Thursday, November 6, 2025
Home Blog Page 19

ಚಂಡಮಾರುತದ ಪರಿಣಾಮದಿಂದ ಹಿಂಗಾರು ಮಳೆ ದುರ್ಬಲ, ರೈತರಿಗೆ ನಿರಾಸೆ

ಬೆಂಗಳೂರು, ಅ.29-ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಮೊಂತಾ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆ ದುರ್ಬಲಗೊಂಡಿದೆ. ಚಂಡಮಾರುತದ ನೇರ ಪರಿಣಾಮ ರಾಜ್ಯದ ಮೇಲಾಗದಿದ್ದರೂ ವ್ಯಾಪಕ ಮಳೆ ನಿರೀಕ್ಷಿಸಲಾಗಿತ್ತು. ಕೆಲವೆಡೆ ಭಾರಿ ಮಳೆ ಮುನ್ಸೂಚನೆ ನೀಡಲಾಗಿತ್ತು.

ಆದರೆ, ನಿನ್ನೆ ಬೀದರ್‌ ಜಿಲ್ಲೆಯಲ್ಲಿ ಮಾತ್ರ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ಕರಾವಳಿ, ಮಲೆನಾಡು ಸೇರಿದಂತೆ ಕೆಲವೆಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಅಲ್ಲದೆ, ತಂಪಾದ ವಾತಾವರಣ ಸೃಷ್ಟಿಯಾಗಿ ಚಳಿ ಹೆಚ್ಚಾಗಿತ್ತು. ಜೊತೆಗೆ ಆಗಾಗ್ಗೆ ಮೇಲೈ ಗಾಳಿ ಬೀಸುವುದರಿಂದ ಚಳಿಯ ತೀವ್ರತೆ ಹೆಚ್ಚಾಗಿತ್ತು.

ಚಂಡಮಾರುತವು ವಾತಾವರಣದಲ್ಲಿನ ತೇವಾಂಶವನ್ನು ಸೆಳೆದಿರುವುದರಿಂದ ಹಿಂಗಾರು ಮಳೆ ದುರ್ಬಲವಾಗಿದೆ. ಇಂದಿನಿಂದ ಮಳೆಯ ಪ್ರಮಾಣ ರಾಜ್ಯದಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.ವಾಡಿಕೆಗಿಂತ ತಡವಾಗಿ ಆರಂಭಗೊಂಡಿರುವ ಮುಂಗಾರು ಪ್ರಾರಂಭದಲ್ಲೇ ದುರ್ಬಲವಾಗಿದೆ. ಆದರೂ ನವೆಂಬರ್‌ ಅಂತ್ಯದವರೆಗೆ ಮುಂದುವರೆಯುವ ಲಕ್ಷಣಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ನಿನ್ನೆ ಬೀದರ್‌ ಜಿಲ್ಲೆಯಲ್ಲಿ ವ್ಯಾಪಕ ಹಾಗೂ ಉತ್ತಮ ಮಳೆಯಾಗಿದೆ. ಕಲಬುರಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. 15 ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗಿದ್ದರೆ, 11 ಜಿಲ್ಲೆಗಳಲ್ಲಿ ಅತ್ಯಲ್ಪ ಪ್ರಮಾಣದ ಮಳೆಯಾಗಿದೆ. ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 93 ಮಿ.ಮೀ.ನಷ್ಟು ಅತ್ಯಧಿಕ ಪ್ರಮಾಣದ ಮಳೆ ಬಿದ್ದಿದೆ.

ಅಕ್ಟೋಬರ್‌ ಒಂದರಿಂದ ಇದುವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.7ರಷ್ಟು ಹೆಚ್ಚು ಮಳೆಯಾಗಿದೆ. ಅಂದರೆ, 123 ಮಿ.ಮೀ. ವಾಡಿಕೆ ಪ್ರಮಾಣದ ಮಳೆಗೆ 132 ಮಿ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.27ರಷ್ಟು, ಮಲೆನಾಡಿನಲ್ಲಿ ಶೇ.50ರಷ್ಟು ಹಾಗೂ ಕರಾವಳಿಯಲ್ಲಿ ಶೇ.32ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ. ಉತ್ತರ ಒಳನಾಡಿನಲ್ಲಿ ಶೇ. 36 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಿಂಗಾರು ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತದೆ. ಮಳೆ ಕೊರತೆ ರೈತರಲ್ಲಿ ನಿರಾಸೆ ಉಂಟು ಮಾಡಿದೆ.

ಜನರ ಗಮನ ಬೇರೆಡೆ ಸಳೆಯಲು ಆರ್‌ಎಸ್‌‍ಎಸ್‌‍ ವಿವಾದದ ಅಸ್ತ್ರ ಬಳಸುತ್ತಿದೆಯಾ ಕಾಂಗ್ರೆಸ್ ಸರ್ಕಾರ..?

ಬೆಂಗಳೂರು, ಅ.29- ನಾನಾ ರೀತಿಯ ಶುಲ್ಕ, ತೆರಿಗೆ ಹಾಗೂ ದರ ಏರಿಕೆಯಿಂದಾಗಿ ಜನಾಕ್ರೋಶಕ್ಕೆ ತುತ್ತಾಗಿರುವ ಕಾಂಗ್ರೆಸ್‌‍ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌‍ಎಸ್‌‍ ಸಂಬಂಧಿತ ವಿವಾದಗಳನ್ನು ಹುಟ್ಟುಹಾಕಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಶುಲ್ಕ ಹಾಗೂ ದರ ಏರಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಕೆಯ ಪೈಪೋಟಿಯ ಮಾದರಿಯಲ್ಲೇ ಪ್ರಬಲ ಸ್ಪರ್ಧೆ ಕಂಡು ಬಂದಿದೆ. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ನೆಪದಲ್ಲಿ ಸಾರಿಗೆ ಬಸ್‌‍ ಪ್ರಯಾಣ ದರ, ನೀರಿನ ದರ, ವಿದ್ಯುತ್‌ ದರ, ಮದ್ಯದ ಬೆಲೆ, ಆಸ್ತಿ ನೋಂದಣಿ ಮತ್ತು ದಸ್ತಾವೇಜುಗಳ ಶುಲ್ಕಗಳನ್ನು ಎರ್ರಾಬಿರ್ರಿ ಏರಿಕೆ ಮಾಡಿದೆ.

ಕಂದಾಯ, ಸಾರಿಗೆ, ಅಬಕಾರಿ, ಇಂಧನ ಇಲಾಖೆಗಳ ಈ ಜನವಿರೋಧಿ ದರ ಹೆಚ್ಚಳದಿಂದ ಸಾರ್ವಜನಿಕರು ಹೈರಾಣಾಗಿದ್ದರು. ಇದಕ್ಕೆ ಪೈಪೋಟಿ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ ವ್ಯಾಪ್ತಿಯ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವು ರೀತಿಯ ಶುಲ್ಕಗಳನ್ನು ಹೆಚ್ಚಿಸಿ ಚಿತ್ರವಿಚಿತ್ರವಾದ ನಿಯಮಗಳನ್ನು ರೂಪಿಸಿ ಜನರಿಗೆ ಈ ಸರ್ಕಾರದ ಸಹವಾಸವೇ ಸಾಕು ಎಂಬುವಷ್ಟು ರೇಜಿಗಿಡಿಸಿದ್ದಾರೆ.

ಸುಪ್ರೀಂಕೋರ್ಟಿನ ತೀರ್ಪನ್ನು ನೆಪ ಮಾಡಿಕೊಂಡು ಸಿಸಿ, ಓಸಿ ಪ್ರಮಾಣ ಪತ್ರಗಳಿಲ್ಲದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ ಎಂದು ಪಟ್ಟು ಹಿಡಿಯಲಾಗಿತ್ತು. ಜನ ಛೀಮಾರಿ ಹಾಕುವುದು ಹೆಚ್ಚಾದಾಗ ತಡವಾಗಿ ಸಭೆಗಳನ್ನು ನಡೆಸಿ 30×40 ಅಡಿಗಿಂತಲೂ ಕಡಿಮೆ ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಸಿಸಿ, ಓಸಿಯ ವಿನಾಯಿತಿ ನೀಡುವ ನಿರ್ಣಯ ಕೈಗೊಳ್ಳಲಾಗಿದೆ.

ಆದರೆ ವಿಳಂಬವಾದ ಈ ಗ್ಯಾಪ್‌ನಲ್ಲಿ ಅಧಿಕಾರಿಗಳು ಮನೆ ಮಾಲೀಕರಿಂದ ಸಾಕಷ್ಟು ಹಣವನ್ನು ಸುಲಿಗೆ ಮಾಡಿದ್ದಾರೆ. ಇದು ಸರ್ಕಾರದ ಸುಲಿಗೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.

ಡಿ.ಕೆ.ಶಿವಕುಮಾರ್‌ ಅವರು ಪತ್ರಿಕಾಗೋಷ್ಠಿ ನಡೆಸಿದಾಗಲೆಲ್ಲಾ ಯಾರಿಗೂ ಒಂದು ಪೈಸೆ ಲಂಚ ಕೊಡಬೇಡಿ ಎಂದು ಜನರಿಗೆ ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ, ಆದರೆ ಅಧಿಕಾರಿಗಳು ಪೈಸೆ ಲೆಕ್ಕದಲ್ಲಿ ಲಂಚ ಕೇಳುತ್ತಿಲ್ಲ, ಲಕ್ಷಗಳ ಪ್ರಮಾಣದಲ್ಲಿ ಹಣ ಪೀಕುತ್ತಿದ್ದಾರೆ. ಇದು ಪಂಚಖಾತ್ರಿಗಳ ಲಾಭಕ್ಕಿಂತಲೂ ದೊಡ್ಡದಾದ ಜನಾಕ್ರೋಶವನ್ನು ಸೃಷ್ಟಿಸಿದೆ.

ಜೊತೆಗೆ ಮತ್ತೊಂದು ಎಡವಟ್ಟು ಎಂಬಂತೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಯ ಹೆಸರಿನಲ್ಲಿ ಆಸ್ತಿಯ ಮೌಲ್ಯದ ಶೇ. 5ರಷ್ಟು ಶುಲ್ಕ ವಸೂಲಿ ಮಾಡುತ್ತಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ದಾಖಲಾತಿಗಳನ್ನು ಕ್ರಮಬದ್ಧಗೊಳಿಸಿಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ. ಆದರೆ ಇದು ಅಕ್ರಮ ಸಕ್ರಮವಲ್ಲ ಎಂಬ ಸ್ಪಷ್ಟನೆಯನ್ನು ನೀಡಲಾಗುತ್ತಿದೆ. ಎ ಖಾತಾವಾದರೂ ಅದು ಸಕ್ರಮವೆಂದು ಪರಿಗಣಿಸುವುದಿಲ್ಲ ಎಂದಾದರೆ ಶೇ.5 ರಷ್ಟು ಹಣ ಕಟ್ಟಿಸಿಕೊಳ್ಳುವುದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.

ಸರ್ಕಾರ ಆಯ್ದ ಜನರಿಗೆ ಪಂಚಖಾತ್ರಿಗಳನ್ನು ಕೊಟ್ಟು ಅದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರಿಂದಲೂ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿದೆ ಎಂಬ ಟೀಕೆಗಳಿವೆ. ಗುತ್ತಿಗೆದಾರರ ಸಂಘದವರು ಕೂಡ ಆರೋಪಗಳನ್ನು ಮಾಡಿ, ಕಾಂಗ್ರೆಸ್‌‍ ಸರ್ಕಾರದಲ್ಲೂ ಕಮಿಷನ್‌ ದಂಧೆ ನಡೆಯುತ್ತಿದೆ ಎಂದಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರಕ್ಕೆ ಗ್ರೇಟರ್‌ ಬೆಂಗಳೂರು ಪಾಲಿಕೆಗಳ ಚುನಾವಣೆ, ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ಚುನಾವಣೆಗಳು ಪ್ರತಿಷ್ಠೆಯ ಪ್ರಶ್ನೆಯಾಗಿವೆ. ಆದರೆ ದರಗಳ ಏರಿಕೆ, ಹಲವಾರು ಗೊಂದಲಕಾರಿ ನೀತಿಗಳು ಕಾಂಗ್ರೆಸ್‌‍ ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕುವಂತಹ ವಾತಾವರಣ ನಿರ್ಮಿಸಿದೆ.

ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಎಲ್ಲಾ ಜನವಿರೋಧಿ ನಿಲುವುಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌‍ಎಸ್‌‍ ವಿವಾದದ ಅಸ್ತ್ರವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಟೀಕೆಗಳಿವೆ.

ಸದ್ಯಕ್ಕೆ ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಸಚಿವರಾದ ಪ್ರಿಯಾಂಕ ಖರ್ಗೆ ಪತ್ರ ಬರೆದು, ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ನಿಷೇಧಿಸುವಂತೆ ಶಿಫಾರಸು ಮಾಡುವ ಅಗತ್ಯವೇನಿತ್ತು ಅದರ ಬೆನ್ನಲ್ಲೇ ಈ ಹಿಂದೆ ಜಗದೀಶ್‌ಶೆಟ್ಟರ್‌ ಅವರ ಸರ್ಕಾರದ ಸುತ್ತೋಲೆಯೊಂದನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್‌‍ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಈ ಎಲ್ಲಾ ಪ್ರಯತ್ನಗಳು ವ್ಯವಸ್ಥಿತ ಎಂಬಂತೆ ಕಂಡು ಬರುತ್ತಿವೆ.

ಪ್ರಿಯಾಂಕ್‌ ಖರ್ಗೆ ಅವರ ಪತ್ರ ಆಧರಿಸಿ, ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಣಯ ಕೈಗೊಂಡು ಆರ್‌ಎಸ್‌‍ಎಸ್‌‍ ಮಾತ್ರವಲ್ಲದೇ ಎಲ್ಲಾ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳನ್ನು ಸರ್ಕಾರಿ ಸ್ವತ್ತುಗಳಲ್ಲಿ ನಿರ್ಬಂಧಿಸುವ ಪ್ರಯತ್ನ ಮಾಡಿತ್ತು. ಕಲಬುರಗಿ ಹೈಕೋರ್ಟ್‌ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿರುವುದರಿಂದ ಮುಜುಗರ ಅನುಭವಿಸುವಂತಾಗಿದೆ. ಆದರೆ ಈ ಆದೇಶ ಕಾಂಗ್ರೆಸ್‌‍ ಪಾಲಿಗೆ ವರದಾನ ಎಂದು ಹೇಳಲಾಗುತ್ತದೆ. ಯಾವುದೇ ಚಟುವಟಿಕೆಗಳಾದರೂ ಪೂರ್ವಾನುಮತಿ ಅಗತ್ಯ ಎಂದು ಸರ್ಕಾರದ ಆದೇಶದಲ್ಲಿ ನಮೂದಿಸಲಾಗಿದೆ.

ಹೈಕೋರ್ಟ್‌ ತಡೆಯಾಜ್ಞೆ ಇದ್ದರೂ ಕೂಡ ಈಗಾಗಲೇ ಜಾರಿಯಲ್ಲಿರುವ ಕಾನೂನುಗಳ ಅಡಿಯೇ ಒಲ್ಲದ ಸಂಘಟನೆಗಳ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಸರ್ಕಾರ ಪೊಲೀಸರ ಮೂಲಕ ನಡೆಸಬಹುದು. ಅನ್ಯ ಧರ್ಮೀಯರು ಸರ್ಕಾರಿ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದಕ್ಕೂ ಹೊಸ ನಿಯಮದ ಪ್ರಕಾರ ಅವಕಾಶ ನೀಡುವಂತಿಲ್ಲ ಎಂಬ ಚರ್ಚೆಗಳು ಹುಟ್ಟಿಕೊಂಡಿದ್ದವು.

ಹೈಕೋರ್ಟ್‌ ತೀರ್ಪಿನ ನೆಪ ಮಾಡಿಕೊಂಡು ಈಗ ತಮಗೆ ಬೇಕಾದವರಿಗೆ ಅವಕಾಶ ನೀಡುವ, ಒಲ್ಲದವರನ್ನು ನಿಗ್ರಹಿಸುವ ಪ್ರಯತ್ನ ಮಾಡಬಹುದು ಎಂಬ ಚರ್ಚೆಗಳಿವೆ.
ಈ ಹಿಂದೆ ಬಿಜೆಪಿ ಅಭಿವೃದ್ಧಿ ವಿಚಾರಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸುತ್ತಿತ್ತು. ಈಗ ಕಾಂಗ್ರೆಸ್‌‍ ಪಕ್ಷವೂ ಅದೇ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳಿವೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಂಚಖಾತ್ರಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲು ಹೋದರೆ, ದರ ಏರಿಕೆ ಹಾಗೂ ಹಲವಾರು ಜನವಿರೋಧಿ ನೀತಿಗಳು ಪಕ್ಷವನ್ನು ಮುಜುಗರಕ್ಕೀಡು ಮಾಡಬಹುದು ಎಂಬ ಕಾರಣಕ್ಕೆ ಆರ್‌ಎಸ್‌‍ಎಸ್‌‍ ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಅನುಮಾನಗಳಿವೆ.

ಆಡಿಯೋ-ವಿಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಶಾಸಕರ ಆಪ್ತರಿಗೆ ಧರ್ಮದೇಟು

ಚಿಕ್ಕಮಗಳೂರು, ಅ.29- ಮಹಿಳೆಯರು ಹಾಗೂ ಮುಖಂಡರ ಆಡಿಯೋ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಶಾಸಕರ ಆಪ್ತನಿಗೆ ಅದೇ ಪಕ್ಷದ ಮುಖಂಡರೇ ಮನೆಗೆ ನುಗ್ಗಿ ಧರ್ಮದೇಟು ನೀಡಿರುವ ವಿಡಿಯೋ ವೈರಲ್‌ ಆಗಿದೆ.ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬ್ಲಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.

ಚಿಕ್ಕಮಗಳೂರಿನ ಆದಿಶಕ್ತಿ ನಗರದ ನಿವಾಸಿ ಆದಿತ್ಯ ಧರ್ಮದೇಟು ತಿಂದು ಪೊಲೀಸರ ಅತಿಥಿಯಾಗಿದ್ದಾನೆ. ಈತ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಮೋಟಮ ಅವರ ಭಂಟ ಎಂದು ಹೇಳಲಾಗಿದೆ.ಕಾಂಗ್ರೆಸ್‌‍ ಪಕ್ಷದ ಮುಖಂಡರು ಮಹಿಳೆಯರ ಆಡಿಯೋ ಹಾಗೂ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ, ಹಣಕ್ಕಾಗಿ ಪೀಡಿಸುತ್ತಿದ್ದ ಮತ್ತು ಹೆದರಿಸಿ ನಾನು ಹೇಳಿದಂತೆ ಕೇಳಬೇಕೆಂದು ಧಮಕಿ ಹಾಕುತ್ತಿದ್ದ.

ಆದಿತ್ಯನ ಸ್ನೇಹಿತನಾದ ರಾಹಿಲ್‌ ಷರೀಫ್‌ ತನ್ನ ಬೆಂಬಲಿಗರೊಂದಿಗೆ ಮನೆಗೆ ನುಗ್ಗಿದ್ದಾನೆ. ಆದಿತ್ಯನ ಜೊತೆ ವಾಗ್ವಾದ ನಡೆಸಿ, ಹಲ್ಲೆ ನಡೆಸಲು ಮುಂದಾದಾಗ ಆತನ ಪತ್ನಿ ಅಡ್ಡ ಬಂದಿದ್ದಾರೆ. ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡು ಗಂಡನನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ವಾಗ್ವಾದದೊಂದಿಗೆ ರಾಹಿಲ್‌ ಷರೀಫ್‌ನ ಬೆಂಬಲಿಗರು ಆದಿತ್ಯನ ಮೇಲೆ ಹಲ್ಲೆ ನಡೆಸಿದ್ದು, ರಕ್ತಸ್ರಾವವಾಗಿದೆ. ಕೊನೆಗೆ ಆದಿತ್ಯನ ಪತ್ನಿ ಅಡ್ಡ ನಿಂತು ಪತಿಯನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಕಾಪಾಡುವ ಪ್ರಯತ್ನಮಾಡಿದ್ದಾರೆ.

ಈ ಸಂದರ್ಭದಲ್ಲಿ ಆದಿತ್ಯ ರಾಹಿಲ್‌ ಷರೀಫ್‌ನ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಸಿಟ್ಟುಗೊಂಡ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆಯಿಂದ ಮುಜುಗರಕ್ಕೊಳಗಾದ ಶಾಸಕಿ ನಯನ ಮೋಟಮ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.

ಆರೋಪಿ ಆದಿತ್ಯ ತಲೆ ಮರೆಸಿಕೊಂಡಿದ್ದು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಕಾರ್ಯಾಚರಣೆ ನಡೆಸುವ ಮೂಲಕ ತುಮಕೂರು ಲಾಡ್‌್ಜನಲ್ಲಿ ತಂಗಿದ್ದ ಆತನನ್ನು ಬಂಧಿಸಿದ್ದಾರೆ.

ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗ್ತಾರೆ : ಡಿ.ಕೆ.ಸುರೇಶ್‌

ಬೆಂಗಳೂರು, ಅ.29– ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ. ಆದರೆ ಹಣೆಯಲ್ಲಿ ಬರೆದಿದ್ದರೆ ಸಾಧ್ಯವಾಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ ಅಣ್ಣನನ್ನು ಮುಖ್ಯಮಂತ್ರಿಯಾಗಿಸಬೇಕೆಂಬ ಆಸೆ ನನಗಿದೆ. ಆದರೆ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಶಿಸ್ತಿಗೆ ಚ್ಯುತಿಬರದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ನವೆಂಬರ್‌ನಲ್ಲಿ ಕನ್ನಡದ ಹಬ್ಬ ರಾಜ್ಯೋತ್ಸವ ನಡೆಯಲಿದೆ. ಅದು ಮಾತ್ರ ನನಗೆ ಗೊತ್ತು. ಉಳಿದಂತೆ ಯಾವ ಕ್ರಾಂತಿಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಥವಾ ಪ್ರಯತ್ನ ಪಡುವ ಅಗತ್ಯವಿಲ್ಲ. ಹಣೆಯಲ್ಲಿ ಬರದಿದ್ದರೆ ಅವಕಾಶ ಸಿಗುತ್ತದೆ. ದಲಿತ ಮುಖ್ಯಮಂತ್ರಿಯ ಬಗ್ಗೆ ಬೇಡಿಕೆಗಳು ಕೇಳಿ ಬರುತ್ತಿರುವುದರಲ್ಲಿ ತಪ್ಪಿಲ್ಲ. ದಲಿತರು ಸಮಾವೇಶ ಮಾಡುವುದು ಕೂಡ ತಪ್ಪಲ್ಲ, ಈ ಎಲ್ಲಾ ಬೆಳವಣಿಗೆಗಳು ಪಕ್ಷ ಸಂಘಟನೆಗೆ ಪೂರಕವಾಗಿವೆ.

100 ಕಾಂಗ್ರೆಸ್‌‍ ಭವನಗಳ ನಿರ್ಮಿಸುವ ಬಗ್ಗೆ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ದಿನನಿತ್ಯವೂ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಾಯಕರಿಗೆ ಇರಬೇಕಾದ ಎಲ್ಲಾ ಅವಕಾಶಗಳು ಅವರಿಗಿದೆ. ಅವರದೇ ನಾಯಕತ್ವದಡಿ ಮುಂದಿನ ವಿಧಾನಸಭೆ ಚುನಾವಣೆಯನ್ನು ನಡೆಸುವುದರಲ್ಲಿ ತಪ್ಪಿಲ್ಲ ಎಂದರು.

95-98 ವಯಸ್ಸು ಆಗಿರುವವರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದು ತಪ್ಪಲ್ಲ ಎಂದರು.ಮಾಜಿ ಸಚಿವ ಕೆ.ಎನ್‌. ರಾಜಣ್ಣ ಹಿರಿಯರಾಗಿದ್ದು, ತಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಾಗಾಗ್ಗೆ ವ್ಯಕ್ತಪಡಿಸುತ್ತಾರೆ. ಹೈಕಮಾಂಡ್‌ ಕೂಡ ಅವರ ಮುಕ್ತ ಅಭಿಪ್ರಾಯಗಳನ್ನು ಗಮನಿಸುತ್ತದೆ ಎಂದರು.

ರಾಜ್ಯದಲ್ಲಿ 5 ವರ್ಷ ಸರ್ಕಾರ ನಡೆಸಲು ಕಾಂಗ್ರೆಸ್‌‍ ಪಕ್ಷಕ್ಕೆ, ಜನ 135 ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗಿರುವಾಗ ಎರಡೂವರೆ ವರ್ಷ, ಮೂರು ವರ್ಷ ಎಂಬ ಅಧಿಕಾರ ಹಂಚಿಕೆಯ ಚರ್ಚೆಗಳು ಅಪ್ರಸ್ತುತ ಎಂದರು.

ಇಂತಹ ಚರ್ಚೆಗಳು ಆಡಳಿತದ ಮೇಲೆ ಪರಿಣಾಮ ಬೀರುವ ಬಗ್ಗೆ ಮಾಹಿತಿಯಿಲ್ಲ. ನಾನು ಸಂಸದನಾಗಿದ್ದೆ. ಸಚಿವನಾಗಿ ಆಡಳಿತ ಮಾಡಿದ ಅನುಭವ ಇಲ್ಲ ಎಂದರು. ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ಮುಖಂಡರ ಅಭಿಪ್ರಾಯಗಳನ್ನು ಹೈಕಮಾಂಡ್‌ ಗಮನಿಸಲಿದೆ. ಆರ್‌ಎಸ್‌‍ಎಸ್‌‍ ಪಥ ಸಂಚಲನಕ್ಕೆ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಅದೇ ರೀತಿಯ ಪಥ ಸಂಚಲನವನ್ನು ಬೇರೆ ಸಮುದಾಯಗಳು ನಡೆಸಿದರೇ? ಎಂಬ ಪ್ರಶ್ನೆ ಇದೆ ಎಂದರು.

ಜೈಲಲ್ಲಿರುವ ನಟ ದರ್ಶನ್‌ಗೆ ತಿಂಗಳಿಗೊಮ್ಮೆ ಮಾತ್ರ ಬಟ್ಟೆ, ಹೊದಿಕೆ ನೀಡುವಂತೆ ನ್ಯಾಯಾಲಯ ಆದೇಶ

ಬೆಂಗಳೂರು,ಅ.29- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ಗೆ ಪ್ರತಿ ತಿಂಗಳಿಗೊಮ್ಮೆ ಮಾತ್ರ ಬಟ್ಟೆ, ಹೊದಿಕೆ ನೀಡಬೇಕು ಎಂದು 57ನೇ ಸಿಸಿಹೆಚ್‌ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ದರ್ಶನ್‌ ಬೆಡ್‌ಶಿಟ್‌, ಬಟ್ಟೆ, ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ನ್ಯಾಯಾಲಯ ಬಟ್ಟೆ-ಹೊದಿಕೆಯನ್ನು ನೀಡುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ವಾದ-ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಾಲಯವು , ಪ್ರಕರಣದ ಮೊದಲನೇ ಆರೋಪಿ ಪವಿತ್ರಗೌಡ ಹಾಗೂ ಎರಡನೇ ಆರೋಪಿಯಾಗಿರುವ ದರ್ಶನ್‌ ಗೆ ತಿಂಗಳಿಗೊಮೆ ಮಾತ್ರ ಬಟ್ಟೆ , ಹೊದಿಕೆ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದು, ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಬೇಕು ಎಂಬ ಕೋರಿಕೆಯ ನಿರ್ಣಯವನ್ನು ಜೈಲಾಧಿಕಾರಿಗಳೇ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ.

ನನ್ನನ್ನು ಕ್ವಾರಂಟೈನ್‌ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌‍ ಕಾಣಿಸಿಕೊಂಡಿದೆ. ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಹೀಗಾಗಿ ತಲೆ ದಿಂಬು, ಬೆಡ್‌ ಶೀಟ್‌, ಹಾಸಿಗೆ ನೀಡುವಂತೆ ದರ್ಶನ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಹಿಂದೆ ದರ್ಶನ್‌ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದು ಮಾಡಿದ್ದ ಸುಪ್ರೀಂಕೋರ್ಟ್‌, ದರ್ಶನ್‌ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡದಂತೆ ಸೂಚಿಸಿತ್ತು. ಅದರಂತೆ ಜೈಲಾಧಿಕಾರಿಗಳು ದರ್ಶನ್‌ಗೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ. ಹಾಗಾಗಿ ದರ್ಶನ್‌ ನ್ಯಾಯಾಲಯದ ಮೊರೆ ಹೋಗಿದ್ದರು.

ಆರೋಪಿಗಳಾದ ಪವಿತ್ರಾಗೌಡ, ದರ್ಶನ್‌ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್‌ ಹಾಕಲಾಗಿದ್ದ ಅರ್ಜಿಯ ಬಗ್ಗೆ, ಸಾಕ್ಷ್ಯ ವಿಚಾರಣೆಗೆ 2 ಕಡೆಯವರು ಸಹಕರಿಸಲು ಕೋರ್ಟ್‌ ಸೂಚನೆ ನೀಡಿದೆ. ಇದರ ಜೊತೆಗೆ ತಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್‌ ಅರ್ಜಿ ಹಾಕಿದ್ದ, ಆದರೆ ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿ ಬಂಧಿತರಾಗಿದ್ದ ದರ್ಶನ್‌ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆದಿದ್ದರು. ದರ್ಶನ್‌‍, ಇತರೆ ಕೆಲವು ಆರೋಪಿಗಳ ಜೊತೆಗೆ ಕೂತು ಜೈಲಿನಲ್ಲಿಯೇ ಸಿಗರೇಟು ಕುಡಿಯುತ್ತಿರುವ ಫೋಟೊ ವೈರಲ್‌ ಆಗಿತ್ತು. ಬಳಿಕ ಜೈಲಿನಿಂದ ವಿಡಿಯೋ ಕಾಲ್‌ ಮಾಡಿದ್ದ ವಿಡಿಯೋ ಸಹ ವೈರಲ್‌ ಆಗಿತ್ತು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಬಳಿಕ ಅವರು ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದು ಹೊರಗೆ ಬಂದಿದ್ದರು. ಸುಪ್ರೀಂಕೋರ್ಟ್‌ ಜಾಮೀನು ರದ್ದು ಮಾಡಿದ ಕಾರಣ ಈಗ ಮತ್ತೆ ಜೈಲು ಸೇರಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ತಮಗೆ ಮಲಗಲು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ಬೇಕೆಂದು ಮನವಿ ಮಾಡಿದ್ದರು. ಜೈಲಧಿಕಾರಿಗಳು ಹೆಚ್ಚುವರಿ ಹಾಸಿಗೆ-ದಿಂಬು ನೀಡಲು ನಿರಾಕರಿಸಿದ ಕಾರಣ ದರ್ಶನ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಕೆಲ ದಿನಗಳ ಹಿಂದೆ ನಡೆದ ವಾದದ ಸಮಯದಲ್ಲಿ ನಟ ದರ್ಶನ್‌ ಪರ ವಕೀಲರು, ಜೈಲಧಿಕಾರಿಗಳು ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದ್ದಾರೆ. ದರ್ಶನ್‌ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್‌ ನೀಡಿಲ್ಲ ಎಂದು ವಾದಿಸಿದ್ದರು.

ಕ್ವಾರಂಟೈನ್‌ ಸೆಲ್‌ ಸಹ ಕಾರಾಗಹದ ಭಾಗವೇ. 1964ರ ಜೈಲು ನಿಯಮಗಳಡಿ ಯಾವ ಆರೋಪಿ/ಕೈದಿಯನ್ನ ಹೇಗೆ ನಡೆಸಿಕೊಳ್ಳಬೇಕು, ಯಾವ ಬ್ಯಾರಕ್‌ಗೆ ಯಾವಾಗ ಸ್ಥಳಾಂತರಿಸಬೇಕು ಎಂಬ ಬಗ್ಗೆ ಉಲ್ಲೇಖವಿದೆ. ಇಲ್ಲಿ ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಆರೋಪಿಯನ್ನು ಕ್ವಾರಂಟೈನ್‌ ಸೆಲ್‌ನಲ್ಲಿರಿಸಲಾಗಿದೆ. ಈ ಹಿಂದೆ ಜೈಲಿನಲ್ಲಿದ್ದಾಗ ಸೌಲಭ್ಯಗಳನ್ನ ಆರೋಪಿ ದರ್ಶನ್‌ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಒಂದೇ ಒಂದು ಕೈಗಾರಿಕೆಯೂ ರಾಜ್ಯದಿಂದ ಹೊರ ಹೋಗಿಲ್ಲ : ಸಚಿವ ಎಂ.ಬಿ.ಪಾಟೀಲ

ಮೈಸೂರು, ಅ.29- ರಾಜ್ಯದಿಂದ ಒಂದೇ ಒಂದು ಕೈಗಾರಿಕೆಯೂ ಹೊರಹೋಗಿಲ್ಲ. ಈ ವಿಚಾರವಾಗಿ ಹಬ್ಬಿಸುತ್ತಿರುವ ತಪ್ಪು ಕಲ್ಪನೆಯಿಂದ ಎಲ್ಲರೂ ಹೊರಬರಬೇಕಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯವಾದ ಕಾರ್ಯಪರಿಸರ ಅತ್ಯುತ್ತಮವಾಗಿದ್ದು, ಇಲ್ಲಿ ಅತ್ಯುತ್ತಮ ಪ್ರತಿಭಾ ಸಂಪನೂಲವಿದೆ. ಜೊತೆಗೆ ಸರ್ಕಾರದ ಕೈಗಾರಿಕಾ ನೀತಿಗಳು ಚೆನ್ನಾಗಿವೆ ಎಂದು ಅವರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಸರ್ಕಾರ ಬಂದ ಮೇಲೆ ಕಳೆದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಯಿತು. ಇದರ ಮೂಲಕ 10.27 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ಖಾತ್ರಿ ಸಿಕ್ಕಿತು. ಈ ಪೈಕಿ ಶೇ.60ಕ್ಕಿಂತ ಹೆಚ್ಚು ಬಂಡವಾಳ ಈಗಾಗಲೇ ನಮಲ್ಲಿ ಹೂಡಿಕೆ ಮಾಡಲ್ಪಟ್ಟಿದೆ. ನಾವು ಬರೀ ಮಾತನಾಡುವುದಿಲ್ಲ. ನುಡಿದಂತೆ ನಡೆಯುತ್ತಿದ್ದೇವೆ. ಈ ಹೂಡಿಕೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ ಎಂದು ಅವರು ವಿವರಿಸಿದರು.

ನಾನು ಕೈಗಾರಿಕಾ ಸಚಿವನಾದ ಮೇಲೆ ಹಲವು ದೇಶಗಳಿಗೆ ಭೇಟಿ ಕೊಟ್ಟು, ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುತ್ತಿದ್ದೇನೆ. ಫಾಕ್‌್ಸಕಾನ್‌ ತರಹದ ದೈತ್ಯ ಕಂಪನಿಯು ತೈವಾನ್‌ ನಂತರದ ತನ್ನ ಬೃಹತ್‌ ಘಟಕವನ್ನು ನಮಲ್ಲಿ ಆರಂಭಿಸಿದೆ. ಇಲ್ಲಿಂದ ದುಬಾರಿ ಮೊಬೈಲ್‌ ಫೋನುಗಳು ರಫ್ತಾಗಿ ಹೋಗುತ್ತವೆ. ಜಪಾನ್‌ ತರಹದ ಸಂಪ್ರದಾಯವಾದಿ ದೇಶದಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ 10,500 ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿದೆ.

ಸಾಮಾನ್ಯವಾಗಿ ಅಲ್ಲಿ ಕುಟುಂಬ ಪರಿವಾರಗಳೇ ಕೈಗಾರಿಕೆ ನಡೆಸುವುದರಿಂದ, ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾಗುತ್ತದೆ. ಆದರೂ ನಮ ವಿಚಾರದಲ್ಲಿ ಎಲ್ಲವೂ ತ್ವರಿತ ಗತಿಯಲ್ಲಿ ಸಂಭವಿಸಿದೆ. ಒಸಾಕಾವಾ ಕಂಪನಿ ಕೂಡ ಹೂಡಿಕೆ ಮಾಡಲು ಬಂದಿದೆ ಎಂದು ಅವರು ಹೇಳಿದರು.

ನಮಲ್ಲಿ ಸೆಮಿಕಂಡಕ್ಟರ್‌ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರೋತ್ಸಾಹವಿದೆ. ನಮ ಕೈಗಾರಿಕಾ ನೀತಿ ಉದ್ಯಮಸ್ನೇಹಿಯಾಗಿದೆ. ಆದರೆ, ಕೇಂದ್ರ ಸರ್ಕಾರವು ಸೆಮಿಕಂಡಕ್ಟರ್‌ ಮಿಷನ್‌ ಅಡಿಯಲ್ಲಿ ವಿಶೇಷ ಪ್ರೋತ್ಸಾಹನಾ ಕ್ರಮಗಳನ್ನು ಹೊಂದಿದ್ದು, ಇಂತಹ ಕಂಪನಿಗಳನ್ನು ಬಿಜೆಪಿ ಆಡಳಿತವಿರುವ ಗುಜರಾತ್‌, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಕಳಿಸಿ ಕೊಡುತ್ತಿದೆ. ಇದರಲ್ಲಿ ನಮ ತಪ್ಪೇನೂ ಇಲ್ಲ. ಹಿಂದೆ ಒಂದು ಕಂಪನಿ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೂಡಿಕೆ ಮಾಡಲು ತೀರ್ಮಾನಿಸಿತ್ತು. ಆದರೆ, ದೆಹಲಿಗೆ ಹೋದಮೇಲೆ ಅವರು ಮನಸ್ಸುಬದಲಿಸಿದರು. ಕೇಂದ್ರ ಸರ್ಕಾರವು ಇಂತಹ ತಾರತಮ್ಯವನ್ನು ಬಿಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ತಾಕತ್ತಿದ್ದರೆ ಆರ್‌ಎಸ್‌ಎಸ್‌ ನಿಷೇಧ ಮಾಡಿ : ಸರ್ಕಾರಕ್ಕೆ ಆರ್.ಆಶೋಕ್ ಓಪನ್ ಚಾಲೆಂಜ್

ಬೆಂಗಳೂರು : ಆರ್ ಎಸ್‍ಎಸ್ ಗೆ ಕಡಿವಾಣ ಹಾಕುವ ವ್ಯರ್ಥ ಪ್ರಯತ್ನ ಬಿಟ್ಟು, ತಾಕತ್ತಿದ್ದರೆ ಇದನ್ನು ನಿಷೇಧ ಮಾಡಿ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.

ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿರುವ ಅವರು, ಹಿಟ್ಲರ್ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛಡಿಯೇಟು ಕೊಟ್ಟಿದ್ದು, ಈ ರೀತಿ ಹಿಂಬಾಗಿಲಿನಿಂದ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹಾಕಲು ಆಗುವುದಿಲ್ಲ. ಅಲ್ಲದೆ, ಈ ಹಿಟ್ಲರ್ ಆಟ ಜಾಸ್ತಿ ದಿನ ನಡೆಯುವುದಿಲ್ಲ ಸ್ವಾಮಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಆರ್ ಎಸ್ ಎಸ್ ಪಥಸಂಚನಲಕ್ಕೆ ಅವಕಾಶ ನೀಡದಿರುವ ಕಾಂಗ್ರೆಸ್ ಸರ್ಕಾರದ ನಿರಂಕುಶವಾದಿ ನಡೆಗೆ ಮಾನ್ಯ ಹೈಕೋರ್ಟ್ ಛೀಮಾರಿ ಹಾಕಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರೇ, ನಿಮ್ಮ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರು ಸದಾ ಜೇಬಿನಲ್ಲಿಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರೀಕರ ಮೂಲಭೂತ ಹಕ್ಕುಗಳಿಗೆ ಸ್ಥಾನ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಒಂದೇ ಒಂದು ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ. ಪಾಲಿಕೆ ಶಾಲೆಗಳ ಶಿಕ್ಷಕರಿಗೆ 6 ತಿಂಗಳಿಂದ ವೇತನ ಕೊಟ್ಟಿಲ್ಲ. 8 ತಿಂಗಳಿಂದ ಸ್ಮಶಾನ ಸಿಬ್ಬಂದಿಗೆ ಸಂಬಳವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ಬೆಂಗಳೂರಿನ ಜನ ಪಾಲಿಕೆಗೆ ಕಟ್ಟುತ್ತಿರುವ ಸಾವಿರಾರು ಕೋಟಿ ತೆರಿಗೆ ಹಣ ಎಲ್ಲಿ ಸ್ವಾಮಿ? ಜನರ ತೆರಿಗೆ ಹಣ ಯಾರ ಜೇಬು ಸೇರುತ್ತಿದೆ? ಇದರ ಮೇಲೆ ಈಗ ಎ-ಖಾತಾ ಪರಿವರ್ತನೆ ನೆಪದಲ್ಲಿ ಮತ್ತೊಮ್ಮೆ ಜನ ಸಾಮಾನ್ಯರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಲು ಇಳಿದಿದ್ದೀರಿ.

ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ ಅಂತ ಬೆಂಗಳೂರನ್ನ ಬರ್ಬಾದ್ ಮಾಡಿಬಿಟ್ಟರಲ್ಲ ಸ್ವಾಮಿ. ಜನ ನಿಮ್ಮನ್ನ ಖಂಡಿತ ಕ್ಷಮಿಸುವುದಿಲ್ಲ ಎಂದು ಆಶೋಕ್ ಸರ್ಕಾರ ವಿರುದ್ದ ಕಿಡಿಕಾರಿದ್ದಾರೆ

ಅಪ್ಪು ನಮ್ಮನ್ನಗಲಿ ಇಂದಿಗೆ 4 ವರ್ಷ..!

ಬೆಲೆ ಕಟ್ಟಲಾಗದ ಬೆಟ್ಟದ ಹೂ ಅಪ್ಪು.. ದೈಹಿಕವಾಗಿ ಎಲ್ಲರನ್ನು ಅಗಲಿ ಇಂದಿಗೆ ನಾಲ್ಕು ವರ್ಷ.. ಅಭಿಮಾನಿಗಳ ಮನಸ್ಸಲ್ಲಿ ಈಗಲೂ ಚಿರಾಯು.. ಅಪ್ಪು ಅವರ ಸಮಾಜಮುಖಿ ಕೆಲಸಗಳು, ಅವರ ನಗುಮುಖ ಈ ಎಲ್ಲದರ ಮುಖಾಂತರ ಅವರನ್ನ ಜೀವಂತವಾಗಿ ನೋಡ್ತಿದ್ದಾರೆ. ಇಂದು ಅವರ ಪುಣ್ಯ ಸ್ಮರಣೆ. ರಾಜ್ ಕುಮಾರ್ ಸ್ಮಾರಕದ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಪ್ರತಿ ವರ್ಷ ಕೂಡ ಈ ಅಭಿಮಾನದಲ್ಲಿ ಕಡಿಮೆ ಆಗ್ತಿಲ್ಲ, ಹೆಚ್ಚೆ ಆಗ್ತಿದೆ. ಇದು ಅಪ್ಪು ಸಂಪಾದಿಸಿದ ಪ್ರೀತಿ, ಅಭಿಮಾನ.

ಅಕ್ಟೋಬರ್ 29 ಅಂದ್ರೆ ಎಲ್ಲರ ಕೈ ಕಾಲು ನಡುಗುತ್ತೆ.. ಮನಸ್ಸು ದುಃಖಿಸುತ್ತೆ.. ಅಂದು ಅಪ್ಪು ಎಂಬ ಬೆಳಕನ್ನ ವಿಧಿ ಎಂಬ ಯಮ ಹೊತ್ತುಕೊಂಡು ಹೋಗಿತ್ತು. ಕೊರಗಿದ್ದು ಲಕ್ಷಾಂತರ ಮನಸ್ಸುಗಳು. ಅಪ್ಪನನ್ನ ಕಳೆದುಕೊಂಡು ಆ ಮುದ್ದು ಮಕ್ಕಳು ಕಣ್ಣೀರಿಟ್ಟಿದ್ದೆಷ್ಟೋ.. ಪ್ರೀತಿಸಿದ ಹೃದಯ ನಿಂತಿದ್ದಕ್ಕೆ ಅಶ್ವಿನಿ ಅವರು ಮೌನವಾಗಿ ಕುಳಿತು ಬಿಟ್ಟರು.

ಅಪ್ಪು ನೋಡಲು ಎಲ್ಲೆಲ್ಲಿಂದಲೋ ಬಂದ ಅಭಿಮಾನಿಗಳು 30 ಲಕ್ಷಕ್ಕೂ ಹೆಚ್ಚು.. ಉಫ್ ಇಂದಿಗೂ ಆ ದಿನ ನೆನಪಾದರೆ ಅರಿವಿಗೆ ಬಾರದಂತೆ ಕಣ್ಣಂಚಲ್ಲಿ ನೀರು ಬರುತ್ತೆ. ಆದರೂ ಎಲ್ಲರೂ ಮನಸ್ಸಲ್ಲಿ ಹೇಳಿಕೊಳ್ಳುವುದು ಅಪ್ಪು ಫಾರ್ ಎವರ್.

ಚಿಕ್ಕ ವಯಸ್ಸಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದವರು, ಅಪ್ಪನ ತೇಜಸ್ಸನ್ನ ತನ್ನ ಅಭಿನಯದಲ್ಲಿ ತಂದವರು. ಅವರ ಸಿನಿಮಾಗಳೆಲ್ಲಾ ಹಿಟ್ ಲೀಸ್ಟ್ ಗೆ ಸೇರಿದವು. ಸಹಾಯ ಬೇಡಿದ ಸಾವಿರಾರು ಕೈಗಳಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿದರು. ಆ ಸಹಾಯವೇ ಅಪ್ಪುನ ಇಂದು ದೇವರಾಗಿಸಿದೆ. ಆ ದೇವರು ಕಣ್ಮರೆಯಾಗಿ ಇಂದಿಗೆ ನಾಲ್ಕು ವರ್ಷ. ಅಪ್ಪು ಸ್ಮರಣೆಯಲ್ಲಿ ಅಭಿಮಾನಿಗಳ ಸಾಗರ.

ಇಂಡಿಯನ್ ಪಂಚಾಂಗ ಮತ್ತು ರಾಶಿಭವಿಷ್ಯ (29-10-2025)

ನಿತ್ಯ ನೀತಿ : ಯಾರಾದ್ರು ಸತ್ತು ಹೋದ್ರೆ ಬೇಜಾರು ಆಗುತ್ತೆ. ಆದ್ರೆ ತಂದೆ ಸತ್ತು ಹೋದ್ರೆ ಭಯ ಆಗುತ್ತೆ… ತಂದೆ ಇಲ್ಲ ಅಂತಲ್ಲ… ಒಳ್ಳೇದು ಕೆಟ್ಟದ್ದು ಹೇಳುವುದಕ್ಕೆ ಯಾರೂ ಇಲ್ಲ ಅಂತ.

ಪಂಚಾಂಗ : ಬುಧವಾರ, 29-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ಉ.ಷಾ. / ಯೋಗ: ಧೃತಿ / ಕರಣ: ವಿಷ್ಟಿ

ಸೂರ್ಯೋದಯ – ಬೆ.06.13
ಸೂರ್ಯಾಸ್ತ – 5.54
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ಅನು ಕೂಲವಾಗಲಿದೆ. ಮಿತ್ರರಿಂದ ಸಹಾಯ ಸಿಗಲಿದೆ.
ವೃಷಭ: ಆಸ್ತಿ, ಅಪಾರ್ಟ್‌ಮೆಂಟ್‌ ಖರೀದಿಯಲ್ಲಿ ಅ ಕ ಹಣ ಹೂಡಿಕೆ ಮಾಡುವಿರಿ.
ಮಿಥುನ: ಆತ್ಮೀಯರ ಸಹಾಯ ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಅ ಕ ಲಾಭ ದೊರೆಯಲಿದೆ.

ಕಟಕ: ಹಳೆ ವಾಹನ ಖರೀದಿಸುವುದರಿಂದ ರಿಪೇರಿ ವೆಚ್ಚ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಷ್ಟ.
ಸಿಂಹ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆ ಯಿಂದ ನಡೆಯಲಿವೆ.
ಕನ್ಯಾ: ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ. ಆಹಾರ ಪದ್ಧತಿಯಲ್ಲಿ ಸರಿಯಾದ ನಿಯಮ ಪಾಲಿಸಿ.

ತುಲಾ: ಮನೆ ಬಗ್ಗೆ ಉದಾ ಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ವೃಶ್ಚಿಕ: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.
ಧನುಸ್ಸು: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡದಿರಿರುವುದು ಒಳಿತು.

ಮಕರ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕುಂಭ: ಹಣದ ಒಳಹರಿವು ಉತ್ತಮವಾಗಿರುತ್ತದೆ.
ಮೀನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.

ಪ್ರತಿಭಾನ್ವಿತ 500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಿದ ಅಶೋಕ ವಿಶ್ವವಿದ್ಯಾಲಯ

0

ಬೆಂಗಳೂರು: ಮೆರಿಟ್‌ ಪಡೆದ 500 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸಹಿತ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳುವ ಅವಕಾಶವನ್ನು ಅಶೋಕ ವಿಶ್ವವಿದ್ಯಾಲಯದ ನೀಡಿದೆ.ಹೌದು, ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಶೋಕ ವಿಶ್ವವಿದ್ಯಾಲಯವು ತನ್ನ ಮುಂದಿನ ಶೈಕ್ಷಣಿಕ ವರ್ಷದ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಅಕ್ಟೋಬರ್‌ ತಿಂಗಳಿನಿಂದ ಆರಂಬಿಸಿದ್ದು, ಮೆರಿಟ್‌ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಪ್ರವೇಶ ಪಡೆದುಕೊಳ್ಳಬಹುದು. ಕೇವಲ ಅಂಕದಲ್ಲಷ್ಟೇ ಅಲ್ಲದೆ, ಇತರೆ ವಿಭಾಗದಲ್ಲಿ ಮೆರಿಟ್‌ ಪಡೆದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನದ ಸೌಲಭ್ಯ ಸಿಗಲಿದೆ.

ಅಂಕಗಳಲ್ಲಿ ಮೆರಿಟ್‌ ಪಡೆದ 200 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದುಕೊಳ್ಳುವ ಅರ್ಹತೆ ಪಡೆದುಕೊಳ್ಳಲಿದ್ದಾರೆ. ವಿಶೇಷ ಮೆರಿಟ್ ಅಂದರೆ, ಜೆಇಇ, ಐಐಎಸ್ಇಆರ್ (ಐಎಟಿ), ಸಿಎಂಐ ಮತ್ತು ಭಾರತೀಯ ರಾಷ್ಟ್ರೀಯ ಒಲಿಂಪಿಯಾಡ್ಸ್ (ಐಎನ್ಒ) ನಲ್ಲಿ ಅಸಾಧಾರಣ ಸಾಧನೆ ಮಾಡಿದ 50 ಮಕ್ಕಳಿಗೆ ಶೇ.100ರಷ್ಟು ಬೋಧನಾ ಶುಲ್ಕ ಮನ್ನಾ ಮಾಡಲಾಗುತ್ತಿದೆ. ಜೊತೆಗೆ, ರಾಷ್ಟ್ರೀಯ ಆಪ್ಟಿಟ್ಯೂಡ್ ಪರೀಕ್ಷೆಗಳಲ್ಲಿ 2000ರ ರಾಂಕ್ ಪಡೆದ 50 ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನದಿಂದ ಪ್ರಯೋಜನ ಪಡೆಯುತ್ತಾರೆ.

ಇನ್ನು, ಸಿಬಿಎಸ್ಇ ಮತ್ತು ಐಸಿಎಸ್ಇ / ಐಎಸ್ಸಿ ತರಗತಿ ಹತ್ತನೇ ಮತ್ತು ಹನ್ನೆರಡನೇ ತರಗತಿ ಬೋರ್ಡ್ ಸ್ಕೋರ್ ಶೇ.98ಕ್ಕೂ ಹೆಚ್ಚು ಅಂಕ ಪಡೆದ ಹಾಗೂ ಅಶೋಕ ಪ್ರವೇಶ ಪ್ರಕ್ರಿಯೆಯಲ್ಲಿ ಪ್ರಬಲ ಸಾಧನೆ ಮಾಡಿದ 150 ವಿದ್ಯಾರ್ಥಿಗಳಿಗೆ ಶೇ.100 ರವರೆಗೆ ಬೋಧನಾ ಶುಲ್ಕ ಮನ್ನಾ ನೀಡಲಾಗುವುದು, ವಿಶ್ವವಿದ್ಯಾಲಯದಿಂದ ಹಣಕಾಸಿನ ನೆರವು ಅಗತ್ಯ ಬಯಸುವ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶೇ.100 ರವರೆಗೆ ಅಗತ್ಯ ಆಧಾರಿತ ಬೋಧನಾ ಶುಲ್ಕ / ಪೂರ್ಣ ಮನ್ನಾ ಲಭ್ಯವಿರುತ್ತದೆ.

ಒಟ್ಟಾರೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನೆರವು ನೀಡಲು ಈ ವಿದ್ಯಾರ್ಥಿ ವೇತನದ ಅವಕಾಶವನ್ನು ಒದಗಿಸಲಾಗಿದೆ.