Thursday, November 6, 2025
Home Blog Page 21

ಶಾಲೆ, ಸರ್ಕಾರಿ ಜಾಗದಲ್ಲಿ ಚಟುವಟಿಕೆಗಳ ನಿರ್ಬಂಧಕ್ಕೆ ಹೈಕೋರ್ಟ್‌ ತಡೆ : ಸರ್ಕಾರಕ್ಕೆ ಮುಖಭಂಗ

ಬೆಂಗಳೂರು,ಅ.28- ಸರ್ಕಾರಿ ಶಾಲಾ-ಕಾಲೇಜುಗಳ ಆಟದ ಮೈದಾನಗಳು ಮತ್ತು ಸರ್ಕಾರಿ ಸಂಸ್ಥೆಗಳ ಆವರಣಗಳಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಬೇಕಾದರೆ ಪೂರ್ವಾನುಮತಿ ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ನ್ಯಾಯಾಲಯದ ಆದೇಶದಿಂದ ಇಡೀ ರಾಜ್ಯದ ಗಮನಸೆಳೆದಿರುವ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದೆ. ನಿಗದಿಯಂತೆ ಅಂದೇ ಪಥಸಂಚಲನ ನಡೆಯಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ಕಳೆದ ಅಕ್ಟೋಬರ್‌ 17ರಂದು ನಡೆದ ಸಚಿವಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂಬ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪತ್ರ ಆಧರಿಸಿ, ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಂಕುಶ ಹಾಕಲು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ ಪೀಠಕ್ಕೆ ಪುನಶ್ಚೇತನ ಸೇವಾ ಸಂಸ್ಥೆ ಎಂಬ ಖಾಸಗಿ ಸಂಘಟನೆ ಮೇಲನವಿ ಅರ್ಜಿ ಸಲ್ಲಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿತ್ತು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಧಾರವಾಡ ಹೈಕೋರ್ಟ್‌ ಏಕಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಮುಂದಿನ ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಸರ್ಕಾರ ಸಚಿವಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ ರಾಷ್ಟ್ರೀಯ ಸ್ವಯಂ ಸಂಘ(ಆರ್‌ಎಸ್‌‍ಎಸ್‌‍)ದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿದೆ. ಇಡೀ ರಾಜ್ಯದಲ್ಲಿ ಶಾಂತಿಯುತವಾಗಿ ಪಥಸಂಚಲನ ನಡೆದಿದೆ. ಎಲ್ಲೂ ಇಲ್ಲದ ನಿಯಮಗಳನ್ನು ಚಿತ್ತಾಪುರದಲ್ಲಿ ಜಾರಿ ಮಾಡಲಾಗಿದೆ. ಇದರ ಉದ್ದೇಶವೇ ಸಂಘದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು. ಹೀಗಾಗಿ ಸಚಿವ ಸಂಪುಟದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಬಳ್ಳಿ ಆಯುಕ್ತರಿಗೆ ನೋಟಿಸ್‌‍ ಜಾರಿ ಮಾಡಿ ಸರ್ಕಾರಿ ವಕೀಲರಿಗೆ ನಾಳೆ ತಕರಾರು ಅರ್ಜಿ ಸಲ್ಲಿಸಲು ಸೂಚನೆ ನೀಡಿದರು.

ಅನುಮತಿ ಇಲ್ಲದೆ 10 ಜನ ಸೇರಿದರೆ ಅಪರಾಧವೆಂದು ಸರ್ಕಾರದ ಆದೇಶದಲ್ಲಿದೆ. ರಸ್ತೆ, ಪಾರ್ಕ್‌, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪೊಲೀಸ್‌‍ ಕಾಯ್ದೆಯಲ್ಲಿರುವ ಅಧಿಕಾರವನ್ನು ಸರ್ಕಾರ ಆದೇಶದ ಮೂಲಕ ಚಲಾಯಿಸಿದೆ. ಇದು ಸಂವಿಧಾನದ 19(1)ಎ ಬಿ ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳಲಾಗದೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಸರ್ಕಾರಿ ಆದೇಶವು ಸಂವಿಧಾನದ ಕೆಲವು ವಿಧಿಗಳನ್ನು ಉಲ್ಲಂಘನೆ ಮಾಡುತ್ತದೆ. ಪಾರ್ಕ್‌ವೊಂದರಲ್ಲಿ ಹತ್ತು ಜನ ಸೇರಿದರೆ ಅಪರಾಧ ಎಂದು ಪರಿಗಣಿಸಲು ಹೇಗೆ ಸಾಧ್ಯ? ವಾಯುವಿಹಾರಕ್ಕೆ ಬಂದ 10 ಜನ ನಗೆಕೂಟ ನಡೆಸುತ್ತಾರೆ. ಇದನ್ನು ಅಪರಾಧ ಎನ್ನಲು ಸಾಧ್ಯವೇ? ಎಂದು ಸರ್ಕಾರಿ ಪರ ವಕೀಲರನ್ನು ಪ್ರಶ್ನೆ ಮಾಡಿದರು.

ಸಂವಿಧಾನ ನೀಡಿರುವ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾದರೆ ನ್ಯಾಯಾಲಯ ಇದನ್ನು ನೋಡಿಕೊಂಡು ಸುಮನಿರಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾದಾಗ ನಾವು ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಲೇಬೇಕಾಗುತ್ತದೆ. ಸಚಿವ ಸಂಪುಟದ ತೀರ್ಮಾನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವುದಾಗಿ ಆದೇಶದಲ್ಲಿ ಪ್ರಕಟಿಸಿದರು.

ಇದಕ್ಕೂ ಮುನ್ನ ಪುನಶ್ಚೇತನ ಸಂಸ್ಥೆ ಪರ ವಾದ ಮಂಡಿಸಿದ ವಕೀಲ ಅಶೋಕ್‌ ಹಾರನಹಳ್ಳಿ, ಯಾವುದೇ ಪಾರ್ಕ್‌ ಮತ್ತು ಸರ್ಕಾರದ ಆಸ್ತಿಯಲ್ಲಿ ಯಾವುದೇ ಸಂಘಸಂಸ್ಥೆ ಕಾರ್ಯಕ್ರಮ ನಡೆಸುವಂತಿಲ್ಲ. ಇದಕ್ಕೆ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದಿದೆ. ಸರ್ಕಾರದ ಆಸ್ತಿ ಎಂದರೆ ರೋಡ್‌ ಅಂತಾನಾ? 10ಕ್ಕೂ ಹೆಚ್ಚು ಜನರು ಸೇರಿದರೆ ಅದು ತಪ್ಪಾ? ಎಂದು ಕರ್ನಾಟಕ ಪೊಲೀಸ್‌‍ ಕಾಯ್ದೆಯ ಬಗ್ಗೆ ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆ ಇದನ್ನು ನೋಡಬೇಕು, ಸರ್ಕಾರ ಅಲ್ಲ. ಯಾರು ಇದನ್ನು ಆದೇಶ ಮಾಡಿದ್ದು ಎಂದು ನ್ಯಾಯಮೂರ್ತಿಗಳು ಕೇಳಿದಾಗ, ಕ್ಯಾಬಿನೆಟ್‌ ಆದೇಶ ಮಾಡಿದೆ. ಸರ್ಕಾರ ಶಾಲಾ-ಕಾಲೇಜು, ಉದ್ಯಾನ ಮತ್ತು ಇತರ ಕಡೆ ಸಾರ್ವಜನಿಕರು ಬಳಸಲು ಇದೆ. ರಾಜ್ಯದ ಹಲವು ಸಂಸ್ಥೆ ಪ್ರಚಾರ ತರಬೇತಿ ಉದ್ದೇಶದಿಂದ ಸರ್ಕಾರದ ಆಸ್ತಿ ಅನುಮತಿ ಪಡೆಯದೇ ಮಾಡುವುದು ಅಕ್ರಮವೆಂದು ಹೇಳುತ್ತಾರೆ ಎಂದು ವಕೀಲರು ವಾದಿಸಿದರು.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ಗುರಿಯಾಗಿಸಿ ಮಾಡಲು ರೂಪಿಸಲಾಗಿದ್ದು, ಇದು ಸಂವಿಧಾನದ ಮೂಲಭೂತ ಹಕ್ಕುಗಳನ್ನು (ಭಾಷಣ ಸ್ವಾತಂತ್ರ್ಯ, ಸಂಘ ರಚನೆ) ಉಲ್ಲಂಘಿಸುತ್ತದೆ. ರಾಜ್ಯ ಸರ್ಕಾರ ಮತ್ತು ಪೊಲೀಸ್‌‍ ಇಲಾಖೆಯನ್ನು ಪ್ರತಿವಾದಿಯಾಗಿ ಮಾಡಿ ಸಂಸ್ಥೆ ಹೈಕೋರ್ಟ್‌ ಮೇಟ್ಟಿಲೇರಿತ್ತು. ಇದು ಆರ್‌ಎಸ್‌‍ಎಸ್‌‍ ಬ್ಯಾನ್‌ ಚರ್ಚೆಯ ಹಿನ್ನೆಲೆಯಲ್ಲಿದ್ದು, ಖಾಸಗಿ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಆದೇಶವು ರಾಜಕೀಯ ದ್ವೇಷದಿಂದ ಬಂದಿದೆ ಎಂದು ಸಂಸ್ಥೆಯು ಆರೋಪಿಸಿತ್ತು.

ಪ್ರಕರಣದ ಹಿನ್ನೆಲೆ:
ಸಚಿವ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸರ್ಕಾರಿ ಆಸ್ತಿಗಳನ್ನು ಬಳಸುವ ಖಾಸಗಿ ಸಂಘಟನೆಗಳಿಗೆ ಮುಂಚಿತವಾಗಿ ಅನುಮತಿ ಕಡ್ಡಾಯಗೊಳಿಸುವ ಆದೇಶ ಹೊರಡಿಸಲಾಯಿತು. ಆದೇಶದಲ್ಲಿ, ಸರ್ಕಾರಿ ಆಸ್ತಿಯನ್ನು (ಭೂಮಿ, ಕಟ್ಟಡ, ಪಾರ್ಕ್‌, ಆಟದ ಮೈದಾನ, ನೀರು ತಡೆಗಳು) ಬಳಸಲು ಸಂಬಂಧಿತ ಅಧಿಕಾರಿಯಿಂದ ಮುಂಚಿತವಾ ಅನುಮತಿ ಪಡೆಯಬೇಕು ಎಂದು ಉಲ್ಲೇಖಿಸಲಾಗಿದೆ. ಕರ್ನಾಟಕ ಪೊಲೀಸ್‌‍ ಕಾಯ್ದೆ 1963ರಡಿ ಅಧಿಕಾರಿಗಳು ನಿಯಂತ್ರಣಕ್ಕೆ ಶಕ್ತಿ ಹೊಂದಿರುವುದಾಗಿ ಹೇಳಲಾಗಿತ್ತು.

ಬೆಂಗಳೂರಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಅಂದರ್

ಬೆಂಗಳೂರು,ಅ.28-ಮನೆಯೊಂದಕ್ಕೆ ನುಗ್ಗಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಿಥುನ್‌ ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ಇಬ್ಬರು ಅಪ್ರಾಪ್ತರು ಸಹಕರಿಸಿದ್ದರು ಎಂಬುವುದು ತನಿಖೆಯಿಂದ ಗೊತ್ತಾಗಿದೆ.

ಗಂಗೊಂಡನ ಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ಪಶ್ಚಿಮ ಬಂಗಾಳ ಮೂಲದ ಮಹಿಳೆ ಹಾಗೂ ಇಬ್ಬರು ಪುರುಷರು ನೆಲೆಸಿದ್ದಾರೆ. ಕಳೆದವಾರ ಈ ಮನೆಗೆ ಹೋದ 6 ಮಂದಿ ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ತಾವು ಪೊಲೀಸರೆಂದು ಪರಿಚಯಿಸಿಕೊಂಡು ಏಕಾಏಕಿ ಒಳಗೆ ನುಗ್ಗಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಕಟ್ಟಿಹಾಕಿ ನಂತರ ಮಹಿಳೆಯನ್ನು ಪಕ್ಕದ ರೂಮ್‌ಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗಿ ಪರಾರಿಯಾಗಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಿಥುನ್‌ಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು ಕೊನೆಗೂ ಆತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಕಾರಣಿಗಳನ್ನು ಓಲೈಸಲು ಪೊಲೀಸರು ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಾರದು : ಡಿಕೆಶಿ ಕಿವಿಮಾತು

ಬೆಂಗಳೂರು, ಅ.28- ಪೊಲೀಸ್‌‍ ಇಲಾಖೆ ತನ್ನ ಇತಿಹಾಸ ಮರೆತು ರಾಜಕಾರಣಿಗಳನ್ನು ಓಲೈಸಲು ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು.

ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ನಡೆದ ಪೀಕ್‌ ಕ್ಯಾಪ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೊಲೀಸರಿಗೆ ಕೇಸರಿ ಬಟ್ಟೆ ಹಾಕಿಸಲಾಗಿತ್ತು. ಆ ಸಂದರ್ಭದಲ್ಲಿ ಯಾವ ಅಧಿಕಾರಿ ಇದ್ದರೋ ಗೊತ್ತಿಲ್ಲ. ಆದರೆ ರಾಜಕಾರಣಿಗಳನ್ನು ಓಲೈಸಲು ಪೊಲೀಸರು ತಮನ್ನು ತಾವು ಮಾರಿಕೊಂಡಂತೆ ವೇಷ ಬದಲಾಯಿಸಬಾರದು. ಪೊಲೀಸರು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಜನರ ನಂಬಿಕೆ ಕಳೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದರು.

ಮನೆ ಮನೆಗೆ ಪೊಲೀಸ್‌‍ ವ್ಯವಸ್ಥೆ ಉತ್ತಮವಾಗಿದೆ. ಇದರಿಂದ ಅಪರಾಧ ತಡೆಯಲು ಅನುಕೂಲವಾಗುತ್ತದೆ. ತಮ ಮನೆಯ ಪಕ್ಕದಲ್ಲೇ ವಾಸವಿದ್ದ ಉದ್ಯಮಿ ಆದಿಕೇಶವಲು ಮನೆಯಲ್ಲಿ ಕಳ್ಳತನ ಮಾಡಿ, ಮಾರಾಟ ಮಾಡಿದ ಚಿನ್ನ 3 ವರ್ಷದ ಬಳಿಕ ಪತ್ತೆಯಾಗಿತ್ತು, ಆ ವರೆಗೂ ಆದಿಕೇಶವಲು ಅವರಿಗೆ ತಮ ಮನೆಯಲ್ಲಿ ಕಳ್ಳತನವಾಗಿರುವುದೇ ಗೊತ್ತಿರಲಿಲ್ಲ. ಪೊಲೀಸರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದರಿಂದ ಇಂತಹ ಅಪರಾಧಗಳ ನಿಯಂತ್ರಣಕ್ಕೆ ಸಹಾಯವಾಗುತ್ತದೆ ಎಂದರು.

ಸಂಚಾರ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ ಅಳವಡಿಸುತ್ತಿರುವುದು ಸ್ವಾಗತಾರ್ಹ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ವಂತ ವಾಹನಗಳನ್ನು ಖರೀದಿಸಬೇಡಿ ಎಂದು ಹೇಳಲಾಗುವುದಿಲ್ಲ. ಸರ್ಕಾರ ಫೆರಿಫರಲ್‌ ರಿಂಗ್‌ ರಸ್ತೆ, ಸುರಂಗ ರಸ್ತೆಗಳನ್ನು ನಿರ್ಮಿಸುತ್ತಿದೆ. ಪೊಲೀಸರು ಸಂಚಾರ ನಿರ್ವಹಣೆಗೆ ಸಮರ್ಪಕವಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಬೇಕೆಂದು ಸೂಚಿಸಿದರು.

ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಗೌರವವಿದೆ. ಇತ್ತೀಚೆಗೆ ತಾವು ದೆಹಲಿಯಲ್ಲಿ ಹಿರಿಯ ವಕೀಲರು ಹಾಗೂ ನ್ಯಾಯಾಂಗದ ಅಧಿಕಾರಿಗಳನ್ನು ಭೇಟಿ ಮಾಡಿದ ವೇಳೆ ಕರ್ನಾಟಕದಲ್ಲಿ ಕೆಳ ಪ್ರಕರಣಗಳ ತನಿಖೆಗೆ ಎಸ್‌‍ಐಟಿ ರಚಿಸಿದ ಕ್ರಮವನ್ನು ಪ್ರಶಂಸಿದ್ದಾರೆ. ಪೊಲೀಸರು ಉತ್ತಮ ಸಾಮರ್ಥ್ಯದಿಂದ ಕೆಲಸ ಮಾಡುತ್ತಿದ್ದಾರೆ. ನಮ ಪೊಲೀಸ್‌‍ ವ್ಯವಸ್ಥೆ ದಿನೇ ದಿನೇ ಉತ್ತಮಗೊಳ್ಳುತ್ತಿದೆ ಎಂದರು.

ಪೊಲೀಸರು ಸಮಾಜ ರಕ್ಷಕರು. ಇತ್ತೀಚೆಗೆ ಸೈಬರ್‌ ಕ್ರೈಂನಂತಹ ಹೊಸ ಹೊಸ ಅಪರಾಧಗಳು ಘಟಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ದೊರೆಯುತ್ತಿವೆ. ಪೊಲೀಸರ ಸವಾಲುಗಳು ಹೆಚ್ಚುತ್ತಿವೆ. ಇದಕ್ಕೆ ಪೂರಕವಾಗಿ ಕೆಳ ಹಂತದ ಸಿಬ್ಬಂದಿಗಳ ಸಾಮರ್ಥ್ಯ ಸುಧಾರಣೆಯಾಗಬೇಕೆಂದು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ರಾಜ್ಯದಲ್ಲಿ 16 ಸಾವಿರ ಪೊಲೀಸ್‌‍ ಕಾನ್ಸ್ ಟೆಬಲ್‌ಗಳ ಹುದ್ದೆ ಖಾಲಿ ಇದ್ದು, ಅವುಗಳಲ್ಲಿ 8500 ಹುದ್ದೆಗಳ ನೇಮಕಕ್ಕೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್‌‍ ಸಿಬ್ಬಂದಿಗಳ ಪೀಕ್‌ಕ್ಯಾಪ್‌ ಬದಲಾವಣೆ ಐತಿಹಾಸಿಕ ನಿರ್ಧಾರವಾಗಿದ್ದು, ಇದು ತಮ ಅವಧಿಯಲ್ಲಿ ಕೈಗೊಂಡಿರುವುದು ಸಂತಸದ ವಿಚಾರ. ಲಂಡನ್‌, ಆಸ್ಟ್ರೇಲಿಯಾದಲ್ಲಿ ಸ್ಲೋಜ್‌ ಹ್ಯಾಟ್‌ ಧರಿಸಲಾಗುತ್ತಿತ್ತು. 1953ರಲ್ಲಿ ಭಾರತದ ಶಸಸ್ತ್ರ ಪಡೆಗಳಿಗೂ ಸ್ಲೋಜ್‌ ಹ್ಯಾಟ್‌ ನಿಗದಿಪಡಿಸಲಾಗಿತ್ತು.

ಸಾಮಾನ್ಯ ಸಿಂಬ್ಬಂದಿಗಳಿಗೆ ಟರ್ಬನ್‌ ಸುತ್ತಿಕೊಳ್ಳಲು ಅವಕಾಶ ನೀಡಲಾಗಿತ್ತು. 1973ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಸ್ಲೋಜ್‌ಕ್ಯಾಪ್‌ ಅನ್ನು ಜಾರಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೂ ಯಾವುದೇ ಬದಲಾವಣೆಯಾಗಿಲ್ಲ ಎಂದರು.

ಸ್ಲೋಜ್‌ಕ್ಯಾಪ್‌ ಸುಂದರವಾಗಿಲ್ಲ, ಮಳೆ ಬಂದಾಗ ನೆಂದರೆ, ಅದರ ತೂಕ ಹೆಚ್ಚಾಗುತ್ತದೆ. ಧರಿಸಲು ಕಷ್ಟ ಎಂದು ಹೇಳಲಾಗುತ್ತಿದ್ದು, ಇಲಾಖೆಯಿಂದ ಸರ್ಕಾರಕ್ಕೆ ಹಲವಾರು ಬಾರಿ ಕ್ಯಾಪ್‌ ಬದಲಾವಣೆಗೆ ಪ್ರಸ್ತಾವನೆಯಿತ್ತು. ಇತ್ತೀಚೆಗೆ ನಡೆದ ಪೊಲೀಸ್‌‍ ಮಹಾ ಸಮಾವೇಶದಲ್ಲಿ ಬೇರೆ ಬೇರೆ ರಾಜ್ಯಗಳ ಟೋಪಿಗಳನ್ನು ಪ್ರದರ್ಶಿಸಲಾಗಿತ್ತು. ಅದರಲ್ಲಿ ಮುಖ್ಯಮಂತ್ರಿ ಅವರು ಪೀಕ್‌ ಕ್ಯಾಪ್‌ಗೆ ಅನುಮೋದನೆ ನೀಡಿದ್ದರು.

ಪೀಕ್‌ ಕ್ಯಾಪ್‌ ಧರಿಸುವುದರಿಂದ ಪೊಲೀಸರು ಸುಂದರವಾಗಿ ಕಾಣುತ್ತಾರೆ ಹಾಗೂ ಅವರ ಆತವಿಶ್ವಾಸವೂ ಹೆಚ್ಚಾಗುತ್ತದೆ ಎಂದರು.ಕರ್ನಾಟಕ ಪೊಲೀಸ್‌‍ ದೇಶದಲ್ಲೇ ಉತ್ತಮ ವ್ಯವಸ್ಥೆ ಎಂದು ಹೆಸರು ಗಳಿಸಿದೆ. ರಾಜ್ಯ ಸುರಕ್ಷಿತವಾಗಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಸಣ್ಣ-ಪುಟ್ಟ ಘಟನೆಗಳನ್ನು ಹೊರತು ಪಡಿಸಿ, ಕಾನೂನು ಸುವ್ಯವಸ್ಥೆ ಭಂಗವಾಗುವಂತಹ ಘಟನೆಯಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಇನ್‌್ಸಪೆಕ್ಟರ್‌ ಮೇಲ್ಪಟ್ಟು ಎಸ್‌‍ಪಿಯವರೆಗಿನ ಹುದ್ದೆಗಳಿಗೆ ಕನಿಷ್ಠ ಎರಡು ವರ್ಷಗಳ ವರೆಗೂ ವರ್ಗಾವಣೆ ಮಾಡುವಂತ್ತಿಲ್ಲ ಎಂಬ ನಿಯಮ ರೂಪಿಸಿದ್ದೇವೆ.545 ಪಿಎಸ್‌‍ಐ ಹುದ್ದೆಗಳಿಗೆ ನೇಮಕಾತಿಯಾಗಿದ್ದು, ತರಬೇತಿ ನಡೆಯುತ್ತಿದೆ. 402 ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತಿದೆ ಎಂದು ವಿವರಿಸಿದರು.

ಪೊಲೀಸ್‌‍ ಗೃಹ ಯೋಜನೆಯಡಿ 15 ಸಾವಿರ ಕ್ವಾಟ್ರಸ್‌‍ಗಳನ್ನು ನಿರ್ಮಿಸಲಾಗಿದ್ದು, ಮುಂದಿನ 5 ವರ್ಷಗಳ ಕಾಲ ಈ ಯೋಜನೆಯನ್ನು ಮುಂದುವರೆಸಲಾಗಿದೆ. ಆರೋಗ್ಯ ತಪಾಸಣಾ ವೆಚ್ಚವವನ್ನು ಹೆಚ್ಚಿಸಲಾಗಿದೆ. ರಜೆ ಪಡೆಯುವ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ ಎಂದರು.

ಮಾದಕ ವಸ್ತುಗಳ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದ್ದು, ಡ್ರಗ್‌ ಪೆಡ್ಲರ್‌ಗಳ ಮೇಲೆ ನಿಗಾ ಇಡಲು ಸನಿತ್ರ ಯೋಜನೆಯಡಿ ಕಾನ್‌್ಸಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಪೊಲೀಸರು ರಾಜ್ಯದ ಕಣ್ಣುಗಳಿದ್ದಂತೆ. ಕಾನೂನು ಸುವ್ಯಸ್ಥೆ ಕಾಪಾಡುವಲ್ಲಿ ಮಹತ್ವದ ಜವಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದರು.

ಛಾತ್‌ ಪೂಜೆ ಕೊನೆ ದಿನ : ಸೂರ್ಯನಿಗೆ ಆರ್ಘ್ಯ ಅರ್ಪಿಸಿದ ಲಕ್ಷಾಂತರ ಮಂದಿ

ಪಾಟ್ನಾ, ಅ.28– ಛಾತ್‌ ಪೂಜೆಯ ಕೊನೆಯ ದಿನವಾದ ಇಂದು ಬಿಹಾರದಾದ್ಯಂತ ಇರುವ ಘಾಟ್‌ಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿ ಪುನಿತರಾದರು. ನಾಲ್ಕು ದಿನಗಳ ಛಾತ್‌ ಪೂಜಾ ಉತ್ಸವದ ಪರಾಕಾಷ್ಠೆಯನ್ನು ಗುರುತಿಸುವ ಸಲುವಾಗಿ ಬಿಹಾರದಾದ್ಯಂತ ಲಕ್ಷಾಂತರ ಭಕ್ತರು ಇಂದು ಉದಯಿಸುತ್ತಿರುವ ಸೂರ್ಯನಿಗೆ ಬೆಳಗಿನ ಪ್ರಾರ್ಥನೆ ಸಲ್ಲಿಸಿದರು.

ಉದಯಿಸುತ್ತಿರುವ ಸೂರ್ಯನಿಗೆ ಉಷಾ ಅರ್ಘ್ಯ ಅರ್ಪಿಸಲು ಭಕ್ತರು ಬೆಳಗಿನ ಜಾವದಿಂದಲೇ ಗಂಗಾ ಮತ್ತು ಇತರ ಜಲಮೂಲಗಳ ದಡದಲ್ಲಿ ಜಮಾಯಿಸಿದರು.ಬಿಹಾರದ ಅತಿದೊಡ್ಡ ಹಬ್ಬವಾದ ಈ ಪೂಜೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಾಟ್ನಾ ಜಿಲ್ಲಾಡಳಿತವು ನದಿಯ ಉದ್ದಕ್ಕೂ 100 ಕ್ಕೂ ಹೆಚ್ಚು ಘಾಟ್‌ಗಳಲ್ಲಿ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಟ್ನಾದ ವಿವಿಧ ಘಾಟ್‌ಗಳಲ್ಲಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಂದು ಬೆಳಿಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಛಾತ್‌ ಪೂಜಾ ಉತ್ಸವದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದರು.

ರಾಜ್ಯ ರಾಜಧಾನಿಯಲ್ಲಿ ಹಲವಾರು ರಾಜಕಾರಣಿಗಳ ನಿವಾಸಗಳಲ್ಲಿ ಛಠ್‌ ಪೂಜೆಯನ್ನು ಆಚರಿಸಲಾಯಿತು.ನಾಲ್ಕು ದಿನಗಳ ಹಬ್ಬಗಳು ಅಕ್ಟೋಬರ್‌ 25 ರಂದು ೞನಹೈ ಖೈೞ ಆಚರಣೆಯೊಂದಿಗೆ ಪ್ರಾರಂಭವಾದವು. ಇದನ್ನು ಕಾರ್ತಿಕ ಶುಕ್ಲದ ಆರನೇ ದಿನ ಮತ್ತು ದೀಪಾವಳಿಯ ಆರು ದಿನಗಳ ನಂತರ ಆಚರಿಸಲಾಗುತ್ತದೆ.ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ ಮತ್ತಿತರರು ಛಾತ್‌ ಪೂಜೆಯ ಶುಭಾಷಯಗಳನ್ನು ಕೋರಿದ್ದಾರೆ.

ಕುಸಿದ ಸೇವಂತಿ ಹೂವಿನ ಬೆಲೆ, ಸಂಕಷ್ಟದಲ್ಲಿ ಬೆಳೆಗಾರರು

ಬೆಂಗಳೂರು, ಅ.28- ಹಬ್ಬಗಳ ಸರಣಿ ಮುಗಿಯುತ್ತಿದ್ದಂತೆ ಹೂವಿನ ಬೆಲೆ ಕುಸಿತವಾಗಿದ್ದು, ಪುಷ್ಪ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ದಸರಾ, ದೀಪಾವಳಿಗೆ ಉತ್ತಮ ಬೆಲೆ ದೊರೆಯಲಿದೆ ಎಂದು ಭಾರೀ ನೀರಿಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ದೊಡ್ಡ ಆಘಾತ ತಂದಿದೆ. ಹಬ್ಬಗಳ ಸಂದರ್ಭದಲ್ಲಿ ಹೂಗಳ ಬೇಲೆ ಗಗನಕ್ಕೇರುವುದು ಸಾಮಾನ್ಯ. ಆದರೆ, ಈ ಬಾರಿಯ ದಸರಾ, ದೀಪಾವಳಿಯಲ್ಲೂ ಸಹ ಮಾರುಕಟ್ಟೆಯಲ್ಲಿ ಅಷ್ಟೇನು ಬೇಡಿಕೆ ಕಂಡುಬರಲಿಲ್ಲ.

ಹೆಚ್ಚಾಗಿ ಹೂ ಬೆಳೆಯುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ರೈತರು ಹೂ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ನಷ್ಟ ಅನುಭಸುವಂತಾಗಿದೆ. ಗುಣಮಟ್ಟದ ಸೇವಂತಿಗೆ ಮಾರುಕಟ್ಟೆಯಲ್ಲಿ ಕನಿಷ್ಟ ಅಂದ್ರೂ ಕೆಜಿಗೆ 80 ರಿಂದ 100 ರೂ.ಗೆ ಮಾರಾಟವಾದರೆ ದುರ್ಲಭ. ಹೀಗಿರುವಾಗ ಹೂ ಕಟಾವು ಮಾಡಿ, ಮಾರುಕಟ್ಟೆಗೆ ತಂದರೆ ಕೇಳವವವರಿಲ್ಲ. ಇದರಿಂದ ಕೂಲಿ ಸಾಗಾಣಿಕಾ ವೆಚ್ಚ ಕೂಡ ಹುಟ್ಟುತ್ತಿಲ್ಲ ಎಂದು ಬಹುತೇಕ ರೈತರು ಕಟಾವು ಮಾಡದೆ ಗಿಡದಲ್ಲೆ ಬಿಟ್ಟಿದ್ದಾರೆ.

ಹಬ್ಬಕ್ಕೆ ಉತ್ತಮ ಬೆಲೆ ಬರುತ್ತದೆ ಎಂದು ರೈತರು ಹೆಚ್ಚಾಗಿ ಹೂ ಬೆಳೆದಿದ್ದಾರೆ. ಆದರೆ ಅಪಾರ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂ ಬರುತ್ತಿದ್ದು, ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿದೆ.ಸಾಮಾನ್ಯವಾಗಿ ಸೇವಂತಿಗೆ ಹೂ ಗಿಡವನ್ನು ನಾಟಿ ಮಾಡಿ ಹೂ ಬಿಡಲು ಎರಡೂವರೆಯಿಂದ ಮೂರು ತಿಂಗಳು ಬೇಕು. ಈ ನಡುವೆ ಗೊಬ್ಬರ, ಔಷಧಿ ಸೇರಿ ಒಂದು ಎಕರೆಯಲ್ಲಿ ಸೇವಂತಿಗೆ ಹೂ ಬೆಳೆಯಲು 30 ರಿಂದ 40 ಸಾವಿರ ರೂ. ಖರ್ಚಾಗುತ್ತದೆ. ಆದರೆ ಬೆಲೆ ಕುಸಿತದಿಂದ ಲಾಭವಿರಲಿ, ಹಾಕಿದ ಬಂಡವಾಳ ಬಂದರೆ ಸಾಕು ಎಂದು ಹೂ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಬರೀ ಸೇವಂತಿಗೆ ಹೂವಿನ ಬೆಲೆ ಕುಸಿತವಾಗಿಲ್ಲ. ಚೆಂಡು ಹೂ, ಸುನಾಮಿ ರೋಸ್‌‍, ಮಾರಿಗೋಲ್ಡ್, ಸುಗಂಧರಾಜ, ಕಾಕಡ ಹೂವಿನ ಬೆಲೆಯೂ ಕೂಡ ಇಳಿಮುಖವಾಗಿದೆ. ಕಳೆದ ವರ್ಷ ಆಯುಧ ಪೂಜೆ, ದೀಪಾವಳಿ ಹಬ್ಬದಲ್ಲಿ ಉತ್ತಮ ಬೆಲೆಯಿಂದ ತುಸು ಲಾಭಗಳಿಸಿದ್ದ ಬೆಳೆಗಾರರಿಗೆ ಈ ಬಾರಿ ಬೆಲೆ ಕುಸಿತ ನಷ್ಟ ತಂದೊಡ್ಡಿದೆ.

ಮರಾಠಿ ನಟ ಸಚಿನ್‌ ಚಂದ್ವಾಡೆ ಆತ್ಮಹತ್ಯೆ

ಮುಂಬೈ, ಅ.28– ಮರಾಠಿ ಚಿತ್ರರಂಗದ ಯುವ ನಟ ಸಚಿನ್‌ ಚಂದ್ವಾಡೆ ಆತಹತ್ಯೆ ಮಾಡಿಕೊಂಡಿದ್ದಾರೆ. ಜನಪ್ರಿಯ ಹಿಂದಿಯ ಜಮ್ತಾರಾ 2 ನಲ್ಲಿ ಕಾಣಿಸಿಕೊಂಡಿದ್ದ ಅವರು ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಪರೋಲಾ ಪ್ರದೇಶದಲ್ಲಿರುವ ಉಂಡಿರ್ಖೇಡಾ ಗ್ರಾಮದಲ್ಲಿರುವ ತಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್‌‍ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಟುಂಬ ಸದಸ್ಯರು ಅವರನ್ನು ಧುಲೆ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ವೇಳೆ ನಿಧನರಾದರು. ಆತಹತ್ಯೆಮುನ್ನ ಚಂದ್ವಾಡೆ ಅವರು ಮುಂಬರುವ ಮರಾಠಿ ಚಿತ್ರ ಅಸುರ್ವಾನ್‌‍ ನ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಜಲ್ಗಾಂವ್‌ನ ಪರೋಲಾ ಪೊಲೀಸರು ಆಕಸಿಕ ಸಾವಿನ ಪ್ರಕರಣವನ್ನು ದಾಖಲಿಸಿದರು ಹೆಚ್ಚಿನ ತನಿಖೆಗಾಗಿ ಧುಲೆ ಪೊಲೀಸರಿಗೆ ವರ್ಗಾಯಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.ಕೇವಲ 25 ವರ್ಷದ ಚಂದ್ವಾಡೆ ನಟನೆಯ ಜೊತೆಗೆ, ಚಂದ್ವಾಡೆ ಪುಣೆಯ ಕಂಪನಿಯೊಂದರಲ್ಲಿ ಐಟಿ ವೃತ್ತಿಪರರಾಗಿದ್ದರು ಎಂದು ಹೇಳಿದರು.

ಮೊಂತಾ ಚಂಡಮಾರುತದ ಎಫೆಕ್ಟ್‌, ತಮಿಳುನಾಡಿನಲ್ಲಿ ಭಾರಿ ಮಳೆ

ಚೆನ್ನೈ, ಅ. 28 (ಪಿಟಿಐ) ಮೊಂತ ಚಂಡಮಾರುತದ ಎಫೆಕ್ಟ್‌ನಿಂದ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದೆ.ಚಂಡ ಮಾರುತ ತಮಿಳುನಾಡಿನಿಂದ ಆಂಧ್ರಪ್ರದೇಶದತ್ತ ಚಲಿಸುತ್ತಿರುವುದರಿಂದ, ಇಲ್ಲಿ ಭಾರೀ ಮಳೆಯಾಗುತ್ತಿದೆ.

ತಿರುವಳ್ಳೂರು ಜಿಲ್ಲಾ ವಿಪತ್ತು ನಿರ್ವಹಣೆಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ಇಂದು ಬೆಳಿಗ್ಗೆ 6 ಗಂಟೆಯವರೆಗೆ, ತಿರುವಲ್ಲೂರಿನ ಪೊನ್ನೇರಿ ಮತ್ತು ಅವಡಿಯಲ್ಲಿ ಕ್ರಮವಾಗಿ 72 ಮಿ.ಮೀ ಮತ್ತು 62 ಮಿ.ಮೀ ಮಳೆಯಾಗಿದೆ.

ತಿರುವಳ್ಳೂರು ಜಿಲ್ಲಾಧಿಕಾರಿ ಎಂ. ಪ್ರತಾಪ್‌ ಅವರು ಇಂದು ಶಾಲೆಗಳಿಗೆ ರಜೆ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ.ಚೆಂಗಲಪಟ್ಟು, ಚೆನ್ನೈ, ಕಾಂಚಿಪುರಂ, ರಾಣಿಪೇಟೆ, ತಿರುವಲ್ಲೂರು, ತಿರುವಣ್ಣಾಮಲೈ, ವೆಲ್ಲೂರು, ತಿರುಪತ್ತೂರು, ವಿಲ್ಲುಪುರಂ, ತೆಂಕಾಸಿ, ತಿರುನಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್‌ 29 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಆರ್‌ಎಂಸಿ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಮೊಂತಾ ಚಂಡಮಾರುತದಿಂದಾಗಿ, ಮೇಲ್ಮೈ ಗಾಳಿಯು ಗಂಟೆಗೆ 90 ರಿಂದ 100 ಕಿ.ಮೀ ವೇಗವನ್ನು ತಲುಪುವ ನಿರೀಕ್ಷೆಯಿದೆ ಮತ್ತು ಗಂಟೆಗೆ 110 ಕಿ.ಮೀ ವೇಗವನ್ನು ತಲುಪುವ ನಿರೀಕ್ಷೆಯಿದೆ ಎಂದು ಬುಲೆಟಿನ್‌ ತಿಳಿಸಿದೆ.

ಮೊಂತಾ ಎಂದರೆ ಥಾಯ್‌ ಭಾಷೆಯಲ್ಲಿ ಪರಿಮಳಯುಕ್ತ ಹೂವು.ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಆರ್‌ಎಂಸಿ ನಿರೀಕ್ಷಿಸಿದಂತೆ, ಉಪಮುಖ್ಯಮಂತ್ರಿ ಉದ್ಯನಿಧಿ ಸ್ಟಾಲಿನ್‌ ಅವರು ಇಂದು ಮುಂಜಾನೆ ಚೆನ್ನೈ ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿದರು.

ನಗರದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಸಂಚಾರ ದಟ್ಟಣೆಗೆ ಒಳಗಾಗುವ ಪ್ರದೇಶಗಳಲ್ಲಿ ಸಂಚಾರವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಅವರು ಪರಿಶೀಲಿಸಿದರು.ಚೆನ್ನೈನಲ್ಲಿ, ಮಳೆಯಿಂದಾಗಿ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನ.4 ರಿಂದ ಭಾರತದ ಬಳಕೆದಾರರಿಗೆ ಒಂದು ವರ್ಷ ChatGPT Go ಉಚಿತ

ನವದೆಹಲಿ, ಅ. 28 – ಇದೇ ನವೆಂಬರ್‌ 4 ರಿಂದ ಪ್ರಾರಂಭವಾಗುವ ಸೀಮಿತ ಸಮಯದ ಪ್ರಚಾರ ಅವಧಿಯಲ್ಲಿ ಸೈನ್‌ ಅಪ್‌ ಮಾಡುವ ಭಾರತದ ಬಳಕೆದಾರರಿಗೆ ಒಂದು ವರ್ಷದವರೆಗೆ ಉಚಿತವಾಗಿ ಚಾಟ್‌ಜಿಪಿಟಿ ಗೋ ಅನ್ನು ನೀಡುವುದಾಗಿ ಓಪನ್‌ಎಐ ಸಂಸ್ಥೆ ತಿಳಿಸಿದೆ.

ಚಾಟ್‌ಜಿಪಿಟಿ ಗೋ ಅನ್ನುವುದನ್ನು ಓಪನ್‌ ಎಐ ಇತ್ತಿಚೆಗೆ ಬಿಡುಗಡೆ ಮಾಡಿದ ಚಂದಾದಾರಿಕೆ ಶ್ರೇಣಿಯಾಗಿದ್ದು, ಇದು ಭಾರತದಲ್ಲಿ ಬಳಕೆದಾರರಿಗೆ ಹೆಚ್ಚಿದ ಸಂದೇಶ ಮಿತಿಗಳು, ಇಮೇಜ್‌ ಉತ್ಪಾದನೆ ಮತ್ತು ಫೈಲ್‌ ಅಪ್‌ಲೋಡ್‌ಗಳನ್ನು ನೀಡುತ್ತದೆ, ಈ ಮಾರುಕಟ್ಟೆ ಚಾಟ್‌ಜಿಪಿಟಿಯನ್ನು ಅದರ ಎರಡನೇ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ನವೆಂಬರ್‌ 4 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಓಪನ್‌ ಎಐನ ಡೇವ್‌ ಡೇ ಎಕ್‌್ಸಚೆಂಜ್‌ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಭಾರತದಲ್ಲಿ ಇದು ಮೊದಲನೆಯದು.ಚಾಟ್‌ಜಿಪಿಟಿ ನವೆಂಬರ್‌ 4 ರಿಂದ ಪ್ರಾರಂಭವಾಗುವ ಸೀಮಿತ ಸಮಯದ ಪ್ರಚಾರ ಅವಧಿಯಲ್ಲಿ ಸೈನ್‌ ಅಪ್‌ ಮಾಡುವ ಭಾರತದ ಎಲ್ಲಾ ಬಳಕೆದಾರರಿಗೆ ಚಾಟ್‌ಜಿಪಿಟಿ ಗೋ ಅನ್ನು ಒಂದು ಪೂರ್ಣ ವರ್ಷ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಕಂಪನಿ ತಿಳಿಸಿದೆ.

ಚಾಟ್‌ಜಿಪಿಟಿ ಗೋ ಅನ್ನು ಆಗಸ್ಟ್‌ನಲ್ಲಿ ಭಾರತದಲ್ಲಿ ಪ್ರಾರಂಭಿಸಲಾಯಿತು, ಇದು ಅತ್ಯಂತ ಸುಧಾರಿತ ವೈಶಿಷ್ಟ್ಯಗಳಿಗೆ ಹೆಚ್ಚು ಕೈಗೆಟುಕುವ ಪ್ರವೇಶವನ್ನು ಕೋರುವ ಬಳಕೆದಾರರ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ ವಿನ್ಯಾಸಗೊಳಿಸಲಾಗಿದೆ.ಪ್ರಾರಂಭವಾದ ಮೊದಲ ತಿಂಗಳಲ್ಲಿ, ಭಾರತದಲ್ಲಿ ಪಾವತಿಸಿದ ಚಂದಾದಾರರ ಸಂಖ್ಯೆ ದ್ವಿಗುಣಗೊಂಡಿದೆ.

ಈ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ, ಓಪನ್‌ಎಐ ಅಂದಿನಿಂದ ಚಾಟ್‌ಜಿಪಿಟಿ ಗೋವನ್ನು ವಿಶ್ವಾದ್ಯಂತ ಸುಮಾರು 90 ಮಾರುಕಟ್ಟೆಗಳಿಗೆ ವಿಸ್ತರಿಸಿದೆ.ಭಾರತದಲ್ಲಿ ಲಕ್ಷಾಂತರ ಜನರು ಪ್ರತಿದಿನ ಚಾಟ್‌ಜಿಪಿಟಿಯನ್ನು ಬಳಸುತ್ತಾರೆ, ಇದರಲ್ಲಿ ಓಪನ್‌ಎಐನ ಸುಧಾರಿತ ಪರಿಕರಗಳನ್ನು ಬಳಸಿಕೊಳ್ಳುತ್ತಿರುವ ಡೆವಲಪರ್‌ಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರರ ವೇಗವಾಗಿ ಬೆಳೆಯುತ್ತಿರುವ ಸಮುದಾಯವೂ ಸೇರಿದೆ.

ಈ ಪ್ರಚಾರವು ಓಪನ್‌ಎಐನ ಇಂಡಿಯಾಫಸ್ಟ್‌‍ ಬದ್ಧತೆಯ ಮುಂದುವರಿಕೆಯಾಗಿದೆ ಮತ್ತು ಇಂಡಿಯಾಎಐ ಮಿಷನ್‌ ಅನ್ನು ಬೆಂಬಲಿಸುತ್ತದೆ, ಮುಂದಿನ ವರ್ಷ ದೇಶವು ಇಂಪ್ಯಾಕ್ಟ್‌ ಶೃಂಗಸಭೆಯನ್ನು ಆಯೋಜಿಸಲು ತಯಾರಿ ನಡೆಸುತ್ತಿರುವಾಗ ಭಾರತದಲ್ಲಿ ಸುತ್ತ ಬೆಳೆಯುತ್ತಿರುವ ಆವೇಗವನ್ನು ಬಲಪಡಿಸುತ್ತದೆ ಎಂದು ಓಪನ್‌ಎಐ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಅಸ್ತಿತ್ವದಲ್ಲಿರುವ ಚಾಟ್‌ಜಿಪಿಟಿ ಗೋ ಚಂದಾದಾರರು 12 ತಿಂಗಳ ಉಚಿತ ಪ್ರಚಾರಕ್ಕೆ ಅರ್ಹರಾಗಿರುತ್ತಾರೆ.ಕೆಲವು ತಿಂಗಳ ಹಿಂದೆ ಭಾರತದಲ್ಲಿ ಚಾಟ್‌ಜಿಪಿಟಿ ಗೋವನ್ನು ಪ್ರಾರಂಭಿಸಿದಾಗಿನಿಂದ, ನಮ್ಮ ಬಳಕೆದಾರರಿಂದ ನಾವು ನೋಡಿದ ಅಳವಡಿಕೆ ಮತ್ತು ಸೃಜನಶೀಲತೆ ಸ್ಪೂರ್ತಿದಾಯಕವಾಗಿದೆ ಎಂದು ಚಾಟ್‌ಜಿಪಿಟಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ನಿಕ್‌ ಟರ್ಲಿ ಹೇಳಿದರು.

ಭಾರತದಲ್ಲಿ ನಮ್ಮ ಮೊದಲ ಡೆವ್‌ಡೇ ಎಕ್‌್ಸಚೇಂಜ್‌‍ ಈವೆಂಟ್‌ಗೆ ಮುಂಚಿತವಾಗಿ, ಭಾರತದಾದ್ಯಂತ ಹೆಚ್ಚಿನ ಜನರು ಸುಧಾರಿತ ಅನ್ನು ಸುಲಭವಾಗಿ ಪ್ರವೇಶಿಸಲು ಮತ್ತು ಪ್ರಯೋಜನ ಪಡೆಯಲು ಸಹಾಯ ಮಾಡಲು ನಾವು ಒಂದು ವರ್ಷದವರೆಗೆ ಚಾಟ್‌ಜಿಪಿಟಿ ಗೋವನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರೆದುರೇ ಯುವಕನ ಭೀಕರ ಹತ್ಯೆ

ಬೇಲೂರು,ಅ.28-ಕ್ಷುಲ್ಲಕ ವಿಚಾರಕ್ಕೆ ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರ ಸಮುಖದಲ್ಲೆ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಗುರಪ್ಪಗೌಡರ ಬೀದಿಯ ನಿವಾಸಿ ಗಿರೀಶ್‌ (28) ಕೊಲೆಯಾದ ಯುವಕ.

ಬಲ್ಲ ಮೂಲಗಳ ಪ್ರಕಾರ ಕೆಲವರ ನಡುವೆ ಯುವತಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.ಈ ಸಂದರ್ಭದಲ್ಲಿ ಎಸ್‌‍.ಸೂರಾಪುರ ಗ್ರಾಮದ ಶ್ರೀನಿವಾಸನನ್ನುಅವಾಚ್ಯ ಶಬ್ದಗಳಿಂದ ಗಿರೀಶ ನಿಂದಿಸಿ ಹೊಡೆದಿದ್ದನೆಂಬ ಮಾತು ಕೇಳಿ ಬಂದಿದೆ.

ನಿನ್ನೆ ಬೆಳಗ್ಗೆ ಶ್ರೀನಿವಾಸ ಬೇಲೂರಿಗೆ ಬಂದ ಸಂದರ್ಭದಲ್ಲೂ ಗಿರೀಶ್‌ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ರೊಚ್ಚಿಗೆದ್ದ ಶ್ರೀನಿವಾಸ್‌‍ಅಲಿಯಾಸ್‌‍ ಕೋಳಿ ಸೀನ ಬಸ್‌‍ ನಿಲ್ದಾಣದ ಶೌಚಗೃಹಕ್ಕೆ ಗಿರೀಶ್‌ ಹೋಗಿರುವುದನ್ನು ಗಮನಿಸಿ ಆತ ಬರುವುದನ್ನೇ ಕಾದು ನಿಂತು ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರ ಸಮುಖದಲ್ಲೆ ಮಚ್ಚಿನಿಂದಕೊಚ್ಚಿ ಬರ್ಬರವಾಗಿ ಆತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದಗಿರೀಶ್‌ನನ್ನುಸ್ಥಳೀಯರು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಮಹಮದ್‌ ಸುಜೀತಾ ಹಾಗೂ ಇನ್‌್ಸಪೆಕ್ಟರ್‌ ರೇವಣ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಲೂರು ಪೊಲೀಸ್‌‍ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಆರೋಪಿಯ ಜಾಡುಹಿಡಿದು ಬಂಧಿಸಿ ಕ್ರಮಕೈಗೊಂಡಿದ್ದಾರೆ.

ದೊಡ್ಡಬಳ್ಳಾಪುರ : ಅಪಘಾತದಲ್ಲಿ ಇಬ್ಬರು ಯುವಕರ ಸಾವು

ದೊಡ್ಡಬಳ್ಳಾಪುರ, ಅ.28- ತಾಲೂಕಿನ ರಾಮಯ್ಯನಪಾಳ್ಯದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಮೃತರನ್ನು ಚಿಕ್ಕತಿಮನಹಳ್ಳಿ ಗ್ರಾಮದ ನಂದನ್‌ಕುಮಾರ್‌ (22), ರವಿಕುಮಾರ್‌ (24) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರೂ ಕೆಲಸದ ನಿಮಿತ್ತ ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ವೇಳೆ, ರಾಮಯ್ಯನಪಾಳ್ಯದ ಬಳಿ ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ. ಈ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಆಟೋವೊಂದು ಕೆಳಗೆ ಬಿದ್ದಿದ್ದ ಇವರ ಮೇಲೆ ಹರಿದು ಈ ಘಟನೆ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರೆ, ಮತ್ತೊಬ್ಬ ವ್ಯಕ್ತಿ ಗಜೇಂದ್ರ ಯಾದವ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.