Thursday, November 6, 2025
Home Blog Page 27

ಕಾರು ಅಪಘಾತ : ಪ್ರಾಣಾಪಾಯದಿಂದ ಪಾರಾದ ಉತ್ತರ ಪ್ರದೇಶದ ಸಚಿವೆ ಬೇಬಿ ರಾಣಿ ಮೌರ್ಯ

ಲಕ್ನೋ, ಅ.25- ಆಗ್ರಾ-ಲಕ್ನೋ ಎಕ್ಸ್ ಪ್ರೆಸ್‌‍ವೇಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬೇಬಿ ರಾಣಿಮೌರ್ಯ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನಿನ್ನೆ ರಾತ್ರಿ ಲಕ್ನೋಗೆ ತೆರಳುತ್ತಿದ್ದಾಗ ಸಚಿವರ ಕಾರಿನ ಮುಂದೆ ಸಾಗುತ್ತಿದ್ದ ಟ್ರಕ್‌ನ ಒಂದು ಟೈರು ಇದ್ದಕ್ಕಿದ್ದಂತೆ ಸಿಡಿದಿದೆ. ಬಳಿಕ ನಿಯಂತ್ರಣ ತಪ್ಪಿ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ.
ಕೂಡಲೇ ಚಾಲಕ ಕಾರನ್ನು ರಸ್ತೆ ಬದಿಗೆ ತಂದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಅಪಘಾತದಲ್ಲಿ ಕಾರಿಗೆ ಭಾರಿ ಹಾನಿಯಾಗಿದ್ದು, ಸಚಿವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಅತ್ರಾಸ್‌‍ ಜಿಲ್ಲೆಯ ಹಲವೆಡೆ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಲಕ್ನೋಗೆ ವಾಪಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಚಿವರನ್ನು ಅಧಿಕಾರಿಗಳು ಮತ್ತೊಂದು ಕಾರಿನಲ್ಲಿ ಲಕ್ನೋಗೆ ಕಳುಹಿಸಿದ್ದಾರೆ. ಎಕ್‌್ಸಪ್ರೆಸ್‌‍ವೇನಲ್ಲಿ ಅಪಘಾತಗಳನ್ನು ತಡೆಗಟ್ಟಲು ಕಠಿಣಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2025)

ನಿತ್ಯ ನೀತಿ : ಕೆಲವರು ಎಲ್ಲಿಗೇ ಹೋದರೂ ಅಲ್ಲಿ ಸಂತೋಷ ಉಂಟಾಗುತ್ತದೆ, ಕೆಲವರು ಅಲ್ಲಿಂದ ತೆರಳಿದ ಬಳಿಕ ಸಂತೋಷ ಪಸರಿಸುತ್ತದೆ.- ಆಸ್ಕರ್‌ ವೈಲ್ಡ್

ಪಂಚಾಂಗ : ಶನಿವಾರ, 25-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಚತುರ್ಥಿ / ನಕ್ಷತ್ರ: ಅನುರಾಧಾ / ಯೋಗ: ಶೋಭನ ಪೂರ್ಣ / ಕರಣ: ವಣಿಜ
ಸೂರ್ಯೋದಯ – ಬೆ.06.12
ಸೂರ್ಯಾಸ್ತ – 5.56
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ಬಹಳ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ವೃಷಭ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು. ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ಮಿಥುನ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ. ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ

ಕಟಕ: ರಕ್ತ ಸಂಬಂಧಿಗಳ ವಿರೋಧ ಎದುರಿಸ ಬೇಕಾಗುತ್ತದೆ.
ಸಿಂಹ: ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಬೆಳೆಯುವ ನಿಮಗೆ ಸಂತೃಪ್ತಿಯ ದಿನ.
ಕನ್ಯಾ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ. ಜನಪ್ರಿಯತೆ ಗಳಿಸುವಿರಿ.

ತುಲಾ: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಬೇಡ.
ವೃಶ್ಚಿಕ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಧನುಸ್ಸು: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.

ಮಕರ: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.
ಕುಂಭ: ಪೂರ್ವಜರ ಆಸ್ತಿಯಿಂದ ಲಾಭ ಸಿಗಲಿದೆ. ಕಿರಿಯ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ.
ಮೀನ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.

ಮೊಬೈಲ್‌ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ

ಬೆಂಗಳೂರು: ಮೊಬೈಲ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡು ಬಹುಅಂಗಾಂಗ ಹಾನಿಗೊಳಗಾಗಿದ್ದ 19 ವರ್ಷದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ನಗರದ ಸ್ಪರ್ಶ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ತನ್ನ ಮನೆಯಲ್ಲಿ ಮೊಬೈಲ್‌ ನೋಡುತ್ತಿದ್ದಾಗ 19 ವರ್ಷದ ಯುವಕ ಪ್ರಥಮ್‌ (ಹೆಸರು ಬದಲಿಸಲಾಗಿದೆ) ಮೊಬೈಲ್‌ ಅಕಸ್ಮಾತ್‌ ಸ್ಫೋಟಿಸಿತ್ತು.. ಮಧುಮೇಹದಿಂದಲೂ ಬಳಲುತ್ತಿದ್ದ ಪ್ರಥಮ್‌ರನ್ನು ತಕ್ಷಣ ಇನ್‌ಫ್ಯಾಂಟ್ರಿ ರಸ್ತೆಯ ಸ್ಪರ್ಶ್‌ ಆಸ್ಪತ್ರೆಗೆ ಕರೆ ತರಲಾಗಿತ್ತು. ತಮ್ಮ ಪುತ್ರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆತನ ಮುಖದ ತುಂಬಾ ಕಪ್ಪು ಮಸಿ ತುಂಬಿಕೊಂಡು ಮುಖದ ತುಂಬ ಗಾಯಗಳಾಗಿ ಬಲ ಗೈ ಊದಿಕೊಂಡಿದ್ದನ್ನು ಕಂಡ ಪ್ರಥಮ್‌ ತಂದೆ ಆಸ್ಪತ್ರೆಗೆ ದಾಖಲಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತವಾದ ಸ್ಪರ್ಶ್‌ ಆಸ್ಪತ್ರೆಯ ಬಹು ವಿಭಾಗೀಯ ತಜ್ಞ ವೈದ್ಯರ ತಂಡ ಯುವಕನು ಮೊಬೈಲ್‌ ಸ್ಫೋಟದಿಂದಾಗಿ ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎಂಬ ಮಾರಣಾಂತಿಕ ಸ್ಥಿತಿಗೆ ತಲುಪಿದ್ದನ್ನು ಪತ್ತೆ ಮಾಡಿದರು. ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ತುತು ಚಿಕಿತ್ಸಾ ತಜ್ಞರು, ಮೂಳೆ ತಜ್ಷರು ಹಾಗೂ ಪ್ಲಾಸ್ಟಿಕ್‌ ಸರ್ಜರಿ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತು. ಮೊದಲಿಗೆ ಯುವಕನನ್ನು ಸ್ಥಿರ ಸ್ಥಿತಿಗೆ ಮರಳಿಸುವುದು ವೈದ್ಯರಿಗೆ ಬಹುದೊಡ್ಡ ಸವಾಲಾಗಿತ್ತು. ಜೊತೆಗೆ ವಿಷಕಾರಿ ಪದಾರ್ಥಗಳ ಹೊಗೆಯಿಂದ ಬಹುತೇಕ ನಿಷ್ಕ್ರಿಯಗೊಂಡಿದ್ದ ಶ್ವಾಸಕೋಶ ಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗಿತ್ತು.

ತೀವ್ರವಾಗಿ ಘಾಸಿಗೊಂಡಿದ್ದ ಕೈಗಳು ಇನ್ನಷ್ಟು ಹಾನಿಗೊಳಗಾಗುವುದನ್ನು ತಪ್ಪಿಸಬೇಕಾಗಿದ್ದು ತುರ್ತು ಚಿಕಿತ್ಸಾ ತಜ್ಞರಾದ ಡಾ.ಹೇಮಂತ್‌ ಹೆಚ್‌.ಆರ್‌, ಡಾ.ಟಿ.ಎಸ್‌.ಶ್ರೀನಾಥ್‌ ಕುಮಾರ್‌, ಮೂಳೆ ತಜ್ಞ ಡಾ.ರವಿಕುಮಾರ್‌ ಮುಖರ್ತಿಯಲ್‌, ಪ್ಲಾಸ್ಟಿಕ್‌ ಸರ್ಜನ್‌ ಡಾ.ಕಾರ್ತಿಕ್‌ ಆದಿತ್ಯ ವಿ.ಎಸ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶನ್‌ ನಾಗ್‌ ತಂಡ ಯುವಕನನ್ನು ಪ್ರಜ್ಞಾವಸ್ಥೆಗೆ ಮರಳಿಸಿ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

.ಇದೊಂದು ಅತ್ಯಂತ ಸಂಕೀರ್ಣವಾಗಿದ್ದ ಮತ್ತು ರೋಗಿಯ ಪ್ರಾಣಕ್ಕೆ ಕುತ್ತು ತರುವಂತಹ ಸ್ಥಿತಿಯಾಗಿದ್ದು ಬಹು ಅಂಗಾಂಗ ವ್ಯವಸ್ಥೆಯ ಮೇಲೆ ಸ್ಫೋಟದ ಗಂಭೀರ ಪರಿಣಾಮಗಳುಂಟಾಗಿದ್ದವು. ಸುಟ್ಟ ಗಾಯಗಳು,ಶ್ವಾಸಕೋಶಕ್ಕೆ ತೀವ್ರ ತರದ ಹಾನಿ, ಡಯಾಬಿಟಿಸ್‌ನಿಂದಾಗಿ ಚಯಾಪಚಯ ಪ್ರಕ್ರಿಯೆಗೆ ತೊಂದರೆ ಉಂಟಾಗಿತ್ತು. ಮಧುಮೇಹವಿರುವುದರಿಂದ ದೇಹದ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಮೊದಲೇ ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸಾ ಕ್ರಮ ನಿರ್ಧರಿಸಿ ಬಹು ಅಂಗಾಂಗ ವೈಫಲ್ಯವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಿರಿಯ ಸಮಾಲೋಚಕ ಡಾ. ಹೇಮಂತ್‌ ಹೆಚ್‌.ಆರ್‌.ತಿಳಿಸಿದರು.

ತಜ್ಞ ವೈದ್ಯರ ಸಮೂಹ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿ ಸಹಜ ಸ್ಥಿತಿಗೆ ಮರಳಿಸುವುದು ಸಾಧ್ಯವಾಯಿತು ಎಂದು ಸ್ಪರ್ಶ್‌ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶನ್‌ ನಾಗ್‌ ಹೇಳಿದರು.

ಭವಿಷ್ಯದಲ್ಲಿ ಆನೇಕಲ್‌ ಕೂಡ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ : ಡಿ.ಕೆ.ಶಿವಕುಮಾರ್‌

ಆನೇಕಲ್‌, ಅ.24- `ಆನೇಕಲ್‌ ಭಾಗವನ್ನು ಭವಿಷ್ಯದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಲಾಗುವುದು’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.
ಚಂದಾಪುರ, ಜಿಗಣಿ, ಕೋನಪ್ಪನ ಅಗ್ರಹಾರಕ್ಕೆ ಆಗಮಿಸಿ ಸ್ಥಳಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಆನೇಕಲ್‌ಗೆ ಈಗಾಗಲೇ ಕಾವೇರಿ ಕುಡಿಯುವ ನೀರು ನೀಡಲಾಗುತ್ತಿದೆ, ಭವಿಷ್ಯದಲ್ಲಿ ನೀಡಬೇಕಾದ ಎಲ್ಲಾ ಸವಲತ್ತುಗಳು ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು' ಎಂದು ಹೇಳಿದರು. ಈ ಭಾಗದಲ್ಲಿ ಈಗಿನಿಂದಲೇ ಸಂಚಾರ ದಟ್ಟಣೆ ನಿಯಂತ್ರಣ ಯೋಜನೆ ರೂಪಿಸಬೇಕು,. ನಗರ ಬೆಳವಣಿಗೆ ಆದ ನಂತರ ಯೋಜನೆ ರೂಪಿಸಲು ಕಷ್ಟವಾಗಲಿದೆ ‘ ಎಂದು ತಿಳಿಸಿದರು.

`ಜಿಬಿಎ ವ್ಯಾಪ್ತಿಗೆ ಭವಿಷ್ಯದಲ್ಲಿ ಸೇರಲು ಅರ್ಹತೆ ಗಡಿಭಾಗ, ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರದೇಶಗಳನ್ನು ನಾನೇ ಖುದ್ದು ವೀಕ್ಷಣೆ ಮಾಡಿದ್ದೇನೆ. ಕೆಲವು ನಗರ ಸಭೆಗಳು, ಪುರಸಭೆಗಳು, ಪಟ್ಟ ಪಂಚಾಯಿತಿಗಳು ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಗಡಿ ಪ್ರದೇಶಗಳು ನನ್ನ ಇಲಾಖೆ ವ್ಯಾಪಿಗೆ ಸೇರಿದೆ. ಈ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

`ಬಯೋಕಾನ್‌ ಸಂಸ್ಥೆಯು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಬೆಂಗಳೂರು ನಗರ ವ್ಯಾಪ್ತಿ ಹಾಗೂ ಪಂಚಾಯಿತಿ ವ್ಯಾಪ್ತಿ ಬೇರೆ ಬೇರೆ ಎಂಬುದನ್ನು ಅವರು ಅರಿಯಬೇಕು’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಆನೇಕಲ್‌ ಕ್ಷೇತ್ರದ ಶಾಸಕ ಬಿ.ಶಿವಣ್ಣ , ಬಮೂಲ್‌ ಮಾಜಿ ಅಧ್ಯಕ್ಷ ಆರ್‌.ಕೆ.ರಮೇಶ್‌, ಮುಖಂಡರಾದ ಹಳೆ ಚಂದಾಪುರ ಶ್ರೀಧರ್‌, ಆನಂದ್‌ರೆಡ್ಡಿ, ರವಿ, ಹಾಪ್‌ ಕಾಮ್ಸೌ ಬಾಬುರೆಡ್ಡಿ, ಗಟ್ಟಹಳ್ಳಿ ಸೀನಪ್ಪ, ಚಂದಾಪುರ ಪುರಸಭೆ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.

ಸಮೀಕ್ಷೆಗೆ ಬೆಂಗಳೂರಿನ ಹೈಟೆಕ್‌ ಜನರು ಡೋಂಟ್‌ಕೇರ್‌

ಬೆಂಗಳೂರು, ಅ.24– ಸಿಲಿಕಾನ್‌ ಸಿಟಿಯಲ್ಲಿ ವಾಸಿಸುತ್ತಿರುವ ಬುದ್ದಿವಂತ ಜನರ ಬೇಜವಬ್ದಾರಿ ಮಾತ್ರ ದೂರ ಆಗಿಲ್ಲ.ಮತದಾನಕ್ಕೂ ಮುಂದೆ ಬಾರದ, ಕಸ ಎಲ್ಲೆಂದರಲ್ಲಿ ಎಸೆಯುವ ಈ ಜನರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೂ ಕ್ಯಾರೆ ಎನ್ನುತ್ತಿಲ್ಲ.

ಇದುವರೆಗೂ ಜಿಬಿಎ ವ್ಯಾಪ್ತಿಯಲ್ಲಿ ಆಗಿರುವುದು ಕೇವಲ ಶೇ.40 ರಷ್ಟು ಸಮೀಕ್ಷೆ ಮಾತ್ರ ಎಂದರೆ ನೀವೇ ಊಹಿಸಿಕೊಳ್ಳಿ ಈ ಜನರ ಬೇಜವಾಬ್ದರಿತನವನ್ನು. ಜಾತಿ ಗಣತಿಗೆ ಸಿಲಿಕಾನ್‌ ಸಿಟಿ ಜನ ಹಿಂದೇಟು ಹಾಕುತ್ತಿರುವುದು ಕಂಡು ಬಂದಿದ್ದು, ಲಕ್ಷಾಂತರ ಮಂದಿ ನಮಗೆ ಸಮೀಕ್ಷೆ ಬೇಡವೇ ಬೇಡ ಎನ್ನುತ್ತಿದ್ದಾರಂತೆ.

ಇನ್ನು ಮಳೆ ಗಾಳಿ ಎನ್ನದೆ ಸಮೀಕ್ಷೆಗೆ ತೆರಳುವ ಗಣತಿದಾರರಿಗೆ ಸರಿಯಾದ ರೆಸ್ಪಾನ್‌್ಸ ಸಿಕ್ತಿಲ್ಲ. ನಗರದಲ್ಲಿ ಸುಮಾರು 1.40 ಕೋಟಿ ಜನ ಸಂಖ್ಯೆ ಇದ್ದು, ಸುಮಾರು 45 ಲಕ್ಷ ಮನೆಗಳಿವೆ ಎಂದು ಅಂದಾಜಿಸಲಾಗಿದೆ.

ಕೋಟಿ ಕೋಟಿ ಮಂದಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಮೀಕ್ಷೆ ಗೆ ಸ್ವಂದಿಸುತ್ತಿದ್ದಾರೆ. ಅರ್ಧದಷ್ಟು ಮಂದಿ ಸಮೀಕ್ಷೆಗೆ ಡೊಂಟ್‌ ಕೇರ್‌ ಅನ್ನುತ್ತಿದ್ದಾರೆ.ಮನೆ ಬಾಗಿಲಿಗೆ ಹೊಗುವ ಗಣತಿದಾರರಿಗೆ ಸಮೀಕ್ಷೆ ಬೇಡ ಅಂತ ಹೇಳಿ ಕಳುಹಿಸುತ್ತಿರುವವ ಸಂಖ್ಯೆ ಹೆಚ್ಚಳವಾಗುತ್ತಿದೆ.

ಮುಖ್ಯಮಂತ್ರಿಗಳು ಸೆ.30 ರೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಡೆಡ್‌ಲೈನ್‌ ನೀಡಿದ್ದಾರೆ. ಆದರೆ, ಸಿಟಿ ಮಂದಿ ಮಾತ್ರ ಗಣತಿಗೆ ಡೋಂಟ್‌ಕೇರ್‌ ಎನ್ನುತ್ತಿದ್ದಾರೆ ಏನು ಮಾಡುವುದು ಎಂದು ತಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌ ಅವರು.

ನ್ಯಾಯಾಲಯಗಳ ತೀರ್ಪಿನ ಕುಂಟುನೆಪ ಹೇಳಿದರೆ ಸಹಿಸುವುದಿಲ್ಲ : ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಬೆಂಗಳೂರು, ಅ.24- ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವ ಸಲುವಾಗಿ ಅಧಿಕಾರಿಗಳು ನ್ಯಾಯಾಲಯಗಳ ತೀರ್ಪಿನ ಕುಂಟು ನೆಪ ಹೇಳಿದರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ವಿಧಾನಸೌಧ ಸಭಾಂಗಣದಲ್ಲಿ ನಡೆದ ಬಂಡವಾಳ ಹೂಡಿಕೆ ಆಕರ್ಷಣೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಇದಕ್ಕಾಗಿ ಭೂ ಬಳಕೆ ಬದಲಾವಣೆ ಪ್ರಕ್ರಿಯೆ ಸೇರಿದಂತೆ ವಿವಿಧ ಎನ್‌ಒಸಿಗಳ ನೀಡಿಕೆಯ ಕಾಲಮಿತಿಯನ್ನು ಕಡಿಮೆ ಮಾಡಬೇಕು. ಕಾಲಮಿತಿಯನ್ನು ಕಡಿಮೆ ಮಾಡುವ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆ ಅನುಮೋದನೆ ವಿಳಂಬವಾಗುತ್ತಿದ್ದು, ಇದನ್ನು ತ್ವರಿತಗೊಳಿಸಬೇಕು. ಇದಕ್ಕಾಗಿ ಮಂಡಳಿಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.ಕೈಗಾರಿಕೆಗಳಿಗೆ ರಸ್ತೆ, ನೀರು, ವಿದ್ಯುತ್‌ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಕುರಿತಾಗಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.

ರಾಜ್ಯದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರೂ.10.27 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲಾಗಿದ್ದು, ಈಗಾಗಲೇ ಶೇ.60ರಷ್ಟು ಹೂಡಿಕೆಗಳು ಅನುಷ್ಠಾನ ಹಂತದಲ್ಲಿವೆ ಎಂದಿದ್ದಾರೆ.

ಸುಮಾರು ರೂ.1.5ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ವಿವಿಧ ಹಂತದಲ್ಲಿವೆ. ಸುಪ್ರೀಂಕೋರ್ಟ್‌ ತೀರ್ಪಿನ ನೆಪ ಹೇಳಿಕೊಂಡು ಅಧಿಕಾರಿಗಳು ಕೂರಬಾರದು. ಅಕ್ಕ ಪಕ್ಕದ ರಾಜ್ಯಗಳಿಗೆ ಇರುವುದೂ ಇದೇ ಸುಪ್ರೀಂಕೋರ್ಟ್‌. ಬೇರೆ ರಾಜ್ಯಗಳಿಗೆ ಆಗದ ಸಮಸ್ಯೆ ನಮಗೆ ಆಗತ್ತೆ ಅನ್ನುವ ನೆಪ ಹೇಳಿಕೊಂಡು ಕೂತರೆ ಕ್ರಮ ಜರುಗಿಸಬೇಕಾಗತ್ತೆ ಎಂದು ಎಚ್ಚರಿಕೆ ನೀಡಿದರು.

ಕೆಎಸ್‌‍ಡಿಎಲ್‌ನಿಂದ ಸರ್ಕಾರಕ್ಕೆ 135 ಕೋಟಿ ರೂ.ಡಿವಿಡೆಂಡ್‌ ಚೆಕ್‌ ಹಸ್ತಾಂತರ

ಬೆಂಗಳೂರು, ಅ.24- ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್‌‍ಡಿಎಲ್‌‍) 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳನ್ನು ಇಂದು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.

ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪರವಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಕೆಎಸ್‌‍ಡಿಎಲ್‌‍ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಈ ಮೊತ್ತದ ಚೆಕ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.

ಸಚಿವ ಪಾಟೀಲರು ಮಾತನಾಡಿ, ಕೆಎಸ್‌‍ಡಿಎಲ್‌‍ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭವನ್ನು ಗಳಿಸಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರ್ಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದಿದ್ದಾರೆ.

2022-23ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ 54 ಕೋಟಿ ರೂಪಾಯಿ ಡಿವಿಡೆಂಡ್‌ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ 27 ಕೋಟಿ ರೂ. ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಕೆ.ಜೆ.ಜಾರ್ಜ್‌, ಪ್ರಿಯಾಂಕ್‌ ಖರ್ಗೆ, ಡಾ.ಎಂ.ಸಿ.ಸುಧಾಕರ್‌, ಸಂತೋಷ ಲಾಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಪ್ರಶಾಂತ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣ : ಪ್ರಮುಖ ಆರೋಪಿಗಳಿಗಾಗಿ ಶೋಧ

ಬೆಂಗಳೂರು,ಅ.24– ಮೈಸೂರಿನ ಹೊರವಲಯದ ಫಾರ್ಮ್‌ಹೌಸ್‌‍ನಲ್ಲಿ ಬೆಳಕಿಗೆ ಬಂದ ಹೆಣ್ಣು ಭ್ರೂಣ ಪತ್ತೆ -ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನರ್ಸ್‌ ಸೇರಿ ನಾಲ್ವರನ್ನು ಬಂಧಿಸಿರುವ ವರುಣಾ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವವರಿಗಾಗಿ ಶೋಧ ಮುಂದುವರೆದಿದೆ.

ಬನ್ನೂರಿನ ಎಸ್‌‍ಕೆ ಆಸ್ಪತ್ರೆ ನರ್ಸ್‌ ಆಗಿರುವ ಶ್ಯಾಮಲಾ ಎಂಬುವವರಿಗೆ ಸೇರಿದ ಈ ಫಾರ್ಮ್‌ಹೌಸ್‌‍ ಮಂಡ್ಯ ತಾಲ್ಲೂಕು ಹಾಡ್ಯ-ಹುಳ್ಳೇನಹಳ್ಳಿ ನಡುವೆ ಇದ್ದು, ಎರಡು ತಿಂಗಳ ಹಿಂದೆಯಷ್ಟೆ ಗೃಹಪ್ರವೇಶವಾಗಿದೆ.

ಈ ಫಾರ್ಮ್‌ಹೌಸ್‌‍ನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆ ನಡೆಯುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಡಿಹೆಚ್‌ಓ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೊನ್ನೆ ಈ ಫಾರ್ಮ್‌ಹೌಸ್‌‍ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಲಾಗಿದ್ದು, ಕೆಲವು ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಎಷ್ಟು ದಿನಗಳಿಂದ ಈ ದಂಧೆ ನಡೆಯುತ್ತಿದೆ, ಎಷ್ಟು ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯಾಗಿದೆ ಎಂಬುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೈಸೂರು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈ ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವವರ ಪತ್ತೆ ಕಾರ್ಯ ಮುಂದುವರೆದಿದೆ.

ಇಬ್ಬರು ಪ್ರಮುಖ ಆರೋಪಿಗಳು ಸಿಕ್ಕಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು. ವರುಣ ಪೊಲೀಸ್‌‍ಠಾಣೆಯಲ್ಲಿ ಈಗಾಗಲೇ 7 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಮೂವರಿಗಾಗಿ ಶೋಧ ಮುಂದುವರೆದಿದೆ ಎಂದು ಅವರು ಹೇಳಿದರು.ಹೆಣ್ಣು ಭ್ರೂಣ ಪತ್ತೆ-ಹತ್ಯೆಯ ಪ್ರಮುಖ ಆರೋಪಿಗಳಿಗಾಗಿ ವರುಣಾ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬೇರೆ ರಾಜ್ಯಗಳಲ್ಲಿ ನೋದಾಯಿಸಿಕೊಂಡು ತೆರಿಗೆ ವಂಚನೆ : 30ಕ್ಕೂ ಹೆಚ್ಚು ಖಾಸಗಿ ಬಸ್‌‍ಗಳು ವಶ

ಬೆಂಗಳೂರು, ಅ.24- ಬೇರೆ ಬೇರೆ ರಾಜ್ಯಗಳಲ್ಲಿ ನೋದಾಯಿಸಿಕೊಂಡು ತೆರಿಗೆ ವಂಚಿಸಿ, ರಾಜ್ಯದಲ್ಲಿ ಸಂಚರಿಸುತ್ತಿದ್ದ 30ಕ್ಕೂ ಹೆಚ್ಚು ಖಾಸಗಿ ಬಸ್‌‍ಗಳನ್ನು ಸಾರಿಗೆ ಇಲಾಖೆಯ ವಿಶೇಷ ಕಾರ್ಯಪಡೆ ವಶಕ್ಕೆ ಪಡೆದುಕೊಂಡಿದೆ.

ನಾಗಾಲ್ಯಾಂಡ್‌, ಅರುಣಾಚಲ ಪ್ರದೇಶ, ತಮಿಳು ನಾಡು, ಪಾಂಡೀಚೇರಿ ಸೇರಿದಂತೆ ವಿವಿಧ ರಾಜ್ಯ ಗಳಲ್ಲಿ ನೋಂದಣಿ ಮಾಡಿಸಿಕೊಂಡು ರಾಜ್ಯದಲ್ಲಿ ಸಂಚರಿಸುತ್ತಿರುವ ಹಲವು ಖಾಸಗಿ ಬಸ್‌‍ಗಳು ತೆರಿಗೆ ಪಾವತಿಸದೇ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.2023ರ ಅಖಿಲ ಭಾರತ ಸಾರಿಗೆ ಪರವಾನಗಿ ನಿಯಮದಡಿ ಯಾವುದೇ ರಾಜ್ಯದಲ್ಲಿ ವಾಹನಗಳನ್ನು ಅದರಲ್ಲೂ ವಾಣಿಜ್ಯ ಉದ್ದೇಶಕ್ಕಾಗಿ ಖಾಸಗಿ ಬಸ್‌‍ಗಳನ್ನು ನೋಂದಾಯಿಸಿದರೆ ಶುಲ್ಕ 90 ಸಾವಿರ ರೂ.ಗಳನ್ನು ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಇದು ಕೇವಲ ನೋಂದಣಿ ಶುಲ್ಕ ಮಾತ್ರವಾಗಿದ್ದು, ತೆರಿಗೆಯೆಂದು ಪರಿಗಣಿಸಲ್ಪಡುವುದಿಲ್ಲ.

ಯಾವುದೇ ರಾಜ್ಯದಲ್ಲಿ ಬಸ್‌‍ಗಳು ಸಂಚರಿಸಬೇಕಾದರೂ ಆಯಾ ರಾಜ್ಯಕ್ಕೆ ಸಾರಿಗೆ ಇಲಾಖೆ ನಿಗದಿಪಡಿಸಿದ ತೆರಿಗೆಯನ್ನು ಪಾವತಿಸಬೇಕಿದೆ. ಆದರೆ ಬಹುತೇಕ ಟ್ರಾವೆಲ್‌್ಸ ಸಂಸ್ಥೆಗಳು ತೆರಿಗೆ ಪಾವತಿಸದೇ ಹೊರ ರಾಜ್ಯದಲ್ಲಿ ನೋಂದಣಿಯ ವೇಳೆ ಪಾವತಿಸಿದ ಶುಲ್ಕದ ರಶೀದಿಯನ್ನೇ ತೋರಿಸಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಇಂತಹ ಬಸ್‌‍ಗಳನ್ನು ಬೆನ್ನತ್ತಿದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಶೋಭಾ ಅವರ ನೇತೃತ್ವದ ಕಾರ್ಯಪಡೆ 30ಕ್ಕೂ ಹೆಚ್ಚು ಖಾಸಗಿ ಬಸ್‌‍ಗಳನ್ನು ವಶಕ್ಕೆ ಪಡೆದುಕೊಂಡಿದೆ. ತೆರಿಗೆ ಪಾವತಿಯ ಬಳಿಕ ಬಸ್‌‍ಗಳನ್ನು ಬಿಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಓಂಕಾರೇಶ್ವರಿ, ಗಾಯತ್ರಿ, ದೀಪಾ ಸೇರಿದಂತೆ 5 ಮಂದಿ ಆರ್‌ಟಿಓಗಳು 25 ಮಂದಿ ಮೋಟಾರ್‌ ಇನ್‌್ಸಪೆಕ್ಟರ್‌ಗಳ ತಂಡ ಭಾಗವಹಿಸಿತ್ತು.

ತೆರಿಗೆ ವಂಚಿಸುತ್ತಿದ್ದ ಖಾಸಗಿ ಬಸ್‌‍ಗಳನ್ನು ಅರ್ಧ ದಾರಿಯಲ್ಲೇ ತಡೆದು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿ ಬಸ್‌‍ಗಳನ್ನು ವ್ಯವಸ್ಥೆ ಮಾಡಿ, ಶುಲ್ಕ ಪಡೆಯದೆ ಮುಂದಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವ ಖಾಸಗಿ ಬಸ್‌‍ಗಳ ಮಾಲೀಕರು ಇಲ್ಲಿ ತೆರಿಗೆ ಪಾವತಿಸದೇ ಮತ್ತು ಯಾವುದೇ ನಿಯಮಗಳಿಗೂ ಬಗ್ಗದೆ ಸಾರಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ಹಬ್ಬ ಹರಿ ದಿನಗಳಲ್ಲಿ ದುಬಾರಿ ಪ್ರಯಾಣ ದರ ವಸೂಲಿ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದರು. ಅವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡಿರುವುದರಿಂದ ಅವರ ಪರವಾನಗಿಯನ್ನು ಅಮಾನತುಗೊಳಿಸಲಾಗದೆ, ರಾಜ್ಯ ಸರ್ಕಾರ ಅಸಹಾಯಕವಾಗಿತ್ತು. ಇದಕ್ಕಾಗಿ ಇತ್ತೀಚೆಗೆ ಕಾನೂನು ತಿದ್ದುಪಡಿಯನ್ನು ತರಲಾಗಿದೆ.ನೋಂದಣಿ ಶುಲ್ಕ ಮಾತ್ರ ಪಾವತಿಸಿ, ತೆರಿಗೆ ಪಾವತಿಸದೆ ವಂಚನೆ ಮಾಡುತ್ತಿದ್ದ ಬಸ್‌‍ ಮಾಲೀಕರಿಗೆ, ಸಾರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ನಿನ್ನೆ ತಡ ರಾತ್ರಿ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಅಪಘಾತದಿಂದಾಗಿ ಬೆಂಕಿಗಾಹುತಿಯಾದ ಖಾಸಗಿ ಬಸ್‌‍ ಕೂಡ ಜಾರ್ಖಂಡ್‌ನ ನೋಂದಣಿ ಸಂಖ್ಯೆ ಹೊಂದಿತ್ತು ಎನ್ನಲಾಗಿದೆ. ಅಪಘಾತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್‌‍ಗಳಲ್ಲಿನ ಸುರಕ್ಷತಾ ಕ್ರಮ ಹಾಗೂ ಸಲಕರಣೆಗಳ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.

ನವೆಂಬರ್‌ನಲ್ಲಿ ಬದಲಾವಣೆಯ ಕ್ರಾಂತಿಯಾಗಲಿದೆ : ಶಾಸಕ ಎಚ್‌.ಡಿ.ರಂಗನಾಥ್‌

ಬೆಂಗಳೂರು, ಅ.24- ನವೆಂಬರ್‌ನಲ್ಲಿ ಬದಲಾವಣೆಯ ಕ್ರಾಂತಿಯಾಗಲಿದೆ. ಅದರ ಬಗ್ಗೆ ಡಿಸೆಂಬರ್‌ನಲ್ಲಿ ನಡೆಯುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡು ತ್ತೇವೆ ಎಂದು ಕುಣಿಗಲ್‌ ಕ್ಷೇತ್ರದ ಶಾಸಕ ಎಚ್‌.ಡಿ.ರಂಗನಾಥ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗ್ಯಾರಂಟಿ ಯೋಜನೆಗಳು 100ಕ್ಕೆ 100 ಜನರಿಗೆ ತಲುಪಿದೆಯೇ ಎಂದು ತಿಳಿದುಕೊಳ್ಳಬೇಕಿದೆ. ನೆರೆ ಹಾವಳಿಯಿಂದ ಆಗಿರುವ ನಷ್ಟ ಪರಿಹಾರವನ್ನು ಯಾವ ರೀತಿ ತಲುಪಿಸಬೇಕು. ರಾಗಿ ಖರೀದಿ ಕೇಂದ್ರ ಆರಂಭ, ಮನೆ ಹಾಗೂ ರಸ್ತೆಗಳಿಗೆ ಅನುದಾನ ಬಿಡುಗಡೆ. ಈ ಎಲ್ಲಾ ಅಭಿವೃದ್ಧಿ ವಿಚಾರಗಳ ಬಗ್ಗೆ ನವೆಂಬರ್‌ ಕಳೆದ ಮೇಲೆ ಡಿಸೆಂಬರ್‌ನಲ್ಲಿನ ಅಧಿವೇಶನದಲ್ಲಿ ಕ್ರಾಂತಿಕಾರಕ ಚರ್ಚೆ ನಡೆಸುತ್ತೇವೆ ಎಂದರು.

ಮುಖ್ಯಮಂತ್ರಿ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಯಾವುದೇ ರೀತಿಯ ಗೊಂದಲಗಳಾಗುವುದಿಲ್ಲ. ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್‌ ತೆಗೆದುಕೊಂಡಿರುವ ನಿರ್ಧಾರ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲೂ ಸೂಕ್ತ ಸಮಯಕ್ಕೆ ಅಗತ್ಯ ನಿರ್ಧಾರ ತೆಗೆದುಕೊಳ್ಳಲಿದೆ. ಕಾಂಗ್ರೆಸ್‌‍ ಪಕ್ಷ ಉತ್ತಮವಾಗಿದೆ ಮತ್ತು ಸದೃಢವಾಗಿದೆ ಅನಗತ್ಯವಾಗಿ ಗೊಂದಲ ಮೂಡಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದರು.

ನಾವು ಅಭಿವೃದ್ಧಿಯ ದಿಕ್ಕಿನಲ್ಲಿ ಯೋಚಿಸುತ್ತೇವೆ. ಸಚಿವ ಸಂಪುಟ ಪುನರ್‌ರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಎರಡನೇ ಭಾರಿ ಶಾಸಕನಾಗಿರುವ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಕುಣಿಗಲ್‌ ತಾಲ್ಲೂಕಿನ ಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದರು.

ಪಕ್ಷದಲ್ಲಿ ನಾನು ಸಾಮಾನ್ಯ ಕಾರ್ಯಕರ್ತ. ಯಾರಿಗೂ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ. ಆದರೆ ನಮ ಹೇಳಿಕೆಗಳಿಂದ ಕಾಂಗ್ರೆಸ್‌‍ ಪಕ್ಷಕ್ಕೆ ನಷ್ಟವಾಗಬಾರದು ಎಂಬ ಎಚ್ಚರಿಕೆ ಎಲ್ಲರಿಗೂ ಅಗತ್ಯ ಎಂದು ಯತೀಂದ್ರ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.2028ಕ್ಕೆ ಕಾಂಗ್ರೆಸ್‌‍ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದು ನಮೆಲ್ಲರ ಆದ್ಯತೆಯಾಗಿದೆ. ನಾನು ನನ್ನ ಮಿತಿಯಲ್ಲಿದ್ದೇನೆ. ಹಗುರವಾದ ಹೇಳಿಕೆಗಳನ್ನು ಜನ ಬಯಸುವುದಿಲ್ಲ. ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಕಟ್ಟಪ್ಪಣೆಯಿಂದಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಮುಖ್ಯಮಂತ್ರಿ ಹುದ್ದೆಗೆ ಸತೀಶ್‌ ಜಾರಕಿಹೊಳಿ ಅವರ ಹೆಸರು ಪ್ರಸ್ತಾಪಿಸುವುದರಿಂದ ಯಾವುದೇ ಗೊಂದಲವಾಗುವುದಿಲ್ಲ. ಅವರು ಒಬ್ಬ ಹಿರಿಯ ನಾಯಕ. ಅಂತಿಮವಾಗಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ. ನಮ ಹೇಳಿಕೆಗಳಿಂದ ಯಾವುದೇ ಬದಲಾವಣೆಯಾಗುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರು ಕಾಂಗ್ರೆಸ್‌‍ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಹ ಮನೆಯಿಂದ ಬಂದ ಯತೀಂದ್ರ ಸಿದ್ದರಾಮಯ್ಯ ತಮ ಹೇಳಿಕೆಗೆ ತಾವೇ ಆತವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್‌‍ ಪಕ್ಷ ಜಾತ್ಯತೀತ ಸಿದ್ಧಾಂತವನ್ನು ನಂಬುತ್ತದೆ. ಡಿ.ಕೆ.ಶಿವಕುಮಾರ್‌ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನಡುವೆ ಯಾವುದೇ ಗೊಂದಲಗಳಿಲ್ಲ ಎಂದರು.ಜನ ಪ್ರತಿನಿಧಿಗಳಾಗಿರುವವರು ಸಮುದಾಯದ ವಿಚಾರಗಳು ಬಂದಾಗ ಧ್ವನಿಗೂಡಿಸುವುದು ಸಹಜ. ವಿರೋಧ ಪಕ್ಷಗಳು ಟೀಕೆ ಮಾಡುವುದು ಸಾಮಾನ್ಯ. ಅದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯ ಇಲ್ಲ ಎಂದರು.

ಡಿ.ಕೆ.ಶಿವಕುಮಾರ್‌ ಅವರು ಕಷ್ಟಪಟ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಒಂದಲ್ಲ ಒಂದು ದಿನ ಅವರು ಮುಖ್ಯಮಂತ್ರಿಯಾಗಲೇ ಬೇಕು ಎಂಬುದು ನಮೆಲ್ಲರ ಅಭಿಪ್ರಾಯ. ಆದರೆ ಇಂತಹದ್ದೇ ಸಮಯದಲ್ಲಿ ಮುಖ್ಯಮಂತ್ರಿಯಾಗಬೇಕೆಂದು ನಾವು ಹೇಳುತ್ತಿಲ್ಲ ಎಂದರು.