Friday, November 7, 2025
Home Blog Page 1946

ಗ್ಯಾರಂಟಿ ಸರ್ಕಾರದಲ್ಲಿ ಹುದ್ದೆ ಗುದ್ದಾಟ, ರಾಜಣ್ಣ ವಿರುದ್ಧ ಡಿಕೆಶಿ ಬೆಂಬಲಿಗರ ಆಕ್ರೋಶ

ಬೆಂಗಳೂರು, ಸೆ.24- ಕಾಂಗ್ರೆಸ್‍ನಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ವಿವಾದ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ರಾಜಣ್ಣ ಅವರ ವಿರುದ್ಧ ಡಿ.ಕೆ.ಶಿವಕುಮಾರ್ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆಯ ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ಅವರು ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಮುದಾಯವಾರು ಆದ್ಯತೆ ನೀಡಬೇಕು ಎಂದಾದರೆ ಉಪಮುಖ್ಯಮಂತ್ರಿಗಳನ್ನು ಹೇಳಬೇಕು ಎಂದಾದರೆ ನೂರಾರು ಮಂದಿಯನ್ನು ಉಪಮುಖ್ಯಮಂತ್ರಿಗಳನ್ನು ಮಾಡಬೇಕಾಗುತ್ತದೆ. ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರ ಪಕ್ಷ ನಿಷ್ಠತೆ, ಬದ್ಧತೆ ಸಂಘಟನಾತ್ಮಕ ಶಕ್ತಿಯನ್ನು ಪರಿಗಣಿಸಿ ಉಪಮುಖ್ಯಮಂತ್ರಿ ಮಾಡಲಾಗಿದೆ.

ಈಗ ರಾಜಣ್ಣ ಅವರು ವಾಲ್ಮೀಕಿ ಸಮುದಾಯದವರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಹಾಗೆ ನೋಡಿದರೆ ರಾಜ್ಯದಲ್ಲಿ ಲಿಂಗಾಯಿತ ಸಮುದಾಯದವರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನಮಗೆ ಮುಖ್ಯಮಂತ್ರಿ ಹುದ್ದೆಯೇ ನೀಡಬಾಕಾಗುತ್ತದೆ ಎಂದು ಪ್ರತಿಪಾದಿಸಿದರು.

ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ

ಜಾತಿವಾರು ಉಪಮುಖ್ಯಮಂತ್ರಿ ಹುದ್ದೆ ಹಂಚಿಕೆ ಸರಿಯಲ್ಲ. ರಾಜಣ್ಣ ಅವರ ಹೇಳಿಕೆ ಅನಗತ್ಯ. ಹಿರಿಯರೂ, ಸಚಿವರೂ ಆಗಿರುವ ರಾಜಣ್ಣ ಈ ರೀತಿಯ ಗೊಂದಲದ ಹೇಳಿಕೆ ನೀಡಬಾರದಿತ್ತು ಎಂದು ಅಸಮಾಧಾನ ಹೊರಹಾಕಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತಿವಾರು ಆದ್ಯತೆ ನೀಡುವ ಸಲುವಾಗಿ ಪರಿಶಿಷ್ಟ ಜಾತಿ, ಮುಸ್ಲಿಂ ಮತ್ತು ಲಿಂಗಾಯಿತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದರು.

ಅದರ ಬೆನ್ನಲ್ಲೇ ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಶರಣಗೌಡ ದರ್ಶನಾಪುರ್, ಶಾಸಕರಾದ ಬಸವರಾಜರಾಯರೆಡ್ಡಿ ಮತ್ತಿತರರು ರಾಜಣ್ಣ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.ಬಸವರಾಜರಾಯರೆಡ್ಡಿ ಒಂದು ಹೆಜ್ಜೆ ಮುಂದೆ ಹೋಗಿ ಜಾತಿವಾರು ಪ್ರಾದೇಶಿಕವಾರು ಅವಕಾಶಗಳನ್ನು ನೀಡುತ್ತಿರುವುದು 3 ಬದಲು 5 ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯ ಕುಗ್ಗಿಸಲು ಈ ರೀತಿಯ ಚರ್ಚೆ ಹುಟ್ಟುಹಾಕಲಾಗಿದೆ ಎಂಬ ಆಕ್ಷೇಪಗಳಿವೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ವಿರುದ್ಧ ತೆರೆಮರೆಯಲ್ಲಿ ಮಸಲತ್ತು ನಡೆಸುತ್ತಿರುವವರಿಗೆ ಟಾಂಗ್ ನೀಡಲು ತಮ್ಮದೇ ಆದ ಕಾರ್ಯಸೂಚಿಯನ್ನು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಡಿಕ್ಕಿ – ಇಬ್ಬರು ಪ್ರಯಾಣಿಕರ ಸಾವು

ರಾಯಚೂರು,ಸೆ.24- ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಸುದೀಪ್(18) ಮತ್ತು ರಾಮಪ್ಪ (60) ಮೃತಪಟ್ಟ ಪ್ರಯಾಣಿಕರು.

ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ಐವರು ಪ್ರಯಾಣಿಕರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಉಳಿದ ಗಾಯಾಳು ಪ್ರಯಾಣಿಕರಿಗೆ ರಾಯಚೂರಿನ ರಿಮ್ಸ್ ಹಾಗೂ ಸಿಂಧನೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ರಾಯಚೂರು ಜಿಲ್ಲೆ ಸಿಂಧನೂರು ಬಳಿ ರಾತ್ರಿ ರಸ್ತೆ ಬದಿ ಯಾವುದೇ ಸಿಗ್ನಲ್ ಲೈಟ್ ಹಾಕದೆ ಲಾರಿ ನಿಲ್ಲಿಸಲಾಗಿದೆ. ಈ ಮಾರ್ಗದಲ್ಲಿ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕನಿಗೆ ಲಾರಿ ನಿಲ್ಲಿಸಿರುವುದು ಗಮನಕ್ಕೆ ಬಾರದೆ ಚಾಲನೆ ಮಾಡಿಕೊಂಡು ಬಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಬಸ್ ಚಾಲಕ ಅಮರೇಶ್ ಹಾಗೂ ಲಾರಿ ಚಾಲಕ ನಾಗೇಶ್ವರ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ

ದೊಡ್ಡಬಳ್ಳಾಪುರ,ಸೆ.24- ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಡೆದು ವಾಹನಕ್ಕೆ ಬೆಂಕಿ ಹಚ್ಚಿ ಶ್ರೀರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ವಾರಾಂತ್ಯದ ದಿನಗಳಲ್ಲಿ ಆಂಧ್ರದ ಹಿಂದೂಪುರದಿಂದ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುವುದು ಮಾಮೂಲು, ಇದರ ಬೆನ್ನತ್ತ ಶ್ರೀರಾಮಸೇನೆ ಕಾರ್ಯಕರ್ತರು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದ ಬಳಿ ಗೋಮಾಂಸ ಸಾಗಾಟದ ವಾಹನಗಳನ್ನ ತಡೆದು ಪರಿಶೀಲನೆ ಮಾಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ಐದು ವಾಹನಗಳಲ್ಲಿ ಗೋಮಾಂಸ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ವಿಮಾನ ನಿಲ್ದಾಣ ಮಾದರಿಯಲ್ಲಿ ವಿಶ್ವದರ್ಜೆಯ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅಭಿವೃದ್ಧಿ : ಜೋಶಿ

ಹುಬ್ಬಳ್ಳಿ, ಸೆ.24- ನಗರದ ಶ್ರೀಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಯ ರೈಲ್ವೆ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಶ್ರೀಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ 2.08 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿದ ಎರಡು ಎಸ್ಕಲೇಟರ್‍ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ರೈಲ್ವೆ ನಿಲ್ದಾಣವನ್ನು ವಿಮಾನ ನಿಲ್ದಾಣದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕೆಲವು ವರ್ಷಗಳ ಹಿಂದೆ ಇಲ್ಲಿ ಎರಡು ಪ್ಲಾಟ್ ಫಾರಂ ಇದ್ದವು. ಇಂದು 8 ಪ್ಲಾಟ್ ಫಾರಂಗಳನ್ನು ಕಲ್ಪಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಉನ್ನತೀಕರಣಕ್ಕೆ ನಿರಂತರವಾಗಿ ಪ್ರಯತ್ನಿಸಿದ ಪರಿಣಾಮ ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯಗಳು ಕಲ್ಪಿಸಿದಂತಾಗಿದೆ ಎಂದು ಹೇಳಿದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಭೇಟೆ ಆರಂಭ, ಏರ್ ರೈಫಲ್ ಶೂಟಿಂಗ್‍ನಲ್ಲಿ ಬೆಳ್ಳಿ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ಸಂತೋಷ್ ಚವ್ಹಾಣ, ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಬಿಜೆಪಿ ಮುಖಂಡ ಪ್ರಭು ನವಲಗುಂದಮಠ, ರಂಗಾಬದ್ದಿ, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂತೋಷ ಹೆಗಡೆ, ಹರಿತಾ ಎಸ್, ಇತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಾಗ್ದಾಳಿ

ಕಾಸರಗೋಡು, ಸೆ. 24- ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಸಾಮಾಜಿಕ ಮಾಧ್ಯಮವನ್ನು ಕಾಂಗ್ರೇಸ್ ನಾಯಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳ ಮೂಲಕ ಜನರ ಮೇಲೆ ಪ್ರಭಾವ ಬೀರಲು ಲಕ್ಷಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಮತ್ತು ವಿಶೇಷ ಏಜೆನ್ಸಿಗಳನ್ನು ರಾಜ್ಯಕ್ಕೆ ತರಲಾಗುತ್ತಿದೆ ಎಂದು ಹಿರಿಯ ಸಿಪಿಐ(ಎಂ) ನಾಯಕರೂ ಆಗಿರುವ ವಿಜಯನ್ ಆರೋಪಿಸಿದ್ದಾರೆ.

ಇಲ್ಲಿನ ಸಿಪಿಐ(ಎಂ) ನಾಯಕನ ಕುಟುಂಬದ ಮಹಿಳಾ ಸದಸ್ಯರಿಗೆ ಆನ್‍ಲೈನ್‍ನಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧಿಸಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸ್ಥಾನಗಳನ್ನು ಗಳಿಸಲು ವಿಫಲರಾಗಿದ್ದರು. ಈ ಬಾರಿ, ಅವರು ತಮ್ಮ ರಾಜಕೀಯ ವಿರೋಗಳ ಹೆಸರನ್ನು ಹಾಳುಮಾಡಲು ನಕಲಿ ಸುದ್ದಿಗಳನ್ನು ಹರಡಲು ಮತ್ತು ವೈಯಕ್ತಿಕ ಮತ್ತು ಉದ್ದೇಶಿತ ಅವಮಾನಗಳನ್ನು ಎಸೆಯಲು ಸಿದ್ಧರಾಗಿದ್ದಾರೆ, ಎಂದು ತ್ರಿಕರಿಪುರದಲ್ಲಿ ಪಕ್ಷದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ವಿಜಯನ್ ಮಿತ್ರ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ಅಂತಹ ಯಾವುದೇ ಆನ್‍ಲೈನ್ ವೈಯಕ್ತಿಕ ದಾಳಿಗಳಲ್ಲಿ ತೊಡಗಬೇಡಿ ಮತ್ತು ಆನ್‍ಲೈನ್ ಕಿರುಕುಳದಲ್ಲಿ ತೊಡಗಿರುವವರನ್ನು ಬಹಿರಂಗಪಡಿಸುವಂತೆ ಅವರು ಸಿಪಿಐ(ಎಂ) ಕಾರ್ಯಕರ್ತರನ್ನು ಕರೆ ನೀಡಿದರು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನತೆಗೆ ತಿಳಿಸಿ ಎಂದರು.

ಇಂದು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ, ಆದರೆ, ಅದನ್ನು ಬಳಸುವಾಗ ನಾವು ನಮ್ಮ ಸಭ್ಯತೆಯನ್ನು ಕಳೆದುಕೊಳ್ಳಬಾರದು. ನಮ್ಮ ಭಾಷಣವು ಗೌರವಯುತವಾಗಿರಬೇಕು ಮತ್ತು ಯಾರನ್ನೂ ವೈಯಕ್ತಿಕವಾಗಿ ನಿಂದಿಸುವ ಅಥವಾ ಗುರಿಯಾಗಿಸುವ ಗುರಿಯನ್ನು ಹೊಂದಿರಬಾರದು ಎಂದು ವಿಜಯನ್ ಹೇಳಿದರು.

ಎಡ ನಾಯಕರ ಕುಟುಂಬದ ಮಹಿಳಾ ಸದಸ್ಯರನ್ನು ಆನ್‍ಲೈನ್‍ನಲ್ಲಿ ಅಸಭ್ಯ ರೀತಿಯಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ ಇದು ಸಾಮಾಜಿಕ ಮಾಧ್ಯಮವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ರಾಜಕೀಯ ವಿರೋಧಿಗಳ ಮೇಲೆ ದಾಳಿ ಮಾಡಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಕಳೆದ ಸೆ17 ರಂದು, ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಎ ಎ ರಹೀಮ್ ಅವರ ಪತ್ನಿ ಅಮೃತಾ ಸತೀಶನ್ ಅವರು ಸೈಬರ್‍ಸ್ಪೇಸ್ ಮೂಲಕ ಕಿರುಕುಳ ನೀಡಲಾಗಿದೆ ಅವರು ಕೊಟ್ಟಾಯಂನ ಕುಂಜಾಚನ್ ಹೆಸರಿನ ಫೇಸ್‍ಬುಕ್ ಪುಟದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಭೇಟೆ ಆರಂಭ, ಏರ್ ರೈಫಲ್ ಶೂಟಿಂಗ್‍ನಲ್ಲಿ ಬೆಳ್ಳಿ

ಹ್ಯಾಂಗ್‍ಝೌ,(ಚೀನಾ) ಸೆ 24 -ಏಷ್ಯನ್ ಗೇಮ್ಸ್‍ನಲ್ಲಿ ಭಾರತ ಪದಕ ಭೇಟೆ ಆರಂಭಿಸಿದ್ದು ಇಂದು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಮಹಿಳಾ ಶೂಟರ್ ತಂಡ ಬೆಳ್ಳಿ ಪದಕ ಗೆದ್ದು ಬೀಗಿದೆ.ಅನುಭವಿ ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸೆ ಅವರ ಸಂಯೋಜಿತವಾಗಿ 1,886.0 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದರೆ ಆತಿಥೇಯ ಚೀನಾದ ಅದ್ಭುತ 1896.6 ಅಂಕಗಳೊಂದಿಗೆ ಚಿನ್ನ ಗೆದ್ದು ಹೊಸ ದಾಖಲೆ ಸೃಷ್ಠಿಸಿದೆ.

ಇನ್ನು ಏರ್ ರೈಫಲ್ ವೈಯಕ್ತಿಕ ಪದಕಕ್ಕಾಗಿ ಭಾರತ ಕೂಡ ಸಾಲಿನಲ್ಲಿದೆ ಮೆಹುಲಿ ಮತ್ತು ರಮಿತಾ ಕೂಡ ಎಂಟು ಶೂಟರ್‍ಗಳ ಫೈನಲ್‍ಗೆ ತಲುಪಿದ್ದಾರೆ ವಿಶೇಷವಾಗಿ ಕೇವಲ 19 ವರ್ಷದ ರಮಿತಾ 631.9 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದರೆ, ಮೆಹುಲಿ 630.8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ಉಳಿದಂತೆ ಚೀನಾದ ಎಲ್ಲಾ ಮೂವರು ಶೂಟರ್‍ಗಳಾದ ಹಾನ್ ಜಿಯಾಯು, ಹುವಾಂಗ್ ಯುಟಿಂಗ್ ಮತ್ತು ವಾಂಗ್ ಝಿಲಿನ್ ಫೈನಲ್‍ಗೆ ಪ್ರವೇಶಿಸಿದರೆ, ದಕ್ಷಿಣ ಕೊರಿಯಾದ ಲೀ ಯುನ್‍ಸಿಯೊ, ಮಂಗೋಲಿಯಾದ ಗನ್ಹುಯಾಗ್ ನಂದಿನ್‍ಜಯಾ ಮತ್ತು ಚೈನೀಸ್ ತೈಪೆಯ ಚೆನ್ ಚಿ ಅವರು ಫೈನಲ್‍ಗೆ ಪ್ರವೇಶಿಸಿದ ಇತರ ಶೂಟರ್‍ಗಳಾಗಿದ್ದರು.

ಭಾರತದ ರೋವರ್ ಜೋಡಿಗೆ ಬೆಳ್ಳಿ
ಇನ್ನು ರೋಯಿಂಗ್‍ನಲ್ಲಿ (ದೋಣಿ ಸ್ಪರ್ಧೆ)ಭಾರತದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರು ಪುರುಷರ ಲೈಟ್‍ವೇಟ್ ಡಬಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.ಕೆಲವೇ ಸೆಕೆಂಡ್‍ನಲ್ಲಿ ಚಿನ್ನ ಕೈತಪ್ಪದೆ ಚೀನಾದ ಜುಂಜಿ ಫ್ಯಾನ್‍ಮತ್ತು ಮ್ಯಾನ್ ಸನ್, 6:23.16ಸೆಕೆಂಡುಗಳೊಂದಿಗೆ ಸ್ವರ್ಣ ಪಡೆದರೆ ಭಾರತದ ಜೋಡಿಯು 6:28.18 ಸೆಕೆಂಡ್‍ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಳಿಸಿದರು.ಉಜ್ಬೇಕಿಸ್ತಾನ್ ಜೋಡಿ ಶಖ್ಜೋದ್ ನುರ್ಮಾಟೋವ್ ಮತ್ತು ಸೊಬಿರ್ಜಾನ್ ಸಫರೊಲಿಯೆವ್ ಅವರು 6:33.42 ಸೆಕೆಂಡ್‍ಗಳಲ್ಲಿ ಕಂಚಿನ ಪದಕ ಪಡೆದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ನಿತ್ಯ ನೀತಿ :
ಮಾನವನು ನಿಜವಾದ ಜ್ಞಾನದಿಂದ ವಂಚಿತನಾಗಿರುವುದು ಸಹಜ. ಏಕೆಂದರೆ, ಅವನನ್ನು ಅಜ್ಞಾನವು ಸದಾ ಕಾಲ ಸುತ್ತುವರಿದಿರುತ್ತದೆ.

ಪಂಚಾಂಗ : ಭಾನುವಾರ, 24-09-2023
ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ
ತಿಥಿ: ನವಮಿ / ನಕ್ಷತ್ರ: ಪೂರ್ವಾಷಾಢ / ಯೋಗ: ಶೋಭನ / ಕರಣ: ತೈತಿಲ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.15
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ಇಂದಿನ ರಾಶಿಭವಿಷ್ಯ
ಮೇಷ
: ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಕಲಿಯಬೇಕಾಗುತ್ತದೆ.
ವೃಷಭ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು. ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.
ಮಿಥುನ:ಹಿತವಾದ ಮಾತುಗಳಿಂದ ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ.

ಕಟಕ: ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನವಶ್ಯಕ ವಾದ ಮಾಡದಿರಿ.
ಸಿಂಹ: ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.
ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.

ತುಲಾ: ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರರು ಸಿಗುವರು.
ವೃಶ್ಚಿಕ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಧನುಸ್ಸು: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.

ಮಕರ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಮದ ಕೆಲಸ ಸರಾಗವಾಗಿ ಸಾಗಲಿದೆ.
ಕುಂಭ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
ಮೀನ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.

ಸನಾತನ ಧರ್ಮದ ವಿಚಾರದಲ್ಲಿ ಚಿಕ್ಕ ಮಗುವನ್ನು ಟಾರ್ಗೆಟ್ ಮಾಡಲಾಗುತ್ತಿದೆ : ಕಮಲ್

ಚೆನ್ನೈ,ಸೆ.23- ಇಂದು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಬೇಟೆಯಾಡುತ್ತಿದ್ದಾರೆ, ಬಿಜೆಪಿ ಮತ್ತು ಇನ್ನಿತರ ಸಂಘಟನೆಗಳು ಮಗುವನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಮಕ್ಕಳ್ ನೀಮೈಯಂ ಮುಖ್ಯಸ್ಥ ಹಾಗೂ ನಟ ಕಮಲ್ ಹಾಸನ್ ತಿಳಿಸಿದ್ದಾರೆ.

ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಹೆಸರು ಹೇಳದೆಯೇ ತಮಿಳುನಾಡು ಸಚಿವ ಉದಯನಿ ಸ್ಟಾಲಿನ್ ಅವರನ್ನು ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಸನಾತನ ಧರ್ಮದ ಬಗ್ಗೆ ಸಚಿವರು ನೀಡಿದ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ದ್ರಾವಿಡ ಚಳಚಳಿಯ ನಾಯಕರು, ಉದಯನಿ ಅವರ ತಾತ ಕರುಣಾನಿ ಅವರೂ ಈ ಬಗ್ಗೆ ಮಾತನಾಡಿದ್ದಾರೆ. ದಿವಂಗತ ಪೆರಿಯಾರ್ ವಿ.ರಾಮಸಾಮಿ ಅವರೂ ಸಾಮಾಜಿಕ ಅನಿಷ್ಠಗಳನ್ನು ಎಷ್ಟು ಕಟುವಾಗಿ ವಿರೋಸಿದ್ದರು ಎಂಬುದನ್ನು ನಾವು ಅವರ ಜೀವನ ಸ್ವಭಾವದಿಂದಲೇ ಅರ್ಥಮಾಡಿಕೊಳ್ಳಬಹುದು. ನಮಗೆಲ್ಲಾ ಸನಾತನ ಎಂಬ ಪದದ ಅರ್ಥ ತಿಳಿದಿದ್ದೇ ಅವರಿಂದ ಎಂದಿದ್ದಾರೆ.

ಮೊದಲು ಪೆರಿಯಾರ್ ಅವರು ಕಾಶಿಯಲ್ಲಿ ಪೂಜೆ ಮಾಡುತ್ತಿದ್ದರು, ಆದ್ರೆ ಅದೆಲ್ಲವನ್ನೂ ತ್ಯಜಿಸಿ ಮಕ್ಕಳ ಸೇವೆಯೇ ಮಹಾ ಸೇವೆ ಅಂತಾ ಭಾವಿಸಿ ಬರಬೇಕಾದ್ರೆ ಅವರಿಗೆ ಎಷ್ಟು ಕೋಪ ಇದ್ದಿರಬೇಕು. ಅವರನ್ನ ಯಾವುದೇ ರಾಜಕೀಯ ಪಕ್ಷಗಳು ಸ್ವಂತ ಎಂದು ಹೇಳುವಂತಿಲ್ಲ. ಇಡೀ ತಮಿಳುನಾಡಿಗೆ ಅವರು ನಾಯಕರು ಎಂದು ಶ್ಲಾಘಿಸಿದರು.

ಉದಯನಿ ಹೇಳಿದ್ದೇನು?:
ಲೇಖಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಸುತ್ತದೆ ಎಂದು ಹೇಳಿದ್ದರು.

ಸಂಶಯಕ್ಕೆ ಎಡೆ ಮಾಡಿಕೊಟ್ಟ ತೇಜಸ್ವಿನಿ ಅನಂತಕುಮಾರ್ ಹೇಳಿಕೆ

ಬೆಂಗಳೂರು,ಸೆ.23- ಕರ್ನಾಟಕದಲ್ಲಿ ಬಿಜೆಪಿ ಕಟ್ಟಿರುವ ಕ್ರೆಡಿಟ್ನ್ನು ಪೂರ್ತಿ ಅನಂತಕುಮಾರ್ ಅವರಿಗೆ ನೀಡಿದ್ದಾರೆ. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಬಾಗಿಲು ತೆರೆದಿದ್ದು ಅನಂತಕುಮಾರ್ ಎಂದು ತೇಜಸ್ವಿನಿ ಅನಂತ್ಕುಮಾರ್ ಹೇಳಿರುವುದು ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಬಿಜೆಪಿ ಹಿರಿಯ ನಾಯಕ ಕೇಂದ್ರ ಮಾಜಿ ಸಚಿವ ದಿ.ಅನಂತಕುಮಾರ್ ಜನ್ಮದಿನದ ಪ್ರಯುಕ್ತ ಟ್ವೀಟ್ ಮಾಡಿರುವ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲನ್ನು ತೆರೆದಿದ್ದು ಅನಂತಕುಮಾರ್, ಬಿಜೆಪಿಯ ಸಿದ್ಧಾಂತವನ್ನು ಕರ್ನಾಟಕದಾದ್ಯಂತ ಪಸರಿಸಿದ್ದು ಅನಂತಕುಮಾರ್ ಎಂದಿದ್ದಾರೆ.

ಅವರ ನಾಯಕತ್ವದಲ್ಲಿ ಪಕ್ಷದ ಮತ ಹಂಚಿಕೆ ಪ್ರಮಾಣ ಶೇ.2ರಿಂದ ಶೇ.25ಕ್ಕೆ ಏರಿತು. ಜೊತೆಗೆ ಬಿಜೆಪಿ ಶಾಸಕರ ಸಂಖ್ಯೆ ಒಂದರಿಂದ 40ಕ್ಕೆ ಏರಿತು. ಮತ್ತು ಕೇವಲ 5 ವರ್ಷಗಳಲ್ಲಿ 4 ಬಿಜೆಪಿ ಸಂಸದರು ರಾಜ್ಯದಿಂದ ಆಯ್ಕೆಯಾದರು. ಇದರಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ.ಅಡ್ವಾಣಿ ಅವರು ಅನಂತಕುಮಾರ್ ಅವರನ್ನು ಡೈನಾಮಿಕ್ ನಾಯಕರೆಂದು ಗುರುತಿಸಿದರು ಎಂದು ಹೇಳಿದ್ದಾರೆ.

ಈ ಮೂಲಕ ಕರ್ನಾಟಕ ಬಿಜೆಪಿ ಕಟ್ಟುವಲ್ಲಿ ಅನಂತಕುಮಾರ್ ಅವರ ಪಾತ್ರವನ್ನು ಬಿಜೆಪಿ ನಾಯಕರಿಗೆ ತೇಜಸ್ವಿನಿ ಅನಂತಕುಮಾರ್ ನೆನಪಿಸಿದ್ದಾರೆ. ಅದಲ್ಲದೇ ತಮ್ಮ ಟ್ವಿಟರ್ನಲ್ಲಿ ಅನಂತಕುಮಾರ್ ಅವರ ಎರಡು ಹಳೇ ಪೊಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಒಂದು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರೆ, ಮತ್ತೊಂದರಲ್ಲಿ ಬಿಎಸ್ ಯಡಿಯೂರಪ್ಪ ಜೊತೆ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಈ ಹಿಂದೆಯೂ ಅನಂತಕುಮಾರ್ ಅವರ ಪುತ್ರಿ ವಿಜೇತ ಅನಂತಕುಮಾರ್ ಕೂಡ ಟ್ವೀಟ್ ಮಾಡಿ ತಮ್ಮ ತಂದೆಯನ್ನು ಮರೆತ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು. ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಚುನಾವಣೆ ಹತ್ತಿರವಾದಂತೆಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರಮೋದಿ ಸೇರಿ ಅನೇಕ ನಾಯಕರು ಉದ್ಘಾಟಿಸುತ್ತಿದ್ದಾರೆ. ಆದರೆ, ಯಾವುದೇ ಯೋಜನೆಗೆ ಅನಂತಕುಮಾರ್ ಹೆಸರನ್ನು ನಾಮಕರಣ ಮಾಡುವುದಾಗಲಿ ಮಾಡಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಪ್ರಸ್ತಾಪ ಮಾಡಿ ಕೇಂದ್ರದ ಒಪ್ಪಿಗೆ ಪಡೆದವರು ಅನಂತಕುಮಾರ್.

ಆದರೂ ಆ ಕಾರ್ಯಕ್ರಮದಲ್ಲಿಯೂ ಅವರನ್ನು ಸ್ಮರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಮೆಟ್ರೋ ಯೋಜನೆಗೆ ಅನಂತಕುಮಾರ್ ಅವರ ಕೊಡುಗೆ ಅಪಾರವಾಗಿದ್ದರೂ ಮೆಟ್ರೋ ಉದ್ಘಾಟನೆಯಾಗಲಿ ಅಥವಾ ಬೆಂಗಳೂರು ಸಂಬಂತ ಯಾವುದೇ ಕಾರ್ಯಕ್ರಮದಲ್ಲಿ ಅನಂತಕುಮಾರ್ ಅವರನ್ನು ಸ್ಮರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ದೀರ್ಘಾವಧಿವರೆಗೆ ಮುಂದುವರೆಯಲಿದೆ : ಹೆಚ್ಡಿಕೆ

ಬೆಂಗಳೂರು,ಸೆ.23- ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗದೆ ಧೀರ್ಘಾವಧಿವರೆಗೆ ಮುಂದುವರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನವದೆಹಲಿಯಿಂದ ಆಗಮಿಸಿದ ಅವರು ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಸೌಹಾರ್ದಯುತವಾಗಿ ಚರ್ಚೆ ಮಾಡಿದ್ದೇವೆ. ಉಭಯ ಪಕ್ಷಗಳ ಮೈತ್ರಿಯನ್ನು ದೀರ್ಘಾವವರೆಗೆ ಮುಂದುವರೆಸುವ ಬಗ್ಗೆ ಹಲವು ಸಂಗತಿಗಳನ್ನು ಚರ್ಚೆ ಮಾಡಿದ್ದೇವೆ ಎಂದರು.

ನಿನ್ನೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರದ ಬಗ್ಗೆ ಚರ್ಚೆ ಮಾಡಲಾಯಿತು. ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರಗಳ ಹೊಂದಾಣಿಕೆ ಕುರಿತಂತೆ ಚರ್ಚಿಸಿದ್ದು, ಯಾವುದೇ ಭಿನ್ನಾಭಿಪ್ರಾಯಗಳು ಉಭಯ ಪಕ್ಷಗಳ ನಡುವೆ ಇಲ್ಲ ಎಂದು ಹೇಳಿದರು.

ನಾಡಿನ ಜನತೆಯ ಹಿತದೃಷ್ಟಿಯಿಂದ ಕೆಲವು ವಿಚಾರಗಳನ್ನು ಬಿಜೆಪಿ ನಾಯಕರೊಂದಿಗೆ ಚರ್ಚೆ ಮಾಡಿದ್ದು, ಅವುಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ. ನಮ್ಮ ನಾಡಿಗೆ ಉಂಟಾಗಿರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರದ ಬಗ್ಗೆ ಚಿಂತನೆಯನ್ನು ಮಾಡಲಾಗಿದೆ.
ನಾಡಿನ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮುಂದುವರೆ ಸಬೇಕಿದ್ದು, ಈ ವಿಚಾರದಲ್ಲಿ ಯಾವುದೇ ರೀತಿಯ ಪ್ರತಿಷ್ಟೆ ಇಲ್ಲ ಎಂದು ತಿಳಿಸಿದರು.

ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವು ಸಭೆಗಳನ್ನು ನಡೆಸಲು ಮನವಿ ಮಾಡಿದ್ದು, ದಸರಾ ಹಬ್ಬದ ನಂತರ ಮೈತ್ರಿ ನಿರ್ಧಾರವನ್ನು ಅಕೃತವಾಗಿ ಪ್ರಕಟಿಸುತ್ತೇವೆ. ಉಭಯ ಪಕ್ಷಗಳ ನಡುವೆ ಈ ವಿಚಾರದಲ್ಲಿ ಗೊಂದಲವಿಲ್ಲ.

ನಾಡಿನ, ರಾಷ್ಟ್ರದ ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದರು. ಕಾವೇರಿ ನದಿನೀರು ವಿವಾದ ಕುರಿತಂತೆ ಅಮಿತ್ ಷಾ ಅವರ ಜೊತೆ ಚರ್ಚಿಸಿದ್ದು, ನಮಗೆ ಆಗಿರುವ ಅನ್ಯಾಯದ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ನಾಡಿನ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.