೇತ್ರಾವತಿ ತಟದಲ್ಲಿ ಮೂಳೆಗಳಿಗಾಗಿ ಎಸ್‌‍ಐಟಿ ಅಧಿಕಾರಿಗಳ ಶೋಧ.!

ಬೆಂಗಳೂರು, ಸೆ.17- ಬಹಳ ದಿನಗಳ ಬಳಿಕ ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ವಿಶೇಷ ತನಿಖಾ ದಳ ಪರಿಶೀಲನೆಗೆ ನಡೆಸಿದ್ದು, ಭೂಮಿಯ ಮೇಲ್ಭಾಗದಲ್ಲಿರುವ ಅಸ್ಥಿಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಿದೆ. ಸೌಜನ್ಯ ಅವರ ಮಾವ ವಿಠಲ್‌ಗೌಡ ಅವರ ಹೇಳಿಕೆ ಎಸ್‌‍ಐಟಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ನೇತ್ರಾವತಿ ದಂಡೆಯಲ್ಲಿರುವ ಬಂಗ್ಲೆಗುಡ್ಡದಲ್ಲಿ ತಾವು ರಾಶಿರಾಶಿ ಅಸ್ಥಿಪಂಜರಗಳನ್ನು ಕಂಡಿದ್ದಾಗಿ ಅವರು ಹೇಳಿದರು.ಈ ಹಿಂದೆ ಚಿನ್ನಯ್ಯ ನೀಡಿದ್ದ ಹೇಳಿಕೆ ಆಧಾರದ ಮೇಲೆ ಉತ್ಖನನ ನಡೆಸಿದಾಗ ಯಾವುದೇ ಮಹತ್ವದ ಪುರಾವೆಗಳು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಠಲ್‌ಗೌಡ ಹೇಳಿಕೆಯನ್ನು ನಂಬಿ ಮತ್ತೆ ಉತ್ಖನನ ನಡೆಸಲು ಎಸ್‌‍ಐಟಿ ಹಿಂದೇಟು ಹಾಕಿದೆ.

ಬದಲಾಗಿ ಪಂಚರ ಸಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಭೂಮಿಯ ಮೇಲ್ಭಾಗದಲ್ಲಿ ಕಂಡು ಬರುವ ಮೂಳೆಗಳನ್ನು ಸಂಗ್ರಹಿಸಲು ಎಸ್‌‍ಐಟಿ ನಿರ್ಧರಿಸಿದೆ ಎನ್ನಲಾಗಿದೆ.ಈ ಹಿಂದೆ 6ನೇ ಪಾಯಿಂಟ್‌ನ್ನು ಅಗೆದಾಗ ದೊರೆತ್ತಿದ್ದ ಕೆಲವು ಮೂಳೆಗಳನ್ನು ಪಿವಿಸಿ ಪೈಪ್‌ನಲ್ಲಿ ಸಂಗ್ರಹಿಸಲಾಗಿತ್ತು. ಇಂದು ಅದೇ ಮಾದರಿಯ ಐದಾರು ಪಿವಿಸಿ ಪೈಪ್‌ಗಳನ್ನು ತೆಗೆದುಕೊಂಡು ಹೋಗಲಾಗಿದೆ.

ಸುಮಾರು 50 ರಿಂದ 60 ಮಂದಿಯ ತಂಡ ಬಂಗ್ಲೆಗುಡ್ಡ ದಟ್ಟ ಅರಣ್ಯ ಪ್ರದೇಶವನ್ನು ಪ್ರವೇಶಿಸಿ ಶೋಧ ನಡೆಸುತ್ತಿದೆ.ಎಸ್‌‍ಐಟಿಯ ತನಿಖಾಧಿಕಾರಿ ಜಿತೇಂದ್ರಕುಮಾರ ದಯಾಮ ಹಾಗೂ ಎಸ್‌‍ಪಿ ಸೈಮನ್‌ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಹಾಗೂ ಪಂಚನಾಮೆ ಮಾಡಲಾಗಿದೆ. ತಂಡದಲ್ಲಿ ಅರಣ್ಯ ಇಲಾಖೆಯ 13ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳಿದ್ದರು. ಕ್ರೈಂ ಸೀನ್‌ನ 9ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಬಾಂಬ್‌ ಪತ್ತೆಗಾಗಿ ಬಳಸುವ ಮೆಟಲ್‌ ಡಿಟೆಕ್ಟರ್‌ ಯಂತ್ರಗಳನ್ನು ಉಪಯೋಗಿಸಲಾಗಿದೆ.

ವೈದ್ಯರು, ಕಂದಾಯ ಇಲಾಖೆಯ ಕೆಲ ಹಂತದ ಅಧಿಕಾರಿಗಳು, ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು, ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಈ ತಂಡದಲ್ಲಿದ್ದರು.ಸಾಮಾನ್ಯವಾಗಿ ಕಳೇಬರ ಸಂಗ್ರಹದ ವೇಳೆ ಮ್ಯಾಜಿಸ್ಟ್ರೇಟ್‌ ಹಂತದ ಅಧಿಕಾರಿಗಳಾದ ತಹಶೀಲ್ದಾರ್‌ ಅಥವಾ ಉಪವಿಭಾಗಾಧಿಕಾರಿ ಹಾಜರಿರಬೇಕಾಗುತ್ತದೆ, ಆದರೆ ಇಂದಿನ ಮಹಜರಿನಲ್ಲಿ ತಹಶೀಲ್ದಾರ್‌ ಮತ್ತು ಉಪವಿಭಾಗಾಧಿಕಾರಿ ಕಂಡು ಬಂದಿರಲಿಲ್ಲ.

ಪ್ರಮುಖವಾಗಿ ಬಂಗ್ಲೆಗುಡ್ಡದಲ್ಲಿ ರಾಶಿರಾಶಿ ಅಸ್ಥಿಪಂಜರಗಳಿವೆ ಎಂದು ಹೇಳಿಕೆ ನೀಡಿದ್ದ ವಿಠಲ್‌ಗೌಡರನ್ನು ಎಸ್‌‍ಐಟಿ ಅಧಿಕಾರಿಗಳು ಸ್ಥಳಕ್ಕೆ ಕರೆ ತಂದಿರಲಿಲ್ಲ. ತಂಡ ಪರಿಶೀಲನೆ ನಡೆಸುತ್ತಿದ್ದ ಸಮಯದಲ್ಲೇ ವಿಠಲ್‌ಗೌಡ ಅದೇ ಮಾರ್ಗದಲ್ಲಿ ತಮ ಕಾರಿನಲ್ಲಿ ಪ್ರಯಾಣಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿಠಲ್‌ಗೌಡ, ತಮಗೆ ಎಸ್‌‍ಐಟಿ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಪುರಂದರಗೌಡ ಹಾಗೂ ತುಕಾರಾಂ ಅವರು ಎಸ್‌‍ಐಟಿಯ ಮುಂದೆ ಹಾಜರಾಗಿ ಚಿನ್ನಯ್ಯ ಶವಗಳನ್ನು ಹೂತಿಟ್ಟಿರುವುದನ್ನು ನಾವು ನೋಡಿದ್ದೇವೆ. ನಮನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಬೇಕೆಂದು ಪ್ರತಿಪಾದಿಸಿದರು. ಆದರೆ ಎಸ್‌‍ಐಟಿ ಇದನ್ನು ತಿರಸ್ಕರಿಸಿತ್ತು.

ಈ ಇಬ್ಬರೂ ಹೈಕೋರ್ಟ್‌ ಮೆಟ್ಟಿಲೇರಿದರು. ಅದರ ವಿಚಾರಣೆ ನಾಳೆ ನಡೆಯಲಿದೆ. ಈ ಇಬ್ಬರೂ ಇಂದು ಸ್ಥಳ ಪರಿಶೀಲನೆ ವೇಳೆ ಅಗಮಿಸಿದ್ದರು. ಆದರೆ ಸಾರ್ವಜನಿಕರಂತೆ ದೂರದಲ್ಲೇ ನಿಂತು ಸ್ವಲ್ಪಹೊತ್ತು ಗಮನಿಸಿ ನಂತರ ನಿರ್ಗಮಸಿದರು ಎಂದು ತಿಳಿದು ಬಂದಿದೆ. ಎಸ್‌‍ಐಟಿ ಅಧಿಕಾರಿಗಳ ನಡೆ ನಿಗೂಢವಾಗಿದ್ದು ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳು, ದೂರುದಾರರು ಮತ್ತು ಮಾಹಿತಿದಾರರ ಗೈರು ಹಾಜರಿಯಲ್ಲಿ ಸ್ಥಳ ಮಹಜರು ನಡೆಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಎಸ್‌‍ಐಟಿ ತನಿಖೆಗೆ ಸಹಕರಿಸುತ್ತಿಲ್ಲವೇ ಎಂಬ ಅನುಮಾನವೂ ಮೂಡಿದೆ. ಕ್ರೈಂ ಸೀನ್‌ ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವುದು ಪಿವಿಸಿ ಪೈಪ್‌ಗಳನ್ನು ತಂದಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವು ಸಮಯದ ಬಳಿಕ ಸಿಬ್ಬಂದಿಗಳು ಪ್ಲಾಸ್ಟಿಕ್‌ ಚೇರುಗಳನ್ನು ಸ್ಥಳ ಮಹಜರು ನಡೆಯುತ್ತಿರುವ ಪ್ರದೇಶಕ್ಕೆ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ.

ರಾಜ್ಯದಲ್ಲಿರುವುದು ಜನಾದೇಶದ ಸರ್ಕಾರವಲ್ಲ, ಮತಗಳ್ಳತನದ ಸರ್ಕಾರ : ಅಶೋಕ್‌ ವಾಗ್ದಾಳಿ

ಬೆಂಗಳೂರು,ಸೆ.17– ರಾಜ್ಯದಲ್ಲಿ ಈಗಿರುವುದು ಜನಾದೇಶದಿಂದ ಚುನಾಯಿತ ವಾದ ಸರ್ಕಾರ ಅಲ್ಲ, ಮತಗಳ್ಳತನದ ಮೂಲಕ ಅಧಿಕಾರ ಕಬಳಿಸಿರುವ ಮಾಫಿಯಾ ಸರ್ಕಾರ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿದ್ದರಾಮಯ್ಯನವರನ್ನು 1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಹೇಗೆ ಸೋಲಿಸಿತು? 2018ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಗೆದ್ದರು? ಎನ್ನುವುದಕ್ಕೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣಾ ಅಕ್ರಮವೇ ಉದಾಹರಣೆಯಾಗಿದೆ 7ಎಂದು ವಾಗ್ದಳಿ ನಡೆಸಿದ್ದಾರೆ.

ಇವಿಎಂಗಳಂತಹ ಆಧುನಿಕ ತಂತ್ರಜ್ಞಾನ ಬಂದಮೇಲೂ ಕಾಂಗ್ರೆಸ್‌‍ ಪಕ್ಷ ಇಂಥ ಚುನಾವಣಾ ಅಕ್ರಮ ಮಾಡುತ್ತದೆ ಎಂದರೆ, ಮತಪೆಟ್ಟಿಗೆ ಇದ್ದ ಕಾಲದಲ್ಲಿ ಕಾಂಗ್ರೆಸ್‌‍ ಪಕ್ಷ ಹೇಗೆ ಚುನಾವಣೆಗಳನ್ನು ಗೆಲ್ಲುತ್ತಿತ್ತು ಎನ್ನುವುದನ್ನು ನೀವೇ ಊಹಿಸಿಕೊಳ್ಳಿ! ಕಾಂಗ್ರೆಸ್‌‍ ಪಕ್ಷ ಮತಗಳ್ಳತನದ ಮಾಫಿಯಾ ಎಂದು ಅವರು ಟೀಕಿಸಿದ್ದಾರೆ.

ಬಿಪಿಎಲ್‌ನಿಂದ ಎಪಿಎಲ್‌ಗೆ ಪಡಿತರ ಚೀಟಿ ಪರಿವರ್ತನೆ ಶುರು

ಬೆಂಗಳೂರು, ಸೆ.17- ರಾಜ್ಯದಲ್ಲಿರುವ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ಗಳನ್ನಾಗಿ ಪರಿವರ್ತಿಸುವ ಕುರಿತಂತೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದ್ದು, ಪರ ವಿರೋಧ ಚರ್ಚೆಗಳು ಮತ್ತೊಮೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ.ಸೂಚಿತ ಮಾನ ದಂಡಕ್ಕಿಂತಲೂ ಹೆಚ್ಚಿನ ಕಾರ್ಡ್‌ಗಳು ರಾಜ್ಯದಲ್ಲಿದ್ದು ಅವುಗಳನ್ನು ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ರವಾನಿಸಿದೆ.

ಕಳೆದ ಮೇ, ಜೂನ್‌ನಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 12,68,097 ಕಾರ್ಡ್‌ಗಳು ಅನರ್ಹರ ಕೈಯಲ್ಲಿವೆೆ ಎಂಬ ಅನುಮಾನ ವ್ಯಕ್ತವಾಗಿದೆ. ಇವುಗಳ ಪೈಕಿ ವಿವಿಧ ಕಂಪನಿಗಳಲ್ಲಿ ಪಾಲುದಾರರು, ನಿರ್ದೇಶಕರಾಗಿರುವ 19600 ಮಂದಿ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ. 25 ಲಕ್ಷ ರೂ.ಗಳಿಗಿಂತಲೂ ಹೆಚ್ಚಿನ ಆದಾಯ ಹೊಂದಿರುವ 2684 ಮಂದಿ ಇದ್ದಾರೆ.

ಬಿಪಿಎಲ್‌ ವ್ಯಾಪ್ತಿಗೆ ಒಳಪಡಲು ವಾರ್ಷಿಕ 1.20 ಲಕ್ಷ ರೂ.ಗಿಂತಲೂ ಕಡಿಮೆ ಆದಾಯ ಹೊಂದಿರಬೇಕು. ಆದರೆ ನಿಗದಿತ ಮಿತಿ ದಾಟಿದ ಆದಾಯ ಹೊಂದಿರುವ 5,13,613 ಕುಟುಂಬಗಳು ಬಿಪಿಎಲ್‌ ಫಲಾನುಭವಿಗಳಾಗಿದ್ದಾರೆ. 7.5 ಎಕರೆಗಿಂತಲೂ ಹೆಚ್ಚಿನ ಭೂಮಿ ಹೊಂದಿರುವ 33,456 ಮಂದಿ, 6 ತಿಂಗಳಿನಿಂದಲೂ ಪಡಿತರ ಪಡೆಯದ 19,893 ಮಂದಿ, ನಾಲ್ಕು ಚಕ್ರಗಳ ವಾಹನ ಹೊಂದಿರುವ 119 ಮಂದಿ, 24 ಸಾವಿರ ಸರ್ಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಪಡೆದಿರುವುದು ಆಹಾರ ಇಲಾಖೆಯ ಪರಿಶೀಲನೆಯಲ್ಲಿ ಕಂಡು ಬಂದಿದೆ.

ಈ ಕಾರ್ಡ್‌ಗಳನ್ನು ಎಪಿಎಲ್‌ ಅನ್ನಾಗಿ ಪರಿವರ್ತಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 1,10,06,964 ಕಾರ್ಡ್‌ಗಳಿವೆ. ಆದರೆ ರಾಜ್ಯಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ 1,52,24,744 ಕಾರ್ಡ್‌ಗಳಿವೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳ ದತ್ತಾಂಶಗಳ ನಡುವೆಯೇ 42,17,780 ಕಾರ್ಡ್‌ಗಳ ವ್ಯತ್ಯಾಸವಿದೆ. ಎಪಿಎಲ್‌ ವಲಯದಲ್ಲ ಕೇಂದ್ರದ ಅಂದಾಜಿಗಿಂತಲೂ ರಾಜ್ಯದಲ್ಲಿ 598 ಕಾರ್ಡ್‌ಗಳು ಕಡಿಮೆ ಇವೆ.
ರಾಜ್ಯದಲ್ಲಿ 1,17,18,620 ಬಿಪಿಎಲ್‌ ಕಾರ್ಡ್‌ಗಳಿದ್ದು, ಕೇಂದ್ರದ ಮಾಹಿತಿ ಪ್ರಕಾರ 99,31,698 ಕಾರ್ಡ್‌ಗಳಿರುವುದಾಗಿ ತಿಳಿದು ಬಂದಿದೆ. ಇದರಲ್ಲಿಯೂ 17,86,922 ಕಾರ್ಡ್‌ಗಳ ವ್ಯತ್ಯಾಸ ಕಂಡು ಬರುತ್ತಿದೆ.

ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ತಮಲ್ಲಿರುವ ದತ್ತಾಂಶದ ಪ್ರಕಾರವಷ್ಟೇ ಆಹಾರ ಪೂರೈಸುವುದಾಗಿ ಸ್ಪಷ್ಟಪಡಿಸಿದೆ.ಹೆಚ್ಚುವರಿಯಾಗಿರುವ 42ಲಕ್ಷ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸಬೇಕಿದೆ. ಇರುವ ದತ್ತಾಂಶಗಳಲ್ಲೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪರಿಷ್ಕರಣೆ ಮಾಡಿ ಅನರ್ಹರನ್ನು ಪಟ್ಟಿಯಿಂದ ಕೈಬಿಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಅನರ್ಹರನ್ನು ಕೈಬಿಡಲು ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತಿದೆ. ಕಳೆದ ವರ್ಷ ಈ ಪ್ರಕ್ರಿಯೆ ಆರಂಭಿಸಿದಾಗ ವಿರೋಧ ಪಕ್ಷಗಳು ಸೇರಿದಂತೆ ಸಂಘಸಂಸ್ಥೆಗಳು ಭಾರೀ ವಿರೋಧ ವ್ಯಕ್ತ ಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಆರಂಭಿಸಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಕೇಂದ್ರದ ಸೂಚನೆ ಆಧರಿಸಿ ಮತ್ತೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಯಾವುದೇ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುವುದಿಲ್ಲ. ಬದಲಾಗಿ ಎಪಿಎಲ್‌ಗೆ ಪರಿವರ್ತಿಸಲಾಗುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.ಒಂದು ವೇಳೆ ಅರ್ಹರ ಬಿಪಿಎಲ್‌ ಕಾರ್ಡ್‌ಗಳು ರದ್ದುಗೊಂಡರೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಅದನ್ನು ಪರಿಶೀಲಿಸಿ ಬಿಪಿಎಲ್‌ನ್ನು ಊರ್ಜಿತಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಆಹಾರ ಇಲಾಖೆ ಈಗಾಗಲೇ ಶಂಕಿತ ಬಿಪಿಎಲ್‌ ಕಾರ್ಡ್‌ಗಳಿಗೆ ಆಹಾರ ಧಾನ್ಯ ವಿತರಿಸದಂತೆ ಸೂಚನೆ ನೀಡಿದೆ. ಶಂಕಿತ ಅನರ್ಹ ಫಲಾನುಭವಿಗಳಿಗೆ ನೋಟಿಸ್‌‍ ಕೂಡ ನೀಡಲಾಗಿದ್ದು, ನ್ಯಾಯಬೆಲೆ ಅಂಗಡಿಗಳಿಗೂ ಮಾಹಿತಿ ಒದಗಿಸಲಾಗಿದೆ.

ಪರಮಾಣು ಬೆದರಿಕೆಗಳಿಗೆ ಬಗ್ಗಲ್ಲ, ಕೆಣಕಿದರೆ ನುಗ್ಗಿ ಹೊಡೆಯುತ್ತೇವೆ : ಭಾರತದ ಶತ್ರುಗಳಿಗೆ ಮೋದಿ ಎಚ್ಚರಿಕೆ

ಧರ್‌(ಮಧ್ಯಪ್ರದೇಶ),ಸೆ.17- ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಪ್ರತಿಕಾರವಾಗಿ ಭಾರತೀಯ ಸೇನಾಪಡೆ ನಡೆಸಿದ ಆಪರೇಷನ್‌ ಸಿಂಧೂರ್‌ ಯಶಸ್ಸನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರಮೋದಿ, ಭಾರತ ಪರಮಾಣು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಮತ್ತೆ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಧ್ಯಪ್ರದೇಶದ ಧರ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿಯವರು , ಕೆಲವರು ಪರಮಾಣು ಬಾಂಬ್‌ಗಳನ್ನು ಇಟ್ಟುಕೊಂಡು ನಮನ್ನು ಬ್ಲಾಕ್‌ಮೇಲ್‌ ಮಾಡಲು ಬರುತ್ತಿದ್ದಾರೆ. ಅವರಿಗೆ ಇಲ್ಲಿಂದಲೇ ನಾನು ಎಚ್ಚರಿಕೆ ಕೊಡುತ್ತೇನೆ. ಭಾರತವು ಕೂಡ ಪರಮಾಣು ರಾಷ್ಟ್ರ ಎಂಬುದನ್ನು ಮರೆಯಬೇಡಿ ಎಂದು ಗುಡುಗಿದರು.ಇದು ಹೊಸ ಭಾರತ. ಇದು ಯಾರಿಗೂ ಹೆದರುವುದಿಲ್ಲ. ಭಾರತೀಯ ಪಡೆಗಳು ಮನೆಗಳಿಗೆ ನುಗ್ಗಿ ಶತ್ರುಗಳನ್ನು

ಹೊಡೆಯುವ ಶಕ್ತೀಯನ್ನು ಹೊಂದಿವೆ. ಹೊಸ ಭಾರತ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ಅವರು ಭಾರತದೊಂದಿಗೆ ಭವಿಷ್ಯದ ಯುದ್ಧದಲ್ಲಿ ಇಸ್ಲಾಮಾಬಾದ್‌ ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ ಪರಮಾಣು ಯುದ್ಧ ಮತ್ತು ಅರ್ಧ ಪ್ರಪಂಚವನ್ನು ನಾಶಮಾಡುವ ಬೆದರಿಕೆಯ ಬಗ್ಗೆ ನೀಡಿದ್ದ ಎಚ್ಚರಿಕೆಯನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸಿದರು.

ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶೀರದಲ್ಲಿನ ತನ್ನ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ನಷ್ಟವನ್ನು ಭಯೋತ್ಪಾದಕ ಗುಂಪು ಜೈಶ್‌-ಎ-ಮೊಹಮದ್‌ (ಜೆಇಎಂ) ಒಪ್ಪಿಕೊಂಡಿರುವುದು ನವದೆಹಲಿಯ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸುವಲ್ಲಿ ಇಸ್ಲಾಮಾಬಾದ್‌ ಪಾತ್ರವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.

ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ಜೈಶ್‌- ಎ- ಮೊಹಮದ್‌ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಅವರ ಕುಟುಂಬವನ್ನು ಛಿದ್ರ ಛಿದ್ರ ಮಾಡಿವೆ ಎಂದು ಜೆಇಎಂನ ಉನ್ನತ ಸದಸ್ಯ ಮಸೂದ್‌ ಇಲ್ಯಾಸ್‌‍ ಕಾಶೀರಿ ಹೇಳಿದ ಮರುದಿನವೇ ಮೋದಿ ಇದನ್ನು ಉಲ್ಲೇಖಿಸಿದ್ದಾರೆ.

ಇದೇ ವೇಳೆ ಮೋದಿ ಅವರು, ಜಿಲ್ಲೆಯಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್‌ ಜವಳಿ ಪ್ರದೇಶ ಮತ್ತು ಉಡುಪು (ಪಿಎಂ ಮಿತ್ರ) ಉದ್ಯಾನವನಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ೞಸ್ವಸ್ಥ ನಾರಿ ಸಶಕ್ತ ಪರಿವಾರ್‌ೞ ಮತ್ತು ೞರಾಷ್ಟ್ರೀಯ ಪೋಷಣಾ ಮಾಹ್‌ೞ ಅಭಿಯಾನಗಳಿಗೂ ಚಾಲನೆ ನೀಡಿದರು.

ಮಧ್ಯಪ್ರದೇಶ, ತೆಲಂಗಾಣ, ಗುಜರಾತ್‌, ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಏಳು ಸ್ಥಳಗಳಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳೊಂದಿಗೆ ದೊಡ್ಡ ಪ್ರಮಾಣದ ಜವಳಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದು ಪಿಎಂ ಮಿತ್ರ ಯೋಜನೆಯ ಉದ್ದೇಶವಾಗಿದೆ. ಧಾರ್‌ ಜಿಲ್ಲೆಯ ಭೈನ್ಸೋಲಾ ಗ್ರಾಮದಲ್ಲಿ ಸುಮಾರು 2,158 ಎಕರೆ ಪ್ರದೇಶದಲ್ಲಿ ಪಿಎಂ ಮಿತ್ರ ಪಾರ್ಕ್‌ ತಲೆ ಎತ್ತಲಿದೆ. ಇದು ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಹತ್ತಿ ಉತ್ಪಾದಕರಿಗೆ ಹೇರಳವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಅದು ಹೇಳಿದೆ.

ಮಾನಸಿಕ ಆರೋಗ್ಯ, ಲಿಂಗ ಸಮಾನತೆ, ಹದಿಹರೆಯದವರ ರಕ್ತಹೀನತೆ ನಿರ್ವಹಣೆ ಮತ್ತು ಸಕ್ರಿಯ ಜೀವನಶೈಲಿಯ ಮೇಲೆ ಕೇಂದ್ರೀಕರಿಸುವ ಮೂಲಕ ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ಸ್ವಸ್ಥ್‌ ನಾರಿ ಸಶಕ್ತ ಪರಿವಾರ್‌ ಅಭಿಯಾನವು ಆಯುಷಾನ್‌ ಆರೋಗ್ಯ ಮಂದಿರಗಳಲ್ಲಿ (ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು) ಅಕ್ಟೋಬರ್‌ 2ರವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿರುವ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರು ನನ್ನನ್ನು ಆಶೀರ್ವದಿಸುತ್ತಿದ್ದಾರೆ. ಧಾರ್ನಲ್ಲಿರುವ ದೇಶದ ಅತಿದೊಡ್ಡ ಸಮಗ್ರ ಜವಳಿ ಉದ್ಯಾನವನವು ಉದ್ಯಮಕ್ಕೆ ಹೊಸ ಶಕ್ತಿಯನ್ನು ಒದಗಿಸುತ್ತದೆ ಮತ್ತು ರೈತರ ಉತ್ಪನ್ನಗಳಿಗೆ ನ್ಯಾಯಯುತ ಮೌಲ್ಯವನ್ನು ನೀಡುತ್ತದೆ. 1948 ರ ಈ ದಿನದಂದು, ನಮ ಸೇನೆಯು ಹೈದರಾಬಾದ್‌ ಅನ್ನು ಸ್ವತಂತ್ರಗೊಳಿಸಿ ಭಾರತದ ಹೆಮೆಯನ್ನು ಪುನಃಸ್ಥಾಪಿಸಿದಾಗ ಸರ್ದಾರ್‌ ಪಟೇಲ್‌ ಅವರ ದೃಢವಾದ ಇಚ್ಛಾಶಕ್ತಿ ಕಂಡುಬಂದಿತು ಎಂದು ಹೈದರಾಬಾದ್‌ ವಿಮೋಚನಾ ದಿನವನ್ನು ಉಲ್ಲೇಖಿಸುತ್ತಾ ಅವರು ಹೇಳಿದರು.

ಮುಂದಿನ ವರ್ಷ ಹೊಸ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ : ಸಚಿವ ಮುನಿಯಪ್ಪ

ಬೆಂಗಳೂರು, ಸೆ.17– ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆಯಾದ ಬಳಿಕ ಮುಂದಿನ ವರ್ಷ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸುವುದಾಗಿ ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಿಪಿಎಲ್‌ ಕಾರ್ಡ್‌ ಹೊಂದಿರುವುದು ಕರ್ನಾಟಕ ರಾಜ್ಯ. ಶೇ. 75 ರಷ್ಟು ಮಂದಿ ಬಿಪಿಎಲ್‌ ಪಟ್ಟಿಯಲ್ಲಿದ್ದಾರೆ. ಇದನ್ನು ಪರಿಷ್ಕರಣೆ ಮಾಡಲೇಬೇಕು ಎಂದು ಹೇಳಿದರು.

ಬಿಪಿಎಲ್‌ ಹೊಂದಿರುವ ಅನರ್ಹರನ್ನು ಎಪಿಎಲ್‌ ಪಟ್ಟಿಗೆ ಸೇರಿಸುತ್ತೇವೆ. ಯಾವುದೇ ಕಾರಣಕ್ಕೂ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಒಂದು ವೇಳೆ ಪರಿಷ್ಕರಣೆಯ ವೇಳೆ ಅರ್ಹರು ತಪ್ಪಿ ಹೋಗಿದ್ದರೆ ಅರ್ಜಿಕೊಡಬಹುದು. 24 ಗಂಟೆಯಲ್ಲೇ ಮತ್ತೆ ಬಿಪಿಎಲ್‌ ಕಾರ್ಡ್‌ ಕೊಟ್ಟು ಪಡಿತರ ನೀಡಲು ಆರಂಭಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಮಾನದಂಡ ನೀಡಿದೆ. ಜೊತೆಗೆ ಕೇಂದ್ರವೇ ಪರಿಷ್ಕರಣೆ ಮಾಡಿ, 7 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ ಪಟ್ಟಿಗಳಿಂದ ರದ್ದುಗೊಳಿಸುವಂತೆ ಆದೇಶ ನೀಡಿದೆ.
ನಿನ್ನೆ ಈ ಬಗ್ಗೆ ನಮ ರಾಜ್ಯದ ಅಧಿಕಾರಿಗಳು ಸಭೆ ನಡೆಸಿ ಚರ್ಚೆಮಾಡಿದ್ದಾರೆ. ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿರುವುದರಲ್ಲಿ ಯಾವ ಕಾರ್ಡ್‌ಗಳನ್ನು ರದ್ದುಗೊಳಿಸಬೇಕೆಂಬುದನ್ನು ಪರಿಶೀಲನೆ ನಡೆಸಲಾಗಿದೆ ಎಂದರು.

ಅನರ್ಹ ಬಿಪಿಎಲ್‌ ಫಲಾನುಭವಿಗಳನ್ನು ಕೈಬಿಡಲು ವಿರೋಧ ಇಲ್ಲ, ಆದರೆ ಅರ್ಹರು ಸೌಲಭ್ಯ ವಂಚಿತರಾಗಬಾರದು : ಜೋಶಿ

ಹುಬ್ಬಳ್ಳಿ, ಸೆ.17- ತಂತ್ರಜ್ಞಾನ ಆಧರಿಸಿ ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ನಡೆಸಿ, ಅನರ್ಹರನ್ನು ಕೈಬಿಡಲು ಯಾವುದೇ ವಿರೋಧ ಇಲ್ಲ. ಆದರೆ ಅರ್ಹರು ಸೌಲಭ್ಯ ವಂಚಿತರಾಗಬಾರದು ಎಂಬ ಎಚ್ಚರಿಕೆ ವಹಿಸಬೇಕೆಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್‌ ಜೋಶಿ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅನೇಕ ಕಡೆ ಅನರ್ಹರು ಬಿಪಿಎಲ್‌ ಪಟ್ಟಿಯಲ್ಲಿರುವುದು ಸತ್ಯ. ಅವರನ್ನು ಸರಿಯಾಗಿ ಪರಿಶೀಲನೆ ಮಾಡಿ ತೆಗೆದು ಹಾಕುವುದಕ್ಕೆ ನಮ ವಿರೋಧ ಇಲ್ಲ. ತಂತ್ರಜ್ಞಾನವನ್ನು ಬಳಕೆ ಮಾಡಿ ಪರಿಷ್ಕರಣೆ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಈ ಮೊದಲು ಕಾರ್ಡ್‌ಗಳ ಪರಿಷ್ಕರಣೆ ಜವಾಬ್ದಾರಿಯನ್ನು ಆಹಾರ ನಿರೀಕ್ಷಕರು (ಫುಡ್‌ ಇನ್‌್ಸಪೆಕ್ಟರ್‌)ಗಳಿಗೆ ವಹಿಸಿತ್ತು. ಅವರು ಜನರಿಗೆ ತೊಂದರೆ ನೀಡಿದ್ದರು.

ಕೆಲವು ಫುಡ್‌ ಇನ್‌್ಸಪೆಕ್ಟರ್‌ಗಳು ಒಂದೇ ಕಡೆ 20 ರಿಂದ 30 ವರ್ಷ ಉಳಿದುಕೊಂಡಿದ್ದರು ಎಂದು ಹೇಳಿದರು.ದೇಶದ 15ಕ್ಕೂ ಹೆಚ್ಚು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇತ್ತೀಚೆಗೂ ತಮನ್ನು ಭೇಟಿ ಮಾಡಿದ್ದರು. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಾರ್ಡ್‌ಗಳ ಪರಿಷ್ಕರಣೆ ಮಾಡಿ, ಕೆಳ ಹಂತದ ಅಧಿಕಾರಿಗಳಿಗೆ ವಿವೇಚನಾಧಿಕಾರ ಬಳಸಲು ಅವಕಾಶ ನೀಡಬೇಡಿ ಎಂದು ಸಲಹೆ ನೀಡಿದ್ದೇನೆ ಎಂದರು.

ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆಯನ್ನು ನಾನು ಸಾರಸಗಟಾಗಿ ವಿರೋಧಿಸುವುದಿಲ್ಲ. ಅರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ ಎಂಬ ಕರ್ನಾಟಕ ಬಿಜೆಪಿಯ ಆರೋಪವನ್ನು ಕೂಡ ಪರಿಗಣಿಸಬೇಕಿದೆ ಎಂದರು.

ಕೇಂದ್ರ ಸರ್ಕಾರ ಯಾವುದೇ ಮಾನ ದಂಡಗಳನ್ನು ನಿಗದಿ ಮಾಡುವುದಿಲ್ಲ. ಅರ್ಹತೆ ಆಧಾರದ ಮೇಲೆ 2011ರ ಜನಗಣತಿ ಹಾಗೂ ಆಹಾರ ಭದ್ರತೆ ಕಾಯ್ದೆ ಅನುಸಾರ ನಗರ ಪ್ರದೇಶಗಳಲ್ಲಿ ಶೇ.50 ರಷ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಶೇ.75 ರಷ್ಟು ಜನಸಂಖ್ಯೆ, ಸರ್ಕಾರದ ರಿಯಾಯಿತಿ ಹಾಗೂ ಉಚಿತ ಪಡಿತರ ಪಡೆಯಲು ಅರ್ಹವಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಬಡವರಿಗೆ ಉಚಿತ ಪಡಿತರ ಪೂರೈಸುವುದನ್ನು ಆದ್ಯತೆಯನ್ನಾಗಿ ಪರಿಗಣಿಸಿದ್ದಾರೆ ಎಂದರು.

ಯಾರಿಗೆ ಉಚಿತ ಆಹಾರ ಧಾನ್ಯ ನೀಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಬೇಕಿದೆೆ. 7 ಎಕರೆಗಿಂತಲೂ ಹೆಚ್ಚಿನ ಭೂಮಿ ಹೊಂದಿರುವವರಿಗೆ ಬಿಪಿಎಲ್‌ ಸೌಲಭ್ಯ ನೀಡಬೇಕೇ? ಬೇಡವೇ? 8 ಎಕರೆ 9 ಎಕರೆ ಇರುವವರಿಗೂ ಉಚಿತ ಪಡಿತರ ನೀಡಬಹುದೇ? ವಾಹನಗಳನ್ನು ಹೊಂದಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ.

ಬೆನ್‌್ಜ ಕಾರು ಇರುವವರಿಗೂ ಬಿಪಿಎಲ್‌ ನೀಡುತ್ತೇವೆ ಎಂದರೆ ನಮ ವಿರೋಧ ಇಲ್ಲ. ಈ ಎಲ್ಲಾ ಅಂಶಗಳನ್ನು ತಮನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳಿಗೆ ವಿವರಿಸಿದ್ದೇನೆ ಎಂದು ತಿಳಿಸಿದರು.
ಈ ವಿಷಯದಲ್ಲಿ ರಾಜಕೀಯ ಮಾಡಲು ನಾನು ಬಯಸುವುದಿಲ್ಲ. ಕೆಲವು ಮುಖ್ಯಮಂತ್ರಿಗಳು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜನರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಆಹಾರ ಇಲಾಖೆ ಕಾರ್ಯದರ್ಶಿಗಳು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಹಾರ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಐಟಿ ರಿರ್ಟನ್‌ ಫೈಲ್‌ ಮಾಡಿದವರನ್ನು ಬಿಪಿಎಲ್‌ನಿಂದ ಕೈಬಿಡಬೇಕೆಂದು ಕೇಂದ್ರ ಸರ್ಕಾರ ಹೇಳಿಲ್ಲ. ಆದಾಯ ತೆರಿಗೆ ಪಾವತಿದಾರರನ್ನು ಬಿಪಿಎಲ್‌ನಿಂದ ಕೈಬಿಡಬೇಕು ಎಂಬ ಮಾನದಂಡವನ್ನು ರಾಜ್ಯಸರ್ಕಾರ ರೂಪಿಸಿಕೊಂಡಿದೆ.

ವರ್ಷಕ್ಕೆ 12 ಲಕ್ಷ ಆದಾಯ ಹೊಂದಿರುವವರು ಈ ವರ್ಷದಿಂದ ಆದಾಯ ತೆರಿಗೆ ಪಾವತಿಸುತ್ತಾರೆ. ಈ ಹಿಂದೆ 6 ಲಕ್ಷ ಆದಾಯ ಮಿತಿ ಇತ್ತು. ಆದಾಯ ತೆರಿಗೆ ಪಾವತಿಯ ಮಿತಿಯನ್ನು ನಿರ್ಧರಿಸುವುದು ಮತ್ತು ಪರಿಶೀಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದರು.
ಪ್ರತಿ 5 ವರ್ಷಕ್ಕೊಮೆ ಪರಿಶೀಲನೆ ನಡೆಸುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ. ಮೃತರ ಹೆಸರಿನಲ್ಲೂ ಕಾರ್ಡ್‌ಗಳು ಮುಂದುವರೆದಿದ್ದು, ಸೌಲಭ್ಯಗಳು ದುರುಪಯೋಗವಾಗುತ್ತಿವೆ ಎಂದು ಹೇಳಿದರು.

ವಿಶ್ವ ಬ್ಯಾಂಕ್‌ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ವರದಿಗಳ ಪ್ರಕಾರ 25 ಕೋಟಿ ಜನ ಕಡುಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂಬ ಮಾತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಶೀಲನೆ ಮಾಡಬೇಕಿದೆ. ಇದಕ್ಕೆ ತಮ ವಿರೋಧ ಇಲ್ಲ ಎಂದು ಜೋಶಿ ಹೇಳಿದರು.

ಬೆಂಗಳೂರಿನಲ್ಲಿ ಮಿತಿಮೀರಿದ ಪರಭಾಷಿಗರ ಹಾವಳಿ : ವಾಟಾಳ್‌ ಕಳವಳ

ಬೆಂಗಳೂರು,ಸೆ.17– ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿ ಮಿತಿಮೀರಿದೆ. ಖಾಸಗಿ ಶಾಲೆಗಳು ಕನ್ನಡ ಶತ್ರುಗಳು, ಕನ್ನಡಿಗರನ್ನು ಹೀನಾಯವಾಗಿ ಕಾಣುತ್ತಿರುವ ಧೋರಣೆ ಅತ್ಯಂತ ಖಂಡನೀಯ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದರು.

ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಕನ್ನಡವನ್ನು ಅಪಮಾನ ಮಾಡುವುದಷ್ಟೇ ಅಲ್ಲ, ಕನ್ನಡಿಗರನ್ನು ನಿರಂತರವಾಗಿ ಲೂಟಿ ಮಾಡುತ್ತಿವೆ. ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದವರಿಗೆ ದಂಡ ವಿಧಿಸುವ ಮೂಲಕ ಕನ್ನಡ ಭಾಷೆಗಷ್ಟೇ ಅಲ್ಲ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇದು ತೀವ್ರ ಖಂಡನೀಯ. ಇದು ಒಂದು ಶಾಲೆಯ ಪರಿಸ್ಥಿತಿ ಅಲ್ಲ. ಬಹುತೇಕ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕನ್ನಡಕ್ಕೆ ರಕ್ಷಣೆ ಇಲ್ಲದಂತಾಗಿದೆ. ಕನ್ನಡ ಶಕ್ತಿಹೀನವಾಗುತ್ತಿದೆ. ಇದರ ವಿರುದ್ಧ ಕೆಲವು ಕನ್ನಡ ಹೋರಾಟಗಾರರು ದನಿ ಎತ್ತುವುದನ್ನು ಹೊರತುಪಡಿಸಿದರೆ ಬೇರೆ ಯಾರೂ ಕೂಡ ಹೋರಾಟ ಮಾಡುವುದಿಲ್ಲ. ಇದು ದುರದೃಷ್ಟಕರ ಎಂದರು.

ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಅನುದಾನವಿಲ್ಲ. ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಕನ್ನಡವಿಲ್ಲ. ಹೀಗಾದರೆ ಕನ್ನಡ ಮಕ್ಕಳ ಪರಿಸ್ಥಿತಿ ಏನಾಗಬೇಕು? ಎಂದು ವಾಟಾಳ್‌ ಕಿಡಿಕಾರಿದರು.

ಕನ್ನಡದ ಬಗ್ಗೆ ಸಂಸತ್‌ನಲ್ಲಿ, ಶಾಸನ ಸಭೆಗಳಲ್ಲಿ ಹೋರಾಟ ಮಾಡದವರಿಂದ ಕನ್ನಡದ ಪರಿಸ್ಥಿತಿ ಕರುಣಾಜನಕವಾಗಿದೆ ಎಂದು ನೋವು ವ್ಯಕ್ತಪಡಿಸಿದರು.ಈ ಧೋರಣೆ ಮುಂದುವರೆದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕಕ್ಕೆ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸುರ್ಜೇವಾಲ ಒತ್ತಾಯ

ಬೆಂಗಳೂರು, ಸೆ.17- ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರವನ್ನು ತ್ವರಿತವಾಗಿ ಪೂರೈಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ಶಿವಾರಜ್‌ ಸಿಂಗ ಚೌಹಾಣ್‌ ಅವರಿಗೆ ಪತ್ರ ಬರೆದಿರುವ ಅವರು, ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು. ಕರ್ನಾಟಕದಲ್ಲಿ ಮುಂಗಾರು ಬೇಗ ಪ್ರಾರಂಭವಾಗಿದ್ದು ಸರಾಸರಿಗಿಂತ ಶೇ.3ರಷ್ಟು ಹೆಚ್ಚು ಮಳೆಯಾಗಿದ್ದರಿಂದ ಬಿತ್ತನೆ ನಿರೀಕ್ಷೆಗೂ ಮುಂಚೆ ಚಾಲನೆಯಾಗಿದೆ ಎಂದು ವಿವರಿಸಿದ್ದಾರೆ.

2025-26ನೇ ಸಾಲಿನಲ್ಲಿ ರಾಜ್ಯದಲ್ಲಿ 114.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 160.68 ಲಕ್ಷ ಟನ್‌ ಆಹಾರಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನಾ ಗುರಿ ಇದೆ. ಮುಂಗಾರು ಹಂಗಾಮಿಗೆ 82.50 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು 81.85 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 26.77 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿದೆ. 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಕೊರತೆ ಉಂಟಾಗಿದೆ. ರಾಜ್ಯಗಳಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು. ಕರ್ನಾಟಕದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಿಲ್ಲ ಎಂದು ಟೀಕಿಸಿದ್ದಾರೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ 2025ರವರೆಗೆ ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಬಾಕಿಯಿದೆ. ಕೇಂದ್ರ ಸರ್ಕಾರದಿಂದ ರಸಗೊಬ್ಬರ ಪೂರೈಕೆಯಲ್ಲಿ ಆಗಿರುವ ಕೊರತೆಯಿಂದ ಕರ್ನಾಟಕ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ. ಈ ವರ್ಷ ಯೂರಿಯಾ ಪೂರೈಕೆ ಪ್ರಮಾಣ ಶೇ.50ರಷ್ಟು ಕಡಿಮೆ ಆಗಿದೆ ಎಂದು ಅವರು ಹೇಳಿದ್ದಾರೆ.
ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕಕ್ಕೆ ಪೂರೈಸಬೇಕಿದ್ದ ಯೂರಿಯಾ ರಸಗೊಬ್ಬರವನ್ನು ಆದಷ್ಟು ಶೀಘ್ರದಲ್ಲಿ ಪೂರೈಸಬೇಕೆಂದು ಕರ್ನಾಟಕ ರಾಜ್ಯದ ರೈತರ ಪರವಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಿ ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರವನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಮಾನ್ಯ ಮಾಡಿ ರಾಜ್ಯದ ರೈತರ ಹಿತಕಾಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.