Friday, November 7, 2025
Home Blog Page 108

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2025)

ನಿತ್ಯ ನೀತಿ : ತನ್ನ ಶಕ್ತಿಯ ಮೇಲೆ ನಂಬಿಕೆ ಇರುವ ವ್ಯಕ್ತಿ ಒಂಟಿಯಾಗಿ ನಿಲ್ಲುತ್ತಾನೆ. ನಂಬಿಕೆ ಇಲ್ಲದ ವ್ಯಕ್ತಿ ಗುಂಪಿನಲ್ಲಿ ನಿಲ್ಲುತ್ತಾನೆ.

ಪಂಚಾಂಗ : ಸೋಮವಾರ, 15-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ನವಮಿ / ನಕ್ಷತ್ರ: ಮೃಗಶಿರಾ / ಯೋಗ: ವ್ಯತೀಪಾತ / ಕರಣ: ತೈತಿಲ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.21
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ ಪೋಷಕರ ಬೆಂಬಲ ಸಿಗಲಿದೆ.
ವೃಷಭ: ಕೆಲವು ಕಾರಣಗಳಿಂದ ತೊಂದರೆಗೊಳಗಾಗಬಹುದು. ಪೋಷಕರ ಆಶೀರ್ವಾದ ಪಡೆಯಿರಿ.
ಮಿಥುನ: ಹೊಸ ಜನರನ್ನು ಭೇಟಿ ಮಾಡುವುದ ರಿಂದ ನಿಮಗೆ ಹೆಚ್ಚು ಪ್ರಯೋಜನವಾಗಲಿದೆ.

ಕಟಕ: ವೃತ್ತಿಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.
ಸಿಂಹ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿ ಅಥವಾ ಹಣ ದೊರೆಯುವ ಅವಕಾಶಗಳು ಹೆಚ್ಚಾಗಿವೆ.
ಕನ್ಯಾ: ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಲ್ಲಿ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗುವಿರಿ.

ತುಲಾ: ಮಾತು, ನಡವಳಿಕೆ ಯಿಂದ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಾಽಸುವಿರಿ.
ವೃಶ್ಚಿಕ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಧನುಸ್ಸು: ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನೆರೆಹೊರೆಯವರೊಂದಿಗೆ ಹೆಚ್ಚು ಜಾಗರೂಕರಾಗಿರಿ.

ಮಕರ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದು ಕೊಳ್ಳುವುದನ್ನು ತಪ್ಪಿಸಿ.
ಕುಂಭ: ಆರೋಗ್ಯದ ಕೊರತೆಯಿಂದ ಹಣಕಾಸಿನ ಸ್ಥಿತಿಯೂ ದುರ್ಬಲಗೊಳ್ಳುವ ಸಾಧ್ಯತೆ ಇದೆ.
ಮೀನ: ತಾಯಿ ಮತ್ತು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಿರಿ.

ಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜದ ಪಿಡುಗು : ನ್ಯಾಯಮೂರ್ತಿ ಹೆಚ್‌.ಪಿ. ಸಂದೇಶ್‌

ಬೆಂಗಳೂರು, ಸೆ.14- ದೇಶದಲ್ಲಿ ಸ್ಥಿತ್ಯಂತರವಾಗಲು ಸಮಾಜದ ಸಮಸ್ಯೆಗಳಾದ ಕ್ಯಾಸ್ಟ್‌ (ಜಾತಿ), ಕ್ರೈಮ್‌ (ಅಪರಾಧ) ಮತ್ತು ಕರಪ್ಷನ್‌ (ಭ್ರಷ್ಟಾಚಾರ) ಕಾರಣಗಳಾಗಿವೆ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಹೆಚ್‌.ಪಿ. ಸಂದೇಶ್‌ರವರು ಹೇಳಿದರು.

ಈ ಸಮಸ್ಯೆಗಳನ್ನು ಹೋಗಲಾಡಿಸಲು ಹೆಡ್‌ (ಬುದ್ಧಿ-ತಲೆ) ಹಾರ್ಟ್‌ (ಹೃದಯ-ಮನಸ್ಸು) ಮತ್ತು ಹ್ಯಾಂಡ್‌ (ಕೈ-ಹಸ್ತ)ಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಅವರು ಕರೆ ನೀಡಿದರು.
ರಾಜಾಜಿನಗರದ ಅಭಿಮಾನಿ ವಸತಿಯಲ್ಲಿ ಮೈಸೂರಿನ ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ಮತ್ತು ಪ್ರತಿಭಾ ಸಂಸತ್‌ ಹಮಿಕೊಂಡಿದ್ದ ಸಂಸ್ಕೃತೋತ್ಸವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮೋಹ-ಆಸೆ ಇದ್ದಾಗ ಅಪರಾಧಗಳು ಘಟಿಸುತ್ತವೆ ಎಂದರು.

ಮೋಹವನ್ನು ದೂರವಿಟ್ಟಾಗ ಸಮಾಜಕ್ಕೆ ಒಳಿತಾಗುತ್ತದೆ. ನಮ ಬುದ್ಧಿ, ಮನಸ್ಸು ಬಳಸಿ ಸಮಾಜದ ಶೋಷಿತರು, ಊಟವಿಲ್ಲದವರು, ವಿಧವೆಯರಂಥವರಿಗೆ ದನಿಯಾಗಬೇಕು. ಕೈಗಳಿಂದ ಕೆಲಸ ಮಾಡಿ ಬರತಕ್ಕ ಅದಾಯದಲ್ಲಿ ನೊಂದವರಿಗೆ ನೆರವು ನೀಡಬೇಕು. ಮನುಷ್ಯ ತುಕ್ಕು ಹಿಡಿಯದೆ ತನ್ನನ್ನು ಸವೆಸುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತವಿಶ್ವಾಸ, ನಿರ್ಭಯತೆ ಇವು ಮಾನವನಿಗೆ ಬೇಕಾದ ಪಂಚಮಂತ್ರಗಳು. ಸಂಸ್ಕೃತ ಎಂದೊಡನೆ ನಮ ದೇಶದ ದೇವಭಾಷೆ, ಶಾಸ್ತ್ರೀಯ ಭಾಷೆ ಎಂಬ ಪರಿಕಲ್ಪನೆ ಮೂಡುತ್ತದೆ. 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸಂಸ್ಕೃತ ನಮ ಭಾಷೆಯಲ್ಲಿ ಶೇ.40ರಷ್ಟು ಬೆರೆತಿದೆ. ಸಂಸ್ಕೃತವು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ರಾಮಾಯಣ, ಮಹಾಭಾರತ, ನ್ಯಾಯಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಅರ್ಥಶಾಸ್ತ್ರ ಎಲ್ಲಕ್ಕೂ ಸಂಸ್ಕೃತದ ಕೊಡುಗೆ ಅಪಾರ ಎಂದು ಅವರು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂಸ್ಕೃತೋತ್ಸವದ ಕುರಿತು ಭಾಷಣ ಮಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್‌‍. ಅಹಲ್ಯಾಶರ್ಮ ಅವರು ಇಂದು ಜಗತ್ತಿನ ಜನತೆ ನೆಮದಿ ತಂದುಕೊಳ್ಳಲು ಧ್ಯಾನ, ಯೋಗ ಇತ್ಯಾದಿ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇವೆಲ್ಲಕ್ಕೂ ಸಂಸ್ಕೃತವೇ ಮೂಲವಾಗಿದೆ ಎಂದು ಪ್ರತಿಪಾದಿಸಿದರು.

ಸಂಸ್ಕೃತ ಭಾಷೆಯಲ್ಲಿ ಯಾವ ಪದವನ್ನು ಎಲ್ಲಿಟ್ಟು ಬಳಸಿದರೂ ಅರ್ಥ ವ್ಯತ್ಯಾಸವಾಗುವು ದಿಲ್ಲ. ಇಂದಿನ ಕೃತಕ ಬುದ್ಧಿಮತ್ತೆ (ಎಐ)ಗೆ ಬೇಕಾಗಿರುವ ಭಾಷೆಯೇ ಇದು. ಒಂದು ವಾಕ್ಯ, ಪದ್ಯ ಬರೆಯಬೇಕಾದರೆ, ಸಂಸ್ಕೃತ ಭಾಷೆಯ ಲಾಲಿತ್ಯ ಅನುಪಮ. ಸಂಸ್ಕೃತ ಸಾಹಿತ್ಯ ಓದಿದರೆ ಆನಂದಾನುಭೂತಿ ಉಂಟಾಗುವುದು. ಸಂಸ್ಕೃತ ಸಾಹಿತ್ಯವು ವೈಜ್ಞಾನಿಕ ಭಾಷಾ ಸ್ವರೂಪವನ್ನು ಹೊಂದಿದ್ದು, ತನ್ನ ಅಂತಃ ಸತ್ವದಿಂದ ಉಳಿದು ಬಂದಿದೆ ಎಂದು ಅವರು ನುಡಿದರು.

ಯೋಗಶಾಸ್ತ್ರದ ಬಗ್ಗೆ ಸಾವಿರಾರು ಪುಟಗಳಲ್ಲಿ ಹೇಳುವ ವಿಚಾರಗಳನ್ನು ಪತಂಜಲಿಯ 196 ಯೋಗಸೂತ್ರಗಳು ಹೇಳುತ್ತವೆ. 700 ಶ್ಲೋಕಗಳ ಭಗವದ್ಗೀತೆ ಸಮಾಜದಲ್ಲಿ ಪರಿವರ್ತನೆ ತರುತ್ತದೆ. ಜಗತ್ತಿನ ಅತಿಹೆಚ್ಚು ಸಾಹಿತ್ಯ ಕೃತಿಗಳು ಮತ್ತು ಹಸ್ತ ಪ್ರತಿಗಳಿರುವುದು ಸಂಸ್ಕೃತ ಭಾಷೆಯಲ್ಲಿ ಎಂದು ಅವರು ಹೇಳಿದರು.

ಸಂಸ್ಕೃತ ವಿಶ್ವವಿದ್ಯಾನಿಲಯವು ಸಂಸ್ಕೃತ ಕೃತಿಗಳು ಮತ್ತು ಹಸ್ತಪ್ರತಿಗಳ ಡಿಜಿಟಲೀಕರಣ ಮಾಡುತ್ತಿದೆ. ಸಂಸ್ಕೃತವನ್ನು ಕಾಪಿಡುವುದರ ಮೂಲಕ ಸಂಸ್ಕೃತಿಯ ಸಂರಕ್ಷಣೆ ಮತ್ತು ಜನಜೀವನದಲ್ಲಿ ಅದರ ಅಳವಡಿಕೆಗೆ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಶರಶ್ಚಂದ್ರ ಅವರು ಮಾತನಾಡಿ, ನಾನು ಸಂಸ್ಕೃತವನ್ನು ಮೃತ ಭಾಷೆ ಎಂದು ತಿಳಿದಿದ್ದೆ. ಶಿವಕುಮಾರಸ್ವಾಮಿ ಅವರ ಪರಿಚಯವಾದ ಮೇಲೆ ಅದರ ಹಿರಿಮೆ-ಗರಿಮೆಗಳ ಅರಿವಾಯಿತು ಎಂದರು.

ನಮ ದೇಶಕ್ಕಿಂತ ಜರ್ಮನಿಯಲ್ಲಿ ಸಂಸ್ಕೃತ ಜನಪ್ರಿಯವಾಗಿದೆ. ಸಂಸ್ಕೃತದ ಮೂಲ ಇನ್ನೂ ನಿಗೂಢವಾಗಿದೆ. ಎಲ್ಲಾ ಭಾಷೆಗಳಿಗೂ ಮೂಲವಾಗಿದೆ. ಶಿವಮೊಗ್ಗದ ಮತ್ತೂರಿನಲ್ಲಿ ಪೂರ್ಣವಾಗಿ ಸಂಸ್ಕೃತ ಮಾತನಾಡುವವರೇ ಇದ್ದಾರೆ. ಅದೇ ರೀತಿ ಇಂದು ಸಂಸ್ಕೃತವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್‌ ಡಾ.ಎಂ. ಶಿವಕುಮಾರಸ್ವಾಮಿ ಅವರು ಇಂದಿನ ಸಭೆಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮೂರೂ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದಾರೆ. ಇದು ಒಂದು ಅಪೂರ್ವ ಸಂಗಮವಾಗಿದೆ ಎಂದು ಬಣ್ಣಿಸಿದರು. ಪ್ರಾಧ್ಯಾಪಕ ವೆಂಕಟೇಶ್‌ ಅವರು ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.

ಬದಲಾಗುತ್ತಿದೆ ದೇಶದ ಜನಸಂಖ್ಯಾಶಾಸ್ತ್ರ : ಪ್ರಧಾನಿ ಮೋದಿ ಕಳವಳ

ದರ್ರಾಂಗ್‌, ಸೆ.14- ಗಡಿಯಲ್ಲಿ ಒಳ ನುಸುಳುವವರಿಗೆ ಸಹಾಯ ಮಾಡುವ ಮೂಲಕ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸುವ ಪಿತೂರಿಗಳು ನಡೆಯುತ್ತಿವೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದ್ದು, ದೇಶದಲ್ಲಿ ಜನಸಂಖ್ಯಾಶಾಸ್ತ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸಾಂಗೆ ಭೇಟಿ ನೀಡಿದ ಅವರು ದರ್ರಾಂಗ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಒಳನುಗ್ಗುವವರಿಂದ ದೇಶವನ್ನು ರಕ್ಷಿಸುವುದು ಮತ್ತು ದೇಶದ ಸಮಗ್ರತೆಯನ್ನು ಪುನಃಸ್ಥಾಪಿಸುವುದು ಬಿಜೆಪಿಯ ಉದ್ದೇಶವಾಗಿದೆ. ಒಳನುಗ್ಗುವವರನ್ನು ರಕ್ಷಿಸುವ ರಾಜಕಾರಣಿಗಳು ಮುಂದೆ ಬಂದು ಈ ಸಮಸ್ಯೆಯನ್ನು ಎದುರಿಸಬೇಕೆಂದು ನಾನು ಸವಾಲು ಹಾಕುತ್ತೇನೆ. ಒಳನುಸುಳುವವರನ್ನು ತೆರವು ಮಾಡಲು ನಾವು ಸತತ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಎದುರಾಗಿ ಬೇರೆ ಪಕ್ಷಗಳು ಯಾವ ಪ್ರಯತ್ನವನ್ನು ಮಾಡಿಲ್ಲ. ಮುಂದಿನ ದಿನಗಳಲ್ಲಿ ಒಳನುಸುಳುವವರಿಗೆ ಆಶ್ರಯ ನೀಡುವವರು ತಕ್ಕ ಬೆಲೆ ಪಾವತಿಸಬೇಕಾಗುತ್ತದೆ. ರಾಷ್ಟ್ರ ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಧಾನಿಯವರು ಇದೇ ಸಂದರ್ಭದಲ್ಲಿ 18,530 ಕೋಟಿ ರೂ.ಗಳ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ಬಳಿಕ ದರ್ರಾಂಗ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಜಿಎನ್‌ಂ ಶಾಲೆ, ಬಿ.ಎಸ್‌‍ಸಿ. ನರ್ಸಿಂಗ್‌ ಕಾಲೇಜು, ಗುವಾಹಟಿ ರಿಂಗ್‌ ರೋಡ್‌ ಯೋಜನೆ ಮತ್ತು ಬ್ರಹಪುತ್ರ ನದಿಯ ಮೇಲಿನ ಕುರುವಾ-ನರೇಂಗಿ ಸೇತುವೆಯನ್ನು ಪರಿಶೀಲಿಸಿದರು.

ಕಾಮಗಾರಿಗಳಿಗೆ ರಿಮೋಟ್‌ ಮೂಲಕ ಚಾಲನೆ ನೀಡಿದ ಅವರು, ಇದು ನನ್ನ ರಿಮೋಟ್‌ ಕಂಟ್ರೋಲ್‌. ನಾನು ಯಾರ ರಿಮೋಟ್‌ ಕಂಟ್ರೋಲ್‌ ನಲ್ಲಿ ಇಲ್ಲ. 140 ಕೋಟಿ ದೇಶವಾಸಿಗಳು ನನ್ನನ್ನು ರಿಮೋಟ್‌ ಕಂಟ್ರೋಲ್‌ ಮಾಡುತ್ತಿದ್ದಾರೆ ಎಂದರು.

ನನ್ನನ್ನು ಎಷ್ಟೇ ನಿಂದಿಸಿದರೂ ಪರವಾಗಿಲ್ಲ, ನಾನು ಶಿವನ ಭಕ್ತ, ನಾನು ಎಲ್ಲಾ ವಿಷವನ್ನು ಹೊರಹಾಕುತ್ತೇನೆ. ಆದರೆ ಬೇರೆಯವರಿಗೆ ಅವಮಾನವಾದಾಗ, ನಾನು ಅದನ್ನು ಸಹಿಸುವುದಿಲ್ಲ. ನೀವು ಹೇಳಿ, ಭೂಪೇನ್‌ ದಾ ಅವರಿಗೆ ಭಾರತ ರತ್ನ ನೀಡಿ ಗೌರವಿಸುವ ನನ್ನ ನಿರ್ಧಾರ ಸರಿಯೋ ತಪ್ಪೋ? ಭಾರತ ರತ್ನ ನೀಡಿ ಗೌರವಿಸಿದ್ದಕ್ಕಾಗಿ ಕಾಂಗ್ರೆಸ್‌‍ ಪಕ್ಷ ಮಾಡಿದ ಅವಮಾನ ಸರಿಯೋ ತಪ್ಪೋ? ನಾವು ಈಗಾಗಲೇ ಭಾರತ ರತ್ನ ಸುಧಾಕಾಂತ ಭೂಪೇನ್‌ ಹಜಾರಿಕಾ ಜಿ ಅವರ ಜನ್ಮದಿನವನ್ನು ಆಚರಿಸಿದ್ದೇವೆ. ಅವರ ಗೌರವಾರ್ಥವಾಗಿ ನಿನ್ನೆ ಆಯೋಜಿಸಲಾದ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು.

ಮುಖ್ಯಮಂತ್ರಿಗಳು ಕಾಂಗ್ರೆಸ್‌‍ ಪಕ್ಷದ ಅಧ್ಯಕ್ಷರ ವೀಡಿಯೊವನ್ನು ನನಗೆ ತೋರಿಸಿದರು, ಅದನ್ನು ನೋಡಿ ನನಗೆ ತುಂಬಾ ನೋವಾಯಿತು. ಭಾರತ ಸರ್ಕಾರವು ಈ ದೇಶದ ಮಹಾನ್‌ ಪುತ್ರ, ಅಸ್ಸಾಂನ ಹೆಮೆ ಭೂಪೇನ್‌ ಹಜಾರಿಕಾ ಜಿ ಅವರಿಗೆ ಭಾರತ ರತ್ನ ನೀಡಿದ ದಿನ. ಕಾಂಗ್ರೆಸ್‌‍ ಪಕ್ಷದ ಅಧ್ಯಕ್ಷರು ಮೋದಿ ನೃತ್ಯಗಾರರು ಮತ್ತು ಗಾಯಕರಿಗೆ ಭಾರತ ರತ್ನ ನೀಡುತ್ತಿದ್ದಾರೆ ಎಂದು ಹೇಳಿದ್ದರು. ಪಂಡಿತ್‌ ನೆಹರು ಹೇಳಿದಂತೆ, ಈಶಾನ್ಯ ಜನರ ಆ ಗಾಯಗಳು ಇಂದಿಗೂ ಗುಣವಾಗಿಲ್ಲ ಎಂದು ಮೋದಿ ಹೇಳಿದರು.

ಆಪರೇಷನ್‌ ಸಿಂಧೂರ್‌ ನಂತರ ನಿನ್ನೆ ಅಸ್ಸಾಂಗೆ ನನ್ನ ಮೊದಲ ಭೇಟಿಯಾಗಿತ್ತು. ಮಾತೆ ಕಾಮಾಕ್ಯ ಅವರ ಆಶೀರ್ವಾದದಿಂದ ಆಪರೇಷನ್‌ ಸಿಂಧೂರ್‌ ಭಾರಿ ಯಶಸ್ಸನ್ನು ಕಂಡಿತು. ಇಂದು, ಮಾತೆ ಕಾಮಾಖ್ಯರ ಭೂಮಿಗೆ ಬಂದಿರುವುದರಿಂದ ನನಗೆ ವಿಭಿನ್ನವಾದ ಪವಿತ್ರ ಅನುಭವವಾಗುತ್ತಿದೆ. ಈ ಪ್ರದೇಶದಲ್ಲಿ ಜನಾಷ್ಟಮಿ ಆಚರಿಸುತ್ತಿರುವುದು ಒಂದು ವಿಶೇಷ. ಕೆಂಪು ಕೋಟೆಯಿಂದ, ನಾನು ಚಕ್ರಧಾರಿ ಮೋಹನನನ್ನು ನೆನಪಿಸಿಕೊಂಡೆ ಎಂದು ಹೇಳಿದ್ದೆ. ನಾನು ಶ್ರೀ ಕೃಷ್ಣನನ್ನು ನೆನಪಿಸಿಕೊಂಡೆ. ಭವಿಷ್ಯದ ಭದ್ರತಾ ನೀತಿಯಲ್ಲಿ ಸುದರ್ಶನ ಚಕ್ರದ ಕಲ್ಪನೆಯನ್ನು ಜನರ ಮುಂದೆ ಮಂಡಿಸಿದ್ದೇನೆ ಎಂದಿದ್ದಾರೆ.

ಭಾರತ ಪ್ರಸ್ತುತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ ಮತ್ತು ಅಸ್ಸಾಂ ತನ್ನ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಅಭಿವೃದ್ಧಿಯೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿದ್ದ ಅಸ್ಸಾಂ ಗಮನಾರ್ಹವಾಗಿ ರೂಪಾಂತರಗೊಂಡಿದೆ ಮತ್ತು ಈಗ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ, ಶೇ.13 ಬೆಳವಣಿಗೆಯ ದರವನ್ನು ಹೊಂದಿದೆ.

ಈ ಪ್ರಭಾವಶಾಲಿ ಸಾಧನೆಯು ಅದರ ಜನರ ಸ್ಥಿತಿಸ್ಥಾಪಕತ್ವ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಇದು ಅಸ್ಸಾಂ ಜನರ ಕಠಿಣ ಪರಿಶ್ರಮ ಮತ್ತು ಬಿಜೆಪಿಯ ಡಬಲ್‌-ಎಂಜಿನ್‌ ಸರ್ಕಾರದ ಕೊಡುಗೆಗಳಿಂದ ನಡೆಸಲ್ಪಡುವ ಸಹಯೋಗದ ಪ್ರಯತ್ನಗಳ ಫಲಿತಾಂಶ ಎಂದರು.

ನಾಮದಾರ್‌, ಕಾಮ್ದಾರ್‌ ಅನ್ನು ಹೊಡೆದಾಗ ಮತ್ತು ಕಾಮ್ದಾರ್‌ ನೋವಿನಿಂದ ಕೂಗಿದರೆ, ಅವರು ಅವನನ್ನು ಇನ್ನಷ್ಟು ಹಿಂಸಿಸುತ್ತಾರೆ, ನಿಮಗೆ ಅಳುವ ಹಕ್ಕಿಲ್ಲ ಎಂದು ಹೇಳುತ್ತಾರೆ. ನಾಮದಾರ್‌ ಮುಂದೆ ಕಾಮ್ದಾರ್‌ ಆಗಿ ನೀವು ಹೇಗೆ ಅಳುತ್ತೀರಿ?… ದೇಶದ ಜನರು, ಸಂಗೀತ ಪ್ರೇಮಿಗಳು, ಕಲಾ ಪ್ರೇಮಿಗಳು, ಭಾರತದ ಆತಕ್ಕಾಗಿ ತಮ್ಮ ಪ್ರಾಣವನ್ನು ನೀಡುತ್ತಿರುವ ಜನ ಎಂದರು.

ಭೂಪೇನ್‌ ದಾ? ಅಸ್ಸಾಂನ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವುದು, ಅದನ್ನು ಸಂರಕ್ಷಿಸುವುದು ಮತ್ತು ಅಸ್ಸಾಂನ ತ್ವರಿತ ಅಭಿವೃದ್ಧಿ ಡಬಲ್‌-ಎಂಜಿನ್‌ ಸರ್ಕಾರದ ಆದ್ಯತೆಗಳಾಗಿವೆ. 21 ನೇ ಶತಮಾನದ ಮುಂದಿನ ಭಾಗವು ಈಶಾನ್ಯಕ್ಕೆ ಸೇರಿದೆ. ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಸಂಪರ್ಕವು ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ನಮ ಸರ್ಕಾರವು ಈಶಾನ್ಯದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಬದ್ಧವಾಗಿದೆ.

ಇದರಲ್ಲಿ ರಸ್ತೆಗಳು, ರೈಲ್ವೆಗಳು ಮತ್ತು ವಾಯುಮಾರ್ಗಗಳಂತಹ ಭೌತಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ 5ಜಿ, ಇಂಟರ್ನೆಟ್‌ ಮತ್ತು ಬ್ರಾಡ್‌ಬ್ಯಾಂಡ್‌ ಸೇವೆಗಳ ಮೂಲಕ ಡಿಜಿಟಲ್‌ ಸಂಪರ್ಕವನ್ನು ಒಳಗೊಂಡಿದೆ. ಈ ಪ್ರಗತಿಗಳು ಜೀವನವನ್ನು ಪರಿವರ್ತಿಸುತ್ತಿವೆ ಮತ್ತು ವ್ಯವಹಾರ ಬೆಳವಣಿಗೆಗೆ ಚಾಲನೆ ನೀಡುತ್ತಿವೆ, ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಹೇಳಿದರು.

ಕಾಂಗ್ರೆಸ್‌‍ ತನ್ನ ರಾಜಕೀಯಕ್ಕಾಗಿ ಭಾರತಕ್ಕೆ ವಿರುದ್ಧವಾದ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದೆ. ಆಪರೇಷನ್‌ ಸಿಂಧೂರ್‌ನ ಸಮಯದಲ್ಲಿಯೂ ಇದೇ ರೀತಿ ಕಂಡುಬಂದಿದೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಲ್ಲಿಯೂ ಭಯೋತ್ಪಾದಕರ ನಾಯಕರು ನಾಶವಾದರು. ಆದರೆ ಕಾಂಗ್ರೆಸ್‌‍ ಭಾರತೀಯ ಸೈನ್ಯದ ಬದಲು ಪಾಕಿಸ್ತಾನಿ ಸೈನ್ಯದ ಜೊತೆ ನಿಂತಿತು. ನಮ್ಮ ಸೈನ್ಯದ ಜೊತೆ ನಿಲ್ಲುವ ಬದಲು, ಕಾಂಗ್ರೆಸ್‌‍ ಪಕ್ಷದ ಜನರು ಭಯೋತ್ಪಾದಕರನ್ನು ಪೋಷಿಸುವವರ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಾರೆ. ಪಾಕಿಸ್ತಾನದ ಸುಳ್ಳುಗಳು ಕಾಂಗ್ರೆಸ್‌‍ನ ಕಾರ್ಯಸೂಚಿಯಾಗುತ್ತವೆ. ಅದಕ್ಕಾಗಿಯೇ ನೀವು ಯಾವಾಗಲೂ ಕಾಂಗ್ರೆಸ್‌‍ ಬಗ್ಗೆ ಜಾಗರೂಕರಾಗಿರಬೇಕು. ಕಾಂಗ್ರೆಸ್‌‍ ರಾಷ್ಟ್ರವಿರೋಧಿಗಳ ದೊಡ್ಡ ರಕ್ಷಕವಾಗಿದೆ. ದಶಕಗಳ ಕಾಲ ಕಾಂಗ್ರೆಸ್‌‍ ಅಸ್ಸಾಂ ಅನ್ನು ಆಳಿತು, ಆದರೆ ಅವರು 60 ರಿಂದ 65 ವರ್ಷಗಳಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ಕೇವಲ ಮೂರು ಸೇತುವೆಗಳನ್ನು ನಿರ್ಮಿಸಿದರು ಎಂದು ಪ್ರಧಾನಿ ಹೇಳಿದರು.

ನವರಾತ್ರಿಯ ಮೊದಲ ದಿನದಂದು, ಜಿಎಸ್‌‍ಟಿ ದರಗಳು ಗಮನಾರ್ಹವಾಗಿ ಕಡಿಮೆಯಾಗಲಿವೆ, ಇದು ಜನರಿಗೆ ಗಣನೀಯ ಪ್ರಯೋಜನಗಳನ್ನು ತರುತ್ತದೆ. ಜಿಎಸ್‌‍ಟಿ ಕಡಿತವು ಸಿಮೆಂಟ್‌, ವಿಮೆ, ಮೋಟಾರ್‌ ಸೈಕಲ್‌ಗಳು ಮತ್ತು ಕಾರುಗಳ ಬೆಲೆಗಳಲ್ಲಿ ಗಣನೀಯ ಇಳಿಕೆಗೆ ಕಾರಣವಾಗುತ್ತದೆ. ನೀವು ಈಗ ಖರೀದಿಸುವ ಯಾವುದೇ ವಸ್ತು ಸ್ವದೇಶಿ ಆಗಿರುತ್ತದೆ ಎಂದು ನಾನು ನನಗೆ ಭರವಸೆ ನೀಡುತ್ತೇನೆ. ಸ್ವದೇಶಿಯ ವ್ಯಾಖ್ಯಾನ ನನಗೆ ಸರಳವಾಗಿದೆ. ಕಂಪನಿಯು ಪ್ರಪಂಚದ ಯಾವುದೇ ಭಾಗದಿಂದ ಬಂದಿರಬಹುದು, ಆದರೆ ಬೆವರು ನನ್ನ ದೇಶದ ಯುವ ಸೈನಿಕರದ್ದಾಗಿರಬೇಕು. ಭಾರತದಲ್ಲಿ ಏನೇ ತಯಾರಾದರೂ, ಅದು ನನ್ನ ಭಾರತೀಯ ಮಣ್ಣಿನ ವಾಸನೆಯನ್ನು ಹೊಂದಿರಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್‌, ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಮತ್ತು ಇತರರು ಉಪಸ್ಥಿತರಿದ್ದರು.

ಲಂಡನ್‌ನಲ್ಲಿ ವಲಸಿಗರ ವಿರುದ್ಧ ರೊಚ್ಚಿಗೆದ್ದ ಬೃಹತ್‌ ಬಲಪಂಥೀಯರು, ಬೃಹತ್ ಪ್ರತಿಭಟನೆ

ಲಂಡನ್‌, ಸೆ.14- ಯುನೈಟೆಡ್‌ ಕಿಂಗ್‌ಡಮ್‌‍ ಇತಿಹಾಸದಲ್ಲೇ ಅತಿದೊಡ್ಡ ಬಲಪಂಥೀಯ ಪ್ರತಿಭಟನೆಗೆ ಲಂಡನ್‌ ಸಾಕ್ಷಿಯಾಗಿದೆ. ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್‌ ನೇತೃತ್ವದಲ್ಲಿ ನಡೆದ ಬೃಹತ್‌ ವಲಸೆ ವಿರೋಧಿ ಮೆರವಣಿಗೆಯಲ್ಲಿ ಸುಮಾರು 1,00,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು. ಈ ವೇಳೆ ಹಲವಾರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆಗಳು ನಡೆದಿದೆ.

ಪ್ರತಿಭಟನಾಕಾರರನ್ನು ಚದುರಿಸುತ್ತಿದ್ದ ವೇಳೆ ಸಣ್ಣ ಗುಂಪೊಂದು ಪೊಲೀಸ್‌‍ ಅಧಿಕಾರಿಗಳೊಂದಿಗೆ ಘರ್ಷಣೆಗೆ ಇಳಿದಿದೆ. ಈ ವೇಳೆ ರ್ಯಾಲಿಯ ಅಂಚಿನಲ್ಲಿದ್ದ ಕೆಲವರು ಖಾಲಿ ಬಾಟಲಿಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ಇದರಿಂದ ಕರ್ತವ್ಯದಲ್ಲಿದ್ದ 1,000ಕ್ಕೂ ಹೆಚ್ಚು ಪೊಲೀಸರ ಪೈಕಿ 26 ಮಂದಿ ಗಾಯಗೊಂಡಿದ್ದಾರೆ. ಕೆಲವರಿಗೆ ಹಲ್ಲು ಮುರಿದಿದೆ, ಮೂಗು ಗಾಯವಾಗಿದೆ ಇನ್ನೂ ಕೆಲವರಿಗೆ ಬೆನ್ನು ಮೂಳೆಯಲ್ಲಿ ಸಮಸ್ಯೆಯಾಗಿರುವುದು ಕಂಡುಬಂದಿದೆ.

ಪ್ರತಿಭಟನೆ ವೇಳೆ ಹಿಂಸಾತ್ಮಕ ಕೃತ್ಯಕ್ಕೆ ಮುಂದಾದ ಕನಿಷ್ಠ 25 ಜನರನ್ನ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರತಿಭಟನೆಯನ್ನು ಫಾರ್‌- ರೈಟ್‌ ಅಕ್ಟಿವಿಸ್ಟ್‌ ಟಾಮಿ ರಾಬಿನ್ಸನ್‌ (ಸ್ಟೀಫನ್‌ ಯ್ಯಾಕ್ಷಿ-ಲೆನ್ನನ್‌‍) ನೇತೃತ್ವದಲ್ಲಿ ಯುನೈಟ್‌ ದಿ ಕಿಂಗ್‌ಡಮ್‌‍ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಇಂಗ್ಲಿಷ್‌ ಡಿಫೆನ್ಸ್ ಲೀಗ್‌ ಸಂಸ್ಥಾಪಕನಾದ ರಾಬಿನ್ಸನ್‌, ಬ್ರಿಟನ್‌ನ ಪ್ರಭಾವಶಾಲಿ ಬಲಪಂಥೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಪ್ರತಿಭಟನಾಕಾರರು ಇಂಗ್ಲೆಂಡ್‌ ಮತ್ತು ಬ್ರಿಟನ್‌ ಧ್ವಜಗಳನ್ನ ಹಿಡಿದು, ವೆಸ್ಟ್‌ಮಿನ್‌ಸ್ಟರ್‌ ಕಡೆಗೆ ಮೆರವಣಿಗೆ ಹೊರಟಿದ್ದರು. ಇದೇ ವೇಳೆ ರಾಬಿನ್ಸನ್‌ ಪ್ರತಿಭಟನೆಗೆ ಪ್ರತಿಯಾಗಿ ಸ್ಟ್ಯಾಂಡ್‌ ಅಪ್‌ ಟು ರೇಸಿಸಂ ಗುಂಪು ನೇತೃತ್ವದಲ್ಲಿ 5,000 ಮಂದಿ ಪ್ರತಿಭಟನೆ ನಡೆಸಿದರು. ಮಾರ್ಚ್‌ ಅಗೈನ್‌ಸ್ಟ್‌‍ ಫ್ಯಾಸಿಸಂ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಾರಾ ಸುಲ್ತಾನಾ ಮತ್ತು ಡಯಾನ್‌ ಅಬ್‌ಬಟ್‌ನಂತಹ ಸಂಸದರು ಕೂಡ ಭಾಗವಹಿಸಿದರು. ಈ ಎರಡು ಗುಂಪುಗಳ ನಡುವಿನ ಘರ್ಷಣೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇನ್ನೂ ವಲಸೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನ ಹೊರತುಪಡಿಸಿ, ಹಿಂಸಾಚಾರವನ್ನೇ ಗುರಿಯಾಗಿಸಕೊಂಡು ಕೆಲವರು ಬಂದಿದ್ದರು. ಅವರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ಪೊಲೀಸರೊಂದಿಗೆ ಗುದ್ದಾಟವನ್ನೂ ನಡೆಸಿದರೂ ಎಂದು ಸಹಾಯಕ ಆಯುಕ್ತ ಮ್ಯಾಟ್‌ ಟ್ವಿಸ್ಟ್‌ ಹೇಳಿದರು.

ಪಾನಿಪುರಿ ತಿನ್ನಲು ಹೋಗಿ ಪ್ರಾಣ ಕಳೆದುಕೊಂಡ..!

ಬೆಂಗಳೂರು,ಸೆ.14- ಪಾನಿಪುರಿ ತಿನ್ನಲು ಹೋದ ಬಿಹಾರಿ ಮೂಲದ ಗಾರೆ ಕೆಲಸಗಾರನೋರ್ವನಿಗೆ ಸ್ಥಳೀಯನೊಬ್ಬ ಕೊಟ್ಟ ಒಂದೇ ಒಂದು ಪಂಚ್‌ಗೆ ಸಾವನ್ನಪ್ಪಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಅರಕೆರೆ ಬಳಿ ನಡೆದಿದೆ.ಬಿಹಾರ ಮೂಲದ ಭೀಮಕುಮಾರ್‌ (25) ಮೃತಪಟ್ಟ ಗಾರೆ ಕೆಲಸಗಾರ.

ಕಳೆದ 7 ರಂದು ಭೀಮಕುಮಾರ್‌ ತನ್ನ ಸ್ನೇಹಿತರೊಂದಿಗೆ ಅರಕೆರೆಗೆ ತೆರಳಿ ಪಾನಿಪುರಿ ತಿನ್ನುತ್ತಿದ್ದಾಗ ಅಲ್ಲಿಗೆ ಬಂದ ಸ್ಥಳೀಯನೊಬ್ಬ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಭೀಮಕುಮಾರ್‌ ಕುತ್ತಿಗೆ ಭಾಗಕ್ಕೆ ಒಂದು ಪಂಚ್‌ ಕೊಟ್ಟಿದ್ದಾನೆ.

ಇದರಿಂದ ಪ್ರಜ್ಞೆ ತಪ್ಪಿ ಕುಸಿದುಬಿದ್ದ ಕೂಡಲೇ ಸ್ನೇಹಿತರು ಆರೈಕೆ ಮಾಡಿ ಆತ ವಾಸವಿದ್ದ ಮೈಕೋ ಲೇ ಔಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಬಿಳೇಕಲ್ಲಳ್ಳಿ ಬಳಿಯ ನಿರ್ಮಾಣ ಹಂತದ ಕಟ್ಟಡದ ಶೆಡ್‌ಗೆ ಕರೆದುಕೊಂಡು ಹೋಗಿದ್ದಾರೆ.

ಕೆಲ ಸಮಯದ ನಂತರ ನೋವು ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೆ. 9 ರಂದು ಆತ ಮೃತಪಟ್ಟಿದ್ದಾನೆ.ಈ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪಂಚ್‌ ಕೊಟ್ಟ ಸ್ಥಳೀಯನ ಪತ್ತೆಗೆ ಬಲೆ ಬೀಸಿದ್ದಾರೆ.

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ನೂಪುರ್‌ಗೆ ಬೆಳ್ಳಿ, ಪೂಜಾಗೆ ಕಂಚಿನ ಪದಕ ಜೈಸಿನ್‌ಗೆ ಚಿನ್ನ

ಲಿವರ್‌ಪೂಲ್‌‍, ಸೆ.14- ಭಾರತದ ಬಾಕ್ಸರ್‌ ಜೈಸಿನ್‌ ಲಂಬೋರಿಯಾ ಪ್ಯಾರಿಸ್‌‍ ಒಲಿಂಪಿಕ್‌್ಸ ಬೆಳ್ಳಿ ಪದಕ ವಿಜೇತೆ ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ವಿರುದ್ಧ ರೋಮಾಂಚಕಾರಿ ಜಯದೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೆದರ್‌ವೇಟ್‌‍ ವಿಭಾದಲ್ಲಿ ಚಿನ್ನದ ಪದಕದೊಂದಿಗೆ ಇತಿಹಾಸ ಬರೆದಿದ್ದಾರೆ.

ತನ್ನ ಎಲ್ಲಾ ಪ್ರತಿಸ್ಪರ್ಧಿಗಳನ್ನು ಮಣಿಸಿ ತನ್ನ ಪ್ರಾಬಲ್ಯದ ಅದ್ಭುತ ಅಭಿಯಾನವನ್ನು ಮುಗಿಸಿದ ಜೈಸಿನ್‌ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.ತಡ ರಾತ್ರಿ ನಡೆದ 57 ಕೆಜಿ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಸ್ಜೆರೆಮೆಟಾ ಅವರನ್ನು ಹಿಂದಿಕ್ಕಿ, ತೀರ್ಪುಗಾರರ ಅಂಕಪಟ್ಟಿಯಲ್ಲಿ 4-1 ಅಂತರ ದಲ್ಲಿ (30-27), 29-28, 30-27, 28-29, 29-28) ಜಯಗಳಿಸಿದರು.

ಇದೇ ವೇಳೆ ನೂಪುರ್‌ ಶಿಯೋರನ್‌ (80+ ಕೆಜಿ) ಮತ್ತು ಅನುಭವಿ ಪೂಜಾ ರಾಣಿ (80 ಕೆಜಿ) ವಿಭಾಗಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳೊಂದಿಗೆ ಸಂಭದರಮಿಸಿದ್ದಾರೆ,
ಈ ಗೆಲುವಿನೊಂದಿಗೆ, ಜೈಸ್ಮಿನ್‌ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ ಒಂಬತ್ತನೇ ಭಾರತೀಯ ಬಾಕ್ಸರ್‌ ಆದರು.

ಈಗಾಗಲೆ ಆರು ಬಾರಿ ಚಿನ್ನದ ಪದಕ ವಿಜೇತ ಮೇರಿ ಕೋಮ್‌ (2002, 2005, 2006, 2008, 2010 ಮತ್ತು 2018), ಎರಡು ಬಾರಿ ವಿಜೇತ ನಿಖತ್‌ ಜರೀನ್‌ (2022 ಮತ್ತು 2023), ಸರಿತಾ ದೇವಿ (2006), ಜೆನ್ನಿ ಆರ್‌ಎಲ್‌‍ (2006), ಲೇಖಾ ಕೆಸಿ (2006), ನಿತು ಘಂಘಾಸ್‌‍ (2023), ಲೊವ್‌ಲಿನಾ ಬೊರ್ಗೊಹೈನ್‌ (2023) ಮತ್ತು ಸವೀತಿ ಬೂರಾ (2023) ಅವರ ಪಟ್ಟಿಗೆ ಜೈಸಿನ್‌ ಲಂಬೋರಿಯಾ ಅವರು ಸೇರಿದರು.

ತನ್ನ ಮೂರನೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿರುವ 24 ವರ್ಷದ ಜೈಸಿನ್‌ ಪಂದ್ಯವನ್ನು ಸ್ಥಿರವಾಗಿ ಮುನ್ನಡೆಸಿದರು. ತುಲನಾತ್ಮಕವಾಗಿ ಶಾಂತ ಆರಂಭದ ನಂತರ, ಇಬ್ಬರೂ ಬಾಕ್ಸರ್‌ಗಳು ಪರಸ್ಪರ ನಿಜ ಆಟ ಶುರುವಾಯಿತು.ಒಲಿಂಪಿಕ್‌ ಫೈನಲ್‌ನಲ್ಲಿ ಬಾಕ್ಸರ್‌ ಲಿನ್‌ ಯು-ಟಿಂಗ್‌ ವಿರುದ್ಧ ಸೋತಿದ್ದ, ಕುಳ್ಳ ಪೋಲ್‌ ಆಟಗಾರ್ತಿ ವೇಗವಾಗಿ ಮತ್ತು ನಿಖರವಾಗಿ, ರಕ್ಷಣಾತ್ಮಕ ತಂತ್ರಗಳನ್ನು ಬಳಸಿಕೊಂಡು ಆದರೆ ಜೈಸಿನ್‌ರಅವರ ಉತ್ತನ ಪಂಚ್‌ ಅಂಕ ತಂದು ಕೊಟ್ಟು ಮೊದಲ ಸುತ್ತನ್ನು 3-2 ಅಂತರದಿಂದ ಮುನ್ನಡೆಸಿದರು.

ಆದರೆ ಭಾರತೀಯ ಆಟಗಾರ್ತಿ ಎರಡನೇ ಸುತ್ತಿನಲ್ಲಿ ಘರ್ಜಿಸುತ್ತಾ ಬಂದರು. ತನ್ನ ಲಯವನ್ನು ಸರಿಹೊಂದಿಸಿಕೊಂಡು, ದೂರವನ್ನು ನಿಯಂತ್ರಿಸಲು ಪ್ರಾರಂಭಿಸಿದರು, ಸ್ಜೆರೆಮೆಟಾ ಅವರ ಮುನ್ನಡೆಗಳನ್ನು ತಪ್ಪಿಸಿದರು ಸಾಮಾನ್ಯವಾಗಿ ಶಾಂತವಾಗಿದ್ದ ಜೈಸ್ಮಿನ್‌ ಗೆದ್ದ ನಂತರ ಸಣ್ಣ ಕೂಗನ್ನು ಹೊರಹಾಕಿದರು, ಪದಕ ಪ್ರದಾನ ಸಮಾರಂಭದಲ್ಲಿ, ಭಾರತೀಯ ರಾಷ್ಟ್ರಗೀತೆ ಕ್ರೀಡಾಂಗಣದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ ಅವಳ ಕಣ್ಣುಗಳು ಮಿನುಗಿದವು.

ನೂಪುರ್‌ ಬೆಳ್ಳಿ ಪದಕ ಗೆದ್ದರು
ರಾತ್ರಿ ನಡೆದ ಎರಡನೇ ಫೈನಲ್‌ನಲ್ಲಿ, ಪೋಲೆಂಡ್‌ನ ತಾಂತ್ರಿಕವಾಗಿ ಚತುರ ಆಟಗಾರ್ತಿ ಅಗಾಟಾ ಕಾಜಾರ್ಸ್ಕಾ ವಿರುದ್ಧ 2-3 ಅಂತರದ ಸೋಲಿನ ನಂತರ ನೂಪುರ್‌ ಬೆಳ್ಳಿ ಪದಕ ಗೆದ್ದರು.
ಸತತ ಪಂಚ್‌ಗಳೊಂದಿಗೆ ಪ್ರಕಾಶಮಾನವಾಗಿ ಪ್ರಾರಂಭಿಸಿದರು, ಆದರೆ ಕಾಜಾ ರ್ಸ್ಕಾ ನಿರಂತರ ಆಕ್ರಮಣಶೀಲತೆಯಿಂದ ಪ್ರತಿದಾಳಿ ನಡೆಸಿದರು,ಪಂದ್ಯ ಮುಂದುವರೆದಂತೆ ನೂಪುರ್‌ ಪಂಚ್‌ಗಳಿಗೆ ಪೋಲ್‌ ಸುಲಭವಾಗಿ ತಪ್ಪಿಸಿಕೊಂಡು ಪೂಜಾ ಕಂಚಿನ ಪದಕಕ್ಕೆ ಸಹಿ ಹಾಕಿದರು
ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ, ಪೂಜಾ ಸ್ಥಳೀಯ ನೆಚ್ಚಿನ ಎಮಿಲಿ ಅಸ್ಕ್ವಿತ್‌ ವಿರುದ್ಧ 1-4 ಅಂತರದ ಸೋತ ನಂತರ ಕಂಚಿನ ಪದಕ ಪಡೆದರು ಆಟದ ಯೋಜನೆಯನ್ನು ಬದಲಾಯಿಸಿದರು.

10 ಭಾರತೀಯರಲ್ಲಿ ಒಬ್ಬರಿಗೆ ತಂಬಾಕು ಸಂಬಂಧಿತ ಕಾಯಿಲೆ

ನವದೆಹಲಿ, ಸೆ. 14 (ಪಿಟಿಐ)- ತಂಬಾಕು ಸೇವನೆಯಿಂದ ಪ್ರತಿ ವರ್ಷ 1.35 ಮಿಲಿಯನ್‌ ಭಾರತೀಯರು ಸಾವನ್ನಪ್ಪುತ್ತಿದ್ದಾರೆ, ಆದರೆ ವ್ಯಾಪಕ ಜಾಗೃತಿಯ ಹೊರತಾಗಿಯೂ ಧೂಮಪಾನ ತ್ಯಜಿಸುವ ದರಗಳು ಇನ್ನೂ ಕಡಿಮೆ ಇವೆ ಎಂದು ತಿಳಿದುಬಂದಿದೆ.

ಭಾರತವು ತಂಬಾಕು ಸಂಬಂಧಿತ ಕಾಯಿಲೆಗಳಿಗೆ ವಾರ್ಷಿಕವಾಗಿ 1.77 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡುತ್ತಿರುವುದರಿಂದ, ಹೊಗೆ ಮುಕ್ತ ನಿಕೋಟಿನ್‌ ಪರ್ಯಾಯಗಳ ಬಳಕೆ ಸೇರಿದಂತೆ ನವೀನ, ವೈಜ್ಞಾನಿಕ ಬೆಂಬಲಿತ ಹಾನಿ ಕಡಿತ ತಂತ್ರಗಳಿಗೆ ಆರೋಗ್ಯ ತಜ್ಞರು ಕರೆ ನೀಡಿದ್ದಾರೆ.

ದೆಹಲಿಯ ಬಿಎಲ್‌ಕೆ-ಮ್ಯಾಕ್ಸ್ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪಲ್ಮನರಿ ಮೆಡಿಸಿನ್‌ನ ಹಿರಿಯ ಸಲಹೆಗಾರ ಡಾ. ಪವನ್‌ ಗುಪ್ತಾ, ಸಿಒಪಿಡಿ ಅಥವಾ ಹೃದಯರಕ್ತನಾಳದ ಅಪಾಯಗಳನ್ನು ಹೊಂದಿರುವ ರೋಗಿಗಳಿಗೆ, ಪ್ರತಿ ಸಿಗರೇಟ್‌ ಮುಖ್ಯವಲ್ಲ ಎಂದು ಹೇಳಿದ್ದಾರೆ.
ರಾಯಲ್‌ ಕಾಲೇಜ್‌ ಆಫ್‌ ಫಿಸಿಶಿಯನ್ಸ್ (ಯುಕೆ) ಸೇರಿದಂತೆ ವೈಜ್ಞಾನಿಕ ವಿಮರ್ಶೆಯು ದಹಿಸಲಾಗದ ನಿಕೋಟಿನ್‌ ವಿತರಣೆಯು ಧೂಮಪಾನಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ಅಪಾಯಗಳನ್ನು ಹೊಂದಿದೆ ಎಂದು ತೋರಿಸುತ್ತದೆ. ಆ ಪುರಾವೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಗುಪ್ತಾ ಹೇಳಿದರು.

ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ (ಪಿಎಚ್‌ಇ, ಯುಕೆ) ಹೊಗೆ ಮುಕ್ತ ನಿಕೋಟಿನ್‌ ಪರ್ಯಾಯಗಳು ಧೂಮಪಾನಕ್ಕಿಂತ ಶೇಕಡಾ 95 ರಷ್ಟು ಕಡಿಮೆ ಹಾನಿಕಾರಕವೆಂದು ಅಂದಾಜಿಸಿದೆ ಏಕೆಂದರೆ ಅವು ಟಾರ್‌ ಮತ್ತು ದಹನವನ್ನು ತೆಗೆದುಹಾಕುತ್ತವೆ.

ಜಾಗತಿಕವಾಗಿ, ನಿಕೋಟಿನ್‌ ಪೌಚ್‌ಗಳು ಸಿಗರೇಟ್‌ಗಳಿಗೆ ವಿವೇಚನಾಯುಕ್ತ ಮೌಖಿಕ ಪರ್ಯಾಯಗಳಾಗಿ ಆಕರ್ಷಣೆಯನ್ನು ಗಳಿಸಿವೆ. ಈ ಉತ್ಪನ್ನಗಳು ಈಗ ಸ್ವೀಡನ್‌‍, ನಾರ್ವೆ, ಯುನೈಟೆಡ್‌ ಸ್ಟೇಟ್‌್ಸ ಮತ್ತು ಡೆನ್ಮಾರ್ಕ್‌ ಸೇರಿದಂತೆ 34 ದೇಶಗಳಲ್ಲಿ ಲಭ್ಯವಿದೆ.

ಕೇಂದ್ರದ ಶರೀರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸುನೈನಾ ಸೋನಿ, ಭಾರತದಲ್ಲಿ ಸಾಂಪ್ರದಾಯಿಕ ಧೂಮಪಾನ ನಿಲುಗಡೆ ಸಾಧನಗಳು ಸಾಮಾನ್ಯವಾಗಿ ಸೀಮಿತ ಯಶಸ್ಸನ್ನು ಹೊಂದಿವೆ. ಸುರಕ್ಷಿತ, ತಂಬಾಕು-ಮುಕ್ತ ನಿಕೋಟಿನ್‌ ಪರ್ಯಾಯಗಳು, ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಟ್ಟಾಗ, ಧೂಮಪಾನಿಗಳು ಸಿಗರೇಟ್‌ಗಳಿಂದ ದೂರ ಸರಿಯಲು ಸಹಾಯ ಮಾಡಬಹುದು.ಹೊಗೆ ಇಲ್ಲ, ಟಾರ್‌ ಇಲ್ಲ, ದಹನವಿಲ್ಲ ಅದು ನಿರ್ಣಾಯಕ ವ್ಯತ್ಯಾಸವಾಗಿದೆ.

ವಿಜ್ಞಾನ ಮಾತನಾಡುತ್ತದೆ, ಮತ್ತು ಇದು ಸುರಕ್ಷಿತ ನಿಕೋಟಿನ್‌ ಅನ್ನು ಪರಿಗಣಿಸುವ ಸಮಯ ಎಂದು ಅವರು ಹೇಳಿದರು.ನಿಕೋಟಿನ್‌ ಪೌಚ್‌ಗಳು ಅಪಾಯ-ಮುಕ್ತವಾಗಿಲ್ಲದಿದ್ದರೂ, ಧೂಮಪಾನಕ್ಕೆ ಬದಲಿಯಾಗಿ ಬಳಸಿದಾಗ, ಜಾಗತಿಕ ಗುರಿಯಡಿಯಲ್ಲಿ 2025 ರ ವೇಳೆಗೆ ತಂಬಾಕು ಬಳಕೆಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡುವ ಭಾರತದ ಗುರಿಯತ್ತ ಪ್ರಯಾಣದಲ್ಲಿ ಅವು ಅರ್ಥಪೂರ್ಣ ಪಾತ್ರವನ್ನು ವಹಿಸಬಹುದು ಎಂದು ಸೋನಿ ಹೇಳಿದರು.

ಭಾರತದಲ್ಲಿ ತಂಬಾಕಿನ ಹೊರೆ ಅಗಾಧವಾಗಿದೆ, 10 ಭಾರತೀಯರಲ್ಲಿ 1 ಮಂದಿ ತಂಬಾಕು ಸಂಬಂಧಿತ ಕಾಯಿಲೆಗಳಿಂದ ಅಕಾಲಿಕವಾಗಿ ಸಾಯುತ್ತಿದ್ದಾರೆ.ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ಭಾರತದಲ್ಲಿ ಧೂಮಪಾನ ತ್ಯಜಿಸುವ ದರಗಳು ಕಡಿಮೆಯಾಗಿಯೇ ಉಳಿದಿವೆ – ಕೇವಲ ಶೇಕಡಾ 7 ರಷ್ಟು ಜನರು ಮಾತ್ರ ಸಹಾಯವಿಲ್ಲದೆ ಯಶಸ್ವಿಯಾಗಿ ತ್ಯಜಿಸಿದ್ದಾರೆ.

ಹಿಂದೂಗಳೇ ಟಾರ್ಗೆಟ್‌ : ಪ್ರತಿಪಕ್ಷಗಳ ಒಗ್ಗಟ್ಟು, ಕಾಂಗ್ರೆಸ್ ಸರ್ಕಾರಕ್ಕೆ ಇಕ್ಕಟ್ಟು

ಬೆಂಗಳೂರು, ಸೆ.14- ರಾಜಕೀಯ ಪಕ್ಷಗಳಲ್ಲಿನ ಆಂತರಿಕ ಪೈಪೋಟಿ ಪ್ರತಿಷ್ಠೆ ಯಿಂದಾಗಿ ದಿನೇ ದಿನೇ ರಾಜ್ಯದಲ್ಲಿ ಕೋಮು ಸೂಕ್ಷ್ಮ ವಿಚಾರಗಳು ಬೃಹತ್‌ ಸಮಸ್ಯೆಗಳಾಗಿ ಪರಿವರ್ತನೆಯಾಗಿದ್ದು ಅದನ್ನು ನಿಭಾಯಿಸಲಾಗದೆ, ರಾಜ್ಯಸರ್ಕಾರ ಪರದಾಡುವಂತಾಗಿದೆ. ಗಣೇಶೋತ್ಸವದ ಗಲಾಟೆಗಳು ಕಾಂಗ್ರೆಸ್‌‍ಗೆ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿಯನ್ನು ಗಟ್ಟಿಗೊಳಿಸುತ್ತಿವೆ.

ವಿಷಯಾಂತರಿಸಲು ಸರ್ಕಾರ ನಡೆಸುತ್ತಿರುವ ನಾನಾ ರೀತಿಯ ಕಸರತ್ತುಗಳು ಪ್ರಯೋಜನವಾಗದೆ ಕಾಂಗ್ರೆಸ್‌‍ ಸರ್ಕಾರ ಹಿಂದೂ ವಿರೋಧಿ ಎಂದು ಬ್ರಾಂಡ್‌ ಆಗುತ್ತಿದೆ.
ಒಂದೆಡೆ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಆರ್ಭಟ ಮಾಡುತ್ತಿದ್ದು, ಅವರ ಮುಂದೆ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಮಂಕಾದಂತೆ ಕಂಡು ಬರುತ್ತಿದ್ದಾರೆ.

ತಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮದ್ದೂರಿನ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ವಿಜಯೇಂದ್ರ ಮತ್ತು ಅಶೋಕ್‌ ಅವರು ಬೃಹತ್‌ ಪ್ರತಿಭಟನೆ ಆಯೋಜಿಸಿದ್ದರು. ಪ್ರತಿಭಟನೆ ಯಶಸ್ವಿಯಾಗಿ ಮದ್ದೂರಿನ ಗಲಭೆ ಸರ್ಕಾರಕ್ಕೆ ಬಿಸಿ ತುಪ್ಪವಾಗುವ ಹಂತದಲ್ಲೇ ಸ್ಥಳೀಯ ಕಾರ್ಯಕರ್ತರು, ಬಸನಗೌಡ ಯತ್ನಾಳ್‌ ಸ್ಥಳಕ್ಕಾಗಮಿಸಬೇಕೆಂದು ಘೋಷಣೆ ಕೂಗಿದರು. ಅದನ್ನು ಅನುಸರಿಸಿ ಯತ್ನಾಳ್‌ ಸ್ಥಳಕ್ಕೆ ಬಂದು ಮತ್ತಷ್ಟು ಅಬ್ಬರ ಮಾಡಿದರು. ಅಶೋಕ್‌ ಮತ್ತು ವಿಜಯೇಂದ್ರ ಅವರ ಪ್ರಯತ್ನಗಳು ಯತ್ನಾಳ್‌ ಅವರ ವರ್ಚಸ್ಸು ಹೆಚ್ಚಳಕ್ಕೆ ಬಂಡವಾಳವಾಗಿ ಪರಿವರ್ತನೆಯಾದವು.

ಬಿಜಾಪುರಕ್ಕಷ್ಟೇ ಸೀಮಿತವಾಗಿದ್ದ ಯತ್ನಾಳ್‌ ಉಚ್ಛಾಟನೆ ಬಳಿಕ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಅವರು ಹೋದ ಕಡೆಯಲೆಲ್ಲಾ ಭಾರಿ ಪ್ರಮಾಣದ ಬೆಂಬಲ ಸಿಗುತ್ತಿದೆ. ಇದಕ್ಕೆ ಕೌಂಟರ್‌ ನೀಡಲು ಬಿಜೆಪಿ ನಾಯಕರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇತ್ತ ಕಿತ್ತೂರು ಕರ್ನಾಟಕ ಭಾಗಕ್ಕೆ ಸೀಮಿತವಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರು ನಿನ್ನೆ ಪೊಲೀಸ್‌‍ ಅಧಿಕಾರಿಗಳ ಮೇಲೆ ಪ್ರದರ್ಶಿಸಿರುವ ರೋಷಾವೇಷ ಬಿಜೆಪಿಯಲ್ಲಿ ಕುದಿಯುತ್ತಿರುವ ಲಾವರಸದ ಸಂಕೇತವಾಗಿದೆ.

ಧಾರವಾಡದ ನರೇಂದ್ರ ಗ್ರಾಮದಲ್ಲಿ ಗಣೇಶೋತ್ಸವದ ವೇಳೆ ಡಿಜೆ ಹಾಡು ಹಾಕುವ ಸಂಬಂಧ ಪಟ್ಟಂತೆ ಎರಡು ಗುಂಪಿನ ಯುವಕರ ನಡುವೆ ಕಳೆದ ವಾರ ಗಲಾಟೆಯಾಗಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಅದನ್ನು ಖಂಡಿಸಿ ಪ್ರತಿಭಟನೆಗಳಾಗುತ್ತಿದ್ದವು. ಈ ಸಂಬಂಧಪಟ್ಟಂತಹ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಹ್ಲಾದ ಜೋಷಿ ಎಸ್‌‍ಪಿ, ಡಿವೈಎಸ್‌‍ಪಿ ಅವರ ಅನುಮತಿ ಇಲ್ಲದೇ ಲಾಠಿ ಚಾರ್ಜ್‌ ಮಾಡಿರುವ ಇನ್ಸ್ ಪೆಕ್ಟರ್‌ ಅವರನ್ನುಅಮಾನತು ಗೊಳಿಸಬೇಕೆಂದು ಪಟ್ಟು ಹಿಡಿದರು.

ಸಾರ್ವಜನಿಕವಾಗಿ ಪೊಲೀಸ್‌‍ ಅಧಿಕಾರಿಗಳ ಮೇಲೆ ಕೂಗಾಡಿದರು. ಇನ್ಸ್ ಪೆಕ್ಟರ್‌ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಎಸ್‌‍ಪಿ ಕಚೇರಿಯ ಮುಂದೆ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಪಟ್ಟಂತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದೆ. ಒಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್‌‍ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸುವಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿದ್ದರೆ, ಅದಕ್ಕೆ ಪ್ರತ್ಯತ್ತರ ಉತ್ತರ ನೀಡಲಾಗದೇ ಕಾಂಗ್ರೆಸ್‌‍ ಸರ್ಕಾರ ಹೈರಾಣಾಗಿದೆ.

ಕಾಂಗ್ರೆಸ್‌‍ನಲ್ಲಿ ಬಣ ರಾಜಕೀಯ ವಿಪರೀತವಾಗಿದ್ದು, ಬಿಜೆಪಿಯ ಆರೋಪಗಳಿಗೆ ಸರಿಯಾದ ಉತ್ತರ ನೀಡಲು ನಿರ್ಲಕ್ಷ್ಯ ಕಂಡುಬರುತ್ತಿದೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಧಾನಸಭೆಯಲ್ಲೇ ನಮಸ್ತೇ ಸದಾವತ್ಸಲೇ ಹಾಡಿದ್ದರು. ಗೃಹಸಚಿವ ಡಾ.ಜಿ. ಪರಮೇಶ್ವರ್‌ ಎಬಿವಿಪಿಯ ಕಾರ್ಯಕ್ರಮದಲ್ಲಿ ಅಚಾನಕ್‌ ಆಗಿ ಭಾಗವಹಿಸಿದ್ದರು. ಈ ರೀತಿಯ ನಡವಳಿಕೆಗಳು ಕಾಂಗ್ರೆಸ್‌‍ನ ಮತ್ತೊಂದು ಬಣದಲ್ಲಿ ಅಸಹನೆ ಮೂಡಿಸಿವೆ.

ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಪೈಪೋಟಿಗೆ ಬಿದ್ದವರಂತೆ ತಾವು ಕೂಡ ಹಿಂದೂ ಆಗಿದ್ದು, ತಮ್ಮ ಹೆಸರಿನಲ್ಲಿ ಈಶ್ವರ ಮತ್ತು ವಿಷ್ಣುವಿನ ಅನ್ವರ್ಥ ನಾಮಗಳಿವೆ ಎಂದು ಹೇಳುವ ಮೂಲಕ ಬಿಜೆಪಿಯ ಹಿಂದುತ್ವಕ್ಕೆ ಟಾಂಗ್‌ ನೀಡುವ ಪ್ರಯತ್ನ ಮಾಡಿದ್ದಾರೆ.

ಗಣೇಶೋತ್ಸವದಲ್ಲಿ ವರದಿಯಾದ ಸಣ್ಣ-ಪುಟ್ಟ ಹಾಗೂ ಕೆಲವು ಗಂಭೀರ ಸ್ವರೂಪದ ಗಲಾಟೆಗಳನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಹಿಂದೆಂದೂ ಇಲ್ಲದಷ್ಟು ಗದ್ದಲ ಎಬ್ಬಿಸಿದೆ. ಕಾಂಗ್ರೆಸ್‌‍ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಲವಾಗಿ ಪ್ರತಿಪಾದಿಸುತ್ತಿದೆ. ಇದಕ್ಕೆ ಸರಿಯಾದ ಉತ್ತರ ನೀಡಲಾಗದೆ ಕಾಂಗ್ರೆಸ್‌‍ ಪಕ್ಷ ಹೈರಾಣಾಗಿದೆ.

ವಿಮಾ ಕ್ಷೇತ್ರದಲ್ಲಿ ಶೇ.100ರ ಎಫ್‌ಡಿಐ : ಚಳಿಗಾಲದ ಅಧಿವೇಶನದಲ್ಲಿ ವಿಮಾ ತಿದ್ದುಪಡಿ ಮಸೂದೆ

ನವದೆಹಲಿ, ಸೆ. 14 (ಪಿಟಿಐ)- ವಿಮಾ ಕ್ಷೇತ್ರದಲ್ಲಿ ಶೇ. 100 ರಷ್ಟು ಎಫ್‌ಡಿಐ ಅನ್ನು ಪ್ರಸ್ತಾಪಿಸುವ ವಿಮಾ ತಿದ್ದುಪಡಿ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್‌ ದ್ವಿತೀಯಾರ್ಧದಲ್ಲಿ ಪ್ರಾರಂಭವಾಗಿ ಕ್ರಿಸ್‌‍ಮಸ್‌‍ಗೆ ಮುಂಚಿತವಾಗಿ ಮುಕ್ತಾಯಗೊಳ್ಳುತ್ತದೆ.

ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಅನ್ನು ಮತ್ತಷ್ಟು ಉದಾರಗೊಳಿಸುವ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಬಹುದೇ ಎಂದು ಕೇಳಿದಾಗ, ನಾನು ಆಶಿಸುತ್ತೇನೆ ಎಂದು ಅವರು ಪಿಟಿಐಗೆ ತಿಳಿಸಿದರು.ಈ ವರ್ಷದ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವರು, ಹೊಸ ಪೀಳಿಗೆಯ ಹಣಕಾಸು ವಲಯದ ಸುಧಾರಣೆಗಳ ಭಾಗವಾಗಿ ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಮಿತಿಯನ್ನು ಅಸ್ತಿತ್ವದಲ್ಲಿರುವ ಶೇ. 74 ರಿಂದ ಶೇ. 100 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದರು.

ಈ ವರ್ಧಿತ ಮಿತಿ ಭಾರತದಲ್ಲಿ ಸಂಪೂರ್ಣ ಪ್ರೀಮಿಯಂ ಅನ್ನು ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ. ವಿದೇಶಿ ಹೂಡಿಕೆಗೆ ಸಂಬಂಧಿಸಿದ ಪ್ರಸ್ತುತ ಗಾರ್ಡ್‌ರೈಲ್‌ಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಸರಳೀಕರಿಸಲಾಗುತ್ತದೆ ಎಂದು ಅವರು ಹೇಳಿದ್ದರು.ಇಲ್ಲಿಯವರೆಗೆ, ವಿಮಾ ವಲಯವು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮೂಲಕ ರೂ. 82,000 ಕೋಟಿಗಳನ್ನು ಆಕರ್ಷಿಸಿದೆ.

ವಿಮಾ ಕಾಯ್ದೆ, 1938 ರ ವಿವಿಧ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಹಣಕಾಸು ಸಚಿವಾಲಯ ಪ್ರಸ್ತಾಪಿಸಿದೆ, ಇದರಲ್ಲಿ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಅನ್ನು ಶೇಕಡಾ 100 ಕ್ಕೆ ಹೆಚ್ಚಿಸುವುದು, ಪಾವತಿಸಿದ ಬಂಡವಾಳದಲ್ಲಿ ಕಡಿತ ಮತ್ತು ಸಂಯೋಜಿತ ಪರವಾನಗಿಗೆ ಅವಕಾಶ ಸೇರಿವೆ.ವಿಮಾ ಕಾಯ್ದೆ, 1956 ರ ಸಮಗ್ರ ಶಾಸಕಾಂಗ ವ್ಯಾಯಾಮದ ಭಾಗವಾಗಿ, ಜೀವ ವಿಮಾ ನಿಗಮ ಕಾಯ್ದೆ, 1999 ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 1938 ರ ವಿಮಾ ಕಾಯ್ದೆಯೊಂದಿಗೆ ತಿದ್ದುಪಡಿ ಮಾಡಲಾಗುವುದು.ಎಲ್‌ಐಸಿ ಕಾಯ್ದೆಗೆ ತಿದ್ದುಪಡಿಗಳು ಶಾಖೆ ವಿಸ್ತರಣೆ ಮತ್ತು ನೇಮಕಾತಿಯಂತಹ ಕಾರ್ಯಾಚರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದರ ಮಂಡಳಿಗೆ ಅಧಿಕಾರ ನೀಡಲು ಪ್ರಸ್ತಾಪಿಸುತ್ತವೆ.

ಪ್ರಸ್ತಾವಿತ ತಿದ್ದುಪಡಿಯು ಪ್ರಾಥಮಿಕವಾಗಿ ಪಾಲಿಸಿದಾರರ ಹಿತಾಸಕ್ತಿಗಳನ್ನು ಉತ್ತೇಜಿಸುವುದು, ಅವರ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವುದು ಮತ್ತು ವಿಮಾ ಮಾರುಕಟ್ಟೆಗೆ ಹೆಚ್ಚಿನ ಆಟಗಾರರ ಪ್ರವೇಶವನ್ನು ಸುಗಮಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಇದು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.

ಇಂತಹ ಬದಲಾವಣೆಗಳು ವಿಮಾ ಉದ್ಯಮದ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ವ್ಯವಹಾರವನ್ನು ಸುಲಭಗೊಳಿಸುತ್ತದೆ ಮತ್ತು ೞ2047 ರ ವೇಳೆಗೆ ಎಲ್ಲರಿಗೂ ವಿಮೆೞ ಗುರಿಯನ್ನು ಸಾಧಿಸಲು ವಿಮಾ ನುಗ್ಗುವಿಕೆಯನ್ನು ಹೆಚ್ಚಿಸುತ್ತದೆ.1938 ರ ವಿಮಾ ಕಾಯ್ದೆಯು ಭಾರತದಲ್ಲಿ ವಿಮೆಗಾಗಿ ಶಾಸಕಾಂಗ ಚೌಕಟ್ಟನ್ನು ಒದಗಿಸುವ ಪ್ರಮುಖ ಕಾಯಿದೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವಿಮಾ ವ್ಯವಹಾರಗಳ ಕಾರ್ಯನಿರ್ವಹಣೆಗೆ ಚೌಕಟ್ಟನ್ನು ಒದಗಿಸುತ್ತದೆ ಮತ್ತು ವಿಮಾದಾರರು, ಅದರ ಪಾಲಿಸಿದಾರರು, ಷೇರುದಾರರು ಮತ್ತು ನಿಯಂತ್ರಕ ಇಡೈರ್‌ ನಡುವಿನ ಸಂಬಂಧವನ್ನು ನಿಯಂತ್ರಿಸುತ್ತದೆ.

ಈ ವಲಯದಲ್ಲಿ ಹೆಚ್ಚಿನ ಆಟಗಾರರ ಪ್ರವೇಶವು ಒಳಹೊಕ್ಕುಗೆ ಉತ್ತೇಜನ ನೀಡುವುದಲ್ಲದೆ, ದೇಶಾದ್ಯಂತ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.ಪ್ರಸ್ತುತ, ಭಾರತದಲ್ಲಿ 25 ಜೀವ ವಿಮಾ ಕಂಪನಿಗಳು ಮತ್ತು 34 ಜೀವೇತರ ಅಥವಾ ಸಾಮಾನ್ಯ ವಿಮಾ ಸಂಸ್ಥೆಗಳು ಇವೆ, ಅವುಗಳಲ್ಲಿ ಕೃಷಿ ವಿಮಾ ಕಂಪನಿ ಲಿಮಿಟೆಡ್‌ ಮತ್ತು ಇಸಿಜಿಸಿ ಲಿಮಿಟೆಡ್‌ನಂತಹ ವಿಶೇಷ ಸಾಮಾನ್ಯ ವಿಮಾ ಕಂಪನಿಗಳು ಸೇರಿವೆ.ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಕೊನೆಯದಾಗಿ 2021 ರಲ್ಲಿ – ಶೇ. 49 ರಿಂದ ಶೇ. 74 ಕ್ಕೆ ಹೆಚ್ಚಿಸಲಾಗಿತ್ತು. 2015 ರಲ್ಲಿ, ಸರ್ಕಾರವು ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ. 26 ರಿಂದ ಶೇ. 49 ಕ್ಕೆ ಹೆಚ್ಚಿಸಿತು.

ನವದೆಹಲಿ : ಫ್ಲೈಓವರ್‌ನಿಂದ ರೈಲು ಹಳಿಗಳ ಮೇಲೆ ಹಾರಿ ಬಿದ್ದ ಕಾರು

ನವದೆಹಲಿ, ಸೆ. 14 (ಪಿಟಿಐ)– ಇಂದು ಬೆಳಿಗ್ಗೆ ವ್ಯಕ್ತಿಯೊಬ್ಬ ತನ್ನ ಕಾರಿನ ನಿಯಂತ್ರಣ ಕಳೆದುಕೊಂಡು, ಉತ್ತರ ದೆಹಲಿಯ ಹೊರವಲಯದ ಮುಖರ್ಬಾ ಚೌಕ್‌ ಫ್ಲೈಓವರ್‌ನಿಂದ ಹೈದರ್ಪುರ್‌ ಮೆಟ್ರೋ ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಗಾಜಿಯಾಬಾದ್‌ ನಿವಾಸಿ ಸಚಿನ್‌ ಚೌಧರಿ (35) ಅವರ ಭುಜ ಮತ್ತು ಮುಖದ ಮೇಲೆ ಸಣ್ಣಪುಟ್ಟ ಗಾಯಗಳಾಗಿವೆ.ಸಮಯ್‌ಪುರ್‌ ಬದ್ಲಿ ಪೊಲೀಸ್‌‍ ಠಾಣೆಯಲ್ಲಿ ಬೆಳಿಗ್ಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು.ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ತಂಡವು ರಿಂಗ್‌ ರಸ್ತೆಯ ಕೆಳಗೆ ಹಳಿಗಳ ಮೇಲೆ ಕಾರು ಉರುಳಿ ಬಿದ್ದಿರುವುದನ್ನು ಕಂಡುಕೊಂಡಿತು ಎಂದು ಪೊಲೀಸ್‌‍ ಉಪ ಆಯುಕ್ತ (ಉತ್ತರ) ಹರೇಶ್ವರ ಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೀರಗಢಿಯಿಂದ ಗಾಜಿಯಾಬಾದ್‌ಗೆ ಪ್ರಯಾಣಿಸುತ್ತಿದ್ದಾಗ, ಫ್ಲೈಓವರ್‌ನ ರೈಲು ಮಾರ್ಗಗಳನ್ನು ದಾಟುವಾಗ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾಗಿ ಚೌಧರಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.ಕಾರು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು, ಕಂಬಿಬೇಲಿಯನ್ನು ದಾಟಿ, ಹುಲ್ಲಿನ ಇಳಿಜಾರಿನಲ್ಲಿ ಉರುಳಿ, ಹಳಿಗಳ ಮೇಲೆ ತಲೆಕೆಳಗಾಗಿ ಬಿತ್ತು ಎಂದು ಅಧಿಕಾರಿ ಹೇಳಿದರು.

ರೈಲ್ವೆ ಹಳಿಯನ್ನು ತೆರವುಗೊಳಿಸಲು ವಾಹನವನ್ನು ತಕ್ಷಣವೇ ತೆಗೆದುಹಾಕಲಾಯಿತು. ಚಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.ಹಳಿಯನ್ನು ತ್ವರಿತವಾಗಿ ತೆರವುಗೊಳಿಸಿದ್ದರಿಂದ ಯಾವುದೇ ರೈಲು ಸಂಚಾರಕ್ಕೆ ತೊಂದರೆಯಾಗಿಲ್ಲ ಮತ್ತು ಬೇರೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಸ್ಥಳದಲ್ಲಿ ನೀಲಿ ಬಣ್ಣದ ಮೋಟಾರ್‌ ಸೈಕಲ್‌ ಕೂಡ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಶನಿವಾರದಿಂದ ದ್ವಿಚಕ್ರ ವಾಹನ ಅಲ್ಲಿಯೇ ಬಿದ್ದಿತ್ತು ಆದರೆ ಕಾರು ಅಪಘಾತಕ್ಕೂ ಅದಕ್ಕೆ ಸಂಬಂಧವಿಲ್ಲ. ಬೈಕ್‌ ಕದ್ದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಲೀಕರನ್ನು ಪತ್ತೆ ಮಾಡಲಾಗುತ್ತಿದೆ.ಇವು ಎರಡು ಪ್ರತ್ಯೇಕ ಮತ್ತು ಸಂಬಂಧವಿಲ್ಲದ ಎರಡು ಘಟನೆಗಳು. ಮೋಟಾರ್‌ ಸೈಕಲ್‌ಗೆ ಸಂಬಂಧಿಸಿದಂತೆ ಯಾವುದೇ ಅಪಘಾತ ವರದಿಯಾಗಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.