Thursday, November 6, 2025
Home Blog Page 103

ಮಾನವ ಅಂಗಾಂಗ ಕಸಿ ಕುರಿತು ಅಧಿಕಾರಯುತ ಸಮಿತಿಯನ್ನು ಪುನರ್‌ ರಚಿಸಿ ಸರ್ಕಾರ ಅಧಿಸೂಚನೆ

ಬೆಂಗಳೂರು, ಸೆ.17- ಮಾನವ ಅಂಗಾಂಗಳ ಮತ್ತು ಅಗಾಂಗ ಕಸಿ ಜೋಡಣೆಗಾಗಿ ರಾಜ್ಯ ಮಟ್ಟದ ಅಧಿಕಾರಯುತ ಸಮಿತಿಯನ್ನು ಪುನರ್‌ ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಹಿಂದಿನ ಸಮಿತಿಯ ಅಧಿಕಾರಾವಧಿ 2025ರ ಆಗಸ್ಟ್‌ 20ಕ್ಕೆ ಮುಕ್ತಾಯವಾಗಿತ್ತು. ಹೊಸ ಸಮಿತಿಯನ್ನು ಸೆ. 16ರಿಂದ ಅನುಷ್ಠಾನಕ್ಕೆ ಬರುವಂತೆ ರಚಿಸಲಾಗಿದೆ.

ಸಮಿತಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೋಯುರಾಲಾಜಿ ಸಂಸ್ಥೆಯ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಇತರ 6 ಮಂದಿ ಸದಸ್ಯರನ್ನು ನಿಯೋಜಿಸಲಾಗಿದೆ.

ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯ ನಿವಾಸಿಯಾಗಿರುವ ನಿವೃತ್ತ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಎಲ್‌. ಮೂರ್ತಿ, ಬಿಎಂಸಿಆರ್‌ಐ ಕಮ್ಯುನಿಟಿ ಮೆಡಿಷನ್‌ ಪ್ರಾಧ್ಯಾಪಕ ಹಾಗೂ ವಿಭಾಗೀಯ ಮುಖ್ಯಸ್ಥ ಡಾ.ಟಿ.ಎಸ್‌‍. ರಂಗನಾಥ್‌, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ.ಆರ್‌.ಕುಮಾರಸ್ವಾಮಿ, ಬಿಎಂಸಿಆರ್‌ಐ ವಾಣಿವಿಲಾಸ ಅಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಿತ್ರಾರಾಮಮೂರ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಅಥವಾ ಇವರನ್ನು ಪ್ರತಿನಿಧಿಸುವ ಉಪಕಾರ್ಯದರ್ಶಿ ವೃಂದಕ್ಕಿಂತಲೂ ಕಡಿಮೆ ದರ್ಜೆಯಲ್ಲಿರದ ನಾಮನಿರ್ದೇಶಿತ ಒಬ್ಬ ಅಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕರನ್ನು ಪ್ರತಿನಿಧಿಸುವ ಸಹ ನಿರ್ದೇಶಕರಿಗಿಂತ ಕಡಿಮೆ ದರ್ಜೆಯಲ್ಲಿರದ ನಾಮ ನಿರ್ದೇಶಿತ ಅಧಿಕಾರಿಯನ್ನು ಸದಸ್ಯನ್ನಾಗಿ ನೇಮಿಸಲಾಗಿದೆ.

ರಾಜ್ಯದಲ್ಲಿ ಅಂಗಾಂಗ ಕಸಿಗಾಗಿ ಲಕ್ಷಾಂತರ ಮಂದಿ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಸಮಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣಕ್ಕಾಗಿ ಸಾಕಷ್ಟು ಸಮಸ್ಯೆಯಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ರಾಜ್ಯಸರ್ಕಾರ ಅಧಿಕಾರಯುತ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ಕಲಬುರಗಿ : ಮದುವೆ ವಿಚಾರಕ್ಕೆ ಜಗಳದಲ್ಲಿ ಕೆರೆಗೆ ಹಾರಿ ತಾಯಿ-ಮಗಳು ಸಾವು

ಕಲಬುರಗಿ,ಸೆ.17– ಮದುವೆ ವಿಚಾರಕ್ಕೆ ನಡೆದ ಜಗಳದಲ್ಲಿ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ,ಆಳಂದ ತಾಲೂಕಿನ ತಡಕಲ್‌ ಗ್ರಾಮದಲ್ಲಿ ನಡೆದಿದೆ.ಮನನೊಂದು ಮಗಳು ಕೆರೆಗೆ ಹಾರಿದ್ದು,ಆಕೆಯನ್ನು ರಕ್ಷಣೆ ಮಾಡಲು ಹೋದ ತಾಯಿ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ,ಮೃತರನ್ನು ಮಧುಮತಿ ಹಂಗರಗಿ (22), ತಾಯಿ ಜಗದೇವಿ ಹಂಗರಗಿ (45) ಎಂದು ಗುರುತಿಸಲಾಗಿದೆ.

ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಧುಮತಿಗೆ ವಿವಾಹವಾಗುವಂತೆ ಮನೆಮಂದಿ ಪ್ರಸ್ತಾಪಿಸಿದ್ದರುಮತ್ತು ವರನ ಹುಡುಕಾಟವೂ ನಡೆದಿತ್ತು ಎಂದುಪೊಲೀಸರು ತಿಳಿಸಿದ್ದಾರೆ. ಕಳೆದ ಸೆ.14 ರಾತ್ರಿ ಮದುವೆ ವಿಷಯದಲ್ಲಿ ಮನೆಯವರು ಮತುಕತೆ ನಡೆಸುವಾಗ ಗಲಾಟೆ ನಡೆದಿತ್ತು, ಇದರಿಂದ ಮಧುಮತಿ ಮನನೊಂದಿದ್ದರು.

ಕಳೆದ ರಾತ್ರಿ 9ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದಳು. ಆಕೆಯನ್ನು ಹುಡುಕಿಕೊಂಡು ತಾಯಿ ಕೂಡ ಹೋಗಿದ್ದರು. ತಡರಾತ್ರಿಯಾದರೂ ತಾಯಿ, ಮಗಳು ಇಬ್ಬರೂ ಮನೆಗೆ ಮರಳದೆ ಇದ್ದುದ್ದರಿಂದ ಕುಟುಂಬಸ್ಥರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.

ನಂತರ ಕೆರೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದೆ. ಮಗಳ ಕೆರೆಗೆ ಹಾರಿರುವುದನ್ನು ಕಂಡ ತಾಯಿ, ಆಕೆಯ ರಕ್ಷಣೆಗೆ ಹೋಗಿ ತಾಯಿಯೂ ಮೃತಪಟ್ಟಿರಬೇಕು ಎಂದು ಶಂಕೆ ವ್ಯಕ್ತವಾಗಿದೆ.
ಆಳಂದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಾಜಿ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಬಂಧನ

ಬೆಂಗಳೂರು,ಸೆ.17-ಅಕ್ರಮ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮೂಡ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅವರನ್ನು ಬಂಧಿಸಿದೆ.
ಹಣ ವರ್ಗಾವಣೆ ವಿರೋಧಿ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಗೊತ್ತುಪಡಿಸಿದ ವಿಶೇಷ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸುವ ನಿರೀಕ್ಷೆಯಿದೆ, ಅಲ್ಲಿ ಸಂಸ್ಥೆ ಅವರ ಕಸ್ಟಡಿಗೆ ಅರ್ಜಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಡಾ ಅಕ್ರಮ ನಿವೇಶನಗಳ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕುಮಾರ್‌ಗೆ ಸಂಬಂಧಿಸಿದ ಬೆಂಗಳೂರಿನಲ್ಲಿರುವ ಎರಡು ವಸತಿ ಆವರಣಗಳನ್ನು ಇಡಿ ಶೋಧಿಸಿದ ನಂತರ ಈ ಬಂಧನ ನಡೆದಿದೆ.ಇಡಿ ಪ್ರಕಾರ, ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಕುಮಾರ್‌ ಸಂತೋಷ ಮತ್ತು ವಿಶಿಷ್ಟ ಪ್ರಯೋಜನಗಳ ಬದಲಿಗೆ ಮುಡಾ ನಿವೇಶನಗಳ ದೊಡ್ಡ ಪ್ರಮಾಣದ ಅಕ್ರಮ ಹಂಚಿಕೆಯಲ್ಲಿ ತೊಡಗಿದ್ದಾರೆ.

ಹಣ ವರ್ಗಾವಣೆ ಚಟುವಟಿಕೆಗಳಲ್ಲಿ ಅವರು ಸಕ್ರಿಯ ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ ಎಂದು ಇಡಿ ಮೂಲಗಳು ತಿಳಿಸಿವೆ.ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಸಿಎಂ ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ, ಸ್ವಾಮಿ ತನಿಖೆಯಲ್ಲಿರುವ ಭೂಮಿಯನ್ನು ಖರೀದಿಸಿ ಪಾರ್ವತಿಗೆ ಉಡುಗೊರೆಯಾಗಿ ನೀಡಿದ ದೇವರಾಜು ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಆಧರಿಸಿ, ಮುಡಾ ಭೂ ಹಂಚಿಕೆ ಪ್ರಕರಣದಲ್ಲಿ ಇಡಿ ಹಣ ಅಕ್ರಮ ವರ್ಗಾವಣೆ ತನಿಖೆ ನಡೆಸುತ್ತಿದೆ.

ಭದ್ರತಾ ತಪಾಸಣೆಯಿಂದ ವಿಮಾನ ತಪ್ಪಿಸಿಕೊಂಡ ಶೂಟಿಂಗ್‌ ಚಾಂಪಿಯನ್‌ಶಿಪ್‌ಗೆ ತೆರಳುತ್ತಿದ್ದ ಶೂಟರ್‌ಗಳು

ಪುಣೆ, ಸೆ.17- ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಗೋವಾಕ್ಕೆ ತೆರಳಲು ಪುಣೆಯ ಆರು ರೈಫಲ್‌ ಮತ್ತು ಪಿಸ್ತೂಲ್‌ ಶೂಟರ್‌ಗಳು ಇಲ್ಲಿನ ಪೂಣೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ತಮ್ಮ ಬಂದೂಕುಗಳು ಮತ್ತು ಮದ್ದುಗುಂಡುಗಳ ತಪಾಸಣೆ ವಿಳಂಬವಾದ ಕಾರಣ ತಮ ವಿಮಾನ ಪ್ರಯಾಣ ತಪ್ಪಿಸಿಕೊಂಡಿದ್ದಾರೆ.

18 ವರ್ಷದೊಳಗಿನ ಶೂಟರ್‌ಗಳೆಲ್ಲರೂ ಗೋವಾದಲ್ಲಿ ನಡೆಯಲಿರುವ 12 ನೇ ಪಶ್ಚಿಮ ವಲಯ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅಕಾಸಾ ಏರ್‌ ವಿಮಾನದಲ್ಲಿ ಹಾರಾಟ ನಡೆಸಬೇಕಿತ್ತು.

ಈ ಸಂಚಿಕೆಗೆ ಪ್ರತಿಕ್ರಿಯಿಸಿದ ಅಕಾಸಾ ಏರ್‌ ವಿಶೇಷ ಶೂಟಿಂಗ್‌ ಉಪಕರಣಗಳನ್ನು ಒಳಗೊಂಡಿರುವ ಅವರ ಸಾಮಾನುಗಳನ್ನು ಒಳಗೊಂಡ ವಿಸ್ತೃತ ಭದ್ರತಾ ಕಾರ್ಯವಿಧಾನಗಳು ಕಾರಣ ಶೂಟರ್‌ಗಳು ವಿಮಾನ ಹತ್ತಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ. ಅದರ ವಿಮಾನಯಾನ ಸಿಬ್ಬಂಧಿ ಅಗತ್ಯ ಸಹಾಯವನ್ನು ನೀಡುತ್ತಿವೆ ಮತ್ತು ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಕ್ರೀಡಾಪಟುಗಳು ಒಲಿಂಪಿಯನ್‌ ಗಗನ್‌ ನಾರಂಗ್‌ ಸ್ಥಾಪಿಸಿದ ಶೂಟಿಂಗ್‌ ಅಕಾಡೆಮಿಯಾದ ಗನ್‌ ಫಾರ್‌ ಗ್ಲೋರಿಯಿಂದ ಬಂದಿದ್ದರು.ಸ್ಪರ್ಧಿಯೊಬ್ಬರ ತಂದೆ ಅತುಲ್‌ ಕ್ಷೀರಸಾಗರ್‌ ಮಾಧ್ಯಮದ ಜೊತೆ ಮಾತನಾಡಿ ವಿಮಾನ ಮಂಗಳವಾರ ಸಂಜೆ 5.30 ಕ್ಕೆ ಹೊರಡಬೇಕಿತ್ತು ಮತ್ತು ಏಳು ಶೂಟರ್‌ಗಳು ಮತ್ತು ನಾಲ್ವರು ಕುಟುಂಬ ಸದಸ್ಯರು ಮಧ್ಯಾಹ್ನ 2.30 ರಿಂದ 3.30 ರ ನಡುವೆ ವಿಮಾನ ನಿಲ್ದಾಣ ತಲುಪಿದರು ಎಂದು ಹೇಳಿದರು.

ಆದಾಗ್ಯೂ, ವಿಮಾನ ನಿಲ್ದಾಣದ ಸಿಬ್ಬಂದಿ ಸಂಜೆ 5 ಗಂಟೆಯವರೆಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ತಪಾಸನೆ ವಿಳಂಬಗೊಳಿಸಿದರು ಇದರಿಂಸ ಸ್ಪರ್ಧಿಗಳು ತಮೊಂದಿಗೆ ಮದ್ದುಗುಂಡುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದರು. ವಾಸ್ತವದಲ್ಲಿ, ಯಾವುದೇ ಶೂಟರ್‌ ಗನ್‌ ಮತ್ತು ಮದ್ದುಗುಂಡುಗಳನ್ನು ಒಟ್ಟಿಗೆ ಕೊಂಡೊಯ್ಯುವುದಿಲ್ಲ.

ಎರಡನ್ನೂ ಪ್ರತ್ಯೇಕವಾಗಿ ಪ್ಯಾಕ್‌ ಮಾಡಲಾಗುತ್ತದೆ ಮತ್ತು ಕ್ಲಿಯರೆನ್‌್ಸಸಮಯದಲ್ಲಿ, ವಿಮಾನಯಾನ ಸಂಸ್ಥೆಯು ಶೂಟಿಂಗ್‌ ಕಿಟ್‌ ಅನ್ನು ವಶಕ್ಕೆ ತೆಗೆದುಕೊಳ್ಳುತ್ತದೆ, ರಶೀದಿಯನ್ನು ನೀಡುತ್ತದೆ ಮತ್ತು ರಶೀದಿಯ ವಿರುದ್ಧ ಗಮ್ಯಸ್ಥಾನದಲ್ಲಿ ಕಿಟ್‌ ಅನ್ನು ಹಿಂತಿರುಗಿಸಲಾಗುತ್ತದೆ ಎಂದು ಅವರು ಹೇಳಿದರು.

ಒಬ್ಬ ಹುಡುಗಿ ಶೂಟರ್‌ ತನ್ನ ಕಿಟ್‌ ಇಲ್ಲದೆ ವಿಮಾನ ಹತ್ತುವಲ್ಲಿ ಯಶಸ್ವಿಯಾದರು, ಆದರೆ ಇತರ ಆರು ಜನರನ್ನು ತಡೆಹಿಡಿಯಲಾಯಿತು.ನಂತರ ವಿಮಾನವು ಅವರಿಲ್ಲದೆ ವಿಮಾನ ಹೊರಟಿತು ಎಂದು ಅವರು ಹೇಳಿದರು.

ಸುಗಮ ಸೌಲಭ್ಯದ ಬದಲು, ಸಿಬ್ಬಂದಿ ಪ್ರಕ್ರಿಯೆಯನ್ನು ವಿಳಂಬ ಮಾಡಿದರು, ಕೌಂಟರ್‌ನಲ್ಲಿ ಸಹಕರಿಸಲಿಲ್ಲ ಮತ್ತು ಅಂತಿಮವಾಗಿ ಕ್ರೀಡಾಪಟುಗಳು, ತರಬೇತುದಾರರು ಮತ್ತು ಪೋಷಕರಿಗೆ ಬೋರ್ಡಿಂಗ್‌ ನಿರಾಕರಿಸಿದರು ಎಂದು ಅದು ಹೇಳಿದೆ.ಸರಿಯಾದ ಚೆಕ್‌‍-ಇನ್‌ ಹೊರತಾಗಿಯೂ ಆಕಾಶ ಸಿಬ್ಬಂದಿ ವಿಮಾನ ಹತ್ತಿದ ಒಬ್ಬ ಕ್ರೀಡಾಪಟುವಿನ ರೈಫಲ್‌ ಅನ್ನು ಪುಣೆ ವಿಮಾನ ನಿಲ್ದಾಣದಲ್ಲಿ ತಡೆಹಿಡಿದಿದ್ದಾರೆ ಎಂದು ಶೂಟಿಂಗ್‌ ಅಕಾಡೆಮಿ ಆರೋಪಿಸಿದೆ.

ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಆಯೋಜಿಸಲಾಗುತ್ತಿದೆ. ಉಂಟಾದ ಅನಾನುಕೂಲತೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದು ಅಕಾಸಾ ಏರ್‌ ತಿಳಿಸಿದೆ .ಪ್ರಯಾಣಿಕರ ಯೋಗಕ್ಷೇಮವು ನಮ ಪ್ರಮುಖ ಆದ್ಯತೆಯಾಗಿದೆ ಮತ್ತು ಅಗತ್ಯ ಪ್ರೋಟೋಕಾಲ್‌ಗಳು ಸುಗಮ ಮತ್ತು ವಿಶ್ವಾಸಾರ್ಹ ಪ್ರಯಾಣದ ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಕೇರಳದ ಮಲಪ್ಪುರಂನ ಮನೆಯೊಂದರಲ್ಲಿ ಸಂಗ್ರಹಿಸಲಾಗಿದ್ದ ಶಸ್ತ್ರಾಸ್ತ್ರ ವಶ

ಮಳ್ಳಾಪುರ, ಸೆ.17-ಇಲ್ಲಿನ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಪತ್ತೆಮಾಡಿದ್ದಾರೆ.ಮನೆಯ ಮಾಲೀಕ ಉನ್ನಿಕಮದ್‌(65)ನನ್ನುಬಂಧಿಸಲಾಗಿದ್ದು ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಡವಣ್ಣ ಪೊಲೀಸ್‌‍ ಠಾಣೆಯ ವ್ಯಾಪ್ತಿಯಲ್ಲಿ ಗೌಪ್ಯ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯ ನಿವಾಸದಿಂದ 20 ಏರ್‌ ಗನ್‌ಗಳು, ಮೂರು ರೈಫಲ್‌ಗಳು, ಸುಮಾರು 200 ಗುಂಡುಗಳು ಮತ್ತು 40 ಪೆಲೆಟ್‌ ಬಾಕ್‌್ಸಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದ್ದು, ಆ ಶಸ್ತ್ರಾಸ್ತ್ರಗಳು ಮಾರಾಟಕ್ಕೆ ಅಥವಾ ವೈಯಕ್ತಿಕ ಬಳಕೆಗೆ ಉದ್ದೇಶಿಸಲಾಗಿದೆಯೇ ಮತ್ತು ಆರೋಪಿ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಎಲ್ಲಿಂದ ಖರೀದಿಸಿದ್ದಾನೆ ಎಂಬುದನ್ನು ಕಂಡುಹಿಡಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

75ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ : ವಿಶ್ವದ ನಾಯಕರು ಸೇರಿದಂತೆ ಗಣ್ಯರಿಂದ ಶುಭಹಾರೈಕೆ

ನವದೆಹಲಿ,ಸೆ.17- 75ನೇ ವಸಂತಕ್ಕೆ ಕಾಲಿಟ್ಟ ಭಾರತದ ಪ್ರಧಾನಿ ನರೇಂದ್ರಮೋದಿ ಅವರಿಗೆ ವಿಶ್ವದ ನಾಯಕರು ಸೇರಿದಂತೆ ಅನೇಕ ಗಣ್ಯರು ಹುಟ್ಟುಹಬ್ಬದ ಸುಭಾಷಯಗಳನ್ನು ಕೋರಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಅನೇಕ ಗಣ್ಯರು ಮೋದಿಗೆ ಶುಭಾಷಯಗಳನ್ನು ಕೋರಿ ಹಾರೈಸಿದ್ದಾರೆ.

ಇಂದು ಜಾಗತಿಕ ಸಮುದಾಯವು ನಿಮ ಮಾರ್ಗದರ್ಶನದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುತ್ತಿದೆ. ನಿಮ ಅಸಾಧಾರಣ ನಾಯಕತ್ವದ ಮೂಲಕ ಕಠಿಣ ಪರಿಶ್ರಮದ ಪರಾಕಾಷ್ಟೆಯನ್ನು ನಿರೂಪಿಸುವ ನೀವು ದೇಶದಲ್ಲಿ ಉತ್ತಮ ಗುರಿಗಳನ್ನು ಸಾಧಿಸುವ ಸಂಸ್ಕೃತಿ ಹುಟ್ಟು ಹಾಕಿದ್ದೀರಿ.
ನೀವು ಹೆಚ್ಚು ಆರೋಗ್ಯವಾಗಿರಬೇಕೆಂದು ಮತ್ತು ಸಂತೋಷವಾಗಿರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶವನ್ನ ಇನ್ನಷ್ಟು ಎತ್ತರಕ್ಕೆ ಕೊಂಡಿಯ್ಯಿರಿ ಎಂದು ಮುರ್ಮು ಅವರು ಎಕ್‌್ಸನಲ್ಲಿ ಮೋದಿಗೆ ಶುಭ ಕೋರಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿ, ನಿಮ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ಛಾಪು ಮೂಡಿಸುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯತ್ತ ಚಿರವಾಗಿ ಚಲಿಸುತ್ತಿದೆ. ದೇವರು ನಿಮಗೆ ಇನ್ನಷ್ಟು ದೇಶ ಸೇವೆಯನ್ನು ಮಾಡಲು ಆರೋಗ್ಯ ನೀಡಲಿ ಎಂದು ಹಾರೈಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮೋದಿಯವರಿಗೆ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದು, ನಿಮ ನಾಯಕತ್ವದಲ್ಲಿ ಅಸಾಧಾರಣವಾಗಿ ದೇಶ ಮುನ್ನುಗುತ್ತಿದೆ. ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ನಿಮ ಸೇವೆ ಇದೇ ರೀತಿ ಮುಂದುವರೆಯಲಿ ಎಂದಿದ್ದಾರೆ.

ಕೇಂದ್ರ ಸಚಿವರಾದ ಅಮಿತ್‌ ಶಾ, ಜೆ.ಪಿ.ನಡ್ಡ, ರಾಜನಾಥ್‌ ಸಿಂಗ್‌, ಎಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ್‌ ಜೋಷಿ, ನಿರ್ಮಲ ಸೀತಾರಾಮನ್‌, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್‌, ದೇವೇಂದ್ರ ಫಡ್ನವೀಸ್‌‍, ಹಿಮಂತ್‌ ಬಿಸ್ವಾಸ್‌‍, ರೇಖಾ ಗುಪ್ತ, ರೇವಂತ್‌ ರೆಡ್ಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಅನೇಕರು ಪ್ರಧಾನಿಗೆ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ.

ಚಿಕ್ಕಬಳ್ಳಾಪುರ : ಒಂದೇ ದಿನ ಇಬ್ಬರು ರೈತರ ಮೇಲೆ ಕರಡಿ ದಾಳಿ

ಚಿಕ್ಕಬಳ್ಳಾಪುರ, ಸೆ 17– ಒಂದೇ ದಿನ ಒಂದೇ ಕರಡಿ ಇಬ್ಬರು ರೈತರ ಮೇಲೆ ದಾಳಿ ಮಾಡಿರುವ ಘಟನೆ ತಾಲ್ಲೂಕಿನ ಪೋಶೆಟ್ಟಿಹಳ್ಳಿ ಬಳಿಯ ಗುರುಕಲನಾಗೇನಹಳ್ಳಿಯಲ್ಲಿ ನಡೆದಿದೆ. ಕರಡಿಯಿಂದ ದಾಳಿಗೆ ಒಳಗಾದ ಗಾಯಾಳುಗಳನ್ನು ತಾಲೂಕಿನ ಬಾಲಕುಂಟಹಳ್ಳಿಯ ಕೃಷ್ಣಪ್ಪ ಹಾಗೂ ಗುರುಕಲನಾಗೇನಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.

ಗುರುಕಲನಾಗೇನಹಳ್ಳಿ ಗ್ರಾಮದ ನರಸಿಂಹಮೂರ್ತಿ ತಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಪ್ರತ್ಯಕ್ಷವಾದ ಕರಡಿ ಅವರ ಮೇಲೆ ದಾಳಿ ನಡೆಸಿದೆ. ಕರಡಿಯ ದಾಳಿಗೆ ನರಸಿಂಹಮೂರ್ತಿಯ ಎಡಗಣ್ಣು, ಹಣೆ, ಮುಖ ಮತ್ತು ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ದಾಳಿಯಿಂದ ಕಂಗಾಲಾದ ನರಸಿಂಹಮೂರ್ತಿ ಕಿರುಚಾಟ ಕೇಳಿ ಅಕ್ಕಪಕ್ಕದ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಬಂದು ಕರಡಿಯನ್ನು ಓಡಿಸಿದ್ದಾರೆ. ಅಲ್ಲಿಂದ ಕಾಲ್ಕಿತ್ತ ಕರಡಿ ಬಾಳೆ ತೋಟವೊಂದರಲ್ಲಿ ಸೇರಿಕೊಂಡಿದೆ.

ಬಾಲಕುಂಟಹಳ್ಳಿ ಗ್ರಾಮದ ಕೃಷ್ಣಪ್ಪ ಗುರುಕುಲನಾಗೇನಹಳ್ಳಿ ಬಳಿಯ ತಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಬಾಳೆ ತೋಟದಿಂದ ಏಕಾಏಕಿ ಬಂದ ಕರಡಿಯು ಅವರ ಎಡಗೈ ಕಚ್ಚಿ ಹಿಡಿದು ಪರಚಿ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರು ಕೂಗಿಕೊಂಡಾಗ ಅಕ್ಕಪಕ್ಕದ ಜನತೆ ಬಂದಿದ್ದಾರೆ. ಜನ ಬಂದ ಹಿನ್ನೆಲೆಯಲ್ಲಿ ಕರಡಿ ಅವರನ್ನು ಬಿಟ್ಟು ಅಲ್ಲಿಂದ ಪಲಾಯನ ಮಾಡಿದೆ.

ಸ್ಥಳೀಯರು ಕೂಡಲೆ ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-09-2025)

ನಿತ್ಯ ನೀತಿ : ಸರಿ ತಪ್ಪುಗಳನ್ನು ಹುಡುಕುತ್ತಾ ಕುಂತರೆ ಯಾವ ಸಂಬಂಧವೂ ಉಳಿಯುವುದಿಲ್ಲ. ನಂಬಿಕೆಯಿಂದ ಜೊತೆಗೆ ಇದ್ದರೆ ಯಾವ ಸಂಬಂಧವೂ ದೂರ ಆಗುವುದಿಲ್ಲ.- ಶ್ರೀಕೃಷ್ಣ

ಪಂಚಾಂಗ : ಬುಧವಾರ, 17-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ಏಕಾದಶಿ / ನಕ್ಷತ್ರ: ಪುನರ್ವಸು / ಯೋಗ: ಪರಿಘ / ಕರಣ: ಬವ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.20
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಹೊಸ ಜನರನ್ನು ಭೇಟಿ ಮಾಡುವುದರಿಂದ ನಿಮಗೆ ಹೆಚ್ಚು ಪ್ರಯೋಜನವಾಗಲಿದೆ.
ವೃಷಭ: ಕೆಲವು ಕಾರಣಗಳಿಂದ ತೊಂದರೆಗೊಳಗಾಗಬಹುದು. ಪೋಷಕರ ಆಶೀರ್ವಾದ ಪಡೆಯಿರಿ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚ ಲಿದೆ. ಕುಟುಂಬದಲ್ಲಿ ಪೋಷಕರ ಬೆಂಬಲ ಸಿಗಲಿದೆ.

ಕಟಕ: ವೃತ್ತಿಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.
ಸಿಂಹ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿ ಅಥವಾ ಹಣ ದೊರೆಯುವ ಅವಕಾಶಗಳು ಹೆಚ್ಚಾಗಿವೆ.
ಕನ್ಯಾ: ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಲ್ಲಿ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗುವಿರಿ.

ತುಲಾ: ಮಾತು, ನಡವಳಿಕೆ ಯಿಂದ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಾ ಸುವಿರಿ.
ವೃಶ್ಚಿಕ: ಆರೋಗ್ಯದ ಕೊರತೆಯಿಂದ ಹಣಕಾಸಿನ ಸ್ಥಿತಿಯೂ ದುರ್ಬಲಗೊಳ್ಳುವ ಸಾಧ್ಯತೆ ಇದೆ.
ಧನುಸ್ಸು: ಹಣಕ್ಕೆ ಸಂಬಂ ಸಿದ ವಿಷಯಗಳ ಬಗ್ಗೆ ನೆರೆಹೊರೆಯವರೊಂದಿಗೆ ಹೆಚ್ಚು ಜಾಗರೂಕರಾಗಿರಿ.

ಮಕರ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದು ಕೊಳ್ಳುವುದನ್ನು ತಪ್ಪಿಸಿ.
ಕುಂಭ: ಸಾರ್ವಜನಿಕ ರಂಗದಲ್ಲಿ ದುಡಿಯುವವರಿಗೆ ಮಹತ್ವದ ಜವಾಬ್ದಾರಿ ಬರಲಿದೆ.
ಮೀನ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂ ಸಿದ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.

ಮಕ್ಕಳಿಗೆ ಜೀವನ ಮೌಲ್ಯದ ಜೊತೆಗೆ ಸಂಪ್ರದಾಯ ಕಲಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ: ಜಯೇಂದ್ರ ಪುರಿ ಮಹಾಸ್ವಾಮೀಜಿ

ಬೆಂಗಳೂರು: ಜ್ಞಾನ ದೀವಿಗೆಯಾಗಿರುವ ಶಿಕ್ಷಕರು, ಮೌಲ್ಯವನ್ನು ಮಕ್ಕಳಲ್ಲಿ ತುಂಬುವುದರ ಜೊತೆಗೆ ಹೊಸ ತಲೆಮಾರುಗಳಿಗೆ ನಮ್ಮ ಸಂಸ್ಕೃತಿಯನ್ನು ಪಸರಿಸುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ಕೈಲಾಸ ಮಠದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಹೇಳಿದರು. ಸ್ಪರ್ಶ್‌ ಆಸ್ಪತ್ರೆ ವತಿಯಿಂದ ಮಂಗಳವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಆಯ್ದ ಶಿಕ್ಷಕರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ಮಕ್ಕಳಲ್ಲಿ ಆದರ್ಶ ಹಾಗೂ ಮೌಲ್ಯ ತುಂಬುವವ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು. ಇಂದು ಶಿಕ್ಷಣದ ಮೌಲ್ಯಗಳ ಜೊತೆಗೆ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವತ್ತಲೂ ಶಿಕ್ಷಕರು ಮಕ್ಕಳಿಗೆ ಶಾಲೆಗಳಿಂದಲೇ ಅರಿವು ಮೂಡಿಸಬೇಕು.ಇದರಿಂದ ಮಾತ್ರ ಮಕ್ಕಳು ಉತ್ತಮ ಆಹಾರ ಸೇವನೆಯತ್ತ ಗಮನ ನೀಡುತ್ತಾರೆ ಎಂದರು. ಆರ್‌.ಆರ್‌.ನಗರ ಸ್ಪರ್ಶ್‌ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರದ ಹಿರಿಯ ಸಮಾಲೋಚಕಿ ಡಾ.ಚಂದ್ರಿಕಾ ಆನಂದ್‌ ಮಾತನಾಡಿ, ಶಿಕ್ಷಣವು ಕೇವಲ ಮಕ್ಕಳ ಶೈಕ್ಷಣಿಕ ಪಯಣ ಮಾತ್ರವಲ್ಲ ಜೀವನದ ಪಾಠವನ್ನು ಕಲಿಸಿಕೊಡುತ್ತದೆ. ಈ ಪಾಠ ಅವರ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ.

ಮಕ್ಕಳ ಮುಗ್ಧ ಮನಸ್ಸುಗಳನ್ನು ಮೌಲ್ಯಯುತವಾಗಿ ರೂಪಿಸುವುದರ ಜೊತೆಗೆ ಅವರಲ್ಲಿ ಸಾಮಾಜಿಕ ಮೌಲ್ಯಗಳನ್ನೂ ತುಂಬುವ ಶಿಕ್ಷಕರನ್ನು ಗೌರವಿಸುವುದರಲ್ಲಿ ನಮ್ಮ ನಂಬಿಕೆಯ ಪ್ರತೀಕವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಸ್ಪರ್ಶ್‌ ಆಸ್ಪತ್ರೆಯು ಸಮುದಾಯ ಮತ್ತು ಸಮಾಜದೊಂದಿಗೆ ಹೊಂದಿರುವ ಆಳವಾದ ಸಂಪರ್ಕ ಮತ್ತು ಕಾಳಜಿಯ ದ್ಯೋತಕವಾಗಿದೆ. ವಿಶ್ವ ದರ್ಜೆಯ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ, ತಾಯಿ ಮತ್ತು ಮಕ್ಕಳ ಚಿಕಿತ್ಸೆ ಹಾಗೂ ಇತರೇ ವಿಶೇಷ ವೈದ್ಯಕೀಯ ಸೌಕರ್ಯಗಳನ್ನು ವೈದ್ಯಕೀಯ ಶಿಬಿರಗಳ ರೂಪದಲ್ಲೂ ಸ್ಪರ್ಶ್‌ ಆಸ್ಪತ್ರೆ ಆಯೋಜಿಸುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ಅಪರಿಮಿತ ಅವಕಾಶಗಳ ಮೂಲಕ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ಗೌರವಿಸಲು ಹೆಮ್ಮೆಯೆನಿಸುತ್ತಿದೆ. ಈ ಮೂಲಕ ಶಿಕ್ಷಣ ಮತ್ತು ಆರೋಗ್ಯ ಆರೈಕೆ ಆಧುನಿಕ ಸಮಾಜದ ತಳಹದಿಯಾಗಿದೆ ಎಂಬುದನ್ನು ನೆನಪಿಸುತ್ತದೆ ಎಂದು ಆರ್‌.ಆರ್‌.ನಗರ ಸ್ಪರ್ಶ್‌ ಆಸ್ಪತ್ರೆ ವೃದ್ಧರ ಚಿಕಿತ್ಸಾ ವಿಭಾಗದ ಹಿರಿಯ ಸಮಾಲೋಚಕಿ, ಡಾ.ನಿಶ್ಮಿತಾ ಆರ್‌ ಅಭಿಪ್ರಾಯಪಟ್ಟರು.

ಸ್ಪರ್ಶ್‌ ಆಸ್ಪತ್ರೆ ಆರ್‌.ಆರ್‌.ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಲ್‌ ರಾಹುಲ್‌ ತಿವಾರಿ ಮಾತನಾಡಿ ಸವಾಲುಗಳ ನಡುವೆಯೂ ಶಿಕ್ಷಕರು ಮಕ್ಕಳಲ್ಲಿ ಸ್ಫೂರ್ತಿ ತುಂಬುತ್ತಾರೆ. ಶಿಕ್ಷಕರ ಬದ್ಧತೆಯು ವೈದ್ಯಕೀಯ ಕ್ಷೇತ್ರದಂತೆ ಸೇವೆ ಮತ್ತು ಸಹಾನುಭೂತಿಯ ಪ್ರತೀಕವಾಗಿದೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳ ನಡುವಿನ ಸೇತುವಾಗಿ ಸ್ಪರ್ಶ್‌ ಆಸ್ಪತ್ರೆಯ ಈ ಕಾರ್ಯಕ್ರಮ ಆಯೋಜಿತವಾಗಿದೆ ಎಂದರು.
ಸ್ಪರ್ಶ್‌ ಆಸ್ಪತ್ರೆ ವ್ಯವಹಾರಗಳ ಮುಖ್ಯಸ್ಥ ವಿಶ್ವನಾಥ್‌ ಶೆಟ್ಟಿ, ಸ್ಪರ್ಶ್‌ ಆಸ್ಪತ್ರೆ ಸಮೂಹದ ಹಿರಿಯ ವೈದ್ಯರು ಮತ್ತು ಸ್ಪರ್ಶ್‌ ಆಸ್ಪತ್ರೆ ಸಿಬ್ಬಂದಿ ಮೊದಲಾದವರು ಭಾಗವಹಿಸಿದ್ದರು.

ವಿಶ್ವದ ಅತಿದೊಡ್ಡ IMECE ಇಂಡಿಯಾ ಸಮಾವೇಶ ಯಶಸ್ವಿ

ಬೆಂಗಳೂರು: ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ (ASME) ಮೊದಲ ಬಾರಿಗೆ ಆಯೋಜಿಸಿದ್ದ ವಿಶ್ವದ ಅತಿದೊಡ್ಡ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್, ಅಂತಾರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್ ಮತ್ತು ಎಕ್ಸ್‌ಪೋಸಿಷನ್ (IMECE) ಇಂಡಿಯಾ 2025 ಯಶಸ್ವಿಗೊಂಡಿದೆ.

ಈ ಕಾರ್ಯಕ್ರಮವು ಚಿಂತನೆಗೆ ಹಚ್ಚುವ ಪ್ರಮುಖ ಭಾಷಣಗಳು, ನೀತಿ ಸಂವಾದಗಳೊಂದಿಗೆ ಎಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಭಾರತದ ನಾಯಕತ್ವವನ್ನು ಎತ್ತಿ ತೋರಿಸಿದೆ. ಈ ಕಾರ್ಯಕ್ರಮವು ಸಂಶೋಧನೆ, ಶಿಕ್ಷಣ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಸಹಯೋಗವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ASME ಮತ್ತು ICT ಅಕಾಡೆಮಿ ಆಫ್ ಕೇರಳದ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು. ಆಂಧ್ರಪ್ರದೇಶ ಸರ್ಕಾರದ MSME ಸಚಿವ ಶ್ರೀನಿವಾಸ್ ಕೊಂಡಪಲ್ಲಿ ಮಾತನಾಡಿ, ಮೆಕ್ಯಾನಿಕಲ್‌ ಇಂಜಿನಿಯರ್ಸ್‌ ಸಮಾವೇಶವು ಇಡೀ ದೇಶದಲ್ಲಿ ಇಂಜಿನಿಯರ್ಸ್‌ಗಳಿಗೆ ಇರುವ ಅವಕಾಶಗಳ ಬಗ್ಗೆ ಎತ್ತಿ ಹಿಡಿಯುತ್ತದೆ.

ಮೂಲಸೌಕರ್ಯ, ವಲಯ ಉದ್ಯಾನವನ ಮತ್ತು ನಾವೀನ್ಯತೆ ಕೇಂದ್ರಗಳನ್ನು ಹೊಂದಿರುವ ಆಂಧ್ರಪ್ರದೇಶವು ಉತ್ಪಾದನೆ, MSME ಗಳು ಮತ್ತು ರಫ್ತುಗಳಿಗೆ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ – ಭಾರತದ ಒಟ್ಟು ರಫ್ತಿಗೆ ಸುಮಾರು 8% ಕೊಡುಗೆ ನೀಡುತ್ತದೆ. ಭವಿಷ್ಯದ ನೀತಿಗಳು, ಹೂಡಿಕೆ-ಸಿದ್ಧ ಕೈಗಾರಿಕಾ ನೋಡ್‌ಗಳು ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಮೂಲಕ, ರಾಜ್ಯವು ಕೈಗಾರಿಕೆಗಳು ಮತ್ತು ನವೋದ್ಯಮಗಳಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತಿದೆ.

IMECE ಭಾರತವು ಜಾಗತಿಕ ಸಹಯೋಗಗಳನ್ನು ಸಕ್ರಿಯಗೊಳಿಸುವ ಮೂಲಕ, ಎಂಜಿನಿಯರಿಂಗ್ ಸಂಶೋಧನೆಯನ್ನು ಮುಂದುವರೆಸುವ ಮೂಲಕ ಮತ್ತು ಭಾರತವನ್ನು ನಾವೀನ್ಯತೆ-ಚಾಲಿತ ಆರ್ಥಿಕತೆಯಾಗಿ ಮರುಕಲ್ಪಿಸಲು ಶೈಕ್ಷಣಿಕ-ಉದ್ಯಮ ಪಾಲುದಾರಿಕೆಗಳನ್ನು ಬಲಪಡಿಸುವ ಮೂಲಕ ಈ ದೃಷ್ಟಿಕೋನವನ್ನು ಸಂಪೂರ್ಣವಾಗಿ ಪೂರೈಸುತ್ತದೆ. ಒಟ್ಟಾಗಿ, ಭಾರತವು ಸುಸ್ಥಿರ ನಾವೀನ್ಯತೆ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ಜಗತ್ತನ್ನು ಮುನ್ನಡೆಸುವ ಭವಿಷ್ಯಕ್ಕಾಗಿ ನಾವು ಅಡಿಪಾಯ ಹಾಕುತ್ತಿದ್ದೇವೆ.” ಸ್ಕೈರೂಟ್ ಏರೋಸ್ಪೇಸ್‌ನ ಸಹ-ಸಂಸ್ಥಾಪಕರಾದ ಶ್ರೀ ಪವನ್ ಕುಮಾರ್ ಚಂದನ, IMECE 2025 ರಲ್ಲಿನ ತಮ್ಮ ಅನುಭವದಿಂದ ಸಂತೋಷಗೊಂಡಿದ್ದಾರೆ, “ಭಾರತ ಇನ್ನು ಮುಂದೆ ಕೇವಲ ಸುಧಾರಿತ ತಂತ್ರಜ್ಞಾನಗಳ ಗ್ರಾಹಕರಲ್ಲ – ನಾವು ಈಗ ವಿಶ್ವ ದರ್ಜೆಯ ಆಳವಾದ ತಂತ್ರಜ್ಞಾನವನ್ನು ನಿರ್ಮಿಸುತ್ತಿದ್ದೇವೆ ಮತ್ತು ಜಗತ್ತಿಗೆ ರಫ್ತು ಮಾಡುತ್ತಿದ್ದೇವೆ. ರಕ್ಷಣೆಯಿಂದ ಡ್ರೋನ್‌ಗಳವರೆಗೆ, ಬಯೋಟೆಕ್‌ನಿಂದ ಕ್ವಾಂಟಮ್‌ವರೆಗೆ ಮತ್ತು ಬಾಹ್ಯಾಕಾಶದಿಂದ ಸೆಮಿಕಂಡಕ್ಟರ್‌ಗಳವರೆಗೆ, ಭಾರತೀಯ ಸ್ಟಾರ್ಟ್‌ಅಪ್‌ಗಳು ಕೈಗಾರಿಕೆಗಳು ಮತ್ತು ಸಮಾಜಗಳನ್ನು ಪರಿವರ್ತಿಸುವ ಪ್ರಗತಿಯನ್ನು ಸಾಧಿಸುತ್ತಿವೆ. IMECE ಇಂಡಿಯಾ 2025 ರ ಭಾಗವಾಗಲು ಸ್ಕೈರೂಟ್ ಸಂತೋಷಪಡುತ್ತದೆ ಮತ್ತು ಭಾರತಕ್ಕೆ ನಾವೀನ್ಯತೆಯನ್ನು ಪ್ರದರ್ಶಿಸಲು ಜಾಗತಿಕ ವೇದಿಕೆಯನ್ನು ಒದಗಿಸುವ ಅಂತಹ ವೇದಿಕೆಗಳನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.