ಬೆಂಗಳೂರು. ಅ.26- ವಂಚನೆ ಮಾಡಿದ ನೆರೆ ರಾಜ್ಯದ ಜೋಳದ ವ್ಯಾಪಾರಿಗಳಿಗೆ ಬೆಂಬಲ ನೀಡುವ ಮೂಲಕ ಕರ್ನಾಟಕ ರೈತರಿಗೆ ಅನ್ಯಾಯ ಮಾಡುತ್ತಿರುವ ವಸತಿ, ವಕ್ಫ್ , ಅಲ್ಪ ಸಂಖ್ಯಾತರ ಸಚಿವ ಜಮೀರ್ ಅಹಮದ್ಖಾನ್ ರಾಜೀನಾಮೆ ನೀಡಬೇಕೆಂದು ಸ್ವಪಕ್ಷೀಯ ನಾಯಕರೇ ಪಟ್ಟು ಹಿಡಿದಿದ್ದಾರೆ.
ಹೈದರಾಬಾದ್ ಮೂಲದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಾಪಾರಿಗಳ ಬೆಂಬಲಕ್ಕೆ ನಿಲ್ಲುವ ಮೂಲಕ ಸಚಿವ ಜಮೀರ್ ಅಹಮದ್ ಖಾನ್ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ರೈತರಿಗೆ ಅನ್ಯಾಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೆಸಂದ್ರ ಗ್ರಾಮದ ಕಾಂಗ್ರೆಸ್ ನಾಯಕ ಡಿ.ಎನ್. ರಾಮಕೃಷ್ಣ ದೂರು ನೀಡಿದ್ದು, ತೆಲಂಗಾಣ ರಾಜ್ಯ ಹೈದರಾಬಾದ್ನ ಸೈಯ್ಯದ್ ನಾಸಿರ್ ಅಹಮದ್, ಸೈಯ್ಯದ್ ಅಬ್ದುಲ್ ರಜಾಕ್, ಸೈಯ್ಯದ್ ಅಕ್ಬರ್ ಪಾಷಾ ಅವರ ವಿರುದ್ಧ ವಂಚನೆಯ ಆರೋಪದಡಿ ದೂರು ದಾಖಲಾಗಿದೆ.
ಮಂಜುನಾಥ್ ಅವರು ಪೆರೆಸಂದ್ರದಲ್ಲಿ ಎಸ್ಎಲ್ಎನ್ ಟ್ರೇಡರ್ರಸ ಸಂಸ್ಥೆ ನಡೆಸುತ್ತಿದ್ದು, ಕಳೆದ ಫೆಬ್ರವರಿ 1 ರಿಂದ ಜುಲೈ 31ರ ವರೆಗೆ ರೈತರಿಂದ ಜೋಳ ಖರೀದಿಸಿದ್ದಾರೆ. ಪರಸ್ಪರ ನಂಬಿಕೆ ಹಾಗೂ ವಿಶ್ವಾಸದ ಮೇಲೆ 1,89,27,970 ರೂ.ಗಳ ಮೌಲ್ಯದ ಜೋಳವನ್ನು ತೆಲಂಗಾಣದ ಈ ಮೂವರು ವ್ಯಾಪಾರಿಗಳ ಒಡೆತನದಲ್ಲಿರುವ ಹೆಚ್ಕೆಜಿಎನ್ ಮುಸ್ಕಾನ್ ಪಾಪ್ಕಾನ್ಟ್ರೇಡರ್ರಸ ಹಾಗೂ ಆಲ್ ರಜಾಕ್ ಮೈಜೇ ಟ್ರೇಡರ್ರಸಗೆ ಸರಬರಾಜು ಮಾಡಿದ್ದಾರೆ. ಆದರೆ ಕಳೆದ 3 ತಿಂಗಳಿನಿಂದಲೂ ಸರಬರಾಜು ಆಗಿರುವ ಜೋಳಕ್ಕೆ ಹಣ ಪಾವತಿಸದೇ ತೆಲಂಗಾಣದ ಉದ್ಯಮಿಗಳು ಸತಾಯಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಹಲವಾರು ಬಾರಿ ಮನವಿ ಮಾಡಿ ಒತ್ತಾಯಿಸಿದರೂ, ನೋಟೀಸ್ ನೀಡಿದ್ದರೂ ಕೂಡ ಉದ್ಯಮಿಗಳು ಹಣ ಪಾವತಿಸಿಲ್ಲ ಎಂದು ಮಂಜುನಾಥ್ ದೂರಿದ್ದಾರೆ. ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವಂತೆ ಮಂಜುನಾಥ್ ಸೆಪ್ಟಂಬರ್ 30ರಂದು ಪೆರೆಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಪೆರೆಸಂದ್ರ ಪಿಎಸ್ಐ ದೂರವಾಣಿಯಲ್ಲಿ ಸೂಚನೆ ನೀಡಿದ್ದಾರೆ. ಪೊಲೀಸ್ ಕ್ರಮಗಳಿಗೆ ಭಯಭೀತರಾದ ಆರೋಪಿಗಳು ಪ್ರಭಾವಿ ಸಚಿವರಾಗಿರುವ ಜಮೀರ್ ಅಹಮದ್ ಖಾನ್ ಅವರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಜಮೀರ್ ಅಹಮದ್ ಅವರು, ಪಿಎಸ್ಐಗೆ ಕರೆ ಮಾಡಿ ತೆಲಂಗಾಣದ ವ್ಯಾಪಾರಿಗಳು ನಮ ಕಡೆಯವರು. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಪ್ರಭಾವ ಬೀರುವುದಾಗಿ ತಿಳಿದು ಬಂದಿದೆ.
ಈ ಕುರಿತ ಮಾತುಕತೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಚಿವರ ನಡವಳಿಕೆ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವ ಜಾತಿಯವರು ಎಂಬ ಕಾರಣಕ್ಕಾಗಿ ವಂಚನೆ ಮಾಡಿದವರ ಬೆಂಬಲಕ್ಕೆ ಸಚಿವರು ನಿಂತಿರುವುದು ಸರಿಯಲ್ಲ ಎಂದು ರೈತರು ಕಿಡಿಕಾರಿದ್ದಾರೆ.
ದೂರುದಾರ ರಾಮಕೃಷ್ಣ ಅವರು ಕಾಂಗ್ರೆಸ್ ನಾಯಕರಾಗಿದ್ದು ಸ್ವ ಪಕ್ಷೀಯ ಸಚಿವರ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಮೀರ್ ಅಹಮದ್ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ರೈತರಿಗೆ ಅನ್ಯಾಯವಾಗಿದ್ದರೂ ಪ್ರಭಾವ ಬೀರಿ ವ್ಯಾಪಾರಿಗಳನ್ನು ರಕ್ಷಿಸುತ್ತಿರುವ ಜಮೀರ್ ಅಹಮದ್ಖಾನ್ ಸಂಪುಟದಲ್ಲಿ ಮುಂದುವರಿಯುವ ನೈತಿಕತೆ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೀರ್ ಅಹಮದ್ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ನಾನು ರೈತರಿಂದ ವಿಶ್ವಾಸದ ಮೇಲೆ ಜೋಳ ಖರೀದಿಸಿದ್ದೇನೆ. ನಮಿಂದ ಜೋಳ ಪಡೆದುಕೊಂಡ ತೆಲಂಗಾಣದ ವ್ಯಾಪಾರಿಗಳು ನಿಗದಿತ ಸಮಯಕ್ಕೆ ಹಣ ನೀಡಿದ್ದರೆ, ಯಾವುದೇ ಸಮಸ್ಯೆಗಳಾಗುತ್ತಿರಲಿಲ್ಲ. ಆದರೆ ಅವರು ವಂಚನೆ ಮಾಡಿದ್ದಾರೆ.
ಇದರಿಂದ ನಾನು ನಮ ರಾಜ್ಯದ ರೈತರಿಗೆ ಹಣ ಪಾವತಿಸಲಾಗುತ್ತಿಲ್ಲ, ಎರಡು ತಿಂಗಳಿನಿಂದಲೂ ಜೋಳ ಖರೀದಿಸುವುದನ್ನು ನಿಲ್ಲಿಸಿದ್ದೇನೆ. ಕ್ವಿಂಟಾಲ್ಗೆ 6 ಸಾವಿರ ರೂಪಾಯಿಗಳಷ್ಟಿದ್ದ ಜೋಳದ ಬೆಲೆ ಈಗ 3 ಸಾವಿರ ರೂ.ಗೆ ಕುಸಿದಿದೆ. ಸಚಿವರ ಪ್ರಭಾವದಿಂದಾಗಿ ಆರೋಪಿಗಳು ರಕ್ಷಣೆ ಪಡೆದಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.
