Friday, November 7, 2025
Home Blog Page 107

ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್‌ ನಕಾರ

ನವದೆಹಲಿ,ಸೆ.15– ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆ -2025ಕ್ಕೆ ಸಾಂವಿಧಾನಿಕ ಸಿಂಧುತ್ವ ನೀಡಿರುವುದಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಆದರೆ ಕಾಯ್ದೆಯಲ್ಲಿನ ಕೆಲವು ನಿಬಂಧನೆಗಳಿಗೆ ತಡೆಯಾಜ್ಞೆ ಕೊಟ್ಟಿರುವ ಸರ್ವೋಚ್ಛ ನ್ಯಾಯಾಲಯ ಪೂರ್ಣ ಪ್ರಮಾಣದ ಆದೇಶವನ್ನು ನೀಡಿಲ್ಲ.

ಸಂಪೂರ್ಣ ಕಾನೂನಿಗೆ ತಡೆ ನೀಡಲು ಯಾವುದೇ ಆಧಾರವಿಲ್ಲ ಎಂದು ಅದು ಹೇಳಿದೆ. ಕೆಲವು ವಿಭಾಗಗಳ ಬಗ್ಗೆ ವಿವಾದವಿದೆ. ನ್ಯಾಯಾಲಯವು ಇದರ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಮರಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ನ್ಯಾಯಾಲಯ ತಡೆಹಿಡಿದಿರುವ ನಿಬಂಧನೆಗಳಲ್ಲಿ ಮೊದಲನೆಯದು, ಜಿಲ್ಲಾಧಿಕಾರಿಗೆ ಆಸ್ತಿಯನ್ನು ವಕ್‌್ಫ ಆಗಿ ಗುರುತಿಸುವ ಅಧಿಕಾರ ನೀಡುವ ಅಂಶ. ಇದು ಅಧಿಕಾರಗಳ ಪ್ರತ್ಯೇಕತೆಯ ತತ್ವವನ್ನು ಉಲ್ಲಂಸುತ್ತದೆ.ಎರಡನೆಯದು ವಕ್ಫ್ ರಚಿಸಲು ವ್ಯಕ್ತಿಯು ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಸರಿಸಿದ್ದಿರಬೇಕು ಎಂಬ ಷರತ್ತು. ಈ ಕುರಿತಂತೆ ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆ ಈ ನಿಯಮ ಜಾರಿಗೊಳಿಸಬಾರದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹಾಗೂ ಎ.ಜಿ.ಮಸೀಹ್‌ ಅವರಿದ್ದ ದ್ವಿಸದಸ್ಯ ಪೀಠವು, ಕಳೆದ ಮೇ 22 ರಂದು ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿತು.
ರಾಜ್ಯ ವಕ್‌್ಫ ಮಂಡಳಿ ಮತ್ತು ಕೇಂದ್ರ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸಂಖ್ಯೆ ಮೂರು ಇರಬಾರದೆಂದು ಹೇಳಿರುವ ನ್ಯಾಯಾಲಯ, ವಕ್ಫ್ ಮಂಡಳಿಯ ಸದಸ್ಯರಾಗಲು ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಸರಿಸುವ ಷರತ್ತು ವಿಧಿಸಿದ ನಿಬಂಧನೆಯನ್ನು ತಡೆ ಹಿಡಿಯಲಾಗಿದೆ. ಸರಿಯಾದ ನಿಯಮಗಳನ್ನು ರೂಪಿಸುವವರಿಗೆ ಈ ನಿಬಂಧನೆಯನ್ನು ಜಾರಿಗೆ ತರಲಾಗುವುದಿಲ್ಲ. ಇದಲ್ಲದೆ ಸೆಕ್ಷನ್‌ 3(74)ಗೆ ಸಂಬಂಧಿಸಿದ ಕಂದಾಯ ದಾಖಲೆಗಳ ಒದಗಿಸುವಿಕೆಯನ್ನು ಸಹ ತಡೆ ಹಿಡಿದಿದೆ.

ಅಲ್ಲದೆ, ಮುಸ್ಲಿಮೇತರರನ್ನು ಸಿಇಒ ಆಗಿ ನೇಮಿಸುವ ಕುರಿತ ತಿದ್ದುಪಡಿಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ. ಅಂದರೆ, ವಕ್ಫ್ ಮಂಡಳಿಯ ಅಧ್ಯಕ್ಷರು ಮುಸ್ಲಿಂ ಅಥವಾ ಹಿಂದೂಗಳಲ್ಲದವರಾಗಬೇಕೆಂಬ ಬಗ್ಗೆ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಸಾಧ್ಯವಾದರೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಮರಾಗಿರಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ.

ಈ ತೀರ್ಪಿನ ಪ್ರಮುಖ ಅಂಶಗಳು
ವಕ್‌್ಫ ರಚಿಸಲು ಒಬ್ಬ ವ್ಯಕ್ತಿ 5 ವರ್ಷಗಳ ಕಾಲ ಇಸ್ಲಾಂ ಧರ್ಮದ ಅನುಯಾಯಿಯಾಗಿರಬೇಕು ಎಂದು ಹೇಳುವ ವಕ್‌್ಫ ತಿದ್ದುಪಡಿ ಕಾಯ್ದೆ 2025ರ ನಿಬಂಧನೆಯನ್ನು ಸುಪ್ರೀಂಕೋರ್ಟ್‌ ತಡೆಹಿಡಿದಿದೆ. ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮದ ಅನುಯಾಯಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆಗೆ ಈ ನಿಬಂಧನೆಯನ್ನು ಅಮಾನತುಗೊಳಿಸಲಾಗಿದೆ.

ಕಲೆಕ್ಟರ್‌ ಹಕ್ಕುಗಳ ಕುರಿತು
ಕಲೆಕ್ಟರ್‌ ಹಕ್ಕುಗಳ ಕುರಿತು ಸುಪ್ರೀಂಕೋರ್ಟ್‌ ತನ್ನ ನಿರ್ಧಾರವು ಅಂತಿಮ ನಿರ್ಧಾರವಾಗುವುದಿಲ್ಲ ಎಂದು ಹೇಳಿದೆ. ಈ ಪ್ರಕರಣದಲ್ಲಿ, ಸುಪ್ರೀಂಕೋರ್ಟ್‌ ಮುಸ್ಲಿಂ ಕಡೆಯ ವಾದವನ್ನು ಒಪ್ಪಿಕೊಂಡಿತು. ಈ ರೀತಿಯಾಗಿ, ಇದು ಮುಸ್ಲಿಂ ಕಡೆಯವರಿಗೆ ಸಮಾಧಾನಕರ ವಿಷಯವಾಗಿದೆ.

ಯಾವುದೇ ಕಾನೂನಿನ ಸಾಂವಿಧಾನಿಕತೆಯ ಪರವಾಗಿ ಯಾವಾಗಲೂ ಊಹೆ ಇರುತ್ತದೆ ಮತ್ತು ಬಹಳ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಹಸ್ತಕ್ಷೇಪ ಮಾಡಬಹುದು ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಸಿಜೆಐ ಹೇಳಿದರು. ಪ್ರತಿಯೊಂದು ವಿಭಾಗಕ್ಕೂ ಪ್ರಾಥಮಿಕ ಸವಾಲನ್ನು ನಾವು ಪರಿಗಣಿಸಿದ್ದೇವೆ. ಇಡೀ ಕಾಯ್ದೆಯ ನಿಬಂಧನೆಗಳನ್ನು ತಡೆಯಲು ಯಾವುದೇ ಆಧಾರವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಕೆಲವು ವಿಭಾಗಗಳಿಗೆ ರಕ್ಷಣೆ ಬೇಕು ಎಂದಿದ್ದಾರೆ.

ಸೆಕ್ಷನ್‌ 3 (ಆರ್‌) ಕುರಿತು ಸುಪ್ರೀಂಕೋರ್ಟ್‌
ಈ ನಿಬಂಧನೆಯು ವ್ಯಕ್ತಿಯು 5 ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಸರಿಸಬೇಕು ಎಂಬ ಷರತ್ತನ್ನು ವಿಧಿಸುತ್ತದೆ. ಯಾವುದೇ ಕಾರ್ಯವಿಧಾನವಿಲ್ಲದೆ, ಈ ನಿಬಂಧನೆಯು ಅನಿಯಂತ್ರಿತ ಅಧಿಕಾರಗಳ ವ್ಯಾಯಾಮಕ್ಕೆ ಕಾರಣವಾಗುತ್ತದೆ, ಆದ್ದರಿಂದ ಅದನ್ನು ತಡೆಹಿಡಿಯಲಾಗಿದೆ. ವೈಯಕ್ತಿಕ ನಾಗರಿಕರ ಹಕ್ಕುಗಳನ್ನು ನಿರ್ಧರಿಸಲು ಕಲೆಕ್ಟರ್ಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಿಜೆಐ ಹೇಳಿದರು. ಇದು ಅಧಿಕಾರಗಳ ಪ್ರತ್ಯೇಕತೆಯ ತತ್ವವನ್ನು ಉಲ್ಲಂಘಿಸುತ್ತದೆ. ನ್ಯಾಯಮಂಡಳಿಯು ನಿರ್ಧಾರ ತೆಗೆದುಕೊಳ್ಳುವವರೆಗೆ, ಯಾವುದೇ ಪಕ್ಷದ ವಿರುದ್ಧ ಯಾವುದೇ ಮೂರನೇ ವ್ಯಕ್ತಿಯ ಹಕ್ಕನ್ನು ರಚಿಸಲಾಗುವುದಿಲ್ಲ. ಕಲೆಕ್ಟರ್‌ಗೆ ಅಂತಹ ಅಧಿಕಾರಗಳನ್ನು ನೀಡುವ ನಿಬಂಧನೆಯನ್ನು ಅಮಾನತು ಗೊಳಿಸಲಾಗುತ್ತದೆ.

ಸದಸ್ಯರನ್ನು ಹೊಂದುವಂತಿಲ್ಲ
ವಕ್ಫ್ ಮಂಡಳಿಯು ಮೂರಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಹೊಂದುವಂತಿಲ್ಲ ಮತ್ತು ಒಟ್ಟು 4 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರು ಇರುವಂತಿಲ್ಲ ಎಂದು ನಾವು ವಾದಿಸುತ್ತೇವೆ. ನೋಂದಣಿ 1995 ರಿಂದ 2013 ರವರೆಗೆ ಅಸ್ತಿತ್ವದಲ್ಲಿತ್ತು ಎಂದು ನಾವು ವಾದಿಸಿದ್ದೇವೆ ಮತ್ತು ಈಗ ಮತ್ತೆ ಹೇಳಿದ್ದೇವೆ ಎಂದು ಸಿಜೆಐ ಹೇಳಿದರು. ಆದ್ದರಿಂದ, ನೋಂದಣಿ ಹೊಸ ನಿಬಂಧನೆಯಲ್ಲ ಎಂದು ನಾವು ವಾದಿಸಿದ್ದೇವೆ. ನೋಂದಣಿಗೆ ಸಮಯ ಮಿತಿಯನ್ನು ಸಹ ನಾವು ಪರಿಗಣಿಸಿದ್ದೇವೆ ಎಂದಿದೆ.

ಸಂಸತ್ತಿನಿಂದ ಅಂಗೀಕೃತವಾದ ಕಾನೂನನ್ನು ಕೇವಲ ತಾತ್ವಿಕ ಆಕ್ಷೇಪಣೆಗಳ ಆಧಾರದ ಮೇಲೆ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ವಕ್ಫ್ ಸಂಸ್ಥೆಗಳು ಸಾರಕಗಳನ್ನು ದುರುಪಯೋಗ ಪಡಿಸಿಕೊಂಡಿರುವುದು, ಅಂಗಡಿಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡಿರುವುದು ಹಾಗೂ ಅನಧಿಕೃತ ಬದಲಾವಣೆಗಳನ್ನು ನಡೆಸಿರುವುದನ್ನು ಉಲ್ಲೇಖಿಸಿದರು.

ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ವಕ್ಫ್ ಸಂಸ್ಥೆಗಳು ಸಾರಕಗಳನ್ನು ದುರುಪಯೋಗಪಡಿಸಿಕೊಂಡಿರುವುದು, ಅಂಗಡಿಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡಿರುವುದು ಹಾಗೂ ಅನಧಿಕೃತ ಬದಲಾವಣೆಗಳನ್ನು ನಡೆಸಿರುವುದನ್ನು ಉಲ್ಲೇಖಿಸಿದರು.
ಕೇಂದ್ರ ಸರ್ಕಾರವು ಈ ಹಿಂದೆ ಯಾವುದೇ ವಕ್ಫ್ ಆಸ್ತಿಯನ್ನು, ಬಳಕೆದಾರರು ಸ್ಥಾಪಿಸಿದ ಆಸ್ತಿಗಳನ್ನು, ಡಿನೋಟಿಫೈ ಮಾಡಲಾಗುವುದಿಲ್ಲ ಎಂಬ ಭರವಸೆ ನೀಡಿತ್ತು. ಅಲ್ಲದೆ, 2025ರ ಕಾಯ್ದೆಯಡಿಯಲ್ಲಿ ಕೇಂದ್ರ ವಕ್ಫ್ ಕೌನ್ಸಿಲ್‌ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ನೇಮಕ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಈ ಹಿನ್ನೆಲೆಯಲ್ಲಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕಳೆದ ಎಪ್ರಿಲ್‌ 25ರಂದು ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸುವ ಪ್ರಾಥಮಿಕ ಅಫಿಡವಿಟ್‌ ಅನ್ನು ಸುಪ್ರೀಂಕೋರ್ಟ್‌ ಸಲ್ಲಿಸಿ ಸಲ್ಲಿಸಿತ್ತು.

ಸೆಪ್ಟೆಂಬರ್‌ನಲ್ಲಿ ದುರ್ಬಲಗೊಂಡ ಮುಂಗಾರು, ಎರಡು ವಾರಗಳಲ್ಲಿ ಶೇ.23ರಷ್ಟು ಮಳೆ ಕೊರತೆ

ಬೆಂಗಳೂರು, ಸೆ.15-ಜುಲೈ, ಆಗಸ್ಟ್‌ ತಿಂಗಳಲ್ಲಿ ಉತ್ತಮವಾಗಿದ್ದ ನೈಋತ್ಯ ಮುಂಗಾರು ಮಳೆ ಸೆಪ್ಟೆಂಬರ್‌ನಲ್ಲಿ ದುರ್ಬಲಗೊಂಡ ಪರಿಣಾಮ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.23ರಷ್ಟು ಮಳೆ ಕೊರತೆ ಕಂಡುಬಂದಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಒಟ್ಟಾರೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸೆಪ್ಟೆಂಬರ್‌ ಒಂದರಿಂದ ನಿನ್ನೆಯವರೆಗೆ ರಾಜ್ಯದ ವಾಡಿಕೆ ಮಳೆ ಪ್ರಮಾಣ 65 ಮಿ.ಮೀ.ನಷ್ಟಿದ್ದು, 50 ಮಿ.ಮೀ.ನಷ್ಟು ಮಳೆಯಾಗಿದೆ. ಒಟ್ಟಾರೆ ಶೇ.23ರಷ್ಟು ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ.

ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಶೇ.41ರಷ್ಟು, ಮಲೆನಾಡು,ಉತ್ತರ ಒಳನಾಡಿನಲ್ಲಿ ಶೇ.15ರಷ್ಟು, ಕರಾವಳಿ ಭಾಗದಲ್ಲಿ ಶೇ.24ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೆಲವೆಡೆ ಮುಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶದ ಕೊರತೆ ಕಂಡುಬಂದಿದೆ. ಒಳನಾಡಿನ ಬಹುತೇಕ ಸಣ್ಣ-ಪುಟ್ಟ ಕರೆ, ಕಟ್ಟೆಗಳಿಗೆ ಸಾಕಷ್ಟು ನೀರು ಬಂದಿಲ್ಲ. ಹೀಗಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಒಂದು ವಾರದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದ್ದು, ವಾಡಿಕೆಗಿಂತ ತೀವ್ರ ಕೊರತೆ ಕಂಡುಬಂದಿದೆ. ಅದರಲ್ಲೂ ಬೆಂಗಳೂರು ಹೊರತುಪಡಿಸಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಳೆ ಅಭಾವ ಕಂಡುಬಂದಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.33ರಷ್ಟು ಮಳೆ ಕಡಿಮೆಯಾಗಿದೆ.

ಆದರೆ. ಜೂನ ಒಂದರಿಂದ ಸೆ.14ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ಈ ಅವಧಿಯಲ್ಲಿ ರಾಜ್ಯದ ವಾಡಿಕೆಯ ಮಳೆ ಪ್ರಮಾಣ 756 ಮಿ.ಮೀ. ಆಗಿದ್ದು. 775 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ.3ರಷ್ಟು ವಾಡಿಕೆಗಿಂತ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಮಾತ್ರ ವಾಡಿಕೆಗಿಂತ ಶೇ.7ರಷ್ಟು ಕಡಿಮೆಯಾಗಿದೆ.

ಕಳೆದ ಮೂರುವರೆ ತಿಂಗಳಲ್ಲಿ ಪ್ರಮುಖ ನದಿಗಳ ಜಲಾನಯನ ಭಾಗದಲ್ಲಿ ಒಳ್ಳೆಯ ಮಳೆಯಾದ ಹಿನ್ನೆಲೆಯಲ್ಲಿ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಮುಂಗಾರಿನ ಅಂತಿಮ ಅವಧಿಯಲ್ಲಿದ್ದೂ, ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗದಿದ್ದರೆ, ಅಂರ್ತಜಲದ ಪ್ರಮಾಣ ತೀವ್ರ ಕುಸಿತವಾಗಲಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳು ಹೆಚ್ಚಾಗಿವೆ.

ಜನವರಿ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 1063 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.21ರಷ್ಟು ಹೆಚ್ಚು ಮಳೆಯಾಗಿದೆ. ಸದ್ಯಕ್ಕೆ ಹವಾಮಾನ ಮುನ್ಸೂಚನೆ ಪ್ರಕಾರ ಚದುರಿದಂತೆ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಆದರೆ, ಭಾರಿ ಮಳೆಯಾಗುವ ಸಾಧ್ಯತೆಗಳಿಲ್ಲ.

ಹೊತ್ತಿ ಉರಿದ ಬಿಎಂಟಿಸಿ ಬಸ್‌‍, ತಪ್ಪಿದ ಭಾರೀ ದುರಂತ

ಬೆಂಗಳೂರು,ಸೆ.15-ಬೆಳ್ಳಂಬೆಳಗ್ಗೆಯೇ ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ಬಿಎಂಟಿಸಿ ಬಸ್‌‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ಇಂದು ಬೆಳಗಿನ ಜಾವ 5.10ರ ಸುಮಾರಿನಲ್ಲಿ ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ಹೋಗುತ್ತಿದ್ದ ಬಿಎಂಟಿಸಿ ಬಸ್‌‍ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.ಈ ಬಸ್‌‍ ನಗರದ ಹೆಚ್‌ಎಎಲ್‌ ಮುಖ್ಯದ್ವಾರದ ಬಳಿ ಬರುತ್ತಿದ್ದಂತೆ ಬಸ್‌‍ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣ ಬಸ್‌‍ನ್ನು ರಸ್ತೆ ಬದಿ ನಿಲ್ಲಿಸಿದ್ದು, ನಿರ್ವಾಹಕರು ಪ್ರಯಾಣಿಕರನ್ನು ಕೆಳಗೆ ಇಳಿಸುವ ಮೂಲಕ ಭಾರೀ ದುರಂತವನ್ನು ತಪ್ಪಿಸಿದ್ದಾರೆ.

ನೋಡ ನೋಡುತ್ತಿದ್ದಂತೆ ಬೆಂಕಿ ಆವರಿಸಿಕೊಂಡು ಈ ಬಸ್‌‍ ಪೂರ್ತಿ ಹೊತ್ತಿ ಉರಿದಿದ್ದು, ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ ಬಸ್‌‍ ಸುಟ್ಟು ಕರಕಲಾಗಿದೆ.
ಈ ಬಗ್ಗೆ ಹೆಚ್‌ಎಎಲ್‌ ಪೊಲೀಸ್‌‍ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಅಧಿಕಾರಿಗಳು, ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹೂವುಗಳ ಬೆಲೆ ಕುಸಿತ, ಸೇವಂತಿ ಬೆಳೆದು ಕಂಗಾಲಾದ ರೈತರು

ಚಿಕ್ಕಬಳ್ಳಾಪುರ,ಸೆ.15- ಜಿಲ್ಲೆಯ ವಿವಿಧೆಡೆ ರೈತರು ಸೇವಂತಿ ಹೂವು ಬೆಳೆದಿದ್ದು ಶರನ್ನವರಾತ್ರಿ ಸಮೀಪಿಸುತ್ತಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.ರೈತರು ಇರುವ ಅಷ್ಟೋ ಇಷ್ಟೋ ನೀರಿನಲ್ಲಿ ಹೂವು ಬೆಳೆದು ಬೆಳೆದ ಹೂವಿನ ಕಟಾವಿಗೆ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಣೆ ಮಾಡುವ ವೆಚ್ಚವೂ ವಾಪಸ್‌‍ ಬರುತ್ತಿಲ್ಲ. ಹೀಗಾಗಿ ಒಂದಷ್ಟು ಮಂದಿ ರೈತರು, ತೋಟದಲ್ಲೇ ನಾಶಕ್ಕೆ ಮುಂದಾಗಿದ್ದರೆ ಇನ್ನೊಂದಷ್ಟು ಮುಂದೆ ರೈತರು ಹಾಕಿದ ಬಂಡವಾಳವೂ ಬಾರದೆ ತಲೆಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಕಳೆದ ಒಂದೆರಡು ವಾರಗಳ ಇಲ್ಲಿನ ಕ್ಯಾಂಪಸ್‌‍ ಬಳಿಯ ಮಾರುಕಟ್ಟೆಗೆ ತಂದ ಹೂವನ್ನ ರೈತರು ಹೂವಿನ ಮಾರುಕಟ್ಟೆ ಪ್ರಾಂಗಣದಲ್ಲಿ ಸುರಿದು ತಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಳೆದ 1 ತಿಂಗಳ ಹಿಂದೆ ಅದರಲ್ಲೂ ವರಮಹಾಲಕ್ಷೀ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ ಈಗ ಪಾತಾಳಕ್ಕೆ ಕುಸಿದಿದೆ. ವರಮಹಾಲಕ್ಷೀ ಹಬ್ಬದಂದು 1 ಕೆಜಿ ಚೆಂಡು ಹೂ 90 ರಿಂದ 120 ರೂಪಾಯಿಗೆ ಮಾರಾಟವಾಗಿತ್ತು ಆದ್ರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. 1 ಕೆಜಿ ಚೆಂಡು ಹೂ 1 ರೂಪಾಯಿ, 2 ರೂಪಾಯಿ. ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಮಾರುಕಟ್ಟೆಯಲ್ಲೆ ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ.

ಚೆಂಡು ಹೂ ಕೇಳೋರಿಲ್ಲ. ಇನ್ನೂ ವರಮಹಾಲಕ್ಷೀ ಮತ್ತು ಗೌರಿಗಣೇಶ ಹಬ್ಬದ ಸಮಯದಲ್ಲಿ ಸೇವಂತಿಗೆ ಹೂ 300 ರಿಂದ 600 ರೂಪಾಯಿಗೂ ಮಾರಾಟವಾಗಿದೆ. ಆದರೆ ಈಗ 5 ರೂಪಾಯಿ, 10 ರೂಪಾಯಿಗೆ ಬೆಲೆ ಇಳಿದಿದೆ. ಇನ್ನೂ ಮಳೆಯಿಂದ ನೆನೆದು ಒದ್ದೆಯಾದ ಹೂಗಳನ್ನು ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸೇವಂತಿಗೆ ಹೂಗಳನ್ನು ಸಹ ರೈತರು ಎಲ್ಲಂದರಲ್ಲಿ ಬಿಸಾಡಿ ಹೋಗುವಂತಾಗಿದೆ. ಮತ್ತೊಂದೆಡೆ 150 ರೂಪಾಯಿಯಿಂದ 250 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು 10 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದೆ.

ಹೂವು ಕಟಾವಿಗೆ ದಿನಕ್ಕೆ ಒಬ್ಬರಿಗೆ 450 ರೂ. ಕೂಲಿ ಕೊಡಬೇಕಾಗುತ್ತದೆ. ಜೊತೆಗೆ ಸಾಗಣೆ ವೆಚ್ಚ, ಕಮಿಷನ್‌ ಭರಿಸಬೇಕಾಗುತ್ತದೆ. ಈಗ ಒಂದು ಬ್ಯಾಗ್‌ ಹೂ (45 ಕೆ.ಜಿ) ಮಾರಾಟ ಮಾಡಿದರೆ ಕೇವಲ 450 ರೂ. ಸಿಗುತ್ತದೆ. ನಮಗೆ ಏನೂ ಉಳಿಯುವುದಿಲ್ಲ. ಹೀಗಾಗಿ, ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದೇನೆ. ಮುಂದೆ ಲಾಭ ಸಿಗಬಹುದೆಂದು ಹಾಗೆಯೇ ಬಿಟ್ಟರೆ ನಿರ್ವಹಣೆಗೆ ಮತ್ತಷ್ಟು ವೆಚ್ಚ ಮಾಡಬೇಕಾಗುತ್ತದೆ. ಸ್ವಲ್ಪ ದಿನ ನೋಡಿ ಟ್ರ್ಯ್ಟಾಕ್ಟರ್‌ ಹತ್ತಿಸಿ ನಾಶ ಮಾಡಲಾಗುವುದೆಂದು ಹೊಸ ಹುಡ್ಯದ ರೈತರೊಬ್ಬರು ತಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನ ಮಾರುಕಟ್ಟೆಗೆ ವಿವಿಧೆಡೆಯಿಂದ ವಿಪರೀತ ಹೂವುಗಳು ಬರುತ್ತಿವೆ. ಹೀಗಾಗಿ, ಅಲ್ಲೂ ಬೇಡಿಕೆ ಇಲ್ಲವಾಗಿದೆ. ಇನ್ನು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಹೆಚ್ಚು ಹೂವು ಬೆಳೆದಿದ್ದು, ಅಲ್ಲಿನ ವರ್ತಕರಿಂದಲೂ ಬೇಡಿಕೆ ಇಲ್ಲವಾಗಿದೆ. ಪಿತೃ ಪಕ್ಷ ಕಾರಣ ಈಗ ಕಾರ್ಯಕ್ರಮಗಳು ಕಡಿಮೆ. ಹೀಗಾಗಿ, ಹೂವಿಗೆ ಬೇಡಿಕೆ ಕುಸಿದಿದೆ ಎಂದು ಕುರ್ಲಹಳ್ಳಿ ಗ್ರಾಮದ ನಾರಾಯಣಸೂರಿ ಹೇಳಿದ್ದಾರೆ.

ಇನ್ನು ರೈತರು ಬೆಳೆದ ಬೆಳೆಗಳ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತನತ್ತ ತೋಟಗಾರಿಕೆ ಇಲಾಖೆ ಸೇರಿದಂತೆ ಯಾರೂ ಸ್ಪಂದಿಸುತ್ತಿಲ್ಲವೆಂದು ಹೂವು ಬೆಳೆಗಾರರು ದೂರುತ್ತಿದ್ದಾರೆ. ಕೂಡಲೇ ಸರ್ಕಾರ ಹೂವು ಬೆಳೆಗಾರರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ. ಮುಂದೆ ಮಹಾಲಯ ಅಮಾವಾಸ್ಯೆ, ದಸರಾ ಆಯಧಪೂಜೆ, ದೀಪಾವಳಿ ಸೇರಿದಂತೆ ಸಾಲುಸಾಲು ಹಬ್ಬ ಬರಲಿದ್ದು, ಆಗ ದರದಲ್ಲಿ ಏರಿಕೆ ಕಾಣುವ ಆಶಾವಾದದಲ್ಲಿ ಇದ್ದಾರೆ.

ಇವೆಲ್ಲದರ ಹಿನ್ನಲೆಯಲ್ಲಿ ಹೂವು ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂವಿನ ಬೆಲೆ ಕುಸಿತದಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೂ ಬಿಸಾಡಿ ಬರಿಗೈಯಲ್ಲೇ ಮನೆಗೆ ಹೋಗುವಂತ ಪರಿಸ್ಥಿತಿ ನಿರ್ಮಾಣ ಆಗಿದೆ.

ಬಯಲುಸೀಮೆ ಪ್ರದೇಶವಾಗಿರುವ ಚಿಕ್ಕಬಳ್ಳಾಪುರದ ಈ ಭಾಗದಲ್ಲಿ ಯಾವುದೇ ನದಿ ನಾಲಾಗಳಿಲ್ಲದ ಜಿಲ್ಲೆ ನಮದು. ನೀರಿಗಾಗಿ ಹೆಂಡತಿ ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಿ, ಸಾಲ ಸೋಲ ಮಾಡಿ ಬೋರ್‌ ವೆಲ್‌ ಹಾಕಿಸಿ, ಸಮೃದ್ಧ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲ. 40 ಕೆಜಿ ಹೂವಿನ ಬ್ಯಾಗ್‌ ಮಾರಿದರೂ ರೂ 200 ರಿಂದ 400 ಬರುತ್ತದೆ. ಹೂ ಕೀಳುವ ಕೂಲಿ ಸಹಾ ಬರುವುದಿಲ್ಲ. ಈಗಲಾದರೂ ಸರ್ಕಾರ ನಮ ನೆರವಿಗೆ ಬರಬೇಕಿದೆ ಪುರದಗಡ್ಡೆ ಮಹಿಳೆ ಗಾಯತ್ರಿಅಂಬರೀಶ್‌ ಆಗ್ರಹಿಸಿದರು. ಒಂದು ಕಡೆ ಮಳೆ ಬಂದರೂ ಕಷ್ಟ, ಮಳೆ ಬರದಿದ್ದರೂ ಕಷ್ಟ ಎನ್ನುವ ಹಾಗೆ ರೈತರಿಗೆ ನಷ್ಟ ಎಂಬಂತಾಗಿದೆ.

32 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ : ಹೆಚ್‌.ಕೆ.ಪಾಟೀಲ್‌

ಬೆಂಗಳೂರು, ಸೆ.15-ಮಳೆಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದ 37 ಮಸೂದೆಗಳಲ್ಲಿ 32 ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು,ಅವುಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದೇ ದಿನದಲ್ಲಿ 15 ಮಸೂದೆಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿರುದುದು ದಾಖಲೆಯಾಗಿದೆ ಎಂದು ಹೇಳಿದ್ದಾರೆ.ವಿಧಾಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸಲಾಗಿದ್ದ 39 ವಿಧೇಯಕಗಳಲ್ಲಿ ಎರಡು ವಿಧೇಯಕಗಳನ್ನು ಜಂಟಿ ಆಯ್ಕೆ ಸಮಿತಿ ಪರಿಶೀಲನೆಗೆ ಒಪ್ಪಿಸಲಾಗಿದೆ.

ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರದ ಕಾನೂನುಗಳಿಗೆ ತಿದ್ದುಪಡಿಯಾಗಿರುವುದರಿಂದ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಿದ್ದಾರೆ ಎಂದಿದ್ದಾರೆ.

ಒಂದು ಮಸೂದೆಯು ರಾಜ್ಯಪಾಲರ ಬಳಿ ಅಂಕಿತಕ್ಕಾಗಿ ಬಾಕಿಇದ್ದು, ಇನ್ನೊಂದು ಮಸೂಸದೆಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತಿದೆ ಎಂದು ಹೆಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ತಲಾಖ್‌ ಹೇಳಿದ ಪತಿಗೆ ಕೋರ್ಟ್‌ ಆವರಣದಲ್ಲಿ ಚಪ್ಪಲಿ ಸೇವೆ ಮಾಡಿದ ಪತ್ನಿ

ರಾಂಪುರ, ಸೆ. 15: ಕೋರ್ಟ್‌ ಆವರಣದಲ್ಲೇ ಮೂರು ಬಾರಿ ತಲಾಖ್‌ ಹೇಳಿದ ಗಂಡನಿಗೆ ಮುಸ್ಲಿಂ ಮಹಿಳೆಯೊಬ್ಬರು ಚಪ್ಪಲಿ ಸೇವೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.
ಕೋರ್ಟ್‌ ಆವರಣದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಂಡನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಇದೀಗ ಎಲ್ಲೆಡೆ ಭಾರಿ ವೈರಲ್‌ ಆಗಿದೆ.

ಪತಿ ನನ್ನ ಮೇಲೆ ಮತ್ತೆ ಹಲ್ಲೆ ನಡೆಸಿ, ನ್ಯಾಯಾಲಯದ ಹೊರಗೆ ಮೂರು ಬಾರಿ ತಲಾಖ್‌ ಎಂದು ಉಚ್ಚರಿಸಿದ್ದಾನೆ. ಅದಕ್ಕಾಗಿ ಕೋಪಬಂದು ಥಳಿಸಿದ್ದಾಗಿ ಮಹಿಳೆ ತಿಳಿಸಿದ್ದಾರೆ. ತಾನು 2018 ರಲ್ಲಿ ಮದುವೆಯಾಗಿದ್ದು, ಮದುವೆಯಾಗಿ ಸ್ವಲ್ಪ ದಿನದಲ್ಲೇ ಗಂಡ ತನ್ನ ಮೇಲೆ ಹಲ್ಲೆ ನಡೆಸಲು ಶುರು ಮಾಡಿದ್ದ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ.

ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಮನೆಯಿಂದ ಹೊರಗೆ ಹಾಕಿದ್ದ.ನಂತರ ಜೀವನಾಂಶಕ್ಕಾಗಿ ಮೊಕದ್ದಮೆ ಹೂಡಿದಾಗ ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಎಂದು ಆಕೆ ಹೇಳಿಕೊಂಡಿದ್ದಾರೆ.ನ್ಯಾಯಾಲಯದಿಂದ ಸಹಾಯ ಪಡೆಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು ಮತ್ತು ಆರ್ಥಿಕ ಸಹಾಯಕ್ಕಾಗಿ ಮೊಕದ್ದಮೆ ಹೂಡಿದ್ದಾಗಿ ತಿಳಿಸಿದ್ದಾರೆ.

ಆಕೆ ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ, ಆಕೆಯ ಪತಿ ಮತ್ತು ಮಾವ ಆಕೆಯನ್ನು ಹಿಂಬಾಲಿಸಿದ್ದರು. ನಿಂದಿಸಿದ್ದರು. ಮತ್ತು ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದರು. ಬಳಿಕ ಮೂರು ಬಾರಿ ತಲಾಖ್‌ ಎಂದು ಹೇಳಿದ್ದಾನೆ. ಅದಕ್ಕೆ ಕೋಪಗೊಂಡ ಮಹಿಳೆ ತಾನು ಧರಿಸಿದ್ದ ಚಪ್ಪಲಿ ತೆಗೆದು ಪತಿರಾಯನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಕೈ ಕುಲುಕುದ ಟೀಮ್ ಇಂಡಿಯಾ ವಿರುದ್ಧ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ಗೆ ದೂರು ನೀಡಿದ ಪಾಕ್‌

ದುಬೈ, ಸೆ. 15 (ಪಿಟಿಐ) ಏಷ್ಯಾ ಕಪ್‌ ಪಂದ್ಯದ ನಂತರ ಭಾರತೀಯ ಆಟಗಾರರು ತಮ್ಮೊಂದಿಗೆ ಕೈಕುಲುಕಲು ನಿರಾಕರಿಸಿದ್ದಕ್ಕಾಗಿ ಪಾಕಿಸ್ತಾನ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ಗೆ ಪ್ರತಿಭಟನೆ ಸಲ್ಲಿಸಿದೆ.

ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಘಟಕಕ್ಕೆ ಏಳು ವಿಕೆಟ್‌ಗಳ ಗೆಲುವಿನ ನಂತರ ಭಾರತದ ಕ್ರಮವನ್ನು ಕ್ರೀಡಾರಹಿತ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ರಾತ್ರಿ ಹೇಳಿಕೆ ನೀಡಿದೆ.
ಭಾರತೀಯ ಆಟಗಾರರು ಕೈಕುಲುಕದಿರುವ ವರ್ತನೆಯ ವಿರುದ್ಧ ತಂಡದ ವ್ಯವಸ್ಥಾಪಕ ನವೀದ್‌ ಚೀಮಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು.

ಇದನ್ನು ಕ್ರೀಡಾಸ್ಪರ್ಧೆಗೆ ವಿರುದ್ಧವೆಂದು ಮತ್ತು ಆಟದ ಕ್ರೀಡೆಗೆ ವಿರುದ್ಧವೆಂದು ಪರಿಗಣಿಸಲಾಗಿದೆ. ಪ್ರತಿಭಟನೆಯಾಗಿ ನಾವು ನಮ್ಮ ನಾಯಕನನ್ನು ಪಂದ್ಯದ ನಂತರದ ಸಮಾರಂಭಕ್ಕೆ ಕಳುಹಿಸಲಿಲ್ಲ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಏಪ್ರಿಲ್‌ನಲ್ಲಿ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳೊಂದಿಗೆ ಒಗ್ಗಟ್ಟನ್ನು ತೋರಿಸುವ ಒಂದು ಮಾರ್ಗವೆಂದರೆ ಎದುರಾಳಿಗಳೊಂದಿಗೆ ಕೈಕುಲುಕದಿರುವ ನಿರ್ಧಾರ ಎಂದು ಸೂರ್ಯಕುಮಾರ್‌ ಹೇಳಿದರು.

ಕಾಶ್ಮೀರದಲ್ಲಿ ನಡೆದ ಭೀಕರ ದಾಳಿ ಮತ್ತು ಮೇ ತಿಂಗಳಲ್ಲಿ ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ ನಂತರ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿಗಳು ಕ್ರಿಕೆಟ್‌ ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾದರು.ಎಲ್ಲಾ ವಿಭಾಗಗಳಲ್ಲಿ ಭಾರತವು ಪಾಕಿಸ್ತಾನವನ್ನು ಮೀರಿಸಿದ್ದರಿಂದ ಯಾವುದೇ ಸ್ಪರ್ಧೆಯಿಲ್ಲದಂತಾಯಿತು.

ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ : 1 ಕೋಟಿ ರೂ. ಬಹುಮಾನ ಘೋಷಿಸಿದ್ದ ಮಾವೋವಾದಿ ಸೇರಿ ಮೂವರ ಹತ್ಯೆ

ರಾಂಚಿ,ಸೆ.15- ಜಾರ್ಖಂಡ್‌ನ ಹಜಾರಿಬಾಗ್‌ ಜಿಲ್ಲೆಯಲ್ಲಿ ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 1 ಕೋಟಿ ರೂಪಾಯಿ ಬಹುಮಾನವನ್ನು ಹೊತ್ತಿದ್ದ ಓರ್ವ ಸೇರಿದಂತೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ.

ಗೋರ್ಹರ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯ ಪಂಟಿತ್ರಿ ಅರಣ್ಯದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಹದೇವ್‌ ಸೊರೆನ್‌ ಪಡೆ ಮತ್ತು ಭದ್ರತಾ ಪಡೆಗಳ ನಡುವೆ ಬೆಳಿಗ್ಗೆ ಸುಮಾರು 6 ಗಂಟೆಯಲ್ಲಿ ಎನ್‌ಕೌಂಟರ್‌ ನಡೆದಿದೆ.

ಶೋಧನಾ ಕಾರ್ಯಾಚರಣೆಯಲ್ಲಿ 1 ಕೋಟಿ ರೂ.ಗಳ ಬಹುಮಾನವನ್ನು ಹೊತ್ತಿದ್ದ ಸಹದೇವ್‌ ಸೊರೆನ್‌ ಮತ್ತು ಇತರ ಇಬ್ಬರು ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೀಡಾದ ಕಮಾಂಡರ್‌ನನ್ನು ಸಹ್ದಿಯೋ ಸೊರೆನ್‌ ಎಂದು ಗುರುತಿಸಲಾಗಿದ್ದು, ಅವರು ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯರಾಗಿದ್ದರು. ಅವರು ಪೂರ್ವ ಭಾರತದಲ್ಲಿ ಅತ್ಯಂತವಾಗಿ ಬೇಕಾಗಿದ್ದ ಪ್ರಮುಖ ಮಾವೋವಾದಿ ನಾಯಕರಲ್ಲಿ ಒಬ್ಬರಾಗಿದ್ದರು.

ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕೋಬ್ರಾ ಬೆಟಾಲಿಯನ್‌, ಗಿರಿದಿಹ್‌ ಪೊಲೀಸರು ಮತ್ತು ಹಜಾರಿಬಾಗ್‌ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಗಿರಿದಿಹ್‌-ಬೊಕಾರೊ ಗಡಿಯ ಬಳಿಯ ತತಿಜಾರಿಯಾ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕರಂಡಿ ಗ್ರಾಮದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ.

ಇನ್ನಿಬ್ಬರು ಮಾವೋವಾದಿ ನಾಯಕರಿಗೆ – 25 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದ್ದ ಬಿಹಾರ-ಜಾರ್ಖಂಡ್‌ ವಿಶೇಷ ಪ್ರದೇಶ ಸಮಿತಿ ಸದಸ್ಯ ರಘುನಾಥ್‌ ಹೆಂಬ್ರಾಮ್‌ ಅಲಿಯಾಸ್‌‍ ಚಂಚಲ್‌ ಮತ್ತು 10 ಲಕ್ಷ ರೂ. ಬಹುಮಾನ ಘೋಷಿಸಿದ್ದ ವಲಯ ಸಮಿತಿ ಸದಸ್ಯ ಬಿರ್ಸೆನ್‌ ಗಂಜು ಅಲಿಯಾಸ್‌‍ ರಾಮ್ಖೇಲವಾನ್‌ – ಕೂಡ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.

ಎನ್‌ಕೌಂಟರ್‌ ನಂತರ ಭದ್ರತಾ ಪಡೆಗಳು ಮೂವರು ದಂಗೆಕೋರರ ಶವಗಳನ್ನು ವಶಪಡಿಸಿಕೊಂಡರು. ಅರಣ್ಯ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಜಿನಿಯರ್‌ಗಳ ದಿನ : ಸರ್‌ಎಂವಿಗೆ ವಂದಿಸಿದ ಪ್ರಧಾನಿ ಮೋದಿ

ನವದೆಹಲಿ, ಸೆ. 15 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಎಂಜಿನಿಯರ್‌ಗಳ ದಿನದಂದು ತಂತ್ರಜ್ಞರಿಗೆ ಶುಭಾಶಯ ಕೋರಿದರು ಮತ್ತು ವಿಕಸಿತ್‌ ಭಾರತವನ್ನು ನಿರ್ಮಿಸುವ ಸಾಮೂಹಿಕ ಪ್ರಯತ್ನಗಳಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದರು.

ಈ ದಿನವನ್ನು ಎಂಜಿನಿಯರ್‌ಗಳ ಕೊಡುಗೆಗೆ ಗೌರವವಾಗಿ ಮತ್ತು ಪ್ರಸಿದ್ಧ ಸಿವಿಲ್‌ ಎಂಜಿನಿಯರ್‌ ಮತ್ತು ಆಡಳಿತಾಧಿಕಾರಿ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸಲು ಆಚರಿಸಲಾಗುತ್ತದೆ.

ಎಂಜಿನಿಯರ್‌ಗಳ ದಿನದಂದು, ಭಾರತದ ಎಂಜಿನಿಯರಿಂಗ್‌ ಭೂದೃಶ್ಯದಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುತ್ತೇನೆ. ತಮ್ಮ ಸೃಜನಶೀಲತೆ ಮತ್ತು ದೃಢಸಂಕಲ್ಪದ ಮೂಲಕ, ನಾವೀನ್ಯತೆಯನ್ನು ಮುನ್ನಡೆಸುವುದನ್ನು ಮತ್ತು ವಲಯಗಳಾದ್ಯಂತ ಕಠಿಣ ಸವಾಲುಗಳನ್ನು ಎದುರಿಸುವುದನ್ನು ಮುಂದುವರಿಸುವ ಎಲ್ಲಾ ಎಂಜಿನಿಯರ್‌ಗಳಿಗೆ ನಾನು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಮೋದಿ ಎಕ್‌್ಸ ಮಾಡಿದ್ದಾರೆ.

ವಿಕಸಿತ್‌ ಭಾರತವನ್ನು ನಿರ್ಮಿಸುವ ಸಾಮೂಹಿಕ ಪ್ರಯತ್ನಗಳಲ್ಲಿ ನಮ್ಮ ಎಂಜಿನಿಯರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುವುದನ್ನು ಮುಂದುವರಿಸುತ್ತಾರೆ ಎಂದು ಅವರು ಹೇಳಿದರು.

ಭಾರತೀಯನ ಹತ್ಯೆಗೆ ಬಿಡೆನ್‌ ಅವರನ್ನು ದೂಷಿಸಿದ ಟ್ರಂಪ್‌

ಹೂಸ್ಟನ್‌,ಸೆ. 15 (ಪಿಟಿಐ) ಡಲ್ಲಾಸ್‌‍ನಲ್ಲಿ ಭಾರತೀಯ ಮೂಲದ ಮೋಟೆಲ್‌ ಮ್ಯಾನೇಜರ್‌ ಒಬ್ಬರ ಕ್ರೂರ ಶಿರಚ್ಛೇದನದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಹಿಂದಿನ ಅಧ್ಯಕ್ಷ ಜೋ ಬಿಡೆನ್‌ ರೂಪಿಸಿದ ವಲಸೆ ನೀತಿಯನ್ನು ಖಂಡಿಸಿದ್ದಾರೆ. ಈ ಘಟನೆಯನ್ನು ದಾಖಲೆರಹಿತ ಕ್ಯೂಬನ್‌ ವಲಸಿಗರೊಬ್ಬರು ನಡೆಸಿದ್ದಾಗಿ ಆರೋಪಿಸಲಾಗಿದೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್‌ನಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌‍, ದಾಳಿಕೋರನನ್ನು ಅಕ್ರಮ ಏಲಿಯನ್‌ ಎಂದು ಕರೆದರು, ಅವರನ್ನು ಗಡೀಪಾರು ಮಾಡಬೇಕಾಗಿತ್ತು, ಬಿಡೆನ್‌ರ ಸೌಮ್ಯ ನೀತಿಗಳೇ ಇದಕ್ಕೆ ಕಾರಣ ಎಂದು ಅವರು ಜರಿದಿದ್ದಾರೆ.

ಈ ಅಕ್ರಮ ವಲಸೆ ಅಪರಾಧಿಗಳ ಬಗ್ಗೆ ಮೃದುವಾಗಿ ವರ್ತಿಸುವುದು ಮುಗಿದಿದೆ ಎಂದು ಅವರು ಹೇಳಿದರು.ಕರ್ನಾಟಕದ ಮೂಲದ 50 ವರ್ಷದ ಚಂದ್ರ ಮೌಳಿ ಬಾಬ್‌‍ ನಾಗಮಲ್ಲಯ್ಯ ಅವರ ಮೇಲೆ ಸೆಪ್ಟೆಂಬರ್‌ 10 ರಂದು ಅವರು ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ಡೌನ್‌ಟೌನ್‌‍ ಸೂಟ್‌್ಸ ಮೋಟೆಲ್‌ನಲ್ಲಿ ಮಚ್ಚಿನಿಂದ ಹಲ್ಲೆ ನಡೆಸಲಾಗಿತ್ತು.

ತಮ್ಮ ಪತ್ನಿ ಮತ್ತು 18 ವರ್ಷದ ಮಗನ ಮುಂದೆ ನಡೆದ ಈ ಹಲ್ಲೆ ಭಾರತೀಯ-ಅಮೆರಿಕನ್‌ ಸಮುದಾಯವನ್ನು ಬೆಚ್ಚಿಬೀಳಿಸಿದೆ.ಆರೋಪಿ ಯೋರ್ದಾನಿಸ್‌‍ ಕೋಬೋಸ್‌‍-ಮಾರ್ಟಿನೆಜ್‌ (37) ಅವರ ಮೇಲೆ ಮರಣದಂಡನೆ ಶಿಕ್ಷೆಯ ಆರೋಪ ಹೊರಿಸಲಾಗಿದೆ.ಅಮೆರಿಕದ ವಲಸೆ ಅಧಿಕಾರಿಗಳು ಅವರನ್ನು ಈ ಹಿಂದೆ ಬಂಧಿಸಲಾಗಿತ್ತು ಎಂದು ದೃಢಪಡಿಸಿದರು ಆದರೆ ಕ್ಯೂಬಾ ಅವರ ಗಡೀಪಾರು ನಿರಾಕರಿಸಿದ ನಂತರ ಜನವರಿ 2025 ರಲ್ಲಿ ಬಿಡುಗಡೆ ಮಾಡಲಾಯಿತು.

ನಾಗಮಲ್ಲಯ್ಯ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್‌ 13 ರಂದು ಟೆಕ್ಸಾಸ್‌‍ನ ಫ್ಲವರ್‌ ಮೌಂಡ್‌ನಲ್ಲಿ ನಡೆಯಿತು, ನಿಕಟ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು.ಅವರ ಕುಟುಂಬವನ್ನು ಪೋಷಿಸಲು ನಿಧಿಸಂಗ್ರಹಣೆ 321,326 ಡಾಲರ್‌ಗೂ ಹೆಚ್ಚು ಹಣವನ್ನು ಸಂಗ್ರಹಿಸಿದೆ. ಈ ಹತ್ಯೆಯು ವಲಸೆ ಜಾರಿ ಮತ್ತು ದೇಶಗಳು ಗಡೀಪಾರು ಮಾಡುವವರನ್ನು ಸ್ವೀಕರಿಸಲು ನಿರಾಕರಿಸಿದಾಗ ಅಧಿಕಾರಿಗಳು ಎದುರಿಸುವ ಸವಾಲುಗಳ ಕುರಿತು ಚರ್ಚೆಯನ್ನು ನವೀಕರಿಸಿದೆ.