Thursday, November 6, 2025
Home Blog Page 106

ಈ ಬಾರಿ ಶಿಕ್ಷಕರಿಗಿಲ್ಲ ದಸರಾ ರಜೆ

ಬೆಂಗಳೂರು, ಸೆ.15- ಇದೇ 22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಶಿಕ್ಷಕರು ದಸರಾ ರಜೆಯಿಂದ ವಂಚಿತರಾಗಲಿದ್ದಾರೆ. ದಸರಾ ರಜೆ ಹೋಗಲಿ ಸಮೀಕ್ಷೆಯಲ್ಲಿ ಭಾಗಿಯಾಗುತ್ತಿರುವ ಶಿಕ್ಷಕರಿಗೆ ಗೌರವಧನವನ್ನು ನೀಡುವುದಿಲ್ವಂತೆ. ಇದರ ಜೊತೆಗೆ ಗಳಿಕೆ ರಜೆಯೂ ಇಲ್ವಂತೆ.ಸರ್ಕಾರದ ಈ ನಡೆಗೆ ಶಿಕ್ಷಕ ವೃಂದ ಭಾರಿ ಅಸಮಧಾನ ವ್ಯಕ್ತಪಡಿಸಿದೆ.

ಸಮೀಕ್ಷೆಯಲ್ಲಿ ಭಾಗಿಯಾಗಲಿರುವ 1.70 ಲಕ್ಷ ಶಿಕ್ಷಕರಿಗೆ ಸೆ. 19 ರವರೆಗೂ ತರಬೇತಿ ನೀಡಲಾಗುವುದು.ರಜಾ ದಿನಗಳಲ್ಲಿ ಕೆಲಸ ಮಾಡಿದರೆ ಗಳಿಕಾ ರಜೆ ಸೌಲಭ್ಯ ನೀಡಬೇಕೆಂಬ ನಿಯಮವಿದೆ..ಹೀಗಿದ್ದರೂ ಸಮೀಕ್ಷೆಯಲ್ಲಿ ಭಾಗಿಯಾಗುವ ಶಿಕ್ಷಕರಿಗೆ ಗಳಿಕೆ ರಜೆ ನೀಡದಿರಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ 46,757 ಸರ್ಕಾರಿ ಶಾಲೆಗಳಿದ್ದು, 1.77 ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 2025-26 ರಲ್ಲಿ 123 ರಜೆಗಳಿದ್ದು, 242 ಶಾಲಾ ಕರ್ತವ್ಯ ದಿನಗಳಿವೆ. ಹೀಗಿದ್ದರೂ ಸರ್ಕಾರ ನಮ ಮೇಲೆ ಯಾಕೆ ಈ ರೀತಿ ಕೋಪ ತೀರಿಸಿಕೊಳ್ಳುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಶಿಕ್ಷಕರು.ಈಗಲೂ ಕಾಲ ಮಿಂಚಿಲ್ಲ ಶಿಕ್ಷಕರ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಶಿಕ್ಷಕ ಸಮುದಾಯ ಆಗ್ರಹಿಸಿದೆ.

ಅಂಬರೀಷ್‌ಗೂ ‘ಕರ್ನಾಟಕ ರತ್ನ’ ನೀಡುವಂತೆ ನಟಿ ತಾರಾ ಆಗ್ರಹ

ಬೆಂಗಳೂರು,ಸೆ.15- ಸಾಹಸಸಿಂಹ ಡಾ. ವಿಷ್ಣುವರ್ಧನ್‌ರವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಹಿನ್ನೆಲೆಯಲ್ಲೇ ನಟ, ರಾಜಕಾರಣಿ ರೆಬಲ್‌ಸ್ಟಾರ್‌ ಅಂಬರೀಶ್‌ರವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಹಿರಿಯ ನಟಿ ತಾರಾ ಅನುರಾಧ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಿದ್ದಾರೆ.

ಸದಾಶಿವ ನಗರದಲ್ಲಿರುವ ಡಿಸಿಎಂ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದ ಅವರು, ಅಂಬರೀಶ್‌ರವರೂ ಕೂಡ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಮನೋಜ್ಞ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಅಂಬರೀಶ್‌ರವರನ್ನು ನೀವೂ ಸಹ ಹತ್ತಿರದಿಂದ ಬಲ್ಲವರಾಗಿದ್ದು, ಆತೀಯರಾಗಿದ್ದರು.

ಡಾ.ವಿಷ್ಣುವರ್ಧನ್‌ ಹಾಗೂ ಬಿ.ಸರೋಜಾ ದೇವಿಯವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಸಂತಸದ ವಿಷಯ. ಅದೇ ರೀತಿ ಮಂಡ್ಯದ ಗಂಡು ಅಂಬರೀಶ್‌ ಅವರಿಗೂ ಕೂಡ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಅಭಿಮಾನಿಗಳ ಪರವಾಗಿ ಕೋರಿದರು.

ಫ್ಯಾಷನ್‌ ಡಿಸೈನರ್‌ಗೆ ಲೈಂಗಿಕ ಕಿರುಕುಳ ನೀಡಿದ ಎಂಜಿನಿಯರ್‌ ಸೆರೆ

ಬೆಂಗಳೂರು,ಸೆ.15- ಅಪಘಾತದಿಂದ ರಸ್ತೆ ಬದಿ ನರಳುತ್ತಿದ್ದ ಶ್ವಾನ ಗಮನಿಸಿ ಆರೈಕೆ ಮಾಡುತ್ತಿದ್ದ ಫ್ಯಾಷನ್‌ ಡಿಸೈನರ್‌ಗೆ ಲೈಂಗಿಕ ಕಿರುಕುಳ ವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ಮಂಜನಾಥ್‌ (27) ಬಂಧಿತ ಆರೋಪಿ.ಈತ ಡಿಪ್ಲೋಮೋ ಎಂಜಿನಿಯರ್‌ ವ್ಯಾಸಂಗ ಮಾಡಿದ್ದಾನೆ.

ಕಳೆದ ಭಾನುವಾರ ರಾತ್ರಿ 11.50 ರ ಸುಮಾರಿನಲ್ಲಿ ಫ್ಯಾಷನ್‌ ಡಿಸೈನರ್‌ರೊಬ್ಬರು ಕಾರಿನಲ್ಲಿ ಜಕ್ಕೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಪೆಟ್ರೋಲ್‌ ಬಂಕ್‌ ಮುಂದಿನ ರಸ್ತೆಯಲ್ಲಿ ಶ್ವಾನ ನರಳಾಡುತ್ತಿದ್ದುದನ್ನು ಗಮನಿಸಿದ್ದಾರೆ.ತಕ್ಷಣ ತಮ ಕಾರನ್ನು ರಸ್ತೆ ಬದಿ ಪಾರ್ಕ್‌ ಮಾಡಿ ಶ್ವಾನದ ರಕ್ಷಣೆಗೆ ಹೋಗಿದ್ದಾರೆ. ಆ ವೇಳೆ ಕೈಗೆ ರಕ್ತ ಆಗಿದ್ದರಿಂದ ಕೈ ತೊಳೆದುಕೊಳ್ಳುತ್ತಿದ್ದರು.

ಅದೇ ಸಮಯಕ್ಕೆ ಇದೇ ಮಾರ್ಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಆರೋಪಿ ಮಂಜುನಾಥ್‌ ಆ ಯುವತಿ ಸಮೀಪ ಹೋಗಿ ಅಸಭ್ಯವಾಗಿ ವರ್ತಿಸಿ ಅಲ್ಲಿಂದ ತೆರಳಿದ್ದಾನೆ.ಕೆಲ ನಿಮಿಷದ ಬಳಿಕ ಮತ್ತೆ ಈ ಸ್ಥಳಕ್ಕೆ ವಾಪಸ್‌‍ ಬಂದು ಮತ್ತೆ ಖಾಸಗಿ ಅಂಗ ಮುಟ್ಟಿ ಪರಾರಿಯಾಗಿದ್ದನು.

ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಗರದಲ್ಲಿ ಆಗಾಗ್ಗೆ ಅಲ್ಲಲ್ಲಿ ಬ್ಯಾಡ್‌ ಟಚ್‌ ಪ್ರಕರಣಗಳು ನಡೆದಿವೆ. ಅಂತಹ ಬ್ಯಾಡ್‌ ಟಚ್‌ ಮಾಡಿ ಪರಾರಿಯಾಗಿ ಎಲ್ಲೇ ಅಡಗಿದ್ದರೂ ಸಹ ಪೊಲೀಸರು ಬಿಡದೆ ಅವರ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಲ್ಲಿ ಸರಗಳ್ಳರ ಅಟ್ಟಹಾಸ : ಲಾಂಗ್‌ನಿಂದ ಬೆದರಿಸಿ ಸರ ಅಪಹರಣ, ಮಹಿಳೆಯ ಬೆರಳು ಕಟ್‌

ಬೆಂಗಳೂರು,ಸೆ.15- ನಗರದಲ್ಲಿ ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಸುತ್ತಾಡುತ್ತಾ ಇಬ್ಬರು ಮಹಿಳೆಯರಿಗೆ ಲಾಂಗ್‌ನಿಂದ ಬೆದರಿಸಿ ಎರಡು ಸರಗಳನ್ನು ಕಿತ್ತುಕೊಂಡಿದ್ದು, ಆ ವೇಳೆ ಪ್ರತಿರೋಧವೊಡ್ಡಿದ ಮಹಿಳೆಯ ಕೈ ಬೆರಳು ತುಂಡರಿಸಿರುವ ಘಟನೆ ಗಿರಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈಶ್ವರಿ ನಗರದಲ್ಲಿ ಪ್ರತಿಷ್ಠಾಪಿ ಸಿದ್ದ ಗಣೇಶಮೂರ್ತಿ ಸ್ಥಳದಲ್ಲಿ ಮೊನ್ನೆ ರಾತ್ರಿ ಆರ್ಕೆಸ್ಟ್ರಾ ಆಯೋಜಿ ಸಲಾಗಿತ್ತು. ಹಾಗಾಗಿ ಕಾರ್ಯಕ್ರಮ ವೀಕ್ಷಿಸಲು ಸ್ಥಳೀಯ ನಿವಾಸಿಗಳಾದ ಉಷಾ ಮತ್ತು ವರಲಕ್ಷ್ಮೀ ಹೋಗಿದ್ದಾರೆ. ಕಾರ್ಯಕ್ರಮ ವೀಕ್ಷಿಸಿ ಅಂದು ರಾತ್ರಿ ಇವರಿಬ್ಬರು ಮನೆಗೆ ವಾಪಸ್‌‍ ನಡೆದುಕೊಂಡು ಹೋಗುತ್ತಿದ್ದರು.

ಆ ವೇಳೆ ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಒಬ್ಬರ ಕುತ್ತಿಗೆಗೆ ಲಾಂಗ್‌ ಇಟ್ಟು ಸರ ಬಿಚ್ಚಿಕೊಡುವಂತೆ ಬೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ಒಬ್ಬರು ಭಯದಲ್ಲಿ ಚಿನ್ನದ ಸರ ತೆಗೆದುಕೊಟ್ಟಿದ್ದಾರೆ.

ಇವರ ಜೊತೆಯಲ್ಲಿದ್ದ ಮತ್ತೊಬ್ಬರು ಪ್ರತಿರೋಧ ಒಡ್ಡಿದಾಗ ಲಾಂಗ್‌ನಿಂದ ಆಕೆಯ ಬೆರಳು ತುಂಡಾಗಿದೆ. ಆದರೂ ಸಹ ಬಿಡದೆ ದರೋಡೆಕೋರರು ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರ ಕೃತ್ಯಕ್ಕೆ ಮಹಿಳೆಯರು ಆತಂಕಗೊಂಡಿದ್ದಾರೆ. ಉಷಾ ಅವರ 10 ಗ್ರಾಂ ಸರ ಹಾಗೂ ವರಲಕ್ಷಿ ಅವರ 45 ಗ್ರಾಂ ಸರವನ್ನು ದರೋಡೆಕೋರರು ಸುಲಿಗೆ ಮಾಡಿದ್ದು, ಈ ಬಗ್ಗೆ ಗಿರಿನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಇದಲ್ಲದೇ ಈ ಇಬ್ಬರು ದರೋಡೆಕೋರರು ಗಿರಿನಗರ, ಇಂದಿರಾ ನಗರ, ಕೊತ್ತನೂರು, ಕೋಣನಕುಂಟೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲೂ ಲಾಂಗ್‌ನಿಂದ ಬೆದರಿಸಿ ಮೊಬೈಲ್‌‍, ಚಿನ್ನದ ಸರಗಳನ್ನು ಎಗರಿಸಿರುವ ಬಗ್ಗೆ ಪೊಲೀಸ್‌‍ ಠಾಣೆಗಳಲ್ಲಿ ದೂರು ದಾಖಲಾಗಿವೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದರೋಡೆಕೋರರ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಿದ್ದು, ಈ ತಂಡಗಳು ಈಗಾಗಲೇ ದರೋಡೆಕೋರರಿಗಾಗಿ ಕಾರ್ಯಾಚರಣೆ ಕೈಗೊಂಡಿವೆ.

ಸಿದ್ದರಾಮಯ್ಯನವರು ನಿಜವಾದ ಮತಾಂತರ ರಾಯಭಾರಿ : ಆರ್‌.ಅಶೋಕ್‌

ಬೆಂಗಳೂರು,ಸೆ.15- ಈ ದೇಶದಲ್ಲಿ ಯಾರಾದರೂ ನಿಜವಾದ ಮತಾಂತರ ರಾಯಭಾರಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ತಮಗೆ ಮತ್ತು ತಮ ಪಕ್ಷಕ್ಕೆ ಮತಗಳು ಬರುತ್ತವೆ ಎಂದರೆ ವರು ಏನೂ ಬೇಕಾದರು ಮಾಡುತ್ತಾರೆ. ಜಾತಿ ಗಣತಿ ಹೆಸರಿನಲ್ಲಿ ಹಿಂದೂಗಳ ಜೊತೆ ಕ್ರಿಶ್ಚಯಿನ್‌ ಸೇರ್ಪಡೆ ಮಾಡುವ ಕುತಂತ್ರ ಮಾಡಿದ್ದಾರೆ. ಸಿದ್ದರಾಮಯ್ಯ ಮತಾಂತರದ ಬ್ರಾಂಡ್‌ ಅಂಬಾಸಿಡರ್‌ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಏನೇ ಮಾಡಿದರೂ ವೋಟಿಗಾಗಿಯೇ ಮಾಡುತ್ತಾರೆ. ಎಸ್‌‍ಟಿ ಪ್ರವರ್ಗಕ್ಕೆ ಸೇರಲು ಸುಪ್ರೀಂಕೋರ್ಟ್‌ ಆದೇಶಗಳಿವೆ. ಏನೇ ತೀರ್ಮಾನ ಮಾಡಿದರೂ ಸಂವಿಧಾನ ಬದ್ಧವಾಗಿ ಕೈಗೊಳ್ಳಲಿ ಎಂದರು.ಕ್ರಿಸ್ಚಿಯನ್‌ ಜೋಡಿತ ಹಿಂದೂ ಉಪಜಾತಿಗಳಿಗೆ ಪ್ರತ್ಯೇಕ ಕೋಡ್‌ ವಿಚಾರದ ಬಗ್ಗೆ ಮಾತನಾಡಿದ ಅಶೋಕ್‌, ಸಿದ್ದರಾಮಯ್ಯ ಮತಾಂತರದ ರಾಯಭಾರಿ. ಹಿಂದೂಗಳನ್ನು ಮತಾಂತರ ಮಾಡಲು ಏನೆಲ್ಲ ಮಾಡಬೇಕೋ ಅದೆಲ್ಲ ಮಾಡುತ್ತ್ತಿದ್ದಾರೆ ಎಂದು ದೂರಿದರು.

ಸಂವಿಧಾನಗಳಲ್ಲಿ ಇರುವುದು ಆರು ಧರ್ಮಗಳು. ಸಿದ್ದರಾಮಯ್ಯ ಹೊಸ ಧರ್ಮ ಸೃಷ್ಟಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ವಿಷ ಬೀಜ ಬಿತ್ತುವ ಹುನ್ನಾರ ಇದು ಎಂದು ಹೇಳಿದರು.
ವಕ್‌್ಫ ತಿದ್ದುಪಡಿ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್‌ ಮಧ್ಯಂತರ ಆದೇಶ ವಿಚಾರದ ಕುರಿತು ಮಾತನಾಡಿದ ಅಶೋಕ್‌, ಸುಪ್ರೀಂಕೋರ್ಟ್‌ ವಕ್ಫ್ ಕಾಯ್ದೆ ಎತ್ತಿ ಹಿಡಿದಿದೆ. ಕೆಲವು ಸಣ್ಣಪುಟ್ಟ ಅಂಶಗಳಿಗೆ ಸಲಹೆ, ಸ್ಪಷ್ಟನೆ ಕೊಟ್ಟಿದೆ.

ಒಟ್ಟಾರೆ ಕೇಂದ್ರದ ವಕ್‌್ಫ ಕಾಯ್ದೆಗೆ ಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಹಲವು ಜಮೀನುಗಳು, ಶಾಲೆ, ಮಠ, ದೇವಸ್ಥಾನಗಳ ಆಸ್ತಿಗೆ ನೊಟೀಸ್‌‍ ಕೊಡಲಾಗಿತ್ತು ಎಂದು ಸರಿಸಿದರು.ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತಾ, ವೋಟ್‌ ಬೇಕು ಅಂದರೆ ಒಕ್ಕಲಿಗ, ಕುರುಬ, ಲಿಂಗಾಯತ ಬೇಕು, ಓಟ್‌ ಹಾಕಿಸಿಕೊಂಡು ಈಗ ಹತ್ತಿದ ಏಣಿ ಒದ್ದಿದ್ದಾರೆ ಸಿಎಂ.

ಹಿಂದೂ ಧರ್ಮದಲ್ಲಿ ಅಸಮಾನತೆ ಇದ್ದರೆ ಬೇರೆ ಧರ್ಮಗಳಲ್ಲಿ ಸಮಾನತೆ ಇದೆಯಾ? ಮುಸ್ಲಿಮರಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ, ಮಸೀದಿಗಳಿಗೆ ಪ್ರವೇಶ ಇಲ್ಲ, ಪುರುಷರು ಎಷ್ಟು ಬೇಕಾದರೂ ಮದುವೆ ಆಗಬಹುದು. ಇಸ್ಲಾಂ ಧರ್ಮದ ಅಸಮಾನತೆಗಳ ಬಗ್ಗೆ ಯಾಕೆ ಸಿದ್ದರಾಮಯ್ಯ ಮಾತನಾಡವುದಿಲ್ಲ? ಎಂದು ಪ್ರಶ್ನಿಸಿದರು.

ಕೇವಲ ಹಿಂದೂ ಧರ್ಮದ ಬಗ್ಗೆಯೇ ಯಾಕೆ ಮಾತಾಡುತೀರಿ? ಹಿಂದೂ ಧರ್ಮದ ಸರಿ ಇಲ್ಲ ಅನ್ನುವ ಭಾವನೆ ನಿಮದು. ಎಲ್ಲ ಧರ್ಮಗಳಲ್ಲಿ ಏನೇನು ಅಸಮಾನತೆ ಇದೆ ಎಂದು ಹೇಳಲಿ. ಹಿಂದೂ ಧರ್ಮ ಟಾರ್ಗೆಟ್‌ ಮಾಡಿ ಮಾತಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಹಿಂದೂಗಳು ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌‍ ಸರ್ಕಾರದ ಅವಾಂತರಗಳನ್ನು ನಾವು ಅಧಿಕಾರಕ್ಕೆ ಬಂದು ತಡೆಗಟ್ಟುತ್ತೇವೆ ಎಂದರು.

ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬುದರ ಬಗ್ಗೆ ನಾವು ನಿಯಮ ತರುತ್ತೇವೆ. ದಸರಾ ಪ್ರಾರಂಭ ಮಾಡಿದ್ದು ವಿಜಯನಗರದ ಅರಸರು ಯದು ವಂಶದವರಿಗೆ ದಸರಾ ವೇಳೆ ಆಹ್ವಾನ ಹೋಗುತ್ತದೆ. ಯಾಕೆ ಅವರಿಗೇ ಆಹ್ವಾನ ಕೊಡುವುದು? ಬೇರೆಯವರಿಗೆ ಯಾಕೆ ಕೊಡುವುದಿಲ್ಲ. ಅದು ಸಂಪ್ರದಾಯ, ಹಿಂದೂ ಪಂಚಾಂಗ ಪ್ರಕಾರ ನಡೆಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌‍ ಸರ್ಕಾರ ಮುಲ್ಲಾಗಳ ಸರ್ಕಾರ. ಪಂಚಾಂಗ, ಸಂಪ್ರದಾಯ, ಸಂಸ್ಕೃತಿಗಳಿಗೆ ಮನ್ನಣೆ ಕೊಡುವುದಿಲ್ಲ. ಇದಕ್ಕೆಲ್ಲ ಕಾನೂನು ತರಬೇಕು. ಉರುಸ್‌‍, ಮುಸ್ಲಿಂ ಹಬ್ಬಗಳಿಗೆ ಹೋಗಿ ಇದು ಮುಸ್ಲಿಮರದ್ದಲ್ಲ ಅಂದು ಹೇಳಲಿ, ಹಿಂದೂಗಳನ್ನು ಕರೆದೊಯ್ದು ಉರುಸ್‌‍, ಮುಸ್ಲಿಂ ಹಬ್ಬಗಳನ್ನು ಉದ್ಘಾಟಿಸಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಬಂದ ಮೇಲೆಯೇ ಇದೆಲ್ಲ ನಡೆಯುತ್ತದೆ. ಮಸೀದಿ ಮುಂದೆ ಗಣೇಶೋತ್ಸವ ಮೆರವಣಿಗೆ ಹೋಗಬಾರದು ಎನ್ನುತ್ತಾರೆ. ಹಾಗಾದರೆ ದೇವಸ್ಥಾನ ಮುಂದೆಯೂ ಉರುಸ್‌‍, ಮೀಲಾದ್‌ ಮೆರವಣಿಗೆ ಹೋಗಬಾರದು ಎಂದು ಒತ್ತಾಯ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎಡಬಿಡಂಗಿ ಆಡಳಿತ. ರಾಜ್ಯದಲ್ಲಿ ಇದರಿಂದಲೇ ಅರಾಜಕತೆ ಸೃಷ್ಟಿ ಆಗಿದೆ. ಧರ್ಮ ಧರ್ಮಗಳ ನಡುವೆ ವಿಷ ಬೀಜ, ಬೆಂಕಿ ಹಚ್ಚೋದು, ನಾಡು ಅಶಾಂತಿಯಿಂದಿರಬೇಕೆಂದು ಬಯಸುವವರು ಕಾಂಗ್ರೆಸ್‌‍ನವರು ಎಂದು ಗುಡುಗಿದರು.

ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿವೆ : ಸಿಎಂ

ಬೆಂಗಳೂರು, ಸೆ.15- ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಎಷ್ಟೇ ಕಷ್ಟಗಳು ಎದುರಾಗುತ್ತಿದ್ದರೂ ಇದಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮದು ಬಹು ಸಂಸ್ಕೃತಿಯಲ್ಲಿ ಏಕತೆಯ ರಾಷ್ಟ್ರ. ಬಸವಣ್ಣ ಅವರ ಅನುಭವ ಮಂಟಪದಲ್ಲೂ ಪ್ರಜಾಪ್ರಭುತ್ವಕ್ಕೆ ಒತ್ತು ನೀಡಲಾಗಿತ್ತು ಎಂದರು.

ಇತ್ತೀಚೆಗೆ ಮತಗಳ್ಳತನ ನಡೆಯುತ್ತಿದೆ. ನನ್ನ ಮತ ನನ್ನ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂಬ ಪರಿಸ್ಥಿತಿ ಎದುರಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಅನಿವಾರ್ಯವಾಗಿದೆ ಎಂದರು.

ಸಂವಿಧಾನದಲ್ಲಿ ಯಾವ ಜಾತಿ ಧರ್ಮಕ್ಕೂ ಮೇಲು-ಕೀಳು ಎಂಬ ತಾರತಮ್ಯ ಇಲ್ಲ. ಜಾತಿ, ಧರ್ಮ ಹಾಗೂ ಲಿಂಗ ಬೇಧವಿಲ್ಲದೇ ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶಗಳಿವೆ. ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು. ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ದೊರೆಯಬೇಕು. ಜಾತಿಬೇಧ ಮಾಡಬಾರದು. ಧರ್ಮ ಸಹಿಷ್ಣುತೆ ಇರಬೇಕೆಂದು ಹೇಳಿದರು.

ವಿರೋಧ ಪಕ್ಷಗಳಿಗೆ ರಾಜಕೀಯ ಮಾಡಲು ಬೇರೆ ವಿಷಯಗಳೇ ಇಲ್ಲ. ಧರ್ಮದ ಹೆಸರಿನಲ್ಲೇ ರಾಜಕೀಯ ಮಾಡುತ್ತಿದ್ದಾರೆ. ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗಿದೆ. ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ ಎಂದೇ ಅರ್ಥವಾಗುತ್ತಿಲ್ಲ. ಸಂವಿಧಾನ ಧರ್ಮ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ. ಸ್ವಾತಂತ್ರ್ಯ ಬಂದು ಇಷ್ಟೂ ವರ್ಷಗಳಾದರೂ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಮಾಜಿ ಸಂಸದನೊಬ್ಬ ಸಂವಿಧಾನ ಓದದೆ ಮೂರ್ಖನಂತೆ ನಡೆದುಕೊಳ್ಳುತ್ತಾನೆ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಆದರೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಖಂಡನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳು ಈ ಪ್ರಯತ್ನವನ್ನು ಹೆಚ್ಚು ಮಾಡುತ್ತಿವೆ. ಜನ ಜಾಗೃತರಾಗಬೇಕು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸರ್ವರಿಗೂ ಸಮಾಬಾಳು, ಸಮಪಾಲು ಎಂಬ ಆಶ್ರಯ ನಾಡಿನ ಅನುಭವ ಮಂಟಪದಿಂದ ಕೇಳಿ ಬಂತು. ಇದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಮತದಾನ ಸಾಮಾನ್ಯರನ್ನು ಆಡಳಿತ ವ್ಯವಸ್ಥೆಯಲ್ಲಿ ಕೂರಿಸಿದೆ. ಮಹಾರಾಜರು ಮನೆಯಲ್ಲಿದ್ದಾರೆ. ತಮ ಕಾಲದಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣಾ ವ್ಯವಸ್ಥೆ ಇತ್ತು. ಆನಂತರ ಸರ್ಕಾರ ಅದನ್ನು ರದ್ದು ಮಾಡಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ನಾಯಕತ್ವವನ್ನು ಬೆಳೆಸಬೇಕೆಂದರು.

ತಾವು 7ನೇ ತರಗತಿಯಲ್ಲಿರ ಬೇಕಾದರೆ, ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದೆ. ಆಗ ನನ್ನ ಚಿಹ್ನೆ ಸ್ಟಾರ್‌ ಆಗಿತ್ತು. ನಾನು ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವ ಮತದಾನದಿಂದಾಗಿಯೇ ಇಲ್ಲಿ ಇದ್ದೇವೆ. ಪ್ರತಿಯೊಂದು ಮತಕ್ಕೂ ಅಮೂಲ್ಯವಾದ ಸ್ಥಾನಮಾನವಿದೆ. ಕಾಂಗ್ರೆಸ್‌‍ನ ಧೃವನಾರಾಯಣ್‌ ಒಂದು ಮತ ಅಂತರದಲ್ಲಿ ಗೆಲುವು ಸಾಧಿಸಿ ಶಾಸಕರಾದರು. ಅವರ ಎದುರು ಸ್ಪರ್ಧಿಸಿದ್ದ ಎ.ಆರ್‌.ಕೃಷ್ಣಾಮೂರ್ತಿಯವರ ಚಾಲಕ ತಡವಾಯಿತು ಎಂದು ಮತ ಹಾಕಲಿಲ್ಲ, ಅಂದು ಅವರ ಕುಟುಂಬದ ಮೂವರು ಸದಸ್ಯರು ಬಂದು ಮತ ಹಾಕಿದರೆ, ಫಲಿತಾಂಶ ಬೇರೆಯಾಗುತ್ತಿತ್ತು ಎಂದರು.

ರಾಜಸ್ಥಾನದಲ್ಲಿ ಸಿ.ಪಿ. ಜೋಶಿ ಎರಡು ಮತಗಳ ಅಂತರದಲ್ಲಿ ಸೋಲು ಕಂಡು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿಕೊಂಡರು. ಹೀಗಾಗಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಬಾನು ಮುಸ್ತಾಕ್‌ ಉದ್ಘಾಟಿಸುವುದನ್ನು ದಸರಾ ಪ್ರಶ್ನಿಸಿದ್ದ ಪ್ರತಾಪ್‌ ಸಿಂಹ ಅರ್ಜಿ ವಜಾ

ಬೆಂಗಳೂರು,ಸೆ.15– ವಿಶ್ವವಿಖ್ಯಾತ ನಾಡಹಬ್ಬ ದಸರಾ ವನ್ನು ಬೂಕರ್‌ ಪ್ರಶಸ್ತಿ ವಿಜೇತ ಬಾನು ಮುಸ್ತಾಕ್‌ ಉದ್ಘಾಟಿಸುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್‌) ಹೈಕೋರ್ಟ್‌ ವಜಾಗೊಳಿಸಿದೆ.

ಮಾಜಿ ಸಂಸದ ಪ್ರತಾಪ್‌ ಸಿಂಹ, ಗಿರೀಶ್‌ಕುಮಾರ್‌ ಮತ್ತು ಗೌರವ್‌ ಎಂಬುವರು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ವಿಬು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಷಿ ನೇತೃತ್ವದ ವಿಭಾಗೀಯ ಪೀಠ ಅರ್ಜಿಯಲ್ಲಿ ಯಾವುದೇ ಕಾನೂನಾತಕ ಅಂಶಗಳಿಲ್ಲ ಎಂದು ವಜಾಗೊಳಿಸಿ ಆದೇಶ ನೀಡಿದೆ.

ವಿಸ್ತೃತ ಆದೇಶವನ್ನು ನಂತರ ನೀಡುವುದಾಗಿ ಹೇಳಿದ ನ್ಯಾಯಪೀಠ, ಬಾನು ಮುಸ್ತಾಕ್‌ ದಸರಾ ಉದ್ಘಾಟಿಸುವುದರಿಂದ ಯಾರಿಗೆ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಒಂದು ಹಂತದಲ್ಲಿ ಅರ್ಜಿದಾರರಿಗೆ ದಂಡ ವಿಧಿಸಬೇಕೆಂದು ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಮಾಡಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.
ವಿಜಯ ದಶಮಿ ಎಂದರೆ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ. ಈ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುತ್ತಾರೆ. ಒಳ್ಳೆಯ ಹಬ್ಬ ಮಾಡುವಾಗ ನಾವು ಸಕಾರಾತಕವಾಗಿ ಇರಬೇಕು. ನಕರಾತಕ ಚಿಂತನೆ ಬೇಡ ಎಂದು ನ್ಯಾಯಾಧೀಶರು ಬುದ್ದಿವಾದ ಹೇಳಿ ಅರ್ಜಿಯನ್ನು ವಜಾ ಮಾಡಿದರು.

ಬಾನು ಮುಸ್ತಾಕ್‌ ಅವರನ್ನು ಕೇವಲ ಧರ್ಮದ ಆಧಾರದ ಮೇಲೆ ನೋಡಬೇಡಿ ನಾಡ ಹಬ್ಬವನ್ನು ಈ ಹಿಂದೆ ಸಾಹಿತಿ ನಿಸಾರ್‌ ಅಹಮದ್‌ ಸೇರಿದಂತೆ ಅನೇಕರು ಉದ್ಘಾಟಿಸಿದ್ದಾಗ ಅರ್ಜಿದಾರರು ಏಕೆ ವಿರೋಧ ವ್ಯಕ್ತಪಡಿಸಿರಲಿಲ್ಲ? ಜಾತ್ಯತೀತ ರಾಷ್ಟ್ರದಲ್ಲಿ ಓರ್ವ ವ್ಯಕ್ತಿಯನ್ನು ಧರ್ಮದ ಆಧಾರದ ಮೇಲೆ ನೋಡುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಅಷ್ಟಕ್ಕೂ ಅವರೇ ಉದ್ಘಾಟನೆ ಮಾಡುವುದರಿಂದ ಇಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆ ಹೇಗಾಗುತ್ತದೆ? ಎಂಬುದನ್ನು ಮನವರಿಕೆ ಮಾಡಿ. ಯಾವುದಾದರು ಪೂಜಾರಿಯ ಹಕ್ಕಿನ ಉಲ್ಲಂಘನೆಯಾಗಿದೆಯೇ? ವ್ಯಕ್ತಿಯೊಬ್ಬನ ಹಕ್ಕನ್ನು ಉಲ್ಲಂಘಿಸಿದೆಯೇ? ಇಲ್ಲವೇ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆಯೇ? ದಸರಾ ಹಬ್ಬವನ್ನು ನಿರ್ಧಿಷ್ಟ ಸಮುದಾಯದವರೇ ಉದ್ಘಾಟನೆ ಮಾಡುವ ನಿಯಮವಿದ್ದರೆ ತಿಳಿಸಿ ಎಂದು ಅರ್ಜಿದಾರರಿಗೆ ನ್ಯಾಯಾಧೀಶರು ಸೂಚಿಸಿದರು.

ಇದು ಧಾರ್ಮಿಕ ನಂಬಿಕೆಯ ಭಾವನೆ ಎಂದು ಅರ್ಜಿದಾರರ ಪರ ವಕೀಲರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.ನಿಮ ಅರ್ಜಿಯನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ. ಇಲ್ಲಿ ಯಾವ ವ್ಯಕ್ತಿಯ ಧಾರ್ಮಿಕಹಕ್ಕು ಉಲ್ಲಂಘನೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತೀರ್ಪು ಹೇಳಿ ಅರ್ಜಿಯನ್ನು ವಜಾಗೊಳಿಸಿತು.

ನಟಿ ಪ್ರಿಯಾಂಕಾ ಉಪೇಂದ್ರ ಅವರ ಫೋನ್‌ ನಂಬರ್‌ ಹ್ಯಾಕ್‌

ಬೆಂಗಳೂರು,ಸೆ.15-ಸೂಪರ್‌ಸ್ಟಾರ್‌ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರ ಫೋನ್‌ ನಂಬರ್‌ ಹ್ಯಾಕ್‌ ಮಾಡಲಾಗಿದೆ. ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಅವರ ಹೆಸರಿನಲ್ಲಿ ವಾಟ್ಸಾಪ್‌ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಪ್ರಿಯಾಂಕಾ ಅವರ ಮೊಬೈಲ್‌ ನಂಬರ್‌ನ್ನು ಸೈಬರ್‌ ಖದೀಮ ಹ್ಯಾಕ್‌ ಮಾಡಿದ್ದಾನೆ. ಇದನ್ನು ಗಮನಿಸಿದ ತಕ್ಷಣ ಉಪೇಂದ್ರ ಅವರು ಪತ್ನಿ ಪ್ರಿಯಾಂಕಾ ಅವರೊಂದಿಗೆ ತೆರಳಿ ಸದಾಶಿವ ನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಪ್ರಿಯಾಂಕಾ ಅವರ ಮೊಬೈಲ್‌ ಹ್ಯಾಕ್‌ ಮಾಡಿರುವ ವ್ಯಕ್ತಿ ಬೇರೆ ಬೇರೆಯವರಿಗೆ ವಾಟ್ಸಾಪ್‌ ಮಾಡಿ ನನ್ನ ಮೊಬೈಲ್‌ ಯುಪಿಐ ವರ್ಕ್‌ ಆಗುತ್ತಿಲ್ಲ. ನೀವು ತಕ್ಷಣ ಹಣ ಕಳುಹಿಸಿ , ಎರಡು ಗಂಟೆಯಲ್ಲಿ ಹಣ ಕಳುಹಿಸುತ್ತೇನೆಂದು ಹ್ಯಾಕರ್‌ ಪ್ರಿಯಾಂಕಾ ಅವರು ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಮೆಸೇಜ್‌ ಮಾಡಿದ್ದಾನೆ.

ಹಾಗಾಗಿ ಈ ವಿಚಾರ ಅವರ ಗಮನಕ್ಕೆ ಬಂದಿದ್ದು, ಉಪೇಂದ್ರ ಅವರು ವಿಡಿಯೋ ಮಾಡಿ ಪೋಸ್ಟ್‌ ಮಾಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪೇಂದ್ರ ಅವರು, ನನ್ನ ಅಥವಾ ಪ್ರಿಯಾಂಕಾ ಅವರ ಮೊಬೈಲ್‌ನಿಂದ ಹಣ ಕೊಡಿ ಎಂದು ಮೆಸೇಜ್‌ ರಿಕ್ವೆಸ್ಟ್‌ ಬಂದರೆ ಅದನ್ನು ನಿರ್ಲಕ್ಷಿಸಿ ಎಂದು ಮನವಿ ಮಾಡಿದ್ದಾರೆ.

ತಂತ್ರಜ್ಞಾನ ಮುಂದುವರೆದಂತೆ ಎಷ್ಟು ಲಾಭವಾಗುತ್ತಿದೆಯೋ ಅಷ್ಟೇ ದುಷ್ಪರಿಣಾಗಳು ಆಗುತ್ತಿವೆ. ಇದರಿಂದ ತಮಗೆ ಗೊತ್ತಿಲ್ಲದಂತೆ ಸೈಬರ್‌ ಕ್ರೈಂ ವಂಚಕರು ಹಣ ಗುಳುಂ ಮಾಡುತ್ತಿದ್ದಾರೆ.

ಸಮುದ್ರ ಮಟ್ಟ ಏರಿಕೆ : ಅಪಾಯದಲ್ಲಿದ್ದಾರೆ : ಆಸ್ಟ್ರೇಲಿಯ ಕರಾವಳಿ 1.5 ಮಿಲಿಯನ್‌ ಜನ

ಪರ್ತ್‌,ಸೆ,15-ದೇಶದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಒಂದೂವರೆ ಕೋಟಿಗೂ ಹೆಚ್ಚು ಆಸ್ಟ್ರೇಲಿಯನ್ನರು 2050ರ ವೇಳೆಗೆ ಸಮುದ್ರ ಮಟ್ಟ ಏರಿಕೆಯಿಂದ ಅಪಾಯದಲ್ಲಿದ್ದಾರೆ ಎಂದು ಹವಾಮಾನ ಸಂಸ್ಥೆ ವರದಿಯೊಂದು ಎಚ್ಚರಿಸಿದೆ.

ಆಸ್ಟ್ರೇಲಿಯಾದ ಮೊದಲ ರಾಷ್ಟ್ರೀಯ ಹವಾಮಾನ ಅಪಾಯದ ಮೌಲ್ಯಮಾಪನವು ಪ್ರವಾಹಗಳು, ಚಂಡಮಾರುತಗಳು, ಶಾಖೋತ್ಪನ್ನಗಳು, ಬರ ಮತ್ತು ಕಾಡ್ಗಿಚ್ಚುಗಳಂತಹ ಘಟನೆ ಆಗಾಗ್ಗೆ ಮತ್ತು ತೀವ್ರ ಹವಾಮಾನ ಅಪಾಯಗಳನ್ನು ಮುನ್ಸೂಚಿಸಿದೆ.

ಇಂದು ಆಸ್ಟ್ರೇಲಿಯನ್ನರು ಹವಾಮಾನ ಬದಲಾವಣೆಯ ಪರಿಣಾಮಗಳೊಂದಿಗೆ ಬದುಕುತ್ತಿದ್ದಾರೆ ಎಂದು ಹವಾಮಾನ ಬದಲಾವಣೆ ಸಚಿವ ಕ್ರಿಸ್‌‍ ಬೋವೆನ್‌ ಹೇಳಿದರು, ಆದರೆ ನಾವು ಈಗ ತಾಪಮಾನ ಏರಿಕೆಯಾಗದಂತೆ, ಭವಿಷ್ಯದ ಪೀಳಿಗೆಗೆ ಪರಿಸರ ಕಾಪಾಡಲು ಪ್ರಯತ್ನ ಸಾಗಿದೆ ಎಂದು ಹೇಳಿದರು.

ವಿಶ್ವದ ಅತಿ ದೊಡ್ಡ ತಲಾ ಮಾಲಿನ್ಯಕಾರಕ ರಾಷ್ಟ್ರಗಳಲ್ಲಿ ಒಂದಾದ ಆಸ್ಟ್ರೇಲಿಯಾ ಈಗಾಗಲೇ 1.5 ಡಿಗ್ರಿಗಿಂತ ಹೆಚ್ಚಿನ ತಾಪಮಾನವನ್ನು ತಲುಪಿದೆ ಎಂದು ವರದಿ ಹೇಳಿದೆ, ಸಿಡ್ನಿಯಲ್ಲಿ ಶಾಖ-ಸಂಬಂಧಿತ ಸಾವುಗಳು 400% ಕ್ಕಿಂತ ಹೆಚ್ಚು ಮತ್ತು ಮೆಲ್ಬೋರ್ನ್‌ನಲ್ಲಿ ಬಹುತೇಕ ಮೂರು ಪಟ್ಟು ಹೆಚ್ಚಾಗಬಹುದು ಎಂದು ವರದಿ ಉಲ್ಲೇಕಿಸಿದೆ.

2035 ಕ್ಕೆ ಸರ್ಕಾರ ತನ್ನ ಹೊರಸೂಸುವಿಕೆ ಕಡಿತ ಗುರಿಗಳನ್ನು ಘೋಷಿಸುವ ಕೆಲವು ದಿನಗಳ ಮೊದಲು ಬಿಡುಗಡೆಯಾದ 72 ಪುಟಗಳ ವರದಿಯು, ಯಾವುದೇ ಆಸ್ಟ್ರೇಲಿಯಾದ ಸಮುದಾಯವು ಅಪಾಯಗಳಿಂದ ಮುಕ್ತವಾಗಿರುವುದಿಲ್ಲ ಎಂದು ಕಂಡುಹಿಡಿದಿದೆ.

ಹೆಚ್ಚಿನ ಶಾಖದ ಅಲೆ-ಸಂಬಂಧಿತ ಸಾವುಗಳು, ತೀವ್ರ ಪ್ರವಾಹ ಮತ್ತು ಕಾಡು ಬೆಂಕಿ ಅಪಾಯ ಹೆಚ್ಚಿಸಿದೆ. ಕಳಪೆ ನೀರಿನ ಗುಣಮಟ್ಟ ಮತ್ತು ಆಸ್ತಿ ಮೌಲ್ಯಗಳು ಕೂಡ ಕಡಿಮೆಯಾಗುವ ಬಗ್ಗೆ ಅದು ಎಚ್ಚರಿಸಿದೆ.

2050 ರ ವೇಳೆಗೆ, ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಮತ್ತು ಅತಿ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ನೆಲೆಗೊಂಡಿರುವ ಕರಾವಳಿ ಸಮುದಾಯಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಜನಸಂಖ್ಯಾ ಮಟ್ಟಗಳು ಪ್ರಸ್ತುತ ಮಟ್ಟದಲ್ಲಿಯೇ ಇದ್ದರೆ, ಇದರರ್ಥ 1.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಪಾಯದಲ್ಲಿರುತ್ತಾರೆ.

ಆರೋಗ್ಯ, ಮೂಲಸೌಕರ್ಯ, ನೈಸರ್ಗಿಕ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳು ಮತ್ತು ಪ್ರಾಥಮಿಕ ಕೈಗಾರಿಕೆಗಳ ಮೇಲೆ ಒತ್ತಡ ಹೇರುತ್ತದೆ ಎಂದು ವರದಿ ಎಚ್ಚರಿಸಿದೆ, ಜೊತೆಗೆ ತುರ್ತು ಪ್ರತಿಕ್ರಿಯೆ ನೀಡುವವರಿಗೆ ಹೆಚ್ಚುವರಿ ಸವಾಲುಗಳನ್ನು ಒಡ್ಡುತ್ತಿದೆ.

ಬಿಜೆಪಿ ನಾಯಕರಿಗೆ ಕುಟುಕಿದ ಸಚಿವ ಪ್ರಿಯಾಂಕ ಖರ್ಗೆ

ಕಲಬುರಗಿ, ಸೆ.15- ಧರ್ಮಸ್ಥಳ ಹಾಗೂ ಚಾಮುಂಡೇಶ್ವರಿ ಚಲೋ ತಲಾ ನಾಲ್ಕು ದಿನ, ಮದ್ದೂರು ಚಲೋವನ್ನು ಎರಡು ದಿನ ನಡೆಸಿದರೆ ಸಾಕೆ? ಬಿಜೆಪಿಯವರ ಜವಾಬ್ದಾರಿ ಮುಗಿಯಿತೇ? ರಾಜ್ಯದಲ್ಲಿ ವ್ಯಾಪಕ ಮಳೆಯಾಗಿ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಎನ್‌ಡಿಆರ್‌ಎಫ್‌ನಿಂದ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡಲಿ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ಬಿಜೆಪಿಯವರಲ್ಲೇ ಗೊಂದಲ ನಿಲುವುಗಳಿವೆ. ನಾಲ್ಕು ದಿನ ಧರ್ಮಸ್ಥಳ ಚಲೋ ನಡೆಸಿದ ಬಳಿಕ, ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ್ದರು. ಅನಂತರ ಸೌಜನ್ಯ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಇವರು ಭೇಟಿ ಮಾಡಿದ ಸೌಜನ್ಯ ಅವರ ಮಾವನೇ ಈಗ ಧರ್ಮಸ್ಥಳದಲ್ಲಿ ರಾಶಿ-ರಾಶಿ ಅಸ್ಥಿಪಂಜರಗಳಿವೆ ಎಂದಿದ್ದಾರೆ. ಇದಕ್ಕೆ ಬಿಜೆಪಿಯವರ ಪ್ರತಿಕ್ರಿಯೆ ಏನು? ಎಂದು ಪ್ರಶ್ನಿಸಿದರು.

ಕೋಮು ಸೂಕ್ಷ್ಮ ವಿಚಾರಗಳನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸಲಿ. ಪ್ರಧಾನಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಹಿತಾಸಕ್ತಿ ಪರವಾಗಿ ಒತ್ತಡ ಹೇರಲಿ ಎಂದು ಆಗ್ರಹಿಸಿದ್ದರು.

ಬಿಜೆಪಿಯವರ ಭಾಷಣಗಳು ಸಂಪೂರ್ಣ ಪ್ರಚೋದನಕಾರಿಯಾಗಿವೆ. ತಲೆ ಕಡಿಯಿರಿ, ತೊಡೆ ಮುರಿಯಿರಿ ಎಂದು ಸಾರ್ವಜನಿಕವಾಗಿ ಕರೆ ನೀಡುತ್ತಿದ್ದಾರೆ. ಸಿ.ಟಿ.ರವಿ, ಪ್ರತಾಪ್‌ಸಿಂಹ ಅವರಂತಹ ಬಿಜೆಪಿ ನಾಯಕರು ತಮ ಮಕ್ಕಳಿಗೆ ಧರ್ಮಕ್ಕಾಗಿ ನೀನು ತಲೆ ಕಡಿ, ನಾನು ನಿನ್ನೊಂದಿಗೆ ಇರುತ್ತೇನೆ ಎಂದು ಡೈನ್ನಿಂಗ್‌ ಟೇಬಲ್‌ನಲ್ಲಿ ಹೇಳುತ್ತಾರೆಯೇ? ಬೇರೆಯವರ ಮಕ್ಕಳು ಪ್ರಚೋದನೆಯಾಗುವಂತೆ ಈ ರೀತಿ ಮಾತನಾಡುವುದು ಏಕೆ? ರಾಜ್ಯವನ್ನು ಬಿಹಾರ, ಉತ್ತರಪ್ರದೇಶ ಮಾಡಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ತಮ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಗಣೇಶೋತ್ಸವದ ಡಿಜೆ ಮುಂದೆ ಕುಣಿಸುತ್ತಾರೆಯೇ? ಇವರ ಮಾತುಗಳಿಂದ ಪ್ರಚೋದನೆಯಾಗುವ ಬಡವರ ಮಕ್ಕಳು, ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಇಲ್ಲಿ ಕೋಮು ರಾಜಕೀಯ ಮಾಡಲಾಗುತ್ತಿದೆ. ಗಲಾಟೆಯಾಗಿ ಶವ ಬೀಳುವುದನ್ನೇ ಕಾಯುತ್ತಿರುತ್ತಾರೆ. ತಕ್ಷಣ ಸ್ಥಳಕ್ಕೆ ಹೋಗಿ ತಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಾರೆ ಎಂದು ಕಿಡಿ ಕಾರಿದರು.

ದೇಶ ಭಕ್ತರೂ ಎಂದು ಹೇಳಿಕೊಳ್ಳುವ ಬಿಜೆಪಿಯವರ ಆಡಳಿತದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್‌ ಪಂದ್ಯಾವಳಿ ಆಡಿದೆ. ಇದು ಅಂತಾರಾಷ್ಟ್ರೀಯ ವಿಷಯವಾಗಿರುವುದರಿಂದ ಆಟ ಆಡದೇ ಹೋದರೆ ಪಾಯಿಂಟ್‌್ಸ ಹೋಗುತ್ತದೆ ಎಂದು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಪಾಯಿಂಟ್‌್ಸ ಹೋದರೆ, ಏಷ್ಯಾಕಪ್‌ ಅಡದೆ ಹೋದರೆ, ಏನೂ ನಷ್ಟವಾಗುವುದಿಲ್ಲ. ಈ ಹಿಂದೆ ಶ್ರೀಲಂಕಾ ತಮಿಳರನ್ನು ಅಮಾನವೀಯರಾಗಿ ನಡೆಸಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಭಾರತ ಏಷ್ಯಾ ಕಪ್‌ನ್ನೇ ಬಹಿಷ್ಕರಿಸಿತ್ತು. ಅನೇಕ ದೇಶಗಳು ತಮ ಹಿತಾಸಕ್ತಿಗೆ ವಿರುದ್ಧ ಪ್ರಕ್ರಿಯೆಗಳು ನಡೆದಾಗ ಒಲಿಂಪಿಕ್‌್ಸನ್ನೇ ಬಹಿಷ್ಕಾರ ಮಾಡಿವೆ ಎಂದು ಹೇಳಿದರು.

ಬಿಸಿಸಿಐ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿ. ಅದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ಷಾ ಅವರ ಪುತ್ರ ಜೈಷಾ ಅಧ್ಯಕ್ಷರಾಗಿದ್ದಾರೆ. ಕ್ರಿಕೆಟ್‌ನ ಆಟದ ಆರ್ಥಿಕ ವ್ಯವಹಾರಕ್ಕೆ ಬಿಜೆಪಿ ತನ್ನ ಸಿದ್ಧಾಂತವನ್ನೇ ಮಾರಿಕೊಳ್ಳುತ್ತಿದೆಯೇ? ಬಿಸಿಸಿಐಗೆ ಪ್ರಧಾನಿಯವರು ಪಾಕಿಸ್ತಾನದ ಜೊತೆ ಆಟ ಬೇಡ ಎಂದು ಏಕೆ ಹೇಳಲಿಲ್ಲ. ಅಂತಹ ಧೈರ್ಯ ಬಿಜೆಪಿ ನಾಯಕರಿಗಿಲ್ಲವೇ? ಎಂದು ಪ್ರಶ್ನಿಸಿದರು.

ತಮ ಮಕ್ಕಳನ್ನು ಧರ್ಮ ರಕ್ಷಣೆಗಿಳಿಸಲು ಹಿಂದೇಟು ಹಾಕುವ ಬಿಜೆಪಿಯವರು ಬಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿದ್ದಾರೆ. ಅಭಿವೃದ್ಧಿ ವಿಚಾರವನ್ನು ಬಿಟ್ಟು, ಕೋಮು ಸೂಕ್ಷ್ಮ ವಿಷಯಗಳಿಗೆ ಒತ್ತು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ನೇಮಕಾತಿಗಳನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕೊಟ್ಟರೆ, ಅನಗತ್ಯವಾದ ವಿಳಂಬವಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ನೇಮಕಾತಿಗಳು ಶೀಘ್ರವಾಗಿ ಮುಗಿಯುತ್ತಿವೆ. ಕೆಪಿಎಸ್‌‍ಸಿ ಅನಗತ್ಯ ವಿಳಂಬ ಮಾಡುತ್ತಿದ್ದು, ಅದನ್ನು ಮುಚ್ಚುವುದೇ ಸೂಕ್ತ ಎಂದರು.

ಕೋಲಿ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಡುತ್ತಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯಸರ್ಕಾರದ ಪ್ರಸ್ತಾವನೆ ಮೇಲೆ ಕೇಳಲಾಗಿರುವ ಅನುಮಾನಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಸಮುದಾಯದ ಮುಖಂಡರೂ ಹಾಗೂ ಅಧಿಕಾರಿಗಳ ಸಭೆ ನಡೆಸಿ, ತಳಿ ಶಾಸ್ತ್ರ ಅಧ್ಯಯನದ ಪ್ರಕಾರ ಸ್ಪಷ್ಟನೆ ನೀಡಲಾಗುತ್ತಿದೆ ಎಂದರು.
ರಸ್ತೆ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಜಿಲ್ಲಾಧಿಕಾರಿ ಖಾತೆಗೆ 30 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಲಹೆ ನೀಡಲಾಗಿದೆ ಎಂದರು.

ಮಳೆಹಾನಿ ಸಂಬಂಧಪಟ್ಟಂತೆ ಮೊದಲ ಸುತ್ತಿನ ಸಮೀಕ್ಷೆಯಾಗಿದ್ದು, ಅದರಲ್ಲಿ 1.05 ಲಕ್ಷ ಹೆಕ್ಟೇರಿನಲ್ಲಿ ಬೆಳೆ ಹಾನಿಯಾಗಿದೆ. ಎರಡನೇ ಸುತ್ತಿನ ಸಮೀಕ್ಷೆ ಶೀಘ್ರವೇ ನಡೆಯಲಿದೆ ಎಂದರು.