Thursday, November 6, 2025
Home Blog Page 24

ಸುಂಕ ಸಂಕಟ : ಅಮೆರಿಕದ ವಿದೇಶಾಂಗ ಸಚಿವ ರೂಬಿಯೋ ಜೊತೆ ಜೈಶಂಕರ್‌ ಚರ್ಚೆ

ಕೌಲಾಲಂಪುರ, ಅ. 27 (ಪಿಟಿಐ) ಭಾರತೀಯ ಸರಕುಗಳ ಮೇಲಿನ ಅಮೆರಿಕದ ದಂಡನಾತ್ಮಕ ಸುಂಕಗಳಿಂದಾಗಿ ತೀವ್ರ ಒತ್ತಡಕ್ಕೆ ಒಳಗಾಗಿರುವ ದ್ವಿಪಕ್ಷೀಯ ಸಂಬಂಧಗಳನ್ನು ಪುನಃಸ್ಥಾಪಿಸಲು ಎರಡೂ ಕಡೆಯವರು ಮಾಡಿದ ಪ್ರಯತ್ನಗಳ ನಡುವೆಯೇ ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಇಂದು ತಮ್ಮ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರೊಂದಿಗೆ ಮಾತುಕತೆ ನಡೆಸಿದರು.

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್‌) ವಾರ್ಷಿಕ ಶೃಂಗಸಭೆಯ ಹೊರತಾಗಿ ಜೈಶಂಕರ್‌ ಮತ್ತು ರೂಬಿಯೊ ಕೌಲಾಲಂಪುರದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಇಂದು ಬೆಳಿಗ್ಗೆ ಕೌಲಾಲಂಪುರದಲ್ಲಿ ಅವರನ್ನು ಭೇಟಿಯಾಗಲು ಸಂತೋಷವಾಯಿತು. ನಮ್ಮ ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಚರ್ಚೆಯನ್ನು ಶ್ಲಾಘಿಸಿದೆ ಎಂದು ಜೈಶಂಕರ್‌ ಎಕ್‌್ಸ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಭಾರತದ ಮೇಲೆ 50 ಪ್ರತಿಶತ ಸುಂಕಗಳನ್ನು ವಿಧಿಸಿದ ನಂತರ ನವದೆಹಲಿ ಮತ್ತು ವಾಷಿಂಗ್ಟನ್‌ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೆ ಒಳಗಾಗಿವೆ, ಇದರಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಹೆಚ್ಚುವರಿ ಶೇಕಡಾ 25 ರಷ್ಟು ಸುಂಕಗಳು ಸೇರಿವೆ.ಭಾರತವು ಅಮೆರಿಕದ ಕ್ರಮವನ್ನು ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ಎಂದು ಬಣ್ಣಿಸಿದೆ.

ಜೈಶಂಕರ್‌ ಮತ್ತು ರೂಬಿಯೊ ಎರಡೂ ಕಡೆಯ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಸಹ ವಿಶಾಲವಾಗಿ ಪರಿಶೀಲಿಸಿದ್ದಾರೆಂದು ತಿಳಿದುಬಂದಿದೆ.ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕಾಗಿ ಇದುವರೆಗೆ ಐದು ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ.ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಮುಕ್ತಾಯಕ್ಕೆ ತುಂಬಾ ಹತ್ತಿರದಲ್ಲಿದೆ.

ಭಾನುವಾರ, ಜೈಶಂಕರ್‌ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ, ಸಿಂಗಾಪುರದ ವಿದೇಶಾಂಗ ಸಚಿವ ವಿವಿಯನ್‌ ಬಾಲಕೃಷ್ಣನ್‌ ಮತ್ತು ಅವರ ಥಾಯ್‌ ಪ್ರತಿರೂಪ ಸಿಹಾಸಕ್‌ ಫುವಾಂಗ್ಕೆಟ್ಕಿಯೋ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.11 ರಾಷ್ಟ್ರಗಳ ಆಸಿಯಾನ್‌ ಅನ್ನು ಈ ಪ್ರದೇಶದ ಅತ್ಯಂತ ಪ್ರಭಾವಶಾಲಿ ಬಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಭಾರತ ಮತ್ತು ಅಮೆರಿಕ, ಚೀನಾ, ಜಪಾನ್‌ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ಇತರ ದೇಶಗಳು ಅದರ ಸಂವಾದ ಪಾಲುದಾರರಾಗಿದ್ದಾರೆ. ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿರುವ ಮಲೇಷ್ಯಾ ಕೌಲಾಲಂಪುರದಲ್ಲಿ ವಾರ್ಷಿಕ ಆಸಿಯಾನ್‌ ಶೃಂಗಸಭೆ ಮತ್ತು ಸಂಬಂಧಿತ ಸಭೆಗಳನ್ನು ಆಯೋಜಿಸುತ್ತಿದೆ.

ಚಿಕ್ಕಮಗಳೂರು : ಹೊಯ್ಸಳರ ಕಾಲದ ವೀರಗಲ್ಲು ಪತ್ತೆ

ಚಿಕ್ಕಮಗಳೂರು,ಅ.27- ಬೈಗೂರು ಗ್ರಾಮದ ನಿವೇದನ್‌ಗೆ ಸೇರಿದ ಜಮೀನಿನಲ್ಲಿ ಗ್ರಾಪಂ ಪಿಡಿಒ ಶರತ್‌ ಕುಮಾರ್‌ ಪಿಡಿ ಇವರ ಸೂಚನೆಯ ಮೇರೆಗೆ ಶಾಸನ ಸಂಶೋಧಕರಾದ ಮೇಕನಗ್ದೆ ಲಕ್ಷ್ಮಣಗೌಡರು 12ನೇ ಶತಮಾನಕ್ಕೆ ಸೇರಿದ ಹೊಯ್ಸಳರ ಕಾಲದ ವೀರಗಲ್ಲು ಶಾಸನವನ್ನು ಪತ್ತೆ ಹಚ್ಚಿದ್ದಾರೆ.

ಶಾಸನವು ನಾಲ್ಕು ಅಡಿ ಎತ್ತರವಿದ್ದು ಎರಡು ಅಡಿ ಅಗಲವಿದೆ. ಮೂರು ಹಂತಗಳಲ್ಲಿ ಆಕರ್ಷಕ ಶಿಲ್ಪಗಳ ಕೆತ್ತನೆಗಳಿದ್ದು ನಡುವಿನ ಎರಡು ಪಟ್ಟಿಗಳಲ್ಲಿ ಮತ್ತು ಆಚೀಚೆಯ ಎರಡು ಬದಿಗಳಲ್ಲಿ ಬರವಣಿಗೆ ಇದೆ.

ಒಟ್ಟು 8 ಸಾಲುಗಳಿರುವ ಈ ಶಾಸನದಲ್ಲಿ ಮೊದಲ ಹಂತದಲ್ಲಿರುವ ಕೆತ್ತನೆ ಹಾಗೂ ಒಂದಷ್ಟು ವಿವರಗಳು ಸವೆದು ಹೋಗಿವೆ. ಈ ಶಾಸನವು ಹೊಯ್ಸಳ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ ಕೆಲವು ಅಪರೂಪದ ಮಾಹಿತಿಗಳನ್ನು ತಿಳಿಸುತ್ತದೆ ಎಂದು ಶಾಸನವನ್ನು ಓದಿ ಪಠ್ಯ ತಯಾರಿಸಿರುವ ಮೈಸೂರಿನ ಶಾಸನ ತಜ್ಞರಾದ ಎಚ್‌. ಎಂ. ನಾಗರಾಜ್‌ ರಾವ್‌ ತಿಳಿಸಿದರು.

ಶಕ ವರ್ಷ 1043ರ ಶಾರ್ವರಿ ಸಂವತ್ಸರದಂದು ಅಂದರೆ 1220-21ನೇ ಇಸವಿಯಲ್ಲಿ ಹೊಯ್ಸಳ ದೊರೆ ಬಿಟ್ಟಿದೇವ ಮತ್ತು ಆತನ ಸಹೋದರ ಉದಯದಿತ್ಯ ಇವರು ಚೋಳಮಂಡಲವನ್ನು ಗೆದ್ದು ರಾಜ್ಯವಾಳ್ಳುತ್ತಿದ್ದು ದರ ಪ್ರಸ್ತಾಪವಿದೆ. ಉದಯದಿತ್ಯನು ಹಾಸನದ ಕೆಲವತ್ತಿಯ ಕೊಪ್ಪದಲ್ಲಿ ಮರಣ ಹೊಂದಿದಾಗ ಆತನೊಂದಿಗೆ ವೇಳೆಯಾಗಿ ಮರಣ ಹೊಂದಿದವರ ಬಗ್ಗೆ ಈಗಾಗಲೇ ಬೇರೆ ಶಾಸನಗಳಲ್ಲಿ ಉಲ್ಲೇಖವಿದೆ ಎಂದರು.

ಅದೇ ರೀತಿ ಉದಯಾದಿತ್ಯನ ಮಗಳು ಏಚಲ ದೇವಿಯವರು ನಿಧನವಾದಾಗ ಸಹ ಹಲವರು ವೇಳೆಯಾಗಿ ಮರಣ ಹೊಂದಿದ ಉಲ್ಲೇಖವೂ ಇತರ ಶಾಸನಗಳಲ್ಲಿ ಕಂಡು ಬರುತ್ತದೆ. ಅದೇ ರೀತಿ ಪ್ರಸ್ತುತ ಶಾಸನದಲ್ಲಿ ಏಚಲ ದೇವಿಯವರು ನಿಧನವಾದಾಗ ಚಿಕ್ಕ ಎಂಬ ವೀರನು ಮರಣ ಹೊಂದಿರುವ ಉಲ್ಲೇಖವಿದೆ. ಶಾಸನದ ನಡುವಿನ ಪಟ್ಟಿಯಲ್ಲಿ ಶಾಪಾಶಯ ವಾಕ್ಯಗಳಿವೆ. ಕೆಲವು ಅಕ್ಷರಗಳು ಸವೆದು ಹೋಗಿದ್ದು ಮಾಹಿತಿ ಅಸ್ಪಷ್ಟವಾಗಿದೆ. ಕಲ್ಲನ್ನು ಬೊಮಣ್ಣ ಎಂಬುವನು ಮಾಡಿಸಿದ ಉಲ್ಲೇಖವಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-10-2025)

ನಿತ್ಯ ನೀತಿ : ಜಗತ್ತಿನಲ್ಲಿ ದೇವರಿಗಿಂತ ಶ್ರೇಷ್ಠ ಸೂತ್ರಧಾರ ಯಾರೂ ಇಲ್ಲ , ಏಕೆಂದರೆ ಮನುಷ್ಯನಿಗಿಂತ ಶ್ರೇಷ್ಠ ನಾಟಕಕಾರ ಯಾರೂ ಇಲ್ಲ.

ಪಂಚಾಂಗ : ಸೋಮವಾರ, 27-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಷಷ್ಠಿಪೂರ್ಣ / ನಕ್ಷತ್ರ: ಮೂಲಾ / ಯೋಗ: ಅತಿಗಂ / ಕರಣ: ಕೌಲವ
ಸೂರ್ಯೋದಯ – ಬೆ.06.12
ಸೂರ್ಯಾಸ್ತ – 5.55
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಸರ್ಕಾರಕ್ಕೆ ಸಂಬಂಽಸಿದ ಕೆಲಸ- ಕಾರ್ಯ ಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ.
ವೃಷಭ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಅತ್ಯುತ್ತಮವಾದ ದಿನ.
ಮಿಥುನ: ಪತ್ನಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತವೆ.

ಕಟಕ: ಯಶಸ್ವಿಯಾಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೆಚ್ಚು ಶ್ರಮಿಸಬೇಕಾಗುತ್ತದೆ.
ಸಿಂಹ: ಹೆಚ್ಚಿನ ಖರ್ಚು ಮಾಡುವುದನ್ನು ನಿಯಂತ್ರಿಸಿ.
ಕನ್ಯಾ: ಕೆಲಸದ ಹೊರೆ ಕಡಿಮೆಯಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.

ತುಲಾ: ಚಾತುರ್ಯದಿಂದ ಮಾತುಗಳನ್ನಾಡುವುದ ರಿಂದ ಅಽಕ ಹಣ ಸಂಪಾದಿಸಬಹುದು.
ವೃಶ್ಚಿಕ: ಕಾಲುಗಳಲ್ಲಿ ನೋವು ಮತ್ತು ಸ್ನಾಯುಗಳ ಅಸ್ವಸ್ಥತೆ
ಧನುಸ್ಸು: ಜಂಕ್‌ಫುಡ್‌ ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಮಕರ: ಹಿರಿಯ ಅಽಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.
ಕುಂಭ: ಮಕ್ಕಳಿಂದಾಗಿ ನೋವುಂಟಾಗಲಿದೆ. ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ.
ಮೀನ: ಸಂಬಳ ಪಡೆಯುವವರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ.

ರಸ್ತೆ ತಿರುವಿನಲ್ಲಿ ಉರುಳಿ ಬಿದ್ದ ಕಂಟೈನರ್‌, ಇಬ್ಬರ ಸಾವು

ಬೆಂಗಳೂರು, ಅ.26- ಕಂಟೈನರ್‌ವೊಂದು ರಸ್ತೆ ತಿರುವಿನಲ್ಲಿ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಜಿಗಣಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಭಾರೀ ಗಾತ್ರದ ಯಂತ್ರಗಳನ್ನು ತುಂಬಿಕೊಂಡು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹಾರೋಹಳ್ಳಿ-ಜಿಗಣಿ ರಸ್ತೆಯಲ್ಲಿ ಕಂಟೈನರ್‌ ಬರುತ್ತಿದ್ದಾಗ ಉರುಗನದೊಡ್ಡಿ ಸಮೀಪ ರಸ್ತೆ ತಿರುವಿನಲ್ಲಿ ಉರುಳಿ ಬಿದ್ದಿದೆ.

ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಅವರುಗಳನ್ನು ಚಿಕಿತ್ಸೆಗಾಗಿ ಆನೇಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಜಿಗಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಅತಿವೇಗ ಹಾಗೂ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಾಲ್ಕು ಮಕ್ಕಳ ತಾಯಿಯನ್ನು ಕೊಂದಿದ್ದ ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು,ಅ.26- ನಾಲ್ಕು ಮಕ್ಕಳ ತಾಯಿ ಯನ್ನು ಕೊಲೆ ಮಾಡಿ ಶವವನ್ನು ಆಟೋದಲ್ಲಿಟ್ಟು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ತಿಲಕನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪೇಂಟರ್‌ ಹಾಗೂ ಆಟೋ ಚಾಲಕನೊಬ್ಬನನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ.

ನಾಲ್ಕು ಮಕ್ಕಳ ತಾಯಿ ಸಲಾ(35) ಅವರು ಪತಿಯನ್ನು ತೊರೆದು ಇತ್ತೀಚೆಗೆ ರಾಗಿಗುಡ್ಡದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರಿಗೆ ಪೈಂಟರ್‌ ಸುಬ್ರಹಣಿ ಎಂಬಾತ ಪರಿಚಯವಾಗಿ ಸಲುಗೆಯಿಂದ ಇದ್ದರು. ಈ ನಡುವೆ ಮೊನ್ನೆ ರಾತ್ರಿ ಆರೋಪಿಗಳು ಮನೆಯಲ್ಲಿ ಸಲಾ ಅವರನ್ನು ಕೊಲೆ ಮಾಡಿ ಮನೆ ಸಮೀಪದ ರಸ್ತೆ ಬದಿಯಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಲ್ಲಿಸಿದ್ದ ಆಟೋದಲ್ಲಿ ಶವವಿಟ್ಟು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆ ರಸ್ತೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಡತೆ ವಿಚಾರದಲ್ಲಿ ಜಗಳವಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಒಡಿಶಾದಲ್ಲಿ ಚಂಡಮಾರುತದ ಎಚ್ಚರಿಕೆ

ಭುವನೇಶ್ವರ,ಅ.26- ಬಂಗಾಳಕೊಲ್ಲಿ ಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ತೀವ್ರಗೊಂಡು ಕರಾವಳಿಯತ್ತ ನಿಧಾನವಾಗಿ ಚಲಿಸುತ್ತಿದ್ದು, ಒಡಿಶಾ ಸರ್ಕಾರವು ಎಲ್ಲಾ 30 ಜಿಲ್ಲೆಗಳಲ್ಲಿ ಎಚ್ಚರಿಕೆ ಸೂಚನೆ ನೀಡಿದೆ.

ಅ.28 ರ ಸಂಜೆ ಅಥವಾ ರಾತ್ರಿ ಕಾಕಿನಾಡದ ಸುತ್ತಮುತ್ತಲಿನ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯನ್ನು ಚಂಡಮಾರುತ ದಾಟುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ, ಗರಿಷ್ಠ ಗಾಳಿಯ ವೇಗ ಗಂಟೆಗೆ 90-110 ಕಿ.ಮೀ ಇರಬಹುದು. ಅ. 28 ಮತ್ತು 29 ರಂದು ಒಡಿಶಾದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಅದು ಹೇಳಿದೆ.

ಒಡಿಶಾದ ಹಲವಾರು ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳಿಗೆ ಐಎಂಡಿ ಕೆಂಪು, ಕಿತ್ತಳೆ ಮತ್ತು ಹಳದಿ ಎಚ್ಚರಿಕೆಗಳನ್ನು ನೀಡಿದೆ, ಅಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್‌ ಪೂಜಾರಿ ಅವರು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಸಿದ್ಧಪಡಿಸಲಾಗಿದ್ದು,ಭಾರೀ ಮಳೆ, ಮೇಲ್ಮೈ ಗಾಳಿ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಕರಾವಳಿ ಮತ್ತು ದಕ್ಷಿಣ ಪ್ರದೇಶಗಳಲ್ಲಿನ 15 ಜಿಲ್ಲೆಗಳು ಮುಂಬರುವ ಚಂಡಮಾರುತದಿಂದ ಪ್ರಭಾವಿತವಾಗುತ್ತವೆ ಎಂದು ಅವರು ಹೇಳಿದರು.ಏತನ್ಮಧ್ಯೆ, ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಮತ್ತು ಕರಾವಳಿ ಪ್ರದೇಶಗಳಲ್ಲಿನ ಸುಮಾರು ಏಳು ಜಿಲ್ಲೆಗಳು ಸರ್ಕಾರಿ ನೌಕರರ ರಜೆಯನ್ನು ರದ್ದುಗೊಳಿಸಿವೆ.

ಕಳೆದ 6 ಗಂಟೆಗಳಲ್ಲಿ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಡಿದ್ದ ವಾಯುಭಾರ ಕುಸಿತವು ಗಂಟೆಗೆ 10 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯದಿಕ್ಕಿಗೆ ಚಲಿಸಿ, ತೀವ್ರಗೊಂಡಿದೆ.ಇದು ಬಹುತೇಕ ಪಶ್ಚಿಮವಾಯುವ್ಯಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ, ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಮತ್ತು ಪಕ್ಕದ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ನಂತರ, ಅದು ವಾಯುವ್ಯಯ ದಿಕ್ಕಿಗೆ, ನಂತರ ಉತ್ತರ-ವಾಯುವ್ಯಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಮತ್ತು ಅ. 28 ರ ಬೆಳಿಗ್ಗೆ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

ಕಾರಿನಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಲಕ್ನೋ, ಅ.26- ಇಲ್ಲಿನ ಹಜರತ್‌ಗಂಜ್‌‍ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬರು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ರಾಜಾಜಿಪುರಂ ನಿವಾಸಿ ಇಶಾನ್‌ ಗಾರ್ಗ್‌ (38) ಎಂದು ಗುರುತಿಸಲಾಗಿದೆ.

ರಾತ್ರಿ 11.40 ರ ಸುಮಾರಿಗೆ ಘಟನೆ ಸಂಭವಿಸಿದೆ. ಸ್ವಲ್ಪ ಸಮಯದ ನಂತರ, ಹಜರತ್‌ಗಂಜ್‌‍ ಪೊಲೀಸ್‌‍ ಠಾಣೆಗೆ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಕಾರಿನಎಂಜಿನ್‌ ಚಾಲನೆಯಲ್ಲಿತ್ತು ಮತ್ತು ,ಚಾಲಕನ ಸೀಟಿನಲ್ಲಿ ಕುಳಿತ್ತಿದ್ದ ವ್ಯಕ್ತಿ ತಲೆಗೆ ಗುಂಡೇಟಿನ ಗಾಯವಾಗಿತ್ತು.ಅವನ ಬಲಗೈನಲ್ಲಿದ್ದ ರಿವಾಲ್ವರ್‌,ನಾಲ್ಕು ಲೈವ್‌ ಕಾರ್ಟ್ರಿಡ್‌್ಜಗಳನ್ನುವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಪ್ರಕಾರ, ಇಶಾನ್‌ ಗಾರ್ಗ್‌ ಅವರು ರಿವಾಲ್ವರ್‌ ಪರವಾನಗಿ ಹೊಂದಿದ್ದರು ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ಕಾನೂನು ವಿಧಿವಿಧಾನಗಳು ಮತ್ತು ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌‍ಗಳಲ್ಲಿ ಸುರಕ್ಷತಾ ಕ್ರಮ ಪರಿಶೀಲನೆಗೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು, ಅ.26- ಕರ್ನೂಲ್‌ ಬಳಿ ಸಂಭವಿಸಿದ ಬಸ್‌‍ ಬೆಂಕಿ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಾರಿಗೆ ಸಂಸ್ಥೆಗಳ ಬಸ್‌‍ಗಳಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚನೆ ನೀಡಿದ್ದಾರೆ.

ಕರ್ನೂಲ್‌ ಬಸ್‌‍ ದುರಂತ ಪ್ರಕರಣ ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಿರಲಿ. ಈ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನೂ ಸಹ ಪಾಲಿಸಬೇಕಾಗಿದೆ. ಈ ಹಿಂದೆ ಸಾರಿಗೆ ಸಚಿವನಾಗಿದ್ದಾಗಲೂ ಕೂಡ ಹಾವೇರಿ ಬಳಿ ಖಾಸಗಿ ಬಸ್‌‍ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.

ಆ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಬಸ್‌‍ಗಳು, ಕಾಂಟ್ರಾಕ್ಟ್‌ ಗ್ಯಾರೇಜ್‌ ಬಸ್‌‍ಗಳು, ಖಾಸಗಿ ಟೂರಿಸ್ಟ್‌ ಬಸ್‌‍ಗಳು, ಟೆಂಪೋ ಟ್ರಾವೆಲರ್‌ರ‍ಸ, ಶಾಲಾ ವಾಹನಗಳು ಸೇರಿ ಸುಮಾರು 50 ಸಾವಿರ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮತ್ತು ದ್ವಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಪರಿಶೀಲಿಸಲು ವಿಶೇಷ ಅಭಿಯಾನ ಕೈಗೊಂಡಿದ್ದರಿಂದ ಹಲವು ಬಸ್‌‍ಗಳಲ್ಲಿ ಲೋಪದೋಷಗಳು ಗಮನಕ್ಕೆ ಬಂದು ತುರ್ತು ನಿರ್ಗಮನ ದ್ವಾರಗಳ ಅಳವಡಿಕೆ ಕಡ್ಡಾಯವಾಯಿತು ಎಂದರು.

ಬಸ್‌‍ಗಳಲ್ಲಿ ಯಾವುದೇ ವಾಣಿಜ್ಯ ಸರಕು, ಲಗೇಜ್‌ ಸಾಗಿಸುವ ಸಂದರ್ಭದಲ್ಲಿ ಬೆಂಕಿಸ್ಪರ್ಶಕ್ಕೆ ಸುಲಭವಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಿಸುವ ವಸ್ತುಗಳನ್ನು ಸಾಗಿಸದಂತೆ ನಿಗಾ ವಹಿಸಬೇಕು. ಎಲ್ಲ ಎಸಿ ಬಸ್‌‍ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿಗಳನ್ನು ಒಡೆಯಲು ಸಹಾಯವಾಗುವಂತೆ ಸುತ್ತಿಗೆಗಳು ಕಡ್ಡಾಯವಾಗಿರಬೇಕು. ಲಗೇಜ್‌ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿಗಳು ಮಲಗಲು ಅವಕಾಶ ನೀಡಬಾರದು. ಬಸ್‌‍ಗಳ ನವೀಕರಣದ ಸಂದರ್ಭದಲ್ಲಿ ಪರಿಶೀಲನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.

ಯಾವುದೇ ನ್ಯೂನ್ಯತೆಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಸುರಕ್ಷತೆ ನಮ ಪ್ರಥಮ ಆದ್ಯತೆ. ಪ್ರಾಣಹಾನಿಗೆ ಯಾವುದೇ ರೀತಿಯಿಂದಲೂ ನಷ್ಟಭರಿಸಲು ಸಾಧ್ಯವಿಲ್ಲ. ಆದರೆ, ಈ ಕೂಡಲೇ ಬಸ್‌‍ಗಳಲ್ಲಿನ ಸುರಕ್ಷತೆ ಪರಿಶೀಲನೆಗೆ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಎಸ್‌‍ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಮತ್ತು ಸಾರಿಗೆ ಇಲಾಖೆಯ ಸುರಕ್ಷತಾ ವಿಭಾಗದ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಎಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು. ಅ.26– ಬೆಂಗಳೂರಿನ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲ ಸಲ್ಲದ ಟೀಕೆ ಮಾಡುತ್ತಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಖಾಲಿ ಟ್ರಂಕ್‌ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಾಗ್ದಾಳಿ ನಡೆಸಿದರು. ಕಬ್ಬನ್‌ಪಾರ್ಕ್‌ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ವೇಳೆ ಡಿ.ಕೆ.ಶಿವಕುಮಾರ್‌ ಅವರು ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿದರು.

ಈ ವೇಳೆ ನಾಗರಿಕರೊಬ್ಬರು, ಸರ್ಕಾರ ಎಲ್ಲಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಈ ಪರಿವರ್ತನೆಗಾಗಿ ಅನೇಕರು, ಹಲವು ವರ್ಷಗಳಿಂದ ಕಾಯುತ್ತಿದ್ದರು ಎಂದು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಮುಕ್ತವಾಗಿ ಪ್ರಶಂಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಎ ಖಾತಾ ನಿಮ ಆಸ್ತಿ ದಾಖಲೆ.

ಸಾರ್ವಜನಿಕರ ಆಸ್ತಿ ದಾಖಲೆಗಳನ್ನು ಸರಿಪಡಿಸಿ, ಅವುಗಳನ್ನು ಜನರಿಗೆ ನೀಡುವುದು ನಮ ಸರ್ಕಾರದ ಆರನೇ ಗ್ಯಾರಂಟಿ. ಇದಕ್ಕಾಗಿ ನಾವು ಕೇವಲ ಶೇ. 5 ಮಾತ್ರ ಅಭಿವೃದ್ಧಿ ಶುಲ್ಕ ಪಾವತಿ ಮಾಡುವಂತೆ ಕೇಳಿದ್ದೇವೆ. ನಿಮಂತಹ ಪ್ರಜ್ಞಾವಂತ ನಾಗರಿಕರು ಇದನ್ನು ಸ್ವಾಗತಿಸಿರುವುದಕ್ಕೆ ಧನ್ಯವಾದ ಎಂದು ಕೈ ಮುಗಿದು ನಮಿಸಿದರು. ಮತ್ತೊಬ್ಬ ನಾಗರಿಕರು ಸುರಂಗ ರಸ್ತೆ ಯೋಜನೆಯನ್ನು ಬೆಂಬಲಿಸಿ ಮಾತನಾಡಿದರು. ಕಳೆದ 30 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ಒಳ್ಳೆಯ ಯೋಜನೆ ಇಲ್ಲ ಎಂದು ಹೇಳಿದರು.

ಈ ವೇಳೆ ಡಿ.ಕೆ.ಶಿವಕುಮಾರ್‌ ಅವರು ನಿಮ ಬೆಂಬಲಕ್ಕೆ ಧನ್ಯವಾದಗಳು ಎಂದು ನಾಗರಿಕರಿಗೆ ಹೇಳಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಪರ್ಯಾಯ ಅಲೋಚನೆಗಳು ಸಾಧುವಾಗಿಲ್ಲ. ರಸ್ತೆ ಅಗಲೀಕರಣ ಮಾಡಲು, ಮನೆಗಳನ್ನು ಹೊಡೆಯಲು ಸಾಧ್ಯವಿಲ್ಲ. ಅದಕ್ಕೆ ಯಾರೂ ಒಪ್ಪುತ್ತಿಲ್ಲ. ಹೀಗಾಗಿ ಸುರಂಗ ರಸ್ತೆ ನಿರ್ಮಿಸುತ್ತಿದ್ದೇವೆ ಎಂದರು.

12,500 ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ನಾಗರಿಕರೊಬ್ಬರು, ಕಾಂಗ್ರೆಸ್‌‍ ಪಕ್ಷವನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗ ಪಕ್ಷದ ಹೆಸರು ಹೇಳಬೇಡಿ, ಸಮಸ್ಯೆಗಳನ್ನು ಮಾತ್ರ ವಿವರಿಸಿ ಎಂದು ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು. ಪೌರಕಾರ್ಮಿಕರಿಗೆ ಮನೆ ಕಟ್ಟಿಸಿ ಕೊಡಿ ಎಂದು ಮನವಿ ಮಾಡಿದರು. ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಇದಕ್ಕಾಗಿ ಧನ್ಯವಾದ ಹೇಳುವುದಾಗಿ ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸುರಂಗ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಡಿ ಎಂದು ಒತ್ತಾಯಿಸಿದರು.

330 ಎಕರೆಯಿದ್ದ ಕಬ್ಬನ್‌ಪಾರ್ಕ್‌ ವಿಸ್ತೀರ್ಣ ಈಗ 196 ಎಕರೆಯಾಗಿದೆ. ಲಾಲ್‌ಬಾಗ್‌ ಮಾದರಿಯಲ್ಲೇ ಈ ಉದ್ಯಾನವನ್ನು ಅಭಿವೃದ್ಧಿ ಮಾಡಿ ಆದಾಯ ಬರುವಂತೆ ಮಾಡಬಹುದು. ಭೋಗ್ಯದಲ್ಲಿರುವ ಕಟ್ಟಡಗಳನ್ನು ತೆರವು ಮಾಡಿಸಿ, ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದೆ. ಸೂಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಿ 2, 3 ಕೋಟಿ ರೂ. ಹಣ ಪಡೆದು ಟಿಕೆಟ್‌ ನೀಡಲಾಗುತ್ತಿದೆ ಎಂಬ ಆರೋಪಗಳಿವೆ ಎಂದು ಸಾರ್ವಜನಿಕರೊಬ್ಬರು ಹೇಳಿದಾಗ ಮಧ್ಯ ಪ್ರವೇಶಿಸಿದ ಡಿ.ಕೆ.ಶಿವಕುಮಾರ್‌ ಅವರು, ಯಾವ ಪಕ್ಷವೂ ಹಣ ಪಡೆದು ಚುನಾವಣೆಯಲ್ಲಿ ಟಿಕೆಟ್‌ ನೀಡಿದ್ದನ್ನು ನಾನು ಕಂಡಿಲ್ಲ, ಪಕ್ಷದ ಶುಲ್ಕವನ್ನಾಗಿ ಸಾವಿರ, 50 ಸಾವಿರದಷ್ಟು ಹಣ ಪಡೆಯಬಹುದಷ್ಟೆ. ಟಿಕೆಟ್‌ ಮಾರಿ ಕೊಂಡಿರುವುದಿಲ್ಲ. ಒಂದು ವೇಳೆ ಅಂತಹ ನಿದರ್ಶನಗಳಿದ್ದರೆ ಲಿಖಿತವಾಗಿ ದೂರು ಕೊಡಿ. ಸಂಜೆಯೇ ತನಿಖೆಗೆ ಆದೇಶಿಸುತ್ತೇನೆ ಎಂದರು.

20 ವರ್ಷಗಳಿಂದಲೂ ಒಬ್ಬರೇ ಪಾಲಿಕೆ ಸದಸ್ಯರಿರುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಅದೇ ನಾಗರಿಕರು ಹೇಳಿದಾಗ, ನಾನು 35 ವರ್ಷದಿಂದ ಶಾಸಕನಾಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದರು. ವೈದ್ಯರಿಗೆ, ಎಂಜಿನಿಯರ್‌ಗಳಿಗೆ, ಮಾಜಿ ಸೈನಿಕರಿಗೆ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ಕೊಡಿ ಎಂದು ನಾಗರಿಕರು ಸಲಹೆ ನೀಡಿದರು.

ಚುನಾವಣೆಯಲ್ಲಿ ಸ್ಪರ್ಧಿಸುವವರಿಂದ ಅರ್ಜಿ ಅಹ್ವಾನಿಸುತೇನೆ. ಆಗ ನೀವು ಅರ್ಜಿ ಹಾಕಿ. ಜನರ ಸಂಪರ್ಕದಲ್ಲಿರುವವರು, ಪಕ್ಷದ ಕಾರ್ಯಕರ್ತರ ಜೊತೆ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

ಅಂಗವಿಕಲರ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಪದಶ್ರೀ ಡಾ. ಕೆ.ಎಸ್‌‍.ರಾಜಣ್ಣ, ಭಗವದ್ಗೀತೆಯನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ನೀಡುವ ಮೂಲಕ ನಿಮ ಮನದಲ್ಲಿನ ಬಯಕೆ ಈಡೇರಲಿ ಎಂದು ಹಾರೈಸಿದರು. ಪುಲಕೇಶಿ ನಗರದ ಮೆಟ್ರೋ ನಿಲ್ದಾಣಕ್ಕೆ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು. ಕಬ್ಬನ್‌ಪಾರ್ಕ್‌ ನಡಿಗೆಯಲ್ಲಿ ಡಿ.ಕೆ.ಶಿವಕುಮಾರ್‌, ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು, ಸೆಲ್ಫಿ ಕ್ಲಿಕ್ಕಿಸಿದರು, ವಾಯು ವಿಹಾರಿಗಳು ಕರೆ ತಂದ ಸಾಕು ಪ್ರಾಣಿಗಳನ್ನು ಕಂಡು ಡಿ.ಕೆ.ಶಿವಕುಮಾರ್‌ ಖುಷಿ ಪಟ್ಟರು.

ಆಸ್ತಿಗಾಗಿ 60 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ

ಕನಕಪುರ, ಅ. 26- ಆಸ್ತಿಯ ವ್ಯಾಮೋಹಕ್ಕೆ 60 ವರ್ಷಗಳ ಹಿಂದೆ ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿಕೊಂಡು ಆಸ್ತಿ ಪರಭಾರೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿರುದ್ಧ ರಾಮನಗರ ಐಜೂರು ಪೋಲೀಸ್‌‍ ಠಾಣೆಯಲ್ಲಿ 4 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಕನಕಪುರ ಮತ್ತು ಹಾರೋಹಳ್ಳಿ ತಾಲ್ಲೂಕಿನಲ್ಲಿ ಭೂಮಿಯ ಬೆಲೆ ಗಗನಕ್ಕೆ ಏರಿರುವ ಹಿನ್ನಲೆಯಲ್ಲಿ ಯಾರದೋ ಆಸ್ತಿಯನ್ನು ಮತ್ಯಾರೋ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡುಲಾಗುತ್ತಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಆಸ್ತಿಗೆ ಸಂಬಂಧಿಸಿದ ಹೊಂಬಾಳೆಗೌಡರ 5ನೇ ಮಗ ಬಸವೇಗೌಡ ಪತ್ರಿಕಾಗೋಷ್ಠಿಯಲ್ಲಿ ದಾಖಲಾತಿಗಳನ್ನು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಹಾರೋಹಳ್ಳಿ ಹೋಬಳಿ ಚಿಕ್ಕಕಲ್‌ಬಾಳು ಗ್ರಾಮದ ಚಿಕ್ಕಹುಚ್ಚೇಗೌಡ, ರವಿಕುಮಾರ್‌, ಪುಟ್ಟಬಸವೇಗೌಡ, ಪಾರ್ವತಮ ನವರ ವಿರುದ್ಧ ಪೋಲೀಸರು ಇದೊಂದು ಗಂಭೀರ ಅಪರಾಧವಾಗಿದ್ದು ನಕಲಿ ದಾಖಲೆ ಅಥವಾ ಬದಲಿ ವ್ಯಕ್ತಿಗಳ ಮೂಲಕ ಆಸ್ತಿ ನೋಂದಣಿ ಮಾಡಿರುವ ಹಾಗೂ ಮೋಸ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ ಎಂಬ ವಿವರಗಳನ್ನು ನೀಡಿದರು.

ಚಿಕ್ಕಕಲ್‌ಬಾಳು ಗ್ರಾಮದ ಹುಚ್ಚೇಗೌಡರಿಗೆ ಸೇರಿದ ಸರ್ವೆ ನಂ.82/3ರಲ್ಲಿ 33 ಗುಂಟೆ, 87/7ರಲ್ಲಿ 17 ಗುಂಟೆ, 87/9ರಲ್ಲಿ 16 ಗುಂಟೆ, 119/3ರಲ್ಲಿ 5 ಗುಂಟೆ ಒಟ್ಟು 1.32 ಎಕರೆ ಜಮೀನನ್ನು ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ಗಳನ್ನು ಸೃಷ್ಟಿಸಿ ಜಮೀನನ್ನು ನೊಂದಣಿ ಮಾಡಿಸಿಕೊಳ್ಳಲಾಗಿದೆ. ಜಮೀನಿನ ಮಾಲೀಕ ಹುಚ್ಚೇಗೌಡ ಎಂಬುವವರಿಗೆ ಚಿಕ್ಕಮಾರಕ್ಕ ಹಾಗೂ ಮಾವತೂರಮ ಇಬ್ಬರು ಪತ್ನಿಯರು ಮೃತಪಟ್ಟಿರುತ್ತಾರೆ.

ಎರಡನೇ ಪತ್ನಿ ಮಾವತೂರಮನ 7 ಮಕ್ಕಳಲ್ಲಿ 4ನೇ ಮಗ ಚಿಕ್ಕಹುಚ್ಚೇಗೌಡ ನಾನೇ ಹುಚ್ಚೇಗೌಡನೆಂದು ನಕಲಿ ದಾಖಲೆ ಸೃಷ್ಟಿಸಿ (ಆಧಾರ್‌ ಕಾರ್ಡ್‌ ಎಡಿಟ್‌) ಮಾಡಿ ಪುಟ್ಟಬಸವೇಗೌಡ ಮತ್ತು ರವಿಕುಮಾರ್‌ ಇಬ್ಬರೂ ಸೇರಿ 60 ವರ್ಷಗಳ ಹಿಂದೆ ಮೃತಪಟ್ಟಿರುವ ನಮ ತಾತ ಹುಚ್ಚೇಗೌಡರ ಹೆಸರಿನಲ್ಲಿರುವ ಜಮೀನನ್ನು ತಮದಾಗಿಸಿಕೊಳ್ಳಲು ನಮ ದೊಡ್ಡಪ್ಪನಾದ ಚಿಕ್ಕಹುಚ್ಚೇಗೌಡ ಆಧಾರ್‌ಕಾರ್ಡ್‌ನ್ನು ಹುಚ್ಚೇಗೌಡ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಕನಕಪುರದಲ್ಲಿ ನೋಂದಣಿ ಮಾಡಿಸಿಕೊಂಡರೆ ಬಹಿರಂಗವಾಗುವ ಹಿನ್ನಲೆಯಲ್ಲಿ ರಾಮನಗರಕ್ಕೆ ತೆರಳಿ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ತಮ ಹೆಸರಿಗೆ ವಿಭಾಗಪಟ್ಟಿಯನ್ನು ಮಾಡಿ ರಿಜಿಸ್ಟರ್‌ ಮಾಡಿಕೊಂಡು ಪರಭಾರೆ ಮಾಡಿಕೊಂಡಿದ್ದಾರೆ.

ವಿಭಾಗ ಪತ್ರ ಮಾಡಿಕೊಂಡು ರವಿಕುಮಾರ್‌ ತನ್ನ ಪತ್ನಿಯ ಹೆಸರಿಗೆ ದಾನ ಪತ್ರ ಮಾಡಿರುವುದಾಗಿ ಆರೋಪಿಸಿದರು. ನಮ ತಾತ ಹುಚ್ಚೇಗೌಡರಿಗೆ 5 ಮಂದಿ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳಾದ ಚಿಕ್ಕಹುಚ್ಚೇಗೌಡ ಮತ್ತು ಹೊಂಬಾಳೇಗೌಡ ಇಬ್ಬರು ಮಕ್ಕಳ ಕುಟುಂಬಸ್ಥರ ಸದಸ್ಯರಿಗೆ ಬರಬೇಕಾಗಿದ್ದ ಆಸ್ತಿಯನ್ನು ರವಿಕುಮಾರ್‌ ಒಬ್ಬರೇ ತಮದಾಗಿಸಿಕೊಂಡಿದ್ದಾರೆ.

ಈ ವಿಷಯ ಗೊತ್ತಾದ ಕೂಡಲೇ ನಾನು ರಾಮನಗರದಲ್ಲಿ ದೂರು ದಾಖಲಿಸಿದ್ದೇನೆ, ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಿತ್ರಾರ್ಜಿತ ಆಸ್ತಿಯನ್ನು ಪತ್ನಿಯ ಹೆಸರಿಗೆ ಅನಧಿಕೃತವಾಗಿ ದಾನ ಪತ್ರದ ಮೂಲಕ ನೊಂದಣಿ ಮಾಡಿಸಿಕೊಂಡಿರುವ ರವಿಕುಮಾರ್‌ ಸೇರಿದಂತೆ ಮತ್ತಿತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.