Thursday, November 6, 2025
Home Blog Page 28

ಬಸ್‌‍ ಪ್ರಯಾಣದ ವೇಳೆ ಸುರಕ್ಷತೆಯ ಖಾತ್ರಿ ಬಗ್ಗೆ ಜಾಗೃತಿ ಅಗತ್ಯ : ಡಿಕೆಶಿ

ಬೆಂಗಳೂರು, ಅ.24– ಬಸ್‌‍ ಪ್ರಯಾಣದ ವೇಳೆ ಸುರಕ್ಷತೆಯ ಖಾತ್ರಿ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳು ಜಾಗೃತ ಕ್ರಮಗಳನ್ನು ಕೈಗೊಳ್ಳಬೇಕೆಂದು ಡಿಸಿಎಂ ಡಿ.ಕೆ.ಶಿವ ಕುಮಾರ್‌ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಖಾಸಗಿ ಬಸ್‌‍ವೊಂದರಲ್ಲಿ ಬೆಂಕಿ ಅನಾಹುತವಾಗುವ ಸಾಧ್ಯತೆಯಿತ್ತು. ರಾಯಚೂರು ಜಿಲ್ಲೆಯ ಕಾಂಗ್ರೆಸ್‌‍ ನಾಯಕಿ ಆ ಬಸ್‌‍ನಲ್ಲಿದ್ದರು. ತಕ್ಷಣವೇ ಆಕೆ ಜೋರಾಗಿ ಕಿರುಚಿ, ಎಚ್ಚರಿಸಿದ್ದರಿಂದಾಗಿ ದುರಂತ ತಪ್ಪಿತು ಎಂದರು.

ಆ ಬಸ್‌‍ನಲ್ಲಿ 20ಕ್ಕೂ ಹೆಚ್ಚು ಮಂದಿ ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಪ್ರಯಾಣಿಕರಿದ್ದರು. ತಾವು ರಾಯಚೂರಿಗೆ ಭೇಟಿ ನೀಡಿದಾಗ ಈ ವಿಚಾರ ಗಮನಕ್ಕೆ ಬಂತು. ಆದರೆ ಘಟನೆ ಬಗ್ಗೆ ಯಾವುದೇ ತನಿಖೆಗಳಾಗಿಲ್ಲ ಎಂದು ವಿಷಾದಿಸಿದರು.

ಕರ್ನೂಲ್‌ನಲ್ಲಿ ನಡೆದಿರುವ ಬಸ್‌‍ ದುರಂತ ವಿಷಾದನೀಯ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಕರ್ನಾಟಕ, ಆಂಧ್ರಪ್ರದೇಶವಷ್ಟೇ ಅಲ್ಲ ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಪ್ರಯಾಣಿಕರ ಸುರಕ್ಷತೆಗಾಗಿ ಕಾಳಜಿವಹಿಸಬೇಕು ಎಂದರು.ಕಳೆದವಾರ ನಡೆದ ಘಟನೆಯ ಬಗ್ಗೆ ಸೂಕ್ತ ವಿಚಾರಣೆ ನಡೆದು ಸುರಕ್ಷತೆಯ ಮಾನದಂಡಗಳನ್ನು ಅನುಸರಿಸಿದ್ದರೆ, ಕರ್ನೂಲ್‌ನಲ್ಲಿ ಇಂತಹ ದುರಂತಗಳು ನಡೆಯುವುದಿಲ್ಲ ಎಂದರು.

ರಾಜ್ಯದ ಸಾರಿಗೆ ಹಾಗೂ ಗೃಹ ಸಚಿವರು ಬಸ್‌‍ಗಳ ಸುರಕ್ಷತೆಯ ಬಗ್ಗೆ ಹೆಚ್ಚು ಆಧ್ಯತೆ ನೀಡಬೇಕು. ನಿರಂತರವಾದ ತಪಾಸಣೆಗಳ ಮೂಲಕ ನಿರ್ದೇಶಿತ ಮಾನದಂಡನೆಗಳನ್ನು ಪಾಲನೆಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಕರ್ನೂಲ್‌ನ ದುರ್ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಸಲಹೆ ನೀಡಿದರು. ರಾಮನಗರದ ಶಾಸಕ ಇಕ್ಬಾಲ್‌ ಹುಸೇನ್‌ ಹಾಗೂ ಇತರರು ಅಧಿಕಾರ ಹಂಚಿಕೆಯ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷದಲ್ಲಿ ಶಿಸ್ತು ಪಾಲನೆ ತಮ ಮೊದಲ ಆಧ್ಯತೆ ಎಂದರು.

ನ.1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ ಬದಲಾವಣೆ

ನವದೆಹಲಿ, ಅ.24- ಬರುವ ನವಂಬರ್‌ ಒಂದರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.ನವೆಂಬರ್‌ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ ಬದಲಾವಣೆ ಆಗಲಿದ್ದು, ಬ್ಯಾಂಕ್‌ ಅಕೌಂಟ್‌, ಲಾಕರ್‌ಗಳಿಗೆ ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ.

ಇದುವರೆಗೆ ಒಂದು ಬ್ಯಾಂಕ್‌ ಖಾತೆ ಅಥವಾ ಲಾಕರ್‌ಗಳಿಗೆ ಇದ್ದ ಒಬ್ಬರು ನಾಮಿನಿ ಬದಲಿಗೆ ನಾಲ್ವರು ನಾಮಿನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.ಈ ಮೂಲಕ ಕ್ಲೈಮ್‌ ಸೆಟಲ್‌ಮೆಂಟ್‌ಗಳು ಸುಲಭವಾಗಲಿದೆ. ಠೇವಣಿ ಸಂದರ್ಭದಲ್ಲೇ ಖಾತೆದಾರರು 4 ನಾಮಿನಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಠೇವಣಿದಾರರು ಮೃತರಾದ ನಂತರ ಇದರಲ್ಲಿ ಕ್ರಮಸಂಖ್ಯೆಗೆ ಅನುಗುಣವಾಗಿ ಖಾತೆದಾರರ ಹಣಕಾಸಿಗೆ ಉತ್ತರಾಧಿಕಾರಿಗಳಾಗಲಿದ್ದಾರೆ.ಇದರಿಂದಾಗಿ ಯಾವುದೆ ತೊಂದರೆ ಇಲ್ಲದೇ ನಿಗದಿತ ಹಣಕಾಸಿನ ಭಾಗವು ಆ ನಾಮಿನಿಗಳಿಗೆ ನೇರವಾಗಿ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ.ಬ್ಯಾಂಕಿಂಗ್‌ ಕಾನೂನುಗಳು (ತಿದ್ದುಪಡಿ) ಕಾಯಿದೆ-2025 ನವೆಂಬರ್‌ 1ರಿಂದ ಜಾರಿಗೆ ಬರಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ಹೇಳಿದೆ.

ಶಕ್ತಿ ಯೋಜನೆಯಿಂದ ಹಾಸನಾಂಬೆ ದರ್ಶನೋತ್ಸವದಲ್ಲಿ ದಾಖಲೆ

ಬೆಂಗಳೂರು,ಅ.24- ಹಾಸನಾಂಬೆ ಸನ್ನಿಧಿಯಲ್ಲಿ ಈ ವರ್ಷ ಸಾರ್ವಜನಿಕರ ದರ್ಶನದ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದ 13 ದಿನಗಳಲ್ಲಿ ಬರೋಬ್ಬರಿ 26 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಶಕ್ತಿ ದೇವತೆಯ ದರ್ಶನ ಪಡೆದಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಎಂದು ವಿಧಾನಪರಿಷತ್‌ ಶಾಸಕರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ಬಣ್ಣಿಸಿದ್ದಾರೆ.

ರಾಜ್ಯ ಸರ್ಕಾರವು ಘೋಷಿಸಿದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆ ಜಾರಿಯಾದ ನಂತರ, ರಾಜ್ಯದ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌‍ಗಳಲ್ಲಿ ಪ್ರಯಾಣಿಸುತ್ತಿದ್ದು, ಇದು ಎಲ್ಲ ಧಾರ್ಮಿಕ ಕೇಂದ್ರಗಳ ಆದಾಯ ಮತ್ತು ಭಕ್ತರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದಕ್ಕೆ ಈಗ ಹಾಸನಾಂಬೆಯ ದರ್ಶನವೇ ಸಾಕ್ಷಿ. ಪ್ರತಿ ವರ್ಷ ಹಾಸನಾಮಿ ದರ್ಶನಕ್ಕೆ ನಾಲ್ಕರಿಂದ ಐದು ಲಕ್ಷ ಜನರಷ್ಟೇ ಸೇರುತ್ತಿದ್ದರು. ಆದರೆ ರಾಜ್ಯ ಸರ್ಕಾರ ಉಚಿತವಾಗಿ ಬಸ್‌‍ ಪ್ರಯಾಣವನ್ನು ಮಹಿಳೆಯರಿಗೆ ನೀಡಿದ್ದರಿಂದ ಈಗ ಅವರು ಸಹ ಪ್ರವಾಸಿ ತಾಣಗಳ ಸಹಿತ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.

ಹಾಸನಾಂಬೆಯಂತಹ ಪವಿತ್ರ ಶಕ್ತಿದೇವತೆಗಳ ದರ್ಶನಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಪಕ್ಷದ ನಾಯಕರು ಕೈಗೊಂಡಿರುವ ಪಂಚ ಗ್ಯಾರಂಟಿ ನಿರ್ಧಾರದ ಫಲವಾಗಿದೆ. ಈ ಯೋಜನೆಯಿಂದ ರಾಜ್ಯದ ಜನತೆಗೆ, ವಿಶೇಷವಾಗಿ ಮಹಿಳೆಯರಿಗೆ ಬಹಳ ದೊಡ್ಡ ಅನುಕೂಲವಾಗಿದೆ. ಸರ್ಕಾರ ಜಾರಿಗೆ ತಂದ ‘ಶಕ್ತಿ’ ಮಹಿಮೆ ಇಂದು ಹಾಸನಾಂಬೆ ಸನ್ನಿಧಿಯಲ್ಲಿ ಕಂಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ನನ್ನ ಅಭಿನಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದರು.

ದಾಖಲೆ ಸಂಖ್ಯೆ ಹಾಗೂ ಆದಾಯ: ದೇವಾಲಯದ ಆಡಳಿತ ಮಂಡಳಿ ನೀಡಿದ ಮಾಹಿತಿ ಪ್ರಕಾರ, ಕಳೆದ 13 ದಿನಗಳಲ್ಲಿ ಒಟ್ಟು 26,06,691 ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಇದು ಹಿಂದಿನ ವರ್ಷಕ್ಕೆ (2024ರಲ್ಲಿ 17,47,240 ಭಕ್ತರು) ಹೋಲಿಸಿದರೆ ಶೇ. 49ಕ್ಕಿಂತ ಹೆಚ್ಚು ಭಕ್ತರ ಹೆಚ್ಚಳವಾಗಿದೆ. ದಾಖಲೆಯ ಭಕ್ತರ ಆಗಮನದಿಂದಾಗಿ ದೇವಾಲಯಕ್ಕೆ ಈ ವರ್ಷ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.

ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಸರ್ಕಾರ : ತೇಜಸ್ವಿ ಯಾದವ್‌

ಪಾಟ್ನಾ, ಅ. 24 (ಪಿಟಿಐ) ಬಿಹಾರ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುವುದಾಗಿ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ ಘೋಷಿಸಿದ್ದಾರೆ. ಜನರ ಕುಂದುಕೊರತೆಗಳನ್ನು ಆಲಿಸುವ ಮತ್ತು ಅವರಿಗೆ ಕೈಗೆಟುಕುವ ಔಷಧಿಗಳು ಮತ್ತು ಉದ್ಯೋಗಗಳನ್ನು ಖಚಿತಪಡಿಸುವ ಸರ್ಕಾರವನ್ನು ಮಂಡಿಸುವುದಾಗಿ ಆರ್‌ಜೆಡಿ ನಾಯಕ ಭರವಸೆ ನೀಡಿದ್ದಾರೆ.

ಇಂಡಿಯಾ ಬ್ಲಾಕ್‌ ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯಾಗಿ, ಯಾವುದೇ ಅಪರಾಧ ನಡೆಯದಂತೆ ನಾನು ಖಚಿತಪಡಿಸುತ್ತೇನೆ. ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನಾನು ಮಂಡಿಸುತ್ತೇನೆ ಎಂದು ಅವರು ಪಾಟ್ನಾದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ವಿರೋಧ ಪಕ್ಷವಾದ ಇಂಡಿ ಒಕ್ಕೂಟ ಗುರುವಾರ ಬಿಹಾರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ.

ಇದು ವಾರಗಳ ಕಾಲ ನಡೆದ ತೀವ್ರ ಚರ್ಚೆಗಳ ನಂತರ ಮತ್ತು ಚುನಾವಣೆಗೆ ಮುನ್ನ ಏಕತೆಯನ್ನು ಪ್ರದರ್ಶಿಸಿದ ನಂತರ ನಡೆದ ಜಗಳಗಳನ್ನು ಕೊನೆಗೊಳಿಸುವ ಕೊನೆಯ ಪ್ರಯತ್ನವೆಂದು ಪರಿಗಣಿಸಲಾಗಿದೆ.

ವಿರೋಧ ಪಕ್ಷದ ಬಣದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಬುಧವಾರದಿಂದ ಪಾಟ್ನಾದಲ್ಲಿ ನೆಲೆಸಿರುವ ಹಿರಿಯ ಕಾಂಗ್ರೆಸ್‌‍ ನಾಯಕ ಅಶೋಕ್‌ ಗೆಹ್ಲೋಟ್‌ ಅವರು , ಬಿಹಾರದ ಸಂಕೀರ್ಣ ಸಾಮಾಜಿಕ ರಚನೆಯನ್ನು ಗಮನದಲ್ಲಿಟ್ಟುಕೊಂಡು ವಿಕಾಸಶೀಲ್‌ ಇನ್ಸಾನ್‌ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್‌ ಸಾಹ್ನಿ ಮತ್ತು ಸಮಾಜದ ಇತರ ವರ್ಗಗಳ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಉಪ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳಿದರು.

ಐಪಿಎಸ್‌‍ ಅಧಿಕಾರಿಯ ಮೇಲೆ ಎಸ್‌‍ಐ ಪತ್ನಿ ದೂರು

ರಾಯ್‌ಪುರ, ಅ.24- ಛತ್ತೀಸ್‌‍ಗಢದ ಐಪಿಎಸ್‌‍ಅಧಿಕಾರಿ ರತನ್‌ ಲಾಲ್‌ ಡಾಂಗಿ ಅವರ ವಿರುದ್ದ ಪೊಲೀಸ್‌‍ ಸಬ್‌ ಇನ್ಸ್ ಪೆಕ್ಟರ್‌ ಪತ್ನಿ, ದೈಹಿಕ, ಮಾನಸಿಕ ಮತ್ತು ಕಿರುಕುಳದ ದೂರು ನೀಡಿದ್ದಾರೆ
ಇದಲ್ಲದೆ ರತನ್‌ ಲಾಲ್‌ ಡಾಂಗಿ ನನಗೆ ಬ್ಲ್ಯಾಕ್‌ಮೇಲ್‌‍ ಮಾಡುತ್ತಿದ್ದಾರೆ ಎಂದು ಕೂಡ ದೂರಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ತನಿಖೆ ನಡೆಸಲು ಇಲಾಖೆ ಸಮಿತಿಯನ್ನು ರಚಿಸಿದೆ ಕಳೆದ ಅ. 15 ರಂದು, 2003ರ ಬ್ಯಾಚ್‌ನ ಐಪಿಎಸ್‌‍ ಅಧಿಕಾರಿ ಮತ್ತು ಪೊಲೀಸ್‌‍ ಮಹಾನಿರ್ದೇಶಕ ರತನ್‌ ಲಾಲ್‌ ಡಾಂಗಿ ವಿರುದ್ಧ ದೈಹಿಕ, ಮಾನಸಿಕ ಮತ್ತು ಆರ್ಥಿಕ ಕಿರುಕುಳದ ಆರೋಪದ ಮೇಲೆ ಮಹಿಳೆಯಿಂದ ದೂರು ಬಂದಿತ್ತು.

ದೂರುಗಳ ಗಂಭೀರತೆಯನ್ನು ಪರಿಗಣಿಸಿ, ಪೊಲೀಸ್‌‍ ಪ್ರಧಾನ ಕಚೇರಿಯಲ್ಲಿ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.ತನಿಖಾ ಸಮಿತಿಯಲ್ಲಿ ಪೊಲೀಸ್‌‍ ಮಹಾನಿರ್ದೇಶಕ ಡಾ. ಆನಂದ್‌ ಛಾಬ್ರಾ ಮತ್ತು ಉಪ ಪೊಲೀಸ್‌‍ ಮಹಾನಿರ್ದೇಶಕ ಮಿಲ್ನಾ ಕುರ್ರೆ ಇದ್ದಾರೆ. ತನಿಖಾ ಸಮಿತಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಪ್ರಕರಣ ಕುರಿತು ಮಾತನಾಡಿರುವ ರತನ್‌ ಲಾಲ್‌ ಡಾಂಗಿ ಆ ಮಹಿಳೆ ಕೆ ವರ್ಷದಿಂದ ನನಗೆ ಬ್ಲ್ಯಾಕ್‌ಮೇಲ್‌‍ ಮಡಿ ಹಣ ಸುಲಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.2017-18ರಲ್ಲಿ ದಾಂತೇವಾಡದಲ್ಲಿ ಉಪ ಪೊಲೀಸ್‌‍ ಮಹಾನಿರ್ದೇಶಕರಾಗಿದ್ದಾಗ ಮಹಿಳೆಯೊಬ್ಬರು ತನ್ನ ಪತಿಯ ಕೆಲಸದ ಬಗ್ಗೆ ಸಂಪರ್ಕಿಸಿದ್ದಳು. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಂತರ 2023 ರಲ್ಲಿ ಪೊಲೀಸ್‌‍ ತರಬೇತಿ ಕಾಲೇಜಿನ ನಿರ್ದೇಶಕಿಯಾಗಿ ನೇಮಕಗೊಂಡಾಗ ನನ್ನ ಆಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡುವುದಾಗಿ ಹೇಳಿಕೊಂಡು ಹಣ ಕೇಳಿದ್ದಾಳೆ ಎಂದು ಡಾಂಗಿ ಆರೋಪಿಸಿದ್ದಾರೆ.

ಆತಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ನನ್ನನ್ನುಅದರಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಂದಿನಿಂದ ಈ ಮಹಿಳೆ ನನ್ನಿಂದ ಹಣ ಸುಲಿಗೆ ಮಾಡುತ್ತಿದ್ದಾಳೆ ಮತ್ತು ನನ್ನ ಹೆಂಡತಿಯಿಂದ ಬೇರೆಯಾಗುವಂತೆ ಒತ್ತಡ ಹೇರುತ್ತಿದ್ದಾಳೆ. ಆಕೆಯ ಬ್ಲಾಕ್‌ಮೇಲಿಂಗ್‌ನಿಂದ ಹತಾಶೆಗೊಂಡು, ನಾನು ಪೊಲೀಸ್‌‍ ಪ್ರಧಾನ ಕಚೇರಿಗೆ ದೂರು ನೀಡಿದ್ದೇನೆ, ಎಂದು ಅವರು ಹೇಳಿದರು.

ಬಸ್‌‍ ಬೆಂಕಿಗಾಹುತಿ : ಪ್ರಾಣ ಉಳಿಸಿಕೊಂಡವರು ಬಿಚ್ಚಿಟ್ಟ ಭಯಾನಕ ಅನುಭವ

ಕರ್ನೂಲ್‌,ಅ.24-ಬಸ್‌‍ ಪೂರ್ತಿ ಬೆಂಕಿ ಆವರಿಸಿದ್ದರಿಂದ ಏನು ಮಾಡಬೇಕೆಂದು ಯೋಚಿಸುತ್ತಿದ್ದಂತೆ ಬೆಂಕಿ ವೇಗವಾಗಿ ಉರಿಯುತ್ತಿದುದ್ದನ್ನು ನೋಡಿ ಒಂದು ಕ್ಷಣ ಆತಂಕವಾಯಿತು.

ಹೈದರಬಾದ್‌ನಿಂದ ಬೆಂಗಳೂರಿಗೆ ಖಾಸಗಿ ವೋಲ್ವೋ ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದಾಗ ನಿದ್ರೆಯಲ್ಲಿದ್ದ ನನಗೆ ಶಬ್ದ ಕೇಳಿ ಎಚ್ಚರವಾದಾಗ ಬೆಂಕಿ ಆವರಿಸಿರುವುದು ಕಂಡು ತಕ್ಷಣ ನಾನು ಬಸ್‌‍ನ ಹಿಂಭಾಗದ ಗಾಜು ಒಡೆದು ಹೊರಗೆ ಹಾರಿದೆ ಎಂದು ಹರಿಕಾ ಎಂಬುವವರು ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದು ಸ್ಲೀಪರ್‌ ಬಸ್‌‍ ಆಗಿದ್ದರಿಂದ ನಾನು ಮೇಲೆ ಹತ್ತಿ ಮಲಗಿದ್ದೆ. ಎಲ್ಲರೂ ಪರದೆ ಹಾಕಿಕೊಂಡು ಅವರವರ ಸೀಟಿನಲ್ಲಿ ಮಲಗಿದ್ದರು. ಎಷ್ಟು ಜನ ಒಳಗಿದ್ದರು ಎಂಬುವುದು ತಿಳಿಯಲಿಲ್ಲ.
ತಕ್ಷಣ ನಾನು ಬಸ್‌‍ನ ಹಿಂಭಾಗಕ್ಕೆ ಹೋಗಿ ಗಾಜು ಒಡೆದು, ಬಸ್‌‍ ಒಳಗೆ ಇದ್ದವರಿಗೂ ಹೊರಗೆ ಹಾರುವಂತೆ ಹೇಳಿ ನಾನು ಬಸ್‌‍ನಿಂದ ಹಾರಿ ಪ್ರಾಣ ಉಳಿಸಿಕೊಂಡೆ ಎಂದು ಅವರು ಹೇಳಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಬೇರೆ ಸೀಟುಗಳಲ್ಲಿ ಜನರು ಇದ್ದರೋ ಇಲ್ಲವೋ ಎಂದು ನೋಡಲು ಸಹ ಸಾಧ್ಯವಾಗಲಿಲ್ಲ ಎಂದು ಹರಿಕಾ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದ್ದಾರೆ.ಇದೇ ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ಸೂರ್ಯ ಎಂಬುವವರು ಘಟನೆ ಬಗ್ಗೆ ತಮಗಾದ ಅನುಭವವನ್ನು ಹೇಳಿಕೊಂಡಿದ್ದು, ಬೆಳಗಿನ ಜಾವ ಒಂದು ಬೈಕ್‌ ಬಸ್‌‍ ಬಳಿ ಬಂತು.ನಂತರ ಏನೋ ಆಯಿತು. ಆದರೆ ನನಗೆ ಆ ಬಗ್ಗೆ ಸ್ಪಷ್ಟತೆ ಇಲ್ಲ. ಬೈಕ್‌ ಬಸ್‌‍ನ ಕೆಳಗೆ ಹೋಯಿತು. ಸ್ವಲ್ಪ ದೂರ ಬಸ್‌‍ ಹೋಗುತ್ತಿದ್ದಂತೆ ಬೆಂಕಿ ಕಿಡಿ ಬರಲು ಪ್ರಾರಂಭಿಸಿ, ನಂತರ ಬಸ್‌‍ ಪೂರ್ತಿ ಬೆಂಕಿ ಹೊತ್ತಿಕೊಂಡಿತು.

ಆ ವೇಳೆ ಬಸ್‌‍ ನಿಂತಿದೆ.ನಾನು ಸೇರಿದಂತೆ ಎಚ್ಚರವಿದ್ದವರು ತಕ್ಷಣ ಕೆಳಗೆ ಇಳಿದಿದ್ದಾರೆ. ಕೆಲವರು ಹೊರಗೆ ಬರಲಾಗದೆ ಬಸ್‌‍ನೊಳಗೆ ಸಜೀವ ದಹನವಾಗಿದ್ದಾರೆಂದು ತಿಳಿಸಿದರು. ಸ್ಥಳಕ್ಕೆ ಧಾವಿಸದ ಅಧಿಕಾರಿಗಳು:ಆಂಧ್ರಪ್ರದೇಶದ ಕರ್ನೂಲ್‌ನಿಂದ ಸುಮಾರು 7 ಕಿ.ಮೀ. ಅಂತರದಲ್ಲಿದ್ದ ಚಿನ್ನೇಕೂರ್‌ ಬಳಿ ಬಸ್‌‍ ಬೆಂಕಿಗಾಹುತಿಯಾಗಿ ಹೊತ್ತಿ ಉರಿಯುತ್ತಿದ್ದರೂ, ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಲಿಲ್ಲ ಎಂದು ಜೀವ ಉಳಿಸಿಕೊಂಡ ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಮಾರತ್ತಳ್ಳಿಯ ವೇಮುರಿ ಕಾವೇರಿ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್‌‍ನಲ್ಲಿ ಎಲ್‌-13 ಸೀಟ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಣುಗೊಂಡ ಎಂಬ ಪ್ರಯಾಣಿಕ ಅಪಾಯದಿಂದ ಪಾರಾಗಿದ್ದು, ದುರ್ಘಟನೆಯ ಮಾಹಿತಿಯನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.ಬಸ್‌‍ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮಲ್ಟಿ ಆಕ್ಸಲ್‌ ಸೌಲಭ್ಯ ಹೊಂದಿತ್ತು.

ವಿಶ್ರಾಂತಿಗಾಗಿ ಮಾರ್ಗಮಧ್ಯೆ 20 ನಿಮಿಷ ನಿಲ್ಲಿಸಿ, ನಂತರ ಪ್ರಯಾಣ ಆರಂಭಿಸಿತು. ಮುಂಜಾನೆ 3.20ರ ಸುಮಾರಿಗೆ ನಮಗೆ ದಿಢೀರ್‌ ಎಚ್ಚರಿಕೆಯಾಯಿತು. ಕಣ್ಣು ಬಿಟ್ಟು ನೋಡಿದಾಗ ಬಸ್‌‍ನ ಮುಂಭಾಗಕ್ಕೆ ಬೆಂಕಿ ತಗುಲಿತ್ತು. ಆತಂಕದಿಂದ ಎಲ್ಲರೂ ಬಸ್‌‍ನ ಹಿಂಭಾಗಕ್ಕೆ ಓಡಿ ಬರುತ್ತಿದ್ದರು. ನಾನು ಹಿಂಬದಿಯಲ್ಲಿದ್ದ ತುರ್ತು ನಿರ್ಗಮನದ ಬಾಗಿಲು ತೆಗೆಯುವ ಪ್ರಯತ್ನ ಮಾಡಿದ್ದೆ, ಅದು ಸಾಧ್ಯವಾಗಲಿಲ್ಲ. ಬಸ್‌‍ನ ಹಿಂಭಾಗದಲ್ಲಿದ್ದ ಕಿಟಕಿ ಗಾಜನ್ನು ಒಡೆಯುವ ಪ್ರಯತ್ನವೂ ವಿಫಲವಾದಾಗ ನನ್ನ ಹಿಂಬದಿಯಿದ್ದ ಮತ್ತೊಬ್ಬ ಪ್ರಯಾಣಿಕ ಗಾಜು ಪುಡಿ ಮಾಡಿದರು. ಅದರಿಂದ ಸುಮಾರು 15 ಜನ ಕೆಳಗೆ ಜಿಗಿದು ಪಾರಾದರು.

ಆದರೆ ಒಂದೇ ಕುಟುಂಬದ ನಾಲ್ವರು ಬೆಂಕಿಗಾಹುತಿಯಾದರೂ ಅವರನ್ನು ರಕ್ಷಿಸಲಾಗಲಿಲ್ಲ ಎಂದು ಅಳಲು ತೋಡಿಕೊಂಡರು. ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಖಾಸಗಿ ಬಸ್‌‍ನ ಸಹಾಯದಿಂದ ನಾವು ಬೆಂಗಳೂರಿಗೆ ತಲುಪಿದ್ದೇವೆ. ಈ ವೇಳೆ ನಮ ಲಗೇಜ್‌ಗಳನ್ನು ತೆಗೆದುಕೊಳ್ಳಲಾಗಲಿಲ್ಲ ಸುಟ್ಟು ಹೋಗಿವೆ ಎಂದು ಹೇಳಿದ್ದಾರೆ.

ಬೆಂಕಿ ಹೊತ್ತಿ ಬಸ್‌‍ ಉರಿಯುತ್ತಿರುವಾಗ ಬಾಂಬ್‌ ಸ್ಫೋಟಿಸಿದಂತೆ ದೊಡ್ಡ ಪ್ರಮಾಣದ ಶಬ್ದಗಳು ಬರುತ್ತಿತ್ತು. ಯಾರೂ ಕೂಡ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಬಸ್‌‍ನ ಒಳಗೆ ಹೊಗೆ ತುಂಬಿತ್ತು. ಏನೂ ಕಾಣಿಸದಂತಹ ವಾತಾವರಣವಿತ್ತು ಎಂದು ಹೇಳಿದ್ದಾರೆ.

27 ವರ್ಷದ ಜಯಂತ್‌ ಕುಶ್ವಾಹ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಸ್‌‍ನ ತುರ್ತು ನಿರ್ಗಮನ ದ್ವಾರ ತೆರೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಕರ್ನೂಲ್‌ನಿಂದ 10 ಕಿ.ಮೀ. ದೂರ ಬಂದ ಬಳಿಕ ಭಯಾನಕವಾದ ಈ ಘಟನೆ ನಡೆದಿದೆ. 25 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅವರು ವಿಷಾಧಿಸಿದ್ದಾರೆ.

ಪಿಡಿಪಿಎಸ್‌‍ ಅಡಿ ಈರುಳ್ಳಿ ಖರೀದಿ ಪ್ರಯತ್ನ : ಸಚಿವ ಶಿವಾನಂದ ಪಾಟೀಲ

ಬೆಂಗಳೂರು, ಅ.24– ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಪಿಡಿಪಿಎಸ್‌‍ (ಪ್ರೈಸ್‌‍ ಡಿಪಿಷಿಯನ್ಸಿ ಪ್ರೊಕ್ಯೂರ್‌ಮೆಂಟ್‌ ಸ್ಕೀಂ) ಅಡಿಯಲ್ಲಿ ಖರೀದಿಸುವ ಪ್ರಯತ್ನ ನಡೆದಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಟಾವಿಗೆ ಬಂದಿರುವ ಈರುಳ್ಳಿಯು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಸಾಲಿನ ಸರಾಸರಿ ಈರುಳ್ಳಿಯ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಮಾರಾಟ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪಿಡಿಪಿಎಸ್‌‍ಅಡಿಯಲ್ಲಿ ಈರುಳ್ಳಿ ಖರೀದಿ ಮಾಡಲು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸೇರಿ ಒಟ್ಟು 2.05 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ವಾರ್ಷೀಕ ಉತ್ಪನ್ನ 27ಲಕ್ಷ ಮೆಟ್ರಕ್‌ ಟನ್‌ಗಳಾಗಿದೆ. ಪ್ರಮುಖವಾಗಿ ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ವಿಜಯ ನಗರ, ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ ಎಂದಿದ್ದಾರೆ.

ಅತಿಯಾದ ಮಳೆಗೆ ಕಟಾವಿಗೆ ಬಂದ ಈರುಳ್ಳಿ ಬೆಳೆ ಹಾನಿಯಾಗಿದ್ದು, ದಿಡೀರ್‌ಬೆಲೆ ಕುಸಿತಗೊಂಡಿದ್ದು, ಜಮೀನಿನಲ್ಲೇ ಈರುಳ್ಳಿ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆ ಸೇರಿ ಚರ್ಚೆ ಮಾಡಿದ್ದು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿಯಲ್ಲಿ ಖರೀದಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದರು. ಆದರೆ, ಪಿಡಿಪಿಎಸ್‌‍ಅಡಿ ಈರುಳ್ಳಿ ಖರೀದಿ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಯತೀಂದ್ರ ಅವರ ಹೇಳಿಕೆ ವೈಯಕ್ತಿಕ, ಅವರ ಹೇಳಿಕೆಯಲ್ಲಿ ತಪ್ಪಿಲ್ಲ : ಗೃಹ ಸಚಿವ ಡಾ. ಪರಮೇಶ್ವರ್

ಬೆಂಗಳೂರು, ಅ.24- ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿಕೆ ವೈಯಕ್ತಿಕವಾಗಿದ್ದು, ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್‌ ಜಾರಕಿಹೊಳಿ ಹೆಸರು ಪ್ರಸ್ತಾಪಿಸಿ, ಮುಂದೆ ಅಹಿಂದ ನಾಯಕ ಎಂದು ಹೇಳಿದ್ದಾರೆ. ಅವರು ಎರಡೂವರೆ ವರ್ಷಗಳ ನಂತರ ಆಗಬಹುದು. ನಾಳೆಯೇ ಜಾರಕಿಹೊಳಿ ಅವರು ಸಿಎಂ ಆಗುತ್ತಾರೆ ಎಂದೇನು ಹೇಳಿಲ್ಲ. 2028 ಕ್ಕೆ ಸಿಎಂ ಆಗಬಹುದು ಎಂದು ಹೇಳಿದ್ದಾರೆ ಎಂದರು.

ನಾನು ಸಿಎಂ ಆಕಾಂಕ್ಷಿ ಅಲ್ಲ ಅಂದಿದ್ದಾರೆ. ಆ ದೃಷ್ಟಿಯಿಂದ ಯತೀಂದ್ರ ಹೇಳಿರಬಹುದು. ಹೈಕಮಾಂಡ್‌ಗಿಂತ ಯತೀಂದ್ರ ಪವರ್‌ ಫುಲ್‌ ಅಂತೇನೂ ಇಲ್ಲ. ಆದರೆ, ಯತೀಂದ್ರ ಅವರ ಮಾತಿನಲ್ಲಿ ತಪ್ಪೇನೂ ಇಲ್ಲ. ಇದು ಮುಖ್ಯಮಂತ್ರಿಯವರ ಹೇಳಿಕೆಯಲ್ಲ. ನಮಗೂ ಸತೀಶ್‌ ಜಾರಕಿಹೊಳಿ ಸಿಎಂ ಆಗಬೇಕು ಎಂಬುದು ಇದೆ ಎಂದು ಅವರು ತಿಳಿಸಿದರು.

ಈ ರೀತಿ ಹೇಳಿದ್ದರೂ ಯತೀಂದ್ರ ಅವರಿಗೆ ನೋಟಿಸ್‌‍ ಕೊಟ್ಟಿಲ್ಲವೆಂಬ ಪ್ರಶ್ನೆಗೆ ಪ್ರಕ್ರಿಯಿಸಿದ ಸಚಿವರು, ಅದನ್ನು ಪಕ್ಷದ ಅಧ್ಯಕ್ಷರು ಮಾಡುತ್ತಾರೆ. ಯಾರಾದರೂ ಮಾತನಾಡಿದರೆ ನೊಟೀಸ್‌‍ ಕೊಡುವುದಾಗಿ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನೂ ಇಲ್ಲ. ನಾನು ಹೋಗುತ್ತೇನೆ, ನೀವು ಹೋಗುತ್ತಿರಾ,? ಅವರಿಗೆ ಏನೋ ಹರಕೆ ಇರಬಹುದು. ಅದನ್ನು ತೀರಿಸಲು ಹೋಗಿರಬಹುದು ಎಂದು ಅವರು ಹೇಳಿದರು.

ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕಾಂಗ ಪಕ್ಷದ ಸಭೆ ಕರೆದು ತೀರ್ಮಾನಿಸಲಾಗುತ್ತದೆ. ಶಾಸಕರು ಯಾರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುತ್ತಾರೋ ಅವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಗುತ್ತದೆ. ಈಗ ಮುಖ್ಯಮಂತ್ರಿ ಇರುವುದರಿಂದ ಏಕೆ? ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.

ನ.17 ರಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರೀಷೆ

ಬೆಂಗಳೂರು,ಅ.24– ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರೀಷೆ ನ.17ರಿಂದ ಆರಂಭವಾಲಿದ್ದು, ಈ ಬಾರಿ ಐದು ದಿನಗಳ ಕಾಲ ಅದ್ಧೂರಿಯಾಗಿ ಪರೀಷೆ ನಡೆಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕಡಲೆಕಾಯಿ ಪರಿಷೆ – 2025 ರ ಪೂರ್ವಾಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ 2 ದಿನಗಳ ಪರೀಷೆ 5 ದಿನಗಳವರೆಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಸುಮಾರು 5 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು, ಯಶಸ್ವಿಯಾಗಿ ನಡೆದಿತ್ತು. ಜೊತೆಗೆ ಪ್ಲಾಸ್ಟಿಕ್‌ ಮುಕ್ತ ಕಡಲೆಕಾಯಿ ಪರೀಷೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು ಎಂದರು.

ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದಲ್ಲಿ ಬಸವನಗುಡಿಯ ಶ್ರೀ ಬಸವಣ್ಣ ದೇವಾಲಯದಲ್ಲಿ ನ.17ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಕಡಲೆಕಾಯಿ ಪರೀಷೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಉದ್ಘಾಟನೆಯನ್ನು 21 ಬಸವಣ್ಣಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುವುದು. ವಿಜೃಂಭಣೆಯ ದೀಪಾಲಂಕಾರ ವ್ಯವಸ್ಥೆ ಬುಲ್‌ ಟೆಂಪಲ್‌ ರಸ್ತೆ, ಗಾಂಧಿ ಬಜಾರ್‌ ಮತ್ತು ಎನ್‌. ಆರ್‌ ರಸ್ತೆಗಳಿಗೂ ಸೇರಿ ದೀಪಾಂಲಕಾರ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ಎನ್‌ಜಿಓಗಳ ಸಹಕಾರದೊಂದಿಗೆ ಪ್ಲಾಸ್ಟಿಕ್‌ ಕವರ್‌ ಗಳನ್ನು ಬಳಸದಂತೆ ಬಟ್ಟೆ ಬ್ಯಾಗ್‌ ಗಳನ್ನು ಬಳಸಲು ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಪರಿಷೆಗೆ ಬನ್ನಿ ಕೈ ಚೀಲ ತನ್ನಿ ಎಂದು ಘೋಷಣೆ ಹಾಗೂ ಪ್ಲಾಸ್ಟಿಕ್‌ ಸಂಪೂರ್ಣ ನಿಷೇದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುಂಕ ವಸೂಲಾತಿ ರದ್ದು ಮುಂದುವರಿಕೆ
ಬುಲ್‌ಟೆಂಪಲ್‌ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಪ್ರತಿ ವರ್ಷ ಟೆಂಡರ್‌ ಮಾಡಲಾಗುತ್ತಿದ್ದು, ಟೆಂಡರ್‌ ದಾರರು ಅಂಗಡಿಯವರಿಂದ ಬಲವಂತವಾಗಿ ಹೆಚ್ಚು ಸುಂಕ ವಸೂಲಿ ಮಾಡುತ್ತಿರುವುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಸುಂಕ ವಸೂಲಾತಿ ಟೆಂಡರ್‌ ಅನ್ನು ಕೈಬಿಡಲು ಹಾಗೂ ವ್ಯಾಪಾರಸ್ಥರಿಂದ ಸುಂಕವನ್ನು ಕಳೆದ ವರ್ಷದಂತೆ ಈ ವರ್ಷವೂ ವಸೂಲಿ ಮಾಡದಂತೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಡಲೆಕಾಯಿ ಪರಿಷೆ ದಿನಗಳಂದು ಆರೋಗ್ಯ ಸ್ವಚ್ಛತೆ ನೈರ್ಮಲ್ಯಕ್ಕೆ ಒತ್ತು ಮತ್ತು ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್‌‍ ಇಲಾಖೆಯ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ನಿರಂತರ ವಿದ್ಯುತ್‌, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು ಎಂದರು.

ಬೀದಿದೀಪಗಳ ಅಳವಡಿಕೆ ಮತ್ತು ದುರಸ್ಥಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿ.ಸಿ.ಟಿ.ವಿಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಕೆ, ಅಗ್ನಿ ಶಾಮಕ ವಾಹನ ನಿಯೋಜನೆ ಸೇರಿದಂತೆ ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ, ಮಾರ್ಷಲ್‌ಗಳನ್ನಿ ನಿಯೋಜಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ರವಿಸುಬ್ರಹಣ್ಯ, ಉದಯ ಗರುಡಾಚಾರ್‌, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರಾದ ಕೆ.ಎಂ .ನಾಗರಾಜ್‌, ದ್ವಾರಕಾನಾಥ್‌, ದಕ್ಷಿಣ ಪಾಲಿಕೆಯ ಹಿರಿಯ ಅಧಿಕಾರಿ ದಿಗ್ವಿಜಯ ಬೋಡ್ಸೆ ಮತ್ತಿತರರು ಉಪಸ್ಥಿತರಿದ್ದರು.

ಕರ್ನೂಲ್‌ ಬಳಿ ಖಾಸಗಿ ಬಸ್‌‍, 20ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್‌, ಅ.24- ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌‍ ಕರ್ನೂಲ್‌ ಜಿಲ್ಲೆಯ ಚಿನ್ನೇಕೂರ್‌ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹಸುಗೂಸು ಸೇರಿ ಒಟ್ಟು 20ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದು, 15 ಮಂದಿ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓರಿಸ್ಸಾದಲ್ಲಿ ನೋಂದಾಯಿತ ಕಾವೇರಿ ಟ್ರಾವಲ್ಸ್ ನ ಐಶಾರಾಮಿ ಸ್ಲೀಪರ್‌ ಕೋಚ್‌ ಬಸ್‌‍ನಲ್ಲಿ 40 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್‌‍ ಕರ್ನೂಲ್‌ನ ಚಿನ್ನೇಕೂರ್‌ ಬಳಿ ಬರುತ್ತಿದ್ದಂತೆ ಮೊದಲು ಮೋಟಾರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಚಾಲಕ ಬಸ್‌‍ ನಿಲ್ಲಿಸದೇ ಇದ್ದುದರಿಂದ ಬೈಕ್‌ನ್ನು ಸುಮಾರು ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ. ಇದರಿಂದ ಬಸ್‌‍ ಗೆ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿತಾಗಿ ಬಸ್‌‍ ಪೂರ್ತಿ ಬೆಂಕಿ ಆವರಿಸಿಕೊಂಡಿದೆ.

ಮುಂಜಾನೆ 3.30ರ ಸವಿ ನಿದ್ದೆಯ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಪ್ರಯಾಣಿಕರು ಏನಾಗುತ್ತಿದೆ ಎಂದು ಅರ್ಥೈಸಿಕೊಳ್ಳುವ ವೇಳೆಗೆ ಬಸ್‌‍ ಪೂರ್ತಿ ಬೆಂಕಿಯ ಕೆನ್ನಾಲಿಗೆ ಹಾಗೂ ಹೊಗೆ ಆವರಿಸಿದೆ. ಎಸಿ ಸ್ಲೆಪರ್‌ ಕೋಚ್‌ ಬಸ್‌‍ ಆಗಿದ್ದರಿಂದ ಎಲ್ಲಾ ಕಿಟಕಿಯ ಗಾಜುಗಳು ಮುಚ್ಚಲ್ಪಟ್ಟಿದ್ದವು. ದುರಾದೃಷ್ಟವಶಾತ್‌ ಬಸ್‌‍ನ ಬೆಂಕಿಯ ಕೆನ್ನಾಲಿಗೆಯಿಂದ ವೈರ್‌ಗಳು ಸುಟ್ಟು ಬಸ್‌‍ನ ಯಾಂತ್ರೆಕೃತ ಬಾಗಿಲು ಕೂಡ ತೆರೆಯದೆ ಜಾಮ್‌ ಆಗಿತ್ತು ಎನ್ನಲಾಗಿದೆ.

ಕೆಲವು ಪ್ರಯಾಣಿಕರು ಕಿಟಕಿಯ ಗಾಜುಗಳನ್ನು ಹೊಡೆದು ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬಹುತೇಕರಿಗೆ ಇದು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಸಾಫ್ಟವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ರಮೇಶ್‌ ಮತ್ತು ಅವರ ಕುಟುಂಬ ದೀಪಾವಳಿ ಹಬ್ಬಕ್ಕಾಗಿ ಹೈದರಬಾದ್‌ನಲ್ಲಿರುವ ತಮ ತವರಿಗೆ ಹೋಗಿತ್ತು. ವಾಪಾಸ್‌‍ ಬರುವಾಗ ಈ ದುರುಂತ ಸಂಭವಿಸಿ, ರಮೇಶ್‌, ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಇಡೀ ಕುಟುಂಬ ಬೆಂಕಿಗಾಹುತಿಯಾಗಿದೆ.

ಸುದ್ದಿ ತಿಳಿದು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್‌ ಬಸ್‌‍ನ ಡಿಸೇಲ್‌ ಟ್ಯಾಂಕ್‌ ಗೆ ಬೆಂಕಿ ಹೊತ್ತಿಕೊಂಡಿಲ್ಲ. ಒಂದು ವೇಳೆ ಟ್ಯಾಂಕ್‌ಗೆ ಬೆಂಕಿ ತಾಗಿ ಸ್ಫೋಟಿಸಿದ್ದರೆ ಬಸ್‌‍ನಲ್ಲಿ ಯಾರೂ ಬದುಕಿ ಉಳಿಯುವ ಸಾಧ್ಯತೆಗಳು ಕಡಿಮೆ ಇತ್ತು ಎನ್ನಲಾಗಿದೆ.

ಬೈಕ್‌ ಸವಾರ ಸೇರಿ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಸ್ಸಿನಲ್ಲಿ ಚಾಲಕ ಸೇರಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಕರ್ನೂಲ್‌ ಜಿಲ್ಲಾಧಿಕಾರಿ ಡಾ.ಎ.ಸಿರಿ ತಿಳಿಸಿದ್ದಾರೆ.

ಬಸ್‌‍ನಲ್ಲಿ ಸಜೀವ ದಹನವಾದ 20 ಮಂದಿಯ ಪೈಕಿ 11 ಜನರ ಗುರುತು ಪತ್ತೆ ಹಚ್ಚಲಾಗಿದೆ. ಇನ್ನೂಳಿದ ಒಂಬತ್ತು ಜನರ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಕರ್ನೂಲ್‌ ವಿಭಾಗದ ಡಿಐಜಿ ಕೋಯಾ ಪ್ರವೀಣ್‌ ಮಾಹಿತಿ ನೀಡಿದ್ದಾರೆ.

ಸಜೀವ ದಹನವಾಗಿರುವ ದೇಹಗಳ ಡಿಎನ್‌ಎ ಮಾದರಿಗಳನ್ನು ವೈದ್ಯಕೀಯ ತಜ್ಞರ ತಂಡ ಸಂಗ್ರಹಿಸಿದೆ. ಮುಂಜಾನೆ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ದುರಂತ ಸಂಭವಿಸಿದ ಕಾರಣ ಅನೇಕ ಪ್ರಯಾಣಿಕರು ದುರಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ವಿಷಾಧಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ಬಸ್‌‍ನಲ್ಲಿ ಯಾವುದೇ ಅಗ್ನಿಶಾಮಕ ನಿಯಂತ್ರಣ ಸಾಧನಗಳು ಇರಲಿಲ್ಲ ಎಂದು ಡಿಐಜಿ ತಿಳಿಸಿದ್ದಾರೆ. ಇದು ಪ್ರಯಾಣದ ಸಮಯದಲ್ಲಿ ಸುರಕ್ಷತಾ ಅನುಸರಣೆ ಮತ್ತು ತುರ್ತು ಸಿದ್ಧತೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಬಸ್‌‍ ದುರಂತದ ಬೆನ್ನಲ್ಲೇ ಖಾಸಗಿ ಬಸ್‌‍ಗಳ ಸುರಕ್ಷತೆಯ ಕುರಿತು ಚರ್ಚೆಗಳು ಶುರುವಾಗಿವೆ.

ಅಮಾಯಕರ ಜೀವಗಳ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಖಾಸಗಿ ಬಸ್‌‍ ಮಾಲೀಕರ ವಿರುದ್ಧ ಇಂತಹ ದುರ್ಘಟನೆಗಳು ಸಂಭವಿಸಿದಾಗ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲು ತಮ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ತೆಲಂಗಾಣ ರಾಜ್ಯ ಸಾರಿಗೆ ಸಚಿವ ಪೂನಂ ಪ್ರಭಾಕರ್‌ ಎಚ್ಚರಿಕೆ ನೀಡಿದ್ದಾರೆ.

ಕರ್ನೂಲ್‌ ಬಳಿ ಬಸ್‌‍ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂತಾಪ: ಬಸ್‌‍ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಜೀವ ನಷ್ಟಕ್ಕೆ ಒಳಗಾದ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

2 ಲಕ್ಷ ಪರಿಹಾರ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಸ್‌‍ ದುರಂತದಲ್ಲಿ ಮೃತಪಟ್ಟವರಿಗಾಗಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನೀಡುವುದಾಗಿ ತಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ಬೆಂಬಲ:ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುವುದಾಗಿ ಹೇಳಿರುವ ಅವರು, ಗಾಯಗೊಂಡವರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಸಂತಾಪ:
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್‌ ರೆಡ್ಡಿ, ಕೇಂದ್ರ ಸಚಿವರಾದ ಹೆಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಅಗಲಿದವರ ಆತಕ್ಕೆ ಸದ್ಗತಿ ಸಿಗಲಿ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಸಹಾಯವಾಣಿ:
ಕಲ್ಲೂರು ಮಂಡಲದ ಚಿನ್ನೇಕೂರು ಗ್ರಾಮದಲ್ಲಿ ಸಂಭವಿಸಿದ ಖಾಸಗಿ ಟ್ರಾವೆಲ್‌್ಸ ಬಸ್‌‍ ಬೆಂಕಿಗಾಹುತಿಗೆ ಸಂಬಂಧಿಸಿದಂತೆ, ಹಲವಾರು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಮಾಹಿತಿ ಮತ್ತು ಸಹಾಯಕ್ಕಾಗಿ ಬಾಧಿತ ಕುಟುಂಬಗಳ ಸದಸ್ಯರು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕರ್ನೂಲ್‌ ಜಿಲ್ಲಾಧಿಕಾರಿ ಡಾ. ಎ. ಸಿರಿ ಅವರು ತಿಳಿಸಿದ್ದಾರೆ.

ಕರ್ನೂಲ್‌ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ: 08518-277305
ಕರ್ನೂಲ್‌ ಸರ್ಕಾರಿ ಆಸ್ಪತ್ರೆ- 9121101059, 9494609814, 9052951010
ಅಪಘಾತ ಸ್ಥಳ ನಿಯಂತ್ರಣ ಕೊಠಡಿ: 9121101061
ಕರ್ನೂಲ್‌ ಪೊಲೀಸ್‌‍ ಕಚೇರಿ ನಿಯಂತ್ರಣ ಕೊಠಡಿ: 9121101075