Friday, November 7, 2025
Home Blog Page 26

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2025)

ನಿತ್ಯ ನೀತಿ : ಆರೋಗ್ಯವೇ ದೊಡ್ಡ ಉಡುಗೊರೆ, ಜ್ಞಾನವೇ ಮಹಾ ಸಂಪತ್ತು, ಇರುವುದರಲ್ಲಿಯೇ ತೃಪ್ತಿಯಿಂದ ಬದುಕುವುದೇ ಜೀವನದ ಸಾರ.

ಪಂಚಾಂಗ : ಭಾನುವಾರ, 26-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಶೋಭನ / ಕರಣ: ಬವ
ಸೂರ್ಯೋದಯ – ಬೆ.06.12
ಸೂರ್ಯಾಸ್ತ – 5.55
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ಬಹಳ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ವೃಷಭ: ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ಮಿಥುನ: ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ

ಕಟಕ: ರಕ್ತ ಸಂಬಂ ಗಳ ವಿರೋಧ ಎದುರಿಸ ಬೇಕಾಗುತ್ತದೆ.
ಸಿಂಹ: ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಬೆಳೆಯುವ ನಿಮಗೆ ಸಂತೃಪ್ತಿಯ ದಿನ.
ಕನ್ಯಾ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ. ಜನಪ್ರಿಯತೆ ಗಳಿಸುವಿರಿ.

ತುಲಾ: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಬೇಡ.
ವೃಶ್ಚಿಕ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಧನುಸ್ಸು: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.

ಮಕರ: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.
ಕುಂಭ: ಪೂರ್ವಜರ ಆಸ್ತಿಯಿಂದ ಲಾಭ ಸಿಗಲಿದೆ. ಕಿರಿಯ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ.
ಮೀನ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.

ಬೆಂಗಳೂರಲ್ಲಿ ಸ್ಪೋಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ತನಿಖೆಗೆ ಆಗ್ರಹ

ಬೆಂಗಳೂರು,ಅ.25-ಸ್ಟೋಟದಿಂದ ಮನೆ ಧ್ವಂಸವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ತನಿಖೆಯಾಗ ಬೇಕೆಂದು ಆಗ್ರಹಿಸಿದ್ದಾರೆ. ಕೆಆರ್‌ಪುರಂನ ತ್ರಿವೇಣಿ ನಗರದ ಮನೆಯೊಂದರಲ್ಲಿ ಸ್ಟೋಟ ಸಂಭವಿಸಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಇಷ್ಟು ಪ್ರಮಾಣದಲ್ಲಿ ಹಾನಿಯಾಗಲು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.

ಗಟ್ಟಿಮುಟ್ಟಾದ ಆರ್‌ಸಿಸಿ ಮನೆ ಧ್ವಂಸವಾಗಲು ಸಾಧ್ಯವೇ ಅಥವಾ ಬೇರೆನಾ ಅನ್ನೋದು ತನಿಖೆಯಾಗಬೇಕು ಎಂದರು.ಈ ಘಟನೆಯಿಂದ ಸುತ್ತಮುತ್ತಲಿನ ಜನರು ಭಯಬೀತರಾಗಿದ್ದಾರೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಇದು ಹೇಗೆ ಬ್ಲಾಸ್ಟ್‌ ಆಯ್ತು, ಕಾರಣ ಏನು ಎಂಬುವುದರ ಬಗ್ಗೆ ಸಮಗ್ರ ತನಿಖೆಯಾಗಲಿ.ಮೃತ ವೃದ್ಧೆ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಲಿ ಎಂದರು.

ದಿಗ್ಬ್ರಾಂತನಾದೆ: ಶಾಸಕ ಬೈರತಿ ಬಸವರಾಜು ರವರು ಪ್ರತಿಕ್ರಿಯಿಸಿ ಘಟನೆ ನೋಡಿ ದಿಗ್ಬ್ರಾಂತನಾದೆ. ಗ್ಯಾಸನಿಂದ ಆಗಿದೆಯೋ, ಸ್ಟೋಟಕದಿಂದ ಆಗಿದೆಯೋ ಗೊತ್ತಾಗಬೇಕು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವುದು ನೋಡಿದರೆ ಅನುಮಾನ ಬರುತ್ತಿದೆ ಎಂದರು. ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ ಶಾಸಕರು,ಇದೇ ವೇಳೆ ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ 1ಲಕ್ಷ ಪರಿಹಾರ ಘೋಷಿಸಿದರು.

ತನಿಖೆ ಮುಂದುವರೆದಿದೆ: ಈ ಮನೆಯಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಗ್ಯಾಸ್‌‍ ಸ್ಟವ್‌ ಹಚ್ಚುತ್ತಿದ್ದಂತೆ ಸ್ಟೋಟವಾಗಿದೆ. ಇವರ ಮನೆಯಿಂದ ಗ್ಯಾಸ್‌‍ ವಾಸನೆ ಬರುತ್ತಿತ್ತು ಎಂದು ನೆರೆಹೊರೆಯವರು ಹೇಳುತ್ತಿದ್ದಾರೆ.ತನಿಖೆ ಮುಂದುವರೆಸಿದ್ದೇವೆ ಎಂದು ಜಂಟಿ ಪೊಲೀಸ್‌‍ ಆಯುಕ್ತ ರಮೇಶ್‌ ಬಾನೋತ್‌ ಹೇಳಿದ್ದಾರೆ.

ಸೊಕೋ ತಂಡ, ಎಫ್‌ಎಸ್‌‍ಎಲ್‌ ತಂಡ ಮತ್ತು ಬಾಂಬ್‌ ನಿಷ್ಕ್ರಿಯದಳದಿಂದ ಪರಿಶೀಲನೆ ನಡೆಯುತ್ತಿದೆ ಎಂದರು.ಸ್ಟೋಟದಿಂದ ಅಕ್ಕಯ್ಯಮ ಎಂಬುವವರು ಮೃತಪಟ್ಟಿದ್ದಾರೆ. ಅವರ ಮಗ, ಮೊಮಕ್ಕಳು ಮನೆಯಲ್ಲಿದ್ದರು. ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಎ-ಖಾತಾ ಪರಿವರ್ತನೆ ನೆಪದಲ್ಲಿ ಲೂಟಿ ಮಾಡುತ್ತಿದೆ ಸರ್ಕಾರ : ಹೆಚ್ಡಿಕೆ ಆರೋಪ

ಬೆಂಗಳೂರು,ಅ.25- ರಾಜ್ಯ ಸರ್ಕಾರ ದೀಪಾವಳಿ ಕೊಡುಯಾಗಿ ಬಿ ಖಾತಾಯಿಂದ ಎ ಖಾತಾಗೆ ಪರಿವರ್ತನೆ ಮಾಡುವುದಾಗಿ ಹೇಳಿ ಜನರಿಗೆ ಟೋಪಿ ಹಾಕುತ್ತಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವತ್ತಿನ ಮಾರ್ಗಸೂಚಿ ದರದ ಮೇಲೆ ಶೇ.5ರಷ್ಟು ಪಾವತಿಸಿ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದಾಗಿ ಸರ್ಕಾರ ಹೇಳಿದೆ. ವಾಸ್ತವವಾಗಿ ಬಿಬಿಎಂಪಿ ಮುನ್ಸಿಪಾಲ್‌ ಕಾಯ್ದೆಯಡಿ ಎ ಖಾತಾ ಬಿ ಖಾತಾ ಎಂಬುದೇನಿಲ್ಲ. ಸಾರ್ವಜನಿಕ ಗೊಂದಲ ಉಂಟು ಮಾಡಲಾಗುತ್ತಿದೆ ಎಂದರು.

ಖಾತಾ ಪರಿವರ್ತನೆ ಹೆಸರಿನಲ್ಲಿ ಸರ್ಕಾರ ಜನರನ್ನು ದಾರಿ ತಪ್ಪಿಸಿ ಹಗಲು ದರೋಡೆ ಮಾಡಲು ಹೊರಟಿದೆ. ಇದಕ್ಕೆ ಮರಳಾಗಬೇಡಿ. ಮುಂದೆ ನಮ ಸರ್ಕಾರ ಬರಲಿದ್ದು, ಹಳೆಯ ವ್ಯವಸ್ಥೆಯನ್ನು ಜಾರಿಗೆ ತಂದು ಜನರ ಹಿತ ಕಾಪಾಡಲಿದೆ ಎಂದು ಹೇಳಿದರು.

ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಖಾತಾ ಪರಿವರ್ತನೆ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಹಗಲು ದರೋಡೆ ಮಾಡುತ್ತಿದ್ದಾರೆ. ಖಜಾನೆ ತುಂಬಿಸಲು ಈ ಯೋಜನೆಗೆ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.

30*40 ಅಡಿಯ ನಿವೇಶನಕ್ಕೆ ಬಿ ಇಂದ ಎ ಖಾತಾಗೆ ಪರಿವರ್ತನೆ ಮಾಡಲು ಸುಮಾರು 4ರಿಂದ 5 ಲಕ್ಷ ರೂ. ಆಗುತ್ತದೆ. ಇದು ಎಚ್‌ಎಸ್‌‍ಆರ್‌ಬಡಾವಣೆಯಲ್ಲಿ 25 ಲಕ್ಷ ರೂ. ಆಗುತ್ತದೆ. ಈ ರೀತಿ ಜನರಿಗೆ ಹೊರೆ ಹೊರಿಸಿ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

ಎರಡು ವರ್ಷ ಕಾಯಿರಿ:
ಖಾತಾ ಪರಿವರ್ತನೆಗೆ ದುಬಾರಿ ಹಣ ಪಾವತಿಸುವ ಬದಲು ಎರಡು ವರ್ಷ ಕಾಯಿರಿ. ನಮ ಸರ್ಕಾರ ಅಧಿಕಾರಕ್ಕೆ ಬರಲಿದೆ.ಹಿಂದಿನ ವ್ಯವಸ್ಥೆಯಲ್ಲೇ ಸುಲಭವಾಗಿ ನಿಮ ಆಸ್ತಿ ದೊರೆಯಲಿದೆ. ದೀಪಾವಳಿ ಉಡುಗೊರೆಗೆ ಆಸೆ ಬಿದ್ದು ಹಾಳು ಮಾಡಿಕೊಳ್ಳಬೇಡಿ. ಮಾಲೀಕತ್ವ ಸಿಗಲಿದೆ. ಇದರ ಸವಾಲನ್ನು ಸ್ವೀಕಾರ ಮಾಡುತ್ತೇನೆ ಎಂದರು.

ಜನತಾದಳ ಸರ್ಕಾರವಿದ್ದಾಗ ಪ್ರತಿ ಚದರ ಅಡಿಗೆ 110 ರೂ. ನಿಗದಿ ಮಾಡಿ ಖಾತಾ ಮಾಡಿಕೊಡುವ ವ್ಯವಸ್ಥೆ ಜಾರಿಗೆ ತಂದಿತ್ತು. ಆಗ ಭೂ ಪರಿವರ್ತನೆ ಶುಲ್ಕ 1500 ರೂ. ಖಾತಾಗೆ 12263 ರೂ. ಪಾವತಿಸಬೇಕಿತ್ತು. 2003ರಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ತರಲಾಗಿತ್ತು. ನಾನು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಒಂದು ಪಟ್ಟಣ ಪಂಚಾಯ್ತಿ , 7 ನಗರಸಭೆಗಳನ್ನು ಒಟ್ಟುಗೂಡಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಚಿಸಲಾಯಿತು. ಆಗಿನಿಂದಲೂ ಜನರು ಹಣ ಪಾವತಿಸಿ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಜಿಬಿಎ ಅಧಿಸೂಚನೆಯಲ್ಲಿ ಅತ್ಯಂತ ವೇಗವಾಗಿ ವಿಸ್ತಾರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಬಿ ಖಾತಾ ಪ್ರದೇಶದಲ್ಲಿ ಮಳೆಯಿಂದ ಪ್ರವಾಹ, ಕಟ್ಟಡ ಕುಸಿಯುವುದನ್ನು ಉಲ್ಲೇಖಿಸಲಾಗಿದೆ. ಬಿ ಖಾತಾದಿಂದ ಎ ಖಾತೆಗೆ ಪರಿವರ್ತನೆಯಾದರೆ ಮಳೆ ನೀರಿನ ಪ್ರವಾಹ, ಕಟ್ಟಡ ಕುಸಿತ ಇಳಿಯುತ್ತದೆಯೇ ಎಂದು ವ್ಯಂಗ್ಯವಾಡಿದರು.

ಈಗಾಗಲೇ ಮಾರ್ಗಸೂಚಿ ದರ ಹಾಗೂ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದರು.2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ 9 ಕೈಗಾರಿಕಾ ಕ್ಲಸ್ಟರ್‌ಗಳನ್ನು ಘೋಷಣೆ ಮಾಡಲಾಗಿತ್ತು. ಚೀನಾದೊಂದಿಗೆ ಸ್ಪರ್ಧೆ ಮಾಡಲು ಅದನ್ನು ಘೋಷಿಸಲಾಗಿತ್ತು. ಮೈತ್ರಿ ಸರ್ಕಾರ ಪತನವಾದ ನಂತರ ಆ ಕಡೆ ಗಮನವೇ ಹರಿಸಿಲ್ಲ. ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುತ್ತಿಲ್ಲ. ಇಂಥವರ ಜೊತೆಗೆ ಬಹಿರಂಗ ಚರ್ಚೆ ಮಾಡಲಾಗುತ್ತದೆಯೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದನಾಯಕ ಸಿ.ಬಿ.ಸುರೇಶ್‌ ಬಾಬು,ವಿಧಾನಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಟಿ.ಎನ್‌.ಜವರಾಯಿಗೌಡ, ವಿವೇಕಾನಂದ, ಎಸ್‌‍.ಎಲ್‌.ಭೋಜೇಗೌಡ,ಮಾಜಿ ವೆಂಕಟರಾವ್‌ ನಾಡಗೌಡ, ಬೆಂಗಳೂರು ಮಹಾನಗರ ಜೆಡಿಎಸ್‌‍ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ, ಜೆಡಿಎಸ್‌‍ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶಿ ರಾಮೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಅದಾನಿ ಗ್ರೂಪ್‌ಗೆ ಲಾಭ ಮಾಡಿಕೊಡಲು ಎಲ್‌ಐಸಿ ಹಣ ದುರುಪಯೋಗ ; ಜೈರಾಮ್‌ ರಮೇಶ್‌ ಆರೋಪ

ನವದೆಹಲಿ, ಅ/ 25 (ಪಿಟಿಐ) ಜೀವ ವಿಮಾ ನಿಗಮದ 30 ಕೋಟಿ ಪಾಲಿಸಿದಾರರ ಉಳಿತಾಯವನ್ನು ಅದಾನಿ ಗ್ರೂಪ್‌ಗೆ ಲಾಭ ಮಾಡಿಕೊಡಲು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌‍ ಆರೋಪಿಸಿದೆ. ಅದೇ ರೀತಿ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಎಲ್‌ಐಸಿಯನ್ನು ಸಮೂಹ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಹೇಗೆ ಬಲವಂತಪಡಿಸಲಾಯಿತು ಎಂದು ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಕಾಂಗ್ರೆಸ್‌‍ ಆರೋಪಗಳ ಬಗ್ಗೆ ಅದಾನಿ ಗ್ರೂಪ್‌ ಅಥವಾ ಸರ್ಕಾರದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.ಮೋದಾನಿ ಜಂಟಿ ಉದ್ಯಮವು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅದರ 30 ಕೋಟಿ ಪಾಲಿಸಿದಾರರ ಉಳಿತಾಯವನ್ನು ವ್ಯವಸ್ಥಿತವಾಗಿ ಹೇಗೆ ದುರುಪಯೋಗಪಡಿಸಿಕೊಂಡಿದೆ ಎಂಬುದರ ಕುರಿತು ಮಾಧ್ಯಮಗಳಲ್ಲಿ ಗೊಂದಲದ ಬಹಿರಂಗಪಡಿಸುವಿಕೆಗಳು ಇದೀಗ ಹೊರಬಂದಿವೆ ಎಂದು ಕಾಂಗ್ರೆಸ್‌‍ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಮೇ 2025 ರಲ್ಲಿ ವಿವಿಧ ಅದಾನಿ ಗ್ರೂಪ್‌ ಕಂಪನಿಗಳಲ್ಲಿ ಸುಮಾರು 33,000 ಕೋಟಿ ರೂ. ಎಲ್‌ಐಸಿ ನಿಧಿಯನ್ನು ಹೂಡಿಕೆ ಮಾಡುವ ಪ್ರಸ್ತಾವನೆಯನ್ನು ಭಾರತೀಯ ಅಧಿಕಾರಿಗಳು ರೂಪಿಸಿ ಜಾರಿಗೆ ತಂದಿದ್ದಾರೆ ಎಂದು ಆಂತರಿಕ ದಾಖಲೆಗಳು ಬಹಿರಂಗಪಡಿಸುತ್ತವೆ ಎಂದು ಅವರು ಹೇಳಿದರು.

ಅದಾನಿ ಗ್ರೂಪ್‌ನಲ್ಲಿ ವಿಶ್ವಾಸ ಮೂಡಿಸುವುದು ಮತ್ತು ಇತರ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಎಂದು ವರದಿಯಾದ ಗುರಿಗಳಾಗಿದ್ದವು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಣಕಾಸು ಸಚಿವಾಲಯ ಮತ್ತು ನೀತಿ ಆಯೋಗದ ಅಧಿಕಾರಿಗಳು ಯಾರ ಒತ್ತಡದ ಅಡಿಯಲ್ಲಿ, ಅಪರಾಧದ ಗಂಭೀರ ಆರೋಪಗಳಿಂದಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಖಾಸಗಿ ಕಂಪನಿಯನ್ನು ಜಾಮೀನು ಮಾಡುವುದು ತಮ್ಮ ಕೆಲಸ ಎಂದು ನಿರ್ಧರಿಸಿದರು? ಇದು ಮೊಬೈಲ್‌ ಫೋನ್‌ ಬ್ಯಾಂಕಿಂಗ್‌ ನ ಪಠ್ಯಪುಸ್ತಕ ಪ್ರಕರಣವಲ್ಲವೇ? ರಮೇಶ್‌ ಹೇಳಿದರು.

ಗೌತಮ್‌ ಅದಾನಿ ಮತ್ತು ಅವರ ಏಳು ಸಹಚರರ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆ ಮಾಡಿದ ನಂತರ, ಸೆಪ್ಟೆಂಬರ್‌ 21, 2024 ರಂದು ಕೇವಲ ನಾಲ್ಕು ಗಂಟೆಗಳ ವಹಿವಾಟಿನಲ್ಲಿ ಎಲ್‌‍ಐಸಿ 7,850 ಕೋಟಿ ರೂ. ನಷ್ಟವನ್ನು ಅನುಭವಿಸಿದಾಗ ಸಾರ್ವಜನಿಕ ಹಣವನ್ನು ಆಪ್ತ ಸಂಸ್ಥೆಗಳ ಮೇಲೆ ಎಸೆಯುವ ವೆಚ್ಚಗಳು ಸ್ಪಷ್ಟವಾಯಿತು ಎಂದು ಕಾಂಗ್ರೆಸ್‌‍ ನಾಯಕರು ಹೇಳಿದರು.

ಭಾರತದಲ್ಲಿ ಹೆಚ್ಚಿನ ಬೆಲೆಯ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಅದಾನಿ ವಿರುದ್ಧ 2,000 ಕೋಟಿ ರೂ. ಲಂಚ ಯೋಜನೆಯನ್ನು ರೂಪಿಸಿದ ಆರೋಪವಿದೆ. ಮೋದಿ ಸರ್ಕಾರವು ಸುಮಾರು ಒಂದು ವರ್ಷದವರೆಗೆ ಪ್ರಧಾನ ಮಂತ್ರಿಯವರ ಅತ್ಯಂತ ಜನಪ್ರಿಯ ವ್ಯಾಪಾರ ಸಮೂಹಕ್ಕೆ ಯುಎಸ್‌‍ ಎಸ್‌‍ಇಸಿ ಸಮನ್ಸ್ ನೀಡಲು ನಿರಾಕರಿಸಿದೆ ಎಂದು ರಮೇಶ್‌ ಹೇಳಿದರು.

ಅಮೆರಿಕ ಮೂಲದ ಶಾರ್ಟ್‌-ಸೆಲ್ಲಿಂಗ್‌ ಸಂಸ್ಥೆ ಹಿಂಡೆನ್‌ಬರ್ಗ್‌ ರಿಸರ್ಚ್‌ ಹಲವಾರು ಆರೋಪಗಳನ್ನು ಮಾಡಿದ ನಂತರ ಅದಾನಿ ಗ್ರೂಪ್‌ ಷೇರುಗಳು ಷೇರುಪೇಟೆಯಲ್ಲಿ ಹೊಡೆತ ಬಿದ್ದಾಗಿನಿಂದ ಕಾಂಗ್ರೆಸ್‌‍ ಸರ್ಕಾರದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ.
ಕಾಂಗ್ರೆಸ್‌‍ ಮತ್ತು ಇತರರು ಮಾಡಿದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್‌ ಸುಳ್ಳು ಎಂದು ತಳ್ಳಿಹಾಕಿದೆ, ಇದು ಎಲ್ಲಾ ಕಾನೂನುಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳನ್ನು ಅನುಸರಿಸುತ್ತದೆ. ಮೋದಾನಿ ಮೆಗಾಸ್ಕ್ಯಾಮ್‌ ಬಹಳ ವ್ಯಾಪಕವಾಗಿದೆ. ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಏಜೆನ್ಸಿಗಳನ್ನು ಇತರ ಖಾಸಗಿ ಕಂಪನಿಗಳು ತಮ್ಮ ಸ್ವತ್ತುಗಳನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡುವಂತೆ ಒತ್ತಾಯಿಸಲು ದುರುಪಯೋಗಪಡಿಸಿಕೊಳ್ಳುವುದು.ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ನಿರ್ಣಾಯಕ ಮೂಲಸೌಕರ್ಯ ಸ್ವತ್ತುಗಳ ಕಠಿಣ ಖಾಸಗೀಕರಣ ಅದಾನಿ ಗ್ರೂಪ್‌ನ ಲಾಭಕ್ಕಾಗಿ ಮಾತ್ರ ನಡೆದಿದೆ ಎಂದು ಅವರು ಆರೋಪಿಸಿದರು.

ವಿವಿಧ ದೇಶಗಳಲ್ಲಿ, ವಿಶೇಷವಾಗಿ ಭಾರತದ ನೆರೆಹೊರೆಯಲ್ಲಿ ಅದಾನಿ ಗ್ರೂಪ್‌ಗೆ ಒಪ್ಪಂದಗಳನ್ನು ಪೂರೈಸಲು ರಾಜತಾಂತ್ರಿಕ ಸಂಪನ್ಮೂಲಗಳ ದುರುಪಯೋಗದ ಆರೋಪವನ್ನು ರಮೇಶ್‌ ಗಮನಸೆಳೆದರು.ಈ ಹಗರಣದಲ್ಲಿ ಅದಾನಿ ಕಂಪನಿಯ ನಿಕಟ ಸಹಚರರಾದ ನಾಸರ್‌ ಅಲಿ ಶಬಾನ್‌ ಅಹ್ಲಿ ಮತ್ತು ಚಾಂಗ್‌ ಚುಂಗ್‌‍-ಲಿಂಗ್‌ ಅವರು ಶೆಲ್‌ ಕಂಪನಿಗಳ ಹಣ ವರ್ಗಾವಣೆ ಜಾಲವನ್ನು ಬಳಸಿಕೊಂಡು ಓವರ್‌ ಇನ್ವಾಯ್‌್ಸ್ಡ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು, ಇದು ಗುಜರಾತ್‌ನ ಅದಾನಿ ವಿದ್ಯುತ್‌ ಕೇಂದ್ರಗಳಿಂದ ಪಡೆದ ವಿದ್ಯುತ್‌ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ.ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಅಸಹಜವಾಗಿ ಹೆಚ್ಚಿನ ಬೆಲೆಗಳಲ್ಲಿ ಚುನಾವಣಾ ಪೂರ್ವ ವಿದ್ಯುತ್‌ ಸರಬರಾಜು ಒಪ್ಪಂದಗಳು ಮತ್ತು ಚುನಾವಣೆ ನಡೆಯಲಿರುವ ಬಿಹಾರದಲ್ಲಿ ವಿದ್ಯುತ್‌ ಸ್ಥಾವರಕ್ಕೆ ಎಕರೆಗೆ 1 ರೂ.ಗೆ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾದ ಆರೋಪಗಳನ್ನು ರಮೇಶ್‌ ಸಹ ಉಲ್ಲೇಖಿಸಿದರು.

ಶಬರಿಮಲೆ ಚಿನ್ನ ನಷ್ಟ ಪ್ರಕರಣ : ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ ಎಸ್‌‍ಐಟಿ ಶೋಧ

ಪತ್ತನಂತಿಟ್ಟ, ಅ. 25 (ಪಿಟಿಐ) ಶಬರಿಮಲೆ ದೇವಸ್ಥಾನದಿಂದ ಚಿನ್ನ ನಷ್ಟವಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಬೆಂಗಳೂರಿನಲ್ಲಿರುವ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ ಅವರ ಅಪಾರ್ಟ್‌ಮೆಂಟ್‌‍ ಮತ್ತು ಬಳ್ಳಾರಿಯ ಆಭರಣ ಅಂಗಡಿಯಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆಯ ಭಾಗವಾಗಿ ಪೊಟ್ಟಿ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ.ದೇವಾಲಯದ ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟಿನ ಚಿನ್ನದ ಲೇಪನ ಕೆಲಸಕ್ಕೆ ಹಣಕಾಸು ಒದಗಿಸಿದ ಗೋವರ್ಧನ್‌ ಅವರ ಒಡೆತನದ ಆಭರಣ ಅಂಗಡಿಯನ್ನು ಎಸ್‌‍ಐಟಿ ಶೋಧಿಸಿದೆ ಎಂದು ಮೂಲಗಳು ತಿಳಿಸಿವೆ, ಇದನ್ನು ಪೊಟ್ಟಿ ಅಧಿಕೃತವಾಗಿ ಪ್ರಾಯೋಜಿಸಿದ್ದರು ಎನ್ನಲಾಗಿದೆ.

ಆಭರಣ ಅಂಗಡಿಯಿಂದ ಎಸ್‌‍ಐಟಿ ಹಲವಾರು ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ವಶಪಡಿಸಿಕೊಂಡ ಚಿನ್ನವನ್ನು 2019 ರಲ್ಲಿ ವಿದ್ಯುಲ್ಲೇಪನಕ್ಕಾಗಿ ಕಳುಹಿಸಲಾದ ದ್ವಾರಪಾಲಕ (ರಕ್ಷಕ ದೇವರು) ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರದ ತಟ್ಟೆಗಳಿಂದ ಹೊರತೆಗೆಯಲಾಗಿದೆಯೇ ಎಂಬುದು ಇನ್ನೂ ದೃಢೀಕರಿಸಲಾಗಿಲ್ಲ ಎಂದು ಅವರು ಹೇಳಿದರು.

ತನಿಖೆಯ ಭಾಗವಾಗಿ ಎಸ್‌‍ಐಟಿ ಈಗಾಗಲೇ ಗೋವರ್ಧನ್‌ ಅವರ ಹೇಳಿಕೆಯನ್ನು ದಾಖಲಿಸಿದೆ.ಏತನ್ಮಧ್ಯೆ, ತಂಡವು ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಪೊಟ್ಟಿ ಅವರ ಅಪಾರ್ಟ್‌ಮೆಂಟ್‌‍ ಅನ್ನು ಸಹ ಶೋಧಿಸಿದೆ ಮತ್ತು ಅಲ್ಲಿ ಅವರು ಈ ಹಿಂದೆ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿತು.

ಪೊಟ್ಟಿ ಅವರನ್ನು ಮುಂದೆ ಚೆನ್ನೈನಲ್ಲಿರುವ ಸ್ಮಾರ್ಟ್‌ ಕ್ರಿಯೇಷನ್‌ ಕಚೇರಿಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅಲ್ಲಿ 2019 ರಲ್ಲಿ ಎಲೆಕ್ಟ್ರೋಪ್ಲೇಟಿಂಗ್‌ ಕಾರ್ಯವನ್ನು ನಡೆಸಲಾಯಿತು.ಈ ಹಿಂದೆ, ರನ್ನಿಯ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಪೊಟ್ಟಿಯ ಎಸ್‌‍ಐಟಿ ಕಸ್ಟಡಿಗೆ ಅಕ್ಟೋಬರ್‌ 30 ರವರೆಗೆ ಅನುಮತಿ ನೀಡಿದೆ.

ಪಾಲನೆ ಅವಧಿ ಮುಗಿಯುವ ಮೊದಲು ಸಾಕ್ಷ್ಯ ಸಂಗ್ರಹವನ್ನು ಪೂರ್ಣಗೊಳಿಸುವ ಗುರಿಯನ್ನು ತಂಡ ಹೊಂದಿದೆ ಎಂದು ಮೂಲಗಳು ತಿಳಿಸಿವೆ.ತನಿಖೆಯ ಪ್ರಕಾರ, ಪೊಟ್ಟಿ 2019 ರಲ್ಲಿ ಎಲೆಕ್ಟ್ರೋಪ್ಲೇಟಿಂಗ್‌ಗಾಗಿ ತಿರುವಾಂಕೂರು ದೇವಸ್ವಂ ಮಂಡಳಿಯಿಂದ (ಟಿಡಿಬಿ) ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆಯ ತಟ್ಟೆಗಳನ್ನು ಪಡೆದಿದ್ದರು.ಅವರು ಅವುಗಳನ್ನು ಅನುಮತಿಯಿಲ್ಲದೆ ದಕ್ಷಿಣ ಭಾರತದ ರಾಜ್ಯಗಳಾದ್ಯಂತ ವಿವಿಧ ದೇವಾಲಯಗಳು ಮತ್ತು ಮನೆಗಳಿಗೆ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದ್ವಾರಪಾಲಕ ತಟ್ಟೆಗಳು ಮತ್ತು ಶ್ರೀಕೋವಿಲ್‌ ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಣ್ಮರೆಯಾಗಿದ್ದಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಪೊಟ್ಟಿ ಪ್ರಮುಖ ಆರೋಪಿಯಾಗಿದ್ದಾನೆ.ದ್ವಾರಪಾಲಕ ಫಲಕಗಳಿಂದ ಕಾಣೆಯಾದ ಚಿನ್ನಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ, ಆದರೆ ಎಸ್‌‍ಐಟಿ ಇತ್ತೀಚೆಗೆ ಶಬರಿಮಲೆಯ ಮಾಜಿ ಆಡಳಿತ ಅಧಿಕಾರಿ ಬಿ ಮುರಾರಿ ಬಾಬು ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಿದೆ.

ಯಶವಂತಪುರದ ಗಾಂಧಿಪಾರ್ಕ್‌ನಲ್ಲಿ ಡಿಕೆಶಿ ಬೆಂಗಳೂರು ನಡಿಗೆ, ನಾಗರಿಕರ ಅಹವಾಲು ಆಲಿಸಿದ ಡಿಸಿಎಂ

ಬೆಂಗಳೂರು, ಅ.25– ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾರದ ಕೊನೆ ದಿನಗಳಲ್ಲಿ ನಡೆಸುತ್ತಿರುವ ಬೆಂಗಳೂರು ಉದ್ಯಾನವನ ನಡಿಗೆ ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ಗಾಂಧಿಪಾರ್ಕ್‌ನಲ್ಲಿ ನಡೆಯಿತು.ಸ್ಥಳೀಯ ನಾಗರಿಕರು ನಾನಾ ರೀತಿಯ ಸಮಸ್ಯೆಗಳನ್ನು ಉಪ ಮುಖ್ಯಮಂತ್ರಿಯವರ ಮುಂದೆ ತೋಡಿಕೊಂಡರು. ಶಾಸಕ ಎಸ್‌‍.ಟಿ. ಸೋಮಶೇಖರ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಶ್ವೇಶ್ವರಯ್ಯ ಲೇಔಟ್‌ 8ನೇ ಬ್ಲಾಕ್‌ನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣ ಭೈರೇಗೌಡ ಮಾತನಾಡಿ, ತಮ ಬಡಾವಣೆಯಲ್ಲಿ ತ್ಯಾಜ್ಯ ಕಸವಿಲೇವಾರಿ ವಾಹನಗಳ ಕೊರತೆಯಿದೆ. ರಸ್ತೆಗಳು ಸುಸ್ಥಿತಿಯಲಿಲ್ಲ, ಖಾಲಿ ಜಾಗದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿರುತ್ತಾರೆ ಇದರಿಂದ ಸಮಸ್ಯೆಗಳಾಗುತ್ತಿದೆ ಎಂದು ವಿವರಿಸಿದರು.

ಅಣ್ಣದಾನಯ್ಯ ಎಂಬುವರು ಮಾತನಾಡಿ, ಗಾಂಧಿಪಾರ್ಕ್‌ನಲ್ಲಿ ಅಳವಡಿಸಿರುವ ಜಿಮ್‌ ಸಲಕರಣೆಗಳು ದುಸ್ಥಿತಿಯಲ್ಲಿದ್ದು, ಅವುಗಳನ್ನು ಸರಿಪಡಿಸಬೇಕು. ವೃತ್ತಗಳಲ್ಲಿ ಹೈಮಾಸ್ಕ್‌ ದೀಪಗಳನ್ನು ಅಳವಡಿಸಬೇಕು. ಶೌಚಾಲಯ ವ್ಯವಸ್ಥೆಯನ್ನು ಸರಿ ಪಡಿಸಿ ಎಂದು ಮನವಿ ಮಾಡಿದರು.

ಬ್ಯಾಡರಹಳ್ಳಿ ದೂರವಾಣಿ ಬಡಾವಣೆ ನಿವಾಸಿಗಳ ಪರವಾಗಿ ಮಾತನಾಡಿದ ವ್ಯಕ್ತಿಯೊಬ್ಬರು ಈ ಬಡಾವಣೆ ಮೊದಲು ಗ್ರಾಮಪಂಚಾಯ್ತಿ ವ್ಯಾಪ್ತಿಗೊಳಪಟ್ಟಿದ್ದು, ಬಿಬಿಎಂಪಿ ಸೇರಿದ ಹಿನ್ನೆಲೆ ವಿದ್ಯುತ್‌ ಸಂಪರ್ಕಕ್ಕಾಗಿ 18 ಲಕ್ಷ, 20 ಲಕ್ಷ ಹಣ ಕೇಳುತ್ತಿದ್ದಾರೆ, ಮೇಕ್‌ ಓವರ್‌ ಪ್ರಮಾಣಪತ್ರ ತನ್ನಿ ಎಂದು ಹೇಳುತ್ತಿದ್ದಾರೆ. ದಯವಿಟ್ಟು ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ವಿ.ಎನ್‌.ನಾರಾಯಣ್‌ರೊಬ್ಬರು ಮಾತನಾಡಿ, ಕುವೆಂಪು ಪಾರ್ಕ್‌ನ್ನು ಅಭಿವೃದ್ಧಿ ಪಡಿಸಬೇಕು. ಮಹಿಳೆಯರಿಗೆ ಪ್ರತ್ಯೇಕ ಜಿಮ್‌ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು. ಶ್ರೀನಿವಾಸಗೌಡರು ಮಾತನಾಡಿ, ಮಾಗಡಿ ರಸ್ತೆ ಚಿಕ್ಕದಾಗಿರುವುದರಿಂದ ಸಂಚಾರ ದಟ್ಟಣೆ ತೀವ್ರವಾಗಿದೆ. ಇದನ್ನು ಸರಿಪಡಿಸಿ ಎಂದರು.

ವಾಸುದೇವ ಎಂಬುವರು ರಾಜಕಾಲುವೆಯ ನೀರು ಬಡಾವಣೆಗಳಿಗೆ ನುಗ್ಗುತ್ತಿದೆ ಅದನ್ನು ತಡೆಯಲು ಅಡ್ಡಗೋಡೆ ನಿರ್ಮಿಸಬೇಕು. ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಿ ಎಂದರು.
ಬ್ರಹಗಿರಿ ಬಡಾವಣೆಯ ಕುಮಾರಸ್ವಾಮಿ ಅವರು ಮಾತನಾಡಿ, ಬಿಡಿಎ ಸ್ವಾಧೀನ ಪತ್ರ ನೀಡಲು ಒಂದು ವರ್ಷ ತಡಮಾಡಿತ್ತು. ನೀರಿನ ಸಂಪರ್ಕ ಪಡೆಯಲು ಹೋದಾಗ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಉಪಕಾರ್‌ ಬಡಾವಣೆಯ ಡಾ. ರವಿಕುಮಾರ್‌ ಮಾತನಾಡಿ, ಕ್ಲಬ್‌ಹೌಸ್‌‍ ಜಾಗವನ್ನು ಬಿಡಿಎಯಿಂದ ಕ್ಷೇಮಾಭಿವೃದ್ಧಿ ಸಂಘಕ್ಕೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದರು.ಕೆಂಪೇಗೌಡ ನಗರದ ಪ್ರಕಾಶ್‌ ಎಂಬುವರು ತಮ ಬಡಾವಣೆಯಲ್ಲಿ ಸುಸರ್ಜಿತ ಗ್ರಂಥಾಲಯ ನಿರ್ಮಿಸುವಂತೆ ಒತ್ತಾಯಿಸಿದರು.

ದೊಡ್ಡ ಬಿದರುಕಲ್ಲಿನ ಚಂದ್ರಶೇಖರ್‌ ಅವರು ಮಾತನಾಡಿ, ಕಸದ ವಿಲೇವಾರಿ ಘಟಕ ತಮ ಪ್ರದೇಶದಲ್ಲಿದ್ದು, ಬದುಕಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.ನಂಜುಂಡಯ್ಯ ಎಂಬುವರು ಮಾತನಾಡಿ, 1971ರಲ್ಲಿ 30, 40 ನಿವೇಶನವನ್ನು 7 ಸಾವಿರ ರೂ.ಗಳಿಗೆ ಖರೀದಿಸಿದ್ದೆವು. ಈಗ ಅದರ ಮೌಲ್ಯ 48 ಲಕ್ಷ ರೂ.ಗಳಿಷ್ಟಿದೆ. ಎ ಖಾತೆಯನ್ನಾಗಿ ಪರಿವರ್ತಿಸಲು ಶೇ. 2 ರಷ್ಟು ಶುಲ್ಕ ಪಾವತಿಸಬೇಕಾದರೆ, ಸುಮಾರು 5 ಲಕ್ಷ ರೂ. ಆಗುತ್ತಿದೆ. ಇದನ್ನು ಕಡಿಮೆ ಮಾಡಿಕೊಡಿ ಎಂದು ಮನವಿ ಮಾಡಿ, ಇದರ ಜೊತೆಗೆ ಹಿರಿಯ ನಾಗರಿಕರಿಗೆ ಬಸ್‌‍ ಪ್ರಯಾಣ ಅಥವಾ ಯಾವುದಾದರೂ ಉಚಿತ ಸೌಲಭ್ಯವನ್ನು ಕಲ್ಪಿಸಿಕೊಡಿ. ನೀವೇ ಕಟ್ಟಿರುವ ಹುತ್ತದಲ್ಲಿ ನೀವೇ ಆಡಳಿತ ಮಾಡಬೇಕೆಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿಯಾಗಿ ಎಂದು ಮನವಿ ಮಾಡಿದರು.

ಈ ವೇಳೆ ಕೆಲವರು ಜೈಕಾರ ಹಾಕಿದಾಗ, ಘೋಷಣೆ ಕೂಗುವವರು ಆ ಕಡೆ ಹೋಗಿ ಎಂದು ಡಿ.ಕೆ.ಶಿವಕುಮಾರ್‌ ಗದರಿದರು. ಕೊಡಿಗೇಹಳ್ಳಿ ಪ್ರದೇಶದ ಪ್ರದೀಪ್‌ ಎಂಬುವರು ಕಾವೇರಿ ನೀರಿನ ಸಂಪರ್ಕವನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.ರಾಮಚಂದ್ರ ಎಂಬ ತಿರುಮಲಾಪುರ ನಿವಾಸಿ ತಮ ಊರನ್ನು ಜಿಬಿಎಗೆ ಸೇರಿಸಿ ಎಂದು ಮನವಿ ಮಾಡಿದರು.ಬಹಳಷ್ಟು ನಾಗರಿಕರು ಶಾಸಕ ಎಸ್‌‍.ಟಿ. ಸೋಮಶೇಖರ್‌ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಸಣ್ಣಪುಟ್ಟ ಕೊರತೆಗಳಿವೆ. ಅವುಗಳನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.

ಮಾದವನಗರದ ಪುಷ್ಪರಾಜ್‌ ಎಂಬುವರು ನಮಗೆ ಒಳ ಚರಂಡಿ ವ್ಯವಸ್ಥೆಯಿಲ್ಲ. ತಮ ಗ್ರಾಮದ ಪೈಪ್ಲೈನ್‌ಮೇಲೆ ಬೃಹತ್‌ ಗಾತ್ರದ ವಾಹನಗಳು ಸಂಚರಿಸುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಹೇರೋಹಳ್ಳಿ ಗ್ರಾಮದ ಮಂಜೇಶ್‌ ಎಂಬುವರು ತಮ ಗ್ರಾಮದಲ್ಲಿ ರಸ್ತೆಗಳು ಕಿರಿದಾಗಿವೆ. ಸಾಕಷ್ಟು ಸಂಚಾರ ದಟ್ಟಣೆ ಇದೆ. ಅಪಘಾತಗಳು ಹೆಚ್ಚಾಗುತ್ತಿವೆ. ಸರ್ಕಾರಿ ಭೂಮಿಗಳ ಒತ್ತುವರಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಬೇಕು. ರೌಡಿ ಹಾವಳಿಗಳನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಸಿ.ಎಂ. ಚಂದ್ರಕುಮಾರ್‌ ಎಂಬುವರು 8ನೇ ಮೈಲಿನಿಂದ ಮಾಗಡಿ ರಸ್ತೆವರೆಗೂ ಮುಖ್ಯರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.ಹೇರೋಹಳ್ಳಿ ವಾರ್ಡ್‌ನ ಆರ್‌ಓ, ಎಆರ್‌ಓ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅವರನ್ನು ಬದಲಾವಣೆ ಮಾಡಿಕೊಡಿ ಎಂದು ಹೇಳಿದರು.

ಮಂಗಳ ಎಂಬುವರು ಮಾತನಾಡಿ, ಚಿಕ್ಕ ನಿವೇಶನ ಖರೀದಿಸಿದ್ದೇನೆ ಈ ಮೊದಲು ನಾಲ್ಕು ಜನ ನಿವೇಶನ ಖರೀದಿಸಿದ್ದಾರೆ, ನಾನು ಐದನೇಯವಳಾಗಿ ನಿವೇಶನ ತೆಗೆದುಕೊಂಡಿದ್ದೇನೆ. ಇರುವ ಮನೆ ಒಡೆದು ಹೊಸ ಮನೆ ಕಟ್ಟಲು ಹೋದಾಗ ಕೆಲವರು ಬಂದು ಬೆದರಿಕೆ ಹಾಕಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ದೀಪಾ ಎಂಬ ಯುವತಿ ಭಾರತನಗರ 2ನೇ ಹಂತದಲ್ಲಿ ಸಾರ್ವಜನಿಕ ಸಾರಿಗೆ ತೊಂದರೆಯಿದೆ. ಮೆಟ್ರೋ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿ, ಎಲೆಕ್ಟ್ರಾನಿಕ್‌ಸಿಟಿ ಕಡೆಗಳಲ್ಲಿ ಟೆಕ್‌ಪಾರ್ಕ್‌ ಇದೆ ಎಂಬ ಕಾರಣಕ್ಕೆ ಹೆಚ್ಚುವರಿ ಬಸ್‌‍ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದಾರೆ. ಜನವಸತಿ ಇರುವ ಈ ಭಾಗದಲ್ಲಿ ಸೌಲಭ್ಯಗಳ ಕೊರತೆಯಿದೆ. ಒಂದೇ ರಸ್ತೆಯನ್ನು ಎಷ್ಟು ಬಾರಿ ಕಿತ್ತುಹಾಕಿ ಮರು ನಿರ್ಮಿಸುತ್ತಾರೆ ಎಂದು ಅಳಲು ತೋಡಿಕೊಂಡರು.

ರಮೇಶ್‌ಗೌಡ ಎಂಬುವರು ಮಲ್ಲತಹಳ್ಳಿ ಕೆರೆಯಲ್ಲಿ ಸ್ಥಳೀಯ ಶಾಸಕರ ಚೇಲಗಳು ಶೆಡ್‌ಗಳನ್ನು ಹಾಕಿಕೊಂಡಿದ್ದಾರೆ. ಅವರನ್ನು ತೆರವುಮಾಡಿ ಎಂದರು. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗೌಡ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಬೇಕು ಎಂದು ಮನವಿ ಮಾಡಿದಾಗ ನಾಡಪ್ರಭು ಹೆಸರೇ ಇದೆ. ಸಮುದಾಯ ಭವನ ಏಕೆ? ಜಾತಿಗಾಗಿ ಭವನ ಬೇಡ, ಎಲ್ಲರಿಗೂ ಸೇರಿ ಸಮುದಾಯ ಭವನ ನಿರ್ಮಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.ಮಲ್ಲತಹಳ್ಳಿಯಲ್ಲಿನ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡುವಂತೆ ಸೂಚಿಸಿದರು.

ಬೆಂಗಳೂರು : ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್‌ ಸ್ಟೋಟ, ವೃದ್ಧೆ ಸಾವು, ಮನೆ ನೆಲಸಮ

ಬೆಂಗಳೂರು,ಅ.25– ಮನೆಯೊಂದರಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಪೋಟಗೊಂಡ ಪರಿಣಾಮ ಬೃಹತ್‌ ಕಟ್ಟಡವೇ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಗರದಲ್ಲಿ ನಡೆದಿದೆ.

ಅಕ್ಕಯ್ಯಮ (80) ಮೃತಪಟ್ಟ ವೃದ್ಧೆ. ಈ ದುರಂತದಲ್ಲಿ ಕುಟುಂಬದ ಶೇಖರ್‌(52), ಕಿರಣ್‌ಕುಮಾರ್‌ (22) ಮತ್ತು ಚಂದನ್‌ (25) ಎಂಬುವವರು ಗಂಭೀರ ಗಾಯಗೊಂಡಿದ್ದು, ಈ ಪೈಕಿ ಚಂದನ್‌ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಟಿಸಿಇ ಪಾಳ್ಯದ ಆಲ್ಟರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆ.ಆರ್‌ಪುರಂ ಪೊಲೀಸ್‌‍ ಠಾಣೆ ವ್ಯಾಪ್ತಿಯ ತ್ರಿವೇಣಿ ನಗರದ ಮನೆಯೊಂದರಲ್ಲಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಪೋಟಗೊಂಡು ಈ ದುರ್ಘಟನೆ ಸಂಭವಿಸಿದೆ.

ಸ್ಪೋಟದ ತೀವ್ರತೆಗೆ ಈ ಮನೆಯ ಹಿಂಭಾಗದ ಮೂರು ಶೆಡ್‌ ಮನೆಗಳಿಗೂ ಹಾನಿಯಾಗಿದ್ದು, ಶೆಡ್‌ನಲ್ಲಿದ್ದ ಮಹಿಳೆ ಕಾಂಚನಾ ಎಂಬುವವರ ತಲೆಗೆ ಗಾಯವಾಗಿದ್ದು, ಅವರನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳದಲ್ಲಿದ್ದ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಯಲ್ಲಿ ಅಕ್ಕಪಕ್ಕದ ಮನೆಗಳ ಕಿಟಕಿಗಳು ಹಾನಿಯಾಗಿವೆ, ಗೋಡೆಗಳು ಬಿರುಕು ಬಿಟ್ಟಿವೆ. ಸುದ್ದಿ ತಿಳಿದು ಸ್ಥಳಕ್ಕೆ ಕೆಆರ್‌ಪುರಂ ಠಾಣೆ ಪೊಲೀಸರು ಹಾಗೂ ಬಾಂಬ್‌ ನಿಗ್ರಹ ದಳ ಹಾಗೂ ಶ್ವಾನದಳ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಭೀಕರ ಸ್ಪೋಟಕ್ಕೆ ಕಾರಣವೇನೆಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಟೋಟಗೊಂಡಿದೆ. ತಜ್ಞರ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಸ್‌‍ ಗೀಸರ್‌ನಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಸಹೋದರಿಯರ ದುರ್ಮರಣ

ಪಿರಿಯಾಪಟ್ಟಣ,ಅ.25- ಗ್ಯಾಸ್‌‍ ಗೀಸರ್‌ನಲ್ಲಿ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಕುಟುಂಬದ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ಜರುಗಿದೆ.ಪಿರಿಯಾಪಟ್ಟಣದ ಬೆಟ್ಟದಪುರದ ನಿವಾಸಿಯಾದ ಅಲ್ತಾಫ್ ಪಾಷಾ ಅವರ ಎರಡನೇ ಮಗಳು ಗುಲ್ಪಮ್‌ ತಾಜ್‌‍(23) ಮತ್ತು ನಾಲ್ಕನೇ ಮಗಳಾದ ಸಿವ್ರಾನ್‌ ತಾಜ್‌‍(21) ಸಾವನ್ನಪ್ಪಿರುವ ನತದೃಷ್ಟರಾಗಿದ್ದಾರೆ.

ಬೆಟ್ಟದಪುರದಿಂದ ಪಿರಿಯಾಪಟ್ಟಣದ ಜೋನಿಗೆರಿ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ಅಲ್ತ್‌ಾ ಪಾಷಾ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊನ್ನೆ ರಾತ್ರಿ 7 ಗಂಟೆ ಸುಮಾರಿನಲ್ಲಿ ಇಬ್ಬರು ಸಹೋದರಿಯರು ಸ್ನಾನದ ಮನೆಗೆ ಏಕಕಾಲಕ್ಕೆ ತೆರಳಿದ್ದರು.

ಆ ಸಂದರ್ಭದಲ್ಲಿ ಗ್ಯಾಸ್‌‍ ಗೀಸರ್‌ ಆನ್‌ ಮಾಡಿದ ತಕ್ಷಣ ಅದರಿಂದ ಬಿಡುಗಡೆಯಾದ ಅನಿಲ ಕಾರ್ಬನ್‌ ಮೊನಾಕ್ಸೈಡ್‌ ಪಾಯಿಸನ್‌ ಸೇಕೇಶನ್‌ ಆದ್ದರಿಂದ ಉಸಿರಾಡಲು ತೊಂದರೆ ಉಂಟಾಗಿ ವಿಷ ಅನಿಲ ಸೇವನೆಯಿಂದ ಸ್ಥಳದಲ್ಲಿ ಬಿದ್ದಿದ್ದಾರೆ.ಕುಟುಂಬದವರು ಗಮನಿಸಿ ಇವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಇಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ನಂತರ ಇಬ್ಬರು ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಕುಟುಂಬಸ್ಥರು ಬೆಟ್ಟದಪುರದ ಗ್ರಾಮದಲ್ಲಿ ಇವರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.

ಹಸೆ ಮಣೆ ಏರಬೇಕಿತ್ತು:
ಅಲ್ತಾಪ್‌ ಪಾಷ ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಇಬ್ಬರಿಗೆ ಮದುವೆಯಾಗಿತ್ತು. ಗುಲ್ಪಮ್‌ ತಾಜ್‌ಗೆ ನಿಶ್ಚಿತಾರ್ಥ ಕೂಡ ಆಗಿತ್ತು. ಪಟ್ಟಣದಲ್ಲಿ ಬಾಡಿಗೆಗೆ ಹೊಸ ಮನೆಗೆ ಬಂದಿದ್ದರು.
ಅಂದು ಹೊಸ ಮನೆಯಲ್ಲಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ವರನ ಕಡೆಯವರು ಇವರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿರುವುದು ದುರ್ದೈವ.

ಮೃತ ದೇಹಗಳ ಶವ ಪರೀಕ್ಷೆ ನಡೆಸಿದ ವೈದ್ಯ ಡಾಕ್ಟರ್‌ ಪ್ರಮೋದ್‌ ಕುಮಾರ್‌ ಮಾತನಾಡಿ, ಕಾರ್ಬನ್‌ ಮೋನಾಕ್ಸೈಡ್‌ ಸೇವನೆಯಿಂದ ಮೃತಪಟ್ಟಿರೋದು ಮೇಲ್ನೋಟಕ್ಕೆ ಕಂಡುಬಂದಿದ್ದು ಮೈ ಮೇಲೆ ಉಂಟಾದ ಮಚ್ಚೆಗಳು ಶ್ವಾಸಕೋಶ ಹಾಳಾಗಿರುವುದು ಕಂಡು ಬಂದಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವು ಹೇಗಾಗಿದೆ ಎಂಬುವುದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.

ಗ್ಯಾಸ್‌‍ ಗೀಸರ್‌ ಬಳಸುವಾಗ ಜನರು ಎಚ್ಚರಿಕೆಯಿಂದ ಬಳಕೆ ಮಾಡಬೇಕು.ವೆಂಟಿಲೇಟರ್‌ ಇರುವ ಕಡೆ ಗ್ಯಾಸ್‌‍ ಗೀಸರ್‌ ಬಳಕೆ ಮಾಡಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಈ ಸಂಬಂಧ ಪಟ್ಟಣದ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಚಿವ ಕೆ.ವೆಂಕಟೇಶ್‌ ಮತ್ತಿತರ ಗಣ್ಯರು ಭೇಟಿ ನೀಡಿ ಮೃತರ ಹೆಣ್ಣು ಮಕ್ಕಳ ತಂದೆ ಅಲ್ತ್‌ಾ ಪಾಷಾ ರವರಿಗೆ ಸಾಂತ್ವನ ಹೇಳಿದರು.

ಹಾಸನಾಂಬ ಹುಂಡಿಗೆ ಹರಿದುಬಂದ ಕೋಟಿ ಕೋಟಿ ಕಾಣಿಕೆ!

ಹಾಸನ,ಅ.25-ನಗರದ ಶ್ರೀ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು 3,68,12,275 ರೂ. ಸಂಗ್ರಹವಾಗಿದೆ ಎಂದು ದೇಗುಲ ಆಡಳಿತಾಧಿಕಾರಿ ಮಾರುತಿ ತಿಳಿಸಿದರು.

ನಗರದ ತೇರಾಪಂಥ್‌ ಸಮುದಾಯ ಭವನದಲ್ಲಿ ನಿನ್ನೆ ಹುಂಡಿ ಎಣಿಕೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಟಿಕೆಟ್‌ ಹಾಗೂ ಲಾಡು ಮಾರಾಟದಿಂದ 21,91,75,052ರೂ. ಹಾಗೂ ಹುಂಡಿಯಿಂದ 3,68,12,275 ರೂ. ಸೇರಿದಂತೆ ಒಟ್ಟು 25,59,87,327 ರೂ.ಹಣ ಸಂಗ್ರಹವಾಗಿದೆ ಎಂದರು.

ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿಯೇ ಇದು ದಾಖಲೆ ಪ್ರಮಾಣದ ಆದಾಯ ಗಳಿಕೆಯಾಗಿದ್ದು ಉಸ್ತುವಾರಿ ಸಚಿವರ ಶಿಸ್ತುಬದ್ಧ ಆಡಳಿತ ಮತ್ತು ಹೆಚ್ಚಿನ ವಿಶೇಷ ಪಾಸ್‌‍ ವಿತರಣೆಗೆ ಕಡಿವಾಣ ಕಾರಣದಿಂದ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಆದಾಯ ಬಂದಿದೆ.
ಅಲ್ಲದೆ ಕಳೆದ ಬಾರಿ 9 ದಿನ ಮಾತ್ರ ದರ್ಶನ ವ್ಯವಸ್ಥೆ ಇತ್ತು ಈಬಾರಿ 13 ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಆದ್ದರಿಂದ ಆದಾಯ ಹೆಚ್ಚಾಗಿದೆ ಎಂದರು.

ಕಾಣಿಕೆಯಾಗಿ ಹುಂಡಿಯಲ್ಲಿ 75 ಗ್ರಾಂ ಚಿನ್ನದ ಆಭರಣಗಳು ದೊರೆತಿದ್ದು, 1 ಕೆಜಿ 58 ಗ್ರಾಂ ಬೆಳ್ಳಿಯ ದೀಪ, ಗೆಜ್ಜೆ , ನಾಣ್ಯ, ಬೆಳ್ಳಿಯ ಬಾರ್‌ ,ಉಂಗುರ , ಸೇರಿದಂತೆ ಇತರೆ ಆಭರಣಗಳು ದೊರಕಿದೆ.ಹುಂಡಿಯಲ್ಲಿ ಇಂಡೋನೇಷ್ಯಾ ,ಮಾಲ್ಡಿಂಗ್‌್ಸ, ಅಮೇರಿಕಾ , ಸೌದಿ ಅರೇಬಿಯ, ಯುಎಇ ಸೇರಿದಂತೆ ಇತರೆ ದೇಶದ ಕರೆನ್ಸಿ ಸೇರಿದಂತೆ ಚಲಾವಣೆಯಲ್ಲಿ ಇಲ್ಲದ ಭಾರತದ 500, 1000 ಮುಖಬೆಲೆಯ ನೋಟುಗಳನ್ನು ಭಕ್ತರು ಹಾಕಿದ್ದಾರೆ.

ಹುಂಡಿ ಎಣಿಕೆ ವೇಳೆ ಭಕ್ತರ ನಾನಾ ಮನವಿ ಪತ್ರಗಳು ದೊರಕಿದ್ದು ,ದೇವಸ್ಥಾನದ ಬ್ಯಾಂಕ್‌ ಖಾತೆ ಹೊಂದಿರುವ ಕೆನರಾ ಬ್ಯಾಂಕ್‌ನ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗಳು 25ಕ್ಕೂ ಹೆಚ್ಚು ಎಣಿಕೆ ಯಂತ್ರಗಳೊಂದಿಗೆ ಬೆಳಗ್ಗೆಯಿಂದಲೂ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.

300ಕ್ಕೂ ಹೆಚ್ಚು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.ಶ್ರೀ ಸಿದ್ದೇಶ್ವರ ಸ್ವಾಮಿ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು ಸುಮಾರು 15,17,785 ರೂ. ಕಾಣಿಕೆ ಸಂಗ್ರಹವಾಗಿದೆ ಇದನ್ನು ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗುವುದು ಎಂದರು.

ಹುಟ್ಟುಹಬ್ಬದ ದಿನವೇ ಯುವಕ ಸಾವು, ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

ಕೊಪ್ಪಳ, ಅ.25- ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಹುಟ್ಟುಹಬ್ಬದ ದಿನವೇ ಮೃತಪಟ್ಟಿದ್ದು, ಪೋಷಕರು ಕೇಕ್‌ ಕತ್ತರಿಸಿ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಕನಕಗಿರಿ ಮೂಲದ ಆರ್ಯನ್‌ (22) ಮೃತಪಟ್ಟ ಯುವಕ. ಕಳೆದ 15 ದಿನಗಳ ಹಿಂದೆ ಹಾಸನ ಸಮೀಪ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಆರ್ಯನ್‌ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುಟ್ಟುಹಬ್ಬದ ದಿನವಾದ ನಿನ್ನೆ ಆರ್ಯನ್‌ ಮೃತಪಟ್ಟಿದ್ದಾನೆ. ಪೋಷಕರು ದುಃಖದ ನಡುವೆಯೇ ಮಗನ ಕೈ ಹಿಡಿದು ಕೇಕ್‌ ಕತ್ತರಿಸಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಬೆಳೆದ ಪುತ್ರ ಕಣ್ಣಮುಂದೆಯೇ ಸಾವನ್ನಪ್ಪಿದ್ದು, ಪೋಷಕರಲ್ಲಿ ದುಃಖದ ಕಟ್ಟೆ ಒಡೆದಿತ್ತು. ಆದರೂ ಸಹ ಇನ್ನೊಬ್ಬರಿಗೆ ನೆರವಾಗಲೆಂದು ಅಂಗಾಂಗ ದಾನ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.