Home Blog Page 21

ಸ್ಪೀಕರ್‌ ಖಾದರ್‌ ವಿರುದ್ಧ ಭ್ರಷ್ಟಾಚಾರ ಆರೋಪ, ರಾಜ್ಯಪಾಲರಿಗೆ ದೂರು

ಬೆಂಗಳೂರು,ಅ.28– ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇತ್ತೀಚೆಗೆ ಖರೀದಿ ಮಾಡಿರುವ ಸಾಮಗ್ರಿಗಳ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ.

ಯು.ಟಿ.ಖಾದರ್‌ ಇತ್ತೀಚೆಗೆ ಲೂಟಿ ಖಾದರ್‌ ಆಗಿದ್ದಾರೆ. ಅವರ ಘನತೆಗೆ, ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿಯೊಂದು ನಡವಳಿಕೆಯೂ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದ್ದು, ಇದರ ಬಗ್ಗೆ ತನಿಖೆಯ ಅಗತ್ಯವಿದೆ. ವಿಧಾನಸಭೆಯ ಇತಿಹಾಸದಲ್ಲೇ ಸ್ಪೀಕರ್‌ ಮೇಲೆ ಇಂಥ ಆರೋಪಗಳು ಮೊದಲ ಬಾರಿಗೆ ಬಂದಿವೆ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಗೌರವ ಇದೆ. ಆದರೆ ಖಾದರ್‌ ಅವರು ತಮ ಪೀಠದ ಗೌರವವನ್ನು ಕಾಪಾಡುತ್ತಿಲ್ಲ, ಅವರು ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದು ಹಲವು ಶಾಸಕರ ಅಭಿಮತವೂ ಹೌದು! ಇದಲ್ಲದೆ ಅವರ ಆಡಳಿತ ಸುಧಾರಣೆ ಹೆಸರಿನಲ್ಲಿ ಮಾಡುತ್ತಿರುವ ಕಾರ್ಯವೈಖರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ವಿಧಾನಸೌಧದ ಸಭಾಂಗಣದ ಬಾಗಿಲಿಗೆ ರೋಸ್‌‍ವುಡ್‌ ಹಾಕಿದ್ದು, ಹೊಸ ಟಿವಿ ಖರೀದಿ, ಶಾಸಕರ ಮಸಾಜ್‌ ಛೇರ್‌, ಗಂಡಬೇರುಂಢ ಗಡಿಯಾರ, ಊಟ ಉಪಹಾರ.. ಹೀಗೆ ಹಲವು ವಿಚಾರಗಳು ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡಿವೆ ಎಂದರು. ಸ್ವಜನ ಪಕ್ಷಪಾತದ ಆರೋಪ ಅವರ ಮೇಲಿದೆ. ಅವರು ಏನೇ ಮಾಡಿದರೂ ಅದರೊಳಗೆ ಇನ್ನೇನೋ ಇದೆ ಎಂಬ ಅನುಮಾನ ಬರುವಂತೆ ಮಾಡಿದೆ. ಶಾಸಕರ ಭವನದ ಶಾಸಕ ಕೊಠಡಿಗೆ ಹಾಕಿದ ಸಾರ್ಟ್‌ ಡೋರ್‌ ಲಾಕ್‌, ಸೇಫ್ಟೀಲಾಕರ್‌ ಅಳವಡಿಕೆಗೆ ಮಾಡಿರುವ ವೆಚ್ಚವೂ ಅನುಮಾನಾಸ್ಪದವೇ ಎಂದು ಹೇಳಿದರು.

7-8 ಸಾವಿರ ರೂ.ಗಳಿಗೆ ಸಿಗುವ ಸಾಮಾಗ್ರಿಗಳನ್ನು 30-40 ಸಾವಿರ ಬಿಲ್‌ ಮಾಡಿಸಿದ್ದಾರೆ. ಇವೆಲ್ಲವೂ ಸ್ಪೀಕರ್‌ ಮೇಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಗಳಾಗಿವೆ ಎಂದು ಆರೋಪಿಸಿದರು.ಸ್ಪೀಕರ್‌ ವಿದೇಶಿ ಅಧ್ಯಯನ ಪ್ರವಾಸದ ವಿಚಾರ ಬಹಿರಂಗವಾಗಬೇಕು. ವಿಧಾನಸೌಧಕ್ಕೆ, ಅವರ ಕಚೇರಿಗೆ ಮಾಡಿದ ಪೀಠೋಪಕರಣ, ಸಿಬ್ಬಂದಿ ನೇಮಕ ವಿಚಾರದಲ್ಲೂ ಅಕ್ರಮದ ವಾಸನೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇದು ಖಾದರ್‌ ಮೇಲಿನ ವೈಯುಕ್ತಿಕ ದ್ವೇಷದಿಂದ ಮಾಡುತ್ತಿರುವ ಆರೋಪವಲ್ಲ. ಇದು ಪೀಠದ ಗೌರವದ ಕಾರಣಕ್ಕೆ ಈ ವಿಚಾರವನ್ನು ಜನರ ಮುಂದಿಡುತ್ತಿದ್ದೇನೆ. ಈ ಕಳಂಕದ ಹಿನ್ನೆಲೆಯಲ್ಲಿ ಈ ಕುರಿತು ನ್ಯಾಯಾಧೀಶರಿಂದ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು.ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರೋತ್ಸಾಹ ಮಾಡಿದ್ದಾರೆ ಎಂಬ ಆರೋಪವಿದೆ.

ಇದಕ್ಕೆ ಅವರು ಸ್ಪಷ್ಟನೆ ನೀಡಬೇಕು. ಹಾಗೆಯೇ ಈ ಎಲ್ಲ ಕೆಲಸಗಳಿಗೂ 4ಜಿ ವಿನಾಯ್ತಿ ತೆಗೆದುಕೊಂಡಿದ್ದಾರೆ. ಅಂತಹ ತುರ್ತಿನ ಕಾರ್ಯ ಇಲ್ಲೇನಿದೆ. ರಾಜ್ಯ ಸಂಕಷ್ಟದಲ್ಲಿ ಇರುವಾಗ ಈ ಬದಲಾವಣೆ ಸೌಲಭ್ಯ ಒದಗಿಸುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಮಾಡಿದರು.ಸ್ಪೀಕರ್‌ ಸ್ಥಾನವನ್ನ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ವ್ಯಾಪ್ತಿಗೆ ತರಬೇಕು ಎಂಬ ಆಗ್ರಹ ಇದೆ. ಇದಕ್ಕೆ ನನ್ನ ಸಹಮತವೂ ಇದೆ. ಆ ಮೂಲಕ ಈ ವ್ಯವಸ್ಥೆಯು ಪಾರದರ್ಶಕತೆ ಕಾಣುವಂತಾಗಲಿ ಎಂದು ಹೇಳಿದರು.

ಸಭಾದ್ಯಕ್ಷರ ಭ್ರಷ್ಟಾಚಾರದ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ಪತ್ರ ಮೂಲಕ ತರುತ್ತೇನೆ. ಯು ಟಿ ಖಾದರ್‌ ಈಗ ಲೂಟಿ ಖಾದರ್‌ ಎಂಬ ಹಂತಕ್ಕೆ ತಲುಪಿದ್ದಾರೆ ಎಂದು ಜನರೇ ಆರೋಪ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಖಾದರ್‌ ಉತ್ತರ ಕೊಡಬೇಕು ಎಂದು ಒತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ ಸದಸ್ಯೆ ಭಾರತೀ ಶೆಟ್ಟಿ, ಮಾಜಿ ಸದಸ್ಯ ಅರುಣ್‌ ಶಹಾಪೂರ ಉಪಸ್ಥಿತರಿದ್ದರು.

ಬೆಂಗಳೂರು : ತಾಯಿಯ ನಿಂದಿಸಿದ್ದಕ್ಕೆ ಶಾಲಾ ಬಸ್‌‍ ಚಾಲಕನ ಕೊಲೆ

ಬೆಂಗಳೂರು,ಅ.28- ತಾಯಿಗೆ ಕೆಟ್ಟಪದಗಳಿಂದ ನಿಂದಿಸಿದನೆಂಬ ಕಾರಣಕ್ಕೆ ಬೈಕ್‌ನ ಸ್ಟೀಲ್‌ ರಾಡ್‌ನಿಂದ ಶಾಲಾ ಬಸ್‌‍ ಚಾಲಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಅವಿನಾಶ್‌ (36) ಮೃತಪಟ್ಟ ವ್ಯಕ್ತಿ. ಇವರು ವೃತ್ತಿಯಲ್ಲಿ ಶಾಲಾ ಬಸ್‌‍ ಚಾಲಕ. ಉಲ್ಲಾಳ ಉಪನಗರದಲ್ಲಿ ಕಾರ್ತಿಕ್‌ ಮನೆ ಇದೆ. ಇವರ ಮನೆ ಪಕ್ಕದಲ್ಲಿ ಅವಿನಾಶ್‌ ರೂಂ ಮಾಡಿಕೊಂಡು ವಾಸವಾಗಿದ್ದರು. ಕಾರ್ತಿಕ್‌ ಮನೆಯಲ್ಲೇ ಅವಿನಾಶ್‌ ಊಟ, ತಿಂಡಿ ಮಾಡುತ್ತಿದ್ದನು.

ನಿನ್ನೆ ರಾತ್ರಿ 10.30 ರ ಸುಮಾ ರಿನಲ್ಲಿ ಅವಿನಾಶ್‌ ಮದ್ಯಪಾನ ಸೇವಿಸಿ ಕಾರ್ತಿಕ್‌ ಮನೆಗೆ ಹೋಗಿ ಅವರ ತಾಯಿ ಸುಮಂಗಲಾ ಅವರಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಆ ವೇಳೆ ಕಾರ್ತಿಕ್‌ ಮನೆಯಲ್ಲಿ ಇರಲಿಲ್ಲ.

ಈ ವಿಷಯವನ್ನು ಸುಮಂಗಲಾ ಅವರು ಕರೆ ಮಾಡಿ ಮಗ ಕಾರ್ತಿಕ್‌ಗೆ ತಿಳಿಸಿದ್ದಾರೆ. ತಕ್ಷಣ ಕಾರ್ತಿಕ್‌ ಮನೆಗೆ ಬಂದಿದ್ದಾನೆ. ಆ ವೇಳೆ ತಾಯಿ ಮಗ ಇಬ್ಬರು ಸೇರಿಕೊಂಡು ಅವಿನಾಶ್‌ ಜೊತೆ ಜಗಳವಾಡಿ ಆತನಿಗೆ ಬೈಕ್‌ ಮುಂಭಾಗದ ಸ್ಟೀಲ್‌ ರಾಡ್‌ನಿಂದ ತಲೆಗೆ ಹೊಡಿದ್ದಿದ್ದರಿಂದ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿ ಕಾರ್ತಿಕ್‌ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ನಕಲಿ ಡಿಡಿಗಳ ಹೆಸರಲ್ಲಿ ‘ಗ್ರೇಟರ್‌’ ರಾಬರಿ, ಜಿಬಿಎಯಲ್ಲಿ ನಡೆಯುತ್ತಿದೆ ಭಾರೀ ವಂಚನೆ

ಬೆಂಗಳೂರು, ಅ.25- ಬಿಬಿಎಂಪಿ ಹೋಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ನಕಲಿ ಡಿಡಿಗಳ ಹಾವಳಿ ವಿಪರಿತವಾಗಿದೆ.ಕೆಲವು ಕಿಡಿಗೇಡಿಗಳು ಅನುದಾನದ ಹೆಸರಿನಲ್ಲಿ ನಾಗರಿಕರನ್ನು ವಂಚಿಸಿ ಅವರಿಗೆ ನಕಲಿ ಡಿಡಿ ವಿತರಿಸುತ್ತ ಭಾರಿ ವಂಚನೆ ಮಾಡುತ್ತಿರುವುದು ಹೆಚ್ಚಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿರುವ ಐದು ಪಾಲಿಕೆಗಳಿಂದ ಅನುದಾನ ಕೊಡಿಸ್ತೀವಿ ಅಂತ ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್‌ ಒಂದು ನಗರದಲ್ಲಿ ಸದ್ದಿಲ್ಲದೆ ಕಾರ್ಯಚರಣೆ ನಡೆಸುತ್ತಿರುವ ಬಗ್ಗೆ ಗೊತ್ತಾಗಿದೆ.ಪಾಲಿಕೆಯಿಂದ 3 ಲಕ್ಷ ರೂ.ಅನುದಾನ ಕೊಡಿಸ್ತಿವಿ ಎಂದು ಸಾರ್ವಜನಿಕರಿಂದ 50 ಸಾವಿರ ಲಂಚ ವಸೂಲಿ ಮಾಡಿ ನಂತರ ಅನುದಾನ ಬಂದಿದೆ ಎಂದು 3 ಲಕ್ಷ ರೂ.ಗಳ ನಕಲಿ ಡಿಡಿ ನೀಡಲಾಗುತ್ತಿದೆ.

ನೀವು ಬರೀ ಐವತ್ತು ಸಾವಿರ ನೀಡಿ ನಾವು ನಿಮಗೆ ಪಾಲಿಕೆಯಿಂದ ಮೂರು ಲಕ್ಷ ರೂ.ಗಳ ಡಿಡಿ ನೀಡ್ತಿವಿ. ಆ ಹಣವನ್ನು ಮರು ಪಾವತಿಸುವಂತಿಲ್ಲ ಎಂದು ವಂಚನೆ ನಡೆಸಲಾಗುತ್ತಿದೆ. ಪಾಲಿಕೆ ನೀಡುವಂತಹ ಡಿಡಿಗಳ ಮಾದರಿಯಲ್ಲಿ ಕಿಡಿಗೇಡಿಗಳು ನಕಲಿ ಡಿಡಿ ತಯಾರಿಸಿ ವಂಚಿಸುತ್ತಿದ್ದಾರೆ. ಅವರು ನೀಡುವ ಡಿಡಿಯಲ್ಲಿ ಪಾಲಿಕೆ ಆಯುಕ್ತರಗಳ ಸಹಿಯೂ ಇರುತ್ತದೆ. ಆದರೆ, ಅದು ನಕಲಿ ಸಹಿ ಎನ್ನುವುದು ಡಿಡಿ ಪಡೆದು ಬ್ಯಾಂಕ್‌ಗೆ ಹೋದ ನಂತರ ಮಾತ್ರ ಗೊತ್ತಾಗುತ್ತಿದೆ.

ಪಾಲಿಕೆ ಅಯುಕ್ತರ ನಕಲಿ ಸಹಿ ಮಾತ್ರವಲ್ಲ, ಅಕೌಂಟ್‌ ಸೆಕ್ಷನ್‌ ಅಧಿಕಾರಿಗಳ ಸಹಿ ಕೂಡ ನಕಲಿಯಾಗಿರುತ್ತದೆ. ಇದೆ ರೀತಿಯಲ್ಲಿ ಹಲವಾರು ಮಂದಿ ಅಮಾಯಕರಿಗೆ ನಕಲಿ ಡಿಡಿ ವಿತರಣೆ ಮಾಡಿ ವಂಚಿಸಲಾಗಿದೆ. ಡಿಡಿ ಪಡೆದು ಬ್ಯಾಂಕ್‌ಗೆ ಹಾಕಿದಾಗ ಅದು ಬೌನ್ಸ್ ಆಗುತ್ತದೆ. ಅಯ್ಯೋ ಇದೆನಾಯ್ತು ಎಂದು ಪಾಲಿಕೆ ಬಂದು ವಿಚಾರಿಸಿದಾಗ ರೀ ಅದು ನಕಲಿ ಡಿಡಿ ರೀ ಅಷ್ಟು ಗೊತ್ತಾಗಲ್ವ ಎಂದು ಅಧಿಕಾರಿಗಳು ವಾಪಸ್‌‍ ಕಳುಹಿಸುತ್ತಿದ್ದಾರೆ.

ನಮ್ಮಲ್ಲಿ ಯಾವುದೇ ರೀತಿಯ ಹಣದ ರೂಪದಲ್ಲಿ ಅನುದಾನ ಕೊಡಲ್ಲ ಅಂತ ಅಧಿಕಾರಿಗಳು ಹೇಳಿ ಹೇಳಿ ಸಾಕಾಗಿದೆ. ಇತ್ತ ಹಣ ಕೊಟ್ಟು ತಗ್ಲಕೊಂಡ ಹತ್ತರೂ ಜನ..ಅಗದ್ರೆ ..ಬೋಗಸ್‌‍ ಡಿಡಿ ನೀಡಿ ಜನರಿಗೆ ವಂಚನೆ ಮಾಡ್ತಿರೋದು ಯಾರು..? ಜಿಬಿಎ ಅಧಿಕಾರಿಗಳಿಗೆ ಈ ವಿಷಯ ಗೋತ್ತಿಲ್ವ..? ಎಂದು ಪ್ರಶ್ನಿಸುತ್ತಿದ್ದಾರೆ.

ಇಷ್ಟೆಲ್ಲಾ ಆದರೂ ಜಿಬಿಎ ಅಧಿಕಾರಿಗಳು ಮಾತ್ರ ನಕಲಿ ಡಿಡಿ ವಿಷಯವನ್ನು ಪೊಲೀಸರ ಗಮನಕ್ಕೆ ತಾರದಿರುವುದು ಮತ್ತಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಈ ಕುರಿತಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಗತ್ಯ ಕ್ರಮ ಕೈಗೊಂಡು ಅಮಾಯಕ ಜನರನ್ನು ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌‍ನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ

ಬೆಂಗಳೂರು,ಅ.28- ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌‍ನಲ್ಲಿ ತರುತ್ತಿದ್ದ ರೂ.1 ಕೋಟಿ ನಗದನ್ನು ಉತ್ತರಕನ್ನಡ ಜಿಲ್ಲೆಯ ಚಿತ್ತಾಕುಲ ಠಾಣೆ ಪೊಲೀಸರು ಜಪ್ತಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜಸ್ಥಾನ ಮೂಲದ ಕಲ್ಪೇಶ್‌ ಮತ್ತು ಬಮರರಾವ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದು, ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌‍ನಲ್ಲಿ 1 ಕೋಟಿ ಹಣವಿಟ್ಟುಕೊಂಡು ರಾತ್ರಿ ಪ್ರಯಾಣಿಸುತ್ತಿದ್ದರು. ಖಾಸಗಿ ಬಸ್‌‍ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರವಾರ-ಗೋವಾ ಗಡಿಯ ಮಾಜಾಳಿ ಚೆಕ್‌ಪೋಸ್ಟ್‌ ಬಳಿ ಈ ಬಸ್‌‍ ಬರುವುದನ್ನೇ ಕಾಯುತ್ತಿದ್ದರು.

ರಾತ್ರಿ 9 ಗಂಟೆ ಸುಮಾರಿಗೆ ಚೆಕ್‌ಪೋಸ್ಟ್‌ ಬಳಿ ಈ ಬಸ್‌‍ ಬರುತ್ತಿದ್ದಂತೆ ಪೊಲೀಸರು ತಡೆದು ನಿಲ್ಲಿಸಿ ಬಸ್‌‍ ಪರಿಶೀಲಿಸಿದಾಗ ಸೀಟ್‌ವೊಂದರಲ್ಲಿ ಅಕ್ಕಪಕ್ಕ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಇಟ್ಟುಕೊಂಡಿದ್ದ 2 ಲೆದರ್‌ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ನಗದು ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ಗೋವಾದಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆ ಹಣಕ್ಕೆ ಯಾವುದೇ ದಾಖಲೆಗಳಿರಲಿಲ್ಲ.

ಎರಡು ಲೆದರ್‌ ಬ್ಯಾಗ್‌ಗಳಲ್ಲಿ 500 ರೂ ಮುಖಬೆಲೆಯ 1 ಕೋಟಿ ಹಣದ ಬಗ್ಗೆ ವಿಚಾರಿಸಿದಾಗ ಆ ಇಬ್ಬರು ಪ್ರಯಾಣಿಕರು ಯಾವುದೇ ದಾಖಲೆ ಕೊಟ್ಟಿಲ್ಲ.ಹಣದ ಬ್ಯಾಗ್‌ ಸಮೇತ ಆ ಇಬ್ಬರನ್ನು ವಶಕ್ಕೆ ಪಡೆದು ಚಿತ್ತಾಕುಲ ಪೊಲೀಸ್‌‍ ಠಾಣೆಗೆ ಕರೆದೊಯ್ದು ಎನ್‌ಸಿಆರ್‌ದಾಖಲಿಸಿಕೊಂಡು ಹಣದ ಮೂಲದ ಬಗ್ಗೆ ವಿಚಾರಿಸಿದಾಗ ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಹೇಳಿದ್ದಾರೆ.

ಈ ಹಣ ನೀಡಿದವರಿಗೆ ನೋಟೀಸ್‌‍ ಕೊಟ್ಟು ಸೂಕ್ತ ದಾಖಲೆ ಕೊಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ದಾಖಲೆ ನೀಡಿದರೆ ಹಣ ಹಿಂದಿರುಗಿಸಲಿದ್ದಾರೆ. ಇಲ್ಲದಿದ್ದರೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ. ಈ ಹಣ ತೆರಿಗೆ ವಂಚಿಸಲು ಅಥವಾ ಹವಾಲಾ ಹಣವೋ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟೆಡ್ಡಿಬಾಯ್‌ ಪ್ರಿಯಾಂಕ್‌ ಖರ್ಗೆ : ಬಿಜೆಪಿ ಲೇವಡಿ

ದಿಸ್‌‍ಪುರ್‌, ಅ. 28– ಸೆಮಿಕಂಡಕ್ಟರ್‌ ಕೈಗಾರಿಕೆಗಳ ಕುರಿತ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಚಿದ್ದಾರೆ ಎಂದ ಕರ್ನಾಟಕ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಯನ್ನು ಅಸ್ಸಾಂ ಬಿಜೆಪಿ ಘಟಕ ಟೆಡ್ಡಿಬಾಯ್‌ ಎಂದು ಕರೆದಿದೆ.ಪ್ರಿಯಾಂಕ್‌ ಖರ್ಗೆ ಎಕ್‌್ಸ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಬಿಜೆಪಿ, ಸುದೀರ್ಘವಾದ ಪ್ರಬಂಧ ಬರೆದ ಕೂಡಲೇ ಯಾರೂ ಸೆಮಿಕಂಡಕ್ಟರ್‌ ತಜ್ಞ ಆಗುವುದಿಲ್ಲ. ಮೊದಲು, ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ನಿಮ್ಮ ಕಲಬುರಗಿ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಿ ಎಂದು ಚಾಟಿ ಬೀಸಿದೆ.

ಹಲೋ ಟೆಡ್ಡಿ ಬಾಯ್‌‍, ಎಕ್ಸ್ ನಲ್ಲಿ ಸುದೀರ್ಘ ಪ್ರಬಂಧ ಬರೆಯುವುದರಿಂದ ನೀವು ಸೆಮಿಕಂಡಕ್ಟರ್‌ ತಜ್ಞ ಆಗಲಾರಿರಿ. ಅಸ್ಸಾಂ ಬಗ್ಗೆ ಉಪನ್ಯಾಸ ನೀಡುವ ಬದಲು ಆತ್ಮವಿಮರ್ಶೆ ಮಾಡಿಕೊಳ್ಳಿ. ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ನಿಮ್ಮ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ನಿಮ್ಮ ಟ್ಯಾಲೆಂಟ್‌ ಟ್ಯಾಂಕ್‌‍ ಬಗ್ಗೆ ತುಂಬಾನೇ ಹೇಳ್ತೀರಾ, ಅಲ್ವಾ? ಎಂದು ಅಸ್ಸಾಂ ಬಿಜೆಪಿ ಎಕ್‌್ಸ ಸಂದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕಕ್ಕೆ ಬರಬೇಕಿರುವ ಸೆಮಿಕಂಡಕ್ಟರ್‌ ಕೈಗಾರಿಕೆಗಳ ಹೂಡಿಕೆಗಳನ್ನು ಕೇಂದ್ರ ಸರ್ಕಾರ ಅಸ್ಸಾಂ ಮತ್ತು ಗುಜರಾತ್‌ ರಾಜ್ಯಗಳಿಗೆ ತಿರುಗಿಸುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದರು. ಅಲ್ಲದೆ, ಸೆಮಿಕಂಡಕ್ಟರ್‌ ಕೈಗಾರಿಕೆಗಳು ವಾಸ್ತವದಲ್ಲಿ ಬಯಸಿರೋದು ಬೆಂಗಳೂರನ್ನು. ಆದರೆ, ಅಸ್ಸಾಂ ಮತ್ತು ಗುಜರಾತ್‌ಗೆ ಏಕೆ ಹೋಗುತ್ತಿವೆ? ಅಲ್ಲಿ ಪ್ರತಿಭೆಗಳು ಇವೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು.

ಇದು ಅಸ್ಸಾಂನ ಯುವಕರಿಗೆ ಮಾಡಿರುವ ಅವಮಾನ ಎಂದು ಹೇಳಿದ್ದ ಹಿಮಂತ ಬಿಸ್ವ ಶರ್ಮಾ, ಪ್ರಿಯಾಂಕ್‌ ಖರ್ಗೆ ಫಸ್ಟ್‌ ಕ್ಲಾಸ್‌‍ ಈಡಿಯಟ್‌‍ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಿಯಾಂಕ್‌ ಖರ್ಗೆ ಎಕ್ಸ್ ತಾಣದಲ್ಲಿ ಸೆಮಿಕಂಡಕ್ಟರ್‌ ಬಗ್ಗೆ ಹಾಗೂ ಅಸ್ಸಾಂ ಕುರಿತು ಸುದೀರ್ಘ ಬರಹ ಪ್ರಕಟಿಸಿದ್ದರು.

ಇಕರ್ನಾಟಕದ ಐಟಿ ಸಚಿವರಿಗೆ ಅಸ್ಸಾಂ ಸಿಎಂ ಕೌಂಟರ್‌ಹಿಮಂತ ಬಿಸ್ವ ಶರ್ಮಾ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಉಲ್ಲೇಖಿಸಿರುವ ಪ್ರಿಯಾಂಕ್‌ ಖರ್ಗೆ, ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಸುಮಾರು ಒಂದು ದಶಕದ ಬಿಜೆಪಿ ಆಡಳಿತದ ನಂತರವೂ ಅಸ್ಸಾಂ ಇಂದು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಂತಹ ನಿರ್ಣಾಯಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಅಸ್ಸಾಂ ಬಿಜೆಪಿ ತಿರುಗೇಟು ನೀಡಿದೆ.

ಶಿಕ್ಷಕರಿಗೆ ಮೊದಲು ಸಂಬಳ ಕೊಡಿ : ಸರ್ಕಾರಕ್ಕೆ ಆರ್‌.ಅಶೋಕ್‌ ಒತ್ತಾಯ

ಬೆಂಗಳೂರು,ಅ.28- ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಬಹುನಿರಿಕ್ಷೀತ ಟನಲ್‌ ರೋಡ್‌ ನಿರ್ಮಾಣ ಮಾಡುವ ಬದಲು ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ, ಸುರಂಗ ರಸ್ತೆ ಮಾಡುತ್ತೀನಿ, ಸ್ಕೈಡೆಕ್‌ ಮಾಡ್ತೀನಿ, ಬ್ರ್ಯಾಂಡ್‌ ಬೆಂಗಳೂರು ಮಾಡ್ತೀನಿ, ಜಿಬಿಎ ಮಾಡ್ತೀನಿ ಎಂದು ಬರೀ ಓಳು ಬಿಟ್ಟು ಕನ್ನಡಿಗರಿಗೆ ಚೊಂಬು ಕೊಟ್ಟಿದ್ದೇ ನಿಮ ಸಾಧನೆ ಎಂದು ವಾಗ್ದಳಿ ನಡೆಸಿದ್ದಾರೆ.

ನಿಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು ಕಳೆದ 4 ತಿಂಗಳಿಂದ ಸಂಬಳವಿಲ್ಲದೆ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಶಿಕ್ಷರರ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದ್ದಾರೆ.

ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್‌ ಬಲಗೈ ಭಂಟನ ಬಂಧನ

ವಾಷಿಂಗ್ಟನ್‌, ಅ.28- ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಸಕ್ರಿಯ ಸದಸ್ಯ ಜಗದೀಪ್‌ಸಿಂಗ್‌ ಅಲಿಯಾಸ್‌‍ ಜಗ್ಗಾ ಅಮೆರಿಕದಲ್ಲಿ ಬಂಧನಕ್ಕೊಳಗಾಗಿದ್ದಾನೆ.ರೋಹಿತ್‌ ಗೋದಾರ ಗ್ಯಾಂಗ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಜಗ್ಗಾ ಕಳೆದ ಹಲವಾರು ವರ್ಷಗಳಿಂದ ತಲೆಮರೆ ಸಿಕೊಂಡಿದ್ದ.

ರಾಜಸ್ಥಾನ ಪೊಲೀಸರ ಪ್ರಕಾರ, ಈಗ ಅವನನ್ನು ಭಾರತಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಮೂಲಗಳ ಪ್ರಕಾರ, ಭಾರತದಿಂದ ಪಲಾಯನ ಮಾಡಿ ವಿದೇಶದಿಂದ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ ಬಿಷ್ಣೋಯ್‌ ಜಾಲದ ದರೋಡೆಕೋರರ ಮೇಲೆ ಸಂಸ್ಥೆ ವ್ಯಾಪಕ ದಾಳಿ ನಡೆಸುತ್ತಿದೆ.

ಪಂಜಾಬ್‌ ಮತ್ತು ರಾಜಸ್ಥಾನದಲ್ಲಿ ಕೊಲೆ, ಕೊಲೆಯತ್ನ ಮತ್ತು ಸುಲಿಗೆ ಸೇರಿದಂತೆ ಹತ್ತುಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್‌ ಪ್ರಕರಣಗಳಲ್ಲಿ ಜಗದೀಪ್‌ ಸಿಂಗ್‌ ಬೇಕಾಗಿದ್ದಾರೆ. ಅವರನ್ನು ಬಹು ನ್ಯಾಯಾಲಯಗಳು ಘೋಷಿತ ಅಪರಾಧಿ ಎಂದು ಘೋಷಿಸಿವೆ. ರಾಜಸ್ಥಾನದಲ್ಲಿ, ಜೋಧ್‌ಪುರದ ಪ್ರತಾಪ್‌ ನಗರ ಮತ್ತು ಸರ್ದಾರ್‌ಪುರ ಪೊಲೀಸ್‌‍ ಠಾಣೆಗಳಲ್ಲಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಮತ್ತು ಬಂಧನ ವಾರಂಟ್‌ಗಳನ್ನು ಹೊರಡಿಸಲಾಗಿತ್ತು.

ಪೊಲೀಸ್‌‍ ಮೂಲಗಳು ತಿಳಿಸಿರುವ ಪ್ರಕಾರ, ಜಗ್ಗಾ ದುಬೈ ಮತ್ತು ಅಮೆರಿಕದಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಬಿಷ್ಣೋಯ್‌‍-ಗೋದಾರ ಜಾಲಕ್ಕೆ ಹಣಕಾಸು ಮತ್ತು ವ್ಯವಸ್ಥಾಪನಾ ಬೆಂಬಲವನ್ನು ನಿರ್ವಹಿಸುತ್ತಿದ್ದ. ಎಜಿಟಿಎಫ್‌ ತಂಡವು ನಿರಂತರ ಕಣ್ಗಾವಲು ಮತ್ತು ತಾಂತ್ರಿಕ ಮಾಹಿತಿಯ ಮೂಲಕ ಆತನ ಚಟುವಟಿಕೆಗಳನ್ನು ಪತ್ತೆಹಚ್ಚುತ್ತಿತ್ತು.

ಜಗ್ಗಾ ಅವರ ಕ್ರಿಮಿನಲ್‌ ದಾಖಲೆಯಲ್ಲಿ 2017 ರ ಪ್ರತಾಪ್‌ ನಗರ ಗುಂಡಿನ ದಾಳಿ ಘಟನೆಯಲ್ಲಿ ಡಾ. ಸುನಿಲ್‌ ಚಚ್ಡಾ ಅವರೊಂದಿಗೆ ಮತ್ತು ಜೋಧ್‌ಪುರದ ಸರ್ದಾರ್ಪುರ ಪ್ರದೇಶದಲ್ಲಿ ವಾಸುದೇವ್‌ ಇಸ್ರಾನಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಜಾಮೀನು ಪಡೆದ ನಂತರ, ಅವರು ತಮ್ಮ ಪಾಸ್‌‍ಪೋರ್ಟ್‌ ಬಳಸಿ ಭಾರತದಿಂದ ಪಲಾಯನ ಮಾಡಿ, ದುಬೈ ತಲುಪಿದರು ಮತ್ತು ನಂತರ ಸುಮಾರು ಮೂರು ವರ್ಷಗಳ ಹಿಂದೆ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದರು ಎಂದು ವರದಿಯಾಗಿದೆ.

ಅಲ್‌ಖೈದಾ ಜೊತೆ ಲಿಂಕ್ ಹೊಂದಿದ್ದ ಟೆಕ್ಕಿ ಸೆರೆ

ಪುಣೆ, ಅ.28- ಪಾಕಿಸ್ತಾನ ಮೂಲದ ಅಲ್‌ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಪುಣೆಯ ಕೊಂಧ್ವಾದಲ್ಲಿ ಜುಬೈರ್‌ ಹಂಗರ್ಗೇಕರೆ ಎಂಬಾತನನ್ನು ಬಂಧಿಸಿದೆ ಎಂದು ವರದಿಯಾಗಿದೆ.

ಬಂಧಿತ ಆರೋಪಿ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್‌‍ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದರು. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಶೇಷ ಯುಎಪಿಎ ನ್ಯಾಯಾಲಯ ಆರೋಪಿಯನ್ನು ನ.4 ರವರೆಗೆ ಪೊಲೀಸ್‌‍ ಕಸ್ಟಡಿಗೆ ಒಪ್ಪಿಸಿದೆ.

ಈತ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವಲ್ಲಿ ಪಾತ್ರ ವಹಿಸಿದ್ದಾನೆ. ಅಲ್ಲದೇ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅ.9 ರಂದು ಎಟಿಎಸ್‌‍ ಪುಣೆಯ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಭಯೋತ್ಪಾದಕ ಜಾಲದ ಸುಳಿವು ನೀಡುವ ಎಲೆಕ್ಟ್ರಾನಿಕ್‌ ಸಾಧನಗಳು, ದಾಖಲೆಗಳು ಮತ್ತು ವಸ್ತುಗಳನ್ನು ಪತ್ತೆಯಾಗಿದ್ದವು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಶಾಲೆ, ಸರ್ಕಾರಿ ಜಾಗದಲ್ಲಿ ಚಟುವಟಿಕೆಗಳ ನಿರ್ಬಂಧಕ್ಕೆ ಹೈಕೋರ್ಟ್‌ ತಡೆ : ಸರ್ಕಾರಕ್ಕೆ ಮುಖಭಂಗ

ಬೆಂಗಳೂರು,ಅ.28- ಸರ್ಕಾರಿ ಶಾಲಾ-ಕಾಲೇಜುಗಳ ಆಟದ ಮೈದಾನಗಳು ಮತ್ತು ಸರ್ಕಾರಿ ಸಂಸ್ಥೆಗಳ ಆವರಣಗಳಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಬೇಕಾದರೆ ಪೂರ್ವಾನುಮತಿ ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ನ್ಯಾಯಾಲಯದ ಆದೇಶದಿಂದ ಇಡೀ ರಾಜ್ಯದ ಗಮನಸೆಳೆದಿರುವ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದೆ. ನಿಗದಿಯಂತೆ ಅಂದೇ ಪಥಸಂಚಲನ ನಡೆಯಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ಕಳೆದ ಅಕ್ಟೋಬರ್‌ 17ರಂದು ನಡೆದ ಸಚಿವಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂಬ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪತ್ರ ಆಧರಿಸಿ, ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಂಕುಶ ಹಾಕಲು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ ಪೀಠಕ್ಕೆ ಪುನಶ್ಚೇತನ ಸೇವಾ ಸಂಸ್ಥೆ ಎಂಬ ಖಾಸಗಿ ಸಂಘಟನೆ ಮೇಲನವಿ ಅರ್ಜಿ ಸಲ್ಲಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿತ್ತು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಧಾರವಾಡ ಹೈಕೋರ್ಟ್‌ ಏಕಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಮುಂದಿನ ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಸರ್ಕಾರ ಸಚಿವಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ ರಾಷ್ಟ್ರೀಯ ಸ್ವಯಂ ಸಂಘ(ಆರ್‌ಎಸ್‌‍ಎಸ್‌‍)ದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿದೆ. ಇಡೀ ರಾಜ್ಯದಲ್ಲಿ ಶಾಂತಿಯುತವಾಗಿ ಪಥಸಂಚಲನ ನಡೆದಿದೆ. ಎಲ್ಲೂ ಇಲ್ಲದ ನಿಯಮಗಳನ್ನು ಚಿತ್ತಾಪುರದಲ್ಲಿ ಜಾರಿ ಮಾಡಲಾಗಿದೆ. ಇದರ ಉದ್ದೇಶವೇ ಸಂಘದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು. ಹೀಗಾಗಿ ಸಚಿವ ಸಂಪುಟದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಬಳ್ಳಿ ಆಯುಕ್ತರಿಗೆ ನೋಟಿಸ್‌‍ ಜಾರಿ ಮಾಡಿ ಸರ್ಕಾರಿ ವಕೀಲರಿಗೆ ನಾಳೆ ತಕರಾರು ಅರ್ಜಿ ಸಲ್ಲಿಸಲು ಸೂಚನೆ ನೀಡಿದರು.

ಅನುಮತಿ ಇಲ್ಲದೆ 10 ಜನ ಸೇರಿದರೆ ಅಪರಾಧವೆಂದು ಸರ್ಕಾರದ ಆದೇಶದಲ್ಲಿದೆ. ರಸ್ತೆ, ಪಾರ್ಕ್‌, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪೊಲೀಸ್‌‍ ಕಾಯ್ದೆಯಲ್ಲಿರುವ ಅಧಿಕಾರವನ್ನು ಸರ್ಕಾರ ಆದೇಶದ ಮೂಲಕ ಚಲಾಯಿಸಿದೆ. ಇದು ಸಂವಿಧಾನದ 19(1)ಎ ಬಿ ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳಲಾಗದೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಸರ್ಕಾರಿ ಆದೇಶವು ಸಂವಿಧಾನದ ಕೆಲವು ವಿಧಿಗಳನ್ನು ಉಲ್ಲಂಘನೆ ಮಾಡುತ್ತದೆ. ಪಾರ್ಕ್‌ವೊಂದರಲ್ಲಿ ಹತ್ತು ಜನ ಸೇರಿದರೆ ಅಪರಾಧ ಎಂದು ಪರಿಗಣಿಸಲು ಹೇಗೆ ಸಾಧ್ಯ? ವಾಯುವಿಹಾರಕ್ಕೆ ಬಂದ 10 ಜನ ನಗೆಕೂಟ ನಡೆಸುತ್ತಾರೆ. ಇದನ್ನು ಅಪರಾಧ ಎನ್ನಲು ಸಾಧ್ಯವೇ? ಎಂದು ಸರ್ಕಾರಿ ಪರ ವಕೀಲರನ್ನು ಪ್ರಶ್ನೆ ಮಾಡಿದರು.

ಸಂವಿಧಾನ ನೀಡಿರುವ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾದರೆ ನ್ಯಾಯಾಲಯ ಇದನ್ನು ನೋಡಿಕೊಂಡು ಸುಮನಿರಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾದಾಗ ನಾವು ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಲೇಬೇಕಾಗುತ್ತದೆ. ಸಚಿವ ಸಂಪುಟದ ತೀರ್ಮಾನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವುದಾಗಿ ಆದೇಶದಲ್ಲಿ ಪ್ರಕಟಿಸಿದರು.

ಇದಕ್ಕೂ ಮುನ್ನ ಪುನಶ್ಚೇತನ ಸಂಸ್ಥೆ ಪರ ವಾದ ಮಂಡಿಸಿದ ವಕೀಲ ಅಶೋಕ್‌ ಹಾರನಹಳ್ಳಿ, ಯಾವುದೇ ಪಾರ್ಕ್‌ ಮತ್ತು ಸರ್ಕಾರದ ಆಸ್ತಿಯಲ್ಲಿ ಯಾವುದೇ ಸಂಘಸಂಸ್ಥೆ ಕಾರ್ಯಕ್ರಮ ನಡೆಸುವಂತಿಲ್ಲ. ಇದಕ್ಕೆ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದಿದೆ. ಸರ್ಕಾರದ ಆಸ್ತಿ ಎಂದರೆ ರೋಡ್‌ ಅಂತಾನಾ? 10ಕ್ಕೂ ಹೆಚ್ಚು ಜನರು ಸೇರಿದರೆ ಅದು ತಪ್ಪಾ? ಎಂದು ಕರ್ನಾಟಕ ಪೊಲೀಸ್‌‍ ಕಾಯ್ದೆಯ ಬಗ್ಗೆ ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆ ಇದನ್ನು ನೋಡಬೇಕು, ಸರ್ಕಾರ ಅಲ್ಲ. ಯಾರು ಇದನ್ನು ಆದೇಶ ಮಾಡಿದ್ದು ಎಂದು ನ್ಯಾಯಮೂರ್ತಿಗಳು ಕೇಳಿದಾಗ, ಕ್ಯಾಬಿನೆಟ್‌ ಆದೇಶ ಮಾಡಿದೆ. ಸರ್ಕಾರ ಶಾಲಾ-ಕಾಲೇಜು, ಉದ್ಯಾನ ಮತ್ತು ಇತರ ಕಡೆ ಸಾರ್ವಜನಿಕರು ಬಳಸಲು ಇದೆ. ರಾಜ್ಯದ ಹಲವು ಸಂಸ್ಥೆ ಪ್ರಚಾರ ತರಬೇತಿ ಉದ್ದೇಶದಿಂದ ಸರ್ಕಾರದ ಆಸ್ತಿ ಅನುಮತಿ ಪಡೆಯದೇ ಮಾಡುವುದು ಅಕ್ರಮವೆಂದು ಹೇಳುತ್ತಾರೆ ಎಂದು ವಕೀಲರು ವಾದಿಸಿದರು.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ಗುರಿಯಾಗಿಸಿ ಮಾಡಲು ರೂಪಿಸಲಾಗಿದ್ದು, ಇದು ಸಂವಿಧಾನದ ಮೂಲಭೂತ ಹಕ್ಕುಗಳನ್ನು (ಭಾಷಣ ಸ್ವಾತಂತ್ರ್ಯ, ಸಂಘ ರಚನೆ) ಉಲ್ಲಂಘಿಸುತ್ತದೆ. ರಾಜ್ಯ ಸರ್ಕಾರ ಮತ್ತು ಪೊಲೀಸ್‌‍ ಇಲಾಖೆಯನ್ನು ಪ್ರತಿವಾದಿಯಾಗಿ ಮಾಡಿ ಸಂಸ್ಥೆ ಹೈಕೋರ್ಟ್‌ ಮೇಟ್ಟಿಲೇರಿತ್ತು. ಇದು ಆರ್‌ಎಸ್‌‍ಎಸ್‌‍ ಬ್ಯಾನ್‌ ಚರ್ಚೆಯ ಹಿನ್ನೆಲೆಯಲ್ಲಿದ್ದು, ಖಾಸಗಿ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಆದೇಶವು ರಾಜಕೀಯ ದ್ವೇಷದಿಂದ ಬಂದಿದೆ ಎಂದು ಸಂಸ್ಥೆಯು ಆರೋಪಿಸಿತ್ತು.

ಪ್ರಕರಣದ ಹಿನ್ನೆಲೆ:
ಸಚಿವ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸರ್ಕಾರಿ ಆಸ್ತಿಗಳನ್ನು ಬಳಸುವ ಖಾಸಗಿ ಸಂಘಟನೆಗಳಿಗೆ ಮುಂಚಿತವಾಗಿ ಅನುಮತಿ ಕಡ್ಡಾಯಗೊಳಿಸುವ ಆದೇಶ ಹೊರಡಿಸಲಾಯಿತು. ಆದೇಶದಲ್ಲಿ, ಸರ್ಕಾರಿ ಆಸ್ತಿಯನ್ನು (ಭೂಮಿ, ಕಟ್ಟಡ, ಪಾರ್ಕ್‌, ಆಟದ ಮೈದಾನ, ನೀರು ತಡೆಗಳು) ಬಳಸಲು ಸಂಬಂಧಿತ ಅಧಿಕಾರಿಯಿಂದ ಮುಂಚಿತವಾ ಅನುಮತಿ ಪಡೆಯಬೇಕು ಎಂದು ಉಲ್ಲೇಖಿಸಲಾಗಿದೆ. ಕರ್ನಾಟಕ ಪೊಲೀಸ್‌‍ ಕಾಯ್ದೆ 1963ರಡಿ ಅಧಿಕಾರಿಗಳು ನಿಯಂತ್ರಣಕ್ಕೆ ಶಕ್ತಿ ಹೊಂದಿರುವುದಾಗಿ ಹೇಳಲಾಗಿತ್ತು.

ಬೆಂಗಳೂರಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಅಂದರ್

ಬೆಂಗಳೂರು,ಅ.28-ಮನೆಯೊಂದಕ್ಕೆ ನುಗ್ಗಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಿಥುನ್‌ ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ಇಬ್ಬರು ಅಪ್ರಾಪ್ತರು ಸಹಕರಿಸಿದ್ದರು ಎಂಬುವುದು ತನಿಖೆಯಿಂದ ಗೊತ್ತಾಗಿದೆ.

ಗಂಗೊಂಡನ ಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ಪಶ್ಚಿಮ ಬಂಗಾಳ ಮೂಲದ ಮಹಿಳೆ ಹಾಗೂ ಇಬ್ಬರು ಪುರುಷರು ನೆಲೆಸಿದ್ದಾರೆ. ಕಳೆದವಾರ ಈ ಮನೆಗೆ ಹೋದ 6 ಮಂದಿ ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ತಾವು ಪೊಲೀಸರೆಂದು ಪರಿಚಯಿಸಿಕೊಂಡು ಏಕಾಏಕಿ ಒಳಗೆ ನುಗ್ಗಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಕಟ್ಟಿಹಾಕಿ ನಂತರ ಮಹಿಳೆಯನ್ನು ಪಕ್ಕದ ರೂಮ್‌ಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗಿ ಪರಾರಿಯಾಗಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಿಥುನ್‌ಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು ಕೊನೆಗೂ ಆತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.