ಬೆಂಗಳೂರು, ನ.2- ಬಿಹಾರ ವಿಧಾನಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಪಕ್ಷ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಬಿಹಾರಿಗಳನ್ನು ವಾಪಸ್ ಕರೆಸಿ, ಮತದಾನ ಮಾಡಿಸಲು ಮುಂದಾಗಿದೆ.
ಪ್ರತಿಯೊಂದು ರಾಜ್ಯಗಳಲ್ಲಿ ಶಾಸಕಾಂಗ ಪಕ್ಷದ ನಾಯಕರು ಮತ್ತು ಪಕ್ಷದ ಅಧ್ಯಕ್ಷರು ಬಿಹಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೆಂಪಾಪುರ ಕಾಫಿ ಲೇಔಟ್ ನಲ್ಲಿ ನೆಲೆಸಿರುವ ಬಿಹಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ವೈಟ್ ಫೀಲ್ಡ್, ಯಲಹಂಕ, ಯಶವಂತಪುರ, ಪೀಣ್ಯ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಬಿಹಾರಿಗಳ ಸಂಖ್ಯೆ ಹೆಚ್ಚಾಗಿದೆ.
ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಎಂಟು ಲಕ್ಷ ಮಂದಿ ಬಿಹಾರ ಮೂಲದವರು ವಿವಿಧ ಉದ್ಯೋಗಗಳಿಗಾಗಿ ನೆಲೆಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಅಧಿಕೃತವಾಗಿ 24,000 ಮಂದಿ ನೊಂದಾಯಿತರಾಗಿದ್ದಾರೆ.
ನವಂಬರ್ 6 ಮತ್ತು 11ರಂದು ಬಿಹಾರದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಎಲ್ಲಾ ಬಿಹಾರಿಗಳಿಗೂ ತವರಿಗೆ ತೆರಳಿ ಮತದಾನದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿಕೊಳ್ಳಲಿದ್ದಾರೆ. ಕೂಲಿಕಾರ್ಮಿಕರಿಗೆ ತವರಿಗೆ ವಾಪಸ್ ಹೋಗಿ, ಬರಲು ಸಾರಿಗೆ ಹಾಗೂ ದೈನಂದಿನ ಖರ್ಚು ವೆಚ್ಚಗಳನ್ನು ವ್ಯವಸ್ಥೆ ಮಾಡಲು ಕೂಡ ಕಾಂಗ್ರೆಸ್ ಪಕ್ಷ ಮುಂದಾಗಿದೆ ಎನ್ನಲಾಗಿದೆ.
ಬಿಹಾರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದಾಗಿ ಹೊರ ರಾಜ್ಯದಲ್ಲಿರುವ ಬಿಹಾರಿಗಳ ಮೇಲೆ ಪ್ರಭಾವ ಬೀರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪ್ರಯತ್ನ ನಡೆಯುತ್ತಿದೆ. ಬಿಹಾರಿಗಳು ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ವೇತನ ಸಹಿತ ರಜೆ ನೀಡುವಂತೆ ಸಂಸ್ಥೆಗಳ ಮಾಲೀಕರು ಮತ್ತು ಉದ್ಯಮಿಗಳ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ.
ಜೊತೆಗೆ ಹಿರಿಯ ನಾಯಕರುಗಳೇ ಮಾತುಕತೆ ನಡೆಸಿ ಬಿಹಾರಿಗಳಿಗೆ ಕಾಂಗ್ರೆಸ್ ಪಕ್ಷದ ಕೊಡುಗೆಗಳು ಮತ್ತು ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ. ಬಿಹಾರದ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಅದನ್ನು ಗೆಲ್ಲಲು ನಾನಾ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸಲಾಗುತ್ತಿದೆ.
