Friday, November 7, 2025
Home Blog Page 111

ಮೊಸಳೆಹೊಸಹಳ್ಳಿ ದುರಂತ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು

ಹಾಸನ, ಸೆ.13-ಮೊಸಳೆಹೊಸಹಳ್ಳಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಒತ್ತಾಯಿಸಿದರು.

ಅಪಘಾತ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಟ್ರಕ್‌ ಹರಿದು 9 ಜನ ಮೃತಪಟ್ಟಿದ್ದಾರೆ. ದುರಂತಕ್ಕೆ ಟ್ರಕ್‌ ಚಾಲಕ ಭುವನ್‌ ಬೇಜವಾಬ್ದಾರಿಯೇ ಕಾರಣ ಎಂದರು.

ಈಗಾಗಲೇ ಆತನ ವಿರುದ್ಧ ಗೋರೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಜನರಿಂದ ತೀವ್ರ ಥಳಿತಕ್ಕೊಳಪಟ್ಟ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ. ಆತನ ವಿರುದ್ಧ ಎಲ್ಲಾ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲದ ಕಾರಣ ರಸ್ತೆಯನ್ನು ಮತ್ತಷ್ಟು ಅಗಲೀಕರಣ ಮಾಡಬೇಕು ಎಂಬ ಕೂಗು ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸರ್ಕಾರದ ಪರವಾಗಿ ನಾನು ಹಾಗೂ ಹಾಸನ ಜಿಲ್ಲೆ ಸಂಸದ ಶ್ರೇಯಸ್‌‍ ಎಂ. ಪಾಟೀಲ್‌ ಅವರೂ ಪತ್ರ ಬರೆಯುತ್ತೇವೆ ಎಂದು ಅವರು ಹೇಳಿದರು.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕಿದೆ. ಈ ಬಗ್ಗೆಯೂ ಪತ್ರದಲ್ಲಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

ವಿರೋಧ ಪಕ್ಷದ ಕೆಲವರು ಈ ಅಪಘಾತದ ಘಟನೆಗೆ ಕೋಮು ಬಣ್ಣ ನೀಡುತ್ತಿರುವುದೂ ಸಹ ಕಂಡುಬಂದಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಇಂತಹ ದುರ್ವರ್ತನೆಯೂ ಸಹ ಕಾನೂನು ರೀತಿಯ ಅಪರಾಧವಾಗಿದ್ದು, ಅಂತಹವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳ ಲಾಗುವುದು. ಈ ಬಗ್ಗೆ ಜಿಲ್ಲಾ ಎಸ್ಪಿ ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್‌ ಅನಿವಾರ್ಯ : ಸಿಎಂ

ಮೈಸೂರು, ಸೆ.13- ಶಾಂತಿ ಭಂಗಕ್ಕೆ ಪ್ರಯತ್ನಿಸಿ, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್‌ ದಾಖಲಿಸುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡಿ, ಪ್ರಚೋದನೆ ಮಾಡತ್ತಿದ್ದಾರೆ. ಶಾಂತಿ, ನೆಮದಿ, ಸೌಹಾರ್ದತೆ ಪಾಲನೆ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದರು.

ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವ ಮೂಲಕ ಹಿಂದೂ ನಾಯಕರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ಹಿಂದೂ ಅಲ್ಲವೇ? ನನ್ನ ಹೆಸರಿನಲ್ಲಿ ಇಬ್ಬರು ದೇವರ ಹೆಸರುಗಳಿವೆ. ಸಿದ್ದ ಎಂದರೆ ಈಶ್ವರನ ಹೆಸರು, ರಾಮ ವಿಷ್ಣುವಿನ ಹೆಸರು ಎಂದು ತಿರುಗೇಟು ನೀಡಿದರು.

ದಸರಾ ಮುಗಿಯುವವರೆಗೂ ಮಾಜಿ ಸಂಸದ ಪ್ರತಾಪ್‌ ಸಿಂಹನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂಬ ವಿವಿಧ ಸಂಘಟನೆಗಳ ಬೇಡಿಕೆಯನ್ನು ಪೊಲೀಸರು ಪರಿಶೀಲಿಸುತ್ತಾರೆ ಎಂದು ಹೇಳಿದರು.

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮಷ್ತಾಕ್‌ರನ್ನು ಆಯ್ಕೆ ಮಾಡಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು, ಯಾವ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂಬುದನ್ನು ವಿವರಣೆ ನೀಡಬೇಕು. ನ್ಯಾಯಾಲಯ ನೀಡುವ ತೀರ್ಮಾನವನ್ನು ಸರ್ಕಾರ ನಿರೀಕ್ಷಿಸುತ್ತಿದೆ. ದಸರಾ ಸಾಂಸ್ಕೃತಿಕ ಆಚರಣೆಯಾಗಿದ್ದು, ಇಂತಹದ್ದೇ ಧರ್ಮದವರು ಭಾಗವಹಿಸಬೇಕೆಂಬ ನಿಯಮಗಳಿಲ್ಲ ಎಂದರು.

ತನಿಖೆ ವಿಳಂಬವಿಲ್ಲ: ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌‍ಐಟಿ ತನಿಖೆ ನಡೆಯುತ್ತಿದೆ. ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ತನಿಖೆಯಲ್ಲಿ ವಿಳಂಬವಾಗುತ್ತಿಲ್ಲ, ಅನಗತ್ಯವಾಗಿ ವಿಳಂಬ ಮಾಡುವಂತೆಯೂ ಇಲ್ಲ ಎಂದು ಹೇಳಿದರು.

ಮತಾಂತರ ಶೋಷಿತರ ಹಕ್ಕು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಹುಟ್ಟುಹಾಕಲಾಗುತ್ತಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಅರ್ಥಹಿನ. ಮುಂದೆ ಕೇಂದ್ರ ಸರ್ಕಾರ ಕೂಡ ಜಾತಿಗಣತಿ ಮಾಡುತ್ತದೆ. ಆಗ ಬಿಜೆಪಿಯವರು ಇದೇ ರೀತಿ ಮಾತನಾಡುತ್ತಾರೆಯೇ ಎಂದು ಪ್ರಶ್ನಿಸಿದರು.

ಮತಾಂತರ ಬೇಡವೆಂದು ನಾವು ಹೇಳಿದರೂ ವ್ಯವಸ್ಥೆಯ ಪರಿಣಾಮದಿಂದಾಗಿ ಮತಾಂತರವಾಗುತ್ತಾರೆ. ನಮ ಹಿಂದೂ ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಅವಕಾಶಗಳಿಲ್ಲ ಅದಕ್ಕಾಗಿ ಮತಾಂತರವಾಗುತ್ತಿವೆ. ಅಸ್ಪಶ್ಯತೆ ಏಕೆ ಬಂತು. ಯಾವುದೇ ಧರ್ಮದಲ್ಲಿ ಅಸಮಾನತೆ ಇದ್ದರೂ ಶೋಷಣೆಗೆ ಒಳಗಾದವರಿಗೆ ಮತಾಂತರವಾಗುವ ಹಕ್ಕುಗಳಿರುತ್ತವೆ ಎಂದರು.

ಮತಾಂತರಗೊಂಡಿರುವವರು ಅದೇ ಧರ್ಮ ಅಥವಾ ಜಾತಿಯನ್ನು ಸಮೀಕ್ಷೆಯಲ್ಲಿ ಬರೆಸುತ್ತಾರೆ. ಒಂದು ವೇಳೆ ನಾನು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೇನೆ ಎಂದು ಭಾವಿಸುವುದಾರೆ… ಮತಾಂತರವಾಗುವುದಿಲ್ಲ ಹಾಗೆ ಭಾವಿಸುವುದಾದರೆ ಸಮೀಕ್ಷೆಯಲ್ಲಿ ಮತಾಂತರವಾಗಿರುವ ಧರ್ಮವನ್ನೇ ಬರೆಸಬೇಕಾಗುತ್ತದೆ ಎಂದರು.

ವಿಪಕ್ಷಗಳ ಒತ್ತಡಕ್ಕೆ ಮಣಿದ ಪ್ರಧಾನಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರೊಧ ಪಕ್ಷಗಳ ಒತ್ತಡಕ್ಕೆ ಮಣಿದು ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಗಲಾಟೆ ನಡೆಯುತ್ತಿದ್ದಾಗ ಅಲ್ಲಿಗೆ ಹೋಗಲಿಲ್ಲ. ಈಗ ಪರಿಸ್ಥಿತಿ ತಿಳಿಗೊಳ್ಳುತ್ತಿರುವಾಗ ಭೇಟಿ ನೀಡಿದ್ದಾರೆ. ಎರಡು ವರ್ಷಗಳಿಂದ ಏಕೆ ಸುಮನಿದ್ದರು ಎಂದು ಪ್ರಶ್ನಿಸಿದರು.

ಬಿಜೆಪಿ ಮುಖ್ಯಮಂತ್ರಿಗಳಿಗೆ ತಿಳಿ ಹೇಳಲಿ:
ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟೆ ನಿರ್ಮಿಸಲು ಗೋವಾ ಸರ್ಕಾರ ಅಡ್ಡಿ ಪಡಿಸುತ್ತಿದೆ. ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸಲು 2010ರಲ್ಲಿ 15 ವರ್ಷಗಳ ಹಿಂದೆಯೇ ನ್ಯಾಯಾಧೀಕರಣ ಆದೇಶ ನೀಡಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸುತ್ತದೆ.

ಕಾವೇರಿ ನದಿ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲಿತ ಆಣೆಕಟ್ಟು ನಿರ್ಮಿಸಲು ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಗಳ ಮುಖ್ಯಮಂತ್ರಿಯವರಿಗೆ ತಿಳಿ ಹೇಳಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ ಅವರಿಗೆ ಬುದ್ಧಿ ಹೇಳಲಿ ಎಂದರು.

ಅಪಘಾತಕ್ಕೆ ಸರ್ಕಾರ ಹೊಣೆಯಲ್ಲ:
ಹಾಸನ ಗಣೇಶೋತ್ಸವದ ವೇಳೆ ಲಾರಿ ಹರಿದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈಗ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಪರಿಹಹಾರ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.

ಹಾಸನದ ದುರಂತವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದರೆ, ಇದೇ ರೀತಿಯ ಇತರ ಪ್ರಕರಣಗಳನ್ನು ಪರಿಗಣಿಸಬೇಕಾಗುತ್ತದೆ. ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ. ಇದು ಸಾವಿಗೆ ಸಮವಲ್ಲ. ಆದರೆ ಕುಟುಂಬದ ಜೊತೆ ನಾವಿದ್ದೇವೆ ಎಂದು ಮಾನಸಿಕ ಸ್ಥೈರ್ಯ ತುಂಬುವ ಕ್ರಮ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಸ್ಥಳಕ್ಕೆ ತೆರಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಪಘಾತ ಆಕಸಿಕ ಘಟನೆ ಅದಕ್ಕೆ ಸರ್ಕಾರವೇ ಹೊಣೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಗಣೇಶೋತ್ಸವ ದುರಂತ : 9 ಜನರನ್ನು ಬಲಿಪಡೆದ ಟ್ರಕ್ ಚಾಲಕನ ವಿಚಾರಣೆ

ಹಾಸನ, ಸೆ.13- ಹೆದ್ದಾರಿಯಲ್ಲಿ ಎಡಭಾಗದಲ್ಲಿ ಹೋಗುತ್ತಿದ್ದ ಸರಕು ಸಾಗಣಿಕೆಯ ಲಾರಿ ಬಲಭಾಗಕ್ಕೆ ತಿರುಗಿ ರಸ್ತೆ ವಿಭಜಕವನ್ನು ದಾಟಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ಹರಿದಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲೆಯ ಎಸ್‌‍ಪಿ ಮೊಹಮದ್‌ ಸುಜಿತಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 8.30ರಿಂದ 8.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಮೊಸಳೆಹೊಸಹಳ್ಳಿಯ ಹೆದ್ದಾರಿಯಲ್ಲಿ ಮೆರವಣಿಗೆ ತೆರಳುತ್ತಿದ್ದ ಕೊನೆಯ ಭಾಗದ ಜನರ ಮೇಲೆ ಲಾರಿ ಹರಿದಿದೆ ಎಂದಿದ್ದಾರೆ.

ಸರಕು ಸಾಗಾಣಿಕೆ ವಾಹನ ನೇರವಾಗಿ ಸಾಗಬೇಕಿತ್ತು. ಆದರೆ, ಬಲಭಾಗಕ್ಕೆ ತಿರುಗಿದೆ. ಇದಕ್ಕೆ ಕಾರಣವೇನು ಎಂದು ತನಿಖೆ ಮಾಡುತ್ತಿದ್ದೇವೆ. ಮೂರು ಅಡಿ ಎತ್ತರದ ಬ್ಯಾರಿಕೇಡ್‌ ಅನ್ನು ಹೊಡೆದು ಎದುರಿಗೆ ಬರುತ್ತಿದ್ದ ಜನರ ಮೇಲೆ ಹರಿದಿದೆ ಎಂದಿದ್ದಾರೆ.

ಕಂಟೈನರ್‌ ಚಾಲಕ ಭುವನೇಶ್‌ನನ್ನು ವಿಚಾರಣೆ ನಡೆಸಲಾಗಿದ್ದು, ಆತ ಹೊಳೆನರಸೀಪುರದ ಬಸವನಪುರದವನು ಎಂದು ಗೊತ್ತಾಗಿದೆ. ಕಂಟೈನರ್‌ನಲ್ಲಿ ಯಾವ ಸರಕುಗಳಿದ್ದವು ಎಂಬುನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸದರಿ ಲಾರಿ ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. ಸರಕು ಸಾಗಾಣಿಕೆ ಕೇಂದ್ರ ಕಚೇರಿ ದೊಡ್ಡಬಳ್ಳಾಪುರದಲ್ಲಿದೆ ಎಂದು ಪ್ರಾಥಮಿಕವಾಗಿ ಮಾಹಿತಿ ದೊರೆತಿದೆ ಎಂದರು.

ಹಾಸನ ಗಣೇಶೋತ್ಸವ ದುರಂತ : 10 ಲಕ್ಷ ಪರಿಹಾರಕ್ಕೆ ಅಶೋಕ್‌ ಆಗ್ರಹ

ಬೆಂಗಳೂರು,ಸೆ.13- ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಗಣೇಶ ಉತ್ಸವದ ವೇಳೆ ಸಂಭವಿಸಿದ ಆಪಘಾತದಲ್ಲಿ ಮೃತಪಟ್ಟವರು ಹಳ್ಳಿಯವರು, 10 ಲಕ್ಷ ರೂ. ಪರಿಹಾರ ಕೊಟ್ಟರೆ, ಒಳ್ಳೆಯದು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಗಣೇಶೋತ್ಸವ ಸಂದರ್ಭದಲ್ಲಿ ಹೀಗೆ ಆಗಿದ್ದು ನೋವು ತಂದಿದೆ. ಮೃತರ ಆತಕ್ಕೆ ಶಾಂತಿ ಸಿಗಲಿ. ಸರ್ಕಾರ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಮೃತರೆಲ್ಲ ಹಳ್ಳಿಯವರು, ಹೀಗಾಗಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಹಾಸನಕ್ಕೆ ಹೋಗುವೆ. ಡಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆಗೂ ಭೇಟಿ ನೀಡುತ್ತೇನೆ. ಸರ್ಕಾರ ಗಾಯಾಳುಗಳನ್ನು ಬೆಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಬೇಕು ಎಂದು ಒತ್ತಾಯ ಮಾಡಿದರು.

ಇದೇ ವೇಳೆ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆ ವಿಚಾರವಾಗಿ ಮಾತನಾಡಿ, ಚಿತ್ರದುರ್ಗದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆ ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸುತ್ತಮುತ್ತಲಿನ ಜಿಲ್ಲೆಯ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಬೇಕು. ಯಾವುದೇ ಕಿಡಿಗೇಡಿಗಳು ಮಸೀದಿಯಿಂದ ಕಲ್ಲು ಹಾಕೋದಕ್ಕೆ ಅವಕಾಶ ಕೊಡಬಾರದು. ಎಲ್ಲಾ ರಸ್ತೆಯಲ್ಲಿ ಗಣೇಶ ಹೋಗಬಹುದು, ಯಾರು ಅಡ್ಡಿ ಮಾಡಬಾರದು ಅಂತ ಮುಸ್ಲಿಮರೇ ಹೇಳಿದ್ದಾರೆ. ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್‌ ಎಂದು ಕೋಮುಗಲಭೆ ಸೃಷ್ಟಿ ಮಾಡುತ್ತಾರೆ. ಸರ್ಕಾರ ಕೂಡಾ ಅಂತಹವರ ಕೇಸ್‌‍ ವಾಪಸ್‌‍ ಪಡೆಯುವುದರಿಂದ ಅವರಿಗೆ ಕುಮಕ್ಕು ಬರ್ತಿದೆ. ಪಾಕಿಸ್ತಾನ ಗಿರಾಕಿಗಳಿಗೆ ಪಾಠ ಕಲಿಸಬೇಕು. ಆಗ ಇಂತಹ ಘಟನೆಗಳು ಆಗುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳ ಪ್ರಕರಣದ ತನಿಖೆ ವಿಳಂಬ ವಿಚಾರವಾಗಿ ಮಾತನಾಡಿ, ಸರ್ಕಾರ ಯಾರನ್ನೋ ರಕ್ಷಣೆ ಮಾಡಲು ತನಿಖೆಯನ್ನು ವಿಳಂಬ ಮಾಡಿಸುತ್ತಿದೆ. ಎಸ್‌‍ಐಟಿಗೆ ಬುರುಡೆ ಅಗೆಯುವುದರಲ್ಲಿ ಇದ್ದ ಉತ್ಸಾಹ ತನಿಖೆ ಮಾಡುವುದರಲ್ಲಿ ಇಲ್ಲ. ಜಿಂಕೆಯಂತೆ ಬುರುಡೆ ಅಗೆದು ಆಮೆಗತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆಯುವುದು ನೋಡಿದರೆ ಸರ್ಕಾರವೇ ನಿಧಾನವಾಗಿ ತನಿಖೆ ಮಾಡಿ ಎಂದು ಸೂಚನೆ ಕೊಟ್ಟಂತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕೇಸ್‌‍ನಲ್ಲಿ ಕೇರಳ, ತಮಿಳುನಾಡು, ದೆಹಲಿಗೂ ಲಿಂಕ್‌ ಇದೆ. ಎಸ್‌‍ಐಟಿ ಅಲ್ಲಿಗೆ ಹೋಗಿಲ್ಲ. ಇದನ್ನ ನೋಡಿದ್ರೆ ತನಿಖೆ ಹಳ್ಳ ಹಿಡಿಸೋಕೆ, ಕೇಸ್‌‍ ಮುಚ್ಚಿ ಹಾಕೋ ಹುನ್ನಾರ ನಡೆಯುತ್ತಿದೆ ಎನಿಸುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ತಿಮಿಂಗಿಲಗಳು ಇವೆ. ಇವುಗಳ ಬೇಟೆಯಾಡಬೇಕು. ಆದರೆ ಸರ್ಕಾರ ಯಾರದ್ದೋ ರಕ್ಷಣೆಗೆ ನಿಂತಂತೆ ಕಾಣುತ್ತಿದೆ. ಎಸ್‌‍ಐಟಿ ತನಿಖೆ ಹೀಗೆ ವಿಳಂಬ ಆದರೆ, ಬಿಜೆಪಿ ಮತ್ತೆ ಹೋರಾಟಕ್ಕೆ ಇಳಿಯಲಿದೆ ಎಂದು ಅಶೋಕ್‌ ಎಚ್ಚರಿಕೆ ನೀಡಿದರು.

ಆಟೋ ಚಾಲಕನ ಅಚಾತುರ್ಯದಿಂದ ಸರಣಿ ಅಪಘಾತ, ಪಾದಚಾರಿ ಮಹಿಳೆ ಸಾವು

ಬೆಂಗಳೂರು,ಸೆ.13- ಆಟೋಚಾಲಕ ರಸ್ತೆ ಮಧ್ಯೆ ನಿಲ್ಲಿಸಿದ್ದ ಗೂಡ್ಸ್ ವಾಹನವನ್ನು ಪಕ್ಕಕ್ಕೆ ನಿಲ್ಲಿಸಲು ಚಾಲನೆ ಮಾಡುತ್ತಿದ್ದಂತೆ ನಿಯಂತ್ರಣ ತಪ್ಪಿ ಏಳು ವಾಹನಗಳಿಗೆ ಅಪ್ಪಳಿಸಿ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಾಟನ್‌ಪೇಟೆ ನಿವಾಸಿ ಅಂಜನಾದೇವಿ (50) ಮೃತಪಟ್ಟ ಪಾದಚಾರಿ ಮಹಿಳೆ.

ನಿನ್ನೆ ಸಂಜೆ 5.30 ರ ಸುಮಾರಿನಲ್ಲಿ ಕಿರಣ್‌ ಎಂಬಾತ ತನ್ನ ಪ್ಯಾಸೆಂಜರ್‌ ಆಟೋದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಮನೆಗಳಿಗೆ ಬಿಡಲು ಹೋಗುತ್ತಿದ್ದನು. ಕಾಟನ್‌ಪೇಟೆ ಮುಖ್ಯರಸ್ತೆಯ ಮಿಲ್‌ ರೋಡ್‌ ಜಂಕ್ಷನ್‌ ಬಳಿ ಬಂದಾಗ ರಸ್ತೆ ಮಧ್ಯೆ ಗೂಡ್‌್ಸ ವಾಹನ ನಿಂತಿರುವುದು ಗಮನಿಸಿದ್ದಾನೆ.

ಗೂಡ್‌್ಸ ವಾಹನ ಚಾಲಕ ಅಗರಬತ್ತಿ ಲೋಡ್‌ ಮಾಡಲು ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಹೋಗಿದ್ದನು. ಈ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ತನ್ನ ಆಟೋಗೆ ಜಾಗ ಮಾಡಿಕೊಳ್ಳುವ ಸಲುವಾಗಿ ಆಟೋ ಚಾಲಕ ಗೂಡ್ಸ್ ವಾಹನವನ್ನು ಚಲಾಯಿಸಲು ಮುಂದಾಗಿದ್ದಾನೆ.

ಆ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನಾಲ್ಕು ದ್ವಿಚಕ್ರ ವಾಹನಗಳು, ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ಪಾದಚಾರಿ ಮಹಿಳೆಗೆ ಗುದ್ದಿ ಸರಣಿ ಅಪಘಾತವಾಗಿದೆ.ಗಂಭೀರ ಗಾಯಗೊಂಡಿದ್ದ ಮಹಿಳೆ ಅಂಜನಾದೇವಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಚಾಮರಾಜಪೇಟೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಚಾಲಕ ಕಿರಣ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಅಪಘಾತದಿಂದಾಗಿ ಏಳು ವಾಹನಗಳು ಜಖಂಗೊಂಡಿವೆ.

ಸ್ಕೂಟರ್‌ಗೆ ಟ್ಯಾಂಕರ್‌ ಡಿಕ್ಕಿ : ಸವಾರ ಸಾವು
ಸ್ಕೂಟರ್‌ಗೆ ಟ್ಯಾಂಕರ್‌ ವಾಹನ ಡಿಕ್ಕಿಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಮಹದೇವಪುರ ಸಂಚಾರಿ ಪೊಲೀಸ್‌‍ಠಾಣೆ ವ್ಯಾಪ್ತಿಯಲ್ಲಿಇಂದು ಬೆಳಗ್ಗೆ ನಡೆದಿದೆ. ಕೊಡಿಗೇಹಳ್ಳಿಯ ನಿವಾಸಿ ಮೆಹಬೂಬ್‌(45) ಮೃತಪಟ್ಟ ಸ್ಕೂಟರ್‌ ಸವಾರ.ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಬೆಳ್ತೂರು-ಕೊಡಿಗೇಹಳ್ಳಿ ರಸ್ತೆಯಲ್ಲಿ ಮೆಹಬೂಬ್‌ ಅವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅತೀವೇಗವಾಗಿ ಬಂದ ಟ್ಯಾಂಕರ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರಗಾಯಗೊಂಡು ಅವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಮಹದೇವಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಕ್ಕಸನಂತೆ ಬಂದು 9 ಜೀವಗಳನ್ನು ಬಲಿಪಡೆದ ಟ್ರಕ್, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಹಾಸನ,ಸೆ.13- ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆಯೇ ರಕ್ಕಸನಂತೆ ಟ್ರಕ್‌ ನುಗ್ಗಿದ್ದರಿಂದಾಗಿ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಉಸಿರು ಚೆಲ್ಲಿದ 9 ಮಂದಿಯ ಕುಟುಂಬಗಳ ಕಣ್ಣೀರ ಕಥೆಗಳೇ ಕರುಣಾಜನಕವಾಗಿವೆ.ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಜಿಲ್ಲೆಯೇ ಶೋಕ ಸಾಗರದಲ್ಲಿ ಮುಳುಗಿದೆ.

ಈ ಘೋರ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚು. ಮನೆಗೆ ಆಧಾರವಾಗಬೇಕಿದ್ದ ಯುವಕರ ಭೀಕರ ಅಂತ್ಯವಾಗಿರುವುದು ದುರ್ದೈವ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರ ಕೋಡಿಯೇ ಹರಿದಿದೆ. ಮೃತಪಟ್ಟ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆಯಾಗಿದೆ. ಮೃತಪಟ್ಟವರ ಪೈಕಿ 6 ಮಂದಿ ಸ್ಥಳೀಯ ನಿವಾಸಿಗಳು. ಉಳಿದ ಮೂವರು ಬಳ್ಳಾರಿ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಮೃತ ದೇಹಗಳ ಹಸ್ತಾಂತರ:
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂಬತ್ತು ಮಂದಿಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಇಂದು ಮುಂಜಾನೆ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಕೇಂದ್ರದ ಬಳಿ ಜಮಾಯಿಸಿದ ಮೃತರ ಪೋಷಕರು, ಸಂಬಂಧಿಕರು, ಸ್ನೇಹಿತರ ಗೋಳಾಟ ಕರಳು ಕಿವುಚುವಂತಿತ್ತು.

ಮೃತರ ವಿವರ:
ಬಳ್ಳಾರಿಯ ಪ್ರವೀಣ್‌ ಕುಮಾರ್‌, ಹೊಳೇನರಸೀಪುರ ತಾಲ್ಲೂಕಿನ ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ (17), ಹಳೇ ಕೋಟೆ ಹೋಬಳಿಯ ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಪ್ರವೀಣ್‌, (25), ಕೆ.ಬಿ.ಪಾಳ್ಯದ ರಾಜೇಶ (17), ಮುತ್ತಿಗೆ ಹೀರಳ್ಳಿ ಗ್ರಾಮದ ಗೋಕುಲ (17), ಹಾಸನದ ಬಂಟರಹಳ್ಳಿಯ ಪ್ರಭಾಕರ್‌ (55), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್‌ (23) ಹಾಗೂ ಚಿಕ್ಕಮಗಳೂರು ಜಿಲ್ಲೆ ಮಣೆನಹಳ್ಳಿ ಮಲ್ಲೆ ಗ್ರಾಮದ ಸುರೇಶ ಮೃತ ದುರ್ದೈವಿಗಳು.

ಮೃತರ ಪೈಕಿ ಐದು ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಐಜಿಪಿ ಬೋರಲಿಂಗಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಅಪಘಾತದಲ್ಲಿ ಗಾಯಗೊಂಡಿರುವ 20ಕ್ಕೂ ಹೆಚ್ಚು ಮಂದಿಯನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇನ್ನು ಕೆಲವು ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡಿರುವ 20 ಮಂದಿ ಪೈಕಿ ಇಬ್ಬರ ಸ್ಥಿತಿ ಸ್ಥಿರವಾಗಿದೆ. ಇಬ್ಬರು ಗಾಯಾಳುಗಳಿಗೆ ಪಕ್ಕೆಲುಬು ಮೂಳೆ ಮುರಿತವಾಗಿದ್ದರಿಂದ ಅವರನ್ನು ತುರ್ತು ಶಸ್ತ್ರ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹುಟ್ಟುಹಬ್ಬ ದಿನವೇ ಯುವಕ ಸಾವು:
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ನಿವಾಸಿ ಮಿಥುನ್‌ ರಾತ್ರಿಯಷ್ಟೇ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ನಂತರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ದುರಂತ ಅಂತ್ಯವಾಗಿರುವುದು ವಿಷಾದಕರ.

ಮನೆಗೆ ಆಧಾರವಾಗಬೇಕಾದವರೇ ದುರ್ಮರಣ:
ಈ ಅಪಘಾತದಲ್ಲಿ ಮೃತಪಟ್ಟ ಯುವಕರು 17 ರಿಂದ 25 ವಯೋಮಾನದವರು. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮುಂದೊಂದು ದಿನ ಮನೆಗೆ ಆಧಾರವಾಗುತ್ತಾರೆ ಎಂದು ಪೋಷಕರು ಹಲವು ಕನಸು ಕಂಡಿದ್ದರು. ಈ ಯುವಕರೂ ಸಹ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಪಡೆದುಕೊಳ್ಳುವ ಗುರಿ ಹೊಂದಿದ್ದರು. ಆದರೆ ಈ ಭೀಕರ ದುರಂತ ಯುವಕರ ಬದುಕನ್ನೇ ಅಂತ್ಯಗೊಳಿಸಿದರೆ, ಇನ್ನು ಅವರುಗಳ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಅಪಘಾತವಾದದ್ದು ಹೇಗೆ:
ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ ಹಬ್ಬದ ವಾತಾವರಣವಿತ್ತು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗ್ರಾಮಸ್ಥರು ಮಧ್ಯಾಹ್ನದ ನಂತರ ಮೆರವಣಿಗೆ ಆರಂಭಿಸಿದ್ದರು. ಡಿಜೆ ಸಂಗೀತದೊಂದಿಗೆ ನೃತ್ಯ ಮಾಡಿಕೊಂಡು ಮೆರವಣಿಗೆ ತೆರಳುತ್ತಿದ್ದು, ಮೊಸಳೆಹೊಸಳ್ಳಿಯ ಸಂತೆ ಮಾಳದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು. ಗಣೇಶೋತ್ಸವದ ಮೆರವಣಿಗೆ ಇನ್ನು 5 ನಿಮಿಷಗಳ ಕಾಲ ಮುಂದೆ ಹೋಗಿದ್ದರೆ ಸಂತೆಮಾಳ ಸೇರಿಕೊಳ್ಳುತ್ತಿತ್ತು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸುತ್ತಮುತ್ತಲ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ರಾತ್ರಿ 8.30ರ ಸುಮಾರಿನಲ್ಲಿ ಈ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಸಾಗುತ್ತಿದ್ದಾಗ ಸರಕು ಸಾಗಾಣಿಕೆಯ ಕಂಟೈನರ್‌ ವಾಹನ ಮುಂದೆ ಹೋಗುತ್ತಿದ್ದ ಬೈಕ್‌ಗೆ ಗುದ್ದಿ, ಬಲಭಾಗಕ್ಕೆ ತಿರುಗಿ ಡಿವೈಡರ್‌ಅನ್ನು ಹತ್ತಿ ಪಕ್ಕದ ರಸ್ತೆಯಲ್ಲಿದ್ದ ಈ ಮೆರವಣಿಗೆಯ ಮೇಲೆ ಹರಿದಿದೆ. ಇದರಿಂದ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 20 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಕಂಗಾಲಾದ ಗ್ರಾಮಸ್ಥರು :
ಹಬ್ಬದ ವಾತಾವರಣವಿದ್ದ ಗ್ರಾಮ ಕ್ಷಣಾರ್ಧದಲ್ಲಿ ಶೋಕದಲ್ಲಿ ಮುಳುಗಿರುವುದು ದುರ್ದೈವ. ಇಡೀ ಗ್ರಾಮವೇ ರಾತ್ರಿಯಿಡೀ ಜಾಗರಣೆ ಮಾಡಿದೆ. ಯುವಕರು ದುರಂತ ಅಂತ್ಯ ಕಂಡಿರುವುದಕ್ಕೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ದೇಶಾದ್ಯಂತ ಆಘಾತ :
ಈ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವುದರಿಂದ ದೇಶಾದ್ಯಂತ ತೀವ್ರ ಆಘಾತ ವ್ಯಕ್ತವಾಗಿದೆ.ಘಟನೆಯ ತೀವ್ರತೆ ಹಾಗೂ ಅಪಘಾತದ ವಿಭಿನ್ನ ದೃಶ್ಯಗಳು ಮೈ ಜುಮೆನ್ನುವಂತಿದ್ದು, ಗಾಬರಿ ಹುಟ್ಟಿಸುವಂತಿವೆ. ಅಪಘಾತದ ವಿಡಿಯೋ ದೃಶ್ಯಾವಳಿಗಳನ್ನು ನೋಡಿದ ಜನರು ಘಟನೆಯ ಭೀಕರತೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್‌..
ಹಾಸನ,ಸೆ.13- ಗಣೇಶ ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್‌ ಹರಿದು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮೊಸಳೆಹೊಸಳ್ಳಿ ಗ್ರಾಮದ ವರ್ತಕರು ಇಂದು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದ್ದಾರೆ.ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌‍ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.ವರ್ತಕರು ಕೂಡ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ.ಮೊಸಳೆಹೊಸಳ್ಳಿ ಗ್ರಾಮಸ್ಥರು 25 ವರ್ಷಗಳಿಂದ ಗ್ರಾಮದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುತ್ತಿದ್ದಾರೆ. ನಿನ್ನೆ ಆರ್ಕೇಸ್ಟ್ರಾ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಆರ್ಕೇಸ್ಟ್ರಾ ನೋಡಲು ನೂರಾರು ಮಂದಿ ಬರುತ್ತಿದ್ದರು. ಈ ವೇಳೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಅವರ ಮೇಲೆ ಯಮರೂಪಿ ಟ್ರಕ್‌ ಹರಿದು ದುರಂತ ಸಂಭವಿಸಿದೆ.

ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ :
ಹಾಸನ,ಸೆ.13- ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ.ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ
ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ನಿನ್ನೆ ಮಧ್ಯಾಹ್ನ 3.30ರ ಸುಮಾರಿನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸ್ಥಳದಿಂದ ಡೆಕೋರೆಟೆಡ್‌ ರಥದಲ್ಲಿ ಕೂರಿಸಿಕೊಂಡು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಹೋಗಲಾಗುತ್ತಿತ್ತು.
ರಾತ್ರಿ 8.45ರ ಸುಮಾರಿನಲ್ಲಿ ಈ ವಾಹನ ರಾಷ್ಟ್ರೀಯ ಹೆದ್ದಾರಿ-373ರ ಹೊಳೆನರಸೀಪುರ ಕಡೆಯಿಂದ ಹಾಸನ ಕಡೆಗೆ ಹೋಗುವ ರಸ್ತೆಯಲ್ಲಿ ಮೊಸಳೆಹೊಸಳ್ಳಿ ಗ್ರಾಮದ ಬಾಬು ಟ್ರೇಡರ್ಸ್‌ ಮುಂಭಾಗ ಮೆರವಣಿಗೆ ಸಾಗುತ್ತಿತ್ತು.

ಅದೇ ಸಮಯಕ್ಕೆ ಕಂಟೈನರ್‌ ಲಾರಿಯನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ಚಾಲಕ ಹಾಸನ ಕಡೆಯಿಂದ ಹೊಳೆನರಸೀಪುರದ ಕಡೆಗೆ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಅದು ಸಾಧ್ಯವಾಗದೇ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಮಧ್ಯದ ಡಿವೈಡರ್‌ ದಾಟಿ ಮೆರವಣಿಗೆಯಲ್ಲಿದ್ದ ಸಾರ್ವಜನಿಕರ ಮೇಲೆ ಹರಿಸಿದ ಪರಿಣಾಮ 8 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಈಶ್ವರ್‌, ರಾಜೇಶ್‌, ಗೋಕುಲ್‌, ಕುಮಾರ್‌, ಪ್ರವೀಣ್‌ಕುಮಾರ್‌, ಮಿಥುನ್‌, ಪ್ರವೀಣ್‌ ಮತ್ತು ಸುರೇಶ್‌ ಎಂದು ಗುರುತಿಸಲಾಗಿದೆ.ಅಲ್ಲದೆ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟರಹಳ್ಳಿಯ ಪ್ರಭಾಕರ್‌ ಎಂಬುವರು ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದು, ಮೃತರ ಸಂಖ್ಯೆ 9 ಕ್ಕೆ ಏರಿದಂತಾಗಿದೆ.

ಮೆರವಣಿಗೆಯಲ್ಲಿದ್ದ 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರೆಲ್ಲರನ್ನೂ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಗೊರೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟ್ರಕ್‌ ಚಾಲಕನಿಂದ ಮತ್ತೊಂದು ಅಪಘಾತ! :
ಟ್ರಕ್‌ ಚಾಲಕ ಭುವನೇಶ್‌ ಈ ಅಪಘಾತಕ್ಕೂ ಮುನ್ನ ಹಾಸನ ಜಿಲ್ಲೆ ಚನ್ನಪಟ್ಟಣದ ಬೈಪಾಸ್‌‍ನಲ್ಲಿ ಆಟೋ ಮತ್ತು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಈ ಮಾರ್ಗಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿ ಭುವನೇಶ್‌ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಟ್ರಕ್‌ ಚಾಲಕನ ವೈಫಲ್ಯವೇ ಅಪಘಾತಕ್ಕೆಕಾರಣ
ಬೆಂಗಳೂರು,ಸೆ.13- ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಸಂಭವಿಸಿದ ಭೀಕರ ಅಪಘಾತಕ್ಕೆ ಟ್ರಕ್‌ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಟ್ರಕ್‌ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.ಈ ಮಾರ್ಗದಲ್ಲಿ ಟ್ರಕ್‌ ಬರುತ್ತಿದ್ದಾಗ ಮುಂದೆ ಹೋಗುತ್ತಿದ್ದ ಬೈಕ್‌ ಸವಾರನನ್ನು ಗಮನಿಸಿ ತಕ್ಷಣ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ವಾಹನವನ್ನು ಏಕಾಏಕಿ ಪಕ್ಕಕ್ಕೆ ತೆಗೆದುಕೊಂಡ ಪರಿಣಾಮ ನಿಯಂತ್ರಣ ತಪ್ಪಿ ಬೈಕ್‌ಗೆ ಅಪ್ಪಳಿಸಿ ನಂತರ ರಸ್ತೆ ವಿಭಜಕ ಹತ್ತಿ ಮೆರವಣಿಗೆಯಲ್ಲಿ ಹೋಗುತ್ತಿದ್ದ ಜನರ ಮೇಲೆ ನುಗ್ಗಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಟ್ರಕ್‌ ಚಾಲಕ ಗಾಯಗೊಂಡಿದ್ದು, ಆತನೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಎಸ್ಪಿ ಮಹಮದ್‌ ಸುಜೇತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಟ್ರಕ್‌ ಹಾಸನದಿಂದ ಹೊಳೆನರಸೀಪುರದ ಕಡೆಗೆ ಹೊರಟಿದ್ದ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಸೊಕೋ ತಂಡ ಪರಿಶೀಲನೆ ನಡೆಸುತ್ತಿದ್ದು, ಅಪಘಾತದ ನಿಖರ ಕಾರಣದ ಬಗ್ಗೆ ತನಿಖೆ ಆರಂಭಿಸಿದೆ. ತಜ್ಞರ ತಂಡ ಘಟನಾ ಸ್ಥಳವನ್ನು ಇಂಚಿಂಚೂ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಈ ಹೆದ್ದಾರಿಯ ಒಂದು ಬದಿ ಬಂದ್‌ ಮಾಡಿದ್ದರಿಂದ ಮತ್ತೊಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ರಸ್ತೆ ಮಧ್ಯೆ ವಾಹನಗಳು ನುಗ್ಗದಂತೆ ಬ್ಯಾರಿಕೇಡ್‌ಗಳನ್ನೂ ಹಾಕಲಾಗಿತ್ತು.
ಇದೇ ವೇಳೆಗೆ ಹಾಸನದಿಂದ ಹೊಳೆನರಸೀಪುರಕ್ಕೆ ಹೊರಟಿದ್ದ ಟ್ರಕ್‌ ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ಗಣೇಶ ಮೆರವಣಿಗೆಯತ್ತ ನುಗ್ಗಿದೆ.ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದವರಿಗೆ ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಟ್ರಕ್‌ ಅವರ ಮೇಲೆಯೇ ಯಮನಂತೆ ಎರಗಿತ್ತು.ಆ ವೇಳೆ ಮೆರವಣಿಗೆಯಲ್ಲಿದ್ದವರು ಎಲ್ಲೆಂದರಲ್ಲಿ ಓಡಿ ಕೆಲವರು ಪ್ರಾಣ ಉಳಿಸಿಕೊಂಡಿದ್ದಾರೆ.

ಮೃತರ ಮನೆಗಳಿಗೆ ಕೃಷ್ಣಭೈರೇಗೌಡ ಭೇಟಿ :
ಹಾಸನ, ಸೆ.13- ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿ 373ರ ಮೊಸಳೆ ಹೊಸಳ್ಳಿ ಗ್ರಾಮದ ಬಳಿ ನಿನ್ನೆ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಟ್ರಕ್‌ ಹರಿದು 9 ಜನ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮೃತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.

ಹಾಸನ ಟೋಲ್‌ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರಿ ಶಾಲೆಯಲ್ಲಿ
ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮಹಮದ್‌ ಸಚಿತ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ನಂತರ ಸಚಿವರು ಅಪಘಾತದಲ್ಲಿ ಮೃತಪಟ್ಟ ಪ್ರಭಾಕರ್‌, ಗಣನಾಯಕನಹಳ್ಳಿಯ ಈಶ್ವರ್‌ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ಮೂರ್ತಿ ಮೆರವಣಿಗೆ ವೇಳೆ ಅಪಘಾತಕ್ಕೆ ಕಾರಣವಾದ ಟ್ರಕ್‌ ಚಾಲಕ ಭುವನ್‌ ವಿರುದ್ಧ ಗೋರೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕೆಎಸ್‌‍ಆರ್‌ಪಿ ತುಕಡಿ ನಿಯೋಜಿಸಲಾಗಿದೆ .ಇಂಥ ದುರಂತ ಸಂಭವಿಸಿರುವುದು ದುರದೃಷ್ಟಕರ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ ಎಂದರು.

ಮೃತರ ಮನೆಗಳಿಗೆ ತೆರಳಿ ಕುಟುಂಬದವರ ನೋವಿನಲ್ಲಿ ಭಾಗಿಯಾಗಬೇಕಾದದ್ದು, ನನ್ನ ಜವಾಬ್ದಾರಿಯಾಗಿದೆ. ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅವರು ಹೇಳಿದರು.ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಸಚಿವರು ವಿಚಾರಿಸಿದರು. ಗಾಯಾಳುಗಳ ಚಿಕಿತ್ಸಾವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

ಮನೆಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದೆ, ನಮ ಆಸೆಗೆ ತಣ್ಣೀರೆರಚಿದ ಜವರಾಯ
ಹಾಸನ, ಸೆ.13- ಮನೆಕೆಲಸ ಮಾಡಿ ಮಗನನ್ನು ಓದಿಸಿದ್ದಕ್ಕೂ ಸಾರ್ಥಕವಾಗುತ್ತಿದೆ. ಇನ್ನೇನು ಮಗ ಕೆಲಸಕ್ಕೆ ಸೇರಿದರೆ ನಮ ಕಷ್ಟ-ಕಾರ್ಪಣ್ಯಗಳೆಲ್ಲ ದೂರವಾಗುತ್ತವೆ ಎಂದು ಹತ್ತು-ಹಲವು ಆಶಾಗೋಪುರ ಕಟ್ಟಿಕೊಂಡಿದ್ದ ತಾಯಿಯ ಕನಸಿಗೆ ಜವರಾಯ ತಣ್ಣೀರೆರಚಿಸಿದ್ದಾನೆ.

ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ಟ್ರಕ್‌ ಹರಿದು ಮೃತಪಟ್ಟ ಬಳ್ಳಾರಿಯ ಎಂಜಿನಿಯರಿಂಗ್‌ ವಿದ್ಯಾರ್ಥಿ ಪ್ರವೀಣ್‌ ಅವರ ತಾಯಿಯ ಆಕ್ರಂಧನದ ಮಾತುಗಳಿವು. ಬಳ್ಳಾರಿಯ ನಾಗಲಕೆರೆಯ ಪ್ರವೀಣ್‌ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಘೋರ ದುರಂತದಲ್ಲಿ ಉಸಿರು ಚೆಲ್ಲಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಪ್ರವೀಣ್‌ನನ್ನು ತಾಯಿ ಕಷ್ಟಪಟ್ಟು ಮನೆಕೆಲಸ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಎಂಜಿನಿಯರಿಂಗ್‌ ಓದಿಸುತ್ತಿದ್ದರು.

ಬಳ್ಳಾರಿಯಲ್ಲಿ ಡಿಪ್ಲಮೋ ಮುಗಿಸಿ ಹಾಸನದಲ್ಲಿ ಎಂಜಿನಿಯರಿಂಗ್‌ ಮಾಡಲು ತೆರಳಿ ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಅಂತಿಮ ಸೆಮಿಸ್ಟರ್‌ ಓದುತ್ತಿದ್ದ ಪ್ರವೀಣ್‌, ಇನ್ನೇನು ಪರೀಕ್ಷೆ ಮುಗಿಸಿಕೊಂಡು ಕೆಲಸಕ್ಕೆ ಸೇರಿ ನಮ ಕಷ್ಟಗಳನ್ನೆಲ್ಲ ದೂರ ಮಾಡುತ್ತಾನೆ ಎಂದು ಪ್ರವೀಣ್‌ ತಾಯಿ ಕನಸನ್ನು ಹೊತ್ತು ಹೆಮೆಯಿಂದ ತಮ ಸಂಬಂಧಿಕರು ಹಾಗೂ ಕುಟುಂಬದವರೊಂದಿಗೆ ಹೇಳಿಕೊಳ್ಳುತ್ತಿದ್ದರು.

ಆದರೆ, ಜವರಾಯನಿಗೆ ನಮ ಬಡವರ ಸಂಭ್ರಮ ನೋಡಿ ಸಹಿಸಲಾಗಲಿಲ್ಲವೇನೋ… ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗನನ್ನು ಎಳೆ ವಯಸ್ಸಿನಲ್ಲೇ ಕಿತ್ತುಕೊಂಡಿದ್ದಾನೆ. ಇಂತಹ ನೋವು ಯಾವ ತಾಯಂದಿರಿಗೂ ಬರುವುದು ಬೇಡ ಎಂದು ಪುತ್ರಶೋಕದಲ್ಲಿ ಮಮಲ ಮರುಗಿಸಿದ್ದಾರೆ.
ಪ್ರವೀಣ್‌ನ ಮೃತದೇಹ ಬಳ್ಳಾರಿಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ತಾಯಿ ಇನೇಲೆ ನನಗೆ ಯಾರು ದಿಕ್ಕು ಎಂದು ಎದೆ ಬಡಿದುಕೊಂಡು ಕುಸಿದುಬಿದ್ದಿದ್ದಾರೆ. ತಾಯಿಯ ಗೋಳಾಟ ಕಂಡ ಇಡೀ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

ಬಾಳಿ ಬದುಕಬೇಕಾದ ಮಕ್ಕಳು ಈ ರೀತಿ ದುರಂತದಲ್ಲಿ ಸಾವಿಗೀಡಾದರೆ ಪೋಷಕರ ಗತಿ ಏನಾಗಬೇಕು. ಹೊಟ್ಟೆಬಟ್ಟೆ ಕಟ್ಟಿ, ಸಾಲ ಸೋಲ ಮಾಡಿ ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಸುಂದರ ಕನಸು ಕಟ್ಟಿಕೊಳ್ಳುವ ಕುಟುಂಬಸ್ಥರಿಗೆ ಇಂತಹ ದುರಂತಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತಿವೆ.

ಈ ಸಾವು ನ್ಯಾಯವೇ..?
ಹಾಸನ, ಸೆ.13- ನಿನ್ನೆಯೆಲ್ಲಾ ಪೋಷಕರು, ಬಂಧು-ಬಳಗ, ಸ್ನೇಹಿತರೆಲ್ಲ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಆದರೆ, ಇಂದು ಸಂತಾಪ ಸೂಚಿಸುವಂತಾಗಿದೆ ಎಂದು ಮೊಸಳೆಹೊಸಳ್ಳಿ ದುರಂತದಲ್ಲಿ ಮೃತಪಟ್ಟ ವಿದ್ಯಾರ್ಥಿ ಮಿಥುನ್‌ ಕುಟುಂಬದ ಕಣ್ಣೀರಿನ ಮಾತು. ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರ ಗ್ರಾಮದ ಮಿಥುನ್‌ (22) ಹುಟ್ಟುಹಬ್ಬದ ದಿನವೇ ದುರಂತ ಅಂತ್ಯ ಕಂಡಿದ್ದಾನೆ. ಮಿಥುನ್‌ ಹಲವು ಗುರಿಗಳನ್ನು ಕಟ್ಟಿಕೊಂಡು ಮಿಥುನ್‌ ಓದುತ್ತಿದ್ದ. ಆದರೆ, ಗುರಿ ತಲುಪಲು ಭಗವಂತ ಬಿಡಲಿಲ್ಲ. ಮಧ್ಯದಲ್ಲೇ ಜೀವ ಕಸಿದುಕೊಂಡಿದ್ದು, ಬಾಳಿ ಬದುಕಬೇಕಾದ ಮಿಥುನ್‌ ದುರಂತ ಅಂತ್ಯ ಕಂಡಿರುವುದು ವಿಷಾದಕರ. ಸ್ನೇಹಿತರು ಹಾಗೂ ಕುಟುಂಬದವರು ಈತನ ಸಾವನ್ನು ಅರಗಿಸಿಕೊಳ್ಳಲಾಗದೆ ಕಣ್ಣೀರಿನ ಕಟ್ಟೆಯೊಡೆದಿದೆ.

ಮೊಸಳೆಹೊಸಳ್ಳಿ ಅಪಘಾತ: ಪಾರದರ್ಶಕ ತನಿಖೆ
ಹಾಸನ, ಸೆ.13- ಮೊಸಳೆಹೊಸಳ್ಳಿ ಗಣೇಶೋತ್ಸವದ ಮೆರವಣಿಗೆ ವೇಳೆ ಲಾರಿ ಹರಿದ ಘಟನೆಯ ಬಗ್ಗೆ ಪಾರದರ್ಶಕ ತನಿಖೆ ನಡೆಸಲಾಗುವುದು ಎಂದು ಸಂಸದ ಶ್ರೇಯಸ್‌‍ ಪಟೇಲ್‌ ಹೇಳಿದ್ದಾರೆ.
ರಾತ್ರಿಯೇ ಸ್ಥಳಕ್ಕೆ ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ನಡೆಯಬಾರದ ದುರ್ಘಟನೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಲಾರಿ ಗಣೇಶೋತ್ಸವದ ಮೆರವಣಿಗೆಯ ವೇಳೆ ಹರಿದಿರುವುದು ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸೂಕ್ತ ತನಿಖೆಯ ಮೂಲಕ ಯಾರ ಲೋಪವಿದೆ ಎಂದು ಪತ್ತೆ ಹಚ್ಚಲಾಗುವುದು. ಸದ್ಯಕ್ಕೆ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು, ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದಿದ್ದಾರೆ.

ಉಸ್ತುವಾರಿ ಸಚಿವರ ತೀವ್ರ ನಿಗಾ
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಪಘಾತದ ಹಿನ್ನೆಲೆಯಲ್ಲಿ ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿಯಿಡೀ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಘಟನೆ ನಡೆದ ಕ್ಷಣದಿಂದ ರಾತ್ರಿಯಿಡೀ ಅಧಿಕಾರಿಗಳ ತಂಡ-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡರು ತೀವ್ರ ನಿಗಾ ವಹಿಸಿದ್ದಾರೆ.ಮೃತರ ಕುಟುಂಬಗಳ ಜೊತೆ ಸತತ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮೃತರ ಮರಣೋತ್ತರ ಪರೀಕ್ಷೆ ರಾತ್ರಿಯೇ ನಡೆಯಲು ಬೇಕಾದ ಅಗತ್ಯ ಕ್ರಮ ಕೈಗೊಂಡರು. ವೈದ್ಯರ ತಂಡ ಬೆಳಗಾಗುವವರೆಗೂ ಕಾಯದೇ ರಾತ್ರಿಯೇ ಮರಣೋತ್ತರ ಪರೀಕ್ಷೆ ಮತ್ತು ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.

ಗಾಯಾಳುಗಳ ಚಿಕಿತ್ಸೆಗೆ ಖುದ್ದಾಗಿ ಜಿಲ್ಲಾ ವೈದ್ಯಾಧಿಕಾರಿಗಳೇ ಉಸ್ತುವಾರಿ ವಹಿಸಿದ್ದು, ಅಗತ್ಯ ವೈದ್ಯರ ತಂಡವನ್ನು ರಚಿಸಿದ್ದಾರೆ. ಅಗತ್ಯವಾದ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಯವರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದು, ಮೃತರ ಕುಟುಂಬದವರ ಜೊತೆಗೂ ಮಾತನಾಡುತ್ತಿದ್ದಾರೆ.

ಮಿಜೋರಾಂನ ಮೊಟ್ಟ ಮೊದಲ ರೈಲು ಮಾರ್ಗ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಐಜ್ವಾಲ್‌‍,ಸೆ.13- ಈಶಾನ್ಯ ರಾಜ್ಯವಾದ ಮಿಜೋರಾಂನ ಮೊಟ್ಟಮೊದಲ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿ ಐಜ್ವಾಲ್‌ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್ ಪ್ರೆಸ್‌‍ ರೈಲಿಗೆ ಹಸಿರು ನಿಶಾನೆ ತೋರಿದರು.

ಭಾರತೀಯ ರೈಲ್ವೆ ಇತಿಹಾಸದಲ್ಲಿ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲಾದ 8,070 ಕೋಟಿ ರೂಪಾಯಿ ವೆಚ್ಚದ ಬೈರಾಬಿ-ಸೈರಾಂಗ್‌ ರೈಲು ಮಾರ್ಗ ವನ್ನು 2008-09ರಲ್ಲಿ ಮಂಜೂರು ಮಾಡಿ 2015 ರಲ್ಲಿ ನಿರ್ಮಾಣ ಪ್ರಾರಂಭವಾಯಿತು.ಈ ಮಾರ್ಗದಲ್ಲಿ 45 ಸುರಂಗಗಳು, 55 ಪ್ರಮುಖ ಸೇತುವೆಗಳು ಮತ್ತು 87 ಸಣ್ಣ ಸೇತುವೆಗಳು ಸೇರಿವೆ. ಸೈರಾಂಗ್‌ ಬಳಿಯಿರುವ ಸೇತುವೆ ಸಂಖ್ಯೆ 144, ಕುತುಬ್‌ ಮಿನಾರ್‌ಗಿಂತ 114 ಮೀಟರ್‌ ಎತ್ತರವಾಗಿದೆ.

ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಗಿದ್ದ ರೈಲ್ವೆ ಕಾಮಗಾರಿ 11 ವರ್ಷಗಳ ಬಳಿಕ ಪೂರ್ಣಗೊಂಡಿದೆ. 8,070 ಕೋಟಿ ರೂ. ವೆಚ್ಚದ ಬೈರಾಬಿ-ಸೈರಾಂಗ್‌ ರೈಲು ಮಾರ್ಗವು ನಿರ್ಮಾಣವಾಗಿದೆ. 2015ರಲ್ಲಿ ಪ್ರಾರಂಭವಾದ ಕಾಮಗಾರಿ 2025ರಲ್ಲಿ ಪೂರ್ಣಗೊಂಡಿದೆ.

ಇದೀಗ ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್‌‍ ಟ್ರ್ಯಾಕ್‌ ಅಳವಡಿಸಲಾಗಿದೆ. ಸೇತುವೆ ಮತ್ತು ಸುರಂಗಗಳನ್ನು ಹೊರತುಪಡಿಸಿ 23.715 ಕಿ.ಮೀ. ಮಾರ್ಗವು ಬಯಲು ಪ್ರದೇಶದಲ್ಲಿದೆ. ಕೆಲವೆಡೆ ಮಳೆಯಿಂದಾಗಿ ಭೂಕುಸಿತ ಸಂಭವಿಸಿದರೆ, ಅದರಿಂದ ರಕ್ಷಣೆ ಪಡೆಯಲು ಸೂಕ್ತ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಸಾಯಿರಾಂಗ್‌ ಬಳಿಯ ಸೇತುವೆ ಸಂಖ್ಯೆ 144 ಕುತುಬ್‌ ಮಿನಾರ್‌ಗಿಂತ 114 ಮೀಟರ್‌ ಎತ್ತರದಲ್ಲಿದೆ. ಇದು ದೇಶದ ಅತಿ ಎತ್ತರದ ಪಿಯರ್‌ ರೈಲ್ವೆ ಸೇತುವೆಯಾಗಿದೆ.

ಈ ಮಾರ್ಗವು ಬೈರಾಬಿ ಹೊರತುಪಡಿಸಿ ಐದು ರಸ್ತೆ ಮೇಲ್ಸೇತುವೆಗಳು ಮತ್ತು ಆರು ಅಂಡರ್‌ಪಾಸ್‌‍ಗಳನ್ನು ಒಳಗೊಂಡಿದೆ. ಇದು ನಾಲ್ಕು ಪ್ರಮುಖ ನಿಲ್ದಾಣಗಳನ್ನು ಒಳಗೊಂಡಿದೆ – ಹೊರ್ಟೋಕಿ, ಕಾನ್‌ಪುಯಿ, ಮುವಾಲ್ಖಾಂಗ್‌ ಮತ್ತು ಸೈರಾಂಗ್‌ ಆಗಿವೆ. ಮಿಜೋರಾಂ ಮತ್ತು ದೇಶದ ಉಳಿದ ಭಾಗಗಳ ನಡುವಿನ ನೇರ ರೈಲು ಸಂಪರ್ಕವು ಈ ಪ್ರದೇಶದ ಜನರಿಗೆ ಸುರಕ್ಷಿತ, ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಪ್ರಯಾಣ ಆಯ್ಕೆಗಳನ್ನು ನೀಡುತ್ತದೆ. ಇದು ಆಹಾರ ಧಾನ್ಯಗಳು, ರಸಗೊಬ್ಬರಗಳು ಮತ್ತು ಇತರ ಅಗತ್ಯ ವಸ್ತುಗಳ ಸಕಾಲಿಕ ಮತ್ತು ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಒಟ್ಟಾರೆ ಸಾಗಣೆ ದಕ್ಷತೆ ಮತ್ತು ಪ್ರಾದೇಶಿಕ ಪ್ರವೇಶವನ್ನು ಹೆಚ್ಚಿಸುತ್ತದೆ.

ಹೊಸ ರೈಲು ಮಾರ್ಗವು ಪ್ರಯಾಣಿಕ ಮತ್ತು ಸರಕು ಸಾಗಣೆ ಸಂಪರ್ಕವನ್ನು ಸುಧಾರಿಸುತ್ತದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ಪ್ರವಾಸೋದ್ಯಮ ಮತ್ತು ಉದ್ಯೋಗವನ್ನು ಹೆಚ್ಚಿಸುತ್ತದೆ ಮತ್ತು ಮಿಜೋರಾಂ ಸಾರ್ವಜನಿಕರ ದೀರ್ಘಕಾಲೀನ ಬೇಡಿಕೆಯನ್ನು ಪೂರೈಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೂರು ಹೊಸ ಎಕ್ಸ್ ಪ್ರೆಸ್‌‍ ರೈಲುಗಳಾದ – ಸೈರಾಂಗ್‌ (ಐಜ್ವಾಲ್‌‍)-ದೆಹಲಿ (ಆನಂದ್‌ ವಿಹಾರ್‌ ಟರ್ಮಿನಲ್‌‍) ರಾಜಧಾನಿ ಎಕ್‌್ಸಪ್ರೆಸ್‌‍, ಸೈರಾಂಗ್‌-ಗುವಾಹಟಿ ಎಕ್‌್ಸಪ್ರೆಸ್‌‍ ಮತ್ತು ಸೈರಾಂಗ್‌-ಕೋಲ್ಕತ್ತಾ ಎಕ್‌್ಸಪ್ರೆಸ್‌‍ಗೆ ಹಸಿರು ನಿಶಾನೆ ತೋರಿದರು.
ರೈಲ್ವೆ, ರಸ್ತೆಮಾರ್ಗಗಳು, ಇಂಧನ, ಕ್ರೀಡೆ ಸೇರಿದಂತೆ ವಿವಿಧ ವಲಯಗಳನ್ನು ಪೂರೈಸುವ ಬಹು ಯೋಜನೆಗಳಿಗೆ ಅವರು ಅಡಿಪಾಯ ಹಾಕಿದರು.

ಏನಿದರ ಅನುಕೂಲ :
ಪ್ರಧಾನ ಮಂತ್ರಿಗಳ ಈಶಾನ್ಯ ಪ್ರದೇಶ ಅಭಿವೃದ್ಧಿ ಉಪಕ್ರಮ ಯೋಜನೆಯಡಿಯಲ್ಲಿ 500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 45 ಕಿ.ಮೀ. ಐಜ್ವಾಲ್‌ ಬೈಪಾಸ್‌‍ ರಸ್ತೆಯು ಐಜ್ವಾಲ್‌ ನಗರದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಲುಂಗ್ಲೈ, ಸಿಯಾಹಾ, ಲಾಂಗ್ಲೈ, ಲೆಂಗ್ಪುಯಿ ವಿಮಾನ ನಿಲ್ದಾಣ ಮತ್ತು ಸೈರಾಂಗ್‌ ರೈಲು ನಿಲ್ದಾಣ ಸೇರಿದಂತೆ ಇತರ ಸ್ಥಳಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ.

ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಥೆನ್ಜಾಲ್‌‍-ಸಿಯಾಲ್ಸುಕ್‌ ರಸ್ತೆಯು ತೋಟಗಾರಿಕೆ ರೈತರು, ಡ್ರ್ಯಾಗನ್‌ ಹಣ್ಣು ಬೆಳೆಗಾರರು, ಭತ್ತದ ಬೆಳೆಗಾರರು ಮತ್ತು ಶುಂಠಿ ಸಂಸ್ಕರಣಾಗಾರಗಳಿಗೆ ಪ್ರಯೋಜನ ನೀಡುತ್ತದೆ ಮತ್ತು ಐಜ್ವಾಲ್‌ ಥೆನ್ಜಾಲ್‌ ಲುಂಗ್ಲೈ ಹೆದ್ದಾರಿಯೊಂದಿಗೆ ಸಂಪರ್ಕವನ್ನು ಬಲಪಡಿಸುತ್ತದೆ.

ಸೆರ್ಚಿಪ್‌ ಜಿಲ್ಲೆಯ ರಸ್ತೆಗಳ ಅಡಿಯಲ್ಲಿ ಬರುವ ಖಾಂಕವ್ನ್ -ರೊಂಗುರಾ ರಸ್ತೆಯು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುತ್ತದೆ ಮತ್ತು ವಿವಿಧ ತೋಟಗಾರಿಕಾ ರೈತರು ಮತ್ತು ಪ್ರದೇಶದ ಇತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಯೋಜಿತ ಶುಂಠಿ ಸಂಸ್ಕರಣಾ ಘಟಕವನ್ನು ಪ್ರೋತ್ಸಾಹಿಸುತ್ತದೆ.

ಲಾಂಗ್ಲೈ-ಸಿಯಾಹಾ ರಸ್ತೆಯಲ್ಲಿರುವ ಚಿಮ್ಟುಯಿಪುಯಿ ಸೇತುವೆ, ಕ್ರೀಡಾ ಅಭಿವೃದ್ಧಿಗಾಗಿ ಖೇಲೋ ಇಂಡಿಯಾ ಬಹೂಪಯೋಗಿ ಒಳಾಂಗಣ ಸಭಾಂಗಣ ಮತ್ತು ಐಜ್ವಾಲ್‌‍ನ ಮುಲ್ಖಾಂಗ್‌ನಲ್ಲಿ ಎಲ್‌‍ಪಿಜಿ ಬಾಟ್ಲಿಂಗ್‌ ಸ್ಥಾವರಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಜನ ವಿಕಾಸ್‌‍ ಕಾರ್ಯಕ್ರಮ ಯೋಜನೆಯಡಿಯಲ್ಲಿ ಕವರ್ತಾದಲ್ಲಿ ವಸತಿ ಶಾಲೆ ಮತ್ತು ತ್ಲಾಂಗ್ನುವಾಮ್‌‍ನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಪ್ರಧಾನಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಇದು ರಾಷ್ಟ್ರಕ್ಕೆ, ವಿಶೇಷವಾಗಿ ಮಿಜೋರಾಂ ಜನರಿಗೆ ಐತಿಹಾಸಿಕ ದಿನವಾಗಿದೆ. ಇಂದಿನಿಂದ, ಐಜ್ವಾಲ್‌ ಅನ್ನು ಭಾರತದ ರೈಲ್ವೆ ನಕ್ಷೆಯಲ್ಲಿ ಸೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ನಾನು ಮಿಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿದ್ದೇನೆ. ದುರದೃಷ್ಟವಶಾತ್‌, ಕೆಟ್ಟ ಹವಾಮಾನದಿಂದಾಗಿ, ನಾನು ಐಜ್ವಾಲ್‌ನಲ್ಲಿ ನಿಮೊಂದಿಗೆ ಬರಲು ಸಾಧ್ಯವಾಗಲಿಲ್ಲ, ಆದರೆ ಈ ಮಾಧ್ಯಮದ ಮೂಲಕವೂ ನಾನು ನಿಮ ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದರು.

2014 ಕ್ಕಿಂತ ಮೊದಲು ದೇಶದ ಸಾಮಾನ್ಯ ಜನರು ದೈನಂದಿನ ಅಗತ್ಯ ವಸ್ತುಗಳ ಮೇಲೂ ಭಾರಿ ತೆರಿಗೆ ಪಾವತಿಸಬೇಕಾಗಿತ್ತು ಎಂದು ಹೇಳಿದರು. ಟೂತ್‌ಪೇಸ್ಟ್‌, ಸೋಪ್‌ ಮತ್ತು ಎಣ್ಣೆಯಂತಹ ಸರಕುಗಳ ಮೇಲೆ ಶೇ. 27 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇಂದು ಅವುಗಳ ಮೇಲೆ ಶೇ. 5 ರಷ್ಟು ಮಾತ್ರ ಜಿಎಸ್ಟಿ ಅನ್ವಯಿಸುತ್ತದೆ ಎಂದರು.

ಕಾಂಗ್ರೆಸ್‌‍ ಆಡಳಿತವನ್ನು ಗುರಿಯಾಗಿಸಿಕೊಂಡು ಪ್ರಧಾನಿಯವರು, ಆ ಅವಧಿಯಲ್ಲಿ ಔಷಧಿಗಳು, ಪರೀಕ್ಷಾ ಕಿಟ್‌ಗಳು ಮತ್ತು ವಿಮಾ ಪಾಲಿಸಿಗಳ ಮೇಲೂ ಭಾರಿ ತೆರಿಗೆ ವಿಧಿಸಲಾಗುತ್ತಿತ್ತು ಎಂದು ಹೇಳಿದರು. ಆರೋಗ್ಯ ಸೇವೆಗಳು ದುಬಾರಿಯಾಗಿದ್ದವು ಮತ್ತು ಸಾಮಾನ್ಯ ಕುಟುಂಬಗಳಿಗೆ ವಿಮೆ ಪಡೆಯುವುದು ಕಷ್ಟಕರವಾಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ ಮತ್ತು ಈಗ ಆರೋಗ್ಯ ಸೇವೆಗಳು ಮತ್ತು ವಿಮೆ ಸಾಮಾನ್ಯ ಜನರ ಕೈಗೆಟುಕುವ ಮಟ್ಟಕ್ಕೆ ಬಂದಿದೆ ಎಂದು ಪ್ರಶಂಸಿಸಿದರು. ಭಾರೀ ಮಳೆಯಿಂದಾಗಿ, ಪ್ರಧಾನಿ ಮೋದಿ ಅವರು ಲೆಂಗ್ಪುಯಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಐಜ್ವಾಲ್‌ನ ಲಮುವಲ್‌ ಮೈದಾನವನ್ನು ತಲುಪಲು ಸಾಧ್ಯವಾಗಲಿಲ್ಲ.

ಡ್ರಗ್‌ ಪೆಡ್ಲರ್‌ಗಳ ಜೊತೆ ಪಾರ್ಟಿ ಮಾಡಿದ 10 ಮಂದಿ ಪೊಲೀಸರ ಅಮಾನತು

ಬೆಂಗಳೂರು,ಸೆ.13- ಡ್ರಗ್‌ ಪೆಡ್ಲರ್‌ರ‍ಸ ಜೊತೆ ಸ್ನೇಹ ಬೆಳೆಸಿ ಪಾರ್ಟಿ ಮಾಡಲಾಗಿದೆ ಎಂಬ ಆರೋಪದ ಮೇಲೆ ಚಾಮರಾಜಪೇಟೆ ಠಾಣೆ ಇನ್‌್ಸಪೆಕ್ಟರ್‌ ಹಾಗೂ 10 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಚಾಮರಾಜಪೇಟೆಯ 6 ಮಂದಿ ಪೊಲೀಸರು ಹಾಗೂ ಜೆ.ಜೆ.ನಗರದ 4 ಮಂದಿ ಪೊಲೀಸರು ಸಸ್ಪೆಂಡ್‌ ಆಗಿದ್ದಾರೆ.ಚಾಮರಾಜಪೇಟೆ ಠಾಣೆ ಇನ್ಸ್ ಪೆಕ್ಟರ್‌ ಮಂಜಣ್ಣ ಅವರನ್ನು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಅಮಾನತುಗೊಳಿಸಿ ಆದೇಶಿಸಿದ್ದರೆ, ಉಳಿದ ಸಿಬ್ಬಂದಿಗಳನ್ನು ಡಿಸಿಪಿ ಗಿರೀಶ್‌ ಅವರು ಅಮಾನತುಗೊಳಿಸಿದ್ದಾರೆ.

ಹೆಡ್‌ಕಾನ್‌್ಸಸ್ಟೇಬಲ್‌ಗಳಾದ ರಮೇಶ್‌, ಶಿವರಾಜ್‌ ಕಾನ್ಸ್ ಸ್ಟೇಬಲ್‌ಗಳಾದ ಮಧುಸೂದನ್‌, ಪ್ರಸನ್ನ, ಶಂಕರ್‌, ಆನಂದ್‌ ಹಾಗೂ ಜೆ.ಜೆ. ನಗರ ಪೊಲೀಸ್‌‍ ಠಾಣೆಯ ಎಎಸ್‌‍ಐ ಕುಮಾರ್‌, ಹೆಡ್‌ ಕಾನ್ಸ್ ಸ್ಟೇಬಲ್‌ ಆನಂದ್‌, ಸಿಬ್ಬಂದಿ ಬಸವಗೌಡ ಸೇರಿ ಹತ್ತು ಮಂದಿಯನ್ನು ಅಮಾನತು ಮಾಡಲಾಗಿದೆ.

ಡ್ರಗ್‌ ಪೆಡ್ಲರ್‌ರ‍ಸಗಳ ಜೊತೆ ನೇರ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್‌ ಸೇರಿದಂತೆ ಪಶ್ಚಿಮ ವಿಭಾಗದ 10 ಮಂದಿ ಪೊಲೀಸ್‌‍ ಸಿಬ್ಬಂದಿ ಅಮಾನತುಗೊಂಡಿದ್ದು, ಇಲಾಖಾ ತನಿಖೆ ಮುಂದುವರೆದಿದೆ.

ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯಲ್ಲಿ 7.0 ತೀವ್ರತೆಯ ಭೂಕಂಪ

ನವದೆಹಲಿ,ಸೆ.13- ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯ ಬಳಿ ಶನಿವಾರ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಕಚೇರಿ ತಿಳಿಸಿದೆ.ಒಂದು ತಿಂಗಳ ಹಿಂದೆಯಷ್ಟೇ 8.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ ಜೊತೆಗೆ ಸುನಾಮಿಯೂ ಅಪ್ಪಳಿಸಿತ್ತು. ಇದೀಗ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ಸುನಾಮಿ ಆತಂಕವೂ ಉಂಟಾಗಿದೆ.

ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯ ಬಳಿ ಭೂಕಂಪ ಸಂಭವಿಸಿ 10 ಕಿಮೀ ಆಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ತಕ್ಷಣಕ್ಕೆ ಸಾವು ನೋವಿನ ವರದಿಗಳು ಕಂಡುಬಂದಿಲ್ಲ. ಸುನಾಮಿ ಆತಂಕ ಎದುರಾಗಿದ್ದು, ಅಧಿಕಾರಿಗಳು ತಕ್ಷಣದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಭೂಕಂಪವು 10 ಕಿ.ಮೀ (6.2 ಮೈಲುಗಳು) ಆಳದಲ್ಲಿ ಸಂಭವಿಸಿದೆ. ಆದರೆ, ಯುನೈಟೆಡ್‌ ಸ್ಟೇಟ್‌್ಸ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌‍ಜಿಎಸ್‌‍) ಅದರ ತೀವ್ರತೆಯನ್ನು 7.4 ಎಂದು ಅಂದಾಜಿಸಿದೆ, ಮತ್ತು 39.5 ಕಿ.ಮೀ ಆಳದಲ್ಲಿ ಕೇಂದ್ರೀಕರಿಸಿದೆ.

ಭೂಕಂಪದ ಕೇಂದ್ರಬಿಂದುವಿನಿಂದ 300 ಕಿಲೋಮೀಟರ್‌ಒಳಗಿನ ರಷ್ಯಾದ ಕರಾವಳಿಯ ಮೇಲೆ ಅಪಾಯಕಾರಿ ಅಲೆಗಳು ಪರಿಣಾಮ ಬೀರುವ ಬಗ್ಗೆ ಪೆಸಿಫಿಕ್‌ ಸುನಾಮಿ ಕೇಂದ್ರವು ಎಚ್ಚರಿಸಿದೆ. ಯುಎಸ್‌‍ಜಿಎಸ್‌‍ ಆರಂಭದಲ್ಲಿ ಭೂಕಂಪವನ್ನು 7.5 ತೀವ್ರತೆ ಎಂದು ವರದಿ ಮಾಡಿತು.

ಪೂರ್ವ ರಷ್ಯಾದಲ್ಲಿ ಭಾರಿ ಭೂಕಂಪನದ ತಿಂಗಳುಗಳ ನಂತರ ಜುಲೈನಲ್ಲಿ ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಕೆಲವೇ ತಿಂಗಳುಗಳ ನಂತರ ಈ ಭೂಕಂಪ ಸಂಭವಿಸಿದೆ. ಈ ಭೂಕಂಪವು ಪೂರ್ವ ರಷ್ಯಾದಾದ್ಯಂತ ತೀವ್ರವಾದ ಭೂಕಂಪನ ಅಲೆಗಳನ್ನು ಉಂಟುಮಾಡಿತು ಮತ್ತು ಜಪಾನ್‌, ಯುನೈಟೆಡ್‌ ಸ್ಟೇಟ್‌್ಸ ಮತ್ತು ಹಲವಾರು ಪೆಸಿಫಿಕ್‌ ದ್ವೀಪ ರಾಷ್ಟ್ರಗಳು ಸೇರಿದಂತೆ ಹಲವಾರು ದೇಶಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಿತು.

14 ವರ್ಷಗಳಲ್ಲಿ ಅತ್ಯಂತ ಪ್ರಬಲ ಭೂಕಂಪ :
ಯುಎಸ್‌‍ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌‍ಜಿಎಸ್‌‍) ಪ್ರಕಾರ, ಜುಲೈ ತಿಂಗಳ ಭೂಕಂಪವು ಕಳೆದ 14 ವರ್ಷಗಳಲ್ಲಿ ಜಾಗತಿಕವಾಗಿ ದಾಖಲಾದ ಅತ್ಯಂತ ಪ್ರಬಲ ಭೂಕಂಪವಾಗಿದೆ ಮತ್ತು ದಾಖಲಿತ ಇತಿಹಾಸದಲ್ಲಿ ಆರನೇ ಅತ್ಯಂತ ಶಕ್ತಿಶಾಲಿಯಾಗಿದೆ. 2011 ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ 9.1 ತೀವ್ರತೆಯ ಭೂಕಂಪದ ನಂತರ ಇದು ಅತ್ಯಂತ ತೀವ್ರವಾಗಿತ್ತು. ಇದು ಭಾರಿ ಸುನಾಮಿ ಮತ್ತು ವ್ಯಾಪಕ ವಿನಾಶಕ್ಕೆ ಕಾರಣವಾಯಿತು.

ಭೂಕಂಪನ ಚಟುವಟಿಕೆಗೆ ಒಳಗಾಗುವ ಪ್ರದೇಶ
ರಷ್ಯಾದ ದೂರದ ಪೂರ್ವದಲ್ಲಿರುವ ಕಮ್ಚಟ್ಕಾ ಪರ್ಯಾಯ ದ್ವೀಪವು ಹೆಚ್ಚು ಸಕ್ರಿಯ ಭೂಕಂಪನ ವಲಯದಲ್ಲಿದೆ. ಈ ಪ್ರದೇಶವು ಪ್ರಬಲ ಭೂಕಂಪಗಳ ದೀರ್ಘ ಇತಿಹಾಸವನ್ನು ಹೊಂದಿದೆ,.ವಿಶೇಷವಾಗಿ ಸೋವಿಯತ್‌ ಯುಗದಲ್ಲಿ 1952 ರಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿತು. ಇದು ದಾಖಲೆಯ ಅತ್ಯಂತ ಮಹತ್ವದ ಭೂಕಂಪಗಳಲ್ಲಿ ಒಂದಾಗಿದೆ. ಜುಲೈ ಭೂಕಂಪದ ನಂತರ ಯುಎಸ್‌‍ ಅಧಿಕಾರಿಗಳು ಹವಾಯಿ, ಅಲಾಸ್ಕಾ, ಕ್ಯಾಲಿಫೋರ್ನಿಯಾ ಮತ್ತು ಪಶ್ಚಿಮ ಕರಾವಳಿಯ ಇತರ ಭಾಗಗಳು ಸೇರಿದಂತೆ ರಾಜ್ಯಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಿದರು.

ಹವಾಯಿ ಮತ್ತು ಅಲಾಸ್ಕಾವನ್ನು ನೇರ ಸುನಾಮಿ ಬೆದರಿಕೆಗೆ ಒಳಪಡಿಸಲಾಯಿತು, ತುರ್ತು ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಲಾಯಿತು ಮತ್ತು ತಗ್ಗು ಪ್ರದೇಶದ ಕರಾವಳಿ ಪ್ರದೇಶಗಳಲ್ಲಿರುವ ನಿವಾಸಿಗಳು ಸಂಭವನೀಯ ಪರಿಣಾಮಗಳಿಗೆ ಸಿದ್ಧರಾಗುವಂತೆ ಒತ್ತಾಯಿಸಲಾಯಿತು. ಪೆಸಿಫಿಕ್‌ ರಿಮ್ನಾದ್ಯಂತ ತುರ್ತು ನಿರ್ವಹಣಾ ಸಂಸ್ಥೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದವು, ದುರ್ಬಲ ವಲಯಗಳ ನಿವಾಸಿಗಳಿಗೆ ಎಚ್ಚರಿಕೆಗಳು ಮತ್ತು ಸಲಹೆಗಳನ್ನು ನೀಡಿದವು.

ಕುಸಿದ ಹೂವಿನ ಬೆಲೆ, ಸಂಕಷ್ಟದಲ್ಲಿ ಬೆಳೆಗಾರರು

ಬೆಂಗಳೂರು, ಸೆ.13- ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಗಗನಕ್ಕೇರಿದ ಹೂವಿನ ಬೆಲೆ ಪಿತೃಪಕ್ಷದಲ್ಲಿ ಪಾತಾಳ ತಲುಪಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 15 ದಿನಗಳ ಹಿಂದೆ ಒಂದು ಮಾರು ಸೇವಂತಿಗೆ 150ರೂ.ಗೆ ಮಾರಾಟವಾಗುತ್ತಿತ್ತು. ಈಗ ಮಾರುಕಟ್ಟೆಯಲ್ಲಿ 40ರೂ.ಗೆ ಒಂದು ಮಾರು ಸಿಗುತ್ತಿದೆ. ಜತೆಗೆ ಕೆಜಿ 40ರೂ.ಗೆ ಕುಸಿದಿದೆ. ಇದರಿಂದ ಹೂ ಬೆಳೆಗಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಪಿತೃಪಕ್ಷದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಹೆಚ್ಚಾಗಿ ಹೂ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಮನಗರ ಭಾಗಗಳಲ್ಲಿನ ರೈತರು ಪಿತೃಪಕ್ಷದಲ್ಲಿ ಹೂವಿನ ಬೆಲೆ ಇರುವುದಿಲ್ಲ ಎಂದು ಬೆಳೆ ಬೆಳೆಯಲು ಹಿಂದೇಟು ಹಾಕಿದ್ದು, ದಸರಾಗೆ ಹೂ ಬರುವಂತೆ ನಾಟಿ ಮಾಡಿದ್ದಾರೆ.

ದಸರಾಗೆ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಕ್ಷ ಹಾಗೂ ಪೂಜೆಗೆ ಮಾತ್ರ ಹೂ ಬಳಸಲಾಗುತ್ತದೆ. ಯಾವುದೇ ಮದುವೆ, ಮುಂಜಿ, ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ ಹೂವಿಗೆ ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿದೆ.

ರೈತರು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದ ಹೂವು ಕೊಳ್ಳುವವರಿಲ್ಲದೆ ಕೇಳಿದ್ದಷ್ಟಕ್ಕೆ ಕೊಟ್ಟು ಹೋಗುತ್ತಿದ್ದಾರೆ. ಇದರಿಂದ ಸಾಗಾಣಿಕೆ ಹಾಗೂ ಹೂ ಕೊಯ್ಲಿನ ವೆಚ್ಚವೂ ಕೂಡ ಬರುತ್ತಿಲ್ಲ. ಇನ್ನೂ ಕೆಲವು ರೈತರು ಹೂವನ್ನು ಕಟಾವು ಮಾಡದೆ ಜಮೀನಿನಲ್ಲಿ ಹಾಗೇ ಬಿಟ್ಟಿದ್ದಾರೆ.

ಏನೇ ಬೆಲೆ ಕುಸಿತವಾಗಲಿ, ಏರಲಿ ರೈತರಿಗೆ ಅನುಕೂಲವಾಗುವುದಿಲ್ಲ. ಏನಿದ್ದರೂ ವ್ಯಾಪಾರಿಗಳಿಗೆ, ದಲ್ಲಾಳಿಗಳಿಗೆ, ಮಂಡಿಯವರಿಗೆ ಅನುಕೂಲವಾಗುತ್ತದೆ ಎಂದು ರೈತರೊಬ್ಬರು ತಿಳಿಸಿದ್ದಾರೆ.ಸೇವಂತಿಗೆ ಕೆಜಿಗೆ 40ರೂ., ಮಾರಿಗೋಲ್‌್ಡ 60ರೂ., ಸುನಾಮಿ ರೋಜ್‌ 50ರೂ., ಕಾಕಡ ಹೂ 250ರೂ., ಸುಗಂಧ ರಾಜ 250ರೂ.ಗೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.